ಬುಧವಾರ, ಆಗಸ್ಟ್ 28, 2013

ಪ್ರಾಣ್

ಪ್ರಾಣ್

ಪ್ರಾಣ್ ಅವರು ಫೆಬ್ರುವರಿ 12, 1920ರ ವರ್ಷದಲ್ಲಿ ಹಳೆಯ ದಿಲ್ಲಿಯ ಬಲ್ಲಿಮಾರನ್ ಕೋಟಗರ್  ಬಡಾವಣೆಯ ಪಂಜಾಬಿ ಕುಟುಂಬವೊಂದರಲ್ಲಿ ಜನಿಸಿದರು.  ಪ್ರಾಣರ ಅಂದಿನ ಹೆಸರು ಪ್ರಾಣ್ ಕ್ರಿಶನ್ ಸಿಕಂದ್.  ಅವರ ತಂದೆ ಕೇವಲ್ ಕ್ರಿಶನ್ ಸಿಕಂದರು ವೃತ್ತಿಯಲ್ಲಿ ಇಂಜಿನಿಯರರಾಗಿದ್ದು ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಾಗಿದ್ದರು.  ಅವರ ತಾಯಿಯ ಹೆಸರು ರಾಮೇಶ್ವರಿ.   ಈ ದಂಪತಿಗಳಿಗೆ ನಾಲ್ಕು ಗಂಡು ಮಕ್ಕಳೂ ಮೂರು ಹೆಣ್ಣು ಮಕ್ಕಳೂ ಇದ್ದರು. 

ಓದಿನಲ್ಲಿ ಅದರಲ್ಲೂ ಗಣಿತದಲ್ಲಿ ಪ್ರಾಣ್ ಅತಿ ಪ್ರತಿಭಾಶಾಲಿಯಾಗಿದ್ದರು.  ಅವರ ತಂದೆಯವರಿಗೆ ಬೇರೆ ಬೇರೆ ಊರಿಗೆ ವರ್ಗವಾಗುತ್ತಿದ್ದುದರಿಂದ ಹಲವಾರು ಊರುಗಳಲ್ಲಿ ಅವರ ಶಿಕ್ಷಣ ನಡೆದು ರಾಂಪುರದಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು.  ಮುಂದೆ ಅವರು ಛಾಯಾಗ್ರಾಹಕನಾಗಬೇಕೆಂಬ ಆಶಯದಿಂದ  ದೆಹಲಿಯಲ್ಲಿ ಎ. ದಾಸ್ ಅಂಡ್ ಕಂಪೆನಿಯಲ್ಲಿ ತರಬೇತಿ ಅಭ್ಯರ್ಥಿಯಾಗಿ ಸೇರಿಕೊಂಡರು. ಆದರೆ ಅವರು ರೂಪುಗೊಂಡಿದ್ದು ಕಲಾವಿದನಾಗಿ.  ತಮ್ಮ ಕೆಲಸದ ನಿಮಿತ್ತ ಸಿಮ್ಲಾಗೆ ಹೋದಾಗ ಪ್ರಾಣ್,   ನಟ ಮದನ್ ಪುರಿ   ಅವರು ರಾಮನಾಗಿ ಅಭಿನಯಿಸಿದ್ದ ರಾಮಲೀಲಾ ನಾಟಕದಲ್ಲಿ ಸೀತೆಯ ಪಾತ್ರಧಾರಿಯಾಗಿ ಅಭಿನಯಿಸಿದರು. 

ಮುಂದೆ  ಪ್ರಾಣ್ ಲಾಹೋರಿಗೆ ಭೇಟಿ ಕೊಟ್ಟಾಗ, ಪ್ರಸಿದ್ಧ ಬರಹಗಾರ ವಲಿ ಮಹಮ್ಮದ್ ವಲಿ ಅವರೊಡನೆ ಒದಗಿದ ಅನಿರೀಕ್ಷಿತ ಭೇಟಿ ಅವರನ್ನು ಚಿತ್ರರಂಗದಲ್ಲಿ ನಾಯಕನಟನನ್ನಾಗಿಸಿತು.  ಹೀಗೆ ಅವರು ನಟಿಸಿದ ಪ್ರಥಮ ಚಿತ್ರ 1940ರ ವರ್ಷದಲ್ಲಿ ತಯಾರಾದ, ಪಂಚೋಲಿ ಅವರ  ಪಂಜಾಬಿ ಚಿತ್ರ ಯಮ್ಲಾ ಜಾತ್’.   ಮುಂದೆ 1941ರ ವರ್ಷದಲ್ಲಿ ಅವರು ಚೌಧರಿ’, ‘ಖಜಾಂಚಿಎಂಬ ಚಿತ್ರಗಳಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದರು.  1942ರ ವರ್ಷದಲ್ಲಿ ತಯಾರಾದ ಖಾಂದಾನ್ಚಿತ್ರದಲ್ಲಿ ಪ್ರಾಣ್ ನೂರ್ ಜೆಹಾನ್ ಜೊತೆಯಲ್ಲಿ ಪ್ರಣಯರಾಜನಾಗಿ ಅಭಿನಯಿಸಿದರು.  ಹೀಗೆ ಪ್ರಾಣ್ 1949ರ ವರ್ಷದವರೆಗೆ ಕೈಸೆ ಕಹೂಂ’, ‘ಕಾಮೋಶ್ ನ ಗಹೇನ್ಮುಂತಾದ 22 ಚಿತ್ರಗಳ ನಾಯಕನಟರಾಗಿ ಅಭಿನಯಿಸಿದರು.  ಹೀಗೆ ಪ್ರಾಣ್ ಅವರು ಈ ಅವಧಿಯಲ್ಲಿ ನಟಿಸಿದ್ದ ಚಿತ್ರಗಳಲ್ಲಿ 18 ಚಿತ್ರಗಳು ಲಾಹೋರಿನಲ್ಲೇ ತಯಾರಾಗಿದ್ದವು.  1947ರ ದೇಶ ವಿಭಜನೆಯ ಸಮಯದಲ್ಲಿ  ಭಾರತಕ್ಕೆ ಬರಬೇಕಾದ ಅನಿವಾರ್ಯತೆಯಿದ್ದ ಪ್ರಾಣ್ ಅವರ ವೃತ್ತಿ ಗೆ ಅಲ್ಪಕಾಲದ ವಿರಾಮ ಉಂಟಾಯಿತು.  1947ರ ಸಮಯದಲ್ಲಿ ತಯಾರಾದ ಅವರು ತರಾಷ್’, ‘ಖಾನಾಬಾದೋಷ್ಮುಂತಾದ ಚಿತ್ರಗಳು ಸ್ವಾತಂತ್ರ್ಯಾನಂತರದಲ್ಲಿ ಪಾಕಿಸ್ತಾನದಲ್ಲಿ ಮಾತ್ರ ಬಿಡುಗಡೆಯಾದವು.  

ಮುಂದೆ ಅವರು ಲಾಹೋರಿನಿಂದ ಮುಂಬೈಗೆ ವಲಸೆ ಬಂದಾಗ ಕೈಯಲ್ಲಿ ಕೆಲಸವಿಲ್ಲದೇ ಅಭಿನಯಕ್ಕಾಗಿ ಅವಕಾಶಗಳನ್ನು ಅರಸುವುದರೊಂದಿಗೆ ಹೊಟ್ಟೆಪಾಡಿಗಾಗಿ ಇತರ ಕಾಯಕಗಳನ್ನೂ ಮಾಡ ತೊಡಗಿದರು.  ಈ ಸಮಯದಲ್ಲಿ ಅವರು ಮೆರಿನ್ ಡ್ರೈವ್ ಪ್ರದೇಶದಲ್ಲಿರುವ ಡೆಲ್ಮಾರ್ ಹೋಟೆಲಿನಲ್ಲಿ ಎಂಟುತಿಂಗಳುಗಳ ಕಾಲ ಕೆಲಸಮಾಡಿದರು.  1948ರ ವರ್ಷದಲ್ಲಿ  ಬರಹಗಾರ ಸಾದತ್ ಹಸನ್ ಮಾಂಟೋ ಮತ್ತು ನಟ ಶ್ಯಾಮ್ ಅವರ ಸಹಾಯದಿಂದ ಚಲನಚಿತ್ರರಂಗದಲ್ಲಿ ಪುನಃ ಮೊದಲಿನಿಂದ ತಮ್ಮ ವೃತ್ತಿಯನ್ನು ಆರಂಭಿಸಿದರು.  ಬಾಂಬೆ ಟಾಕೀಸ್ ಚಿತ್ರ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿದ ಅವರು, ದೇವಾನಂದ್ ಮತ್ತು ಕಾಮಿನಿ ಕೌಶಲ್ ನಟಿಸಿದ ಜಿದ್ದಿಚಿತ್ರದಲ್ಲಿ  ಅಭಿನಯಿಸಿದರು.  ಇದು ದೇವಾನಂದ್ ಅವರಿಗೆ ದೊಡ್ಡ ರೀತಿಯಲ್ಲಿ ಬ್ರೇಕ್ ನೀಡಿದ ಚಿತ್ರ.  ಈ ಚಿತ್ರದ ನಂತರ ಪ್ರಾಣ್ ಅವರು ಹಿಂದಿರುಗಿ ನೋಡಲೇ ಇಲ್ಲ.   1950ರ ವೇಳೆಗೆ ಕ್ರಮೇಣವಾಗಿ ಅವರು ಚಿತ್ರರಂಗದಲ್ಲಿ ಖಳಪಾತ್ರಧಾರಿಯಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು.   ಜಿದ್ದಿಚಿತ್ರ ಯಶಸ್ಸಾದ ಒಂದು ವಾರದ ಒಳಗೆ ಅವರು ಮೂರು ಚಿತ್ರಗಳಲ್ಲಿ ಸಹಿ ಮಾಡಿದ್ದರು.  ಅವರುಗಳಲ್ಲಿ ಎಸ್ ಎಮ್ ಯೂಸುಫ್ ಅವರ ಗೃಹಸ್ಥಿವಜ್ರಮಹೋತ್ಸವ ಆಚರಿಸಿತು.  ಪ್ರಭಾತ್ ಫಿಲಂಸ್ನ ಅಪರಾಧಿ ಮತ್ತು ವಾಲೀ ಮೊಹಮದ್ ಅವರ ಪುತ್ಲಿ  ಮತ್ತೆರಡು ಚಿತ್ರಗಳು.  ಇದೇ ವೇಳೆಗೆ ಪ್ರಾಣ್ ಅವರಿಗೆ ಪ್ರೇರೇಪಣೆ ನೀಡಿದ್ದ ಮಹಮದ್ ಅವರು ತಮ್ಮದೇ ಆದ ತಯಾರಿಕಾ ಸಂಸ್ಥೆಯನ್ನು ಮುಂಬೈನಲ್ಲಿ ಪ್ರತಿಷ್ಟಾಪಿಸಿದ್ದರು.  1950ರ ಶೀಷ್ ಮಹಲ್, 1955ರ ಜಶಾನ್, 1958ರ ಅದಾಲತ್ ಮುಂತಾದ ಚಿತ್ರಗಳು ಪ್ರಾಣ್ ಅವರ ಸಂಭಾಷಣೆಯ ಕುಶಲತೆ ಮತ್ತು ಅಭಿನಯದ ಶ್ರೇಷ್ಠತೆಗಳಿಗೆ ಪ್ರಸಿದ್ಧವಾದವು. 

ಪ್ರಾಣ್ ಅವರಿಗೆ 50-60ರ ದಶಕದ  ಎಲ್ಲ ಪ್ರಸಿದ್ಧ ಹೀರೋಗಳಾದ ದಿಲೀಪ್ ಕುಮಾರ್, ದೇವಾನಂದ್ ಮತ್ತು ರಾಜ್ ಕಫೂರ್ ಮುಂತಾದವರ ಚಿತ್ರಗಳಲ್ಲೆಲ್ಲಾ ಖಳನಟ ಪಾತ್ರಗಳು ನಿರಂತರವಾಗಿ ದೊರಕಲಾರಂಭಿಸಿದ್ದವು.   ಅಂದಿನ ಪ್ರಸಿದ್ಧ ನಿರ್ದೇಶಕರುಗಳಾದ ಎಂ. ವಿ. ರಾಮನ್, ನಾನಾ ಭಾಯ್ ಭಟ್, ಕಾಳಿದಾಸ್, ರವೀಂದ್ರ ಧಾವೆ, ಐ ಎಸ್ ಜೋಹರ್, ಬಿಮಲ್ ರಾಯ್ ಮುಂತಾದವರು ಪ್ರಾಣ್ ಅವರಿಗೆ 1950ರಿಂದ 1969ರ ವರೆಗಿನ ತಮ್ಮ ಎಲ್ಲ ಚಿತ್ರಗಳಲ್ಲೂ ವಿಧ ವಿಧದ ಖಳ ಪಾತ್ರಗಳನ್ನು ನೀಡಿದ್ದರು.     1968-1982ರ ಕಾಲದಲ್ಲಿ ಪ್ರಾಣ್ ಅವರು ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಪೋಷಕ ಪಾತ್ರಧಾರಿಯಾಗಿದ್ದರು.  ಹೀಗಾಗಿ ಹಳೆಯ ಕಾಲದ ನಿರ್ಮಾಪಕರುಗಳಿಗೆ ಪ್ರಾಣ್ ಕೈಗೆಟುಕದ ಕಲಾವಿದರಾಗಿದ್ದರು.    ಹೀಗಾಗ್ಯೂ ಹೊಸ ಪೀಳಿಗೆಯ  ಬಹುತೇಕ ತರುಣ ನಿರ್ಮಾಪಕ ನಿರ್ದೇಶಕರು ಪ್ರಾಣ್ ಅವರನ್ನೇ ತಮ್ಮ ಚಿತ್ರಗಳಿಗೆ ಬಯಸುತ್ತಿದ್ದರು.   

ಪ್ರಾಣ್ ಅವರ ದಿಲೀಪ್ ಕುಮಾರ್ ಅಭಿನಯದ ಆಜಾದ್’, ‘ಮಧುಮತಿ’, ‘ದೇವದಾಸ್’, ‘ದಿಲ್ ದಿಯಾ ದರ್ದ್ ಲಿಯಾ’, ‘ರಾಮ್ ಔರ್ ಶ್ಯಾಮ್’  ಮತ್ತು ಆದ್ಮಿಮುಂತಾದ ಚಿತ್ರಗಳಲ್ಲಿ ಖಳ ಪಾತ್ರಗಳು ಮತ್ತು ಜಿದ್ದಿ’, ‘ಮುನಿಮ್ಜಿ’, ‘ಅಮರ್ ದೀಪ್’, ‘ಜಬ್ ಪ್ಯಾರ್ ಕಿಸೀಸೆ ಹೋತಾ ಹೈಮುಂತಾದ ಚಿತ್ರಗಳ  ಸಹ ಪಾತ್ರಗಳು; ರಾಜ್ ಕಪೂರ್ ಜೊತೆಗಿನ ಆನ್’, ‘ಚೋರಿ ಚೋರಿ’, ‘ಜಾಗತೇ ರಹೋ’, ‘ಚಾಲಿಯ’, ‘ಜಿಸ್ ದೇಶ್ ಮೇ ಗಂಗಾ ಬೆಹ್ತೀ ಹೈ’, ‘ದಿಲ್ ಹಿ ತೋಹ್  ಹೈಮುಂತಾದವು ಅಪಾರ ಮೆಚ್ಚುಗೆ ಪಡೆದವು. 1956ರಲ್ಲಿ ಅವರು ಪ್ರಧಾನ ಪಾತ್ರಧಾರಿಯಾಗಿದ್ದ ಪಿಲ್ ಪಿಲಿ ಸಾಹೇಬ್’, ‘ಹಲಾಕುಸಹಾ ಭರ್ಜರಿ ಜನಪ್ರಿಯತೆ ಗಳಿಸಿದ್ದವು.  1952ರ ಸಿಂದಾಬಾದ್ ದಿ ಸೈಲರ್ಮತ್ತು  1958ರ ಡಾಟರ್ ಆಫ್  ಸಿಂದಾಬಾದ್ಚಿತ್ರದ ಕಳ್ಳನ ಪಾತ್ರಗಳು ಹಾಗೂ  1955ರ ಆಜಾದ್’;  ಚರಿತ್ರಾರ್ಹ ಚಿತ್ರಗಳಾದ 1952ರ ಆನ್’, 1958ರ ರಾಜ್ ತಿಲಕ್’; ಸಾಮಾಜಿಕ ಚಿತ್ರಗಳಾದ 1955ರ ಬರದಾರಿ’; ಪ್ರೇಮ ಚಿತ್ರಗಳಾದ 1955ರ ಮುನಿಮ್ಜಿಮತ್ತು 1957ರ ಆಶಾಮುಂತಾದ  ಚಿತ್ರಗಳಲ್ಲಿನ ಅವರ ಅಭಿನಯವಂತೂ ಅವರ ಸಾಮರ್ಥ್ಯಕ್ಕೆ ಪುಟವನ್ನಿಟ್ಟಹಾಗಿದ್ದವು. 

1960-70ರ ದಶಕದಲ್ಲಿ ಪ್ರಾಣ್ ನಲವತ್ತರ ವಯಸ್ಸಿನ ಗಡಿ ದಾಟಿದ್ದರೂ ತಮ್ಮ ದೇಹದಾರ್ಡ್ಯವನ್ನು ಸಮರ್ಥವಾಗಿರಿಸಿಕೊಂಡು 25-30ರ ವಯಸ್ಸಿನ ಪಾತ್ರಗಳನ್ನೇ ಅಂದಿನ ಹೀರೋಗಳಾದ ಶಮ್ಮಿ ಕಫೂರ್, ಜಾಯ್ ಮುಖರ್ಜಿ, ರಾಜೇಂದ್ರ ಕುಮಾರ್, ಧರ್ಮೇಂದ್ರ ಮುಂತಾದವರೊಡನೆ ಅಭಿನಯಿಸುತ್ತಿದ್ದರು. 

1950-70ರ ಸಮಯದಲ್ಲಿ ಪ್ರಾಣ್ ಅಂದರೆ ಅವರು ಅಭಿನಯಿಸುತ್ತಿದ್ದ ಖಳ ಪಾತ್ರಗಳನ್ನು ನೆನೆದರೆ ಎಲ್ಲರಿಗೂ ಒಂದು ರೀತಿಯ ಭಯ ಹುಟ್ಟುತ್ತಿತ್ತು.  1964ರ ಪೂಜಾ ಕೆ ಫೂಲ್’, ‘ಕಾಶ್ಮೀರ್ ಕಿ ಕಲಿಮುಂತಾದ ಚಿತ್ರಗಳಲ್ಲಿನ  ಪ್ರಾಣ್ ಅವರ ಖಳ ಪಾತ್ರ ನಿರ್ವಹಣೆಯಲ್ಲಿ ಕೊಂಚ ಮಟ್ಟಿನ ನಗೆಲೇಪನ ಸಹಾ ಜೊತೆಗೂಡತೊಡಗಿತು.  1970ರ ಸಮಯದಲ್ಲಿ, 1960ರ ದಶಕದ ಹೀರೋಗಳಾದ ದಿಲೀಪ್ ಕುಮಾರ್, ರಾಜ್ ಕಫೂರ್ ಅಂತಹವರು ದಪ್ಪಗಾಗಿದ್ದರಿಂದ ಅವರ  ಮಾರುಕಟ್ಟೆ ಇಳಿದು ಹೋಗಿತ್ತು.  ನಂತರದ ತಲೆಮಾರಿನವರಾದ ಶಮ್ಮಿ ಕಫೂರ್, ರಾಜೇಂದ್ರ ಕುಮಾರ್ ಅವರ ಮಾರುಕಟ್ಟೆ ಕೂಡಾ 1973ರ ವೇಳೆಗೆ ತಣ್ಣಗಾಗಿ ಹೋಗಿತ್ತು.  ಆದರೆ 1948ರಲ್ಲಿ ಜೊತೆಗೂಡಿದ್ದ ಚಿರಯೌವನಿಗರಂತಿದ್ದ ದೇವಾನಂದ್ಪ್ರಾಣ್  ಒಡನಾಟ ಮಾತ್ರ 19701980ರ ದಶಕದಲ್ಲೂ ಜಾನಿ ಮೇರಾ ನಾಮ್, ಯೇಹ್ ಗುಲಿಸ್ತಾನ್ ಹಮಾರ, ಜೋಶಿಲಾ, ವಾರಂಟ್ , ದೇಶ್ ಪರದೇಶ್ ಮುಂತಾದ ಚಿತ್ರಗಳ ಮೂಲಕ ನಿರಂತರವಾಗಿ ಮುಂದುವರೆದಿತ್ತು.

ಕಿಶೋರ್ ಕುಮಾರ್ ಮೆಹಮೂದ್ ಅವರುಗಳ ಹಾಸ್ಯಪ್ರಧಾನ ಚಿತ್ರಗಳಲ್ಲಿ ಪ್ರಾಣ್ ಅವರಿಗೆ ಕೂಡಾ ಗಣನೀಯ ಪಾತ್ರಗಳು ದೊರೆತವು.  ಚಂ ಚಮಾ ಚಂ’, ‘ಪೆಹ್ಲಿ ಝಲಕ್’, ‘ನಯಾ ಅಂದಾಜ್’, ‘ಆಶಾ’, ‘ಬೇವಫಾ’, ‘ಏಕ್ ರಾಜ್’, ‘ಜಾಲ್ ಸಾಜ್’, ‘ಹಾಲ್ಫ್ ಟಿಕೆಟ್’, ‘ಮನ್-ಮೌಜಿ’, ‘ಸಾಧು ಔರ್ ಸೈತಾನ್’, ‘ಲಾಕೊನ್ ಕೆ ಏಕ್’  ಹೀಗೆ ಇವರ ಒಟ್ಟುಗಾರಿಕೆ ಬಹುಕಾಲವಿತ್ತು.

1967ರ ಮನೋಜ್ ಕುಮಾರ್ ಅವರ ಪ್ರಸಿದ್ಧ ಉಪಕಾರ್ಚಿತ್ರದಲ್ಲಿ  ಮಾಲಂಗ್ ಚಾಚಾಪಾತ್ರಧಾರಿಯಾಗಿ  ಪ್ರಾಣ್ ಅವರಿಗೆ ಸಕಾರಾತ್ಮಕ ಪಾತ್ರ ದೊರಕಿದುದರ ಜೊತೆ ಕಲ್ಯಾಣ್ ಜಿ ಆನಂದಜಿ ಅವರ ಪ್ರಸಿದ್ಧ ಗೀತೆ ಕಸ್ಮೆ ವಾದೇ ಪ್ಯಾರ್ ವಫಾದಂತಹ ಹಾಡಿನ ಅಭಿನಯ ಕೂಡಾ ಮೂಡಿಬಂತು.  ಮನೋಜ್ ಕುಮಾರ್ ಅವರ ಇನ್ನಿತರ ಚಿತ್ರಗಳಾದ ಶಹೀದ್, ಪೂರಬ್ ಔರ್ ಪಶ್ಚಿಮ್, ಬೇ-ಇಮಾನ್, ಸನ್ಯಾಸಿ, ದಸ್ ನಂಬರಿ, ಪತ್ತರ್ ಕೆ ಸನಮ್ ಮುಂತಾದ ಚಿತ್ರಗಳಲ್ಲೂ ಪ್ರಾಣ್ ಅವರಿಗೆ ಪ್ರಮುಖ ಪಾತ್ರಗಳಿದ್ದವು.  1960ರ ದಶಕದಲ್ಲಿ ಪ್ರಾಣ್ ಅವರು ಕೆಲವೊಂದು ಬೆಂಗಾಲಿ ಚಿತ್ರಗಳಲ್ಲೂ ಅಭಿನಯಿಸಿದ್ದರು. 

1967ರಿಂದ 1997ರ ಅವಧಿಯಲ್ಲಿ ಪ್ರಾಣ್ ಅವರು  ಹಂಜೋಲಿ’, ‘ಪರಿಚಯ್’, ‘ಅಂಕೋಂ ಅಂಕೋಂ ಮೇ’, ‘ಜೀಲ್ ಕೆ ಉಸ್ ಪಾರ್’, ‘ಜಿಂದಾ ದಿಲ್ ಜ್ಹೆಹ್ರಿಲಾ ಇನ್ಸಾನ್’, ‘ಹತ್ಯಾರಾ’, ‘ಚೋರ್ ಹೋ ತೋ ಐಸಾ’, ‘ದಾನ್ ದೌಲತ್’, ‘ಜಾನ್ವಾರ್’, ‘ರಾಜ್’, ‘ತಿಲಕ್’, ‘ಬೆವಫಾಯಿ’, ‘ಇಮಾನ್ದಾರ್’, ‘ಸನಮ್ ಬೇವಫಾ’, ‘1942-ಎ ಲವ್ ಸ್ಟೋರಿ’, ‘ತೇರೇ ಮೇರೇ ಸಪ್ನೆ’, ‘ಲವ್ ಕುಶ್ಮುಂತಾದ ಹಲವಾರು ಚಿತ್ರಗಳಲ್ಲಿನ  ಉತ್ತಮ ಪೋಷಕ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದಿದ್ದರು.  ಶಶಿಕಫೂರ್ ಅವರೊಡನೆ  ಏಳು ಜನಪ್ರಿಯ ಚಿತ್ರಗಳಾದ ಬಿರದಾರಿ’, ‘ಚೋರಿ ಮೇರಾ ಕಾಮ್’, ‘ಪ್ಹಾನ್ಸಿ’, ‘ಶಂಕರ್ ದಾದ’. ‘ಚಕ್ಕರ್ ಪೆ ಚಕ್ಕರ್’, ‘ರಾಹು ಕೇತು’, ‘ಮಾನ ಗಯೇ ಉಸ್ತಾದ್ಮತ್ತು ಎರಡು ಸೋತ ಚಿತ್ರಗಳಾದ ಅಪ್ನಾ ಖೂನ್ಮತ್ತು ದೋ ಮುಸಾಫಿರ್ಚಿತ್ರಗಳಲ್ಲಿ ಪ್ರಾಣ್ ಅವರಿಗೆ ಪ್ರಮುಖ ಪಾತ್ರವಿತ್ತು.

1969ರ ನಂತರದಲ್ಲಿ ಪ್ರಾಣ್ ಅವರಿಗೆ ನನ್ಹಾ ಫ್ಹರಿಶ್ತಾ’, ‘ಧರ್ಮ’, ‘ಏಕ್ ಕುನ್ವರಿ ಏಕ್ ಕುನ್ವರ’, ‘ಜಂಗಲ್ ಮೇ ಮಂಗಲ್’, ‘ರಾಹು ಕೇತುಮುಂತಾದ ಚಿತ್ರಗಳಲ್ಲಿ ಪ್ರಧಾನ  ಪಾತ್ರಗಳು ದೊರೆತವು.  1951ರ ವರ್ಷದ ಆಫ್ಸಾನಾದಿಂದ ಮೊದಲ್ಗೊಂಡು 1980ರ ದಶಕದವರೆಗೆ ಪ್ರಾಣ್ ಅವರು ಅಶೋಕ್ ಕುಮಾರ್ ಅವರೊಡಗೂಡಿ ಅಭಿನಯಿಸಿದ ಸಂದರ್ಭದಲ್ಲೆಲ್ಲಾ ಅವರ ಸ್ನೇಹಿತನಾಗಿಯೋ ಇಲ್ಲವೇ ಅವರ ಪ್ರಧಾನ ಪಾತ್ರಕ್ಕೆ ಪೂರಕವಾದಂತಹ ಪಾತ್ರಗಳಲ್ಲೇ ನಟಿಸಿದ್ದರೆಂಬುದು ಒಂದು ವಿಶೇಷ.  ಈ ಈರ್ವರೂ ಜೀವನ ಮತ್ತು ವೃತ್ತಿಗಳೆರಡರಲ್ಲೂ   ಆಪ್ತ ಸ್ನೇಹಿತರಾಗಿದ್ದು ಒಟ್ಟು 27 ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು.  ಅಂತದ್ದೇ ಸ್ನೇಹವನ್ನು ಕಿಶೋರ್ ಕುಮಾರರೊಂದಿಗೆ ಸಹಾ ಪ್ರಾಣ್ ಹೊಂದಿದ್ದರು.  ಪ್ರಾಣ್ ಅವರ ಮೇಲೆ ಚಿತ್ರಣಗೊಂಡ ಕಿಶೋರ್ ಕುಮಾರ್ ಮತ್ತು ಮಹೇಂದ್ರ ಕುಮಾರ್ ಅವರು  ಹಾಡಿದ ಚಿತ್ರಗಳೆಲ್ಲಾ ಜನಪ್ರಿಯಗೊಂಡವು. 

1969-82ರ ಕಾಲ ಪ್ರಾಣ್ ಅವರ ಚಿತ್ರಜೀವನದ ಉಚ್ಛ್ರಾಯ ಮಟ್ಟದಲ್ಲಿದ್ದು ಈ ಸಂದರ್ಭದಲ್ಲಿ ಅವರು ತಮ್ಮ ಚಿತ್ರಗಳಲ್ಲಿ ನಾಯಕನಟರುಗಳಾಗಿದ್ದ ವಿನೋದ್ ಖನ್ನ, ಅಮಿತಾಬ್ ಬಚ್ಚನ್, ಶತ್ರುಗನ್ ಸಿನ್ಹಾ, ನವೀನ್ ನಿಶ್ಚಲ್, ರಣಧೀರ್ ಕಫೂರ್ ಮತ್ತು ರಿಷಿ ಕಫೂರ್ ಇವರುಗಳಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು.  ಆ ಕಾಲದಲ್ಲಿ  ಪ್ರಾಣ್ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಏಕ ಮಾತ್ರ ನಟನೆಂದರೆ ರಾಜೇಶ್ ಖನ್ನಾ ಮಾತ್ರ.  ಹೀಗಾಗಿ ಇವರಿಬ್ಬರನ್ನೂ ಒಟ್ಟುಗೂಡಿಸಿದರೆ ಚಿತ್ರದ ಬಂಡವಾಳ ಮಿತಿಮೀರಿ ಹೋಗುತ್ತದೆ ಎಂಬ ಕಾರಣದಿಂದ ಈ ಈರ್ವರೂ   ಒಟ್ಟಿಗೆ ನಟಿಸುತ್ತಿದ್ದ ಚಿತ್ರಗಳೇ  ಕಡಿಮೆಯಾಗಿದ್ದವು.  1967ರಲ್ಲಿ ಮೂಡಿ ಬಂಡ ಔರತ್ ಚಿತ್ರದಲ್ಲಿ ಪ್ರಾಣ್ ಪ್ರಧಾನ ಪಾತ್ರದಲ್ಲಿ ಪದ್ಮಿನಿಯೊಂದಿಗೆ ನಟಿಸಿದರೆ, ರಾಜೇಶ್ ಖನ್ನಾ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು.  ನಂತರದಲ್ಲಿ ಈ ಈರ್ವರೂ ಜಾನ್ವಾರ್’, ‘ಔರತ್’, ‘ಮರ್ಯಾದಾ’, ‘ಸೌತೆನ್’, ‘ಬೇವಫಾಯಿಮತ್ತು ದುರ್ಗಾಎಂಬ ಯಶಸ್ವೀ ಚಿತ್ರಗಳಲ್ಲಿ ಜೊತೆಗೂಡಿ ಅಭಿನಯಿಸಿದ್ದರು. 

ಮುಂಬಂದ ವರ್ಷಗಳಲ್ಲಿ ಪ್ರಾಣ್ ಅವರು ಸಾಹಸ ದೃಶ್ಯಗಳು ಕಡಿಮೆ ಇದ್ದ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ನಿರ್ಮಾಪಕರಿಗೆ  ತಮ್ಮ ಸಂಭಾವನೆ ಹೆಚ್ಚು ಹೊರೆಯಾಗದಂತೆ  ನಿಗಾ ವಹಿಸಿದ್ದರು.  ಅಮಿತಾಬ್ ಬಚ್ಚನ್ ಅವರನ್ನು ಪ್ರಕಾಶ್ ಮೆಹ್ರಾ ಅವರಿಗೆ ಪರಿಚಯಿಸಿ ಜಂಜೀರ್ಚಿತ್ರದ ವಿಜಯ್ ಪಾತ್ರ ದೊರಕುವ ಹಾಗೆ ಮಾಡಿದವರು ಪ್ರಾಣ್.  ಈ ಪಾತ್ರವನ್ನು ದೇವಾನಂದ್ ಮತ್ತು ಧರ್ಮೇಂದ್ರ ಅವರಿಗೆ ಹೇಳಿದಾಗ ಈ ಈರ್ವರೂ ಇದನ್ನು ತಿರಸ್ಕರಿಸಿದ್ದರಂತೆ.  ಪ್ರಾಣ್ ಮತ್ತು ಅಮಿತಾಬ್ ಒಟ್ಟು 14 ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದರು.  ಮಜಬೂರ್’, ‘ಜಂಜೀರ್’, ‘ಕಸೌತಿ’, ‘ಡಾನ್ಚಿತ್ರಗಳಲ್ಲಿ ಅಮಿತಾಬರಿಗಿಂತ ಪ್ರಾಣ್  ಹೆಚ್ಚಿನ ಸಂಭಾವನೆ ಪಡೆದಿದ್ದರು.   ಉಳಿದ 9 ಚಿತ್ರಗಳಾದ ಅಮರ್ ಅಕ್ಬರ್ ಆಂತೋನಿ, ನಾಸ್ತಿಕ್, ದೋಸ್ತಾನ, ನಸೀಬ್, ಕಾಲಿಯಾ, ಶರಾಬಿ ಮುಂತಾದ ಚಿತ್ರಗಳಲ್ಲಿ ಪ್ರಾಣ್ ಅವರಿಗಿದ್ದದ್ದು ಸಾಹಸ ದೃಶ್ಯಗಳು ಹೆಚ್ಚಿಲ್ಲದ ಪೋಷಕ ಪಾತ್ರಗಳು.  ಹೀಗಾಗಿ ಅವರು ಈ ಪಾತ್ರಗಳನ್ನು ಕಡಿಮೆ ಸಂಭಾವನೆಗೆ ನಿರ್ವಹಿಸಿದರು. 

ಹಿಂದೀ ಚಿತ್ರರಂಗದ  ಇತಿಹಾಸದಲ್ಲಿ ಅಶೋಕ್ ಕುಮಾರ್ ಮತ್ತು ಪ್ರಾಣ್ ಇಬ್ಬರು ಮಾತ್ರವೇ ಅತೀ ಹೆಚ್ಚಿನ ಗಲ್ಲಾ ಪೆಟ್ಟಿಗೆ ಯಶಸ್ಸು ಮತ್ತು ಇಳಿಮುಖವಿಲ್ಲದಂತಹ ಬೇಡಿಕೆ ಉಳಿಸಿಕೊಂಡಿದ್ದ ಕಲಾವಿದರು.  ಎಪ್ಪತ್ತು, ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ ಪ್ರಾಣ್ ಕಡಿಮೆ ಸಂಖ್ಯೆಯಲ್ಲಿ  ಖಳ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದರು.  1986 ಮತ್ತು 90ರಲ್ಲಿ ಅವರು ಎರಡು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದರು.  1991ರಲ್ಲಿ ಕನ್ನಡದಲ್ಲಿ ಹೊಸ ರಾಗಎಂಬ ಚಿತ್ರದಲ್ಲಿ ನಟಿಸಿದರು.

ಪ್ರಸಿದ್ಧ ನಿರ್ದೇಶಕ ಪ್ರಕಾಶ್ ಮೆಹ್ರಾ ಅವರು ತಮ್ಮ 9 ಜನಪ್ರಿಯ ಚಿತ್ರಗಳಾದ ಏಕ್ ಕುನ್ವರಿ ಏಕ್ ಕುನ್ವರ’, ‘ಜಂಜೀರ್’, ‘ಆನ್ ಬಾನ್’, ‘ಖಲೀಫಾ’, ‘ಜ್ವಾಲಾಮುಖಿ’, ‘ಶರಾಭಿ’, ‘ಮುಖದ್ದರ್ ಕಾ ಸಿಖಂದರ್’, ‘ಮೊಹಬ್ಬತ್ ಕೆ ದುಷ್ಮನ್’, ‘ಜಾದುಗರ್ಗಳಲ್ಲಿ ಪ್ರಾಣ್ ಅವರನ್ನು ಬಳಸಿದ್ದರು.  ಮನಮೋಹನ್ ದೇಸಾಯಿ ಅವರಿಗಂತೂ ಪ್ರಾಣ್ ಅಂದರೆ ಪ್ರಾಣ.  ಅವರ ಚಾಲಿಯಾ’, ‘ಬ್ಲಫ್ ಮಾಸ್ಟರ್’, ‘ಧರಂ ವೀರ್’, ‘ನಸೀಬ್’, ‘ಅಮರ್ ಅಕ್ಬರ್ ಆಂತೋನಿ’  ಚಿತ್ರಗಳಲ್ಲಿ ಪ್ರಾಣ್ ಇದ್ದರು.  ಸುಭಾಷ್ ಘೈ ಅವರ ವಿಶ್ವನಾಥ್’, ‘ಕರ್ಜ್’,  ‘ಕ್ರೋಧಿಚಿತ್ರಗಳಲ್ಲೂ  ಪ್ರಾಣ್ ಇದ್ದರು. 

1990ರ ನಂತರದಲ್ಲಿ ಪ್ರಾಣ್ ತಮ್ಮ ಆರೋಗ್ಯದ ದೃಷ್ಟಿಯಿಂದ ಪಾತ್ರಗಳನ್ನು ತಿರಸ್ಕರಿಸುತ್ತಾ ಬಂದರು.  ಅಮಿತಾಬ್ ಬಚ್ಚನ್ನರು ಚಿತ್ರರಂಗದಲ್ಲಿ ಅಪಾರ  ಸೋಲಿನಿಂದ  ಹತಾಶೆಗೊಂಡಿದ್ದ  ದಿನಗಳಲ್ಲಿ ಪ್ರಾಣ್, ಅಮಿತಾಬರ ಸ್ವಯಂ ನಿರ್ಮಾಣದ  ಮೃತ್ಯುದಾತಾಮತ್ತು ತೇರೇ ಮೇರೇ ಸಪನೇಚಿತ್ರಗಳನ್ನು ಒಪ್ಪಿಕೊಂಡು ನಟಿಸಿದರು.  ಇದರ ಹೊರತಾಗಿ ಅವರು ಇನ್ಯಾವುದೇ ಆಹ್ವಾನಗಳನ್ನೂ ಒಪ್ಪಿಕೊಳ್ಳಲಿಲ್ಲ.  2000ದ ವರ್ಷದ ನಂತರದಲ್ಲಿ ಅವರು ಕೆಲವೊಂದು ಗೌರವ ಅತಿಥಿ ಪಾತ್ರಗಳಲ್ಲಿ ದರ್ಶನ ನೀಡಿದ್ದುಂಟು. 

ಈ ಮಹಾನ್ ನಟ ಅಭಿನಯಿಸಿದ ಒಟ್ಟಾರೆ ಚಿತ್ರಗಳ ಸಂಖ್ಯೆ 350ಕ್ಕೂ ಹೆಚ್ಚಿನದು.

ಮಕ್ಕಳು ಗಲಾಟೆ ಮಾಡಿದರೆ ಪ್ರಾಣ್ ಬಂದ್ರು ಎಂದು ಪೋಷಕರು ಹೆದರಿಸುತ್ತಿದ್ದ ಕಥೆ ಒಂದು ರೀತಿಯದ್ದಾದರೆ, ಇಡೀ ಚಿತ್ರರಂಗದಲ್ಲಿ ಪ್ರಾಣ್  ಸಾಹೇಬ್ಅಂದರೆ ಒಂದು ಗೌರವಾನ್ವಿತ ವ್ಯಕ್ತಿತ್ವ.

ಪ್ರಾಣ್ ಅವರಿಗೆ ಸಂದ ಗೌರವಗಳು ಅನೇಕವಾದವು.  1967, 1969, 1972ರ ವರ್ಷದಲ್ಲಿ ಅವರಿಗೆ ಫಿಲಂ ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಹಲವಾರು ಜೀವಮಾನ ಸಾಧನೆಯ ಪ್ರಶಸ್ತಿಗಳು, 2000 ವರ್ಷದಲ್ಲಿ ಶತಮಾನದ ಶ್ರೇಷ್ಠ ಖಳ ನಟರೆಂಬ ಗೌರವ, 2001ರ ವರ್ಷದಲ್ಲಿ ಪದ್ಮಭೂಷಣ ಗೌರವಗಳು ಸಂದಿವೆ.  ಏಷ್ಯಾದ 25 ಶ್ರೇಷ್ಠ ಕಲಾವಿದರಲ್ಲಿ ಪ್ರಾಣ್ ಒಬ್ಬರು ಎಂದು ಅಂತರರಾಷ್ಟ್ರೀಯ ಸಮೀಕ್ಷೆ ಹೇಳುತ್ತದೆ.  ಇವೆಲ್ಲಕ್ಕೂ ಕಿರೀಟವಿಟ್ಟಹಾಗೆ ಕೆಲವು ದಿನಗಳ ಹಿಂದೆ  ಈ ಶ್ರೇಷ್ಠರಿಗೆ ಭಾರತೀಯ ಚಿತ್ರರಂಗದ ಶ್ರೇಷ್ಠ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು  ಸಲ್ಲಿಸಲಾಯಿತು. 

ಪ್ರಾಣ್ ಅವರ ಆತ್ಮಚರಿತ್ರೆಯ ಹೆಸರು ಕೂಡಾ ಪ್ರಾಣ್. 

ಕೆಲಕಾಲದಿಂದ ಅನಾರೋಗ್ಯದಲ್ಲಿದ್ದ ಪ್ರಾಣರು ಜುಲೈ 12, 2013ರಂದು ಈ ಲೋಕವನ್ನಗಲಿರುವುದು ಚಿತ್ರರಂಗದ ಒಂದು ದೊಡ್ಡ ವೃಕ್ಷ ಕಳಚಿದಂತಾಗಿದೆ.  ಈ ಮಹಾನ್ ಚೇತನಕ್ಕೆ ನಮ್ಮ ನಮನಗಳು.

Tag: Pran

ಕಾಮೆಂಟ್‌ಗಳಿಲ್ಲ: