ಬುಧವಾರ, ಆಗಸ್ಟ್ 28, 2013

ಗುರುಪೂರ್ಣಿಮೆ

ಗುರುಪೂರ್ಣಿಮೆ

ವಿಶ್ವದ ಶ್ರೇಷ್ಠ ಗುರುಪರಂಪರೆಗೆ ಗೌರವ ಸಲ್ಲಿಸುವ ಸುದಿನ ಗುರುಪೂರ್ಣಿಮೆ’. ನಾವು ಈ ಗುರುಕುಲಕ್ಕೆ ನಮ್ರರಾಗಿದ್ದೇವೆ, ಚಿರಋಣಿಗಳಾಗಿದ್ದೇವೆ ಎಂದು ಗುರುಶ್ರೇಷ್ಠರನ್ನು ಸ್ಮರಿಸುತ್ತಾಅವರುಗಳು  ಪರಂಪರಾನುಗತವಾಗಿ ಜ್ಞಾನವನ್ನು ಹರಿಸಿದ ಮನುಕುಲ, ಇತರ ಎಲ್ಲಾ ಸಂಕುಲಗಳಿಗಿಂತ ಉತ್ತಮವಾಗಿ ಬದುಕಲು ಪ್ರೇರಣೆ ನೀಡಿದ್ದಕ್ಕೆ ಧನ್ಯಭಾವವನ್ನು ಅನುಭಾವಿಸುವ ಒಂದು ಅಮೂಲ್ಯ ಕ್ಷಣ ಗುರುಪೂರ್ಣಿಮೆ’. 

ಗುರುಶ್ರೆಷ್ಠ ವೇದವ್ಯಾಸರಿಗೆ ಈ ವಿಶ್ವ ಚಿರಋಣಿಯಾಗಿದೆ.  ವೇದಗಳನ್ನು ಸುಲಭವಾಗಿ ಅರ್ಥವಾಗುವಂತೆ ವಿಂಗಡಿಸಿ, ಉಪನಿಷತ್ತುಗಳನ್ನು ವ್ಯಾಖ್ಯಾನರೂಪದಲ್ಲಿರಿಸಿ, ಪುರಾಣಗಳನ್ನು ಸೃಜಿಸಿ, ಮಹಾಭಾರತ, ಭಾಗವತದಂತಹ ಸುಲಭವಾಗಿ ಜನಪದದಲ್ಲಿ ಜನಮಾನಸದಲ್ಲಿ  ಬೆರೆಯುವಂತಹ ಶ್ರೇಷ್ಠತೆಗಳನ್ನು ಮೂಡಿಸಿದ ವೇದ ವ್ಯಾಸರು ಈ ದಿನದಂದು ಜನಿಸಿದರು.  ಮಾತ್ರವಲ್ಲದೆ, ಆಷಾಡ ಶುದ್ಧ ಪಾಡ್ಯಮಿಯಂದು ಬ್ರಹ್ಮ ಸೂತ್ರಗಳನ್ನುಬರೆಯಲು ಪ್ರಾರಂಭಿಸಿ ಈ ಪೂರ್ಣಮಿಯಂದು ಅದನ್ನು ಪೂರ್ಣಗೊಳಿಸಿದರು.  ವೇದ ವ್ಯಾಸರು ತಮ್ಮ ನಾಲ್ಕು ಪ್ರಮುಖ ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತು ಎಂಬ ಶಿಷ್ಯರಿಗೆ ನಾಲ್ಕು ವೇದಗಳನ್ನು ಬೋಧಿಸಿದರು.    ಹೀಗಾಗಿ ಈ ದಿನ ವ್ಯಾಸ ಪೂರ್ಣಿಮೆಯಾಗಿದೆ.

ಚಾತುರ್ಮಾಸಗಳ ಪ್ರಾರಂಭದ ಇಂದಿನ ದಿನದಲ್ಲಿ ಗುರುಪರಂಪರೆಯಲ್ಲಿ ಬೆಳೆದು ಬಂದ ಆಧ್ಯಾತ್ಮಿಕ ಅನುಭಾವಿಗಳು ಗುರುವಿಗೆ ಪೂಜೆಸಲ್ಲಿಸುತ್ತಾರೆ. ಅಂತೆಯೇ ಭಾರತೀಯ ಸಂಗೀತ ನೃತ್ಯ ಪರಂಪರೆಗಳು ಇಂದಿನ ದಿನದಲ್ಲಿ ಕೂಡಾ ತಮ್ಮ ಪರಂಪರಾಗತ ಗುರುಶಿಷ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದು ಈ ದಿನವನ್ನು ಪ್ರಧಾನವೆಂದು ಪರಿಗಣಿಸಿದೆ.

ಸಿದ್ಧಾರ್ಥನಾಗಿದ್ದ ಗೌತಮ ಬುದ್ಧರು ತಮಗೆ ಬುದ್ಧತ್ವ ಲಭಿಸಿದ ಐದು ವಾರಗಳ ನಂತರದಲ್ಲಿ ಇದೇ ಪೂರ್ಣಮಿಯಂದು ಸಾರಾನಾಥದಲ್ಲಿ ಧಮ್ಮಸಕ್ಕಪವತ್ತನ ಸೂತ್ರಎಂದು ಪ್ರಖ್ಯಾತವಾಗಿರುವ ಬೋಧನೆಯನ್ನು ತಮ್ಮ ಪ್ರಥಮ ಐದು ಶಿಷ್ಯರಿಗೆ ನೀಡಿದರು.  ಹೀಗಾಗಿ ಇದು ಬುದ್ಧ ಪೂರ್ಣಿಮೆ ಕೂಡಾ ಆಗಿದೆ.

ಇದೇ ಪೂರ್ಣಮಿಯ ದಿನದಂದು ಕೈವಲ್ಯವನ್ನು ಗಳಿಸಿದ  ಜೈನ ತೀರ್ಥಕಂರ ಮಹಾವೀರರು, ಮುಂದೆ ಗೌತಮ ಸ್ವಾಮಿಗಳೆಂದು ಪ್ರಖ್ಯಾತರಾದ ಇಂದ್ರಭೂತಿ ಗೌತಮನನ್ನು ತಮ್ಮ ಪ್ರಥಮ  ಶಿಷ್ಯರನ್ನಾಗಿ ಪರಿಗಣಿಸಿ ಗುರುಗಳಾದರು. 

ಸಂಸ್ಕೃತದಲ್ಲಿ ಗುಎಂಬುದು ಕತ್ತಲುಎಂದೂ, ‘ರುಎಂಬುದು ಕತ್ತಲನ್ನು ಹೋಗಲಾಡಿಸುವ ಶಕ್ತಿ ಎಂದು ತಿಳಿಯುತ್ತದೆ.  ಆದ್ದರಿಂದ ನಮ್ಮ ಅಜ್ಞಾನವೆಂಬ ಕತ್ತಲನ್ನು ಕಳೆಯುವವರು  ಗುರುವರ್ಯರು.  ಯಾರು ಕತ್ತಲು ಎಂಬ ಮಾಯೆಯಿಂದ ನಮ್ಮನ್ನು ಮುಕ್ತರನ್ನಾಗಿಸಿ ದಿವ್ಯಜ್ಞಾನವೆಂಬ ಪರಮಾರ್ಥ, ಅಥವಾ ಪರಮಾತ್ಮ ಅಥವಾ ನಮ್ಮ ಒಳಗೆಂಬ ಆತ್ಮನ ತಿಳುವಳಿಕೆಯನ್ನು ಪಡೆಯಲು ಪ್ರೇರಕರಾಗುತ್ತಾರೋ ಅವರೇ ಗುರುಗಳು.

ಈ ವಿಶ್ವದಲ್ಲಿ ನಾನಾ ವಿಚಾರಗಳನ್ನು ತಿಳಿಸಿ ಹಲವು ಅವೈಜ್ಞಾನಿಕ ತಿಳುವಳಿಕೆಗಳನ್ನು ಕಳೆಯುವುದರ ಮೂಲಕ ನಮ್ಮ ತಿಳುವಳಿಕೆ ಹೆಚ್ಚಿಸಿ ನಮ್ಮ ಬದುಕನ್ನು ಹಸನುಗೊಳಿಸಿರುವ ವಿಜ್ಞಾನಿಗಳು ಕೂಡಾ ಋಷಿ ಸದೃಶರಾದ ಗುರುಗಳ ಸಾಲಿಗೆ ಸೇರುತ್ತಾರೆ.   

ಮತ್ತೊಂದು ಅರ್ಥದಲ್ಲಿ ಗುಎಂಬುದು ಗುಣಾತೀತಮತ್ತು ರುಎಂಬುದು ರೂಪವರ್ಜಿತಎಂಬುದರ ಪ್ರಾತಿನಿಧಿಕವಾಗಿದ್ದು ಗುಣಾತೀತ ಮತ್ತು ನಿರಾಕಾರನಾದ ಪರಮಾತ್ಮನನ್ನು ಕೂಡಾ ಸೂಚಿಸುತ್ತದೆ.  ಹೀಗಾಗಿ ನಮ್ಮೊಳಗಿನ ದಿವ್ಯಚೇತನ ನಮ್ಮನ್ನು ಮಾರ್ಗದರ್ಶಿಸಿ ಕೈ ಹಿಡಿದು ನಡೆಸುತ್ತಿರುವ ಆ ಮಹಾನ್ ಶಕ್ತಿ ಕೂಡಾ ಗುರು. ದತ್ತಾತ್ರೇಯರ  ಕಥೆಯಲ್ಲಿ  ಅವರು  ವಿಶ್ವದಲ್ಲಿ  ಸಕಲ ಸೃಷ್ಟಿಗಳಿಂದಲೂ, ಪ್ರಕೃತಿಯಿಂದಲೂ    ಕಲಿಯುವ ಶ್ರೇಷ್ಠತೆಯನ್ನು ಕಂಡುಕೊಂಡದ್ದು  ಹಾಗೂ ಅವೆಲ್ಲವುಗಳಲ್ಲೂ  ಗುರುತರವಾದದ್ದನ್ನು, ಗುರುವನ್ನು  ಕಂಡುಕೊಂಡದ್ದನ್ನು  ಕಾಣುತ್ತೇವೆ.  ಹೀಗೆ  ಗುರುಪೂಜೆಯೆಂದರೆ ಒಂದು ರೀತಿಯಲ್ಲಿ  ಬದುಕಿನೆಲ್ಲೆಡೆಯಲ್ಲಿ  ಶ್ರೇಷ್ಠತೆಯನ್ನು  ಕಂಡುಕೊಂಡು  ಎಲ್ಲವನ್ನೂ ಗೌರವಿಸಿ  ಧನ್ಯತೆಯನ್ನು  ಕಂಡುಕೊಳ್ಳುವ  ಭಾವವೂ  ಆಗಿದೆ.     

ಹೀಗೆ ನಮ್ಮನ್ನು ಕೈ ಹಿಡಿದು ನಡೆಸಿರುವ, ಈ ವಿಶ್ವದಲ್ಲಿ ಹಲವು ಶ್ರೇಷ್ಠರ ರೂಪದಲ್ಲಿ ಅವತರಿಸಿ ಈ ಲೋಕವನ್ನು ಸಂಕಟಬಂದಾಗಲೆಲ್ಲಾ ಉದ್ಧರಿಸಿ ಸಲಹಿ, ಕೋಟ್ಯಾನುಕೋಟಿ ಜೀವಚರಗಳಂತೆ ಒಂದು ಕ್ಷುದ್ರ ಜಂತುವಾಗಬಹುದಿದ್ದ ಈ ಮಾನವಜೀವಿಗೆ ಶ್ರೇಷ್ಠತೆಯನ್ನು ಅನುಭಾವಿಸುವ ಅವಕಾಶವನ್ನು ನೀಡಿದ ಈ ಗುರುಪರಂಪರೆಗೆ ವಂದಿಸೋಣ.   ನಾವು ನಮ್ಮ ಶ್ರೇಷ್ಠತೆಯನ್ನು ಅರಿತು ಅದಕ್ಕೆ ಅನುವಾಗಿ ನಡೆದುಕೊಳ್ಳುವ ಸಂಕಲ್ಪ ಮುಖೇನ   ಈ ಶ್ರೇಷ್ಠತೆಯ ಗೌರವಗಳು ಪರಂಪರಾನುಗತವಾಗಿ ಈ ಲೋಕದಲ್ಲಿ ಶಾಶ್ವತವಾಗಿ ಉಳಿಯುವಂತೆ ಪ್ರಯತ್ನಶೀಲರಾಗೋಣ.


Tag: Guru Purnima, Vyasa Purnima

ಕಾಮೆಂಟ್‌ಗಳಿಲ್ಲ: