ಬುಧವಾರ, ಆಗಸ್ಟ್ 28, 2013

ಕಿಳ್ಳೆ ಕ್ಯಾತ

ಕಿಳ್ಳೆ ಕ್ಯಾತ
-ಶಿವಕುಮಾರ್ ಕಂಪ್ಲಿ

ಚರ್ಮದ ಗೊಂಬೆಗಳ ಆಟ ಆಡಿಸಿ ಗ್ರಾಮೀಣ ಜನತೆಗೆ ಮನೋರಂಜನೆಯ ಜೊತೆಗೆ ಭಾರತೀಯ ಕಥನ ಪರಂಪರೆಯನ್ನ ಕಲಿಸುತ್ತಾ ಬಂದ ವಾರಸುದಾರರು ಕಿಳ್ಳೆಕ್ಯಾತರು. ಕಿಳ್ಳೆಕ್ಯಾತ, ಸಿಳ್ಳೆಕ್ಯಾತ, ಛತ್ರಿ ಕಿಳ್ಳೆಕ್ಯಾತರು, ಗೊಂಬೆಯಾಡಿಸುವವರು ಎಂದೆಲ್ಲಾ ಕರೆಸಿಕೊಳ್ಳೋ ಇವರ ಮಾತೃಭಾಷೆ ಮರಾಠಿ. ಆದರೆ ಇವರು ಭಾಷಾ ಸಾಮರಸ್ಯದ ಪ್ರತೀಕದಂತೆ ಕನ್ನಡಿಗರೊಂದಿಗೆ ಕನ್ನಡಿಗರಂತೆಯೇ ಕನ್ನಡ ನಾಡಿನ ಹಳ್ಳಿಗಳಲ್ಲೂ ಇದ್ದಾರೆ.

ಕಿಳ್ಳೆ ಅಥವಾ ಶಿಳ್ಳೆ ಎಂಬ ಪದಗಳಿಗೆ ವಕ್ರ ಅಥವಾ ಗೂಬೆಮೂತಿಯ ಎಂಬ ಅರ್ಥಗಳಿವೆ. ಇದ್ದಿಲು ಬಣ್ಣದ, ಜಡ್ಡು ಮೂಗಿನ ಅತಿ ಉಬ್ಬಿದ ತುಟಿಯ ಗುಡಾಣ ಹೊಟ್ಟೆಯ ಸೊಟ್ಟಪಟ್ಟಾದ ಕೈ ಕಾಲುಗಳುಳ್ಳ ಗಂಡು ಗೊಂಬೆಯೇ ಸಿಳ್ಳೆಕ್ಯಾತ. ಈ ಗೊಂಬೆಯನ್ನ ಆಡಿಸುವವರನ್ನೇ ಹೀಗೆ ಕರೆದಿರಬೇಕು.

ದಕ್ಷಿಣ ಭಾರತದಲ್ಲೇ ಪ್ರಸಿದ್ದವಾದ ಇವರ ಕಲೆ ವಿಶ್ವಕ್ಕೆ ನೀಡಿದ ಕೊಡುಗೆಯೂ ಹೌದು. ಮಳೆಗಾಲವನ್ನು ಬಿಟ್ಟು ಉಳಿದ ಎಲ್ಲಾ ಕಾಲದಲ್ಲೂ ಆಟ ಪ್ರದರ್ಶಿಸುವ ಇವರ ಮೂಲ ಕಸುಬೇ ಗೊಂಬೆಯಾಟ. ಇವರು, ತಮ್ಮ ಗೊಂಬೆಗಳನ್ನ ಹದಮಾಡಿದ ಜಿಂಕೆ ಚರ್ಮ ಮತ್ತು ಮೇಕೆ ಚರ್ಮಗಳಿಂದ ತಯಾರಿಸುತ್ತಾರೆ. ಅವುಗಳನ್ನು ಬಣ್ಣ ಬಣ್ಣಗಳಿಂದ ಚಿತ್ರಿಸಿ ದೇಹದ ಭಾಗಗಳನ್ನ ತಂತಿ ಮತ್ತು ಬಿದಿರುಗಳಿಂದ ಜೋಡಿಸಿ ಅವುಗಳ ಅಂಗಾಂಗಗಳು ಚಲಿಸುವಂತೆ ಮಾಡಿರುತ್ತಾರೆ. ಬಹುತೇಕ ರಾಮಾಯಣ ಮತ್ತು ಮಹಾಭಾರತದ ವಸ್ತುಗಳನ್ನೇ ಇವರು ಪ್ರದರ್ಶನಕ್ಕೆ ತೆಗೆದುಕೊಳ್ಳುತ್ತಾರೆ. ಇತ್ತೀಚೆಗೆ ರಾಜರ ಕಥೆ, ಸ್ವಾತಂತ್ರ್ಯ ಹೋರಾಟಗಾರರ ಕಥೆ, ಬಸವಣ್ಣ, ಗಾಂಧಿ ಮೊದಲಾದವರ ಕಥೆಗಳೊಂದಿಗೆ ಏಡ್ಸ್ ಜಾಗೃತಿ, ಪರಿಸರ ಜಾಗೃತಿಯಂತಹ ಸಾಮಾಜಿಕ ಸಮಸ್ಯೆಗಳನ್ನೂ ಇವರು ಗೊಂಬೆಯಾಟ ಮಾಡಿ ತೋರಿಸುತ್ತಾರೆ. ಮೊದಲೆಲ್ಲಾ ರಾತ್ರಿಯಿಡೀ ರಾಮಾಯಣ, ಮಹಾಭಾರತಗಳ ಒಂದು ಪ್ರಸಂಗ ನಾಟಕವಾದರೆ ಅಥವಾ ಐದಾರು ದಿನಗಟ್ಟಲೆ ಪ್ರದರ್ಶಿಸುತ್ತಿದ್ದ ಇವರ ಗೊಂಬೆ ಆಟವು ಈಗೀಗ ನಾಲ್ಕು ಅಥವಾ ಐದು ತಾಸುಗೆ ಸೀಮಿತವಾಗಿದೆ. ಈ ಆಟ ಬಿಳಿ ಪರದೆ, ಲೈಟು, ತಾಳ, ಮದ್ದಳೆಗಳನ್ನು ಒಳಗೊಂಡಿರುತ್ತದೆ. ಗಂಡಸರು ಗಂಡುಗೊಂಬೆಗೆ ಧ್ವನಿ ನೀಡಿದರೆ, ಸ್ತ್ರೀ ಪಾತ್ರಗಳಿಗೆ ಮಹಿಳೆಯರು ಧ್ವನಿ ನೀಡುತ್ತಾರೆ.

ಕಲಿಯುಗದ ಆರಂಭದಲ್ಲಿ ಗೊಂಬೆ ಕುಣಿಸುವ ವೃತ್ತಿ ದೇವರಿಂದಲೇ ಈ ಜಾತಿಗೆ ನೇಮಕವಾಯಿತು ಎಂಬ ನಂಬಿಕೆಯಿದೆ. ಆದ್ದರಿಂದ ಕಲಿಕ್ಯಾತ ಎಂಬ ಹೆಸರೇ ಕಾಲಕ್ರಮೇಣ  ಕಿಳ್ಳೆಕ್ಯಾತ ಆಗಿರಬೇಕು ಎಂದು ಡಾ. ಅರ್ಜುನ್ ಗೊಳಸಂಗಿಯವರು ತಮ್ಮ ಸಂಶೋಧನಾ ಗ್ರಂಥದಲ್ಲಿ ತಿಳಿಸಿದ್ದಾರೆ.

ಹೀಗಿದೆ ಕಿಳ್ಳೆ ಕುಟುಂಬ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಬಡೇಲಡಕು ಗ್ರಾಮದಲ್ಲಿ ವಾಸವಾಗಿರುವ ಕಿಳ್ಳೆಕ್ಯಾತರ ತಿಪ್ಪೇಸ್ವಾಮಿಯ ಇಡೀ ಕುಟುಂಬ ಈ ಕಲೆಯಲ್ಲಿ  ತೊಡಗಿದೆ. ಹದಿನಾರು ಮನೆಗಳಿರುವ ಕಿಳ್ಳೆಕ್ಯಾತರಲ್ಲಿ ಇದೊಂದೇ ಕುಟುಂಬ ಈ ಕಲೆಯನ್ನು ಬೆಳೆಸಿ ಬರುತ್ತಿದೆ. ಉಳಿದವರೆಲ್ಲಾ ಹೋಟೆಲ್, ವ್ಯಾಪಾರ, ಕೂಲಿ ಮಾಡುತ್ತಾರೆ. ಅವರೆಲ್ಲಾ ಬಡತನದ ಕಾರಣವೊಡ್ಡಿ ಈ ಕಲೆಯಿಂದ ದೂರ ಉಳಿದಿದ್ದಾರೆ. `ನಮ್ಮ ಮಗ ವೇಣುಗೋಪಾಲ ದೊಡ್ಡವರಿಗೂ ಅಸಾಧ್ಯವೆಂಬಂತೆ ತಾಳ ಬಾರಿಸುತ್ತಾನೆ. ದ್ವಿತೀಯ ಪಿ.ಯು.ಸಿ ಓದುತ್ತಿರುವ ಮಗಳು ಅಂಜಿನಮ್ಮ, ಹತ್ತನೇ ತರಗತಿಯ ಚಿಂತಾಮಣಿ ಬೆಂಗಳೂರಿನ ಜನಪದ ಜಾತ್ರೆಯಲ್ಲಿ, ಹರಿಯಾಣದ ಕಲಾಮೇಳದಲ್ಲಿ ತುಂಬಾ ಹೆಸರು ಮಾಡಿದರು' ಎಂದು ಹೆಮ್ಮೆಯಿಂದ ಹೇಳುವ ತಿಪ್ಪೇಸ್ವಾಮಿಗೆ ಈ ಕಲೆಯೇ ಜೀವನದ ಉಸಿರು. ಈ ದಂಪತಿ, ಮಕ್ಕಳೊಂದಿಗೆ ಮೊದಲೆಲ್ಲಾ ಅಲೆಮಾರಿಗಳಂತೆ ತಿಂಗಳಾನುಗಟ್ಟಲೆ ವಾಸವಿದ್ದು, ಧಾರವಾಡ, ಹುಬ್ಬಳ್ಳಿ, ವಿಜಾಪುರ, ಶಿವಮೊಗ್ಗ, ಗುಲ್ಬರ್ಗ, ರಾಯಚೂರು  ಸುತ್ತುತ್ತಿದ್ದರು. ಈಗ ಮಕ್ಕಳ ಓದು ನಿಲ್ಲುವುದೆಂಬ ಆತಂಕದಿಂದ ಇಲ್ಲೇ ನೆಲೆ ಊರಿದ್ದಾರೆ. ಹಾಗಾಗಿ ಇವರಿಗೆ ಸಿಗುವ ಆದಾಯವೂ ಕಡಿಮೆಯಾಗಿ ಬಡತನ ಬೆನ್ನಿಗಂಟಿಕೊಂಡಿದೆ ಎನ್ನುತ್ತಾರೆ ಇವರ ಪತ್ನಿ ಸುಭದ್ರಮ್ಮ. ಎಲ್ಲೆಲ್ಲೊ ತಿರುಗಿದರೂ ಈ ಕಲೆಯಿಂದ ನಮಗೇನೂ ಸಿಗಲಿಲ್ಲವೆಂಬ ಕೊರಗು ಆಕೆಯದ್ದು.

ಸಿನಿಮಾ, ಟೀವಿ ಬಂದಾಗಿನಿಂದ ಜನಪದರ ಇಂತಹ ಕಲೆಗಳು ಮೂಲೆಗುಂಪಾಗುತ್ತಿವೆ. ಆದರೂ ಕೆಲವು ಕೈಗಳಿಂದಾಗಿ ಈ ಕಲೆ ಉಳಿದು ಉಸಿರಾಡುತ್ತಿದೆ.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವರ್ಷಕ್ಕೆ ಎರಡು ಬಾರಿ ಅವಕಾಶ ಕಲ್ಪಿಸಿಕೊಡುತ್ತಿರುವುದನ್ನು ದಂಪತಿ ಮನದುಂಬಿ ನೆನೆಯುತ್ತಾರೆ. ಸ್ಥಳೀಯ ಶಾಸಕರು ತಿಂಗಳಿಗೆ ಸಾವಿರ ರೂಪಾಯಿ ಧನ ಸಹಾಯ ಮಾಡುತ್ತಿದ್ದಾರೆ. ಕಡು ಬಡತನದಲ್ಲೂ ಇವರ ಜೀವನ ಮತ್ತು ಮಕ್ಕಳ ಓದು ನಡೆಯುತ್ತಿದೆ. ನಗರ ಮತ್ತು ಹಳ್ಳಿಗಳಲ್ಲಿ ಈಗ ಇವರನ್ನು ಕರೆದು ಆಟ ಆಡಿಸುವವರೂ ಕಡಿಮೆಯಾಗಿರುವುದರಿಂದ ಬಡತನ ಇವರ ಹೆಗಲೇರಿ ಕುಳಿತಿದೆ.

ತಿಪ್ಪೇಸ್ವಾಮಿಯವರಿಗೆ ತೊಗಲುಗೊಂಬೆ ಆಟದಲ್ಲಿ  ಬಸವಣ್ಣ ಮತ್ತು ಗಾಂಧಿ ಕಥೆಗಳನ್ನು ಆಡಿಸಬೇಕೆಂಬ ಆಸೆ. ಹೈಸ್ಕೂಲ್‌ನ ಪಠ್ಯದ ಕೆಲವು ಭಾಗಗಳನ್ನು ಈ ಆಟ ಮಾಡಿ ತೋರಿಸಬೇಕೆಂಬ ಆಸೆ. ಆದರೆ ತೊಗಲುಗೊಂಬೆ ತಯಾರಿಯೇ ಸಾವಿರಾರು ರೂಪಾಯಿಗಳ ಖರ್ಚು ಬೇಡುವುದರಿಂದ ಇವರ ಕನಸು ನನಸಾಗದಂತೆ ಉಳಿದಿದೆ. ದಾನಿಗಳು, ಅಧಿಕಾರಿಗಳು ನೆರವು ನೀಡಿದಲ್ಲಿ ಇವರ ಕನಸು ನನಸಾದೀತು. ತಿಪ್ಪೇಸ್ವಾಮಿಯವರು ಒಂದು ರೀತಿ ಬರಗಾಲದ ಫಸಲಿನಂತವರು. ಬಳ್ಳಾರಿಯಲ್ಲಿ ಇವರದು ಬೆಳಗಲ್ ವೀರಣ್ಣ, ಯಡ್ರಾಮಿಹಳ್ಳಿಯ ಭರಮಣ್ಣನ ನಂತರದ ದೊಡ್ಡ ಹೆಸರು.

ಅವಕಾಶಗಳು ಹೆಚ್ಚಾದಲ್ಲಿ ಬಡೇಲಡಕಿನ ಜನತಾ ಮನೆಯ ಮರದ ಪೆಟ್ಟಿಗೆ ಸೇರಿಕೊಂಡ ಇವರ ತೊಗಲುಗೊಂಬೆಗಳು ಹೊರಬಂದು ಬಿಸಿಲು ಬರಗಾಲದೊಳಗೂ ನಗಬಲ್ಲವು. ಬಡತನ ಬಯಲಾಗಿ ಇವರ ಮನೆಯ ಬಯಲಲ್ಲೂ ಹಸಿರು ಚಿಗುರೊಡೆಯಬಹುದು. ನಗುವ ನಗಿಸುವ ಇವರ ತೊಗಲುಗೊಂಬೆಗಳು ಬದುಕಿನ ಬವಣೆಯೊಳಗೂ ನಗಬಲ್ಲವು. ಕೇವಲ ನಗುವನ್ನಷ್ಟೇ ಅಲ್ಲದೆ ಬವಣೆಯನ್ನೂ ಗುರುತಿಸುವ ಕಾರ್ಯವಾಗಬೇಕಾಗಿದೆ. ತಿಪ್ಪೇಸ್ವಾಮಿಯವರು ತೊಗಲುಗೊಂಬೆ ಜೊತೆಗೆ ಬಯಲಾಟಗಳನ್ನೂ ಕಲಿಸುತ್ತಾರೆ. ಅಶ್ವಮೇಧಯಾಗ, ರತಿಕಲ್ಯಾಣ, ಪಾರ್ಥ ವಿಜಯ, ಮಾಲಿನಿ ಕಲ್ಯಾಣ ಇವು ಇವರು ನಿರ್ದೇಶಿಸಿದ ಬಯಲು ನಾಟಕಗಳು. ಹಾಡುವ ಇವರು ಬಳ್ಳಾರಿ ಕನಕದುರ್ಗಮ್ಮ ಮತ್ತು ಕೊಟ್ಟೂರು ಗುರುಬಸವೇಶ್ವರರ ಮೇಲೆ ತಾವೇ ಸಾಹಿತ್ಯ ರಚಿಸಿ ಸಿ.ಡಿ ಮಾಡಿಸಿದ್ದಾರೆ. ತಮ್ಮ ಹದಿನಾಲ್ಕನೇ ವಯಸ್ಸಿನಿಂದಲೂ ಈ ಕಲೆಯನ್ನು ನಿರ್ವಹಿಸುತ್ತಿರುವ ಇವರು ತಮ್ಮ ಮಕ್ಕಳನ್ನೂ ಈ ಕಲೆಯ ಉಳಿಕೆಗೆ ತಯಾರು ಮಾಡುತ್ತಿರುವುದು ವಿಶೇಷ. ಅವರೂ ಕೂಡಾ ಅಷ್ಟೇ ಉತ್ಸಾಹದಿಂದ ಈ ಕಲೆ ಉಳಿಯಬೇಕು ಸಾರ್ ಎನ್ನುತ್ತಾರೆ.

ಕೃಪೆ: ಪ್ರಜಾವಾಣಿ

Tag: Kille Kyatha, Togalu Bombe

ಕಾಮೆಂಟ್‌ಗಳಿಲ್ಲ: