ಶುಕ್ರವಾರ, ಆಗಸ್ಟ್ 30, 2013

ರಾಜಾ ರವಿ ವರ್ಮ

ರಾಜಾ ರವಿ ವರ್ಮ

ಮೈಸೂರಿನ ಅರಮನೆಗಳಲ್ಲಿನ ಗೋಡೆಗಳನ್ನು ಅಲಂಕರಿಸಿರುವ ಚಿತ್ರ ವರ್ಣ ವೈಭೋಗಗಳ ಪ್ರತಿ ಚೌಕಟ್ಟಿನ ತುದಿಯಲ್ಲೂ ಒಬ್ಬ ರಾಜನ ಹೆಸರಿದ.  ಆ ರಾಜನೇ ರಾಜಾ ರವಿ ವರ್ಮ.  ಅವರು ರಾಜ ಎಂದು ಕರೆಸಿಕೊಂಡದ್ದು ಲಾರ್ಡ್ ಕರ್ಜನ್ ಎಂಬ ವೈಸರಾಯ್ ಅವರಿಗೆ ಗೌರವ ಪ್ರಧಾನ ಮಾಡಿದ ಸಂದರ್ಭದಲ್ಲಿ.  ಹಾಗೆ ಕರೆದಿದ್ದು ಆಗಿನ ತಿರುವಾಂಕೂರು  ದೊರೆ ಮೂಲಂ ತಿರುನಾಳರ ಪ್ರತಿಷ್ಠೆಯನ್ನೇ ಕೆಣಕಿತ್ತು.  ರಾಜರೆಲ್ಲರೂ ಹಾಗೇ ತಾನೇ.  ಅವರಿಗೆ ರಾಜಸ್ಥಾನ ಮುಖ್ಯ, ರಾಜತನವಲ್ಲ.  ಮೈಸೂರಿನ ಪ್ರಧಾನ ಅರಮನೆ, ಹಿಂದಿನ ಅರಮನೆಯಾದ ಜಗನ್ಮೋಹನ ಅರಮನೆಗಳಲ್ಲಿ ಒಂದು ಸುತ್ತು ಸುತ್ತಿದರೆ ಈ ರಾಜಾ ರವಿವರ್ಮರ  ಮೋಹಕ ಕಲೆಯ ಮೋಡಿಗೆ ಒಲಿಯದಿರಲು ಸಾಧ್ಯವೇ ಇಲ್ಲ.  ಒಂದು ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ಕಾಣುತ್ತಿರುವ ಬಹುತೇಕ ದೇವರ ಪಟಗಳು ಮತ್ತು  ಕ್ಯಾಲೆಂಡರುಗಳಲ್ಲಿ ಕಾಣುತ್ತಿರುವ ಬಹುತೇಕ ದೇವತೆಗಳ ಕಲ್ಪನೆಗಳನ್ನು ಹೆಚ್ಚು ಜಾರಿಗೆ ತಂದವರು ರಾಜಾ ರವಿವರ್ಮರೇ.

ಈ ವಿಶ್ವದಲ್ಲಿ ಅನೇಕ ಪ್ರಸಿದ್ಧ ಚಿತ್ರಕಾರರಿದ್ದಾರೆ.  ಅವರೆಲ್ಲರ ಚಿತ್ರಗಳನ್ನು ಆಸ್ವಾದಿಸಲು ವಿವಿಧ ಕಲಾಭಿರುಚಿ ಬೇಕು.  ರಾಜಾ ರವಿವರ್ಮರ ಚಿತ್ರಗಳೆಲ್ಲಾ ಕಳೆದ ಒಂದೂವರೆ ಶತಮಾನದ ಭಾರತೀಯ ಬದುಕಿನ ಅವಿಭಾಜ್ಯ ಅಂಗಗಳೇ ಆಗಿವೆ.  ವಿದೇಶಿಯರ ಸ್ತಬ್ಧ ‘ಗಿಡ – ನೀರು - ದೋಣಿ – ಚಂದ್ರ’ಗಳ ಚಿತ್ರಗಳ ಜಾಗದಲ್ಲಿ ದೇವರ ಪಟಗಳ, ಕ್ಯಾಲೆಂಡರುಗಳ ಚಿತ್ರಗಳನ್ನು ಸರಬರಾಜು ಮಾಡಿದ ಕೀರ್ತಿ ರಾಜಾ ರವಿವರ್ಮರಿಗೆ ಸೇರುತ್ತದೆ.

ಭಾರತೀಯ ಪಾರಂಪರಿಕ ಚಿತ್ರಕಲೆಗೆ ವಿದೇಶಿ ವರ್ಣರಂಜಿತ ಚಮತ್ಕಾರವನ್ನು ಬೆರೆಸಿದವರು ರವಿವರ್ಮ.  ಟ್ರಾವಂಕೂರು ಸಂಸ್ಥಾನಕ್ಕೆ ಸೇರಿದ ರವಿವರ್ಮ ಜನಿಸಿದ್ದು ಎಪ್ರಿಲ್ 29, 1848ರಲ್ಲಿ.  ಅವರ ತಂದೆ ಎಜುಮಾವಿಲ್ ನೀಲಕಂಠನ್ ಭತ್ತಾದ್ರಿಪಾದ್  ಮಹಾನ್ ವಿದ್ವಾಂಸರು.  ಅವರ ತಾಯಿ ಉಮಯಾಂಬ ಥಂಪುರತ್ತಿ ಮಹಾನ್ ಕವಯತ್ರಿ.  ಅವರ ಕೃತಿ ‘ಪಾರ್ವತಿ ಸ್ವಯಂವರಂ’ ಎಂಬ ಕೃತಿಯನ್ನು ಅವರ ಕಾಲಾನಂತರದಲ್ಲಿ ರವಿವರ್ಮರು ಪ್ರಕಟಿಸಿದರು.  ಅವರ ಪೂರ್ವಜರು ಮಲಬಾರಿನ ಬೇಯಿಪೋರ್ ರಾಜ ಮನೆತನಕ್ಕೆ ಸೇರಿದ್ದರೆಂಬ ಉಲ್ಲೇಖ ಕೂಡಾ ಇದೆ.

ರವಿವರ್ಮರು ರಾಮಸ್ವಾಮಿ ನಾಯ್ಡು ಅವರಿಂದ  ಜಲಚಿತ್ರಕಲೆಯನ್ನೂ ಡಚ್ ಕಲಾವಿದ ಥಿಯೋಡರ್ ಜೆನ್ಸನ್ ಅವರಿಂದ ತೈಲ ವರ್ಣಚಿತ್ರ ಕಲೆಯನ್ನೂ ಕಲಿತರು.

ರಾಜಾ ರವಿಮರ್ಮರ ಪ್ರಸಿದ್ಧ ಚಿತ್ರಗಳೆಲ್ಲವೂ ಭಾರತೀಯ ಪುರಾಣ ಕಲೆಗಳನ್ನು ಚಿತ್ರಿಸುವಂತಾಗಿದ್ದು ಈ ಪುರಾಣಗಳು ಜನಪದದಲ್ಲಿ  ಸಹಸ್ರಾರು ವರ್ಷಗಳು ನಲಿದ ಈ  ದೇಶದಲ್ಲಿ ಆತ್ಮೀಯವೆನಿಸಿದ್ದರಲ್ಲಿ ಅಚ್ಚರಿಯಿಲ್ಲ.  ‘ದಮಯಂತಿಯ ಹಂಸ ಸಂಭಾಷಣೆ’, ‘ಕೃಷ್ಣನ ರಾಯಭಾರ’, ‘ಜಟಾಯು ಸಂಹಾರ’, ‘ಅರ್ಜುನನಲ್ಲಿ  ಸುಭದ್ರೆಯ ಕುರಿತಾದ ಮೋಹ’, ‘ಶ್ರೀರಾಮಚಂದ್ರನಿಗೆ  ಸಮುದ್ರರಾಜನ ಮೇಲುಂಟಾದ ಕೋಪ’, ‘ಶಂತನು ಮತ್ತು ಮತ್ಸ್ಯಗಂಧಿ’, ‘ಶಕುಂತಲೆಯ ಅನ್ಯಮನಸ್ಕತೆ’,  ‘ಶಕುಂತಲೆಯ ಪ್ರೇಮಪತ್ರ’, ‘ಇಂದ್ರಜಿತ್ತುವಿನ ದಿಗ್ವಿಜಯ’,  ‘ಭಿಕ್ಷೆ ನೀಡುತ್ತಿರುವ ಮಹಿಳೆ’, ‘ಹಳ್ಳಿಯ ಹುಡುಗಿ’, ‘ಶ್ರೀರಾಮ ಪಟ್ಟಾಭಿಷೇಕ’ ,  ‘ರಾಧೆಯ ವಿರಹ’, ‘ಶ್ರೀಮನ್ನಾರಾಯಣ’, ‘ಮಹಾಲಕ್ಷ್ಮಿ’, ‘ನರಸಿಂಹ’, ‘ಪರಶಿವನ ಸಂಸಾರ’, ‘ಸಿದ್ಧಿ ಬುದ್ಧಿಯರ ವರಿಸಿದ ಗಣಪ’ ಹೀಗೆ ಅವರಿಂದ ಚಿತ್ರಿತವಾಗದ ದೇವ ದೇವತೆಗಳು, ಜನಪದ ನಾಯಕ ನಾಯಕಿಯರು, ಸಂಗೀತ-ನಾಟ್ಯ-ಸಾಂಸ್ಕೃತಿಕ-ಪ್ರೇಮಭರಿತ ಔನ್ನತ್ಯ ಭಾವಗಳು ಯಾವುವೂ ಹೊರಗುಳಿದಿಲ್ಲ.

ನಮ್ಮ ದೇಶದಲ್ಲಿನ ಸಾವಿರಾರು ವರ್ಷಗಳ ಶಿಲ್ಪಕಲೆಗಳಲ್ಲಿ, ಇಲ್ಲಿನ ಜನಪದವು  ಕಲ್ಪಿಸಿಕೊಂಡಿರುವ  ದೇವ ದೇವತೆಗಳು ಮತ್ತು ಅವರ ಉನ್ನತ ಭಾವಗಳು ನಿರಂತರವಾಗಿ ನೆಲೆಗೊಂಡಿವೆ.  ಆಧ್ಯಾತ್ಮದ ಅಂತರಾಳದ ಭಾವವನ್ನು ಪರಮಾತ್ಮವೆಂದು ಪೂಜಿಸಿದ ವಿಶ್ವದಲ್ಲಿ ಕಲೆ ಸಂಸ್ಕೃತಿಗಳು ಮೂಡಿಸಿದ ಚಿತ್ರಗಳು ಕ್ರಮೇಣವಾಗಿ ದೇವತೆಗಳಿಗೆ ಮನುಷ್ಯ ರೂಪವನ್ನು ಸೃಷ್ಟಿಸುವುದರಲ್ಲಿ ಅಥವಾ ಆರೋಪಿಸುವುದರಲ್ಲಿ ಪ್ರಮುಖ ಪಾತ್ರವಹಿಸಿವೆ.  ಕಳೆದ ಒಂದೂವರೆ ಶತಮಾನದಲ್ಲಿ ರಾಜಾ ರವಿವರ್ಮರ ಚಿತ್ರಗಳು ಇಂತಹ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿವೆ.

ವಿದೇಶಿ ಚಿತ್ರಗಳನ್ನು ಪ್ರದರ್ಶಿಸುವುದರಲ್ಲಿ ಪ್ರತಿಷ್ಟಿತ ಭಾವವನ್ನು ಕಾಣುತ್ತಿದ್ದ ಭಾರತೀಯ ಜನಮನದಲ್ಲಿ ದೇವತೆಗಳ ರೂಪದ ಭಕ್ತಿಭಾವವನ್ನು ಸ್ಪುರಿಸಿದ ಚಿತ್ರಕಲೆಗಳಲ್ಲಿ ರಾಜಾರವಿವರ್ಮರ ಕಲೆ ಪ್ರಮುಖವಾದದ್ದು.  ಸುಮಾರು 58 ವರ್ಷಗಳು ಮಾತ್ರ ಬಾಳಿದ ರವಿವರ್ಮರು ಅಕ್ಟೋಬರ್ 2, 1906ರ ವರ್ಷದಲ್ಲಿ ನಿಧನರಾದರು.

ರಾಜಾ ರವಿವರ್ಮರು ರೂಪದರ್ಶಿಯೋರ್ವರನ್ನು ತಮ್ಮ ಚಿತ್ರಕಲೆಗಳಿಗೆ ಸ್ಪೂರ್ತಿಯಾಗಿ ಬಳಸಿದ್ದರೆಂದು ಹಲವು ಕಥಾನಕಗಳಿವೆ.  ಅವರಿಗೆ ಅಂತಹ ಒಬ್ಬ ಸೌಂದರ್ಯ ರೂಪಿ ದೊರೆತದ್ದು ಮತ್ತು ಅವರು ಆ ಸೌಂದರ್ಯದಲ್ಲಿ ದೈವಪ್ರಭೆಯನ್ನು ಕಂಡದ್ದು, ಇವೆರಡೂ ಮಹತ್ವದ ವಿಷಯವೇ.  ರಾಜಾ ರವಿವರ್ಮರ ಚಿತ್ರಕಲೆ ಪ್ರದರ್ಶನ ಕಲೆಗಳಾದ ರಂಗಭೂಮಿ ಮತ್ತು ಸಿನಿಮಾದಂತಹ  ಮಾಧ್ಯಮದಲ್ಲಿ ಕೂಡಾ ಪ್ರಭಾವಿಸಿರುವುದನ್ನು ನಿಚ್ಚಳವಾಗಿ ಗುರುತಿಸಬಹುದಾಗಿದೆ.

ರಾಜಾರವಿವರ್ಮರ ಕಾಲಾನಂತರದಲ್ಲಿ ಕೂಡಾ ಅನೇಕ ದೇವ ದೇವತೆಗಳ ಪಟಗಳು, ಕ್ಯಾಲೆಂಡರುಗಳಲ್ಲಿ  ಹಲವು ರಾಜಾರವಿವರ್ಮರದ್ದು ಇರಬಹುದಾದರೂ ಬಹಳಷ್ಟು ಅನುಕರಣೆಗಳೂ ನಡೆದವು.  ಈ ಅನುಕರಣೆಗಳ ಚಿತ್ರಗಳು, ಕ್ರಮೇಣವಾಗಿ ಚಿತ್ರಗಳಲ್ಲಿನ ವ್ಯಕ್ತಿಗಳು ಸಿನಿಮಾ ನಟಿಯಂತೆ ನೀಟಾಗಿ ಟೈಲರ್ ಬಳಿ ಹೊಲೆಸಿ ಆಧುನಿಕ ಉಡುಪು ಧರಿಸಿದಂಥಹ ಕಲಾರಹಿತ – ಕಳಾರಹಿತ ಭಾವಗಳಾಗಿ ಸಹಾ ಮುಂದೆ ಸಾಗಿದ ಹಾಗೆ,  ಪುನಃ ಎಲ್ಲಾ ಗೋಡೆಗಳು ಆಧುನಿಕ ವಿದೇಶಿ ಚಿಂತನೆಗಳಾಗುತ್ತಿವೆ.

ಒಮ್ಮೆ ಶತಾವಧಾನಿ ಗಣೇಶ್ ಹೇಳುತ್ತಿದ್ದರು.  "ಹದಿನಾಲ್ಕು ವರ್ಷ ಕಾಡಿನಲ್ಲಿದ್ದರೂ ಒಂದು ಚೂರೂ ಗಡ್ಡ ಮೀಸೆ ಇಲ್ಲದ ರಾಮನ ಕಲ್ಪನೆಗಳೆಲ್ಲಾ ರಾಜಾರವಿವರ್ಮನ ಕಾಲದ ಪ್ರಾರಂಭಗೊಂಡ  ಕಲ್ಪನೆಗಳು" ಅಂತ.  ಸ್ವಯಂ ಚಿತ್ರಕಲೆಯ ಅಭಿವ್ಯಕ್ತರಾದ ಗಣೇಶ್ ಇದನ್ನು ಟೀಕೆಯಾಗಿ ಹೇಳಿದರು ಎಂದು ನನಗನ್ನಿಸಲಿಲ್ಲ.  ಒಂದು ಕಲೆಯಲ್ಲಿ ಕನಸು, ಕಲ್ಪನೆ ಮತ್ತು ಅಭಿವ್ಯಕ್ತಿಯ ಮಹದಾಶಯಗಳ ಸಂಗಮವಿರುತ್ತದೆ.  ಅದಕ್ಕೊಂದು ಚೌಕಟ್ಟೂ ಇರುತ್ತದೆ.  ಬಹಳಷ್ಟು ವೇಳೆ ನಾವು ಆ ಚೌಕಟ್ಟನ್ನೇ ಕಲೆ ಎಂದು ಭ್ರಮಿಸಿಕೊಂಡು ಅದನ್ನು ಆರಾಧ್ಯವನ್ನಾಗಿಯೂ ಹಲವೊಮ್ಮೆ ಟೀಕೆಯನ್ನಾಗಿಯೂ ಪರಿವರ್ತನಗೊಳಿಸಿಬಿಡುತ್ತೇವೆ.   ನಮಗೆ ಬೇಕಿರುವುದು ವಿಶ್ವವೆಂಬ ನಿಸರ್ಗದಲ್ಲಿರುವ ಸೌಂದರ್ಯೋಪಾಸನೆಯ ಮನೋಭಾವ, ಕಲಾರಸಿಕತೆ ಮತ್ತು ಎಲ್ಲೆಲ್ಲೂ ಆ ಸೌಂದರ್ಯವನ್ನು ಕಾಣುವ ಮತ್ತು ಸೃಷ್ಟಿಸಿಕೊಳ್ಳುವ ಆಧ್ಯಾತ್ಮ ಭಾವ.

ರವಿವರ್ಮರಂತಹ ಕಲಾವಿದರ ಶ್ರಮ ಸಾರ್ಥಕವಾಗುವುದು ಆತ ಚಿತ್ರಿಸಿರುವ ದೇವತೆಗಳನ್ನು ಮತ್ತು ಆ ದೈವಗುಣಗಳನ್ನು ಆ ಪಟಗಳಿಂದ ಬಿಡುಗಡೆಗೊಳಿಸಿ ನಮ್ಮೊಡನೆ ಸಂಮಿಳಿತಗೊಳಿಸಿಕೊಂಡಾಗ ದೊರಕುವ ಆನಂದದಲ್ಲಿ.  ಈ ಮಹಾನ್ ಚಿತ್ರಕಾರರ ನೆನಪಿಗೆ ನಮ್ಮ ನಮನ.

Tag: Raja Ravi Varma, 

ಕಾಮೆಂಟ್‌ಗಳಿಲ್ಲ: