ಗುರುವಾರ, ಆಗಸ್ಟ್ 29, 2013

ನರಸಿಂಹ ಜಯಂತಿ

ನರಸಿಂಹ ಜಯಂತಿ

ಇಂದು ನರಸಿಂಹ ಜಯಂತಿ.      ಮನುಷ್ಯ ಮತ್ತು ಸಿಂಹ ಇವೆರಡರ ಸಂಮಿಲಿತಗೊಂಡ ವಿಷ್ಣುವಿನ ಅವತಾರವೇ ನರಸಿಂಹಾವತಾರ.  ಮನುಷ್ಯ ಉನ್ನತಿಗೆ ಏರಿದಂತೆಲ್ಲಾ ತನ್ನ ಅಹಂ ಅನ್ನು ಬೆಳೆಸಿಕೊಳ್ಳುತ್ತಾ, ತಾನು ಪರಮಾತ್ಮನ ಸೃಷ್ಟಿಯ ಒಂದು ಭಾಗ ಎಂಬ ಅರಿವಿನ ಜಾಗೃತಿಯ ಪರಿವೆಯನ್ನು ಪ್ರಯತ್ನಪೂರ್ವಕವಾಗಿ ಮರೆಮಾಡಿಕೊಳ್ಳುತ್ತಾತಾನೇ ಮಿಗಿಲು, ತನ್ನ ಸುತ್ತಲಿನ ಪ್ರಾಣಿ ಪ್ರಪಂಚ ಕೀಳು, ತನ್ನ ಹೆಂಡತಿ ಮಕ್ಕಳಿಗೇನು ಗೊತ್ತು, ನಾನು ಎಲ್ಲಾ ಸಂಪಾದಿಸುತ್ತಿದ್ದೇನೆ, ಇಡೀ ವಿಶ್ವವನ್ನೇ ಜಯಿಸುವಾಗ ಈ ವಿಶ್ವಕ್ಕೆ ಯಾವ ದೊಣ್ಣೆ ನಾಯಕ ಸೃಷ್ಟಿಕರ್ತ, ನಾನು ಏನು ಮಾಡಿದರೂ ನಡೆಯುತ್ತದೆ, ಎಲ್ಲರೂ ನನ್ನನ್ನೇ ಪ್ರಭುವೆಂದು ಕೊಂಡಾಡಬೇಕು -  ಇಂತಹ ವಾಂಚಲ್ಯ, ದುರಭಿಮಾನ, ಅನ್ಯಮನಸ್ಕತೆ, ದುರಹಂಕಾರ ವೃದ್ಧಿಸುತ್ತಾ ಹೋಗುತ್ತದೆ.  ಈ ರೀತಿಯಾಗಿ ತನ್ನ  ಬದುಕೆಂಬ ಅನುಭವದ ಯಾತ್ರೆಯಲ್ಲಿ ಪುನೀತನಾಗುವ ಅವಕಾಶವನ್ನು ಕಳೆದುಕೊಳ್ಳುವ ಮಾನವ, ದಾನವನಾಗಿ ಪರಿವರ್ತಿತಗೊಂಡು ಭಯದ, ಲೋಭಧ, ಮೋಹದ, ಕ್ರೋಧದ ದಾನವತೆಯನ್ನು ಬಾಳುತ್ತಾ ಮುಂದೆ ಸಾಗುತ್ತಾನೆ. 

ಹಿರಣ್ಯಾಕ್ಷ, ಹಿರಣ್ಯಕಶಿಪು ಅಂತಹ ರಾಕ್ಷಸರ ಬಾಳು ಇಂದಿನ ಬಹುತೇಕ ದಾಹಿಗಳ ಬದುಕಿನ ಒಂದು ನೆರಳಿನಂತೆ ಕಾಣುತ್ತದೆ.  ಇಂತಹವರು ಇಂದು ಹೇರಳವಾಗಿ ಕಾಣುತ್ತಾರೆಅಷ್ಟೇ ಅಲ್ಲ!  ನಾವು ಸರಿಯಾಗಿದ್ದೇವೆ ಎಂದು ಹೇಳಿಕೊಳ್ಳುವ ನಮ್ಮ  ಸ್ವಯಂ ಪ್ರತಿಷ್ಠೆಯಲ್ಲೂ ನಮ್ಮಲ್ಲಿ ನಾವೇ  ಈ ಗುಣಗಳನ್ನು  ಆಗಾಗ ಕಂಡುಕೊಳ್ಳುತ್ತಿರುತ್ತೇವೆ.  ಬಹಳಷ್ಟು ವೇಳೆ ನಮ್ಮ ಪುಟ್ಟ ಮಕ್ಕಳು  ತಮ್ಮ ಮುಗ್ಧತೆಯಲ್ಲಿ ತೋರುವ ದಿವ್ಯತೆಯನ್ನು ಸಹಾ ನಮಗೆ  ಅನುಭಾವಿಸಲು ಸಾಧ್ಯವಾಗದೆ ನಮ್ಮ ಬಾಳನ್ನು ದುಸ್ತರವಾಗಿ ಬದುಕುತ್ತಿರುತ್ತೇವೆ. 

ನಾವು ಸೂಕ್ಷ್ಮವಾಗಿ ನಮ್ಮ ಬದುಕನ್ನು ಅಧ್ಯಯಿಸಿಕೊಂಡು ಮಗುವಿನ ನಿರ್ಮಲ ಮನಸ್ಸಿನಿಂದ ಎಲ್ಲವೂ ನಿನ್ನದೇ, ನನ್ನದೇನಿದೆ ಎಂಬಂತಹ ಪ್ರೀತಿಯಾದ ಭಕ್ತಿಯನ್ನು  ಅಳವಡಿಸಿಕೊಳ್ಳತೊಡಗಿದಾಗ ನಮ್ಮ ಮಾನವತನ ಮತ್ತು ಸಿಂಹತನದ ಅಗಾಧ ಶಕ್ತಿ ರಾಜ ಗಾಂಭೀರ್ಯಗಳು ನಮ್ಮ ಬಲವಾಗಿ, ಅದೇ ದೈವಶಕ್ತಿಯಾಗಿ ರೂಪುಗೊಂಡು ನಮ್ಮಲ್ಲಿರುವ ಎಲ್ಲ ರಾಕ್ಷಸಪ್ರವೃತ್ತಿಗಳೂ  ಅಸುನೀಗುತ್ತವೆ.     ಹೀಗಾಗಿ ಪ್ರಹ್ಲಾದನ ಮುಗ್ಧ ಪ್ರೀತಿ, ನರಸಿಂಹ ಎಂಬ ದಿವ್ಯತೆ ಮತ್ತು ಹಿರಣ್ಯಾಕ್ಷ - ಹಿರಣ್ಯಕಶಿಪುಗಳೆಂಬ ಅವಗುಣಗಳ ನಾಶದ ಕತೆಯನ್ನು  ನಮ್ಮ ಕತೆಯನ್ನಾಗಿಯೇ ಕಂಡುಕೊಂಡು ನಮ್ಮ ಬದುಕನ್ನು ಉತ್ತಮತೆಯ ಕಡೆಗೆ ನಡೆಸಿಕೊಳ್ಳುವ ಸಾಧ್ಯತೆ ಇದೆ.


ನಮ್ಮೆಲ್ಲರ ಬದುಕು ಸುಗಮವಾಗಲಿ.  ಈ ಜಗತ್ತಿನ ಹಿರಣ್ಯಾಕ್ಷ ಹಿರಣ್ಯಕಶಿಪುಗಳು ನಮ್ಮ ಪ್ರಾರ್ಥನೆಯಿಂದ ವಿನಾಶಗೊಂಡು ಈ ವಿಶ್ವವು  ಸಜ್ಜನರ ವಿಶ್ವವಾಗಿ ಸುಂದರ ನಂದನವಾಗಿ ರೂಪುಗೊಳ್ಳಲಿ ಎಂದು ಶ್ರೀ ಲಕ್ಷ್ಮೀ ನರಸಿಂಹ ದೇವರಲ್ಲಿ ನಮ್ರವಾಗಿ ಪ್ರಾರ್ಥಿಸೋಣ.

Tag: Narasimha Jayanti

ಕಾಮೆಂಟ್‌ಗಳಿಲ್ಲ: