ಶನಿವಾರ, ಆಗಸ್ಟ್ 31, 2013

ಎ. ಕೆ. ಹನಗಲ್

ಎ. ಕೆ. ಹನಗಲ್

ಚಿತ್ರರಂಗದ ಪ್ರೀತಿಯ ತಾತ ಎಂದೇ ಪ್ರಸಿದ್ಧರಾದವರು ಎ. ಕೆ. ಹನಗಲ್.  ‘ಶೌಕೀನ್’ ಚಿತ್ರದ ಇಂದ್ರ ಸೇನ್, ‘ಶೋಲೆ’ ಚಿತ್ರದ ರಹೀಂ ಚಾಚಾ, ‘ಆಯ್ನಾ’ ಚಿತ್ರದ ರಾಮ್ ಶಾಸ್ತ್ರಿ ಮುಂತಾದ ಹಲವಾರು ಪ್ರಸಿದ್ಧ ಪಾತ್ರಗಳಲ್ಲಿ, ಅದರಲ್ಲೂ ಸಕಲ ಸದ್ಗುಣಗಳ ಸಾಧು ಸಜ್ಜನ ಹಿರಿಯನ ಪಾತ್ರಗಳಲ್ಲಿ  ನಟಿಸಿದ ಅವತಾರ್ ಕಿಶನ್ ಹನಗಲ್ ಅವರು 1966ರಲ್ಲಿ ಮೂಡಿಬಂದ ಬಸು ಭಟ್ಟಾಚಾರ್ಯ ಅವರ ತೀಸ್ರೀ ಕಸಂ ಚಿತ್ರದಿಂದ 2006ರ ವರ್ಷದವರೆಗೆ ಇನ್ನೂರಕ್ಕೂ ಹೆಚ್ಚು ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದರು.    ಅವರು ಅಂದು ಭಾರತದ ಭಾಗವಾಗಿದ್ದ ಪೇಶಾವರದಲ್ಲಿ ಫ್ರೆಬ್ರುವರಿ 1, 1917ರಲ್ಲಿ ಜನಿಸಿದರು.

ಎ. ಕೆ. ಹನಗಲ್ ಅವರು ಒಬ್ಬ ಸ್ವಾತಂತ್ರ ಹೋರಾಟಗಾರರು.  ಭಾರತದ ಸ್ವಾತಂತ್ರ ಚಳುವಳಿಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಭಾರತ ಇಬ್ಬಾಗವಾದಾಗ ಸಹಾ  ಪಾಕಿಸ್ಥಾನದ ಜೈಲಿನಲ್ಲಿ ಮೂರು ವರ್ಷ ಕೊಳೆದು, 1949ರ ವರ್ಷದಲ್ಲಿ ಭಾರತಕ್ಕೆ ಬಂದರು.  ಬಾಲರಾಜ್ ಸಹಾನಿ, ಕೈಫಿ ಅಸ್ಮಿ ಮುಂತಾದ ಪ್ರಸಿದ್ಧರೊಂದಿಗೆ ಅವರು ರಂಗಭೂಮಿಯಲ್ಲಿದ್ದರು.

ಎ. ಕೆ. ಹನಗಲ್ ಚಿತ್ರರಂಗಕ್ಕೆ ಬಂದದ್ದೇ  ಅವರಿಗೆ 50 ವರ್ಷ ಪ್ರಾಯ ಕಳೆದ ಮೇಲೆ.  ನಮಕ್ ಹರಾಮ್, ಶೌಕೀನ್, ಶೋಲೆ, ಆಯಿನ, ಅವತಾರ್, ಅರ್ಜುನ್, ಆಂಧಿ, ತಪಸ್ಯಾ,  ಕೋರಾ ಕಾಗಜ್, ಬಾವರ್ಚಿ, ಅಭಿಮಾನ್, ಪರಿಚಯ್,  ಚಿತ್ ಚೋರ್, ಬಾಲಿಕಾ ಬಧು, ಗುಡ್ಡಿ, ನರಂ ಗರಂ, ಆಪ್ ಕಿ ಕಸಂ, ಅಮರ್ ದೀಪ್, ನೌಕ್ರಿ, ಶರಾರತ್, ತೇರೆ ಮೇರೆ ಸಪ್ನೆ, ಲಗಾನ್  ಚಿತ್ರಗಳಲ್ಲಿನ ಅವರ ಪಾತ್ರಗಳು ಅತ್ಯುತ್ತಮ ಅಭಿನಯಕ್ಕೆ ಹೆಸರು ಮಾಡಿವೆ.   ಅವರ ಅಭಿನಯದ ‘ಜೀವನ್ ರೇಖಾ’ ಎಂಬ ದೂರದರ್ಶನದ ಧಾರಾವಾಹಿ ಸಹಾ ನೆನಪಿನಲ್ಲಿ ಉಳಿಯುವಂತದ್ದು.

ತಮ್ಮ ಕೊನೆಯ ವರ್ಷಗಳಲ್ಲಿ   ಎ. ಕೆ. ಹನಗಲ್ಲರು ವೃದ್ದಾದಲ್ಲಿನ ಹಲವಾರು ಅನಾರೋಗ್ಯ ಮತ್ತು ಹಣಕಾಸಿನ ತೊಂದರೆಗಳನ್ನು ಅನುಭವಿಸಿದ ಸಂದರ್ಭದಲ್ಲಿ ಅದನ್ನು ಅರಿತ ಚಿತ್ರರಂಗದ ಗಣ್ಯರಾದ ಜಯಾ ಬಚ್ಚನ್,  ಅಮಿತಾಬ್ ಬಚ್ಚನ್, ಅಮೀರ್ ಖಾನ್, ಮಿಥುನ್ ಚಕ್ರವರ್ತಿ ಮುಂತಾದ ಹಲವಾರು ಗಣ್ಯರು ಅವರ ನೆರವಿಗೆ ಮುಂದೆ ಬಂದಿದ್ದರು.

ಎ. ಕೆ. ಹನಗಲ್ ಅವರು ಚಿತ್ರರಂಗಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಾಗಿ ಅವರಿಗೆ ಭಾರತ ಸರ್ಕಾರದ ಪದ್ಮಭೂಷಣ ಮತ್ತು ಇನ್ನಿತರ ಗೌರವಗಳು ಸಂದಿವೆ.  Life and Times of A K Hanagal ಎಂಬ ಅವರ ಆತ್ಮ ಚರಿತ್ರೆ ಪ್ರಕಟಗೊಂಡಿದೆ.

ಈ ಹಿರಿಯರು 2012 ಆಗಸ್ಟ್ ಮಾಸದಲ್ಲಿ   ತಮ್ಮ 97ನೆಯ ವಯಸ್ಸಿನಲ್ಲಿ ನಿಧನರಾದರು.  ಈ ಹಿರಿಯ ಚೇತನಕ್ಕೆ ನಮ್ಮ ನಮನ.

Tag: A. K. Hanagal

ಕಾಮೆಂಟ್‌ಗಳಿಲ್ಲ: