ಶನಿವಾರ, ಆಗಸ್ಟ್ 31, 2013

ಎಂ.ಎಸ್. ಶೀಲಾ

ಎಂ.ಎಸ್. ಶೀಲಾ

ನಮ್ಮ ನಾಡಿನ ಪ್ರಸಿದ್ಧ ಸಂಗೀತ, ಸುಗಮ ಸಂಗೀತ ಮತ್ತು  ನೃತ್ಯ ಕಲಾವಿದರಾದ ಎಂ. ಎಸ್. ಶೀಲಾ ಅವರು ಮಾರ್ಚ್  16, 1952ರಂದು ಜನಿಸಿದರು.  ಸಂಗೀತ ಮನೆತನದಿಂದ ಬಂದ ಶ್ರೀಮತಿ ಎಂ.ಎಸ್‌. ಶೀಲಾ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಇಂದು ಬಹುದೊಡ್ಡ ಹೆಸರು. ಅವರ ತಾಯಿ ಶ್ರೀಮತಿ ಎಂ.ಎನ್‌. ರತ್ನ ಜನಪ್ರಿಯ ಸಂಗೀತ ವಿದುಷಿಯಾಗಿದ್ದವರು. ತಾಯಿಯವರಿಂದಲೇ  ಪ್ರಾರಂಭಿಕ ಶಿಕ್ಷಣ ಪಡೆದ ಶೀಲಾ ಅವರು ನಂತರ ಸಂಗೀತ ಕಲಾನಿಧಿ ಡಾ. ಆರ್. ಕೆ. ಶ್ರೀಕಂಠನ್‌ ಅವರ ಬಳಿ ಪ್ರಬುದ್ಧ ಸಂಗೀತ ಕಲಾವಿದೆಯಾಗಿ ರೂಪುಗೊಂಡರು. ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಗಳಿಸಿದ ಪ್ರತಿಭಾವಂತರು ಶೀಲಾ.

ಎಂ.ಎಸ್‌. ಶೀಲಾ ಸುಗಮ ಸಂಗೀತದಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ಅಪರೂಪ ಮತ್ತು ವಿಶೇಷತೆಯೆಂದರೆ ಈ ಪ್ರತಿಭಾವಂತ ಕಲಾವಿದೆ, ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತಗಳೆರಡರಲ್ಲೂ ಆಕಾಶವಾಣಿಯ ಪ್ರಥಮ ಶ್ರೇಣಿಯಕಲಾವಿದರಾಗಿದ್ದಾರೆ. ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಸಮ್ಮೇಳನಗಳೂ ಸೇರಿದಂತೆ ಶೀಲಾ ದೇಶದಾದ್ಯಂತ ನಿರಂತರ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಜೊತೆಗೆ ಅಮೆರಿಕಾ, ಕೆನಡಾ, ಲಂಡನ್‌, ಆಸ್ಟ್ರೇಲಿಯಾ  ಮತ್ತು ಮಧ್ಯಪೂರ್ವ ದೇಶಗಳಲ್ಲಿಯೂ ನಮ್ಮ ಕರ್ನಾಟಕ ಸಂಗೀತದ ಪರಂಪರೆಯನ್ನು ಉನ್ನತ ಮಟ್ಟದಲ್ಲಿ ಪರಿಚಯಿಸಿದ್ದಾರೆ.  ಭರತನಾಟ್ಯಶಾಸ್ತ್ರದಲ್ಲೂ ಪರಿಣತಿ ಹೊಂದಿರುವ ಶೀಲಾ ಅವರು 90ರ ದಶಕದವರೆಗೂ ಭರತನಾಟ್ಯ ಕಲಾವಿದೆಯಾಗಿ ಸಹಾ ಪ್ರದರ್ಶನಗಳನ್ನು ನೀಡುತ್ತಿದ್ದರು.

ಕ್ಯಾಸೆಟ್‌ ಮತ್ತು ಸಿ.ಡಿ. ಮಾಧ್ಯಮದಲ್ಲಿ ಶ್ರೀಮತಿ ಎಂ.ಎಸ್‌. ಶೀಲಾ ಬಹುಜನ ಮನ್ನಣೆ ಪಡೆದಿರುವ ಸಂಗೀತ ವಿದುಷಿ. ಅವರು ಹೊರತಂದಿರುವ ಲಲಿತಾ ಸಹಸ್ರನಾಮ, ಶ್ರೀ ಶಾರದಾ ಸುಪ್ರಭಾತ, ಗಾನ ಸುಶೀಲಂ, ಆಡಿಸಿದಳು ಯಶೋಧಾ, ಪಾಲಿಂಚು ಕಾಮಾಕ್ಷಿ, ಹರಿದಾಸ ನಮನ, ಸೌಂದರ್ಯ ಲಹರಿ, ಶಿವಾನಂದ ಲಹರಿ, ವಚನಾಮೃತ ಮುಂತಾದ ಕ್ಯಾಸೆಟ್‌ ಮತ್ತು ಸಿಡಿಗಳು ಬಹಳ ಬೇಡಿಕೆಯನ್ನು ಹೊಂದಿವೆ. ಒಂದು ಅವಧಿಗೆ ಶ್ರೀಮತಿ ಶೀಲಾ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ತಮ್ಮ ಪತಿ ಶ್ರೀ ಬಿ.ಕೆ. ರಾಮಸ್ವಾಮಿ ಅವರೊಂದಿಗೆ ಹಂಸಧ್ವನಿ ಕ್ರಿಯೇಷನ್ಸ್‌ಸಂಸ್ಥೆ ಸ್ಥಾಪಿಸಿ, ಕರ್ನಾಟಕ ಶಾಸ್ತ್ರೀಯ ಸಂಗೀತದ ಬೆಳವಣಿಗೆಗೆ ಅನೇಕ ಕ್ರಿಯಾಶೀಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಅವುಗಳಲ್ಲಿ ಹರಿದಾಸ ನಮನ ಸರಣಿ, ವಾದ್ಯ ವೈಭವ ಸರಣಿ, ನುಡಿ ನಮನ, ಕರ್ನಾಟಕದ  ವಾಗ್ಗೇಯಕಾರರನ್ನು ಕುರಿತ ವಾಗ್ಗೇಯ ವೈಭವ ಪ್ರಮುಖವಾದವು, ವಾಗ್ಗೇಯ ವೈಭವ ಮಾಲಿಕೆಯಲ್ಲಿ ಇತ್ತೀಚೆಗೆ ಶ್ರೀಮತಿ ಶೀಲಾ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕೃತಿಗಳ ಸಿ.ಡಿ.ಯನ್ನು ಹೊರತಂದಿದ್ದಾರೆ. ಹಲವಾರು ಶಿಷ್ಯರುಗಳನ್ನೂ ತಯಾರು ಮಾಡಿರುವ ಈ ಅಭಿಜಾತ ಕಲಾವಿದೆ ತಮ್ಮ ಸಂಸ್ಥೆಯ ಮುಖಾಂತರ ಪ್ರತಿವರ್ಷ ಶ್ರೇಷ್ಠ ಸಂಗೀತ ಕಲಾಸಾಧಕರನ್ನು ಗುರುತಿಸಿ, ಅವರಿಗೆ ಹಂಸಧ್ವನಿ ಪುರಸ್ಕಾರವನ್ನು ನೀಡಿ ಗೌರವಿಸುತ್ತಿದ್ದಾರೆ.

ಶ್ರೀಮತಿ ಎಂ.ಎಸ್‌. ಶೀಲಾ ಅವರ ಸಂಗೀತ ಸಾಧನೆಯನ್ನು ಗುರುತಿಸಿ ಸರ್ಕಾರ, ಸಂಘ ಸಂಸ್ಥೆಗಳು ಮತ್ತು ವಿವಿಧ ವೇದಿಕೆಗಳು  ಅನೇಕ ಸ್ತರದಲ್ಲಿ ಅವರನ್ನು ಗೌರವಿಸಿವೆ. ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ 1997ರಲ್ಲಿ ಶೀಲಾ ಅವರನ್ನು ಅತ್ಯುತ್ತಮ ಹಿರಿಯ ಗಾಯಕಿ ಎಂದು ಗೌರವಿಸಿವೆ. ಕರ್ನಾಟಕ ಸರ್ಕಾರ ತನ್ನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. 1997-98ರ ಸಾಲಿನಲ್ಲಿ ಕನ್ನಡ ಚಲನಚಿತ್ರದ ಹಿನ್ನೆಲೆ ಗಾಯನಕ್ಕೆ ಶ್ರೀಮತಿ ಶೀಲಾ ಉತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಗಾನಕಲಾ ಪರಿಷತ್ತಿನ 2000ವರ್ಷದ ಸಾಲಿನ ಸಂಗೀತ ಸಮ್ಮೇಳನದಲ್ಲಿ ಸಮ್ಮೇಳನದ ಉತ್ತಮ ಸಂಗೀತ ವಿದುಷಿ ಎನ್ನುವ ಗೌರವದ ಜೊತೆಗೆ, ಅನನ್ಯ ಕಲ್ಚರಲ್‌ ಅಕಾಡೆಮಿಯ ಅನನ್ಯ ಪುರಸ್ಕಾರಪಡೆದ ಹೆಗ್ಗಳಿಕೆ ಶೀಲಾ ಅವರದು. ಶೃಂಗೇರಿಯ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ಶಾರದಾ ಪೀಠದ ಆಸ್ಥಾನ ವಿದುಷಿಯಾಗಿ ಶೀಲಾ ಗೌರವಿಸಲ್ಪಟ್ಟಿದ್ದಾರೆ. ಇವುಗಳಲ್ಲದೆ ಬೇರೆ ಬೇರೆ ಸಂಗೀತ ಸಂಸ್ಥೆಗಳು ಶೀಲಾ ಅವರನ್ನು ಗಾನಕಲಾಶ್ರೀ, ಗಾನ ವಾರಿಧಿ, ಸುಮಧುರ ಸಂಗೀತ ಧ್ರುವತಾರೆ, ಗುರು ಗೌರವಕಾರಿಣಿ, ಸಂಗೀತ ರಾಗ ಅಮೃತವರ್ಷಿಣಿ, ಸಂಗೀತ ಗಾನ ಕಲಾನಿಧಿ, ಸಂಗೀತ ಸಹ್ಯಾದ್ರಿ ಶಿಖರಿಣಿ, ಸಂಗೀತ ಸರಸ್ವತಿ, ಸಂಗೀತ ವಾಗ್ದೇವಿ ಮುಂತಾದ ಬಿರುದುಗಳೊಂದಿಗೆ ಸನ್ಮಾನಿಸಿವೆ. ಶ್ರೀಮತಿ ಎಂ.ಎಸ್‌. ಶೀಲಾ ಅವರ ಸಂಗೀತ ಸಾಧನೆಯನ್ನು ಗುರುತಿಸಿ 2007-08ನೇ ಸಾಲಿನ ಗೌರವ ಪ್ರಶಸ್ತಿಯನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡಿ ಗೌರವಿಸಿದೆ.

ಈ ಮಹಾನ್ ಕಲಾವಿದರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು.  ಅವರ ಸಂಗೀತ ಮಾಧುರ್ಯ ನಮ್ಮ ಕಿವಿ, ಮನಗಳನ್ನು  ನಿರಂತರವಾಗಿ ತಣಿಸುತ್ತಿರಲಿ.  ಅವರಿಗೆ ಸಕಲ ರೀತಿಯ ಗೌರವಗಳು ಸಲ್ಲಲಿ.

ವಿಷಯದ ಕೃಪೆ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಕಟಣೆ ಮತ್ತು www.mssheela.com


Tag: M. S. Sheela

ಕಾಮೆಂಟ್‌ಗಳಿಲ್ಲ: