ಶನಿವಾರ, ಆಗಸ್ಟ್ 31, 2013

ಭೂಷಣಕೆ ಭೂಷಣ ‘ವಿದ್ಯಾಭೂಷಣ’

ಭೂಷಣಕೆ ಭೂಷಣ ‘ವಿದ್ಯಾಭೂಷಣ’
-ಶಶಿರೇಖಾ ಹೆಗಡೆ

ಹರಿದಾಸರ ಕಾಲವನ್ನು ಚರಿತ್ರೆಗೆ ಸೇರಿಸುವಂತಿಲ್ಲ. ಯಾಕೆಂದರೆ ಅದರ ನಿಜಾರ್ಥದ ಪ್ರತಿನಿಧಿಯಾಗಿ ನಮ್ಮ ನಡುವೆ ಡಾ. ವಿದ್ಯಾಭೂಷಣರಿದ್ದಾರೆ. ಶ್ರೀ ಶ್ರೀಪಾದರಾಜರು, ಶ್ರೀ ವ್ಯಾಸತೀರ್ಥರಿಂದ ನೂರಾರು ವರ್ಷಗಳ ಹಿಂದೆಯೇ ಚೇತನಗೊಂಡ, ಪುರಂದರದಾಸರು, ಕನಕದಾಸರ ಒಳಗೊಳ್ಳುವಿಕೆಯಿಂದ ಕ್ರಾಂತಿಕಾರಕ ರೀತಿಯಲ್ಲಿ ಬೆಳಗಿದ ಹರಿದಾಸ ಆಂದೋಲನ ಸಮಾಜದಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನೇ ಮೂಡಿಸಿತು. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ವಿದ್ಯಾಭೂಷಣರು 'ನೂರಾರು ವರ್ಷಗಳ ಹಿಂದೆ ಆರಂಭವಾದ ಹರಿದಾಸ ಆಂದೋಲನ ಇಂದಿಗೂ ಪ್ರಸ್ತುತ' ಎನ್ನುತ್ತಾರೆ.

ಅವರ ಭಕ್ತಿ ಭಾರತೀ ಪ್ರತಿಷ್ಠಾನ ಕಳೆದ ಹದಿನೈದು ವರ್ಷಗಳಿಂದ ಹರಿದಾಸ ಸಂದೇಶ ಪ್ರಸಾರದಲ್ಲಿ ನಿರತವಾಗಿದೆ. ಸಂಗೀತ, ದೇವರನಾಮ, ಅಧ್ಯಾತ್ಮ ಶಿಬಿರಗಳನ್ನು, ಪುರಂದರೋತ್ಸವ ಭಕ್ತಿಮೇಳಗಳನ್ನು ನಡೆಸಿಕೊಂಡು ಬಂದಿದೆ. ಕರ್ನಾಟಕ ಸಂಗೀತ ಪಿತಾಮಹರೆಂದೇ ಪ್ರಸಿದ್ಧರಾದ ಪುರಂದರದಾಸರ ಹೆಸರಿನಲ್ಲಿ 'ಪುರಂದರಾಶ್ರಮ' ಕೂಡ ಈಗ ಸ್ಥಾಪನೆಗೊಂಡಿದೆ. ಇಲ್ಲಿದೆ ಅಪರೂಪವಾದ ಪುರಂದರದಾಸರ ವಿಗ್ರಹ.

ದಾಸ ಸಂದೇಶ ಪ್ರಚಾರ

ದಾಸಶ್ರೇಷ್ಠ ಪುರಂದರರ ಭಜನೆ, ಕೀರ್ತನೆಯನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡ, ವಾಣಿಜ್ಯೀಕರಣದಿಂದ ಸಂಪೂರ್ಣ ಮುಕ್ತವಾದ ಸಾತ್ವಿಕ ಸಂಸ್ಥೆಯಾಗಿ ಈ ಆಶ್ರಮವನ್ನು ರೂಪಿಸಬೇಕೆಂಬುದೇ ಪ್ರತಿಷ್ಠಾನದ ಉದ್ದೇಶ. ಹರಿದಾಸ ಸಾಹಿತ್ಯ, ಸಂಗೀತ ಮತ್ತು ಸಂದೇಶಗಳ ಪ್ರಚಾರ ಮಾಡುವ ಗುರಿ.

ಈ ಬಗ್ಗೆ ವಿದ್ಯಾಭೂಷಣರು ಹೇಳುವುದು: 'ಹರಿದಾಸರ ಸಾಹಿತ್ಯ, ಸಂಗೀತ, ಸಂದೇಶವನ್ನು ಜನರಿಗೆ ಮುಟ್ಟಿಸಲು ಪ್ರತಿಷ್ಠಾನ ಶ್ರಮಿಸುತ್ತಿದೆ. ದಾಸ ಸಾಹಿತ್ಯವನ್ನು ಜನ ಕಲಿತು ಅದನ್ನು ಅನುಸಂಧಾನ ಮಾಡಿಕೊಳ್ಳುವ ಪರಿಸರವನ್ನು ನಿರ್ಮಾಣ ಮಾಡಬೇಕೆಂಬುದೇ ನಮ್ಮ ಉದ್ದೇಶ. ಅದಕ್ಕೆ ಪೂರಕವಾಗಿ ನನ್ನ ಗುರುಗಳಾದ ಪೇಜಾವರ ಶ್ರೀಗಳು ನಿವೇಶನವೊಂದನ್ನು ನೀಡಿದ್ದಾರೆ. ಅಲ್ಲಿಯೇ ಆಶ್ರಮ ನಿರ್ಮಿಸುತ್ತಿದ್ದೇವೆ. ಆದರೆ ಇದು ಮಠದ ರೀತಿ ಅಲ್ಲ. ಅದೊಂದು ಆಶ್ರಮ. ಅಲ್ಲದೆ ಇದರಲ್ಲಿ ಮುಂದಾಗಿ ಕೆಲಸ ಮಾಡುತ್ತಿರುವವರೆಲ್ಲ ಗೃಹಸ್ಥರೇ. ಇದು ಯಾವುದೇ ರೀತಿಯಲ್ಲೂ ಕಮರ್ಷಿಯಲ್ ಆಗಬಾರದು ಎಂಬ ಉದ್ದೇಶ ನಮ್ಮದು'.

ಪುರಂದರಾಶ್ರಮದಲ್ಲಿ ಸಂಗೀತ ತರಗತಿಗಳನ್ನು ನಡೆಸಲಾಗುತ್ತಿದೆ. ಶಾಸ್ತ್ರೀಯ ಸಂಗೀತ, ಹರಿದಾಸ ಸಾಹಿತ್ಯ ಪಾಠಗಳನ್ನು ಹೇಳಿಕೊಡಲಾಗುವುದು. ಹರಿದಾಸ ಸಂಗೀತವನ್ನು ವಿದ್ಯಾಭೂಷಣರೇ ಕಲಿಸುತ್ತಾರೆ. ಆಶ್ರಮದ ಕಟ್ಟಡ ನಿರ್ಮಾಣ ಹಂತದಲ್ಲಿರುವುದರಿಂದ ಸದ್ಯ ವಿದ್ಯಾಭೂಷಣರ ಮನೆಯಲ್ಲಿಯೇ ತರಗತಿ.

ಕನಸುಗಳು

ಪುರಂದರಾಶ್ರಮದಲ್ಲಿ ಧ್ಯಾನ ಮಂದಿರ, ಭಜನಾ ಮಂದಿರವೂ ಇರುತ್ತೆ. ಅಲ್ಲಿ ಮೆಡಿಟೇಷನ್ ಸೆಂಟರ್ ಮಾಡುವ ಉದ್ದೇಶ. ಸಂಗೀತವನ್ನೇ ಧ್ಯಾನಿಸುವವರಿಗೂ ಅವಕಾಶವಿದೆ. ಹರಿದಾಸ ಸಾಹಿತ್ಯ ಸಂಶೋಧನಾ ಕೇಂದ್ರ, ಆಡಿಯೊ- ವಿಡಿಯೊ ಸಂಗ್ರಹ, ಪುಸ್ತಕ ಭಂಡಾರ, ವಾಚನಾಲಯ, ಮಕ್ಕಳಿಗಾಗಿ ವಿಶೇಷ ಕಾರ್ಯಾಗಾರ, ಕಾರ್ಯಕ್ರಮ ನಡೆಸುವ ಯೋಜನೆ. ಪ್ರತಿ ತಿಂಗಳೂ ಆಹ್ವಾನಿಸಿದವರ ಮನೆಗಳಿಗೆ ಹೋಗಿ ಅರ್ಧ ಗಂಟೆ ವಿಷ್ಣು ಸಹಸ್ರನಾಮ ಪಠಣ, ಭಜನೆ, ಚಿಂತನೆ, ಸದ್ವಿಚಾರ ಚಿಂತನಾ ಶಿಬಿರಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಹೀಗೆ ಮಾಡುವುದರಿಂದ ಭಕ್ತಿ ಪ್ರಸಾರ ಹಾಗೂ ಚಿಂತನೆ ಒಟ್ಟಿಗೇ ನಡೆಯುತ್ತದೆ. ಮನೆಮನೆಗೆ ಹೋಗಿ ಕಾರ್ಯಕ್ರಮ ಮಾಡುವುದರಿಂದ ಮಕ್ಕಳೂ ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ವಿಶೇಷ ಸಂಸ್ಕಾರ ಮಕ್ಕಳಿಗೆ ಸಿಗುತ್ತದೆ ಎಂಬುದು ಪ್ರತಿಷ್ಠಾನದ ಆಶಯ. ಪ್ರತಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಶಾಲಾ ಮಕ್ಕಳಿಗೆ ಹರಿದಾಸರ ಸಂಗೀತ, ಸದ್ವಿಚಾರಗಳನ್ನು ಪರಿಚಯಿಸುವ ಯೋಜನೆಯಿದೆ.

ವಿದ್ಯಾಭೂಷಣರ ಸಂದರ್ಶನ

ಈಗಿನ ನಿಮ್ಮ ದಿನಚರಿ ಹೇಗಿದೆ?

ಎಲ್ಲ ಸಂಸಾರಿಗಳಂತೇ ಇದೆ. ಆದರೆ ಲೌಕಿಕರಿಗಿಂತ ಸ್ವಲ್ಪ ಭಿನ್ನವಾಗಿದೆ. ಅಂದರೆ ಆಧ್ಯಾತ್ಮಿಕ ಚಿಂತನೆ, ಪೂಜೆ, ಧಾರ್ಮಿಕ ಆಚರಣೆಗಳು ಸ್ವಲ್ಪ ಜಾಸ್ತಿ ಅಂತಲೇ ಹೇಳಬಹುದು. ಈ ಎಲ್ಲ ಕೆಲಸಗಳಲ್ಲೂ ನನ್ನ ಧರ್ಮಪತ್ನಿ ಹಾಗೂ ಮಕ್ಕಳು ನನಗೆ ಪೂರಕವಾಗಿಯೇ ಸ್ಪಂದಿಸುತ್ತಾರೆ. ಅವರೂ ಅದೇ ರೀತಿಯ ಮನೋಭಾವ ಹೊಂದಿದವರಾಗಿದ್ದಾರೆ. ಅದು ನನ್ನ ಸೌಭಾಗ್ಯ.

ಸಂಸಾರಿಯಾಗಿ ಧರ್ಮ ಪ್ರಚಾರ ಮಾಡುತ್ತಿದ್ದೀರಾ?

ಹೌದು, ಮಾಡುತ್ತಿದ್ದೇನೆ. ಹಾಗಂತ ನಾನೇನೂ ದೊಡ್ಡ ಧರ್ಮಪ್ರಚಾರಕ ಎಂದು ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಕೆಲಸವೇ ಹರಿದಾಸರ ಕೀರ್ತನೆ ಹಾಡುವುದು. ಸಂತರ, ವಾಗ್ಗೇಯಕಾರರ ಮುಖ್ಯವಾಗಿ ನಮ್ಮ ಕರ್ನಾಟಕ ಸಂಗೀತಗಾರರದೆಲ್ಲ 'ಟೆಂಪಲ್ ಮ್ಯೂಸಿಕ್‌'. ಅಲ್ಲಿ ಭಕ್ತಿ ಬಿಟ್ಟರೆ, ಮಾನವಧರ್ಮ ಬಿಟ್ಟರೆ ಬೇರೇನೂ ಇಲ್ಲ. ಇದು ಲೌಕಿಕವಾದ ಮನೋರಂಜನೆಗೆ ಇರುವಂಥದ್ದಲ್ಲ. ಹಾಗಿದ್ದಾಗ ಅದನ್ನು ನಾವು ಹಾಡುವುದೆಂದರೆ ಅದು ಮನರಂಜನೆಯ ಜತೆಗೆ ಧರ್ಮಪ್ರಚಾರ ಕಾರ್ಯವನ್ನೂ ಮಾಡುತ್ತದೆ. ಇದನ್ನು ನಾವು ಉದ್ದೇಶಪೂರ್ವಕವಾಗಿ ಮಾಡದೇ ಇದ್ದರೂ ಅದು ಧರ್ಮಪ್ರಚಾರದ ಸಾಧನವಾಗಿಯೇ ಇರುತ್ತದೆ.

ದಾಂಪತ್ಯದಲ್ಲಿ ಪಶ್ಚಾತ್ತಾಪವಿಲ್ಲ

'ಸನ್ಯಾಸವೆಂಬುದು ಭಾರತೀಯ ಸಂಸ್ಕೃತಿಯ ಪರಮೋಚ್ಚ ಸಂಕಲ್ಪವೆಂಬುದರಲ್ಲಿ ಎರಡು ಮಾತಿಲ್ಲ. ನನ್ನ ಮಟ್ಟಿಗೆ ಸನ್ಯಾಸ ಒಲ್ಲದ ಸಂಗತಿಯೇ ಆಗಿದ್ದರೂ ಆ ಕುರಿತಾಗಿ ನನಗೆ ಅಪಾರ ಗೌರವವಿದೆ. ಆದರದು ಸಹಜವಾದುದಾಗಿರಲೆಂಬುದೇ ನನ್ನ ಆಶಯ' ಎನ್ನುತ್ತಾರೆ ಡಾ. ವಿದ್ಯಾಭೂಷಣರು. ಒಂದು ಕಾಲದಲ್ಲಿ ಪ್ರಮುಖ ಮಠದ ಪೀಠಾಧಿಪತಿಯಾಗಿದ್ದ ಇವರು, ಕಳೆದ ಹದಿನಾರು ವರ್ಷಗಳಿಂದ ನೆಮ್ಮದಿಯ ಸಂಸಾರ ನಡೆಸುತ್ತಿದ್ದಾರೆ. ಸಭ್ಯ ಸದ್ಗೃಹಸ್ಥ, ದಾಸರ ಪದಗಳ ಹರಿಕಾರ, ಸಂಗೀತಗಾರ, ಭಾವುಕ ಜೀವಿ ಹಾಗೂ ಸ್ಥಿತಪ್ರಜ್ಞ ವಿದ್ಯಾಭೂಷಣರೊಂದಿಗೆ ಬೈಟು ಕಾಫಿ.

ನಿಮ್ಮ 'ನೆನಪೇ ಸಂಗೀತ' ಸರಣಿಯನ್ನು ಪುಸ್ತಕರೂಪದಲ್ಲಿ ತರುವ ಆಲೋಚನೆ ಇದೆಯೇ?

ಹೌದು. ಸದ್ಯದಲ್ಲೇ ಪುಸ್ತಕ ಮಾಡುವವನಿದ್ದೇನೆ. ಪುಸ್ತಕದಲ್ಲಿ ನನ್ನ ವಿವಾಹದವರೆಗಿನ ಘಟನೆಗಳು ಮಾತ್ರ ಇರುತ್ತವೆ.

ನಿಮ್ಮ ಜೀವನದಲ್ಲಿ ನಡೆದ ಅತ್ಯಂತ ಖುಷಿಯ ಮತ್ತು ಅತ್ಯಂತ ಬೇಸರದ ಘಟನೆ ಯಾವುದು?

ಈ ಬೇಸರ, ಖುಷಿಗಳೆಲ್ಲ ಸಂದರ್ಭದ ಒತ್ತಡದಿಂದ ಹೈಲೈಟ್ ಆಗುತ್ತಾ
ಇರುತ್ತವೆ. ಇದು ಪ್ರತಿಯೊಬ್ಬರ ಜೀವನಕ್ಕೂ ಅನ್ವಯಿಸುವಂಥದ್ದೇ. ಬೇಸರದ ಸಂಗತಿ ಎಂದರೆ ನನ್ನ ಬರಹದಲ್ಲಿ ಹೇಳಿಕೊಂಡಂತೆ 'ಒಲ್ಲದ ಸನ್ಯಾಸ'.

ಪೀಠಾಧಿಪತಿಯಾಗಿದ್ದಾಗ ಸನ್ಯಾಸಕ್ಕೆ ಸಂಗೀತವನ್ನು ಹೇಗೆ ಪೂರಕವಾಗಿ ಬಳಸಿಕೊಂಡಿರಿ?

ಸಂಗೀತ ಸನ್ಯಾಸಕ್ಕೆ ಪೂರಕವಾಗಿಯೇ ಇರುತ್ತದೆ. ಏಕೆಂದರೆ ಇಲ್ಲಿ ಹಾಡುವ ಸಂಗೀತ 'ಭಕ್ತಿ ಸಂಗೀತ'. ಹರಿದಾಸ ಸಾಹಿತ್ಯ ಪರಂಪರೆಯ ವಾದಿರಾಜರು, ಶ್ರೀಪಾದರಾಜರು, ವ್ಯಾಸತೀರ್ಥರು ಮುಂತಾದವರೆಲ್ಲ ಸನ್ಯಾಸಿಗಳೇ ಆಗಿದ್ದವರು. ಆ ಥರದ ಸಂಗೀತವನ್ನೇ ನಾನೂ ಆಯ್ದುಕೊಂಡದ್ದು. ಅದು ನನಗೆ ಇಷ್ಟವೂ ಆಯಿತು.

ನಿಮ್ಮ ಕಾವಿ ಮನಸ್ಸಿನೊಳಗೆ ಪ್ರೇಮ ಅರಳಿದ್ದು ಹೇಗೆ?

ಪ್ರೇಮ ಮನುಷ್ಯ ಸಹಜವಾದದ್ದು. ಅಲ್ಲಿ(ಸನ್ಯಾಸದಲ್ಲಿ) ಅದು ಅರಳಿ ಹೂವಾಗಿ, ಕಾಯಾಗುವಂಥದ್ದು ಸರಿಯಲ್ಲ. ಅದಕ್ಕೋಸ್ಕರವೇ ನಾನು ಈ ಕಡೆ(ಸಂಸಾರಕ್ಕೆ) ಬಂದೆ... ಹ್ಹ.. ಹ್ಹ..

ಗೃಹಸ್ಥಾಶ್ರಮಕ್ಕೆ ಬಂದ ಆರಂಭದ ದಿನಗಳು ಹೇಗಿದ್ದವು?

ಚೆನ್ನಾಗಿತ್ತು. ಈಗಲೂ ಚೆನ್ನಾಗಿಯೇ ಇದೆ.

ಆಹಾರ ಪದ್ಧತಿಯಲ್ಲಿ ಆಗಿನದಕ್ಕೂ, ಈಗಿನದಕ್ಕೂ ವ್ಯತ್ಯಾಸವಾಗಿದೆಯೇ?

ಯಾವುದೇ ವ್ಯತ್ಯಾಸವಾಗಿಲ್ಲ. ಆಗ ಒಂದು ಊಟ, ಒಂದು ಫಲಾಹಾರ ಮಾಡುತ್ತಿದ್ದೆ. ಈಗ ಕೂಡ ದಿನಕ್ಕೆ ಊಟ ಒಂದೇ ಬಾರಿ, ಫಲಾಹಾರ ಮಾತ್ರ ಎರಡು ಸಾರಿ. ಸನ್ಯಾಸಿಗೆ ನಿಷಿದ್ಧವಾದ ಯಾವ ಆಹಾರವನ್ನೂ  ಈಗಲೂ ತೆಗೆದುಕೊಳ್ಳುವುದಿಲ್ಲ.

ಯಾವತ್ತಾದರೂ ಹೋಟೆಲ್‌ಗೆ ಹೋಗಿದ್ದೀರಾ?

ಖಂಡಿತ ಇಲ್ಲ. ನಾನು ಯಾವತ್ತೂ ಹೋಟೆಲ್‌ಗೆ ಹೋಗಿಲ್ಲ, ಹೋಗುವುದೂ ಇಲ್ಲ. ನಾನು ಎಷ್ಟೊಂದು ದೇಶಗಳಿಗೆ ಭೇಟಿ ಕೊಟ್ಟಿದ್ದೇನೆ. ಅಮೆರಿಕ, ಗಲ್ಫ್ ದೇಶಗಳಿಗೆ ಹೋದಾಗಲೂ ಪರಿಚಿತರ ಮನೆಯಲ್ಲಿ ಅವರು ಸ್ವತಃ ತಯಾರಿಸಿ ಬಡಿಸಿದ ಸಾತ್ವಿಕ ಆಹಾರವನ್ನೇ ಊಟ ಮಾಡಿದ್ದೇನೆ. ಇದುವರೆಗೂ ಆಹಾರದ ವಿಷಯದಲ್ಲಿ ಯಾವುದೇ ರೀತಿಯ ತೊಂದರೆಯಾಗಲಿಲ್ಲ.

ಕನ್ನಡ ಸೇವೆ

ಹದಿನೈದು ವರ್ಷದಿಂದ ಪ್ರತಿಷ್ಠಾನ ಅನೇಕ ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಸತತ 12 ಗಂಟೆಗಳ ಕಾರ್ಯಕ್ರಮ, 24 ಹರಿದಾಸರ ಹಾಡುಗಳಿಗೆ ಸಂಗೀತ ಸಂಯೋಜಿಸಿ 24 ಕಲಾವಿದರಿಂದ ಸತತ 24 ಗಂಟೆ ಹಾಡಿಸಿದ ಹೆಗ್ಗಳಿಕೆ ಪ್ರತಿಷ್ಠಾನದ್ದು. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ಕಲಾವಿದರು ಕೇವಲ ಕನ್ನಡದ ಹಾಡುಗಳನ್ನೇ ಹಾಡಬೇಕು. ಏಕೆಂದರೆ ಈ ಕಾರ್ಯಕ್ರಮದಲ್ಲಿ ಬೇರೆ ರಾಜ್ಯಗಳ ಕಲಾವಿದರು, ವಿಶೇಷವಾಗಿ ತಮಿಳುನಾಡಿನವರೂ ಭಾಗವಹಿಸುತ್ತಾರೆ. ಅವರು ಹರಿದಾಸರ ಹೊಸ ಹಾಡುಗಳನ್ನೇ ಆಯ್ಕೆ ಮಾಡಿಕೊಂಡು, ಸಂಗೀತ ಸಂಯೋಜಿಸಿ ಹಾಡಬೇಕು. ಇದರ ಮುಖ್ಯ ಉದ್ದೇಶ, ಹೊಸ ಹಾಡುಗಳೂ ಜನಸಾಮಾನ್ಯರಿಗೆ ಪರಿಚಿತವಾಗಿ ಅವರ ಬಾಯಲ್ಲಿ ಗುನುಗುನಿಸುತ್ತಿರುತ್ತವೆ. ಆ ಮೂಲಕ ಕೀರ್ತನೆಗಳು ಪ್ರಚಾರಗೊಳ್ಳುತ್ತವೆ. ಇದು ರಾಜ್ಯದ ವಿದ್ವಾಂಸರಿಗೂ ಸ್ಫೂರ್ತಿ ನೀಡುವಂತಹದು. ಈ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆ ಕೂಡ ಬೆಳೆಯಲು ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಸಮಸ್ತ ಜನರಿಗೆ ಹರಿದಾಸರ ಹಾಡುಗಳು, ಚಿಂತನೆಗಳು ತಲುಪಬೇಕು ಎನ್ನುವುದೇ ನಮ್ಮ ಗುರಿ ಎನ್ನುತ್ತಾರೆ ಡಾ. ವಿದ್ಯಾಭೂಷಣರು.

ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಹೊಸತರಲ್ಲಿ ಜನರು ನಿಮ್ಮನ್ನು ನೋಡುವ ದೃಷ್ಟಿ ಹೇಗಿತ್ತು?

ಅದೇ ಪ್ರೀತಿ, ಅದೇ ಗೌರವ, ಅದೇ ಭಕ್ತಿ. ಇದು ಮಾತ್ರ ನನಗೆ ಬಹಳ ಆಶ್ಚರ್ಯವನ್ನುಂಟುಮಾಡಿದೆ. ಎಷ್ಟೋ ಸಂದರ್ಭಗಳಲ್ಲಿ ಜನ ಬಾಯಿಬಿಟ್ಟೇ ಹೇಳಿದ್ದಿದೆ 'ನಮಗೆ ನೀವು ಈಗಲೂ ಸ್ವಾಮೀಜಿ' ಅಷ್ಟೆ.

ಹಾಡುವಾಗ ನಿಮ್ಮ ವಸ್ತ್ರಭೂಷಣ ಹೇಗಿರುತ್ತದೆ?

ನಾವು ಹಾಡುವುದು ಹರಿದಾಸರ ಭಜನೆ, ಕೀರ್ತನೆಗಳನ್ನು. ಅದನ್ನು ಪ್ಯಾಂಟು-ಶರ್ಟು ಹಾಕಿಕೊಂಡು ಹಾಡಿದರೆ ಏನ್ ಚೆನ್ನಾಗಿರ್ತದೆ? ನೀವು ನೋಡಿರಬಹುದು, ಎಷ್ಟೋ ಕೀರ್ತನೆಕಾರರು ಹಾಡುವಾಗ ಸಂತ ತುಕಾರಾಮರ, ನಾಮದೇವರ ರೀತಿ ವಸ್ತ್ರ ಧರಿಸುತ್ತಾರೆ. ವಸ್ತ್ರಭೂಷಣ ಕೂಡ ಭಕ್ತಿಗೆ ಪೂರಕ ಮತ್ತು ಪ್ರೇರಕ. ನನಗೆ ಬಿಳಿ ವಸ್ತ್ರ ಹೆಚ್ಚು ಪ್ರೀತಿ. ಹಾಗಾಗಿ ಯಾವಾಗಲೂ ಬಿಳಿ ವಸ್ತ್ರವನ್ನೇ ಧರಿಸುತ್ತೇನೆ.

ಧರ್ಮ ಪ್ರಚಾರಕ್ಕೆ ಮಠದ ಚೌಕಟ್ಟು ಬೇಕಾ?

ಕೆಲವೊಂದು ಸಂದರ್ಭಗಳಲ್ಲಿ ಬೇಕು. ಆದರೆ ಸಂಸಾರಿಯಾಗಿದ್ದೂ ಧರ್ಮ ಪ್ರಚಾರ ಮಾಡಬಹುದು. ಹರಿದಾಸರು, ಶರಣರು ಮಠ ಕಟ್ಟದೇ ಧರ್ಮಪ್ರಚಾರ ಮಾಡಿದ್ದಾರಲ್ಲ? ಆದರೆ ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸಲು ಒಂದು ಗುರು ಸ್ಥಾನ, ಗುರುಪೀಠ ಬೇಕಾಗುತ್ತದೆ. ಆದರೆ ಅದು ಕಮರ್ಷಿಯಲ್ ಆಗಿ, ಲೌಕಿಕವಾಗಿ ಯಾವುದೋ ರಾಜಕೀಯ ಸಂದರ್ಭಕ್ಕೆ ಉಪಯೋಗವಾಗುವುದು ಮಾತ್ರ ಸರಿಯಲ್ಲ. ಅದು ಆಶ್ರಮವಾಗಿರಬೇಕು.

ಈಗಿನ ಕೆಲವು ಮಠಗಳು, ಅಲ್ಲಿನ ವಾತಾವರಣ ವಿಪರೀತ ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತಿವೆ. ಇದಕ್ಕೆ ಕಾರಣವೇನು?

ನಾನು ಈ ವಿಷಯದಲ್ಲಿ ಏನು ಹೇಳಲೂ ಇಷ್ಟಪಡುವುದಿಲ್ಲ.

ಯಾವತ್ತಾದರೂ ಸಿನಿಮಾಕ್ಕೆ ಹೋಗಿದ್ದೀರಾ?

ಹೌದು, ನನ್ನ ಹೆಂಡತಿ, ಮಕ್ಕಳ ಜತೆ ಹೋಗಿದ್ದೆ, ಈಗಲೂ ಹೋಗುತ್ತೇನೆ. ನನಗೆ ಸಿನಿಮಾದಲ್ಲಿ ತೀರಾ ಆಸಕ್ತಿ ಏನಿಲ್ಲ. ಹಾಗಾಗಿ ಹೋಗುವುದು ತುಂಬ ವಿರಳ. ಸದಭಿರುಚಿಯ ಸಿನಿಮಾಕ್ಕೆ ಹೋಗುತ್ತೇನೆ.

ಲೌಕಿಕದಲ್ಲಿ ದೇವರ ಜತೆ ಹೇಗೆ ಕನೆಕ್ಟ್ ಆಗ್ತೀರಿ?

ಒಳ್ಳೆಯ ಅನುಸಂಧಾನ ಇರುವವರು ಹೇಗೇ ಇದ್ದರೂ- ಸನ್ಯಾಸಿಯಾಗಿದ್ದರೂ, ಸಂಸಾರಿಯಾಗಿದ್ದರೂ ದೇವರ ಒಟ್ಟಿಗೆ ಇರಬಹುದು. ಮಧ್ವಾಚಾರ್ಯರು ಒಂದು ಒಳ್ಳೆಯ ಮಾತನ್ನು ಹೇಳಿದ್ದಾರೆ. ಅದರ ಕನ್ನಡ ಅನುವಾದ ಹೀಗಿದೆ, 'ನಿನ್ನ ಪಾಲಿನ ಕರ್ಮ ಮಾಡು, ಬಂದುದನುಣ್ಣು. ಹರಿಯಚರಣಗಳರಿವು ತಪ್ಪದಿರಲಿ' ಇಷ್ಟೆ. ಇದು ಪ್ರತಿಯೊಬ್ಬರ ಜೀವನ ವಿಧಾನವಾಗಬೇಕು.

ಸಂಸಾರದ ಜಂಜಾಟಕ್ಕಿಂತ ಸನ್ಯಾಸತ್ವದ ಏಕಾಂತವೇ ಚೆನ್ನಾಗಿತ್ತು ಅಂತ ಯಾವತ್ತಾದರೂ ಅನಿಸಿದೆಯಾ?

ಖಂಡಿತ ಇಲ್ಲ. ಸಂಸಾರ ಜಂಜಾಟ ಎಂದು ನನಗೆ ಯಾವತ್ತೂ ಅನಿಸಿಯೇ ಇಲ್ಲ. ನನಗೆ ಮದುವೆಯಾಗಿ ಹದಿನಾರು ವರ್ಷಗಳಾಗಿವೆ. ಈ ಹದಿನಾರು ವರ್ಷಗಳ ದಾಂಪತ್ಯದ ಬದುಕಿನಲ್ಲಿ ನನಗೆ ಯಾವತ್ತೂ ಈ ಥರದ ಪಶ್ಚಾತ್ತಾಪ ಆಗಿಲ್ಲ.

ಕೃಪೆ: ಕನ್ನಡಪ್ರಭ

Tag: Vidyabhushana

ಕಾಮೆಂಟ್‌ಗಳಿಲ್ಲ: