ಶುಕ್ರವಾರ, ಆಗಸ್ಟ್ 30, 2013

ಹೊನ್ನ ಕಣಜದ ಹೊನ್ನಮ್ಮ

ಹೊನ್ನ ಕಣಜದ ಹೊನ್ನಮ್ಮ
-ಟಿ. ಗೋವಿಂದರಾಜು

ತನ್ನ ಸುತ್ತಮುತ್ತಲಿನ ಜನರ ಕಣ್ಣಲ್ಲಿ ಸಾಮಾನ್ಯ ಗೃಹಿಣಿಯಂತೆ ಇದ್ದ ಈ ಮಹಿಳೆ, ವಿದ್ವಾಂಸರ ಓದಿನಲ್ಲಿ ದೇಸೀ ಜ್ಞಾನಪರಂಪರೆಯ ಅಮೂಲ್ಯ ಜೀವಂತ ಪ್ರತಿನಿಧಿ ಎನಿಸಿದ್ದರು. ಅವರು ಹೇಳಿ ಬರೆಸಿದ ಬಹುಮುಖಿ ಜಾನಪದ ತಿಳಿವಳಿಕೆ `ಹೊನ್ನ ಕಣಜ' ಹೆಸರಿನ ಬೃಹತ್ ಗ್ರಂಥ.

ಕೇಂದ್ರ ಸಾಹಿತ್ಯ ಆಕಾಡಮಿಯಿಂದ 2009ರಲ್ಲಿ ಪ್ರಕಟವಾದ `ಹೊನ್ನ ಕಣಜ' ಅಧ್ಯಯನಕಾರರ ಗಮನ ಸೆಳೆದಿದೆ. ಯು.ಆರ್. ಅನಂತಮೂರ್ತಿ ಅವರು ಈ ಕೃತಿಯನ್ನು `ಪ್ರಥಮ ದರ್ಜೆಯ  ಕೆಲಸ' ಎಂದು ಗುರುತಿಸಿದ್ದಾರೆ. ಭಾರತೀಯ ಭಾಷೆಗಳಲ್ಲಿಯೇ ಇದು ಮೊದಲ ಮಾದರಿಯದು. ಕಿರು ಜಾನಪದ ಕೋಶದಂತಹ ಈ ಕೃತಿಗೆ ಕಾರಣರಾದವರು ಒಬ್ಬ ಹಳ್ಳೀ ತಾಯಿ. ಪ್ರೊ.ಕಿ.ರಂ. ನಾಗರಾಜ ಅವರ ಮುನ್ನುಡಿಯಲ್ಲಿ `ತಜ್ಞ'ರು ಎಂದೇ ಮಾನ್ಯರಾಗಿರುವ ಇವರೇ  ಹೊನ್ನಮ್ಮ.

ಈ ಜಾನಪದ ತಾಯಿ ರಾಜ್ಯ ಸರ್ಕಾರ, ಜಾನಪದ ಅಕಾಡಮಿ, ಸಾಹಿತ್ಯ ಪರಿಷತ್ತು, ಜಾನಪದ ಲೋಕ, ರಂಗ ಗಂಗೋತ್ರಿ ಮೊದಲಾದವುಗಳ ಪ್ರಶಸ್ತಿ, ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ. ಚಿತ್ರ ಕಲೆಯಲ್ಲೂ ತಮ್ಮ ಅನನ್ಯ ಛಾಪು ಮೂಡಿಸಿದ ಹೊನ್ನಮ್ಮ ಅವರ ಕೃತಿಗಳು ಚಿತ್ರಸಂತೆಯಲ್ಲೂ ಪ್ರದರ್ಶನಗೊಂಡು ಹಿರಿಯ ಕಲಾವಿದರ ಗಮನ ಸೆಳೆದಿವೆ.

ದೊಡ್ಡಬಳ್ಳಾಪುರ ತಾಲ್ಲೂಕು ಚನ್ನಾದೇವಿ ಅಗ್ರಹಾರದ ಕೃಷಿಕ ಮನೆತನದ ಹೊನ್ನಮ್ಮ ಇಳಿವಯಸ್ಸಿನಲ್ಲಿ ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿ ವಾಸವಾಗಿದ್ದರು; ಈಚೆಗೆ ನಿಧನರಾದರು. ಅವರಿಗೆ 88 ವರ್ಷವಾಗಿತ್ತು. ಬಹುಮುಖ ಪ್ರತಿಭೆಯ ಅವರ ವ್ಯಕ್ತಿತ್ವ `ಹೊನ್ನ ಕಣಜ' ಕೃತಿಯಲ್ಲಿ ಹರಳುಗಟ್ಟಿದೆ.

ಈ ಕೃತಿಯಿಂದ ಆಯ್ದ ಆತ್ಮಕಥೆಯ ಒಂದು ಭಾಗ ಇಲ್ಲಿದೆ. ಬೆಂಗಳೂರು ಗ್ರಾಮಾಂತರದ ಆಡುನುಡಿಯಲ್ಲಿ ಸರಳವಾಗಿ, ಆದರೆ ನಾಟಕೀಯವಾಗಿ ನಿರೂಪಿತವಾಗಿರುವ ಈ ಆತ್ಮಕಥಾನಕ ಕೃತಿ- ಸ್ವಾತಂತ್ರ್ಯ ಪೂರ್ವ ರೈತಾಪಿ ಕುಟುಂಬವೊಂದರ ಹೆಣ್ಣುಮಗಳು, ಒದಗಿಬಂದ ನಿರಂತರ ಸಂಕಷ್ಟಗಳ ನಡುವೆಯೇ ಪ್ರತಿಭಾಪೂರ್ಣ ಚೈತನ್ಯಪೂರ್ಣವಾಗಿಯೂ ಬೆಳೆದು, ವಿದ್ವತ್ ಲೋಕದ ಮಾನ್ಯತೆ ಪಡೆದ ಪರಿಯನ್ನು ಸಣ್ಣ ಕಥೆಗಳ ಹಾಗೆ ನಿರೂಪಿಸಿದೆ.

ಹೊನ್ನ ಕಣಜದ ಒಂದು ಭಾಗ

ತೊಟ್ಟಿಲ ಹೊತ್ಕೊಂಡು, ತೌರು ಮನೆ ಹುಡುಕ್ಯೊಂಡು...!

`ಹನುಮಯ್ಯನ (ದೊಡ್ಡ ತಮ್ಮ) ಮದ್ವೇಗೆ ಕರೆಯಾಕೆ ಬಂದ್ರು. ಕೆಲ್ಸ ಕಾರ್ಯ; ಈಗೆಲ್ಲಿ ಕಳ್ಸಾಕಾತದೆ; ಮದ್ವೆ ದಿವ್ಸ ಕಳ್ಸಿತ್ತೀವಿ ಅಂದುಬಿಟ್ಟ, ಮಾಮಯ್ಯ.

ಸರಿ, ಮದ್ವೆ ಹಿಂದಿನ್ ದಿವ್ಸ ಬೆಳಗಿನ ಜಾವ ಮೂರ್ಗಂಟ್ಗೇ ಎಬ್ರುಸಿದ್ರು. ಕಸಾ ಹಾಕಿ, ನೀರು ತಂದೆ. ಬೆಳ್ಕು ಹರೀತು. ಮಕ್ಳೀಗೆಲ್ಲಾ ಸ್ನಾನ ಮಾಡ್ಸಿ, ನಾನೂ ಸ್ನಾನ ಮಾಡ್ಕೊಂಡೆ. ಸೂರ್ಯ ಅಷ್ಟೊತ್ಗೆ ಆವಾಗ್ಲೇ ಅಷ್ಟುದ್ದ ಬಂದಿದ್ದ. ನಮ್ ನರಸಕ್ಕ ರೊಟ್ಟಿ ಹಾಕಿ ಕೊಟ್ಳು. ಮಕ್ಳಿಗೂ ತಿನ್ಸಿ, ನಾನೂ ತಿಂದೆ. `ತಂಪೊತ್ನಾಗೇ ಬ್ಯಾಗ ಬ್ಯಾಗ ಹೋಗಿ ಬಿಡ್ರೀ...' ಅಂದ್ರು. ಸರಿ, ಒಂದು ಬಟ್ಟೆಗಂಟು -ಬ್ಯಾಗೂಪಾಗೂ ಇರ್ಲಿಲ್ಲವಲ್ಲಾ; ಮಕ್ಳು ಬಟ್ಟೆ, ನನ್ ಸ್ಯಾಲೆ ಎಲ್ಲಾ ಒಂದು ಗಂಟ್ ಕಟ್ಟಿ- ತಲೆ ಮ್ಯಾಲೆ ಇಕ್ಯಂಡು, ಈ ಮಗಾನಾ ಎತ್ತಿಕೊಂಡು ಹೊರಟೊ. ಜತೆಗೆ ಯಂಕ್ಟ್ರೋಣ್ಣ ಇದ್ದ (ಚಿಕ್ಕ ತಮ್ಮ). ಶನಿಮಾತ್ಮನ ದೇವುಸ್ಥಾನದ ದಸೀಂದ ತಿಮ್ಮಸಂದ್ರ, ಕೆಂಜಿಗದಳ್ಳಿ, ಬರ್ಜಿ, ಚಿಕ್ಕನಳ್ಳಿ ಕಡೀಂದ ಕಾಲಾದೇಗೇ ಜಕ್ಕನಳ್ಳೀದೆ ಹೋಗಿಬಂದಿದ್ದು ಅಭ್ಯಾಸ. ಆ ನೆಪ್ಪಿನಾಗೇ ದಾರೀ ಇಡ್ಕಂಡು ವೊಲ್ಟೋ.

ಈ ಯಂಕ್ಟ್ರೋಣ್ಣ ಒಂದ್ ಮಗಾನ ರವಸ್ಟು ದೂರ ಎತ್ತಿಕಳ್ಳಾನು; ಇನ್ನೊಂದು ಮಗಾ ರವಸ್ಟು ದೂರ ಎತ್ತಿಕಳ್ಳಾನು. ಹಿಂಗೇ ಅಷ್ಟಷ್ಟು ದೂರ ನಡಿಸ್ಕಂಡು ಹೋದೋ. ಬಿಸ್ಲು ಏರ್ದಂಗೆಲ್ಲಾ ಮಕ್ಳು ನಡಿಯೋದು ಸುಸ್ತು ಮಾಡೋವು. ಅವುನ್ನ ಸುಧಾರಿಸ್ಗಂಡು ಹೋದೋ. ಚಿಕ್ಕನಳ್ಳಿ ದಿಣ್ಣೇಗೆ ಹೋದ ಮ್ಯಾಲೆ, ದಾರಿ ಗೊತ್ತಾಗ್ದೆ ಎಡಗಡೆ ನ್ಯಾರವಾಗಿ ಹೋಗೋದ್ಕೆ ಬದಲು, ಬಲುಕ್ಕೆ ತಿರುಕ್ಕಂಡು ನಡ್ದುಬಿಟ್ಟೋ. ಎಷ್ಟೋ ದೂರ ಹೋದ್ ಮ್ಯಾಲೆ, ಅತ್ಲಿಂದ ಒಬ್ಳು- ಜಕ್ಕನಹಳ್ಳಿವೊಳ್ಗೆ ನಾಗ್ರುನ್ನ ಮಾಡಾಕೆ ಅಂತ- ಬತ್ತಿದ್ಳು. ನಮ್ಮುನ್ನ ನೋಡಿ `ಯಾವೂರಮ್ಮಾ? ಎಲ್ಲಿಗೋತೀಯ?' ಅಂದ್ಳು.

`ಜಕ್ನಳ್ಳೀಗೆ' ಅಂದೆ. ಅಯ್ಯೋ ನಿನ್ನ ಮನೆಕಾಯ್ವಾಗಿ ಹೋಗಾ; ಇತ್ತ ಕಡೆ ಯಾಕೆ ಬಂದೆ? ಇದು ಕಲ್ಗಟ್ಟ. ಜಕ್ಕನಳ್ಳಿ ಅತ್ತ ಇರೋದು. ನಾನೂ ಅಲ್ಗೇ ಹೋಗೋದು ಬಾ... ಅಂತ ಕರ್ಕಂಡೋದ್ಳು. ಊರತ್ರ ಬತ್ತಿದ್ದಂಗೇ ಅವ್ಳ ನಾಗ್ರು ಮಾಡಕೆ ಊರಾಚೆ ಅತ್ತಕಡೆ ಹೋದ್ಳು. ನಾವು- ಅದೇ ದಾರ್ಯಾಗೆ ನಮ್ ಮಾಮಯ್ಯ ಹೊಲ ಉಳುತ್ತಿದ್ದ, ನಮ್ಮಕ್ಕಯ್ಯ ಹಿಟ್ಟು ತಂದಿದ್ಳು, ಅಲ್ಲೆಗೋದೋ. ನನಗೆ ಕಣ್ಣಾಗೆ ನೀರು ಬಂದು ಅಳು ಬಂದುಬಿಡ್ತು. ಅತ್ತುಬಿಟ್ಟೆ.

`ಅಯ್ಯೋ ಯಾಕಮ್ಮಾ ಇಂತಾ ಪಾಡು? ನಿನ್ನ ಗಂಡಾ ಆದ್ರೂ ಕರ್ಕಂಬಂದು ಬಿಟ್ಟೋಗಾಕೆ ಆತಿರಲಿಲ್ವಾ? ನನಗಾದ್ರೂ ಹೇಳಿದ್ರೆ ಗಾಡಿ ಕಟ್ಕಂಡು ಬಂದು ಕರಕಂಬತ್ತಿದ್ದೆ...' ಅಂದ. ಆಮ್ಯಾಲೆ, ಹೋಗೇ; ಮಕ್ಳೀಗೆ ಅಡ್ಗೆ ಮಾಡಿ ಉಣ್ಣಾಕೆ ಇಕ್ಕು... ಅಂತ ಹೇಳಿ, ಅಕ್ಕುನ್ನ ಮನೇಗೆ ಕಳ್ಸಿ ರವಷ್ಟು ಹೊತ್ಗೆ ಅವ್ನೆ ಆರು ಬಿಟ್ಕಂಡು ಬಂದುಬಿಟ್ಟ. ಮಧ್ಯಾನಕ್ಕೆ ಗಾಡಿ ಕಟ್ಗಂಡು ಕುಲಾನಳ್ಳಿಗೋದೋ. ಅಲ್ಲಿ ಅಣ್ಣಯ್ಯನ್ನೂ (ಅಣ್ಣ- ಮರಿಯಣ್ಣ) ಕರಕ್ಕಂಡು ಬೆರಸಂದ್ರಕ್ಕೆ ಹೋದೋ. ಮಾರೆನೆ ದಿವ್ಸ- ಶಾಸ್ತ್ರೂದ್ ದಿವ್ಸ- ಸೀಗೇ ಪಾಳ್ಯಕ್ಕೋದೋ. ಹನುಮಯ್ಯನ್ಗೆ ಮೊದುಲ್ನೇ ಯಂಡ್ರೂನ ಅಲ್ಲಿಂದಾನೇ ತಂದಿದ್ದು (ಆಯಮ್ಮ ಸ್ವಲ್ಪ ಕಾಲಕ್ಕೆ ಕಾಯಿಲೆಯಿಂದ ತೀರಿಹೋದರು).

ಮದ್ವೆ ಎಲ್ಲಾ ತೀರುಸ್ಗೊಂಡು ಮತ್ತೆ ಬೈರಸಂದ್ರದಿಂದ ಬರೋವಾಗ ಕತ್ತಿಗನೂರಿನತಾಕೆ ಬಂದೋ. ಜೋರ್ ಮಳೆ ಬಂದುಬಿಡ್ತು. ಅಲ್ಲೊಂದು ಕೊರಮ್ರು ಮನೆ ಹುಲ್ಲುವಾಪ್ಪರದಾಗೆ ನಿಂತ್ಗಂಡೋ. ಬಟ್ಟೆಲ್ಲಾ ನೆಂದೋಗಿದ್ದವಲ್ಲಾ; ಈ ಗಂಗಾ (ದೊಡ್ಡ ಮಗಳು) ಈ ಹರ್ಷಿತನಂಗೆ (ಮೊಮ್ಮಗಳು) ಹುಡ್ಗಿ- ಅವಳ ಜಾಕೀಟು ತಗ್ದು, ರವಷ್ಟು ಬಿಸ್ಲೀಗೆ ಒಣಗ್ಲಿ ಅಂತ, ಅಲ್ಲೇ ಒಂದು ಕಡೆ ನ್ಯಾತಾಕಿ ನಿಂತಿದ್ದೋ. ಆಮ್ಯಾಲೆ ಹೊಲ್ಡೋವಾಗ ನೋಡಿದ್ರೆ ಯಾರೋ ಅಲ್ಲಿ ಓಡಾಡ್ತಿದ್ದೋರು ಅದುನ್ನ ಎತ್ತಿಗಂಡ್ಬಿಟ್ಟಿದ್ರು!

ಆಮ್ಯಾಲೆ ಕುಲಾನಳ್ಳೀ ವಳ್ಗೆ ಎರ್ಡ್‌ ದಿವ್ಸ, ಜಕ್ನಳ್ಳೀ ವಳ್ಗೆ ಎಲ್ಡ್ ದಿವ್ಸ ಇದ್ದು, ಆಮ್ಯಾಲೆ ಊರಿಗೆ ಬಂದೆ. ಮಾಮಯ್ಯಾನೇ ಗಾಡಿ ಕಟ್ಕಂಡು ಬಂದು ಬಿಟ್ಟು ಹೋದ. ಆಮ್ಯಾಲೆ ನಾನು ಯಾವಾಗ ಜಕ್ನಳ್ಳೀಗೆ ಬರಬೇಕಾದ್ರೂ ಮಾಮಯ್ಯಾನೇ ಗಾಡಿವೊಳ್ಗೆ  ಕರ್ಕಂಬರಾನು;  ಕರ್ಕೊಂಡ್ಹೋಗೋನು'.

ಕೃಪೆ: ಪ್ರಜಾವಾಣಿ

Tag: Honna Kanajada Honnamma

ಕಾಮೆಂಟ್‌ಗಳಿಲ್ಲ: