ಶನಿವಾರ, ಆಗಸ್ಟ್ 31, 2013

ಚಂಬೈ ವೈದ್ಯನಾಥ ಭಾಗವತರ್

ಚಂಬೈ ವೈದ್ಯನಾಥ ಭಾಗವತರ್

ಕೇರಳದ ಪಾಲಘಾಟ್ ಜಿಲ್ಲೆಗೆ ಸೇರಿದ ಚಂಬೈ ಎಂಬ ಊರು ಸಂಗೀತ ಪ್ರಪಂಚದಲ್ಲಿ ಚಿರಪರಿಚಿತವಾಗಿದೆ.   ಚಂಬೈ ಸುಬ್ಬಯ್ಯರ್ ಅಂತಹ ಮಹಾನ್ ಸಂಗೀತ ವಂಶಜರ ಮನೆಯಲ್ಲಿ ಜನಿಸಿದವರು, ಕಳೆದ ಶತಮಾನದ ಸಂಗೀತ ಶ್ರೇಷ್ಠರಲ್ಲಿ  ಪ್ರಮುಖರೆಂದೆನಿಸಿರುವ ಮತ್ತು ಇಂದು ಪ್ರಸಿದ್ಧರಾಗಿರುವ  ಕೆ. ಜೆ. ಏಸುದಾಸ್, ಟಿ ವಿ ಗೋಪಾಲಕೃಷ್ಣನ್, ವಿ ವಿ ಸುಬ್ರಮಣ್ಯಮ್, ಪಿ ಲೀಲಾ  ಅಂತಹ ಮಹಾನ್ ಸಂಗೀತಗಾರರ ಗುರುವರೇಣ್ಯರಾದ ಚಂಬೈ ಭಾಗವತರ್.   ಗಾಯನ ಮತ್ತು ಪಿಟೀಲು ವಾದನದಲ್ಲಿ ಹೆಸರಾಗಿದ್ದ ಶ್ರೀ ಅನಂತ ಭಾಗವತರ್ ಮತ್ತು ಶ್ರೀಮತಿ ಪಾರ್ವತಿ ಅಮ್ಮಾಳ್ ಅವರ ಜ್ಯೇಷ್ಠ ಪುತ್ರರಾಗಿ ಚಂಬೈ ವೈದ್ಯನಾಥ ಭಾಗವತರು ಸೆಪ್ಟೆಂಬರ್ 1, 1896ರಂದು ಜನಿಸಿದರು.  ಚಂಬೈ ಎಂದೇ ಸಂಗೀತ ಲೋಕದಲ್ಲಿ ಪ್ರಸಿದ್ಧಿ ಪಡೆದು ತಮ್ಮ ಇಡೀ ಜೀವಮಾನವನ್ನೇ ಸಂಗೀತಕ್ಕಾಗಿ ಮುಡುಪಾಗಿ ಇಟ್ಟ ಇವರು   ಅಪಾರ ಕೀರ್ತಿಯನ್ನು ಗಳಿಸಿದ್ದಲ್ಲದೆ, ತಮ್ಮ ಜೀವನವನ್ನು ಆದರ್ಶವಾಗಿ ಮತ್ತು ಬಹು ಸರಳವಾಗಿ ನಡೆಸಿದವರು. ವಿಶೇಷವಾದ ದೈವಭಕ್ತಿ, ನಿತ್ಯ ಕರ್ಮಾನುಷ್ಠಾನ, ಗುರುಹಿರಿಯರಲ್ಲಿ ಗೌರವ, ಬಂಧುಗಳಲ್ಲಿ ಪ್ರೀತಿ ಇವು ಅವರಲ್ಲಿದ್ದ ಮುಖ್ಯ ಗುಣಗಳು.

ಬಾಲಕ ವ್ಯೆದ್ಯನಾಥನಿಗೆ  ತಂಬೂರಿ ಶ್ರುತಿ ಕೇಳುವುದೇ ತಡ ಕಿವಿ ನೆಟ್ಟಗಾಗುತ್ತಿತ್ತು, ದೃಷ್ಟಿ ಆ ಕಡೆಗೆ ಹರಿಯುತ್ತಿತ್ತು. ಆಟವಾಡುತ್ತಿದ್ದರೆ, ಅದನ್ನು ಬಿಟ್ಟು ತಂದೆಯ ಹತ್ತಿರ ಓಡಿಬಂದು ಕುಳಿತುಕೊಳ್ಳುತ್ತಿದ್ದ. ಹಾಡುವುದನ್ನು ಕೇಳುತ್ತಿದ್ದ. ಮುಗಿಯುವವರೆಗೂ ಏಳುತ್ತಿರಲಿಲ್ಲ.  ಅನಂತ ಭಾಗವತರ್ ದಂಪತಿಗಳಿಗೆ ಇನ್ನೊಂದು ಗಂಡು ಮಗುವಿನ ಜನನವಾಯಿತು. ಅದಕ್ಕೆ ಸುಬ್ರಹ್ಯಣ್ಯ ಎಂದು ಹೆಸರಿಟ್ಟರು.  ಅನಂತ ಭಾಗವತರು ಅನೇಕರಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಅವರಿಗೆ ಪಾಠ ನಡೆಯುತ್ತಿದ್ದಾಗ ಇಬ್ಬರೂ ಕುಳಿತು ಬಹಳ ಕುತೂಹಲದಿಂದ ಕೇಳುತ್ತಿದ್ದರು. ಪಾಠ ಮುಗಿದ ಮೇಲೆ, ಗುರುಶಿಷ್ಯರಂತೆಯೇ ಇಬ್ಬರೂ ನಟಿಸಿ ಆಟವಾಡುತ್ತಿದ್ದರು. ಈ ರೀತಿ ಸದಾ ಸಂಗೀತದಲ್ಲೇ ಮನಸ್ಸಿಟ್ಟು ಬಾಲ್ಯಾವಸ್ಥೆಯನ್ನು ದಾಟುತ್ತ ಬಂದರು.

ಮಕ್ಕಳಿಗಿದ್ದ  ಈ ಸಂಗೀತಪ್ರೇಮವನ್ನರಿತ ಅನಂತ ಭಾಗವತರು ಆ ವಿದ್ಯೆಯಲ್ಲೇ ಅವರಿಗೆ ಒಳ್ಳೆ ಭವಿಷ್ಯ ಎಂಬುದನ್ನು ಮನಗಂಡರು. ಆ ಕಾರಣದಿಂದ, ವ್ಯೆದ್ಯನಾಥನಿಗೆ ಮೂರನೇ ವಯಸ್ಸಿನಿಂದಲೇ ಸಂಗೀತ ಶಿಕ್ಷಣ ಕೊಡಲು ಪ್ರಾರಂಭಿಸಿದರು.  ಮಗುವಿಗೆ 5 ವರ್ಷ ತುಂಬಿದ ಕೂಡಲೇ ಅವನನ್ನು ಆ ಊರಿನಲ್ಲಿದ್ದ ಪಾಠಶಾಲೆಗೆ ಸೇರಿಸಿದರು. ಎರಡನೇ ಮಗ ಸುಬ್ರಹ್ಮಣ್ಯನಿಗೂ ಸಂಗೀತಶಿಕ್ಷಣ ಮನೆಯಲ್ಲೇ ಆರಂಭವಾಯಿತು. ಸ್ವಲ್ಪಕಾಲದ ನಂತರ ಅವನೂ ಪಾಠಶಾಲೆಗೆ ಸೇರಿಸಲ್ಪಟ್ಟನು. ಹೀಗೆ ಸಹೋದರರಿಬ್ಬರೂ ಜೊತೆಯಲ್ಲಿ ಎರಡು ಬಗೆ ವಿದ್ಯೆ ಕಲಿಯತೊಡಗಿದರು. ಮನೆಯಲ್ಲಿ ಸಂಗೀತಶಿಕ್ಷಣ ಇಬ್ಬರಿಗೂ ಏಕಕಾಲದಲ್ಲಿ ನಡೆಯುತ್ತಿತ್ತು. ಹೊರಗಡೆ ಎಲ್ಲಾದರೂ ಹಾಡಬೇಕಾದಲ್ಲಿ ಇಬ್ಬರೂ ಸೇರಿಯೇ ಹಾಡುವುದು ಮೊದಲಾಯಿತು. ಎರಡು ಶಾರೀರಗಳು ಬೆರೆತಾಗ ಒಂದೇ ಶಾರೀರದಂತೆ ಇದ್ದವು. ಇಬ್ಬರದೂ ಕಂಚಿನಂತ ಕಂಠಗಳು. ಇವೆರಡೂ ಬೆರೆತಾಗ ಮಾಧುರ್ಯ ಇಮ್ಮಡಿಸುತ್ತಿತ್ತು.

ಚಂಬೈ ಸಹೋದರರ ಸಂಗೀತ ಅವ್ಯಾಹತವಾಗಿ ಮುಂದೆ ಸಾಗಿತು. ಅವರ ಕೀರ್ತಿಯೂ ಹೆಚ್ಚುತ್ತಾ ಬಂತು. ಊರಿನಲ್ಲಿ ನಡೆಯುವ ಸಂಭ್ರಮ ಸಮಾರಂಭಗಳಲ್ಲೆಲ್ಲ ಅವರ ಹಾಡಿಕೆಯನ್ನು ಏರ್ಪಡಿಸಬೇಕೆಂಬ ಆಕಾಂಕ್ಷೆ ಜನರಲ್ಲಿ ಮೂಡತೊಡಗಿತು. ಆದರೆ ಅನಂತ ಭಾಗವತರಿಗೆ ಅಷ್ಟು ಬೇಗ ಕಛೇರಿ ಮಾಡುವುದಕ್ಕೆ ಮಕ್ಕಳನ್ನು ಕಳುಹಿಸುವುದು ಇಷ್ಟವಾಗಿರಲಿಲ್ಲ. ಆದರೆ ಜನಗಳೇ ಒತ್ತಾಯ ಪಡಿಸುತ್ತಿರುವಾಗ ಒಲ್ಲೆಎಂದರೆ ಬೇಸರಪಟ್ಟುಕೊಳ್ಳುತ್ತಾರೆ. ಈ ರೀತಿ ಇಕ್ಕಟ್ಟಿಗೆ ಸಿಕ್ಕಿಕೊಂಡರು.  ಆಗ ಅವರು ಒಂದು ತೀರ್ಮಾನಕ್ಕೆ ಬಂದರು. ಮಕ್ಕಳನ್ನು ಶುಭದಿನದಂದು ದೇವರ ಸನ್ನಿಧಿಯಲ್ಲಿ ಹಾಡಿಸಿ, ನಂತರ ಬೇರೆ ಸಂದರ್ಭಗಲ್ಲಿ ಹಾಡಿಸುವುದೆಂದು. ಅದೇ ಪ್ರಕಾರ, ಗೊತ್ತಾದ ದಿನ ದೇವರ ಸನ್ನಿಧಿಯಲ್ಲಿ ಕಛೇರಿ ನಡೆಯುವ ಏರ್ಪಾಡಾಯಿತು. ಊರಿನ ಜನ ಬಹಳ ಉತ್ಸಾಹದಿಂದ ಬಂದು ನೆರೆದರು. ಎಳೆಯ ವಿದ್ವಾಂಸರಿಬ್ಬರು ಪೀಠದ ಮೇಲೆ ಕುಳಿತಿರುವುದನ್ನು ನೋಡುವುದಕ್ಕೇ  ಒಂದು ಆನಂದ. ಇನ್ನು ಅವರು ಹಾಡಿದರೆಂದರೆ ಆ ಆನಂದ ಉಕ್ಕುತ್ತಿತ್ತು. ಆ ಸಂದರ್ಭದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸುಶ್ರಾವ್ಯವಾಗಿ ಹಾಡಿದರಂತೆ. ಸಭಿಕರಿಗೆ ಅವರ ಸಂಗೀತದಿಂದ ತುಂಬಾ ಸಂತೋಷ ಆಯಿತು. ಕಛೇರಿ ಮುಗಿದ ಕೂಡಲೇ ಮಕ್ಕಳಿಬ್ಬರೂ ಸಭೆಯಲ್ಲಿದ್ದ ಹಿರಿಯರಿಗೆಲ್ಲ ನಮಸ್ಕರಿಸಿ, ಮನಸಾರ ಹರಸಲ್ಪಟ್ಟರಂತೆ. ಇದೇ ಅವರ ಪ್ರಥಮ ಕಛೇರಿ.  ಇದಾದ ಕೂಡಲೇ ಅನೇಕ ಕಡೆಗಳಿಂದ ಆಹ್ವಾನ ಬರತೊಡಗಿದವು. ಕಛೇರಿಗಳು ಒಂದಾದಮೇಲೊಂದು ಜರುಗಿದವು. ಚಂಬೈ ಸಹೋದರರ ಹೆಸರು ಮನೆ ಮಾತಾಯಿತು.

ಚಂಬೈ ಸಹೋದರರು ಕಛೇರಿಗಳನ್ನು ಮಾಡುತ್ತಿದ್ದುದು  ಹೆಚ್ಚಿದಂತೆ ಅವರು ಇತರರ ಕಛೇರಿಗಳನ್ನು  ಕೇಳುವುದೂ ಹೆಚ್ಚಿತು. ಉತ್ತಮ ಸಂಗೀತಗಾರನಾಗಬೇಕಾದರೆ ಇವೆರಡು ಚಟುವಟಿಕೆಗಳೂ ಚುರುಕಾಗಿ ಇರಬೇಕು. ಅನ್ಯ ವಿದ್ವಾಂಸರ ಸಂಗೀತದಿಂದ ಉತ್ತಮವಾದ ಅಂಶಗಳನ್ನು ಗ್ರಹಿಸಿಕೊಂಡು ತಮ್ಮ ಸಾಧನೆಯಿಂದ ಅವುಗಳನ್ನು ತಮ್ಮದನ್ನಾಗಿ ಮಾಡಿಕೊಳ್ಳಬೇಕು. ಚಂಬೈ ಸಹೋದರರು ಈ ಕೆಲಸವನ್ನು ತಪ್ಪದೇ ಮಾಡುತ್ತಿದ್ದರು. ಆದುದರಿಂದಲೇ ಅವರ ಸಂಗೀತ ಹೆಚ್ಚು ಹೆಚ್ಚು ರಸಿಕರಿಗೆ ರುಚಿಸುತ್ತ ಬಂದಿತು. 

ಈ ಮಧ್ಯೆ ಚಂಬೈ ಸಹೋದರರಿಗೆ ಒಂದು ಅಪೂರ್ವ ಸನ್ನಿವೇಶದಲ್ಲಿ ಹಾಡುವ ಅವಕಾಶ ಒದಗಿಬಂತು. ವೈಕ್ಕಂ ಎಂಬುದೊಂದು ಪುಣ್ಯಸ್ಥಳ. ಆ ಊರಿನ ಈಶ್ವರ ದೇವಸ್ಥಾನದಲ್ಲಿ ಪ್ರತಿವರ್ಷವೂ ಕಾರ್ತೀಕಮಾಸದಲ್ಲಿ ದೊಡ್ಡ ಉತ್ಸವ ನಡೆಯುತ್ತದೆ. ಅದನ್ನು ಸಂದರ್ಶಿಸಲು ಸಾವಿರಾರು ಯಾತ್ರಾರ್ಥಿಗಳು ಬಂದು ಸೇರುತ್ತಾರೆ. 1907ನೇ ಇಸವಿಯಲ್ಲಿ ಉತ್ಸವದ ಸಮಯದಲ್ಲಿ ಚಂಬೈ ಸಹೋದರರ ಹಾಡಿಕೆ ಗೊತ್ತುಮಾಡಲ್ಪಟ್ಟಿತು. ಬಾಲಕರು ಬಹಳ ಭಯಭಕ್ತಿಯಿಂದ ಪೀಠವನ್ನೇರಿ, ತಂದೆಯವರ ಪಕ್ಕವಾದ್ಯಗಳೊಡನೆ ಹಾಡತೊಡಗಿದರು. ಭಕ್ತಿರಸದಿಂದ ತುಂಬಿತುಳುಕುತ್ತಿದ್ದ ಆ ಕಛೇರಿ ಬಹು ಯಶಸ್ವಿಯಾಗಿ ನಡೆಯಿತು. ಅವರ ಕೀರ್ತಿ ಮತ್ತೂ ಹೆಚ್ಚಿತು.

ವೈಕ್ಕಂ ಕ್ಷೇತ್ರದಷ್ಟೆ ಪವಿತ್ರವಾದದ್ದು ಗುರುವಾಯೂರು. ಬಾಲರೂಪಿಯಾದ ಕೃಷ್ಣ ಪರಮಾತ್ಮ ಭಕ್ತರಿಗೆ ಕೇಳಿದ ವರವನ್ನು ಕೊಡತಕ್ಕವನೆಂದು ಪ್ರಸಿದ್ಧಿ. ಅಲ್ಲೂ ಕಾರ್ತೀಕಮಾಸದಲ್ಲಿ ವಿಶೇಷ ಉತ್ಸವಗಳು ನಡೆಯುತ್ತವೆ. ಅಲ್ಲಿಂದಲೂ ಆಹ್ವಾನ ಬಂದದ್ದರಿಂದ ಸಹೋದರರು ತಂದೆಯೊಡನೆ ಪ್ರಯಾಣ ಮಾಡಿದರು. ಅನಂತ ಭಾಗವತರಿಗೆ ಗುರುವಾಯೂರು ದೇವರಲ್ಲಿ ಅನನ್ಯಭಕ್ತಿ, ಮಕ್ಕಳಿಗೂ ಅಷ್ಟೆ. ಎಳೆತನದಲ್ಲಿ ಅಂಕುರಿಸಿದ ಭಕ್ತಿ ಬಾಲಕ ವ್ಯೆದ್ಯನಾಥನಿಗೆ ಜೀವಿತದ ಕೊನೆಯ ಘಳಿಗೆಯವರೆಗೂ ಏಕಪ್ರಕಾರವಾಗಿ ಉಳಿಯಿತು. ವ್ಯೆದ್ಯನಾಥನಿಗೆ ಅಂದಿನಿಂದ ಗುರುವಾಯೂರಪ್ಪನಲ್ಲಿ ವಿಶೇಷವಾದ ಭಕ್ತಿ ಉಂಟಾದುದರಲ್ಲಿ ಆಶ್ಚರ್ಯವೇನಿಲ್ಲ. ಪ್ರತಿವರ್ಷವೂ ಉತ್ಸವಕಾಲದಲ್ಲಿ ಹಾಡುವ ಅವಕಾಶ ಅವರಿಗೆ ಕಾದಿರಿಸಲ್ಪಟ್ಟಿತು. 1941ರಲ್ಲಿ ಆ ಊರಿನಲ್ಲೇ ಒಂದು ಮನೆಯನ್ನು ಕೊಂಡುಕೊಂಡು ಉತ್ಸವ ಕಾಲ ಪೂರ್ತಿ ಅಲ್ಲಿ ಸಂಸಾರ ಸಮೇತ ತಂಗಿರುವುದು ಅವರ ಕರ್ತವ್ಯವಾಯಿತು.  ಎಂಬತ್ತನೆಯ ವಯಸ್ಸಿನಲ್ಲಿ ಅವರು ಹಾಡುತ್ತಲೇ ಗುರುವಾಯೂರು ದೇವರ ಸನ್ನಿಧಿಯಲ್ಲಿ ಕೊನೆಯ ಉಸಿರನ್ನು ಎಳೆದರು.

ಬೆಳೆಯುತ್ತಿರುವ ಈ ಹುಡುಗರಿಗೆ ನಟೇಶ ಶಾಸ್ತ್ರೀ ಎಂಬ ಹರಿಕಥಾ ವಿದ್ವಾಂಸರು.  ದಕ್ಷಿಣಾಮೂರ್ತಿ ಪಿಳ್ಳೈ ಎಂಬ ಮಹಾನ್ ಮೃದಂಗ ವಿದ್ವಾಂಸರು, ಅಂಬಲವಾಣ ದೇಶಿಕರ್ ಎಂಬ ಮಹಾನ್ ಗುರುವರ್ಯರು, ಪಿಟೀಲು ವಿದ್ವಾಂಸ ಗೋವಿಂದಸ್ವಾಮಿ ಪಿಳ್ಳೆ   ಮುಂತಾದ ಮಹನೀಯರ ಪೋಷಣೆ ಪ್ರೋತ್ಸಾಹ ಸಹಕಾರಗಳು ದೊರೆತವು.  ಸಂಗೀತ ಕೇಸರಿ ಕಲ್ಲಿಡೈಕುರಿಬ್ಚಿ ವ್ಯೆದ್ಯನಾಥ ಭಾಗವತರ್, ರಾಮನಾಡ್ ಶ್ರೀನಿವಾಸಯ್ಯಂಗಾರ್, ಗಾಯಕ ಶಿಖಾಮಣಿ ಮುತ್ತಯ್ಯ ಭಾಗವತರ್, ಮಧುರೈ ಪುಷ್ಟವನಂ, ವೇಣುಗಾನ ಶರಭಶಾಸ್ತ್ರಿಗಳು, ತಿರುಕ್ಕೋಡಿ ಕಾವಲ್ ಕೃಷ್ಣಯ್ಯರ್, ಗೋವಿಂದಸ್ವಾಮಿ ಪಿಳ್ಳೆ ಇಂತಹ ಶ್ರೇಷ್ಠ ಸಂಗೀತ ವಿದ್ವಾಂಸರ ಸಂಗೀತವನ್ನು ಅವರು ಕೇಳಿದರು.

ವ್ಯೆದ್ಯನಾಥನ 15ನೇ ವಯಸ್ಸಿನಲ್ಲಿ ನಡೆದ ಒಂದು ಸಂಗತಿ ಸ್ಮರಣಾರ್ಹವಾಗಿದೆ. ಅದೇನೆಂದರೆ, ಆ ವರ್ಷ ಪಾಲಘಾಟ್ ಜಿಲ್ಲೆಗೆ ಸೇರಿದ ಶೇಖರೀಪುರದಲ್ಲಿ ನಡೆದ ಕಛೇರಿ. ಮೂಮೂಲಿನಂತೆ ತುಂಬಿದ ಸಭೆ. ದೊಡ್ಡ ದೊಡ್ಡ ಸಂಗೀತ ವಿದ್ವಾಂಸರೂ ಅಲ್ಲಿ ಹಾಜರಿದ್ದರು. ಅಂಥ ಸಭೆಯ ಮುಂದೆ ಹಾಡುವುದೆಂದರೆ ಸಹೋದರರಿಗೆ ವಿಶೇಷ ಉತ್ಸಾಹ. ಪ್ರಾರಂಭದಿಂದಲೇ ಜನ ಸೇರಿದರು. ವ್ಯೆದ್ಯನಾಥನ ಶಾರೀರ ಅಷ್ಟು ಮೋಹಕ. ಸಾಮಾನ್ಯವಾಗಿ ಸಂಗೀತಗಾರನಿಗೆ ಅರ್ಧ ಅಥವಾ ಮುಕ್ಕಾಲು ಗಂಟೆ ಆದಮೇಲೆ ಉತ್ಸಾಹ ಏರುತ್ತದೆ. ಅಲ್ಲಿಂದಾಚೆ ಕಛೇರಿ ಕಳೆಗಟ್ಟುತ್ತದೆ. ಅಂದರೆ, ಕೇಳುವವರ ಮನಸ್ಸನ್ನು ಕಲಕುತ್ತದೆ. ವ್ಯೆದ್ಯನಾಥನ ಹಾಡಿಕೆಯಾದರೋ, ಪ್ರಾರಂಭದಿಂದಲೇ ಆ ಮಟ್ಟದಲ್ಲಿರುತ್ತಿತ್ತು. ಕಾರಣ, ಆತನ ಶಾರೀರ ಸಂಪತ್ತು. ಅಂಥ ಶಾರೀರ ದೈವಾನುಗ್ರಹದಿಂದ ಪಡೆಯಬೇಕೇ ವಿನಾ ಮನುಷ್ಯ ಪ್ರಯತ್ನದಿಂದಲ್ಲ. ಅಂತೂ ಆ ದಿನದ ಕಛೇರಿ ಬಹು ಚೆನ್ನಾಗಿ ನಡೆಯಿತು. ಸಭೆಯಲ್ಲಿದ್ದವರೆಲ್ಲ ಆನಂದಪರವಶರಾಗಿದ್ದರು. ಅಲ್ಲಿ ಹಾಜರಿದ್ದ ಘನವಿದ್ವಾಂಸರಲ್ಲಿ ಒಬ್ಬರಾದ ಅನಂತ ರಾಮಭಾಗವತರು ವಯೋವೃದ್ಧರೂ, ಜ್ಞಾನವೃದ್ಧರೂ ಆಗಿದ್ದರು. ಕಛೇರಿ ಮುಗಿದ ಮೇಲೆ ಎದ್ದುನಿಂತು, ಸಭೆಯನ್ನುದ್ದೇಶಿಸಿ ಈ ಮಾತುಗಳನ್ನಾಡಿದರು: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತು ಚಂಬೈ ಸಹೋದರರಿಗೆ ಅನ್ವರ್ಥವಾಗಿದೆ. ಆಟವಾಡುವ ವಯಸ್ಸಿನಲ್ಲಿ ಇಷ್ಟು ಸೊಗಸಾಗಿ ಪಾಂಡಿತ್ಯ ಪೂರ್ಣವಾಗಿ ಹಾಡುವುದೆಂದರೆ ಅದು ದೈವಾನುಗ್ರಹವೇ ಹೊರತು ಬೇರೆ ಅಲ್ಲ. ಇಂಥ ಶಾರೀರವನ್ನು ನಾನು ಹಿಂದೆಂದೂ ಕೇಳಿಯೇ ಇಲ್ಲ. ಈ ಸಹೋದರರು ಬರುವ ದಿನಗಳಲ್ಲಿ ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಅಗ್ರಗಣ್ಯರೆನಿಸುತ್ತಾರೆಂಬುದರಲ್ಲಿ ನನಗೆ ಪೂರ್ಣ ನಂಬಿಕೆಯಿದೆ.

ಅದೇ ಸಮಯದಲ್ಲಿ ವ್ಯೆದ್ಯನಾಥರಿಗೆ ವಿವಾಹ ವಾಯಿತು. ಹುಡುಗಿ ಅದೇ ಊರಿನ ವಾಸುದೇವ ಶಾಸ್ತ್ರಿಗಳ ಮಗಳು. ಹೆಸರು ಮೀನಾಕ್ಷಿ. ವಿವಾಹದ ನಂತರ ವ್ಯೆದ್ಯನಾಥರಿಗೆ ಜವಾಬ್ದಾರಿ ಹೆಚ್ಚಿತೆನ್ನಬಹುದು. ತಂದೆಯವರು ಮನೆಯಲ್ಲೂ ಅನೇಕಮಂದಿ ಶಿಷ್ಯರಿಗೆ ಪಾಠ ಹೇಳಿಕೊಡುತ್ತಿದ್ದರೆಂದು ಹಿಂದೆಯೇ ತಿಳಿಸಿದೆ. ಈಗ ಅವರಿಗೆ ತಮ್ಮ ಭಾರ ಕಡಿಮೆ ಮಾಡಿಕೊಳ್ಳಬೇಕೆಂಬ ಆಲೋಚನೆ ಉಂಟಾಯಿತು. ಅದೇ ಪ್ರಕಾರ ತಮ್ಮ ಶಿಷ್ಯರಿಗೆ ಪಾಠ ಹೇಳಿಕೊಡುವ ಕೆಲಸವನ್ನು ವ್ಯೆದ್ಯನಾಥರಿಗೆ ವಹಿಸಿ ಕೊಟ್ಟರು. ಅಂದಿನಿಂದ ಅಂದರೆ, ತಮ್ಮ 16ನೆ ವಯಸ್ಸಿನಿಂದ ಪ್ರಾರಂಭಿಸಿದ ವಿದ್ಯಾದಾನ ಕಾರ್ಯವನ್ನು 80ನೇ ವಯಸ್ಸಿನವರೆಗೂ ನಿರ್ವಿಘ್ನವಾಗಿ ನಡೆಸಿದರು. ನೂರಾರು ಜನ ಅವರಿಂದ ಸಂಗೀತ ಕಲಿತು ಇಂದು ಪ್ರಸಿದ್ಧರಾಗಿದ್ದಾರೆ.

ಒಮ್ಮೆ ವ್ಯೆದ್ಯನಾಥರಿಗೆ ಗಂಟಲು ಬೇನೆ ಪ್ರಾರಂಭವಾಯಿತು. ಈ ವ್ಯಾಧಿಯನ್ನು ಗುಣಪಡಿಸಲು ಎಲ್ಲ ಬಗೆಯ ಪ್ರಯತ್ನಗಳೂ ನಡೆದವು. ಆದರೂ ಸ್ವಲ್ಪವೂ ಗುಣವಾಗಲಿಲ್ಲ. ಅವರಿಗೆ ಹಾಡಲು ಸಾಧ್ಯವಾಗುತ್ತಿರಲಿಲ್ಲ. ವ್ಯೆದ್ಯನಾಥರಿಗೆ ಕತ್ತಲೆ ಕವಿದಂತಾಯಿತು. ಬಗೆ ಹರಿಯದ ಸಂಕಟ ಅನುಭವಿಸಿಯೇ ತೀರಬೇಕಾಯಿತು.  ಹೀಗಿರುವಲ್ಲಿ ವ್ಯೆದ್ಯನಾಥರಿಗೆ ಒಂದು ಹೊಸ ಮಾರ್ಗ ಹೊಳೆಯಿತು. ಅದೇನೆಂದರೆ, ಪಿಟೀಲು ವಾದ್ಯವನ್ನು ಅಭ್ಯಾಸಮಾಡುವುದು. ತಂದೆ ಅನಂತಭಾಗವತರು ಪಿಟೀಲು ವಾದನದಲ್ಲಿ ನಿಪುಣರು. ವ್ಯೆದ್ಯನಾಥರು ತಾವೂ ಆ ವಾದ್ಯವನ್ನು ಸಾಧನೆ ಮಾಡಬೇಕೆಂದು ಈಗ ನಿಶ್ಚಯಿಸಿದರು. ಇಷ್ಟು ದಿನ ಆಗಾಗ ಹೊತ್ತು ಕಳೆಯುವ ಸಲುವಾಗಿ ಆ ವಾದ್ಯವನ್ನು ವ್ಯೆದ್ಯನಾಥರು ನುಡಿಸುತ್ತಿದ್ದುದೂ ಉಂಟು. ಈಗ ನಿರಂತರ ಸಾಧನೆಯಲ್ಲಿ ತೊಡಗಿದರು. ನುರಿತ ಗಾಯಕನಾದ್ದರಿಂದ ಸ್ವಲ್ಪಕಾಲದಲ್ಲೇ ಆ ವಾದ್ಯದ ಮೇಲೆ ಹತೋಟಿ ಬಂದಿತು. ಆ ವೇಳೆಗೆ ಸಹೋದರಿ ನಾರಾಯಣಿಯಮ್ಮನಿಗೆ ಮದುವೆಯಾಗಿತ್ತು. ಆಕೆಯ ಗಂಡನ ಹೆಸರೂ ಅನಂತ ಭಾಗವತರೆಂದು. ಅವರು ವೇಣುವಾದಕರಾಗಿದ್ದರು. ಕಛೇರಿಗಳೂ ನಡೆಯುತ್ತಿದ್ದವು. ವ್ಯೆದ್ಯನಾಥನಿಗೆ ಇದೊಂದು ಸುಸಮಯ ಸಿಕ್ಕಿತು. ಭಾವನೊಡನೆ ಪಕ್ಕವಾದ್ಯ ನುಡಿಸುವ ಹವ್ಯಾಸ ಉಂಟಾಯಿತು. ಒಳ್ಳೆಯ ಹೆಸರೂ ತಕ್ಕಮಟ್ಟಿಗೆ ಸಂಪಾದನೆಯೂ ಆದವು. ಹೀಗೆ ಒಂದು ವರ್ಷ ಕಳೆಯಿತು.  ಇದ್ದಕ್ಕಿದ್ದಂತೆಯೇ ಕಟ್ಟಿದ್ದ ಗಂಟಲು ಸ್ವಲ್ಪ ಸ್ವಲ್ಪವಾಗಿ ಬಿಡುತ್ತಾ ಬಂತು. ಕೊಂಚ ಕಾಲದಲ್ಲಿಯೇ ಮೊದಲಿನ ಸ್ಥಿತಿಗೆ ಬಂತು. ಆಗ ಉಂಟಾದ ಸಂತೋಷ ಹೇಳತೀರದು. 

ಮುಂದೆ ಕರೂರಿನ ಸಂಗೀತೋತ್ಸವದಲ್ಲಿ ಅವರಿಗೆ ಗಾಯಕ ಶಿಖಾಮಣಿ ಮುತ್ತಯ್ಯ ಭಾಗವತರ ಸಂಪರ್ಕ ದೊರಕಿತು.  ಇದೇ ರೀತಿ ಇವರ ಕಚೇರಿಗಳು ಕರ್ತನಾಡು, ಎರ್ನಾಕುಲಂ, ತಿರುವಾಡುದುರೈ, ಪಾಲಘಾಟ್ ಮುಂತಾದೆಡೆ ಈ ಯುವ ಸಹೋದರರ ಕಚೇರಿಗಳು ನಡೆದು ಎಲ್ಲೆಡೆ ಯಶಸ್ವಿಯಾದವು.  ಸಂಗೀತಪ್ರಪಂಚದಲ್ಲಿ ಚಂಬೈ ಸಹೋದರರ ಸ್ಥಾನಮಾನ ವೃದ್ಧಿಯಾಯಿತು. ಮದರಾಸ್ ನಗರದಲ್ಲಿ ಸಹೋದರರ ಮೊಟ್ಟಮೊದಲನೇ ಕಛೇರಿ ನಡೆದಾಗ ಚಂಬೈ ಸಹೋದರರ ಹೆಸರು ಈಗಾಗಲೇ ಮದರಾಸ್ ರಸಿಕರ ಕಿವಿಯನ್ನು ಮುಟ್ಟಿತ್ತಾದ್ದರಿಂದ ಸಭಾಭವನದೊಳಗೆ ಒಂದು ಜಾಗವೂ ಖಾಲಿಯಿರಲಿಲ್ಲ. ಅಲ್ಲದೆ ಒಳಗೆ ಎಷ್ಟು ಜನ ಸೇರಿದ್ದರೋ ಸಭೆ ಹೊರಗೆ ಅಷ್ಟೇ ಜನ ಸೇರಿಬಿಟ್ಟಿದ್ದರು. ಒಳಗೆ ಸ್ಥಳವೂ ಇಲ್ಲ, ಟಿಕೆಟ್ ಮಾರಾಟವೂ ಇಲ್ಲಎಂದು ನಿರ್ವಾಹಕರ ವಾದ. ಕಡೆಗೆ ಜನರ ಒತ್ತಾಯಕ್ಕೆ ಮಣಿದ  ವ್ಯವಸ್ಥಾಪಕರು ಭವನದ  ಮುಖದ್ವಾರವನ್ನು ತೆಗೆದು ಬಿಡಬೇಕೆಂದು ತೀರ್ಮಾನಿಸಿದರು. ಬಹಳ ಹುರುಪಿನಿಂದ ಹಾಡಿಕೆ ಸಾಗಿತು. ರಸಿಕರ ಆನಂದಕ್ಕೆ ಮಿತಿಯೇ ಇಲ್ಲವಾಯಿತು. ಅಂತೂ ಸಂಗೀತಕೇಂದ್ರ ಎನಿಸಿದ ಮಹಾನಗರದಲ್ಲಿ ಸಹೋದರರ ಖ್ಯಾತಿ ಬೇರು ಬಿಟ್ಟಿತು.

ಒಂದು ಸಾರಿ ಸಹೋದರರಿಗೆ ಒಬ್ಬ ಅಪರಿಚಿತ ವಿದ್ವಾಂಸರ ಸಂಗೀತ ಕೇಳುವ ಅವಕಾಶ ದೊರಕಿತು. ಅವರು ತಮ್ಮ ಕಛೆರಿಯಲ್ಲಿ ಅನೇಕ ಹೊಸ ಕೀರ್ತನೆಗಳನ್ನು ಹಾಡಿದರು. ಅವುಗಳಲ್ಲಿ ಒಂದು ಕೀರ್ತನೆ ಇವರ ಮನಸ್ಸನ್ನು ಬಹಳವಾಗಿ ಆಕರ್ಷಿಸಿತು. ಅದನ್ನು ಏನಾದರೂ ಮಾಡಿ ಕಲಿಯಬೇಕೆಂಬ ಚಪಲ ಬಾಧಿಸತೊಡಗಿತು. ಕೇಳುತ್ತಿದ್ದಂತೆಯೇ ಅರ್ಧಭಾಗವನ್ನು ಮನನ ಮಾಡಿಕೊಂಡರು. ಆದರೆ ಮಿಕ್ಕ ಭಾಗ ಕೈತಪ್ಪಿಹೋಯಿತು. ಕಛೇರಿ ಮುಗಿದ ಮೇಲೆ ಆ ವಿದ್ವಾಂಸರನ್ನು ಭೇಟಿಮಾಡಲು ಸಾಧ್ಯವೇ ಆಗಲಿಲ್ಲ. ನಿರಾಸೆಯಿಂದ ಹಿಂತಿರುಗಿದರು. ಕೆಲವು ದಿನಗಳ ನಂತರ, ಮತ್ತೊಂದು ಕಡೆ ಅದೇ ವಿದ್ವಾಂಸರ ಕಚೇರಿ ಏರ್ಪಡಿಸಲ್ಪಟ್ಟಿತು. ಕುತೂಹಲದಿಂದ ಸಹೋದರರು ಅಲ್ಲಿಗೆ ಹೋಗಿ, ಅವರನ್ನು ಕಂಡು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ಯಾವ ಕೀರ್ತನೆ?’ ಎಂದು ಅವರು ಕೇಳಿದಾಗ ತಮಗೆ ಜ್ಞಾಪಕವಿದ್ದಷ್ಟು ಭಾಗವನ್ನು ಮೆಲುದನಿಯಲ್ಲಿ ಹಾಡಿ ತೋರಿಸಿದರು. ಕಂಠ ಧ್ವನಿ ಕಿವಿಗೆ ಬಿದ್ದೊಡನೆ, ಆ ವಿದ್ವಾಂಸರ ಕಿವಿ ನೆಟ್ಟಗಾಯಿತು. ಹಾಡುವುದು ಮುಗಿದೊಡನೆ, ‘ನಿಮ್ಮ ಶಾರೀರ ಬಹು ಇಂಪಾಗಿದೆ. ಹಾಡುವ ರೀತಿ ಅಚ್ಚುಕಟ್ಟಾಗಿದೆ. ಆದರೆ, ಈಗ ನನಗೆ ಆ ಕೀರ್ತನೆಯ ಕೊನೆಯ ಭಾಗ ಜ್ಞಾಪಕ ಬರುತ್ತಿಲ್ಲ. ಕ್ಷಮಿಸಿ. ಮತ್ತೊಂದು ಸಾರಿ ನೋಡೋಣಎಂದು ಹೇಳಿ ಅಲ್ಲಿಂದ ಹೊರಟೇ ಹೋದರು. ವೈದ್ಯನಾಥರಿಗೆ ಅವರ ಉದಾಸೀನತೆಯನ್ನು ಕಂಡು ಬಹಳ ವ್ಯಥೆಯಾಯಿತು. ಆದರೂ, ಅಲ್ಲಿಯೇ ಇದ್ದು ಅವರ ಸಂಗೀತವನ್ನು ಕೇಳುವುದಕ್ಕಾಗಿ ಇಬ್ಬರೂ ಕುಳಿತರು. ಅನಿರೀಕ್ಷಿತವಾಗಿ ಇಷ್ಟಪಟ್ಟ ಕೀರ್ತನೆಯನ್ನೇ ವಿದ್ವಾಂಸರು ಹಾಡಲು ಪ್ರಾರಂಭಿಸಿದರು. ಸುವರ್ಣಾವಕಾಶ ಸಿಕ್ಕಿತೆಂದು, ಇಬ್ಬರೂ ಏಕಾಗ್ರತೆಯಿಂದ ಕೊನೆಯ ಭಾಗವನ್ನು ಮನನ ಮಾಡಿಕೊಂಡರು. ಈಗ ಒಂದು ಆಸ್ತಿ ಕೈವಶವಾದಷ್ಟು ಸಂತೋಷ ಆಯಿತು. ಅದರೊಡನೆ ಆ ವಿದ್ವಾಂಸರ ಸಂಕುಚಿತ ಭಾವನೆ ಮನಸ್ಸನ್ನು ಚುಚ್ಚುತ್ತಿತ್ತು.

ಆಗಲೇ ಒಂದು ಹೊಸ ಆಲೋಚನೆ ಮನಸ್ಸಿನಲ್ಲಿ ಮೂಡಿತು. ಅದೇನೆಂದರೆ, ಮುಚ್ಚುಮರೆಯಿಲ್ಲದೆ ತನಗೆ ಕೈವಶವಾದಷ್ಟು ವಿದ್ಯೆಯನ್ನು ಇನ್ನೊಬ್ಬರಿಗೆ ಹೇಳಿಕೊಡಬೇಕೆಂದು. ಅತಿ ಶೀಘ್ರದಲ್ಲಿಯೇ ಈ ಕನಸು ನನಸಾಯಿತು. ಚಂಬೈಯಲ್ಲಿ ಅನಂತ ಭಾಗವತರ ನೇತೃತ್ವದಲ್ಲಿ ಸಂಗೀತ ಪಾಠಶಾಲೆ ಸ್ಥಾಪನೆಯಾಗಿಯೇ ಬಿಟ್ಟಿತು. ಚಂಬೈ ಸಹೋದರರು ವಿದ್ಯಾಗುರುಗಳಾದರು. ಊರಿನ ಉತ್ಸಾಹಿ ಮಕ್ಕಳು, ತರುಣ ತರುಣಿಯರು ಸಂಗೀತ ಕಲಿಯಲು ಬಂದು ಸೇರಿದರು.

1932ರಲ್ಲಿ ಚಂಬೈ ವೈದ್ಯನಾಥ ಭಾಗವತರ ಸಂಗೀತ ಗ್ರಾಮಾಫೋನ್ ಕಂಪೆನಿಯಿಂದ ಧ್ವನಿಮುದ್ರಿತ ವಾಯಿತು. ಅನೇಕ ರಿಕಾರ್ಡ್‌ಗಳು ತಯಾರಿಸಲ್ಪಟ್ಟವು. ಅವುಗಳ ಮಾರಾಟ ಬಿರುಸಾಗಿಯೇ ಸಾಗಿತು. ಅಂತೆಯೇ ಗಾಯಕರ ಹೆಸರೂ ದೇಶದ್ಯಾಂತ ಹರಡಿತು.

1937ರಲ್ಲಿ ಅನಂತ ಭಾಗವತರು ತೀರಿ ಕೊಂಡರು. ಅದೇ ವರ್ಷ ವೈದ್ಯನಾಥ ಭಾಗವತರಿಗೆ ಮೈಸೂರು ಮಹಾರಾಜರಿಂದ ತಮ್ಮ ಆಸ್ಥಾನಕ್ಕೆ ಬಂದು ಕಚೇರಿ ಮಾಡಬೇಕೆಂದು ಆಹ್ವಾನ ಬಂತು. ಆಗ ಶ್ರೀಕೃಷ್ಣರಾಜೇಂದ್ರ ಒಡೆಯರ್‌ರವರು ಮಹಾರಾಜರಾಗಿದ್ದರು. ಅವರು ಸಂಗೀತ ಪ್ರೇಮಿಗಳು. ಕರ್ನಾಟಕ ಮತ್ತು ಉತ್ತರಾದಿ ಸಂಗೀತ ಕ್ಷೇತ್ರಗಳಲ್ಲಿ ಹೆಸರಾಂತ ವಿದ್ವಾಂಸರೆಲ್ಲ ಅವರ ಆಶ್ರಯಕ್ಕೆ ಪಾತ್ರರಾಗಿದ್ದರು. ಚಂಬೈರವರ ಸಂಗೀತವನ್ನು ಕೇಳಿ ಮಹಾರಾಜರು ತುಂಬಾ ಸಂತೋಷಪಟ್ಟರು. ಆಸ್ಥಾನ ವಿದ್ವಾಂಸರಾಗಿರಬೇಕೆಂದು ಕೇಳಿದರು. ಹಿಂದಿನ ಮೈಸೂರು ರಾಜ್ಯದಲ್ಲಿ ರಾಜರಿದ್ದ ಕಾಲದಲ್ಲಿ ದಸರಾ ಹಬ್ಬವನ್ನು ಬಹು ವೈಭವದಿಂದ ಆಚರಿಸುತ್ತಿದ್ದರು. ಮೈಸೂರು ನಗರ ಅತಿಶಯವಾದ ಸೌಂದರ್ಯದಿಂದ ಬೆಳಗುತ್ತಿತ್ತು. ಹತ್ತು ದಿನಗಳೂ ಅರಮನೆಯಲ್ಲಿ ಸಾಯಂಕಾಲ ದರ್ಬಾರ್ ನಡೆಯುತ್ತಿತ್ತು. ಆಸ್ಥಾನ ವಿದ್ವಾಂಸರೆನಿಸಿಕೊಂಡವರು ಆ ದರ್ಬಾರ್ ನಡೆಯುವಾಗ ಕಚೇರಿ ಮಾಡಬೇಕಾಗಿತ್ತು. ಈ ನಿಬಂಧನೆಗೆ ಒಳಪಡುವುದು ಚಂಬೈ ಅವರಿಗೆ ಕಷ್ಟವೆನಿಸಿತು. ಏಕೆಂದರೆ, ಅದೇ ಕಾಲದಲ್ಲಿ ಅವರು ತಮ್ಮೂರಿನಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸುವ ಪದ್ಧತಿ ಬಹಳ ವರ್ಷಗಳಿಂದ ನಡೆದು ಬಂದಿತ್ತು. ದುಡ್ಡಿಗೋಸ್ಕರ ಅದನ್ನೆಲ್ಲ ಬಿಡಲು ಮನಸ್ಸು ಬರಲಿಲ್ಲ. ಆದ್ದರಿಂದ ಆ ಪದವಿಯು ತಮಗೆ ಬೇಡವೆಂದು ಬಿಟ್ಟುಬಿಟ್ಟರು.

1940ರಲ್ಲಿ ಚಂಬೈಯವರ ಕಚೇರಿ ಎರ್ನಾಕುಲಂನಲ್ಲಿ ನಡೆಯಿತು. ಆ ಸಂದರ್ಭದಲ್ಲಿ  ಅಧ್ಯಕ್ಷತೆ ವಹಿಸಿದ್ದ ಮುತ್ತಯ್ಯ ಭಾಗವತರು ಚಂಬೈಯವರಿಗೆ ಗಾಯನ ಗಂಧರ್ವಎಂಬ ಬಿರುದನ್ನು ಮಹಾಜನಗಳ ಪರವಾಗಿ ಕೊಟ್ಟು ಗೌರವಿಸಿದರು. 1945ರಲ್ಲಿ ಭಾಗವತರು ಚಂಬೈಯನ್ನು ಬಿಟ್ಟು ಮದರಾಸ್ ಪಟ್ಟಣದಲ್ಲಿ ನೆಲೆಸಿದರು. ಊರಿನಲ್ಲಿದ್ದ ಸಂಗೀತ ಪಾಠಶಾಲೆಯನ್ನು ತಮ್ಮ ಸುಬ್ರಹ್ಮಣ್ಯ ಭಾಗವತರಿಗೆ ವಹಿಸಿ, ತಾವು ತಮ್ಮ ಹೊಸ ನಿವಾಸದಲ್ಲಿ ಮತ್ತೊಂದು ಪಾಠಶಾಲೆಯನ್ನು ಪ್ರಾರಂಭಿಸಿದರು. 1951ರಲ್ಲಿ ನಡೆದ ಮದರಾಸಿನ ಸಂಗೀತ ವಿದ್ವತ್ಸಭೆಯ ಅಧಿವೇಶನದಲ್ಲಿ ಚಂಬೈಯವರಿಗೆ ಸಂಗೀತ ಕಲಾನಿಧಿಎಂಬ ಗೌರವ ಪ್ರಶಸ್ತಿ ದೊರಕಿತು. ಇದು ಸಂಗೀತ ಕ್ಷೇತ್ರದಲ್ಲಿನ ಅತಿ ದೊಡ್ಡ ಪ್ರಶಸ್ತಿ. 1948ರಲ್ಲಿ ಚಂಬೈಯವರಿಗೆ ಸಂಗೀತ ಸಾಮ್ರಾಟ್ಎಂಬ ಬಿರುದು ಕೊಡಲ್ಪಟ್ಟಿತು.

1940ರಲ್ಲಿ ವೈದ್ಯನಾಥ ಭಾಗವತರು ವಾಣಿಎಂಬ ಕನ್ನಡ ಚಲನಚಿತ್ರದಲ್ಲಿ ಭಾಗವಹಿಸಿದರು. ಅದರಲ್ಲಿ ಒಂದು ಕಛೇರಿಯನ್ನೆ ಮಾಡಿದ್ದಾರೆ. ಮೈಸೂರು ಟಿ. ಚೌಡಯ್ಯನವರ ಪಿಟೀಲು, ಪಾಲಘಾಟ್ ಮಣಿಅಯ್ಯರ್ ಅವರ ಮೃದಂಗ-ಇವೇ ಪಕ್ಕವಾದ್ಯಗಳಾಗಿರುವ ಆ ಕಛೇರಿ ಬಹಳ ಹೃದಯಂಗಮವಾಗಿದೆ. ಇದಕ್ಕಾಗಿ ಭಾಗವತರಿಗೆ ಕೊಟ್ಟ ಸಂಭಾವನೆ 5000 ರೂಪಾಯಿಗಳು. ಆ ಹಣವನ್ನೆಲ್ಲ ದೇವರ ಸೇವಾಕಾರ್ಯಕ್ಕೆ ಅರ್ಪಿಸಿದರು.

ನಿಜಕ್ಕೂ ವೈದ್ಯನಾಥರ ಜೀವನ ಸಂಗೀತಗಾರರಿಗೆ ಮೇಲ್ಪಂಕ್ತಿಯಾಗಿದೆ. ಏಕೆಂದರೆ, ಅವರಲ್ಲಿ ಶ್ರೇಷ್ಠಮಟ್ಟದ ಸಂಗೀತದ ಜೊತೆಗೆ ಶ್ರೇಷ್ಠ ಗುಣಗಳೂ ಸೇರಿದ್ದವು. ಅವರ ಹಾಗೆ, ದೊಡ್ಡ ಸಂಗೀತ, ದೊಡ್ಡ ನಡವಳಿಕೆ ಎರಡರಿಂದಲೂ ಜನಪ್ರಿಯರಾದ ವ್ಯಕ್ತಿಗಳು ಬಹಳ ವಿರಳ. 

ನಾನು ಪುಟ್ಟವನಿದ್ದಾಗ ಈ ಮಹಾನುಭಾವರ ಹಾಡುಗಾರಿಕೆಯನ್ನು ಕೇಳಿದ ಅನುಭವ ಇಂದೂ ನೆನಪಾಗುತ್ತದೆ.  ಈ ಮಹಾನ್ ಚೇತನಕ್ಕೆ ನಮ್ಮ ಸಾಷ್ಟಾಂಗ ನಮನ. 


ಆಧಾರ: ಆರ್. ಕೆ. ರಾಮನಾಥನ್ ಅವರ ಚಂಬೈ ವೈದ್ಯನಾಥ ಭಾಗವತರ್  ಕುರಿತ ಪುಸ್ತಕಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯಮುಖ್ಯ ಸಂಪಾದಕರು: ಎಲ್. ಎಸ್. ಶೇಷಗಿರಿರಾವ್

Tag: Chembai Vaidyanatha Bhagavatar

ಕಾಮೆಂಟ್‌ಗಳಿಲ್ಲ: