ಗುರುವಾರ, ಆಗಸ್ಟ್ 29, 2013

ನಾ. ಸೋಮೇಶ್ವರ


ನಾ. ಸೋಮೇಶ್ವರ

ನಾ. ಸೋಮೇಶ್ವರ ಎಂದರೆ ಇಂದು ಕನ್ನಡಿಗರು ಥಟ್ ಎಂದು ಗುರುತಿಸಿಬಿಡುತ್ತಾರೆ’.  ಡಾ. ನಾ. ಸೋಮೇಶ್ವರರು ತಮ್ಮ ದೂರದರ್ಶನದ ಬುದ್ಧಿಮತ್ತೆ ಕಾರ್ಯಕ್ರಮವಾದ  ಥಟ್ ಅಂತ ಹೇಳಿಕಾರ್ಯಕ್ರಮದಿಂದ ಕನ್ನಡಿಗರ ಹೃದಯವನ್ನೂ ವಿಶ್ವಮಾನ್ಯತೆಯನ್ನೂ ಗಳಿಸಿರುವ ಆತ್ಮೀಯ ಗಣ್ಯರು.

ಸೋಮೇಶ್ವರರು ಮೇ 14, 1955ರಂದು ಬೆಂಗಳೂರಿನಲ್ಲಿ ಜನಿಸಿದರು.  ತಂದೆ ನಾರಪ್ಪನವರು ಮತ್ತು ತಾಯಿ ಅಂಜನಾ ಅವರು.  ಬೆಂಗಳೂರಿನ ಗಾಂಧೀನಗರದ ಸರ್ಕಾರಿ ಶಾಲೆಯಲ್ಲಿ ಕಲಿತ ನಾರಪ್ಪ ಸೋಮೇಶ್ವರರು ಮುಂದೆ ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ  ಎಂ.ಬಿ.ಬಿ.ಎಸ್. ವೈದ್ಯಕೀಯ ಪದವಿ ಗಳಿಸಿದರು.  ಹೀಗೆ ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಔಷದ ತಯಾರಿಸುವ ಪ್ರಸಿದ್ಧ ಸಂಸ್ಥೆಯೊಂದರ ವೈದ್ಯಕೀಯ ಸಲಹೆಗಾರರು. 

ಜನರ ದಮನಿಯಲ್ಲಿನ ರಕ್ತಸಂಚಲನೆಯನ್ನು ಗುರುತಿಸುವ ವೈದ್ಯಕೀಯ ವೃತ್ತಿಯವರಾದ ಡಾ. ನಾರಪ್ಪ ಸೋಮೇಶ್ವರರ ದಮನಿ ದಮನಿಯಲ್ಲಂತೂ ಕನ್ನಡ ಕುಣಿ ಕುಣಿದಾಡುತ್ತದೆ.   ಸೋಮೇಶ್ವರರು ಮೂಲತಃ ವಿಜ್ಞಾನದ ಮನೋಭಾವದವರಾದರೂ ಸಾಹಿತ್ಯ ನನ್ನ ನೆರಳುಎನ್ನುತ್ತಾರೆ.    ಶುದ್ಧ ಕನ್ನಡವನ್ನು ಕೇಳುವುದೇ ಅಪರೂಪವಾಗಿರುತ್ತಿರುವ ಇಂದಿನ ದಿನಗಳಲ್ಲಿ ಸೋಮೇಶ್ವರರು ಚಂದನವಾಹಿನಿಯಲ್ಲಿ  ನಡೆಸಿಕೊಡುವ ಶುದ್ಧ ಕನ್ನಡದ ಥಟ್ ಅಂತ ಹೇಳಿಕಾರ್ಯಕ್ರಮ ಹೃದಯಕ್ಕೆ ಅತ್ಯಂತ ಆಪ್ತವಾಗುವಂತದ್ದಾಗಿದೆ.  ಈ ಮಾತು ಕನ್ನಡಿಗರ ಬಾಯ್ಮಾತಿನ ಹೊಗಳಿಕೆ ಮಾತ್ರವಾಗಿಲ್ಲ ಎಂಬುದಕ್ಕೆ, “ಯಾವುದೇ ತಡೆಯಿಲ್ಲದೆ ನಿರಂತರವಾಗಿ ಅತ್ಯಂತ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ ಕಾರ್ಯಕ್ರಮವಿದೆಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಅಂತರರಾಷ್ಟ್ರೀಯ ಸಂಸ್ಥೆಯು ಈ ಕಾರ್ಯಕ್ರಮವನ್ನು ಸತತವಾಗಿ  ಗೌರವಿಸುತ್ತಾ  ಬಂದಿರುವುದೇ  ಸಾಕ್ಷಿಯಾಗಿದೆ”.  2002 ವರ್ಷದ  ಜನವರಿ  4ರಿಂದ  ಪ್ರಾರಂಭಗೊಂಡ  ಈ ಪ್ರಬುದ್ಧ  ಕಾರ್ಯಕ್ರಮ  2015ರ ವರ್ಷದ ಜೂನ್ ತಿಂಗಳ ಕೊನೆಯಲ್ಲಿ 2757 ಕಂತುಗಳನ್ನು ಪೂರೈಸಿದೆ ಎಂಬ  ದಾಖಲೆಯನ್ನು  ಲಿಮ್ಕಾ  ದಾಖಲೆ  ಪುಸ್ತಕ ತನ್ನ  ಕಳೆದ ಬಾರಿಯ  ಪ್ರಶಸ್ತಿ ಕುರಿತಾದ  ಹೇಳಿಕೆಯಲ್ಲಿ  ಪ್ರಕಟಿಸಿದೆ.   ವಾರಕ್ಕೆ ಐದು ದಿನ ತಪ್ಪದಂತೆ ಇಂದೂ ತನ್ನ ಎಡಬಿಡದ ಜನಪ್ರಿಯ ಪ್ರದರ್ಶನವನ್ನು ಮುಂದುವರಿಸುತ್ತಾ ಸಾಗಿರುವ  ಈ ಕಾರ್ಯಕ್ರಮ  ಇಂದಿನ ವರೆಗಿನ  ಲೆಕ್ಕದಲ್ಲಿ  2987 ಕಾರ್ಯಕ್ರಮಗಳನ್ನು  ಪೂರೈಸಿದ್ದು  3000ದ  ಕಂತಿಗೆ  ತುಂಬಾ ಹತ್ತಿರದಲ್ಲಿದೆ.    ಈ ಕಾರ್ಯಕ್ರಮಕ್ಕಾಗಿ ಡಾ. ಸೋಮೇಶ್ವರರು ದಿನವೊಂದರ ಸುಮಾರು ಹನ್ನೆರಡು ಗಂಟೆಗಳ ಕಾಲವನ್ನು ಮೀಸಲಿಡಬೇಕಾಗುತ್ತದೆ. ಲಿಮ್ಕಾ  ದಾಖಲೆ  ಲಿಕಿಸಿರುವಂತೆ  ಜೂನ್  30, 2015ರ  ವರೆವಿಗೆ  ನಾ.  ಸೋಮೇಶ್ವರರು  ಥಟ್  ಅಂತ  ಹೇಳಿ  ಕಾರ್ಯಕ್ರಮಗಳಲ್ಲಿ  ಕೇಳಿದ್ದ   ಪ್ರಶ್ನೆಗಳ  ಸಂಖ್ಯೆ  37,084. ಕಳೆದ  ಸುಮಾರು ಒಂದು ವರ್ಷದ  ಅವಧಿಯಲ್ಲಿ  ಈ ಸಂಖ್ಯೆ  ಮತ್ತಷ್ಟು  ಸಹಸ್ರಗಳನ್ನು  ಪೋಣಿಸಿಕೊಂಡಿದೆ  ಎಂಬುದು  ನಮಗೆ  ಅರ್ಥವಾಗುವ  ವಿಚಾರ.  ಇಷ್ಟೊಂದು    ಮಾಹಿತಿಗಳನ್ನು ಸಂಗ್ರಹಿಸಲಿಕ್ಕಾಗಿಯೇ ಅಪಾರ ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೆನೆದಾಗ ಡಾ. ಸೋಮೇಶ್ವರರ ಸಹನೆ, ಸಾಮರ್ಥ್ಯ, ಶ್ರದ್ಧೆ, ತಾಳ್ಮೆ, ಪಾಂಡಿತ್ಯಗಳ ಅಗಾಧತೆಯ ಪರಿಚಯ ನಮಗೆ ದೊರಕುತ್ತದೆ.  2002ರ ವರ್ಷದಲ್ಲಿ ಪ್ರಾರಂಭವಾದ ಥಟ್ ಅಂತ ಹೇಳಿ ಕಾರ್ಯಕ್ರಮಇಂದು ಕನ್ನಡಿಗರ ಬದುಕಿನಲ್ಲಿ ಹಾಸುಹೊಕ್ಕಾಗಿ ಬೆಸೆದುಕೊಂಡಿದೆ.  ಈ ಕಾರ್ಯಕ್ರಮಕ್ಕೆ  ಮತ್ತಷ್ಟು  ವಿಶೇಷಗಳನ್ನು  ಸೇರಿಸುವ  ಕುರುಹುಗಳನ್ನು  ಸೋಮೇಶ್ವರ  ನಾರಪ್ಪನವರು  ನೀಡಿದ್ದು  ಸದ್ಯದಲ್ಲೇ ಅವರ ಶ್ರವಣಬೆಳಗೊಳದ ಕುರಿತಾದ  ‘ಥಟ್  ಅಂತ ಹೇಳಿ  ಕಾರ್ಯಕ್ರಮ’  ಭಿತ್ತರಗೊಳ್ಳಲಿದೆ. 

ಡಾ. ನಾ. ಸೋಮೇಶ್ವರರು ಅತ್ಯುತ್ತಮ ಬರಹಗಾರರೂ ಹೌದು.  ಅವರ ಏಳು ಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಭಂಟರುಕೃತಿಗೆ ಡಾ. ಪಿ. ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಸಂದಿದೆ.  ಅವರು ವೈದ್ಯಕೀಯ ಮಾಸ ಪತ್ರಿಕೆ ಜೀವನದಿಯ ಸಂಪಾದಕರಾಗಿಯೂ ಪ್ರಸಿದ್ಧರು.  ವಿವಿಧ ವಿಷಯಗಳ ಕುರಿತು 30ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಡಾ. ನಾ. ಸೋಮೇಶ್ವರರು ವೈದ್ಯಕೀಯ ವಿಚಾರಗಳಿಗೆ ಸಂಬಂಧಪಟ್ಟ ಹಲವಾರು ಪತ್ರಿಕೆ ಮತ್ತು ಗ್ರಂಥ ಸಂಪುಟಗಳಲ್ಲಿ  ನೂರಾರು ವಿದ್ವತ್ಪೂರ್ಣ ಲೇಖನಗಳನ್ನು ಪ್ರಸ್ತುತಪಡಿಸಿದ್ದಾರೆ. ಹಲವಾರು  ಪ್ರಮುಖ  ಗ್ರಂಥಗಳ  ಸಂಪಾದಕರೂ  ಆಗಿರುವ  ನಾ.  ಸೋಮೇಶ್ವರರ ಕಾಯಕದಲ್ಲಿ   ಇತ್ತೀಚೆಗೆ ನವಕರ್ನಾಟಕ ಪ್ರಕಾಶನವು  ಹೊರತಂದಿರುವ  ‘ವಿಶ್ವಮಾನ್ಯರು’ ಕೃತಿಶ್ರೇಣಿ  ಪ್ರಮುಖವಾದುದು.       ವೆಬ್ ಅಂತರಜಾಲದಲ್ಲಿರುವ ಅವರ ಯಕ್ಷಪ್ರಶ್ನೆಕನ್ನಡಿಗರಿಗೆ ದೊರೆತಿರುವ ಮನೋಜ್ಞ  ತಾಣವಾಗಿದೆ.  ದೂರದರ್ಶನದಲ್ಲಿ ಮಾತ್ರವಲ್ಲದೆ ಅವರು ಆಕಾಶವಾಣಿಯಲ್ಲೂ ತಮ್ಮ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.  ದೇಶ  ವಿದೇಶಗಳಲ್ಲೆಲ್ಲಾ    ಅವರ  ಕಾರ್ಯಕ್ರಮದ  ಜನಪ್ರಿಯತೆ  ವಿಸ್ತರಿಸಿದ್ದು  ಎಲ್ಲೆಡೆ  ಅವರಿಗೆ  ಕ್ವಿಜ್  ಕಾರ್ಯಕ್ರಮ  ನಡೆಸಿಕೊಡಲು  ಆತ್ಮೀಯ  ಆಹ್ವಾನಗಳು  ಹರಿದು ಬರುತ್ತಲಿವೆ.  ಅಂತೆಯೇ  ಅವರು ತಮ್ಮ  ನಿರಂತರ  ದಿನಚರಿಯ  ಬಿಡುವಿಲ್ಲದ  ಸಮಯದಲ್ಲೂ  ಜನರ  ಪ್ರೀತಿಗೆ  ಓಗೊಟ್ಟು  ತಮ್ಮ  ಕ್ವಿಜ್  ಸವಿ  ಔತಣವನ್ನು  ಎಲ್ಲೆಡೆ  ಕೊಡುತ್ತಾ ಬಂದಿದ್ದಾರೆ.

ಡಾ. ನಾ. ಸೋಮೇಶ್ವರರ, ಕಥೆಗಳ ಮೂಲಕ ಅನಂತ ಚೇತನದೆಡೆಗೆ ಓದುಗರನ್ನು ಕೊಂಡೊಯ್ಯುವ ಅನಂತದೆಡೆಗೆ ..!’, ‘ಓ ನನ್ನ ಚೇತನಕೃತಿಗಳೂ   ಪ್ರಖ್ಯಾತಗೊಂಡಿದ್ದು ಅತ್ಯಂತ ಮೋಹಕವಾಗಿ ಕಥೆ ಹೇಳುವ ಅವರ ಪ್ರಬುದ್ಧತೆಯನ್ನು ಮತ್ತಷ್ಟು ಮನನ ಮಾಡಿಕೊಡುತ್ತಿವೆ. 

ಡಾ. ಸೋಮೇಶ್ವರರಿಗೆ ಮೇಲ್ಕಂಡ ಕೆಲವು ಗೌರವಗಳೇ ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ. ಬಿ. ಸಿ. ರಾಯ್ ವೈದ್ಯರ ದಿನದ ಪ್ರಶಸ್ತಿ, ಆರ್ಯಭಟ ಅಂತರರಾಷ್ಟೀಯ ಪ್ರಶಸ್ತಿ, ಕುವೆಂಪು  ವಿಶ್ವವಿದ್ಯಾಲಯದಿಂದ  ಗೌರವ  ಡಾಕ್ಟರೇಟ್  ಮುಂತಾದ ಅನೇಕ ಗೌರವಗಳು ಸಂದಿವೆ.  ಅವರ ನಿರಂತರವಾದ ಮನೋಜ್ಞ ಸೇವೆಗಳಿಗೆ ಮುಂದೆ ಇನ್ನೂ ಹೆಚ್ಚಿನ ಗೌರವಗಳು ಸಲ್ಲುತ್ತವೆ ಎಂಬುದು ಅವರ ಸಕಲ ಅಭಿಮಾನಿಗಳ ನಿರೀಕ್ಷೆ.


ಡಾ. ಸೋಮೇಶ್ವರರಿಗೆ ಜನ್ಮದಿನದ ಹಾರ್ದಿಕ ಶುಭ ಹಾರೈಕೆಗಳು.

Tag: Na Someshwar, N. Someshwar

ಕಾಮೆಂಟ್‌ಗಳಿಲ್ಲ: