ಗುರುವಾರ, ಆಗಸ್ಟ್ 29, 2013

ನಂದನ್ ನಿಲೇಕಣಿ

ನಂದನ್ ನಿಲೇಕಣಿ

ಭಾರತದ ಉದ್ಯಮಿಗಳಲ್ಲಿ ಪ್ರಮುಖ ಹೆಸರಾಗಿರುವ ನಂದನ್ ನಿಲೇಕಣಿ ಅವರ ಜನ್ಮದಿನ ದಿನಾಂಕ ಜೂನ್ 2, 1955.  ಪ್ರಾರಂಭದಿಂದಲೂ ನಾರಾಯಣ ಮೂರ್ತಿಗಳ ಒಡನಾಡಿಯಾದ ನಂದನ್,  ಹಿಂದೆ ನಾರಾಯಣ ಮೂರ್ತಿಗಳು ನಿವೃತ್ತಿ ತಲುಪಿದಾಗ ಇನ್ಫ್ಪೋಸಿಸ್ ಸಂಸ್ಥೆಯ ಸಾರಥ್ಯವಹಿಸಿದರು.  ಪ್ರಧಾನಿ ಮನಮೋಹನ್ ಸಿಂಗ್ ಅವರ ಆಹ್ವಾನದ ಮೇರೆಗೆ ಆಧಾರ್ ಗುರುತಿನ ಚೀಟಿ ವ್ಯವಸ್ಥೆಯ ಮುಖ್ಯಸ್ಥರಾಗಲು ಒಪ್ಪಿ ತಮ್ಮ ಪ್ರತಿಷ್ಠಿತ ಇನ್ಫೋಸಿಸ್ ಹುದ್ದೆಯಿಂದ ಹೊರಬಂದರು.  ಹೀಗಾಗಿ ಅವರೀಗ ಕೇಂದ್ರಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನಕ್ಕೆ ಸಮನಾದ Unique Identification Authority of India (UIDAI)ದ ಮುಖ್ಯಸ್ಥರು.  ಜೊತೆಗೆ ಭಾರತ ಸರ್ಕಾರದ ತಂತ್ರಜ್ಞಾನ ಸಲಹಾ ಸಮಿತಿಯ ಮುಖ್ಯಸ್ಥರು ಕೂಡಾ ಹೌದು.  ಅವರು ಬರೆದಿರುವ ಬೃಹತ್ ಪುಸ್ತಕ ‘Imagining India’ ಇಪ್ಪತ್ತನೆಯ ಶತಮಾನದ ಭಾರತೀಯ ಸ್ಥಿತಿಗತಿಗಳ ಅವಲೋಕನವಾಗಿಯೂ, ಇಪ್ಪತ್ತೊಂದನೆಯ ಶತಮಾನದ ಭಾರತೀಯ ಕನಸುಗಾರಿಕೆಗಳಿಗೊಂದು ದಿಕ್ಸೂಚಿಯಂತೆಯೂ ಗಮನ ಸೆಳೆದಿದೆ ಎಂಬುದು  ಮಹತ್ವದ ಅಂಶ.

ನಂದನ್ ಜನಿಸಿದ್ದು ಉತ್ತರ ಕನ್ನಡದ ಶಿರಸಿಯಲ್ಲಿ.  ಧಾರವಾಡದಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ನಡೆಸಿದ ನಂದನ್ ಮುಂದೆ ಮುಂಬೈ ಐ ಐ ಟಿ  ಪದವೀಧರರಾದರು.  ಮುಂಬೈ ಮೂಲದ 'ಪಟ್ನಿ ಕಂಪ್ಯೂಟರ್ಸ್' ಸಂಸ್ಥೆಯಲ್ಲಿ ನಾರಾಯಣ ಮೂರ್ತಿಗಳಿಂದ ಆಯ್ಕೆಗೊಂಡ ನಂದನ್ ಮುಂದೆ ನಾರಾಯಣ ಮೂರ್ತಿಗಳೊಂದಿಗೆ ಇನ್ಫೋಸಿಸ್ ಸಂಸ್ಥೆಗೂ ಜೊತೆಗೂಡಿದರು.

ಪ್ರತಿಷ್ಠಿತ National Association of Software and Service Companies (NASSCOM) ಮತ್ತು  The Indus Entrepreneurs (TiE)ನ ಬೆಂಗಳೂರು ಚಾಪ್ಟರ್ ಸ್ಥಾಪನೆಯಲ್ಲಿ ನಂದನ್ ಅವರ ಪ್ರಧಾನ ಪಾತ್ರವಿದೆ.  ಥಾಮಸ್ ಫ್ರೀಡ್ ಮನ್ ಅವರ ಪ್ರಸಿದ್ಧ ಕೃತಿ The World is Flat ಪುಸ್ತಕದಲ್ಲಿ ಗಣನೀಯವಾಗಿ ಉಲ್ಲೇಖಗೊಂಡಿರುವ ನಂದನ್ ನಿಲೇಕಣಿ,  ವಿಶ್ವದಾದ್ಯಂತ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಭಾರತದ ಪ್ರತಿಷ್ಠೆಯನ್ನು ಬೆಳಗಿದ್ದಾರೆ.

World Economic Forumನ ಪ್ರಶಸ್ತಿಗೆ ಆಯ್ಕೆಗೊಂಡ ಪ್ರಮುಖ ಇಪ್ಪತ್ತು ಕಿರಿಯ ಗೌರವಾನ್ವಿತರಲ್ಲಿ ಒಬ್ಬರೆನಿಸಿರುವ ನಂದನ್ ನಿಲೇಕಣಿ ಫೋರ್ಬ್ಸ್ ನಿರ್ಣಯಿಸಿದ ಉತ್ಕೃಷ್ಟ ಏಷ್ಯಾ ಖಂಡದ ಉದ್ಯಮಿಗೆ ಸಲ್ಲುವ ಪ್ರಶಸ್ತಿ ಪಡೆಯುವುದರ ಜೊತೆಗೆ  ಫೈನಾನ್ಸಿಯಲ್ ಟೈಮ್ಸ್ ಮತ್ತು ಪ್ರೈಸ್ ವಾಟರ್ ಹೌಸ್ ಕೂಪರ್ಸ್  ನಡೆಸಿದ ಸಮೀಕ್ಷೆಯಲ್ಲಿನ ವಿಶ್ವದ ಗೌರವಾನ್ವಿತರ ಸಾಲಿನಲ್ಲಿ ಅಲಂಕೃತರಾಗಿದ್ದವರು.  ಅವರಿಗೆ ವಿಶ್ವದೆಲ್ಲೆಡೆ ಸಂದಿರುವ ಹಲವು ಗೌರವಗಳ ಜೊತೆಗೆ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯ ಗರಿಮೆ ಕೂಡಾ ಜೊತೆಗೂಡಿದೆ.

ಭಾರತದ ಚರಿತ್ರೆಯ ಬಗೆಗೆ, ಕಳೆದುರುಳಿರುವ  ಸ್ವಾತಂತ್ರ್ಯಾನಂತರದ ದಶಕಗಳ ಬಗೆಗೆ, ಭಾರತದಲ್ಲಿ ಮೂಡಿದ ಆರ್ಥಿಕ ಪ್ರಗತಿಗಳ ಕಾರಣೀಭೂತ ನೆಲೆಗಳು,  ಹಿಂದಿನ ಸಮಾಜವಾದೀ ಚಿಂತನೆಗಳು, ಭಾರತೀಯ ಜನಸಮುದಾಯ, ಮಾಹಿತಿ ತಂತ್ರಜ್ಞಾನ, ಜಾತಿಪದ್ಧತಿ, ಕಾರ್ಮಿಕ ಸುಧಾರಣೆ, ಮೂಲಭೂತ ಸೌಕರ್ಯಗಳು, ಶಿಕ್ಷಣ ವ್ಯವಸ್ಥೆ, ಇಂಗ್ಲಿಷ್ ಭಾಷೆ, ಭಾರತಕ್ಕಿರುವ ವಿದ್ಯಾವಂತ ಜನಸಂಖ್ಯಾ ಗತಿಯಲ್ಲಿರುವ ಹೆಚ್ಚಳದಿಂದ ವಿಶ್ವ ಮಾರುಕಟ್ಟೆಯಲ್ಲಿ ಇರುವ ಅನುಕೂಲಗಳು,  ಹಲವು ವಿಧದಲ್ಲಿ ಇನ್ನೂ ಮನ್ನಡೆಯುತ್ತಿರುವ  ಹಿನ್ನೆಡೆಗಳು, ಹೀಗೆ ಭಾರತದ ಸಮಗ್ರ ಅಧ್ಯಯನದ ಬಗೆಗೆ ಗಮನ ಹರಿಸಿರುವ ಅವರ ‘Imagining India’ ಒಂದು ಉತ್ತಮ ಕೊಡುಗೆಯಾಗಿದೆ.

ಯಶಸ್ವಿ ಉದ್ಯಮಿಯ ಹುದ್ಧೆಯಿಂದ ವಿರಮಿಸಿ, ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ನಿರ್ಣಾಯಕರಾಗಿ ಸಾಗಿರುವ ನಂದನ್ ನಿಲೇಕಣಿ ಅವರಂತಹ ಪ್ರಾಜ್ಞರ  ಅವಶ್ಯಕತೆ ಇಂದು ನಮ್ಮ ದೇಶಕ್ಕೆ ಬಹಳಷ್ಟಿದೆ.  ಉದ್ಯಮಿಯಾಗಿ ಅವರು ಗಳಿಸಿದ ಯಶಸ್ಸುಗಳಲ್ಲೇ ಐಶಾರಾಮೀ ಜೀವನದ ಸಮಸ್ತ  ಭೋಗಗಳನ್ನು ಅನುಭವಿಸುವ ಎಲ್ಲಾ ಸ್ಥಿತಿಗತಿಗಳನ್ನು ತಲುಪಿದ್ದರೂ ಕೂಡಾ ತಾವು ಇರುವ ಭಾರತೀಯ ಸಮಾಜದ ಕುರಿತಾದ ಆಸಕ್ತಿ ಸಂವೇದನೆಗಳನ್ನು ವಿಶಿಷ್ಟ ರೀತಿಯಲ್ಲಿ ಹೊರಹೊಮ್ಮಿಸಿರುವ ನಂದನ್ ನಿಲೇಕಣಿ ಅಂತಹವರನ್ನು ನಮ್ಮ ಸಮಾಜ ಎಲ್ಲ ರೀತಿಯ ಆಶಯಗಳಿಂದ ಎದುರು ನೋಡುವ ಸಾಧ್ಯತೆಗಳಿವೆ.  

ಆದರೆ, ಒಬ್ಬ ವ್ಯಕ್ತಿ ರಾಜಕೀಯ ವ್ಯವಸ್ಥೆಯಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂಬುದು ನಂದನ್ ನಿಲೇಕಣಿ ಅವರಿಗೆ ಈಗಾಗಲೇ ಸಾಕಷ್ಟು ಅರ್ಥವಾಗಿರುತ್ತದೆ.  ಅವರೆಷ್ಟೇ ಸಮರ್ಥವಾದ ಯೋಜನೆಗಳನ್ನು ಹಾಕಿಕೊಂಡರೂ ವ್ಯವಸ್ಥೆ ಹಲವು ವಿಧದಲ್ಲಿ ಕಾಲೆಳೆಯುತ್ತಿರುತ್ತದೆ.   ಒಂದು ರಾಜಕೀಯ ವ್ಯವಸ್ಥೆಯಾಗಿ ಒಬ್ಬ ಎಂತಹದ್ದೇ ಮಹತ್ವದ ಕೆಲಸ ನಿರ್ವಹಿಸುವಾಗಲೂ ಅದಕ್ಕೆ ವಿರೋಧ ಪಕ್ಷವಿರಲಿ, ಸ್ವಂತ ಪಕ್ಷದ ಪ್ರತಿಯೋರ್ವನೂ ವಿರೋಧ ವ್ಯಕ್ತ ಪಡಿಸುತ್ತಲೇ ಇರುತ್ತಾನೆ.  ಅದರಲ್ಲೂ ಒಬ್ಬ ಪ್ರಾಜ್ಞ ಒಂದು ಯೋಜನೆಯ ಬಗ್ಗೆ ಮಾತನಾಡಿದರಂತೂ, ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ವಿಮರ್ಶಕ ಸ್ಥಾನದಲ್ಲಿ ಕುಳಿತು ಟೀಕಾ ಪ್ರವಾಹಗಳಲ್ಲಿ ನಿತ್ಯ ನಿರಂತರರಾಗಿಬಿಡುತ್ತೇವೆ.  ನಂದನ್ ನಿಲೇಕಣಿ ಅಂತಹವರಿಗೆ ಸರ್ಕಾರವನ್ನು ಎಷ್ಟರ ಮಟ್ಟಿಗೆ ಬೆಂಬಲಿಸಬೇಕು, ಎಲ್ಲಿ ವಿರೋಧಿಸಬೇಕು, ತಮಗಿರುವ ವಿವಿಧ ವಿರೋಧಗಳ ನೆಲೆಯಲ್ಲಿ ತಾವು ಹಿಡಿದಿರುವ ಗುರಿ ಸಾಧನೆ ಹೇಗೆ, ಅದು ಎಲ್ಲಿಯವರೆಗೂ ಸಾಧ್ಯ ಇತ್ಯಾದಿ ನೂರೆಂಟು ಪ್ರಶ್ನೆಗಳು ಮುಂದಿರಲಿಕ್ಕೆ ಸಾಕು.  ಈ ಎಲ್ಲ ಪ್ರಶ್ನೆಗಳೂ ಅವರನ್ನು ವಿಚಲಿತರನ್ನಾಗಿಸದೆ ದೇಶದ ಒಳಿತಿಗಾಗಿ ಆ ಕಾರ್ಯವನ್ನು  ಮುನ್ನಡೆಸುವ ಶಕ್ತಿ ಅವರಿಗೆ ಒದಗಲಿ ಎಂದು ಆಶಿಸೋಣ.

ಈಗಾಗಲೇ ಸಾಕಷ್ಟು ಸಾಧಿಸಿ ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರೆದಿರುವ ನಂದನ್ ನಿಲೇಕಣಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತ, ಅವರಿಂದ ಭಾರತೀಯ ಜನಸ್ತೋಮಕ್ಕಿರುವ ನಿರೀಕ್ಷೆಗಳ ಜೊತೆಗೆ ಹೃತ್ಪೂರ್ವಕ  ಬೆಂಬಲಗಳನ್ನು ಕೂಡಾ ಹೇಳೋಣ.

Tag: Nandan Nilekani

ಕಾಮೆಂಟ್‌ಗಳಿಲ್ಲ: