ಶನಿವಾರ, ಆಗಸ್ಟ್ 31, 2013

ನಂದಿತಾ

ನಂದಿತಾ

ಕನ್ನಡ ಚಿತ್ರಲೋಕದ  ಹಿನ್ನೆಲೆಗಾಯಕಿ ನಂದಿತಾ ಅವರ ಹುಟ್ಟಿದ ಹಬ್ಬ ಫೆಬ್ರವರಿ 28ರಂದು.

ಕಳೆದ ದಶಕದ ಕನ್ನಡ ಚಿತ್ರರಂಗದಲ್ಲಿ ಗಾಯಕಿಯಾಗಿ ಹೆಸರು ಮಾಡಿದವರಲ್ಲಿ ನಂದಿತ ಅವರದು ಪ್ರಮುಖ ಹೆಸರು.  ಹಲವು ವರ್ಷಗಳ ಹಿಂದೆ ಇವರು ಆರ್.ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೊರಬಂದ ಪ್ರತಿಭಾವಂತ ಇಂಜಿನಿಯರಿಂಗ್  ವಿದ್ಯಾರ್ಥಿಯಾಗಿ ಪ್ರತಿಷ್ಟಿತ ಅಂತರರಾಷ್ಟ್ರೀಯ  ಸಂಸ್ಥೆ ಸಿಸ್ಕೋದಲ್ಲಿ  ಹೊಂದಿದ್ದ ಉದ್ಯೋಗವನ್ನು ತ್ಯಜಿಸಿ ಸಂಗೀತಕ್ಕೆ ಒಲಿದು ಬಂದಿದ್ದು ಪ್ರಮುಖ ಸುದ್ಧಿಯಾಗಿತ್ತು.

ನಂದಿತಾ ಅವರ ತಂದೆ ವೀಣಾ ವೆಂಕಟಗಿರಿಯಪ್ಪನವರ ವೀಣಾ ಪರಂಪರೆಗೆ ಸೇರಿದವರು.   ತಾಯಿ ಕೂಡಾ ವೀಣಾ ವಿದ್ವಾಂಸರಾಗಿ ಮಗಳು ನಂದಿತಾಗೆ ಗುರುವಾದರು.  ನಂದಿತಾ ವೀಣೆಯಲ್ಲಿ ವಿದ್ವತ್ ಪರೀಕ್ಷೆಯಲ್ಲಿ ಉತ್ತೀರ್ಣರು.

ಹಂಸಲೇಖಾ ಅವರ  ಮೂಲಕ ಹಬ್ಬಚಿತ್ರದಲ್ಲಿ  ಹಿನ್ನಲೆಗಾಯಕಿಯಾದ ನಂದಿತ ಕಳೆದ ದಶಕದಲ್ಲಿ ನೂರಾರು ಚಿತ್ರಗಳಲ್ಲಿ, ದೂರದರ್ಶನ ಕಾರ್ಯಕ್ರಮಗಳಲ್ಲಿ, ಮತ್ತು ಪ್ರಮುಖ ವೇದಿಕೆಗಳಲ್ಲಿ  ಕಾಣಿಸಿಕೊಂಡು ತಮ್ಮ ಗಾಯನ ಮತ್ತು ನಗೆಮೊಗದಿಂದ ಕನ್ನಡ ಜನತೆಯ ಹೃದಯವನ್ನು ಗೆದ್ದಿದ್ದಾರೆ.  ಹಲವಾರು ನಟಿಯರಿಗೆ ಸಂಭಾಷಣಾ  ಧ್ವನಿದಾನ ಕೂಡಾ ಮಾಡಿದ್ದಾರೆ.

ಶಾಸ್ತ್ರೀಯ ಸಂಗೀತದ ನಿರತ ಅಧ್ಯಯನದ ಜೊತೆಗೆ ಹಲವು ಹೊಸ ಚಿಂತನೆಗಳಲ್ಲೂ ಶ್ರಮ ವಹಿಸಿರುವ ನಂದಿತ ಆ ನಿಟ್ಟಿನಲ್ಲೂ ಹಲವಾರು ಧ್ವನಿಮುದ್ರಿಕೆಗಳನ್ನು ಹೊರತಂದಿದ್ದಾರೆ. 

ಹಲವಾರು ರಾಜ್ಯಪ್ರಶಸ್ತಿ, ಫಿಲಂಫೇರ್ ಹಾಗೂ ಇನ್ನಿತರ ಹಲವಾರು ಗೌರವಗಳು ನಂದಿತಾ ಅವರಿಗೆ ಸಂದಿವೆ.  ಪ್ಯಾರಿಸ್ ಪ್ರಣಯ ಚಿತ್ರದ 'ಎದೆ ತುಂಬಿ ಹಾಡಿದೆನು',  ಕಲ್ಲರಳಿ ಹೂವಾಗಿ ಚಿತ್ರದ 'ಅಕ್ಕ', ಜೋಗುಳದ 'ಆಕಾಶಕ್ಕೆ ಒಬ್ಬ ಸೂರ್ಯ', ನನ್ನ ಪ್ರೀತಿಯ ಹುಡುಗಿಯ 'ಮೂಡಲ್ ಕುಣಿಗಲ್ ಕೆರೆಇವುಗಳಲ್ಲಿ ಪ್ರಮುಖವಾದವು.  ಮತದಾನ ಚಿತ್ರದ ಇದು ಮೊದಲನೆ ಹಾಡು’, ಮನಸೆಲ್ಲಾ ನೀನೆ ಚಿತ್ರದ ಜೀರ್ಜಿಂಬೆ ಜೀರ್ಜಿಂಬೆ’, ಜೋಗುಳದ ಆಕಾಶಕ್ಕೆ ಒಬ್ಬ ಸೂರ್ಯ’, ಯಶವಂತ್ ಚಿತ್ರದ ಮೊದಮೊದಲು’, ಆ ದಿನಗಳು ಚಿತ್ರದ ಸಿಹಿಗಾಳಿ’, ದುನಿಯಾ ಚಿತ್ರದ ಕರಿಯ ಐ ಲವ್ ಯು’, ಇಂತಿ ನಿನ್ನ ಪ್ರೀತಿಯ ಚಿತ್ರದ ಹೂ ಕನಸ ಜೋಕಾಲಿ’, ಆಪ್ತಮಿತ್ರದ ‘ಬಾರಾ ಸನಿಹಕೆ ಬಾರಾ’ ಮುಂತಾದವು ನಂದಿತ ಅವರ ಇನ್ನಿತರ ಪ್ರಸಿದ್ಧ ಗೀತೆಗಳಲ್ಲಿ ನೆನಪಾಗುವ ಕೆಲವು ಹಾಡುಗಳು. 

ನಮ್ಮಲ್ಲಿ ನಂದಿತಾ ಅಂತಹಾ ಪ್ರತಿಭೆಗಳಿದ್ದೂ ನಮ್ಮ ಚಿತ್ರರಂಗದಲ್ಲಿ ಈ ಪ್ರತಿಭೆಗಳು ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ ಅವಕಾಶಕ್ಕಾಗಿ ಕಾದು ಕುಳಿತಿರಬೇಕಾದ ವಿಚಿತ್ರ ಸ್ಥಿತಿ ಹಿಂದಿನಿಂದಲೂ ಕನ್ನಡಕ್ಕೆ ಅಂಟಿರುವ ದೌರ್ಭಾಗ್ಯ.  ತಪ್ಪು ತಪ್ಪು ಉಚ್ಚಾರ ಮತ್ತು ಭಾವ ಪ್ರಾಧಾನ್ಯತೆಯ ಆಳಕ್ಕಿಳಿಯದ ಬೇರೆ ಭಾಷಿಗರನ್ನು ಇಲ್ಲಿ ಓಲೈಸುವ ಪ್ರವೃತ್ತಿ ನಮ್ಮ ಕನ್ನಡಿಗರಿಗೆ ಅಂಟಿದ ಶಾಪ.  ಇಂಥಹ ಪ್ರವೃತ್ತಿಗಳು ನಂದಿತ ಅಂತಹ ಪ್ರತಿಭಾವಂತರ ಆತ್ಮಸ್ಥೈರ್ಯವನ್ನು ನಂದಿಸದೆ, ಅದನ್ನೇ ಒಂದು ಚಾಲೆಂಜ್ ರೂಪದಲ್ಲಿ ಸ್ವೀಕರಿಸಿ ವಿಶಿಷ್ಟ ಸಾಧನೆಗಳತ್ತ ಮುನ್ನುಗುವ ಪ್ರೇರಣೆ ಅವರಲ್ಲಿ ಉದಿಸಲಿ ಎಂದು ನಾವು ಹಾರೈಸೋಣ.


ನಂದಿತಾ ಅವರ ಸಂಗೀತ ಸಾಧನೆ, ಬದುಕಿನಲ್ಲಿ ಸಂತಸ ಎಂದೆಂದೂ ನಲಿಯುತ್ತಿರಲಿ ಎಂದು ಹಾರೈಸಿ ನಮ್ಮ ಈ ಕನ್ನಡ ಪ್ರತಿಭೆಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ.

Tag: Nandita

ಕಾಮೆಂಟ್‌ಗಳಿಲ್ಲ: