ಶನಿವಾರ, ಆಗಸ್ಟ್ 31, 2013

ಎನ್.ಜಿ. ಪಾವಂಜೆ

ಎನ್.ಜಿ. ಪಾವಂಜೆ

ಕಲಾಭಿವ್ಯಕ್ತಿಯಲ್ಲಿ ಪಾವಂಜೆ ಮನೆತನದ ಕೊಡುಗೆ ಅಪಾರವಾದದ್ದು.  ಹತ್ತೊಂಬತ್ತನೆಯ ಶತಮಾನದಲ್ಲಿ ಗೋಪಾಲಕೃಷ್ಣಯ್ಯ ಪಾವಂಜೆಯವರಿಂದ ಪ್ರಾರಂಭಗೊಂಡ ಈ ಕಲಾ ಸೇವೆ, ಫೇಸ್ಬುಕ್ಕಿನಲ್ಲಿ ನಮ್ಮೆಲ್ಲರ ಆತ್ಮೀಯರಾದ ಅನು ಪಾವಂಜೆಯವರವರೆಗೆ ನಾಲ್ಕು ಭವ್ಯ ತಲೆಮಾರುಗಳಲ್ಲಿ ಹಾಯ್ದುಹೋಗಿದೆ.  ಈ ತಲೆಮಾರಿನಲ್ಲಿ ಗೋಪಾಲಕೃಷ್ಣಯ್ಯ ಪಾವಂಜೆಯವರ ಮಗನಾಗಿ ಪಾವಂಜೆ ಕುಟುಂಬದ ಕಲಾಸೇವೆಯಲ್ಲಿ ಎರಡನೆಯ ತಲೆಮಾರಿಗೆ ಸೇರಿದ ನರಹರಿ ಗೋಪಾಲಕೃಷ್ಣಯ್ಯ  ಪಾವಂಜೆಯವರು   ಕಲೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ ದೇಶ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದವರಲ್ಲಿ  ಬಹು ಮುಖ್ಯರೆನಿಸಿದ್ದಾರೆ.  ಕಲಾಲೋಕದಲ್ಲಿ ಇವರು  ಎನ್. ಜಿ. ಪಾವಂಜೆ ಎಂಬ ಹೆಸರಿನಿಂದ ಸುಪ್ರಸಿದ್ಧರು.    ಇಂದು  ಅವರ  ಸಂಸ್ಮರಣಾ  ದಿನ.

ಎನ್ ಜಿ. ಪಾವಂಜೆಯವರು  ಮಹಾನ್ ಕಲಾವಿದ, ಶಿಕ್ಷಕ ಹಾಗೂ ಮುಂಬೈನ ಜೆ. ಜೆ. ಕಲಾಶಾಲೆಯ ಪ್ರಥಮ ವಿದ್ಯಾರ್ಥಿ ಎಂದು ಪ್ರಸಿದ್ಧರಾದ ಗೋಪಾಲಕೃಷ್ಣಯ್ಯ ಪಾವಂಜೆ - ವೆಂಕಮ್ಮ ದಂಪತಿಗಳಿಗೆ 1892ರಲ್ಲಿ ಜನಿಸಿದರು. ಪುಟ್ಟ ವಯಸ್ಸಿನಲ್ಲೇ ಕಲೆಯ ಸೂಕ್ಷ್ಮಗಳನ್ನು ಮೈಗೂಡಿಸಿಕೊಂಡ ನರಹರಿ ಪಾವಂಜೆಯವರಿಗೆ, ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ಉತ್ತೀರ್ಣರಾದ ಬಳಿಕ ಮದರಾಸಿನಲ್ಲಿ ಪ್ರೌಢ ಕಲಾ ಪರೀಕ್ಷೆಯನ್ನು ಪೂರೈಸುವುದು ಸುಲಭವಾಯಿತು. ಬಳಿಕ ಉಡುಪಿಯ ಕ್ರಿಶ್ಚಿಯನ್ ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ಕಲೆಯಲ್ಲಿ ಇನ್ನೂ ಹೆಚ್ಚಿನ ಪರಿಣತಿಯನ್ನು ಪಡೆಯಬೇಕೆಂಬ ಆಕಾಂಕ್ಷೆ ಹುಟ್ಟಿತು. ಮುಂಬಯಿಯ ಜೆ.ಜೆ. ಕಲಾ ಶಾಲೆಯಲ್ಲಿ ಅಭ್ಯಾಸ ಮಾಡಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮೇಲೆ ಬೆಂಗಳೂರಿನ ಬಳೇ ಪೇಟೆಯಲ್ಲಿ ಸ್ಟುಡಿಯೋ ಸ್ಥಾಪಿಸಿ ಸ್ವತಂತ್ರ  ಕಲಾವೃತ್ತಿಯಲ್ಲಿ  ನಿರತರಾದರು.  ಅದೇ ಸಮಯದಲ್ಲಿ ಹವ್ಯಾಸೀ ನಾಟಕರಂಗವೊಂದು ಪದವೀಧರರಿಂದಲೇ ಆರಂಭಗೊಂಡಿತು. ಅವರಲ್ಲಿ ಸುಪ್ತವಾಗಿದ್ದ ನಟನಾ ಕೌಶಲದಿಂದಾಗಿ ಹಲವಾರು ನಾಟಕಗಳಲ್ಲಿ ಉತ್ತಮ ನಟನಾಗಿ ಮಿಂಚಿದರು. ಖ್ಯಾತ ನಟರಾದ ದಿ. ಬಳ್ಳಾರಿ ರಾಘವಾಚಾರ್ಯರ ಈ ನಾಟಕ ಸಂಸ್ಥೆಯಲ್ಲಿ ನಟನೆಯ ಜೊತೆಗೆ ರಂಗಸಜ್ಜಿಕೆಗೆ ಕಲಾತ್ಮಕ ಸ್ಪರ್ಶವನ್ನೂ ನೀಡಲು ಪಾವಂಜೆಯವರು  ಮುಂದಾದರು. ನಾಟಕದ ಪರದೆಗಳನ್ನು ರಚಿಸಿದರು. ಹೀಗೆ ನಾಟಕ ಮತ್ತು ನಾಟಕದ ದೃಶ್ಯಾವಳಿಗಳು  ಪ್ರೇಕ್ಷಕರ ಮನಸೆಳೆಯುವಂತಾಯಿತು.

ಇದೇ ಸಮಯದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಡಾ. ಮೆಹದಿ ಹಸನ್‌ರವರು ಸೂಕ್ಷ್ಮಾಣುಗಳನ್ನು ಕಂಡ ಹಾಗೆಯೇ ಚಿತ್ರಿಸಬಲ್ಲ ಕಲಾವಿದರ ಹುಡುಕಾಟದಲ್ಲಿದ್ದರು. ನರಹರಿ ಪಾವಂಜೆಯವರನ್ನು ಈ ಕೆಲಸಕ್ಕಾಗಿ ಆಹ್ವಾನಿಸಿದರು. ನರಹರಿ ಪಾವಂಜೆಯವರು ಅವುಗಳ ನೈಜ ಚಿತ್ರವನ್ನು ತಮ್ಮ ಕುಂಚದಲ್ಲಿ ಪ್ರತಿಬಿಂಬಿಸಿದರು. ಈ ಚಿತ್ರಗಳು ಜರ್ಮನಿಯಲ್ಲಿ ಮುದ್ರಣಗೊಂಡು, ವಿಜ್ಞಾನದ ಅನ್ವೇಷಣೆಯಲ್ಲಿ ಒಂದು ಮೈಲಿಗಲ್ಲಾಯಿತು. ಇವರ ಪ್ರತಿಭೆ ಮೈಸೂರು ಮಹಾರಾಜರಾದ ಕೃಷ್ಣರಾಜೇಂದ್ರ ಒಡೆಯರ ಗಮನಕ್ಕೂ ಬಂದು, ಅವರನ್ನು ಹೆಚ್ಚಿನ ಕಲಾ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡಿ ಜರ್ಮನಿಗೆ ಕಳಿಸುವಂತಾಯಿತು. ಅಲ್ಲಿದ್ದ ಮೂರೂವರೆ ವರ್ಷದ ಅವಧಿಯಲ್ಲಿ ಪಾಶ್ಚಾತ್ಯ ಚಿತ್ರಕಲೆಗಳ ಎಲ್ಲಾ ಶೈಲಿಗಳನ್ನೂ, ತಂತ್ರಗಳನ್ನೂ ಕರಗತ ಮಾಡಿಕೊಂಡರು. ಅಲ್ಲಿನ ಪ್ರಸಿದ್ಧ ಕಲಾ ಸಂಗ್ರಹಾಲಯಗಳಲ್ಲಿ ಅಭ್ಯಾಸ ಮಾಡಿ ಜಗತ್ಪ್ರಸಿದ್ಧ ಕಲಾಕೃತಿಗಳ ಪ್ರತಿಕೃತಿಗಳನ್ನು ರಚಿಸಿದರು. ರೆಂಬ್ರಾಂಟ್ ಮತ್ತು ಟಿಶಿಯನ್‌ ಆವರ ಕಲೆಯ ಎರಡು ಪ್ರತಿಕೃತಿಗಳನ್ನು ರಚಿಸಿ ಮೈಸೂರು ಮಹಾರಾಜರಿಗೆ ಕಾಣಿಕೆಯಾಗಿ ನೀಡಿದರು. ಮೈಸೂರಿನ ಜನನ್ಮೋಹನ ಕಲಾಸಂಗ್ರಹಾಲಯದಲ್ಲಿ ಅವು ಈಗಲೂ ಇವೆ.

ಮುಂದೆ ಪಾವಂಜೆಯವರು ಮೈಸೂರಿನ ಶ್ರೀ ಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆಯ ಕಲಾ ವಿಭಾಗದ ಮುಖ್ಯಾಧಿಕಾರಿಗಳಾಗಿ ನೇಮಕಗೊಂಡರು. ಈ ಶಾಲೆಯ ಮುಖ್ಯ ನಿರ್ವಹಣಾಧಿಕಾರಿಯಾಗಿದ್ದ ಅವಧಿಯಲ್ಲಿ ಕರ್ನಾಟಕದ ಕಲೆ ಮತ್ತು ಕರಕುಶಲ ವಸ್ತುಗಳ ಉತ್ತಮ ಮಾದರಿಗಳನ್ನು ರಚಿಸಿ ಪ್ರದರ್ಶಿಸಿದ್ದರಿಂದ ದೇಶ ವಿದೇಶಗಳಲ್ಲಿ ಕರ್ನಾಟಕದ ಕಲೆಯ ಸಿರಿವಂತಿಕೆಯನ್ನು ಕಲಾರಸಿಕರು ಮೆಚ್ಚಿ ಕೊಂಡಾಡುವಂತಾಯಿತು. ಇವರ ವಿದ್ಯಾರ್ಥಿಗಳನೇಕರು ಚಿತ್ರಕಲೆಯಲ್ಲಿ ಅತ್ಯುನ್ನತ ಸಾಧನೆಗಳನ್ನು ಮಾಡಿ ಕೀರ್ತಿಗಳಿಸಿದರು. ಇವರಲ್ಲಿ ಎಂ.ಟಿ.ವಿ. ಆಚಾರ್ಯ, ಬಿ.ಎಚ್. ರಾಮಚಂದ್ರ, ಎಂ.ಜೆ. ಶುದ್ಧೋದನ, ಎಸ್.ಆರ್. ಸ್ವಾಮಿ, ಎನ್. ಹನುಮಯ್ಯ, ಎನ್.ಎಸ್. ಸುಬ್ಬುಕೃಷ್ಣ, ಎಸ್.ಎಸ್. ಕುಕ್ಕೆ ಮುಂತಾದ ಅನೇಕರು ಭಾರತದ ಶ್ರೇಷ್ಠ ಕಲಾವಿದರೆಂದು ಖ್ಯಾತಿಗಳಿಸಿದರು.  ಕೆ.ಕೆ. ಹೆಬ್ಬಾರರು ಸಹಾ ಕೆಲಕಾಲ ಇವರ ಶಿಷ್ಯರಾಗಿದ್ದರು. ಪಾವಂಜೆಯವರು ವೃತ್ತಿ ಶಿಕ್ಷಣ ಶಾಲೆಯ ನಿರ್ವಹಣೆಯ ಜೊತೆಗೆ ಮೈಸೂರು ದಸರಾ ವಸ್ತುಪ್ರದರ್ಶನದ ಮುಖ್ಯ ಕಾರ್ಯದರ್ಶಿಯಾಗಿ ಸಹಾ ಕೆಲಕಾಲ ಶ್ರಮಿಸಿದರು. ಅಂದಿನ ಆ ಕಲಾ ವಿಭಾಗದ ಪ್ರದರ್ಶನದಲ್ಲಿ ಭಾರತದ ಪ್ರಮುಖ ಕಲಾವಿದರ ಚಿತ್ರಗಳು ಪ್ರದರ್ಶಿಸಲ್ಪಟ್ಟು, ಕಲಾರಸಿಕರಿಂದ ಶ್ಲಾಘಿಸಲ್ಪಟ್ಟವು. ಈ ಕಲಾಪ್ರದರ್ಶನದ ಮುಖೇನ ಕರ್ನಾಟಕದ ಕಲಾ ಸಮೃದ್ಧಿಯ ಪರಿಚಯವಾಗುವುದರ ಜೊತೆ ಜೊತೆಗೆ ದೇಶದ ಇತರ ಶ್ರೇಷ್ಠ ಕಲಾವಿದರ ಪ್ರತಿಭೆಯನ್ನೂ ತಿಳಿಯುವಂತಾಯಿತು. ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದೇ ಕಲಾವಿದರಿಗೆ ಅಭಿಮಾನದ ವಿಷಯವಾಯಿತು.

1946ರಲ್ಲಿ ಸರಕಾರದ ಸೇವೆಯಿಂದ ನಿವೃತ್ತರಾದ ಎನ್. ಜಿ. ಪಾವಂಜೆಯವರು ಮೈಸೂರಿನಲ್ಲಿ ಲಿಥೋ ಮುದ್ರಣ ಘಟಕವನ್ನು ಸ್ಥಾಪಿಸಿದರು.  ಈ ಮೊದಲೇ ಅವರು ಸ್ವಂತ ಬ್ಲಾಕ್ ತಯಾರಿಕೆಯ ಘಟಕವನ್ನು  ಪ್ರಾರಂಭಿಸಿದ್ದರು. 1951ರಲ್ಲಿ ಈ ಘಟಕಗಳನ್ನು ಮುಚ್ಚಿ ಬೆಂಗಳೂರಿಗೆ ಬಂದರು. ಆ ಬಳಿಕ ತಮ್ಮ ಮನಸ್ಸಂತೋಷಕ್ಕಾಗಿ ಅನೇಕ ಕಲಾಕೃತಿಗಳನ್ನು ರಚಿಸಿದರು. ಈ ಸಮಯದಲ್ಲಿ ಅವರು ಅಂತರ್ಮುಖಿಯಾಗಿ ಏಕಾಂತವನ್ನೇ ಹೆಚ್ಚು ಆಶಿಸುತ್ತಿದ್ದರೆಂದು ತಿಳಿದುಬರುತ್ತದೆ.

ನರಹರಿ ಪಾವಂಜೆಯವರ ಪುತ್ರಿ ಅನಸೂಯಾ ಪಾವಂಜೆಯವರು 1999ರಲ್ಲಿ A Flower born to blush unseenಎಂಬ ಕೃತಿಯನ್ನು ಪ್ರಕಟಿಸಿ ತಮ್ಮ ತಂದೆಯವರ ನೆನಪುಗಳನ್ನು ಚಿರಸ್ಥಾಯಿಯಾಗಿ ಮಾಡಿದ್ದಾರೆ. ಕಲೆ ಮತ್ತು ಕುಶಲ ಕೈಗಾರಿಕೆಗಳ ಮಳಿಗೆ ಕಾವೇರಿಯ ಕರ್ನಾಟಕ ರಾಜ್ಯದ ಮುಖ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅನಸೂಯಾರವರು ತಮ್ಮ ತಂದೆಯ ಸಾಧನೆಗಳು, ಪಡೆದ ಸಿದ್ಧಿಗಳು, ಅವರ ವೃತ್ತಿ ಪ್ರವೃತ್ತಿಗಳು, ಸ್ವಭಾವದ ವೈಶಿಷ್ಟ್ಯಗಳು ಇತ್ಯಾದಿಗಳನ್ನು ಬಹಳ ಆತ್ಮೀಯವಾಗಿ ನಿವೇದಿಸಿದ್ದಾರೆ.

ಡಾ. ಎನ್. ಜಿ. ಪಾವಂಜೆಯವರು  1965 ಸಪ್ಟೆಂಬರ್ 2ನೇ ದಿನದಂದು ಈ ಲೋಕವನ್ನಗಲಿದರು.  ಖ್ಯಾತ ಕಲಾವಿದರಾದ ಮಿಸ್ಟರ್ ವೆಬ್‌ಸ್ಟರ್ ಅವರು ಪಾವಂಜೆಯವರಿಗೆ ಬರೆದ ಪತ್ರದಲ್ಲಿ You are the first solid artist of Mysore to Europe ಎಂದು ಅಭಿಮಾನದಿಂದ ಕೊಂಡಾಡಿದ್ದಾರೆ. ಈಗಿನ ಚಿತ್ರಕಲಾ ಪರಿಷತ್ತು ಎನ್. ಜಿ. ಪಾವಂಜೆಯವರ  ಕನಸಿನ ಕೂಸು. ಅದರ ಸ್ಥಾಪನೆಯ ಮೂಲ ಕಾರಣಕರ್ತರು ಅವರೇ ಎಂಬುದು ಅನೇಕರಿಗೆ ಇಂದು ತಿಳಿದಿಲ್ಲ. ಬೆಂಗಳೂರಿನ ಫೈನ್ ಆರ್ಟ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷರು ಕೂಡಾ ಅವರೇ.  ಭಾರತದ ರಾಷ್ಟ್ರಪತಿಗಳಾಗಿದ್ದ ಜಾಕೀರ್ ಹುಸೇನರವರೆಗೆ ಎಲ್ಲಾ ಹಂತಗಳಲ್ಲಿ ಆಪ್ತತೆಯನ್ನು ಸಂಪಾದಿಸಿದ್ದರೂ ಎನ್ ಜಿ ಪಾವಂಜೆಯವರು  ತಮಗಿದ್ದ ಯಾವುದೇ ಪ್ರಭಾವವನ್ನೂ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡವರಲ್ಲ.   ಇಷ್ಟೆಲ್ಲಾ ಸಾಧಿಸಿದ್ದ ಎನ್ ಜಿ ಪಾವಂಜೆಯವರು ತಮ್ಮ ಕುಟುಂಬ ನಿರ್ವಹಣೆಗಾಗಿ ಕೊನೆಗಾಲದಲ್ಲಿ ಗಣೇಶ ಬೀಡಿ ಕಂಪೆನಿಯ ಏಜೆಂಟರಾಗಿ ದುಡಿಯುವಂತಹ ಪರಿಸ್ಥಿತಿ ಇತ್ತು ಎಂಬುದು ಅಚ್ಚರಿ ಉಂಟುಮಾಡುತ್ತದೆ. 

ನರಹರಿ ಪಾವಂಜೆಯವರು ಜಲವರ್ಣ ಚಿತ್ರದಲ್ಲಿ ಅಪೂರ್ವ ಯಶಸ್ಸು ಸಾಧಿಸಿದವರು. 1919 ಮತ್ತು 1920ರಲ್ಲಿ ಅವರ ಎರಡು ಜಲವರ್ಣ ಚಿತ್ರಗಳಿಗೆ ಕಂಚಿನ ಪದಕ ಮತ್ತು ಚಿನ್ನದ ಪದಕ ಲಭಿಸಿತ್ತು. ಕರ್ನಾಟಕ ಚಿತ್ರಕಲಾ ಪರಿಷತ್ತು ಇವರನ್ನು 1965ರಲ್ಲಿ ಸನ್ಮಾನಿಸಿತು. ಆದರೆ ಆಗ ಅವರು ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರಿದ್ದರು. ಅವರ ಮಗಳು ಅನಸೂಯಾ ಪಾವಂಜೆ ಈ ಗೌರವವನ್ನು ತಂದೆಯ ಪರವಾಗಿ ಸ್ವೀಕರಿಸಿದರು. ಅವರ ಸ್ಮರಣೆಯಲ್ಲಿ 1967ರ ಡಿಸೆಂಬರ್ 7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪಾವಂಜೆಯವರ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಅದನ್ನು ಉದ್ಘಾಟಿಸಿದವರು ಭಾರತದ ರಾಷ್ಟ್ರಪತಿ ಜಾಕೀರ್ ಹುಸೇನ್. ಮಿತ್ರನೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ರಾಷ್ಟ್ರಪತಿಗಳು ಅಂದು ಭಾವಪೂರ್ಣವಾಗಿ ಮಾತಾಡಿದ್ದರು.

ನರಹರಿ ಪಾವಂಜೆಯವರ ಮಗಳು ಅನಸೂಯಾ ಪಾವಂಜೆಯವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 10 ಲಕ್ಷದ ಒಂದು ನಿಧಿಯನ್ನು ನೀಡಿ ಅಜ್ಜ ಮತ್ತು ತಂದೆಯ ಹೆಸರಿನ ಗೋಪಾಲಕೃಷ್ಣಯ್ಯ ನರಹರಿ ಎಂಬ ಒಂದು ಪೀಠವನ್ನು ಸ್ಥಾಪಿಸಿದ್ದಾರೆ. ಈ ಪೀಠದ ವತಿಯಿಂದ ಚಿತ್ರಕಲೆಯ ಬಗ್ಗೆ ವಿಚಾರಸಂಕಿರಣಗಳು ಮತ್ತು ಯುವಪೀಳಿಗೆಗೆ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಇಂತಹ ಉದಾತ್ತ ಗುಣಗಳುಳ್ಳ ಮತ್ತು ಉತ್ಕೃಷ್ಟ ಕಲಾಪ್ರತಿಭೆಯುಳ್ಳ ಪಾವಂಜೆ ಮನೆತನದ ಹೆಸರು ಈ ರೀತಿಯಲ್ಲಿ ಮುಂದಿನ ಜನಾಂಗಕ್ಕೆ ತಿಳಿಯುವಂತಾಗಿದೆ.

2012ರ ವರ್ಷದ  ಮಾರ್ಚ್ 11ರಂದು ಬೆಂಗಳೂರಿನ ನೃಪತುಂಗಾ ರಸ್ತೆಯಲ್ಲಿರುವಪ್ರತಿಷ್ಠಿತ ಮಿಥಿಕ್ ಸೊಸೈಟಿಯ ಆವರಣದಲ್ಲಿ   ಡಾ. ಎನ್ ಜಿ ಪಾವಂಜೆ ಆರ್ಟ್ ಗ್ಯಾಲರಿರೂಪುಗೊಂಡಿದ್ದು , ಈ ಮಹಾನ್ ಕಲಾವಿದರ ಚಿತ್ರಗಳ ಪ್ರದರ್ಶನಕ್ಕೆ ಶಾಶ್ವತವಾದ ನೆಲೆಯೊಂದು ಸಿದ್ಧಗೊಂಡಿರುವುದು ಕಲಾರಸಿಕರಿಗೆ ಹರ್ಷದ ಸಂಗತಿಯಾಗಿದೆ.  

ಜೀವಮಾನವಿಡೀ ಉತ್ತಮ ಚಿತ್ರಕಲಾವಿದರನ್ನು ಸೃಷ್ಟಿಸಿ ಪೋಷಿಸುವುದರಲ್ಲೇ ತನ್ಮಯರಾದ ಎನ್ ಜಿ ಪಾವಂಜೆಯವರು ಮಾಡಿರುವ ಕೆಲಸಗಳು ಚಿತ್ರಕಲೆಯ ಅಮೂಲ್ಯ ರತ್ನಗಳೆಂದೇ ಪರಿಗಣಿಸಲ್ಪಟ್ಟಿವೆ. ಇಂದು ನಮ್ಮ ದೇಶದಾದ್ಯಂತ ಪ್ರಕಾಶಿಸುವ ಚಿತ್ರಕಲಾ ರತ್ನಗಳು ಇವರ ಮಾರ್ಗದರ್ಶನದ ಬೆಳಕಿನಲ್ಲಿ ಮುಂದುವರಿದವುಗಳು ಎಂಬುದನ್ನು ಮರೆಯಲು ಸಾಧ್ಯವಿಲ್ಲ.

ಈ ಮಹಾನ್ ಕಲಾವಿದರಿಗೆ ನಮ್ಮ ಅನನ್ಯ ಗೌರವಗಳು. 

ಮಾಹಿತಿ ಆಧಾರ ಮತ್ತು ಕೃಪೆ:  ಕಣಜ.ಇನ್
ಫೋಟೋ ಕೃಪೆ:  ಅನು ಪಾವಂಜೆ


Tag: N. G. Pavanje

ಕಾಮೆಂಟ್‌ಗಳಿಲ್ಲ: