ಬುಧವಾರ, ಆಗಸ್ಟ್ 28, 2013

ಹುಲಿರಾಯನ ಆಕಾಶವಾಣಿ

ಹುಲಿರಾಯನ ಆಕಾಶವಾಣಿ

ಜುಲೈ 29 ‘ಅಂತರರಾಷ್ಟ್ರೀಯ ಹುಲಿಗಳ ದಿನ’ ವನ್ನಾಗಿ ಆಚರಿಸಲಾಗುತ್ತಿದೆ.   ಈ ಸಂದರ್ಭದಲ್ಲಿ ನಾನು ಕೆಲವು ವರ್ಷದ ಹಿಂದೆ ಓದಿದ ಸುಂದರ ಪುಸ್ತಕ ‘ಹುಲಿರಾಯನ ಆಕಾಶವಾಣಿ’ಯ ಪುಟಗಳನ್ನು ಮತ್ತೊಮ್ಮೆ ತಿರುವಿಹಾಕಿದೆ.

ನಾವು ಮಕ್ಕಳಾಗಿದ್ದಾಗ ನಮ್ಮನ್ನು ಹಿರಿಯರು ಅಥವಾ ಕೀಟಲೆ ಮಾಡುವವರು ಯಾರಾದರೂ ‘ಹುಲಿ ಬಂತು’ ಅಂದರೆ ಅಯ್ಯೋ  ಏನು ಗತಿ ಎಂದು ಭಯಪಡುತ್ತಿದ್ದೆವು.  ಈಗ ಹಲವು ಬಾರಿ ಕಾಡುಗಳಿಗೆಂದು ಪ್ರವಾಸ ಹೋಗಿ, ಟೈಗರ್ ಸಫಾರಿಗೆ  ಎಂದು  ದೊಡ್ಡ ಹಣ ತೆತ್ತು ಹೋದಾಗಲೂ ಕಾಡು ವಾತಾವರಣದಲ್ಲಿ ಹುಲಿಯನ್ನು ಒಮ್ಮೆಯೂ  ಕಂಡಿಲ್ಲ.  ನಾವು ನೋಡಿರುವ ಹುಲಿಗಳೆಲ್ಲಾ ಮೃಗಾಲಯದಲ್ಲಿ ಕೂಡಿಟ್ಟ ಹುಲಿಗಳು, ಸಿನಿಮಾದಲ್ಲಿ ಕಂಡ ಹುಲಿಗಳು ಮತ್ತು ಇವೆಲ್ಲಕ್ಕೂ ಮಿಗಿಲಾಗಿ  ಪಟ್ಟೆ ಬಳಿದುಕೊಂಡು ಬಾಲ ಸಿಕ್ಕಿಸಿಕೊಂಡು ಕುಣಿವ ಹುಲಿರೂಪಿ ಮಾನವಪ್ರಾಣಿಗಳು.

ಈ ಹುಲಿಗಳ ಸಂಖ್ಯೆ ಪ್ರಪಂಚದಲ್ಲಿ ದಿನೇ ದಿನೇ ಕ್ಷೀಣಿಸುತ್ತಿರುವುದು ಈ ಸುಂದರ ಪ್ರಾಣಿ ಮುಂದಿನ ಜನಾಂಗಗಳಿಗೆ, ಅದು ನಮಗೆ ಕಂಡ ಹಾಗೆ ಕೂಡಾ ಕಾಣದೆ ಹೋಗುವ ಸಾಧ್ಯತೆಗಳಾಗುತ್ತವೆಯೇನೋ  ಎಂಬ ಭಾವ ಹುಟ್ಟಿಸುತ್ತಿವೆ.  ಪ್ರಾಣಿ ಸಂಕುಲಗಳು ಮತ್ತು ಅವಿರುವ ಕಾಡು ಪ್ರದೇಶಗಳು ಬರಿದಾಗುತ್ತಾ ಹೋಗುವುದು ಈ ಜಗತ್ತಿನ ಸೌಂಧರ್ಯವನ್ನು ಕುಂಠಿತಗೊಳಿಸುವುದರ ಜೊತೆಗೆ ಪ್ರಾಕೃತಿಕ ಅಸಮತೋಲನದ ಮೂಲಕ ಇದನ್ನು ವಿನಾಶಕ್ಕೆ ಕೊಂಡೊಯ್ಯುವಂತಿದೆ ಎಂಬುದು ನಮ್ಮ ದಿನನಿತ್ಯದ ಗೋಳಾಗಿದ್ದರೂ ಆ ಕುರಿತು ಕ್ಷಣಹೊತ್ತು ಕೂತು ನಾವೇನು ಮಾಡಬೇಕು ಎಂಬುದರ ಬಗ್ಗೆ ವ್ಯವಸ್ಥೆಗಾಗಲಿ, ಸಮಾಜಕ್ಕಾಗಲಿ ಕಿಂಚಿತ್ತೂ ಆಸ್ಥೆಯಿಲ್ಲ.  ಎಲ್ಲವೂ ಇಲ್ಲಿ ಸ್ವಾರ್ಥ ಇಲ್ಲವೇ ಬಾಯ್ಚಪಲದ ಮಾತುಗಳಲ್ಲಿ ತೇಲಿ ಹಾರಾಡುತ್ತಿರುತ್ತವಷ್ಟೇ.

ಇಂಥಹ ನಮ್ಮಗಳ  ಮಧ್ಯದಲ್ಲೂ ಒಬ್ಬ ಮಹಾನ್ ಹೃದಯವಂತ ವಿಜ್ಞಾನಿ, ಸಾಹಸಿ, ಪರಿಸರ ಪ್ರೇಮಿ, ಪ್ರಾಣಿ ಸಂಕುಲದಲ್ಲಿ ಅದರಲ್ಲೂ ಹುಲಿಯ ಬಗ್ಗೆ ಅಪಾರ ಪ್ರೀತಿ, ಕಾಳಜಿ ಇಟ್ಟುಕೊಂಡು ಅದಕ್ಕಾಗಿ ಪ್ರತೀಕೂಲ ವ್ಯವಸ್ಥೆಯ ವಿರುದ್ಧ ಹೋರಾಡಿ ಸಾಕಷ್ಟು ಯಶಸ್ಸು ಸಾಧಿಸಿದ ಒಬ್ಬ ಧೀಮಂತರಿದ್ದಾರೆ.  ಅವರೇ ಡಾ. ಕೆ.  ಶಿವರಾಮ ಕಾರಂತರ ಪುತ್ರರಾದ ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ. ಕೆ. ಉಲ್ಲಾಸ ಕಾರಂತರು.  ಅವರು ತಮ್ಮ ಶೇಷ್ಟ ಸಂಶೋಧನೆಗಳಿಂದ ವಿಶ್ವಖ್ಯಾತಿ ಗಳಿಸಿರುವುದ್ರ ಜೊತೆಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹಲವಾರು ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ.  ಇವುಗಳಲ್ಲಿ ‘ಹುಲಿರಾಯನ ಆಕಾಶವಾಣಿ’ ಪ್ರಮುಖವಾದದ್ದು.  ಡಾ. ಕೆ. ಉಲ್ಲಾಸ ಕಾರಂತರು,  ಟಿ. ಎಸ್. ಗೋಪಾಲ್ ಅವರ ನಿರೂಪಣೆಯಲ್ಲಿ  ರಚಿಸಿರುವ ಈ ಪುಸ್ತಕವು  ನಮಗೆ ಹುಲಿಯ ಬದುಕು, ನಮ್ಮ ಅರಣ್ಯ, ಪರಿಸರ ಇವುಗಳ ಬಗ್ಗೆ ಹೇಳುತ್ತಾ ಜೊತೆ ಜೊತೆಯಲ್ಲಿ ಇದರ ಕುರಿತಾದ ನಮ್ಮ ಬದುಕು ವ್ಯವಸ್ಥೆಗಳು ಇದಕ್ಕೆ ಹಾಕುವ ತೊಡರುಗಾಲುಗಳ ವಿಶ್ಲೇಷಣಾತ್ಮಕವಾದ ಮತ್ತು ಕುತೂಹಲಕಾರವಾದ ಸುಂದರ ಓದನ್ನು ನಮಗೆ ನೀಡುತ್ತದೆ.

ಈ ಮನೋಜ್ಞ ಪುಸ್ತಕಕ್ಕೆ ಡಾ. ಗಿರೀಶ ಕಾರ್ನಾಡರು ಬರೆದಿರುವ ಸುಂದರ ಮುನ್ನುಡಿ ಇಂತಿದೆ:

ನಾನು ನನ್ನ ಬಾಲ್ಯ, ಹದಿಹರೆಯ ಕಳೆದದ್ದು ಮಲೆನಾಡ ಮಡಿಲಲ್ಲಿ.  ಶಿರಸಿಯಲ್ಲಿ ಆ ಕಾಲದಲ್ಲಿ ಶಿರಸಿ – ಸಿದ್ದಾಪುರದ ಸುತ್ತಲಿನ ಕಾಡು ಎಷ್ಟು ನಿಬಿಡವಾಗಿತ್ತೆಂದರೆ, ಕಾಡಿನ ಆಳದಲ್ಲಿ ಬಿಸಿಲಕೋಲು ಮರದ ತೊಪ್ಪಲು ಚಪ್ಪರ ಸೀಳಿ ನೆಲ ಮುಟ್ಟುವುದಿಲ್ಲ ಎಂಬ ನಂಬಿಕೆಯಿತ್ತು.  ನಮ್ಮ ಹಿತ್ತಲಲ್ಲಿ ನಾಯಿ ಈಯ್ದರೆ ಆ ರಾತ್ರಿ ಕಾಡುಬೆಕ್ಕು, ಗುಳ್ಳೆನರಿ, ಚಿರತೆ ಭೆಟ್ಟಿ ಕೊಡುವುದು ಖಂಡಿತ.  ಒಂದು ಅದ್ಭುತ ರಾತ್ರಿಯಂತೂ ಕುಮಟೆಯಿಂದ ಬಸ್ಸಿನಲ್ಲಿ ಬರುವಾಗ ದೇವೀಮನೆ ಘಟ್ಟದಲ್ಲಿ ರಸ್ತೆಯ ಮೇಲೆಯೇ ಪಟ್ಟೆಯ ಹುಲಿ ಆರಾಮವಾಗಿ ಚಾಚಿರುವುದನ್ನು ಕಂಡ ನೆನಪಿದೆ.

ಆದರೆ ಶಿಕ್ಷಣ–ನೌಕರಿಗಳ ಶೋಧದಲ್ಲಿ ನಾನು ಕಾಡು ಬಿಟ್ಟೆ.  ಬೋಳಾಗಿ ಹೋಗುತ್ತಿರುವ ಆ ಕಾಡಿನ ಬಗ್ಗೆ, ನಾಶವಾಗಿ ಹೋದ ವನ್ಯಪ್ರಾಣಿ ಪ್ರಪಂಚದ ಬಗ್ಗೆ ಭಾವನಾವಿವಶ ನೆನಪುಗಳನ್ನಷ್ಟೇ ಉಳಿಸಿಕೊಂಡೆ.  ಅದೆಲ್ಲ ಅನಿವಾರ್ಯ ಎಂಬಂತೆ ಅದರಿಂದ ನಿರ್ಲಿಪ್ತನಾದೆ.

ಅದಕ್ಕಾಗಿಯೇ ನನಗೆ ಉಲ್ಲಾಸ ಕಾರಂತರೆಂದರೆ ಕೌತುಕ, ಅಭಿಮಾನ.  ಅವರೂ ಕಾಡಿನಲ್ಲಿ ಬೆಳೆದರು.  ಕಾಡುಬಿಟ್ಟು ಬೆಂಗಳೂರಿಗೆ ಬಂದು ಮೈಕೋ ಕಂಪನಿಯಲ್ಲಿ ಇಂಜಿನಿಯರ್ ಆದರು.  ಆದರೆ ಕಾಡಿನ ಜೊತೆಗಿನ ಪರ್ಲು ಹರಿಯಲಾಗದೆ, ನೌಕರಿ ತ್ಯಜಿಸಿ ಕಾಡಿಗೆ ಮರಳಿದರು.  ಅದನ್ನೇ ತಮ್ಮ ಕಾರ್ಯರಂಗವನ್ನಾಗಿ ಮಾಡಿಕೊಂಡರು.

ಉಲ್ಲಾಸ ಈ ಅರಣ್ಯಸೃಷ್ಟಿಯ ಬಗ್ಗೆ ಸುಂದರವಾಗಿ ಬರೆಯಬಲ್ಲರು.  ಅಲ್ಲಿ ಅನುಭವಿಸಿದ ಉತ್ಕಟ ಕ್ಷಣಗಳನ್ನು, ಆಹ್ಲಾದಕರ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಮರು ಸೃಷ್ಟಿಸಬಲ್ಲರು.

ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿ, ಅಜ್ಜಂಪುರ ಕೃಷ್ಣಸ್ವಾಮಿ, ಸಿ. ಎಚ್. ಬಸಪ್ಪನವರ್ ಮೊದಲಾದವರು ಪಕ್ಷಿ-ಪ್ರಾಣಿ, ಹೂ-ಸಸಿಗಳ ವಿಷಯ ಬರೆದು ಜನರಲ್ಲಿ ಪರಿಸರದ ಶ್ರೀಮಂತಿಕೆಯ ಬಗ್ಗೆ ಆಸಕ್ತಿ ಹುಟ್ಟಿಸುವ ಸ್ತುತ್ಯ ಕೆಲಸ ಮಾಡಿದ್ದಾರೆ.

ಆದರೆ, ಉಲ್ಲಾಸ ಕೇವಲ ಕವಿಗಳಲ್ಲ, ನಿರೀಕ್ಷಕರಲ್ಲ.  ದೂರದಿಂದ ನೋಡಿ ಆನಂದಪಟ್ಟು ಆ ಬಗ್ಗೆ ಬರೆದಿಡುವ ನಿಸರ್ಗಪ್ರೇಮಿಗಳಲ್ಲ.  ಅವರು ಪರಿಸರದ ಪೋಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ವಿಜ್ಞಾನಿಗಳು.  ನಿಸರ್ಗವನ್ನು ರೋಮಾಂಚಕವಾಗಿ ನೋಡುವ ಮನೋಭಾವದಲ್ಲಿ ಅಡಗಿರುವ ಅಪಾಯಗಳನ್ನೂ ಗುರುತಿಸಿದವರು.  ವನ್ಯಜೀವಿಗಳ ವಿಷಯದಲ್ಲಿ ಶಾಸ್ತ್ರೀಯ ಅಭ್ಯಾಸಮಾಡಿ ತಂತ್ರಜ್ಞರಾಗಿ ತರಬೇತಿ ಪಡೆದರೆ ಮಾತ್ರ ಅರ್ಥಪೂರ್ಣ ಸಾಧನೆ ಸಾಧ್ಯ ಎಂದು ಮನಗಂಡವರು.

‘ಹುಲಿರಾಯನ ಆಕಾಶವಾಣಿ’ ಅವರ ಅವಿಶ್ರಾಂತ ದುಡಿಮೆಯ ದಿನವಹಿಯಾಗಿದೆ.  ಒಬ್ಬ ಸಂವೇದನಾಶೀಲ ವ್ಯಕ್ತಿ ವೈಜ್ಞಾನಿಕ ವಸ್ತುನಿಷ್ಠತೆಯಿಂದ ಗ್ರಹಿಸಿರುವ ನಿಸರ್ಗ ಈ ಪುಸ್ತಕದ ವಿಷಯವಾಗಿರುವುದರಿಂದ ಇದನ್ನು ಒಮ್ಮೆ ಓದಲಿಕ್ಕೆಂದು ಎತ್ತಿಕೊಂಡರೆ ಕೆಳಗಿಡಲಿಕ್ಕಾಗದಂತೆ ಮಂತ್ರಮುಗ್ಧಗೊಳಿಸಿಬಿಡುತ್ತದೆ.

ಕಾಡನ್ನು ಉಳಿಸಬೇಕು.  ಅದರಲ್ಲಿ ತುಂಬಿ ತುಳುಕುವ ಜೀವರಾಶಿ ನಾಶವಾಗಿ ಹೋಗಕೂಡದು.  ಅದೇ ರೀತಿ, ಕಾಡಿನ ಜೀವನ ನಡೆಸುವ ಬುಡಕಟ್ಟಿನವರಿಗೂ ಅವರಿಗೆ ಹಿತವೆನಿಸುವ ಸಾಧನ-ಸೌಕರ್ಯಗಳು ದೊರಕಬೇಕು ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರಾದ್ದರಿಂದ ಇದೊಂದು ವಿಜ್ಞಾನಿಯ ಸರಳ ಆತ್ಮಕತೆಯಾಗಬಹುದಾಗಿತ್ತು.  ಆದರ ಬದಲಾಗಿ ಇದು ಭ್ರಷ್ಟಾಚಾರ, ಹಿಂಸೆ, ಕಳ್ಳಸಾಗಾಣಿಕೆ, ವಿಧ್ವಂಸಕಗಳ ದಾಖಲೆಯಾಗಿರುವುದು ನಮ್ಮ ಇಂದಿನ ವ್ಯವಸ್ಥೆಯ ದುರಂತಕ್ಕೆ ಸಾಕ್ಷಿಯಾಗಿದೆ.

ಹುಲಿ-ಚಿರತೆಗಳಂಥ ಮಾರ್ಜಾಲಗಳಿಗೆ ರೇಡಿಯೋ ಕಾಲರ್ ತೊಡಿಸಿ ಅವುಗಳ ಚಲನವಲನ, ಅವುಗಳ ಸಂಖ್ಯೆಯಲ್ಲಾಗುವ ಏರಿಳಿತ ಇವುಗಳ ಮೇಲೆ ಪಾಳತಿ ಇಡುವುದೇ ತರುಣ ಉಲ್ಲಾಸ ಕಾರಂತರ ಗುರಿಯಾಗಿತ್ತು.  ಆದರೆ ತನ್ನ ಗುರಿಯನ್ನು ಏಕಾಗ್ರತೆಯಿಂದ ಸಾಧಿಸುವ ಬದಲಾಗಿ ಮರಗಳ್ಳರು, ಕಳ್ಳ ಬೇಟೆಗಾರರು, ಭ್ರಷ್ಟ ಅಥವಾ ಅಜ್ಞಾನಿ ಅಧಿಕಾರಿಗಳು, ವಿಷಯದ ಬುಡ-ತುದಿ ತಿಳಿಯದೆ ಆದೇಶ ಮಾಡುವ ರಾಜಕಾರಣಿಗಳು, ಉದ್ರೇಕದಾಯಕ ವರದಿಗಳನ್ನು ಅರಸಿ ಬಂದ ಪತ್ರಕರ್ತರು ಇವರೆಲ್ಲರೊಡನೆ ಸೆಣಸಾಡಿ ಸೋಲಿನ ಅಂಚನ್ನು ತಲುಪುವ ಹೃದಯವಿದ್ರಾವಕ ಕಥಾನಕ ಇಲ್ಲಿದೆ.  ಅವರಿಗೆ ಆತ್ಮೀಯರಾದ ಚಿಣ್ಣಪ್ಪನ ಮನೆಗೆ ಬೆಂಕಿಯಿಡಲಾಗುತ್ತದೆ.  ಚಿಣ್ಣಪ್ಪನನ್ನು ಕೊಂದೇ ತೀರುತ್ತೇವೆ ಎಂದು ಆಕ್ರೋಶ ಮಾಡುವ ಪುಂಡರಿಗೆ ಪ್ರತಿಷ್ಠಿತ ಕಾಫಿ ತೋಟದೊಡೆಯರ ಬೆಂಬಲ ಸಿಗುತ್ತದೆ.  ನಾಗರಹೊಳೆಯಲ್ಲಿ ಎರಡು ಸಾವಿರ ಹೆಕ್ಟೇರ್ ಕಾಡು ತನ್ನ ಜೀವರಾಶಿ ಸಮೇತ ಬೆಂಕಿಗೆ ಬಲಿ ಬೀಳುತ್ತದೆ.  ಏನೂ ಎಗ್ಗಿಲ್ಲದೆ ಇಷ್ಟು ಸಲೀಸಾಗಿ ಪರಿಸರದ ವಿಧ್ವಂಸ ಮಾಡಬಲ್ಲ ಈ ಎಲ್ಲ ಶಕ್ತಿಗಳ ದಾರುಣ ಚಿತ್ರ ಎದೆ ಕಲಕುತ್ತದೆ.

ಆದರೂ ಉಲ್ಲಾಸ ಎಡೆಗೆಡಲಿಲ್ಲ.  ಮತ್ತೆ ಮತ್ತೆ ನಿಲುಗಡೆಗೆ ಬಂದ ಸಂಶೋಧನೆಯನ್ನು ಮತ್ತೆ ಮುಂದುವರೆಸಿದರು.  (ಅವರ ನಿಸರ್ಗಪ್ರಿಯತೆ, ವಿಜ್ಞಾನ ನಿಷ್ಠೆಯಂತೆ ಅವರ ಈ ಮೊಂಡುತನವೂ ಅವರ ತಂದೆ ಶಿವರಾಮ ಕಾರಂತರನ್ನು  ನೆನಪಿಗೆ ತಂದುಕೊಡುತ್ತದೆ.)  ದಿಲ್ಲಿಯವರೆಗೆ ಹೋಗಿ ರಾಜಕಾರಣಿಗಳ ಮನವೊಲಿಸಿದರು.  ಅವರು ಹುಲಿಗಣತಿಗಾಗಿ ರೂಪಿಸಿರುವ ‘ಕ್ಯಾಮರಾ ಟ್ರ್ಯಾಪ್ ಸೆರೆಹಿಡಿತ-ಮರುಹಿಡಿತ ವಿಧಾನ’ ಉಲ್ಲಾಸರಿಗೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿತು.  ಇಂದು ಈ ವಿಧಾನಕ್ಕೆ ಭಾರತದ ಬಹುತೇಕ ಕಾಡುಪ್ರಾಣಿಗಳ ಗಣತಿಯಲ್ಲಿ ಸ್ವಾಗತ ದೊರೆತಿದೆ.

ನಾಗರಹೊಳೆಯ ಬುಡಕಟ್ಟು ಜನಾಂಗದ ಪುನರ್ವಸತಿಯನ್ನು ಕುರಿತು ಇಲ್ಲಿ ಬರುವ ಪುಟಗಳಂತೂ ಭಾರತದ ಮೂಲೆ ಮೂಲೆಗಳಲ್ಲಿ ಎದುರಿಸಬೇಕಾಗಿಬರುವ ಪುನರ್ವಸತಿಯ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದಕ್ಕೆ ಕೈಗನ್ನಡಿಯಾಗಿದೆ.

ಹೀಗೆ, ‘ಹುಲಿರಾಯನ ಆಕಾಶವಾಣಿ’ ಹಲವು ರೀತಿಗಳಿಂದ ಧ್ವನಿಪೂರ್ಣವಾಗಿದೆ.  ಕನ್ನಡದಲ್ಲಂತೂ ಇಂಥ ಇನ್ನೊಂದು ಕಥಾನಕ ಬಂದಿಲ್ಲ.  ಇದಕ್ಕೆ ಮುನ್ನುಡಿ ಬರೆಯಬೇಕು ಎಂದು ಉಲ್ಲಾಸ ನನಗೆ ಕೇಳಿದ್ದು ನನಗೆ ಸಂದಿರುವ ಬಹು ದೊಡ್ಡ ಗೌರವ ಎಂದು ನಾನು ಎಣಿಸುತ್ತೇನೆ.

---

ಈ ಮನೋಜ್ಞ ಪುಸ್ತಕದಲ್ಲಿನ ಕಥಾನಕ ಆಸ್ವಾದ ಮತ್ತು ತಿಳುವಳಿಕೆ ಎಲ್ಲರಿಗೂ ದೊರಕಲಿ ಎಂಬುದು ನಮ್ಮ ಆಶಯ.  ಹಲವಾರು ಮರುಮುದ್ರಣಗಳನ್ನು ಕಂಡು ಪ್ರಸಿದ್ಧಿ ಪಡೆದಿರುವ ಈ ಪುಸ್ತಕದ ಪ್ರಕಾಶಕರು ನವಕರ್ನಾಟಕ ಪ್ರಕಾಶನ.

Tag: Hulirayana Akashavani, T. S. Gopal, Ullas Karanth

ಕಾಮೆಂಟ್‌ಗಳಿಲ್ಲ: