ಸೋಮವಾರ, ಆಗಸ್ಟ್ 26, 2013

ಕೆ. ಜಿ. ಕುಂದಣಗಾರ

ಕೆ. ಜಿ. ಕುಂದಣಗಾರ

20ನೆಯ ಶತಮಾನದ ಆರಂಭಕಾಲೀನ ಪಂಡಿತ ಪ್ರಮುಖರಲ್ಲಿ ಪ್ರೊ.ಕೆ.ಜಿ. ಕುಂದಣಗಾರ ಅವರದು  ಬಹು ದೊಡ್ಡ ಹೆಸರು. ಶ್ರೇಷ್ಠ ಸಂಶೋಧಕರಾಗಿ, ವಿಮರ್ಶಕರಾಗಿ, ಸೃಜನಶೀಲ ಬರಹಗಾರರಾಗಿ, ಹರಟೆ-ಪ್ರಬಂಧಕಾರರಾಗಿ ಅವರು ಮಾಡಿದ ಕಾರ್ಯ ಬಹು ಮೌಲಿಕವಾದುದು. ಉತ್ತರ ಕರ್ನಾಟಕದ ಮೊದಲ ಕನ್ನಡ ಎಂ.ಎ. ಪದವೀಧರ, ಮೊದಲ ಕನ್ನಡ ಪ್ರಾಧ್ಯಾಪಕ, ಮೊದಲ ಕನ್ನಡ ಪಿಎಚ್‌.ಡಿ. ಪದವಿಗಳ ಮಾರ್ಗದರ್ಶಿ ಹೀಗೆ ಹಲವು ಹತ್ತು ಪ್ರಥಮಗಳಲ್ಲಿ ಪ್ರಥಮರಾಗಿ, ಗುರುಗಳ  ಗುರುವಾಗಿ ಕನ್ನಡವನ್ನು ಕಟ್ಟಿ ಬೆಳೆಸಿದವರು ಪ್ರೊ.ಕುಂದಣಗಾರ ಅವರು. ಅಸಂಖ್ಯಾತ ಕನ್ನಡ ವಿದ್ಯಾರ್ಥಿಗಳ, ಅಧ್ಯಾಪಕರ ಬಳಗವನ್ನು ನಿರ್ಮಿಸಿ, ಕನ್ನಡ ಪರಂಪರೆಯ ನಿರ್ಮಾತೃವೆನಿಸಿದರು.

ಇಂಥ ಒಬ್ಬ ಆದರ್ಶವ್ಯಕ್ತಿ ನಡೆದು ಬಂದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಅವರು ಜನಿಸಿದ್ದು ಗೋಕಾಕ ತಾಲೂಕಿನ ಕೌಜಲಗಿ ಎಂಬ ಚಿಕ್ಕಗ್ರಾಮದಲ್ಲಿ. ಪತ್ತಾರರ ಮನೆತನದ ಗಿರಿಯಪ್ಪ-ಶಾಕಾಂಬರಿ ದಂಪತಿಗಳ ಆರುಜನ ಮಕ್ಕಳಲ್ಲಿ ಶ್ರೀ ಕಲ್ಲಪ್ಪನವರು ಆಗಸ್ಟ್  14, 1895ರಂದು ಜನಿಸಿದರು. ಇವರು ಹುಟ್ಟಿದ ಎರಡೇ ವರ್ಷಕ್ಕೆ ತಂದೆ, ಅದಾದ ಮರುವರ್ಷವೇ ತಾಯಿ ಕಣ್ಮುಚ್ಚಿದರು. ಸ್ವಲ್ಪೇ ದಿನದಲ್ಲಿ ಸಹೋದರ-ಸಹೋದರಿಯರನ್ನು ಕಳೆದುಕೊಂಡು ಕಷ್ಟಗಳ ಸರಮಾಲೆಯನ್ನು ಎದುರಿಸಿದರು.

ಕಲ್ಲಪ್ಪ ಆರೇಳು ವರ್ಷದವನಾಗುತ್ತಲೆ ವಿದ್ಯಾಭ್ಯಾಸವನ್ನು ಕೈಗೊಳ್ಳುವಂತಹ ಪರಿಸರ ಇರದೇ ಇದ್ದರೂ, ಶಾಲೆಯ ಅಲ್ಪ ವೆಚ್ಚವನ್ನು ಭರಿಸಲಾರದಂತಹ ದುರ್ಧರ ಪರಿಸ್ಥಿತಿ ಇದ್ದರೂ ಕಕ್ಕನಾದ ನಿಂಗಪ್ಪನ ಆಶ್ರಯದಲ್ಲಿ ಕೌಜಲಗಿಯಲ್ಲಿ ಪ್ರಾಥಮಿಕ ಶಾಲೆಗೆ ಹೋಗತೊಡಗಿದನು. ನಿಂಗಪ್ಪ ಆ ಭಾಗದ ಪ್ರಸಿದ್ಧ ಪ್ರವಚನಕಾರನಾಗಿದ್ದನು. ಊರೂರು ಅಲೆದು, ಪುರಾಣ-ಕೀರ್ತನೆ ಹೇಳಿ, ಜನ ಕೊಟ್ಟುದರಲ್ಲಿಯೇ ಉಪಜೀವನ ಸಾಗಿಸುತ್ತಿದ್ದನು. ಬಾಲಕ ಕಲ್ಲಪ್ಪ, ಚಿಕ್ಕಪ್ಪನ ಬೆನ್ನು ಹತ್ತಿ ಅವರು ಹೇಳುತ್ತಿದ್ದ ರಾಮಾಯಣ-ಮಹಾಭಾರತ, ಹರಿಶ್ಚಂದ್ರಕಾವ್ಯ, ಪ್ರಭುಲಿಂಗಲೀಲೆ ಮೊದಲದ ಕನ್ನಡ ಕೃತಿಗಳಲ್ಲಿ ಆಸಕ್ತಿ ಬೆಳೆಸಿಕೊಂಡನು. ಪುರಾಣ ಪ್ರವಚನಗಳಿಗೆ ಬೇಕಾಗುವ ಸುಶ್ರಾವ್ಯ ಸಂಗೀತದ ರಾಗ-ಲಯಗಳನ್ನು ಕರಗತ ಮಾಡಿಕೊಂಡನು. ಅಸಾಧಾರಣ ಜ್ಞಾಪಕಶಕ್ತಿಯುಳ್ಳ ಕಲ್ಲಪ್ಪ ಯಾವ ಕಾವ್ಯವನ್ನು ಕೊಟ್ಟರೂ ಸರಾಗವಾಗಿ ಹಾಡಿ ಅರ್ಥೈಸುವಷ್ಟು ಪ್ರಾವಿಣ್ಯವನ್ನು ಪಡೆದನು.

ಪ್ರಾಥಮಿಕ ಶಾಲೆ ಮುಗಿಯುತ್ತಲೆ ಮನೆತನದ ಪತ್ತಾರಿಕೆ ಉದ್ಯೋಗದಲ್ಲಿ ಮುಂದುವರಿಯಬೇಕೆಂಧು ಆಪ್ತೇಷ್ಟರು ಒತ್ತಾಯಿಸತೊಡಗಿದರು. ಆದರೆ ಬಾಲಕ ಕಲ್ಲಪ್ಪ ಆಂಗ್ಲ ವಿದ್ಯಾಭ್ಯಾಸವನ್ನು ಕೈಗೊಳ್ಳಬೇಕೆಂದು ನಿರ್ಧರಿಸಿದ. ಬೆಳೆಯ ಸಿರಿಯನ್ನು ಮೊಳಕೆಯಲ್ಲಿಯೇ ಕಂಡ ವಾಮನರಾವ ಮಾಸ್ತರ ಮತ್ತು ವೆಂಕಟರಾವ ಕುಲಕರ್ಣಿ ಅವರ ಪ್ರೇರಣೆಯಿಂದ ಮಾಧ್ಯಮಿಕ ವಿದ್ಯಾಭ್ಯಾಸಕ್ಕಾಗಿ ಬೆಳಗಾವಿ ಸೇರಿದನು. ಸ್ವಾವಲಂಬನ ಜೀವನದ ಪಾಠ ಅವರಿಗೆ ಈ ಅವಧಿಯಲ್ಲಾಯಿತು. ಮುಂದಿನ ಹೋರಾಟದ ಬದುಕಿಗೆ ಇದು ಅಡಿಗಲ್ಲಾಯಿತು. ಅಂದಿನಿಂದ ಜೀವನದ ಉಸಿರಿರುವವರೆಗೆ ಸ್ವಾವಲಂಬನೆ, ಸ್ವಾಭಿಮಾನ, ಕರ್ತವ್ಯನಿಷ್ಠೆ, ಸತ್ಯ, ಪ್ರಾಮಾಣಿಕತೆ ಮೊದಲಾದ ಮೌಲ್ಯಗಳನ್ನು ರೂಢಿಸಿಕೊಂಡು ಚಾಚೂತಪ್ಪದೆ ಅವನ್ನು ಪಾಲಿಸಿಕೊಂಡು ಬಂದರು.

ಬೆಳಗಾವಿಯಲ್ಲಿಯ ವೆಚ್ಚವನ್ನು ಭರಿಸಲು ಬಿಡುವಿನ ವೇಳೆಯಲ್ಲಿ ಅಲ್ಲಿಯ ಮೇಲುಗಿರಿ ಶಂಕರಪ್ಪನವರ ಸರಾಫಿ ಅಂಗಡಿಯಲ್ಲಿ ಲೆಕ್ಕ ಬರೆದು ತಿಂಗಳಿಗೆ ನಾಲ್ಕು ರೂಪಾಯಿ ಸಂಬಳ ಪಡೆದು, ಕಷ್ಟದಿಂದ ತುಂಬಿ ತುಳುಕುತ್ತಿದ್ದ ವಿದ್ಯಾರ್ಥಿ ಜೀವನವನ್ನು ಸಾಗಿಸಿದರು. ಇದೂ ದುಸ್ತರವಾದಾಗ ಕಾಣದ ಕೈಯೊಂದು ಇವರನ್ನು ಕೈಹಿಡಿದು ನಡೆಸಲು ಮುಂದೆ ಬಂದಿತು. ಇವರ ದೂರದ ಸಂಬಂಧಿ ಭೀಮಪ್ಪ ಕೌಜಲಗಿ ಅವರು ಧಾರವಾಡದಲ್ಲಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಅವರು ಕಲ್ಲಪ್ಪನ ಶಿಕ್ಷಣದ ಹೊರೆ ಹೊರಲು, ಕುಂದಣಗಾರ ಅವರು ಧಾರವಾಡದ ವಿಕ್ಟೋರಿಯಾ ಹಾಯಸ್ಕೂಲಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಕುಲಕಸುಬನ್ನು ಕಲಿತುಕೊಂಡಿದ್ದ ಕಲ್ಲಪ್ಪ, ಶಾಲೆ ಮುಗಿಸಿಕೊಂಡು ಮನೆಗೆ ಬಂದೊಡನೆ ಅದರಲ್ಲಿ ತೊಡಗಿ ಭೀಮಪ್ಪನ ಭಾರವನ್ನು ಇಳಿಸತೊಡಗಿದನು. ಸದಾ ಲವಲವಿಕೆಯಿಂದ ಇರುತ್ತಿದ್ದ ಕಲ್ಲಪ್ಪನನ್ನು ನೋಡಿ ಭೀಮಪ್ಪ ದಂಪತಿಗಳಿಗೆ ಅತೀವ ಆನಂದವಾಗುತ್ತಿತ್ತು. ಅವರು ಆತನ ಮೇಲೆ ವಿಶೇಷ ಮಮತೆ ಹೊಂದಿ, ಸ್ವಂತ ಮಗನಂತೆ ಸಾಕಿ ಸಲಹಿದರು. ಆತ ಆ ಮನೆಗೆ ಕಾಲಿಟ್ಟ ಗುಣವೋ ಎಂಬಂತೆ ಸ್ವಲ್ಪೇ ದಿನಗಳಲ್ಲಿ ಆ ದಂಪತಿಗಳು ಎರಡು ಗಂಡು ಮಕ್ಕಳನ್ನು ಪಡೆದು, ಮನೆ ತುಂಬಿತು. ಅಲ್ಲಿಂದ ಕಲ್ಲಪ್ಪ ಮ್ಯಾಟ್ರಿಕ್ಯುಲೇಶನ್‌ ಪಾಸಾಗಲು ಅದು ಆ ಶತಮಾನದ ಪ್ರಥಮ ದಶಕದಲ್ಲಿ ಹಿಂದುಳಿದ ವರ್ಗದ ಒಬ್ಬ ವಿದ್ಯಾರ್ಥಿ ಮಾಡಿದ ದಾಖಲೆಯೆನ್ನಿಸುವ ಘಟನೆಯಾಯಿತು.

ಕಲ್ಲಪ್ಪನ ವಿದ್ಯೆಯ ದಾಹ ಅಷ್ಟಕ್ಕೇ ನಿಲ್ಲಲಿಲ್ಲ. ಕಾಲೇಜು ಶಿಕ್ಷಣ ಪಡೆಯಬೇಕೆಂದು ನಿರ್ಧರಿಸಿ ಪುಣೆಯ ಫರ್ಗ್ಯೂಸನ್‌ ಕಾಲೇಜು ಸೇರಿದ.  ಬಡತನದ ಬವಣೆ, ಅನಾನುಕೂಲ ಪರಿಸ್ಥಿತಿ ಮತ್ತು ಅನಾರೋಗ್ಯದ ಕಾರಣವಾಗಿ ಎರಡು ವರ್ಷದಲ್ಲಿ ಮುಗಿಸಬೇಕಿದ್ದ ಇಂಟರ್ ಮೀಡಿಯೇಟನ್ನು ನಾಲ್ಕು ವರ್ಷದಲ್ಲಿ ಮುಗಿಸಿದ (1913).  ಮತ್ತೆ ಮುಂದಿನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವ ಚಿಂತೆ ಕಾಡತೊಡಗಿತು. ಅಷ್ಟರಲ್ಲಿ ಆಪ್ತರ ಒತ್ತಾಯಕ್ಕೆ ಮಣಿಕದು ಕಮಲಾ ಬಾಯಿಯವರೊಂದಿಗೆ ವಿವಾಹವಾಯಿತು. ಆ ಸಾಧ್ವಿಶಿರೋಮಣಿಯ ಕಾಲ್ಗುಣದಿಂದ ಕಲ್ಲಪ್ಪನ ಬಾಳಿನಲ್ಲಿ ಅದೃಷ್ಟದ ರೇಖೆ ಮೂಡತೊಡಗಿತು. ನಿರುದ್ಯೋಗಿಯಾಗಿದ್ದ ಕಲ್ಲಪ್ಪ 1916ರಲ್ಲಿ ಕೊಲ್ಲಾಪುರದ ರಾಜಾರಾಮ್‌ ಹೈಸ್ಕೂಲಿಗೆ ಹೆಡ್ಮಾಸ್ತರನಾಗಿ ನೇಮಕಗೊಂಡನು. 1918ರಲ್ಲಿ ಗೋಕಾಕಿನ ಆಂಗ್ಲೋ-ವರ್ನ್ಯಾಕ್ಯೂಲರ್ ಹೈಸ್ಕೂಲಿಗೆ ವಿಜ್ಞಾನ ಶಿಕ್ಷಕನಾಗಿ ನೇಮಕಗೊಂಡು ಅಲ್ಲಿದ್ದುಕೊಂಡೇ ಇಂಟರ್ ಮೀಡಿಯೇಟ್‌ ಪರೀಕ್ಷೆ ಮುಗಿಸಿದ. ಆರು ವರ್ಷಗಳ ತರುವಾಯ ಬಿ.ಎ. ಪದವಿಯನ್ನೂ ಗಳಿಸಿದನು (1919). ಇದು ಆತನ ಓದಿನ ಬಗೆಗಿನ ಜಿಗುಟುತನ ಮತ್ತು ಛಲ ಮನೋಭಾವವನ್ನು ತೋರುತ್ತದೆ.

ಅಷ್ಟಕ್ಕೇ ಆತನ ಜ್ಞಾನದ ತೃಷೆ ಹಿಂಗಲಿಲ್ಲ. ಬಿ.ಎ. ವರೆಗೆ ರಸಾಯನಶಾಸ್ತ್ರವನ್ನು ಅಭ್ಯಾಸ ಮಾಡಿದ್ದರೂ, ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದುಕೊಳ್ಳಬೇಕು ಎಂಬ ನಿರ್ಧಾರವನ್ನು ಮಾಡಿದನು. ಆದರೆ ಅಂದು ಮುಂಬಯಿಕರ್ನಾಟಕದಲ್ಲಿ ಕನ್ನಡದ ಸ್ಥಿತಿ ತೀರ ಶೋಚನೀಯವಾಗಿತ್ತು. ಮರಾಠಿ ಪ್ರಭಾವದ ಈ ಪ್ರದೇಶದಲ್ಲಿ ಕನ್ನಡವನ್ನೇ ಪ್ರಧಾನ ವಿಷಯವನ್ನಾಗಿ ಅಧ್ಯಯನ ಮಾಡಿದವರು ಯಾರೂ ಇರಲಿಲ್ಲ. ಅಲ್ಲದೆ ವಿಶ್ವವಿದ್ಯಾಲಯದಲ್ಲಿ ಈಗಿನಂತೆ ಎಂ.ಎ. ಕನ್ನಡ ವರ್ಗಕ್ಕಾಗಿ ಪ್ರತ್ಯೇಕ ಪಾಠಪ್ರವಚನದ ವ್ಯವಸ್ಥೆಯೂ ಇರಲಿಲ್ಲ. ಕಲಿಸುವ ಅಧಿಕೃತ ಅಧ್ಯಾಪಕರೂ ಇರಲಿಲ್ಲ. ಕನ್ನಡ ಗ್ರಂಥಗಳು ದೊರೆಯುವದಂತೂ ದೂರವೇ ಉಳಿಯಿತು.

ಆದರೆ ಪ್ರಯತ್ನವಿದ್ದಲ್ಲಿ ಫಲವಿದ್ದೇ ಇರುತ್ತದೆ.  ಕುಂದಣಗಾರರು ನಿಷ್ಠೆ, ಪರಿಶ್ರಮ, ಜಿಗುಟುತನಗಳಿಂದ ಕಷ್ಟಪಟ್ಟು ಕನ್ನಡ ಇಂಗ್ಲೀಷ ಗ್ರಂಥಗಳನ್ನು ಕೂಡಿಸಿದರು; ಸ್ವಂತ ಅಭ್ಯಾಸಕ್ಕೆ ತೊಡಗಿದರು. ತಮಗೆ ಏನಾದರೂ ಸಮಸ್ಯೆಗಳು ಎದುರಾದರೆ ಕುಂದಣಗಾರರು ಧಾರವಾಡಕ್ಕೆ ಬಂದು ಪಂ.  ಮ. ಪ್ರ. ಪೂಜಾರ್ ಮತ್ತು ಪಂ ಮೂರ್ತಾಚಾರ್ ಕಟ್ಟಿ ಅವರನ್ನು ಕಂಡು ಚರ್ಚಿಸುತ್ತಿದ್ದರು. ಬೆಳಗಾವಿಗೆ ಹೋಗಿ ಅಲ್ಲಿಯ ಜೈನ ವಿದ್ವಾಂಸರಾದ ಅಣ್ಣಾರಾವ್‌ ಚೌಗಲೆಯವರಿಂದ ಜೈನದರ್ಶನವನ್ನೂ, ದೇಶಪಾಂಡೆ ಬಾಜೀಗರಶಾಸ್ತ್ರೀ ಅವರಿಂದ ಸಂಸ್ಕೃತವನ್ನೂ ಹೇಳಿಸಿಕೊಳ್ಳುತ್ತಿದ್ದರು. ಹೀಗೆ ಕಷ್ಟಪಟ್ಟು ಓದಿ 1925ರಲ್ಲಿ ಅಂದರೆ ತಮ್ಮ 30ನೆಯ ವಯಸ್ಸಿನಲ್ಲಿ ಎಂ.ಎ. ಪದವಿಯನ್ನು ಗಳಿಸಿದರು. ಕನ್ನಡವನ್ನು ಪ್ರಧಾನ ವಿಷಯವನ್ನಾಗಿ ತೆಗೆದುಕೊಂಡು ಎಂ.ಎ. ಪದವಿ ಪಡೆದವರಲ್ಲಿ ಪ್ರಥಮರೆನ್ನಿಸಿದರು.

ಆಗ ಉತ್ತರಕರ್ನಾಟಕದಲ್ಲಿ ಇದ್ದ ಒಂದೇ ಒಂದು ಕಾಲೇಜು ಕರ್ನಾಟಕ ಕಾಲೇಜು. ಅದು 1917ರಲ್ಲಿ ಪ್ರಾರಂಭವಾಗಿದ್ದರೂ ಅಲ್ಲಿ ಕನ್ನಡವನ್ನು ಕಲಿಸಲು 1925ರ ವರೆಗೆ ಕನ್ನಡ ಪ್ರಾಧ್ಯಾಪಕರಾರೂ ಇರಲಿಲ್ಲ.  ಕುಂದಣಗಾರ ಅವರು 1925ರಲ್ಲಿ ಕರ್ನಾಟಕ ಕಾಲೇಜಿಗೆ ಮೊದಲ ಪ್ರಾಧ್ಯಾಪಕರಾಗಿ ಬಂದರು. ಆಗ ಮೈಸೂರು ಭಾಗದಲ್ಲಿ ಪ್ರೊ.ಟಿ.ಎಸ್‌. ವೆಂಕಣ್ಣಯ್ಯನವರು ಮಾತ್ರ ಕನ್ನಡದ ಪ್ರಾಧ್ಯಾಪಕರಾಗಿದ್ದರು. ಪ್ರೊ. ಕುಂದಣಗಾರ ಅವರು ಕರ್ನಾಟಕ ಕಾಲೇಜಿಗೆ ಬಂದ ಮೇಲೆ ಅಲ್ಲಿಯ ವಾತಾವರಣವೇ ಬದಲಾಯಿತು. ವಿದ್ಯಾರ್ಥಿಗಳೆಲ್ಲ ಕ್ರಿಯಾಶೀಲರಾದರು. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತೊಡಗಿದರು ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನುಂಟುಮಾಡಿದುದಲ್ಲದೆ ತಾವೂ ನಿರಂತರ ಚಟುವಟಿಕೆಯಲ್ಲಿ ತೊಡಗಿ, ತಮ್ಮ ಆಸಕ್ತಿಯ ಪ್ರಾಚೀನ ಐತಿಹಾಸಿಕ ದಾಖಲೆಗಳೆನ್ನಿಸಿದ ಶಿಲಾಶಾಸನ, ತಾಮ್ರಪಟ, ತಾಳೆಗರಿ, ಕಡತ ಮೊದಲಾದ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿ ಅವನ್ನೆಲ್ಲ ಕರ್ನಾಟಕ ಕಾಲೇಜಿನಲ್ಲಿ ಶೇಖರಿಸಿದರು; ಅವುಗಳ ವ್ಯಾಸಂಗವನ್ನು ಪ್ರಚುರಗೊಳಿಸಿದರು. ಬೇರೆ ಬೇರೆ ಪ್ರದೇಶಗಳ ವಿದ್ವಾಂಸರು ಅವುಗಳ ಅಧ್ಯಯನಕ್ಕಾಗಿ ಕರ್ನಾಟಕ ಕಾಲೇಜಿಗೆ ಬರತೊಡಗಿದರು. ಕದಂಬ ಮನೆತನದ ಬಗ್ಗೆ ಸಂಶೋಧನೆಗೆ ತೊಡಗಿದ್ದ ಇತಿಹಾಸ ವಿದ್ವಾಂಸ ಪ್ರೊ.ಬಿ. ಎ. ಮೊರಾಯಿಸ್‌ ಅವರು ಕುಂದಣಗಾರ ಅವರ ಈ ಸಂಗ್ರಹದ ಲಾಭ ಪಡೆದುಕೊಂಡುದನ್ನು ಕೃತಜ್ಞತಾ ಭಾವದಿಂದ ಸ್ಮರಿಸಿದ್ದಾರೆ.

ಪ್ರೊ. ಕುಂದಣಗಾರ ಅವರ ವಿದ್ವತ್ತು, ಸರಳತೆ, ಕರ್ತವ್ಯನಿಷ್ಠೆ ಪ್ರಾಮಾಣಿಕ ಸೇವೆಗಳ ದಟ್ಟ ಪರಿಚಯವಿದ್ದ ಕೊಲ್ಲಾಪುರ ಸಂಸ್ಥಾನದ ಅಂದಿನ ದಿವಾನರಾಗಿದ್ದ ಅಣ್ಣಾಸಾಹೇಬ ಲಠ್ಠೆ ಅವರು ತಮ್ಮ ದರ್ಬಾರಿನ ಅಧೀನದಲ್ಲಿದ್ದ ರಾಜಾರಾಮ ಕಾಲೇಜಿಗೆ ಇವರನ್ನು ಕರೆಯಿಸಿಕೊಂಡರು. ಸಂಸ್ಥಾನದ ಅಧಿಪತಿಗಳಾಗಿದ್ದ ಛತ್ರಪತಿಮಹಾರಾಜರೂ ಮೇಲು-ಕೀಳು, ಮರಾಠಿಗ-ಕನ್ನಡಿಗ, ಬಡವ-ಬಲ್ಲಿದ ಎಂಬ ಭೇದ-ಭಾವ ಹೊಂದಿರದವರಾಗಿ ಕುಂದಣಗಾರ ಅವರನ್ನು ಗೌರವಭಾವದಿಂದ ಕಂಡರು. ಹೀಗಾಗಿ ಪ್ರೊ. ಕುಂದಣಗಾರ ಅವರು ಅಲ್ಲಿಯ ಪ್ರಥಮ ಕನ್ನಡ ಪ್ರಾಧ್ಯಾಪಕರಾದರು.

ಪ್ರೊ. ಕುಂದಣಗಾರ ಅವರು ರಾಜಾರಾಮ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ, ಅಲ್ಲಿ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇದ್ದಿತು. ಕುಂದಣಗಾರ ಅವರ ವಿದ್ವತ್ತು, ಸರಳತೆ, ವಿದ್ಯಾರ್ಥಿಗಳ ಮೇಲಿನ ವಾತ್ಸಲ್ಯ ಇವುಗಳಿಂದ ಆಕರ್ಷಿತರಾಗಿ ಅನೇಕ ವಿದ್ಯಾರ್ಥಿಗಳು ಆ ವಿಷಯವನ್ನಾಯ್ದುಕ್ಕೊಳತೊಡಗಿದರು. ಆ ವಿದ್ಯಾರ್ಥಿಗಳಿಗೆ ಕುಂದಣಗಾರ ಅವರು ಕೇವಲ ಪಾಠಬೋಧಕರು ಮಾತ್ರವಾಗಲಿಲ್ಲ; ಅವರಿಗೆ ಪಾಲಕರಾದರು, ಮಾರ್ಗದರ್ಶಿಯಾದರು. ನಿಷ್ಠೆಯಿಂದ, ಪ್ರೀತಿಯಿಂದ ಅವರು ಪಾಠ ಹೇಳುತ್ತಿದ್ದರು. ಫೀ ಹಣ ರಿಯಾಯಿತಿ, ಕಾಲೇಜಿನ ಗ್ರಂಥಾಲಯದಿಂದ ಗ್ರಂಥಗಳ ಎರವಲು ಇತ್ಯಾದಿಗಳ ಬಗ್ಗೆ ನೆರವಾಗುತ್ತಿದ್ದರು. ಕಾಲೇಜಿನ ಹೊರಗೆ ವಿದ್ಯಾರ್ಥಿಗಳ ಊಟ, ವಸತಿ, ಇತ್ಯಾದಿ ಸೌಕರ್ಯಗಳ ಬಗೆಗೂ ಗಮನ ಕೊಡುತ್ತಿದ್ದರು. ಈ ಎಲ್ಲ ಕಾರಣಗಳಿಂದಾಗಿ ಕರ್ನಾಟಕ ಪ್ರದೇಶದ ಹಿಂದುಳಿದ ವರ್ಗದ ಬಡವಿದ್ಯಾರ್ಥಿಗಳು ರಾಜಾರಾಮ ಕಾಲೇಜಿಗೆ ಧಾವಿಸತೊಡಗಿದರು.

ದಿವಾನ್‌ ಬಹಾದ್ದೂರ ಲಠ್ಠೆ ಅವರ ಕನ್ನಡ ಅಭಿಮಾನದಿಂದಾಗಿ ಮತ್ತು ಕುಂದಣಗಾರ ಅವರ ವಿಶೇಷ ಪ್ರಯತ್ನದಿಂದಾಗಿ ರಾಜಾರಾಮ ಕಾಲೇಜಿನಲ್ಲಿ ಹೊಸದಾಗಿ ಪ್ರತ್ಯೇಕವಾಗಿ ಕನ್ನಡ ವಿಭಾಗವನ್ನು ತೆರೆಯಲಾಯಿತು. ಆಗ ಪೊ. ಕುಂದಣಗಾರ ಅವರು ಎಂ.ಎ. ವಿದ್ಯಾರ್ಥಿಗಳಿಗೆ ಕನ್ನಡ ವಿಷಯವನ್ನು ಕಲಿಸುವ ಏಕೈಕ ಪ್ರಾಧ್ಯಾಪಕರೆಂದು ಮುಂಬೈ ವಿಶ್ವವಿದ್ಯಾಲಯ ಮನ್ನಣೆಯನ್ನಿತ್ತಿತು. ಈಗ ಕನ್ನಡ ಎಂ.ಎ. ವಿದ್ಯಾರ್ಥಿಗಳು ಮುಂಬಯಿ ಬದಲಿಗೆ ಕೊಲ್ಲಾಪುರಕ್ಕೆ ಹೋಗತೊಡಗಿದರು.

ಪ್ರೊ. ಕುಂದಣಗಾರ ಅವರು ತಾವು ವಿದ್ಯಾರ್ಥಿದಿಸೆಯಲ್ಲಿ ಅನುಭವಿಸಿದ ತೊಂದರೆಗಳು ತಮ್ಮ ವಿದ್ಯಾರ್ಥಿಗಳಿಗೆ ಬರಬಾರದು ಎಂದು ಸ್ವತಃ ಪರಿಶ್ರಮವಹಿಸಿ, ಮುತ್ತಿನಂತೆ ಸುಂದರವಾದ ಅಕ್ಷರಗಳನ್ನೊಳಗೊಂಡ ಟಿಪ್ಪಣಿಗಳನ್ನು ಸಿದ್ಧಪಡಿಸಿ ಅವರಿಗೆ ಕೊಡಲಾರಂಭಿಸಿದರು. ಕಾಲೇಜು ಗ್ರಂಥಾಲಯದ, ಸ್ವಸಂಗ್ರಹದ ಗ್ರಂಥಗಳನ್ನು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದರು. ವ್ಯಾಸಂಗದಲ್ಲಿ ನಿಷ್ಠೆಯನ್ನು ತೋರುತ್ತಿದ್ದ ವಿದ್ಯಾರ್ಥಿಗಳ ಬಗೆಗೆ ಅವರು ವಿಶೇಷ ಕಾಳಜಿ ವಹಿಸುತ್ತಿದ್ದರು.

ಕೊಲ್ಲಾಪುರದಲ್ಲಿಯ 21 ವರ್ಷಗಳ ಸೇವಾವಧಿಯಲ್ಲಿ ಅಸಂಖ್ಯಾತ ಶಿಷ್ಯರನ್ನು ತಮ್ಮ ಶಿಕ್ಷಣದ ಗರಡಿಯಲ್ಲಿ ತಯಾರಿಸಿದರು. ಲೆಕ್ಕವಿಲ್ಲದಷ್ಟು ಕನ್ನಡ ಸ್ನಾತಕರನ್ನು ತರಬೇತುಗೊಳಿಸಿ ರಾಜಕೀಯ, ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಸಾಮಾಜಿಕ ರಂಗಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸುವಂತೆ ಅಣಿಗೊಳಿಸಿದರು. ಅಂಥ ಮಹನೀಯರಲ್ಲಿ ಕೆಲವರು ಬಿ.ಡಿ. ಜತ್ತಿ, ಕೆ.ಎಚ್‌.ಪಾಟೀಲ, ಜಿ.ಬಿ. ಶಂಕರರಾವ, ವಿ.ಕೃ.ಗೋಕಾಕ, ರಂ.ಶೀ.ಮುಗಳಿ, ಪ್ರೊ.ಎಸ್‌.ಆರ್. ಮಳಗಿ, ಪ್ರೊ.ಎ.ಟಿ. ಸಾಸನೂರ, ಡಾ.ಆರ್. ಸಿ. ಹಿರೇಮಠ, ಡಾ.ಡಿ.ಸಿ. ಪಾವಟೆ, ಎಂ.ಪಿ. ಪಾಟೀಲ, ಡಾ.ಎಂ.ಎಸ್‌. ಸುಂಕಾಪುರ, ಪ್ರೊ.ಸ.ಸ. ಮಾಳವಾಡ, ಪ್ರೊ.ಎಸ್‌. ಎಸ್‌. ಭೂಸನೂರಮಠ, ಡಾ. .ಹಿರೇಮಲ್ಲೂರ ಈಶ್ವರನ್‌, ದ.ರಾ.ಬೇಂದ್ರೆ, ಡಾ. ಎಚ್‌. ಟಿ. ಸಾಸನೂರ ಮೊದಲಾದವರು. ಇದಲ್ಲದೆ ಕುಂದಣಗಾರರರು ರಾಜಾರಾಮ ಗ್ರಂಥಾಲಯವನ್ನು ಅಪೂರ್ವರೀತಿಯಲ್ಲಿ  ಬೆಳೆಸಿದರು.

ಹೀಗೆ ಸುಮಾರು 21ವರ್ಷ ಕಾಲ ಕನ್ನಡ ಭಾಷೆ-ಸಾಹಿತ್ಯದ ಅಧ್ವರ್ಯುವಾಗಿ ಸಂಜೀವನಶಕ್ತಿಯಾಗಿ ದುಡಿದು 1948ರಲ್ಲಿ ನಿವೃತ್ತಿ ಹೊಂದಿದರು. ಅದು ವೃತ್ತಿಯಿಂದ ನಿವೃತ್ತಿಯಾಯಿತೇ ಹೊರತು ಪ್ರವೃತ್ತಿಯಿಂದಾಗಲಿಲ್ಲ. ಹೀಗಾಗಿ ಅವರು ಬೆಳಗಾವಿಗೆ ಬಂದು ಅಲ್ಲಿಯ ರಾಣಿ ಪಾರ್ವತಿದೇವಿ ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿ ಹದಿನೇಳು ವರ್ಷ (1948-1965) ಸೇವೆ ಸಲ್ಲಿಸಿ, ಅಲ್ಲಿಯೂ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸಿದರು. ಮಾದರಿಯೆನ್ನಿಸುವ ಗ್ರಂಥಾಲಯವನ್ನು ರೂಪಿಸಿದರು.

ಕುಂದಣಗಾರ ಅವರ ಕೊಲ್ಲಾಪುರ ವಾಸ್ತವ್ಯದ ಅವಧಿಯು ಕನ್ನಡಿಗರ ದೃಷ್ಟಿಯಿಂದ ಮಹತ್ವಪೂರ್ಣವಾದ ಕಾಲಖಂಡವಾಗಿದೆ. ಕೊಲ್ಲಾಪುರದ ನಿವಾಸಿಗಳಾದ ಕನ್ನಡಿಗರನ್ನು ಸಂಘಟಿಸಿ ಕುಂದಣಗಾರ ಅವರು ಅಲ್ಲಿ ಕರ್ನಾಟ ಸಂಘವನ್ನು (1928) ಕಟ್ಟಿ ಬೆಳೆಸಿದರು. ಅಂದಿನ ಶ್ರೇಷ್ಠಮಟ್ಟದ ಸಾಹಿತಿ ಪ್ರೊ.ಬಿ.ಎಂ. ಶ್ರೀಕಂಠಯ್ಯನವರನ್ನು ಕೊಲ್ಲಾಪುರಕ್ಕೆ ಆಮಂತ್ರಿಸಿದರು. ಅಲ್ಲದೆ ಅನಕೃ ಮೊದಲಾದವರೂ ಅಲ್ಲಿ ಉಪನ್ಯಾಸವನ್ನು ನೀಡಿದರು. ಅಲ್ಲದೆ ಗೆಳೆಯರ ಬಳಗ’, ‘ಬಸವ ಬಳಗಸ್ಥಾಪಿಸಿ ಕನ್ನಡ ಸಾಹಿತ್ಯ ಸಂಸ್ಕೃತಿಗಳ ಪ್ರಸಾರವೇ ಅವುಗಳ ಧ್ಯೇಯವನ್ನಾಗಿಸಿದರು. ಹೀಗೆ ಕನ್ನಡಪರ ಕಾರ್ಯಕ್ರಮಗಳಿಂದ ಕೊಲ್ಲಾಪುರವನ್ನು ಕನ್ನಡದ ಯಾತ್ರಾಸ್ಥಳವನ್ನಾಗಿ ಮಾಡಿದರು. ಅದರಿಂದ ಅಲ್ಲಿಯ ಕನ್ನಡಿಗರಿಗೆ ತಾವು ಕರ್ನಾಟಕದ ಹೊರಗೆ, ಮಹಾರಾಷ್ಟ್ರ ಪ್ರದೇಶದಲ್ಲಿದ್ದೇವೆ ಎಂಬ ಭಾವನೆಯೇ ಉಂಟಾಗದಂತಾಯಿತು.

ಕೊಲ್ಲಾಪುರದಲ್ಲಿ ನೆಲೆಸಿದ ಮತ್ತು ಕರ್ನಾಟಕ ಪ್ರದೇಶದಿಂದ ಆಗಾಗ ಬಂದು ಹೋಗುತ್ತಿದ್ದ ವ್ಯಾಪಾರಸ್ಥರೊಂದಿಗೆ ಮಾತ್ರವಲ್ಲ, ಅಲ್ಲಿಯ ಮರಾಠಿಗರೊಂದಿಗೂ, ಅಲ್ಲಿಯ ಸಂಘ ಸಂಸ್ಥೆಗಳೊಂದಿಗೂ ಕುಂದಣಗಾರ ಅವರು ಮಧುರ ಬಾಂಧವ್ಯ ಹೊಂದಿದ್ದರು. ಕೊಲ್ಲಾಪುರ ನಿವಾಸಿಗಳು ಅವರನ್ನು ಅಣ್ಣಾಎಂದು ವಾತ್ಸಲ್ಯಪೂರ್ಣವಾಗಿ ಸಂಬೋಧಿಸುತ್ತಿದ್ದರು. ಅವರ ಸರಳ ಸಜ್ಜನಿಕೆ, ಅಗಾಧ, ಪಾಂಡಿತ್ಯಕ್ಕೆ ಮರಾಠಿಗರು ಮಂತ್ರಮುಗ್ಧರಾಗಿದ್ದರು. ಮರಾಠಿ ಭಾಷಿಕರು ಕನ್ನಡಿಗರೊಬ್ಬರನ್ನು ಇಷ್ಟೊಂದು ಗೌರವದಿಂದ ಕಾಣುತ್ತಿದ್ದುದು ತಮಗೆ ಹೊಸ ಅನುಭವವಾಗಿ ಪರಿಣಮಿಸಿತು ಎಂದು ಪ್ರೊ. ಮಾಳವಾಡ ಅವರು ಹೇಳಿಕೊಂಡಿದ್ದಾರೆ.

ಕುಂದಣಗಾರರು ಕೊಲ್ಲಾಫುರದ ಮಹಾಲಕ್ಷ್ಮಿ ದೇವಸ್ಥಾನ ಕುರಿತು ಸಂಶೋಧನಾತ್ಮಕ ಕೃತಿ ನೋಟ್ಸ್ ಆನ್ ಮಹಾಲಕ್ಷ್ಮಿ ಟೆಂಪಲ್ ಆಫ್ ಕೊಲ್ಲಾಪುರಪ್ರಕಟಪಡಿಸಿದರು. ಇದರಿಂದ ಅವರಿಗೆ ಬೆಳಗಾಗುವುದರೊಳಗೆ ಪ್ರಸಿದ್ಧಿ ಲಭಿಸಿತು. ಅವರ ಮತ್ತೊಂದು ಸಂಶೋಧನಾ ಕೃತಿ ಇನ್‌ಸ್ಕ್ರಿಪ್ಷನ್ಸ್ ಆಫ್ ನಾರ್ದರನ್ ಕರ್ನಾಟಕ ಅಂಡ್ ಕೊಲ್ಲಾಪುರ.”   ಇದಲ್ಲದೆ ಸಾಹಿತ್ಯ, ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ, ನಾಣ್ಯ ಮುಂತಾದುವುಗಳ ಬಗ್ಗೆ ಹಲವಾರು ಸಂಶೋಧನಾತ್ಮಕ ಲೇಖನಗಳನ್ನು ಬರೆದರು. ಧಾರವಾಡದ ಸಂಶೋಧನಾ ಸಂಸ್ಥೆ, ಉತ್ತರ ಕರ್ನಾಟಕಕ್ಕೊಂದು ವಿಶ್ವವಿದ್ಯಾಲಯ ಸ್ಥಾಪಿಸುವಲ್ಲಿ ಅವರು ನಿರ್ವಹಿಸಿದ ಪಾತ್ರ ಹಿರಿದಾದದು. ನಾಲ್ಕು ವರ್ಷಗಳ ಸತತ ಸಂಶೋಧನೆ ನಡೆಸಿ ಹಲವಾರು ವಿದ್ವಾಂಸರ ನೆರವಿನಿಂದ ಹರಿಹರನ ಕಾಲ, ಧರ್ಮ, ಕಾವ್ಯ ಪ್ರತಿಭೆಯ ಸಮಗ್ರ ಪರಿಚಯದ ಹರಿಹರದೇವ ಪ್ರಶಸ್ತಿಪ್ರಕಟಿಸಿದರು. ಅಚ್ಚು ಮೊಳೆಗಳಿಲ್ಲದ ಕಾಲದಲ್ಲಿ ಅಚ್ಚು ಮೊಳೆ ತರಿಸಿ ಮಹಾರಾಷ್ಟ್ರದ ಮುದ್ರಣಾಲಯದವರಿಗೆ ತರಬೇತು ನೀಡಿ ಪ್ರಕಟಿಸಿದ ಗ್ರಂಥವದು. ಮತ್ತೊಂದು ಗ್ರಂಥ ಮಹಾದೇವಿಯಕ್ಕಸಂಶೋಧನಾ ಕೃತಿ. ಮಹಾದೇವಿಯಕ್ಕನಿಗೆ ಮದುವೆಯಾಗಿತ್ತೆಂಬ ಮಹತ್ವದ ನಿರ್ಣಯ ಈ  ಗ್ರಂಥದಲ್ಲಿ ಮಂಡನೆಗೊಂಡಿದೆ.

ಕನ್ನಡ ಐತಿಹಾಸಿಕ ಅಸ್ತಿಭಾರ ಹಾಕಿದ ಕುಂದಣಗಾರರನ್ನು  1961ರಲ್ಲಿ ಗದಗಿನಲ್ಲಿ ನಡೆದ 43ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ನಾಡು ಗೌರವ ತೋರಿತು. ಇವರ ಲೇಖನಗಳನ್ನು ಎಂ.ಜಿ. ಬಿರಾದಾರರವರು ಕುಂದಣಗಾರರ ಲೇಖನ ಸಾಹಿತ್ಯಎಂಬ ಕೃತಿಯ ಮೂಲಕ  ಸಂಪಾದಿಸಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಿಸಿದ್ದಾರೆ. ಕುಂದಣಗಾರರಿಗೆ 1961ರಲ್ಲಿ ಅರ್ಪಿಸಿದ ಸಂಭಾವನ ಗ್ರಂಥ ಕುಂದಣ.’.

ಸದಾ ಕಾಲ ಸೇವಾತತ್ಪರರಾಗಿಯೇ ಬಾಳಿದ ಕುಂದಣಗಾರರು  ಆಗಸ್ಟ್ 22, 1965ರಂದು ನಿಧನ ಹೊಂದಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


ಮಾಹಿತಿ ಕೃಪೆ:  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆಯಾದ ಡಾ. ಬಿ.ವಿ. ಶಿರೂರ ಅವರಿಂದ ರಚಿತವಾದ  ಪ್ರೊ.ಕೆ.ಜಿ. ಕುಂದಣಗಾರ

Tag: K. G. Kundanagara

ಕಾಮೆಂಟ್‌ಗಳಿಲ್ಲ: