ಶುಕ್ರವಾರ, ಆಗಸ್ಟ್ 30, 2013

ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ

ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ

ಬೆಂಗಳೂರಿನಿಂದ ಮುಂಬೈವರೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಮೂಲಕ, ತುಮಕೂರಿನ ಕ್ಯಾತಸಂದ್ರದ ಸಮೀಪವಿರುವ ಈ ಸಿದ್ಧಗಂಗೆಯ ಮುಂದೆ ನಾವು ಅದೆಷ್ಟು ಬಾರಿ ಹಾದುಹೋಗಿದ್ದೇವೋ ಲೆಖ್ಖವಿಲ್ಲ.  ಅದೇನೋ ಅದೆಂತದ್ದೇ ರಾತ್ರಿಯ ಪಯಣವಿರಲಿ 'ಸಿದ್ಧಗಂಗೆ' ಬಂತೆಂದರೆ ಓ ಇನ್ನೇನು ನಮ್ಮ ನೆಲೆ ಬಂತು ಎಂಬ ಸಮಾಧಾನ ಮೂಡುತ್ತದೆ.

ನಾವು ತುಮಕೂರಿಗೆ ಹೋಗಿ ಆ ರಸ್ತೆಗಳ ಆ ಹೈವೇಗಳ  ಧೂಳಿನಲ್ಲಿ ಕಳೆದು ಹೋಗಿದ್ದೇವೆ ಎಂದು ಬೇಸರಿಸಿದ್ದರೆ  ಒಮ್ಮೆ ನಾವು  ಸಿದ್ಧಗಂಗೆಗೆ ಹೋಗಿ ನೋಡಬೇಕು.  ಅಲ್ಲಿ ನಗರಗಳಲ್ಲಿನ ಹೋಟೆಲ್ಲು, ಸೌಧ ಇವೆಲ್ಲಾ ಯಾವುದೂ ಇಲ್ಲ.  ಅಲ್ಲಿ ಅತ್ಯಂತ ಸಾಧಾರಣ ಸಹಜತೆಯ ಸೌಂದರ್ಯವಿದೆ. ನನಗೆ ಇಂಥಹ ಮತ್ತೊಂದು ಅನುಭಾವ ಕೊಟ್ಟಿರುವ ಸ್ಥಳವೆಂದರೆ ಮಹಾತ್ಮ ಗಾಂಧೀಜಿಯವರ ಸಬರಮತಿ ಆಶ್ರಮ.  ಒಂದು ಆಧ್ಯಾತ್ಮ ಪುರುಷ ತನ್ನ ಪರಿಸರದಲ್ಲಿ ಹಬ್ಬಿಸುವ ತನ್ನಾತ್ಮ ಸೌಂದರ್ಯ ಎಲ್ಲ ಸೌಂದರ್ಯಗಳನ್ನೂ ಮೀರಿಸುವಂತದ್ದು.

ಸಿದ್ಧಗಂಗೆಯ ಆವರಣದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಟ್ಟ ಗೂಡಿನ ಮುಂದೆ ಒಂದು ಫಲಕ ಇದೆ.  ಸ್ವಾಮೀಜಿಯವರು ಎಷ್ಟು ಘಂಟೆಗೆ ಏಳುತ್ತಾರೆ, ಅವರ ಸಣ್ಣ ಸಣ್ಣ ಪ್ರಾತಃವಿಧಿಗಳು ನಡೆಯುವ ಸಮಯವೆಷ್ಟು, ಆಹಾರ ಸೇವನೆ, ಧ್ಯಾನ, ಭೋಧನೆ, ದಿನ ನಿತ್ಯದ ವಿಧಿಗಳು, ಮಲಗುವ ಸಮಯ ಹೀಗೆ ಎಲ್ಲವೂ ತೆರೆದಿಟ್ಟುಕೊಂಡಿದೆ.  ಹೀಗೆ ತಮ್ಮನ್ನು ತೆಗೆದುಕೊಟ್ಟುಕೊಳ್ಳುವುದು ಲೋಕದ ಜಂಜಡಗಳಿಂದ ತಮ್ಮನ್ನು ಮುಕ್ತಿಗೊಳಿಸಿಕೊಂಡಿರುವವರಿಗೆ ಮಾತ್ರ ಸಾಧ್ಯ.  ಮತ್ತೊಮ್ಮೆ ಬಾಪು ನೆನಪಾಗುತ್ತಾರೆ.

ಸ್ವಾಮೀಜಿಯವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಪಾರಂಗತರು.  ಸ್ವಾಮೀಜಿಯವರು ವಿರಕ್ತಾಶ್ರಮಕ್ಕೆ ಬಂದದ್ದು 1930ರಲ್ಲಿ.  ಇಂದು ಬೆಳೆದು ನಿಂತಿರುವ ಸಿದ್ಧಗಂಗಾ ವಿದ್ಯಾಸಂಸ್ಥೆ ಸ್ವಾಮೀಜಿಯವರ ಶ್ರಮದ ಪ್ರತಿಫಲ. ಇದಲ್ಲದೆ ಸ್ವಾಮೀಜಿಯವರ ನಿವಾಸವಾದ ಸಿದ್ಧಗಂಗಾಮಠದ ಗುರುಕುಲದಲ್ಲಿ 5ವರ್ಷದಿಂದ 16ರ ವರ್ಷದ ವರೆಗಿನ ಸುಮಾರು 8500 ಮಕ್ಕಳು ಆಶ್ರಯಪಡೆದಿದ್ದಾರೆ.    ಈ ಎಲ್ಲ ಮಕ್ಕಳೂ ಯಾವುದೇ ಹಣ ಕೊಟ್ಟು ಇಲ್ಲಿ ಉಳಿದಿಲ್ಲ.  ಇಲ್ಲಿ ಎಲ್ಲವೂ ಆಶ್ರಮದ ಕೃಪಾಶ್ರಯವೇ.  ವಿದ್ಯಾಭ್ಯಾಸ ಎಂಬುದು ಬರೀ ಹಣದ ಕಾರ್ಖಾನೆಗಳಾಗಿ ಪರಿವರ್ತಿತವಾಗುತ್ತಿರುವಾಗ ಇಂತದ್ದೊಂದು ಸತ್ಕಾರ್ಯ ನಡೆಯುತ್ತಿದೆ ಎನ್ನುವುದೇ ಮನಸ್ಸು ತುಂಬುವಂತೆ ಮಾಡುತ್ತದೆ.   ಇಲ್ಲಿಂದ ಆರೈಕೆ ಪಡೆದ ಅನೇಕ ಮಕ್ಕಳು ಇಂದು ನಾಡಿನ ಮಹತ್ವದ ಕೊಡುಗೆಗಳಾಗಿ ಪರಿವರ್ತಿತರಾಗಿದ್ದಾರೆ.

ಲೋಕದ ಜಂಜಡಗಳಿಂದ ಮುಕ್ತಿ ಅಂದರೇನು.  ಬದುಕಿನಿಂದ ದೂರವಿರುವುದೆ?  ಹಾಗೆ ನೋಡಿದರೆ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರಷ್ಟು ಬದುಕಿಗೆ ಹತ್ತಿರವಾದವರು ಅತಿ ವಿರಳ.  ತುಮಕೂರಿನಲ್ಲಿ ನಡೆಯುವ ಒಂದು ಅಂಗಡಿ ಉದ್ಘಾಟನೆ ಇರಲಿ, ಒಂದು ಸಾಹಿತ್ಯ ಸಮಾರಂಭ ಇರಲಿ,  ಯಾರಿಗೋ ಒಂದು ಸನ್ಮಾನವಿರಲಿ ಅಲ್ಲೆಲ್ಲಾ ಈ ಆಚಾರ್ಯರನ್ನು ನಾವು ಕಂಡಿರುವುದು ಸಾಮಾನ್ಯ.  ಹಲವಾರು ಭಾರಿ ಅನ್ನಿಸಿದೆ,  ನಮ್ಮ ಮನೆಯಲ್ಲಿ ಮಗುವಿನ ಹುಟ್ಟಿದ ಹಬ್ಬ ಇದೆ ಬನ್ನಿ ಅಂದರೆ ಯಾವುದೇ ಬೇಸರಿಕೆಯಿಲ್ಲದೆ ಕುಣಿ ಕುಣಿದು ಬರುವ ಮಗುವಿನಂತೆ ಈ ಹಿರಿಯ ಆಚಾರ್ಯರ ಒಳಗಿರುವ ಮಗು ಪುಟಿದು ಬರುತ್ತದೆ ಎಂದು. ಅಷ್ಟು ವಿರಳ ಸಾಧು ಸಹಜ ಶಿಶು ಸ್ವಭಾವದವರು ಈ ನಮ್ಮ ಆಚಾರ್ಯರು.  ಇಲ್ಲಿ ತತ್ವಜ್ಞಾನಿ ಮೆನ್ಸಿಯಸ್ ಹೇಳುವ ಮಾತು ನೆನೆಪಾಗುತ್ತದೆ.  "ಯಾರು ತನ್ನ ಹಿರಿಯವಯಸ್ಸಿನಲ್ಲಿ ಕೂಡ ತನ್ನ ಶಿಶು ಸಹಜ ಸ್ವಭಾವವನ್ನು ಉಳಿಸಿಕೊಂಡಿರುತ್ತಾರೆಯೋ ಅವರೇ ನೈತಿಕವಾಗಿ ಹಿರಿಯರೆನಿಸಿಕೊಳ್ಳುತ್ತಾರೆ.".  ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳಿಗಿಂತ ಈ ನಿಟ್ಟಿನಲ್ಲಿ ಹಿರಿಯರು ಉಂಟೆ?

ಅವರು ವಯಸ್ಸಿನಲ್ಲಿ ಕೂಡಾ ತುಂಬಾ ತುಂಬಾ ಹಿರಿಯರಾಗಿ ಮುನ್ನಡೆದಿದ್ದಾರೆ.  ಈ ಆಚಾರ್ಯರು ಇದೀಗ ನೂರಾ ಏಳನೆಯ ವರ್ಷಕ್ಕೆ ಕಾಲಿಡುತ್ತಿದ್ದಾರೆ.  ಈ ಪರಮಪೂಜ್ಯರು ಜನಿಸಿದ್ದು ಏಪ್ರಿಲ್ 1, 1908ರಲ್ಲಿ ಮಾಗಡಿ ತಾಲ್ಲೂಕಿನ ವೀರಪುರದಲ್ಲಿ.  ನಮ್ಮ ನಡುವೆ ಇಂತಹ ಸಂತರು ಕೂಡಾ ಬದುಕಿದ್ದಾರೆ ಎಂದು ಕಂಡು ಕೊಳ್ಳುವುದಕ್ಕಿಂತ ಈ ಬದುಕಿನಲ್ಲಿ ನಮಗೆ ಇನ್ನೇನಾದರೂ ಭಾಗ್ಯ ಉಳಿದಿದೆಯೇ ಎನಿಸುತ್ತದೆ.  ಅನ್ನ, ಅಕ್ಷರ, ಜ್ಞಾನ ದಾಸೋಹಿಗಳಾದ ಶ್ರೀಗಳ ಬೆನ್ನು ಸಾಕಷ್ಟು ಬಾಗಿದೆ.  ಅವರ ವಿನಯ, ಸಜ್ಜನಿಕೆ ಅದಕ್ಕೂ ಮಿಗಿಲಾಗಿ ತಗ್ಗಿ ನಡೆಯುತ್ತದೆ.  'ಕಾಯಕವೇ ಕೈಲಾಸ' ಎಂಬ ಅವರ ಸಕ್ರಿಯತೆ ಎಂದೂ ಕುಗ್ಗಿಲ್ಲ. ಹೀಗಿರುವವರೇ ಪರಮಾತ್ಮನಿಗೆ ಸನಿಹರು.  ಅವರ ಸಿದ್ಧಗಂಗಾ ಮಠದ ಕೊಡುಗೆಗಳು ಅನೇಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.  ಇವೆಲ್ಲವನ್ನೂ ಮೀರಿಸುವಂತದ್ದು ಈ ಆಧ್ಯಾತ್ಮ ಸಂತರ ಅಂತರಂಗದ ಚೇತನ.

ರಾಷ್ಟ್ರಕವಿ ಡಾ. ಶಿವರುದ್ರಪ್ಪನವರು ಸಿದ್ಧಗಂಗೆಯ ಶ್ರೀಚರಣಕ್ಕೆ ಎಂದು ಬರೆದಿರುವ ಕವನ ನಮ್ಮ ಮಾತುಗಳನ್ನೆಲ್ಲಾ ಮೂಖವಾಗಿಸಿ ಶ್ರೀಗಳ ಚರಣಕ್ಕೆ ಅಭಿವಂದಿಸುವ ಭಾವ ಹೊಮ್ಮಿಸುವಂತಿದೆ.

ಹರನ ಕರುಣೋದಯದ ತೆರದಲಿ
ಬೆಳಗು ತೆರೆಯುವ ಹೊತ್ತಿಗೆ
ವೇದಘೋಷದ ದಿವ್ಯಲಹರಿಯು ಮನವ ತೊಳೆಯಲು ಮೆಲ್ಲಗೆ
ಬರುವ ಶ್ರೀಗುರುಪಾದುಕೆಯ ದನಿ
ಅನುರಣಿತವಾಗಲು ಮೌನಕೆ
ಸಿದ್ಧಗಂಗೆಯ ನೆಲವು ಜಲವು
ನಮಿಸಿ ನಿಲುವುದು ಸುಮ್ಮಗೆ
ಬೆಟ್ಟ-ಬಂಡೆಯ ನಡುವೆ ಗಿಡಮರ
ಹೂವನೆತ್ತಿರೆ ಪೂಜೆಗೆ
ದೇಗುಲದ ಪೂಜಾರತಿಯ ಗಂಟೆಯ
ಮೊಳಗು ಮುಟ್ಟಲು ಬಾನಿಗೆ
ಧೂಪಗಂಧವು ಮಂದ ಮಂದಾನಿಲದ ಮನಸಿಗೆ
ಸಂಭ್ರಮವನುಕ್ಕಿಸೆ
ಬೆಳಗು ಇಳಿವುದು ಸಿದ್ಧಗಂಗೆಯ ಕ್ಷೇತ್ರಕೆ
ಇಲ್ಲಿ ಇಲ್ಲ ಪವಾಡದದ್ಭುತ
ಅಥವಾ ಉತ್ಸವದಬ್ಬರ
ಮುಡಿಯನೆತ್ತಿದ ಸರಳ ಸಾಧಾರಣದ ಬದುಕಿನ ಗೋಪು
ಅದರ ಮೇಲಿದೆ ತ್ಯಾಗಧ್ವಜ ಕೈಬೀಸಿ ಕರೆವುದು ಪಥಿಕರ
ಪರಮ ನಿರಪೇಕ್ಷೆಯಲಿ ದಿನವು ಸೇವೆಗಾಗಿದೆ ಸರ್ವರ
ಭಿಕ್ಷೆ ಹೊರಟಿದೆ ಜಂಗಮದ ಜೋಳಿಗೆ
ಲಕ್ಷ ಜನಗಳ ಪೊರೆದಿದೆ
ತೀರ್ಥವಾಗಿದೆ ಭಕ್ತರಿಗೆ, ಚಿರಸ್ಫೂರ್ತಿಯಾಗಿದೆ ಬುದ್ಧಿಗೆ
ಬಂದ ಹಣತೆಗೆ
ಎಣ್ಣೆ ಬತ್ತಿಯ ದೀಪ್ತಿದಾನವ ಮಾಡಿದೆ
ರಕ್ಷೆಯಾಗಿದೆ ಮುಗಿಲನೇರಿದ ಎಷ್ಟೊ ರೆಕ್ಕೆಯ ಹಾದಿಗೆ
ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆ ಏರಿದೆ
ಕಾಯಕವೆ ಕೈಲಾಸ ಎನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿ ಉಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ
ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ.
(ಸಿದ್ಧಗಂಗೆಯ ಶ್ರೀಚರಣಕ್ಕೆ)

ಈ ಪೂಜ್ಯರ ಅಡಿದಾವರೆಗಳಲ್ಲಿ ಶಿರವಿಟ್ಟು ನಮ್ಮ ಬದುಕಿಗೆ ಬೇಕಿರುವ ಅನ್ನ, ಅಕ್ಷರ, ಜ್ಞಾನದ ದಾಸೋಹಕ್ಕೆ ಹೃದಯ ತೆರೆದು ನಮಿಸೋಣ.

Tag: Shri Shri Shri Shivakumara Swamiji

ಕಾಮೆಂಟ್‌ಗಳಿಲ್ಲ: