ಶುಕ್ರವಾರ, ಆಗಸ್ಟ್ 30, 2013

ರಾಘವೇಂದ್ರ ಪಾಟೀಲ್

ರಾಘವೇಂದ್ರ ಪಾಟೀಲ್

ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರೆನಿಸಿರುವ  ರಾಘವೇಂದ್ರ ಪಾಟೀಲ್ ಅವರು ಏಪ್ರಿಲ್ 16, 1951ರ ವರ್ಷದಲ್ಲಿ  ಜನಿಸಿದರು.  ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸಂಸ್ಥೆಯ ಆಡಳಿತಾಧಿಕಾರಿಗಳಾಗಿದ್ದಾರೆ.  ಅವರು ಅದೇ ಊರಿನಲ್ಲಿರುವ  ಕಾಲೇಜಿನ ಪ್ರಿನ್ಸಿಪಾಲರಾಗಿ ಸಹಾ ಕಾರ್ಯನಿರ್ವಹಿಸಿದವರು.  ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಆನಂದಕಂದ ಗ್ರಂಥಮಾಲೆಯನ್ನು ನಡೆಸುತ್ತಿದ್ದಾರೆ. ಸಂವಾದಎಂಬ ಸಾಹಿತ್ಯ ಪತ್ರಿಕೆಯನ್ನು ಕಳೆದ ಎರಡು ದಶಕಗಳಿಂದ ಸಂಪಾದಿಸುತ್ತಿದ್ದಾರೆ. ಹಳ್ಳಿಯ ಶಾಲೆಯ ಮಕ್ಕಳಿಗಾಗಿ ರಂಗತರಬೇತಿ ಶಿಬಿರ ಕೂಡಾ  ನಡೆಸುತ್ತಿದ್ದಾರೆ

ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನವರಾದ ಶ್ರೀ ಪಾಟೀಲರು ಕನ್ನಡದ ಗ್ರಾಮೀಣ ಬದುಕು ಬದಲಾಗುತ್ತಿರುವ ಪರಿಯನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಅವರ "ಲಯ" ಎಂಬ ಕತೆ, "ದೇಸಗತಿ" ಎಂಬ ಇನ್ನೊಂದು ಕತೆ ಹೆಚ್ಚು ಚರ್ಚಿತವಾಗಿವೆ. ಅವರ "ತೇರು" ಕಾದಂಬರಿ ಜಮೀನುದಾರಿಕೆ, ಧರ್ಮ, ನಂಬಿಕೆಗಳು, ರಾಜಕೀಯದ ಚಲನವಲನ, ಮನುಷ್ಯ ಸಂಬಂಧಗಳ ಅಚ್ಚರಿ ಇವನ್ನೆಲ್ಲ ಬಿಡಿಸಿಡುತ್ತದೆ. ಕತೆ ಹೇಳುವ ರೀತಿಯಲ್ಲೂ ಪಾಟೀಲರು ಮಹತ್ವದ ಪ್ರಯೋಗಗಳನ್ನು ಮಾಡಿದ್ದಾರೆ.

ಪಾಟೀಲರ  ತೇರು ಕಾದಂಬರಿಗೆ 2005ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.  ಅವರ ಮಾಯಿಯ ಮುಖಗಳು, ತೇರು ಮತ್ತು ದೇಸಗತಿ ಕೃತಿಗಳು ಕರ್ಣಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಗಳಿಸಿವೆ.  ಇದಲ್ಲದೆ ವರ್ಧಮಾನ ಪ್ರಶಸ್ತಿ, ಚದುರಂಗ ಪ್ರಶಸ್ತಿ, ಗೊರೂರು ಪ್ರತಿಷ್ಠಾನ ಪ್ರಶಸ್ತಿ, ಶ್ರೀಗಂಧ ಪ್ರಶಸ್ತಿ ಮುಂತಾದ ಹಲವಾರು ಪ್ರತಿಷ್ಠಿತ ಗೌರವಗಳು ಸಹಾ ಅವರನ್ನರಸಿ ಬಂದಿವೆ.

ಒಡಪುಗಳು, ಪ್ರತಿಮೆಗಳು, ದೇಸಗತಿ, ಮಾಯಿಯ ಮುಖಗಳು  ರಾಘವೇಂದ್ರ ಪಾಟೀಲರ ಕಥಾ ಸಂಕಲನಗಳು;  ಬಾಳವ್ವನ ಕನಸುಗಳು ಮತ್ತು  ತೇರು ಕಾದಂಬರಿಗಳಾಗಿವೆ;   ಅಜ್ಞಾತ ಮುಂಬೈ ಪ್ರವಾಸ ಸಾಹಿತ್ಯ;  ಆನಂದ ಕಂದರ ಬದುಕು ಬರಹಗಳ ಕುರಿತಾಗಿ ಸಹಾ ಅವರು ಬರೆದಿದ್ದಾರೆ;  ವಾಗ್ವಾದ - ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಮರ್ಶೆಗಳನ್ನೊಳಗೊಂಡ ಗ್ರಂಥ.  ನವಮೇಘ ರೂಪಿ,  ಕಾಡಿನ ಹುಡುಗ ಕೃಷ್ಣ (ಶ್ರೀ ಡಿ.ಎಸ್.ನಾಗಭೂಷಣರವರ ಜೊತೆಗೆ ಸಹಸಂಪಾದನೆ), ಮಾಸ್ತಿ ಸಾಹಿತ್ಯ ಸಮಗ್ರ ದರ್ಶನ (ಶ್ರೀ ಡಿ.ಎಸ್.ನಾಗಭೂಷಣರವರ ಜೊತೆಗೆ ಸಹಸಂಪಾದನೆ) ಇವೇ ಮುಂತಾದವು ರಾಘವೇಂದ್ರ ಪಾಟೀಲರ ಇನ್ನಿತರ ಕೆಲವು ಬರಹಗಳು.

ರಾಘವೇಂದ್ರ ಪಾಟೀಲರ ಅರವತ್ತನೆಯ ಹುಟ್ಟು ಹಬ್ಬದ ಸಂದರ್ಭದಲ್ಲಿ ಕಥೆಯ ಹುಚ್ಚಿನ ಕರಿಟೊಪಿಗಿಯ ರಾಯ’, ‘ತುದಿಯೆಂಬ ತುದಿಯಿಲ್ಲ’  ಎಂಬ ನಾಟಕಗಳು ಸಹಾ ಪ್ರಕಟಗೊಂಡಿವೆ.

ರಾಘವೇಂದ್ರ ಪಾಟೀಲರು ಸಾಹಿತ್ಯದ ವಿದ್ಯಾರ್ಥಿಯೇನಲ್ಲ. ಅವರು ವಿಜ್ಞಾನದ ವಿದ್ಯಾರ್ಥಿ. ಪದವಿಯಲ್ಲಿ ಪ್ರಾಣಿಶಾಸ್ತ್ರ- ರಸಾಯನಶಾಸ್ತ್ರಗಳನ್ನು ಕ್ರಮವಾಗಿ ಮುಖ್ಯ ಮತ್ತು ಉಪಮುಖ್ಯ ವಿಷಯಗಳಾಗಿ ಅಧ್ಯಯನ ಮಾಡಿ ಸ್ನಾತಕೋತ್ತರ ಪದವಿಗಾಗಿ ಪ್ರಾಣಿಶಾಸ್ತ್ರವನ್ನು ಓದಿದವರು. ಆದರೆ ಓದಿನ ರುಚಿಯನ್ನು ಮೊದಲಿನಿಂದಲೂ ಬೆಳೆಸಿಕೊಂಡು ಬಂದವರು. ಅವರ ಓದು ಏನಿದ್ದರೂ ಕಥೆ-ಕಾದಂಬರಿಗಳಂತಹ ಗದ್ಯ ಕೃತಿಗಳಿಗೆ ಮಾತ್ರ ಸೀಮಿತವಾಗಿದ್ದಿತು. ಕವಿ- ಕಾವ್ಯಗಳಿಗೆ ಅವರ ಪ್ರಜ್ಞಾ ರಾಜ್ಯದಲ್ಲಿ ಅಸ್ತಿತ್ವ ಇರಲಿಲ್ಲ . ಆದರೆ, ಸಂಗೀತವೆಂದರೆ ಅವರಿಗೆ ಪ್ರಾಣ. ಸಂಗೀತದ ಮೂಲಕ ಗೀತೆಗಳು ಅವರ ಪ್ರಜ್ಞಾ ರಾಜ್ಯದ ಅತಿಥಿಗಳಾಗಿದ್ದವು. ಗೀತೆಗಳು ಮತ್ತು ಅವರ ಪ್ರಜ್ಞೆಯ ನಡುವಿನ ಸಂಬಂಧ ಗೇಯತೆಯ ನೆಲೆಯಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದಂತಹದು. ಗೇಯತೆ ಕಳಚಿಕೊಂಡ ಗೀತೆ ಅಕ್ಷರಗಳ ಗುಡ್ಡೆ ಮಾತ್ರ!

ಇಂಥ ರಾಘವೇಂದ್ರ ಪಾಟೀಲರು ಮಲ್ಲಾಡಿಹಳ್ಳಿಯ ಪದವಿಪೂರ್ವ ಕಾಲೇಜಿಗೆ ಜೀವಶಾಸ್ತ್ರದ ಅಧ್ಯಾಪಕರಾಗಿ ನಿಯುಕ್ತಿಗೊಂಡರು. ಮಲ್ಲಾಡಿಹಳ್ಳಿಯಲ್ಲಿದ್ದ ಸಾಹಿತ್ಯಿಕ ಪರಿಸರ ಕಾವ್ಯಪ್ರಧಾನವಾದದ್ದಾಗಿತ್ತು. ಅದಕ್ಕೆ ಕಾರಣವೆಂದರೆ ಅಂದಿನ ದಿನಗಳಲ್ಲಿ  ಅಲ್ಲಿ ಕೆಲಸ ಮಾಡುತ್ತಿದ್ದ  ಕನ್ನಡದ ಪ್ರಮುಖ ಕವಿಗಳಾದ ಡಾ. ಎಚ್‌. ಎಸ್‌. ವೆಂಕಟೇಶಮೂರ್ತಿ. ಅವರ ಜೊತೆಗಿದ್ದ  ಜಿ. ಎಲ್‌. ರಾಮಪ್ಪ, ಪ್ರಾಚಾರ್ಯರಾಗಿದ್ದ ಟಿ. ಎಸ್‌. ರಾಮಚಂದ್ರಮೂರ್ತಿ ಆಡುತ್ತಿದ್ದ ಮಾತುಗಳಲ್ಲಿ ಕವಿ-ಕಾವ್ಯಕ್ಕೆ ಪ್ರಾಧಾನ್ಯವಿರುತ್ತಿತ್ತು. ಇನ್ನು ಇವರ ಸಂಗ ಬಿಟ್ಟು ಗ್ರಂಥಾಲಯವನ್ನು ಹೊಕ್ಕರೂ ದಂಡಿದಂಡಿಯಾಗಿ ಕವಿತಾ ಸಂಕಲನಗಳೇ! ಈ ಕಾವ್ಯ ಅನ್ನುವುದಾದರೂ ಏನಿರಬಹುದು ಎಂಬ ಮಾನಸಿಕ  ಮಾನಸಿಕ ಕಾಟ ಪಾಟೀಲರ ಮನದಲ್ಲಿ ಪ್ರಾರಂಭಗೊಂಡು ಅವರು ತಮ್ಮೊಳಗೆ ತಾವೇ ಅನ್ಯ ಮನಸ್ಕರಾಗತೊಡಗಿದರಂತೆ. ಇಂಥ ಸಂದರ್ಭದಲ್ಲಿ ಅವರು ತಮ್ಮ ಪ್ರಜ್ಞಾ ರಾಜ್ಯದ ರಾಜಕಾರಣವನ್ನು ಉಲ್ಲಂಘಿಸಿ ಕವಿತೆಗಳನ್ನು ಓದತೊಡಗಿದರಂತೆ.   ನಿಮ್ಮ ಪ್ರೇಮಕುಮಾರಿಯ ಜಾತಕ, ಆಮೆ, ಉಲೂಪಿ ಅಡಿಗರು, ನಾಡಿಗರು, ಚಂಪಾ, ಭಟ್ಟರು, ಚೆನ್ನಯ್ಯ... ಹೀಗೆ ಯಾರು ಯಾರೋ... ಯಾವ ಯಾವುದೋ ಕವನ ಸಂಕಲನಗಳು.

ಇವು ಗದ್ಯದ ಹಾಗೇ ಇವೆಯಲ್ಲ. ಒಂದಾದರೂ ಗೇಯತೆಗೆ ಒಗ್ಗಿ ಗಂಟಲಿನ ದನಿಯಲ್ಲಿ ಹಾಡಾಗಿ ಹೊಮ್ಮಲಾರವು ಎಂದೆನಿಸತೊಡಗಿತು!  ಅವರಿಗೆ  ಕಾವ್ಯದ ಇಂತಹ ಅಸ್ತಿತ್ವ ಗೊತ್ತಿರಲಿಲ್ಲ.  ಅವರಿಗೆ ಕಾವ್ಯದ ಬಗೆಗೆ ಗೊತ್ತಿದ್ದುದು ಏನಿದ್ದರೂ ಬೇಂದ್ರೆ-ಆನಂದಕಂದ ಇಂಥವರ ಹಾಡುಗಳ ಶ್ರವಣ ಸುಖ.

ಗದ್ಯದ ಹಾಗಿದ್ದರೂ ಕಥೆ ಹೇಳುತ್ತಿಲ್ಲ. ಏರು ದನಿಯಲ್ಲಿ ಓದಿದರೆ ಚೆನ್ನಾಗಿ ಕೇಳಿಸುವ ಇವುಗಳ ಶ್ರವಣವು ಯಾವ ಅರ್ಥ ಸ್ಪುರಣೆಯನ್ನೂ ಹೊರಡಿಸುತ್ತಿಲ್ಲವೆ! ಇತ್ತ ಶ್ರವಣ ಸುಖವೂ ಇಲ್ಲ ಅತ್ತ ಅರ್ಥಸ್ಪುರಣೆಯ ಲಾಭವೂ ಇಲ್ಲ! ಇದಾವ ರಾಗ? ಇದಾವ ತಾಳ? ಎನ್ನುವುದರ ಜೊತೆಗೆ ಇದರ ಅರ್ಥವೇನು ಎಂದು ಕೇಳಿಕೊಳ್ಳುವಂತಾಯಿತು.  ಅವರ ಜೊತೆಗೆ ಕೆಲಸ ಮಾಡುತ್ತಿದ್ದ ಜನಪ್ರಿಯ ಕತೆಗಾರ ಚಿದಂಬರ ರಾವ್‌ ಅವರನ್ನು ಕೇಳಿಯೇ ಬಿಟ್ಟರು.  ಕೇಳಿ ಅವರ ಮುಂದೆ ಸಂದೇಹವನ್ನು ಮುಂದಿಟ್ಟರು. ಅವರು ಹಳೆಯ ಕಾವ್ಯವನ್ನು ತಿಳಿದಷ್ಟೇ ಹೊಸಕಾಲದ ಕಾವ್ಯವನ್ನು ಆಳವಾಗಿ ತಿಳಿದವರು. ಅವರು ರಾಘವೇಂದ್ರ ಪಾಟೀಲರಿಗೆ  ಮಾರ್ಗದರ್ಶನ ಮಾಡಿದರು. ಕಾವ್ಯ ಸಂಕಲನದ ಮುನ್ನುಡಿಗಳು, ಹೊಸಕಾಲದ ಕಾವ್ಯದ ಬಗೆಗೆ ಬಂದಿರುವ ವಿಮರ್ಶಾ ಲೇಖನಗಳ ಸಂಗ್ರಹಗಳನ್ನು ಓದಿದರೆ ಕ್ರಮೇಣ ಅರ್ಥವಾಗುತ್ತದೆ ಎಂದು ತಿಳಿ ಹೇಳಿದರು. ಪಾಟೀಲರಿಗೆ  ವಿಮರ್ಶೆ ಎನ್ನುವುದು ಇನ್ನೊಂದು ಹೊಸತು. ಇಂಥದ್ದೂ ಇರುತ್ತದೆಯೇ? ನಿಜವಾಗಿಯೂ ಕಾಲ ಕೆಟ್ಟಿರಬೇಕು ಎಂದೆನಿಸಿತಂತೆ. ಸರಿ ವಿಮರ್ಶೆಯ ಅಧ್ಯಯನವನ್ನು ಪ್ರಾರಂಭಮಾಡಿದರು. ಓದ ಓದುತ್ತಿದ್ದಂತೆ ಬಹಳ ಆಸಕ್ತಿಯ ಸಂಗತಿ ಎನ್ನಿಸತೊಡಗಿತು. ಅರೆ, ಈ ಕತೆಗಳಲ್ಲಿರುವ ಶಬ್ದಗಳಲ್ಲಿ ಒಂದೊಂದು ಕಲ್ಲು ಎತ್ತಿದರೆ ಎಂತೆಂತಹ ಅರ್ಥದ ಚೇಳು ಹಾವುಗಳು ಹೊರಹೊಮ್ಮುತ್ತವಲ್ಲ ಎಂದು ಬೆರಗು ಪಡುವಂತಾಯಿತು. ಈ ಕವಿಗಳು ಮಾಡುವ ಕೆಲಸ, ಶಬ್ದಗಳ ಹಿಂದೆ ಅರ್ಥಗಳನ್ನು ಮುಚ್ಚಿಡುವುದು ಎನ್ನಿಸಿತು. ಛಂದಸ್ಸಿನೊಳಗೆ ದೇವರು ಅಡಗಿಕೊಂಡಿರುತ್ತಾನೆ ಎನ್ನುವ ಉಪನಿಷತ್ತಿನ ಮಾತು ಕೇಳಿದಾಗ, ಅರೇ, ಹಿಂದಿನವರಿಗೂ ಇದು ತಿಳಿದಿತ್ತಲ್ಲ ಎನ್ನಿಸಿತು. ಮನದೊಳಗೆ ನಾನೇಕೆ ಈ ಕೆಲಸ ಮಾಡಬಾರದು ಎನ್ನುವ ಪ್ರೇರಣೆ ಹುಟ್ಟಿತು. ಅವರ ಮಾನಸಿಕ ಸ್ಥಿತಿಯಿಂದ ಬಿಡುಗಡೆಗೊಳ್ಳುವ ಮಾರ್ಗವಾಗಿಯೂ ಇದು ಗೋಚರಿಸತೊಡಗಿತು.

"ನಡಿ ನಡಿ ಸುಮ್ಮನೇ ತಡವ್ಯಾತಕೆ ನಡಿ ಉಡುರಾಜಾ ವದನೇ...' ಎಂದು ಮನದಲ್ಲಿಯೇ ಹಾಡುತ್ತ ಹೊಸಕಾಲದ ಕವಿತೆಯನ್ನು ತಮ್ಮ ಓದಿನ ಕೊಠಡಿಗೆ ಕರೆದರು. ಸರಿ ಹೊಸಕಾಲದ ಕಾವ್ಯಕನ್ನಿಕೆಯೇ ಬಂದಳೋ ಅಥವಾ ತನ್ನನ್ನು  ಮನೋದಾರಿದ್ರ್ಯದವನೆಂದುಕೊಂಡು ತನ್ನ ಛಾಯಾ ರೂಪವನ್ನೋ ಅಥವಾ ತನ್ನ ದಾಸಿಯನ್ನು ಕಳಿಸಿದಳ್ಳೋ ಯಾರು ಬಲ್ಲರು! ಕವಿತೆಗಳಂತೂ ಹುಟ್ಟಿದವು ಎನ್ನುತ್ತಾರೆ ರಾಘವೇಂದ್ರ ಪಾಟೀಲ್. ಆದರೆ, ಅವು ವಿದುರನ ಮನೋದಾರ್ಡ್ಯವನ್ನು ಪಡೆಯಲಿಲ್ಲವೆನ್ನಿಸಿತು. ಹೇಗಿದ್ದರೂ ಹೊಸಕಾಲದ ಕವಿತೆಗಳ ವಿಮರ್ಶೆಯ ಓದು ಗದ್ಯದಲ್ಲಿಯೇ ಒಂದು ಹೊಸ ಛಂದವನ್ನು ಚಂದವನ್ನು ಕಾಣಲು ಕಲಿಸಿದವು. ಅನಂತಮೂರ್ತಿ-ಚಿತ್ತಾಲ-ಲಂಕೇಶ್‌ ಇವರ ಕತೆಗಳನ್ನು ಗಂಭೀರವಾಗಿ ಓದುವಂತಾಗಿ ಅವುಗಳನ್ನು ಹಾಗೆ ಓದತೊಡಗಿದಾಗ ಅರೇ, ಈ ಗದ್ಯಕೃತಿಗಳು ತಮ್ಮೊಳಗೆ ಹೊಸಕಾಲದ ಕವಿತೆಗಳನ್ನು ಬಚ್ಚಿಟ್ಟುಕೊಂಡಿವೆಯಲ್ಲ ಎಂದು ಅಚ್ಚರಿಗೊಳ್ಳುವಂತಾಯಿತು. ತಮ್ಮ ಕವಿತಾರಚನೆಯು ಬೌದ್ಧಿಕ ಪ್ರಯತ್ನ ಎನ್ನಿಸುತ್ತಿದ್ದರೆ ಈ ಗದ್ಯಕೃತಿಗಳ ಓದು ಅದರಾಚೆಗೆ ಇನ್ನೂ ಸಾಧ್ಯತೆಗಳಿಗೆ ಎಂದು ಹೇಳಿದಂತೆನ್ನಿಸಿತು.

ಇಂತಹ ಮಾನಸಿಕ ಹೇಳು-ಕೇಳುಗಳ ಗೊಂದಲಗಳ ನಡುವೆಯೇ ರಾಘವೇಂದ್ರ ಪಾಟೀಲರು  ವೈಲ್ಡ್‌ ಸೀಡ್‌ ಎನ್ನುವ ಝೆಕ್‌ ಭಾಷೆಯ ಕಾದಂಬರಿಯೊಂದನ್ನು ಓದಿದರಂತೆ.  ಅದರ ಕುರಿತು ಪಾಟೀಲರು ಹೇಳುತ್ತಾರೆ:  ಆ ಕಾದಂಬರಿ ನನ್ನನ್ನು ಹಿಗ್ಗಾಮುಗ್ಗಾ ಬಯ್ಯತೊಡಗಿತು- "ಮೂರ್ಖ ಮಾನವನೇ! ಕಾವ್ಯವೆನ್ನುತ್ತೀ ಗದ್ಯವೆನ್ನುತ್ತೀ... ಈ ದ್ವೈತದಲ್ಲಿ ಸಿಕ್ಕಿಹಾಕಿಕೊಂಡು ಮುಕ್ತಿ ಕಾಣದೇ ಹೊರಳಾಡುತ್ತೀ! ನಿನ್ನ ಪ್ರಜ್ಞಾ ರಾಜ್ಯದ ಅರ್ಥಪ್ರಜೆಗಳು ಬದಲಾಗದ ಅವುಗಳೇ! ಆಡುವ ಭಾಷೆಯ ಶಬ್ದಗಳೂ ಅವೇ!  ವಿಂಗಡನೆ-ವರ್ಗೀಕರಣ ನಿನ್ನ ಪ್ರಜ್ಞೆಗೆ ತಗುಲಿರುವ ಶಾಪ!' ಕ್ರೌನ್‌ ಅಷ್ಟಾಂಶಕ್ಕಿಂತ ಚಿಕ್ಕದಾದ-ನೂರಿನ್ನೂರು ಪುಟಗಳ ಈ ಪುಟಗೋಸಿ ಪುಸ್ತಕ ಹೀಗೆ ಬಯ್ಯುತ್ತದಲ್ಲ ಎಂದು ಸಿಟ್ಟು ಬಂದರೂ ತಾಳ್ಮೆ ವಹಿಸಿದೆ. ಓದು ಮುಗಿಸಿದೆ.

ಝೆಕೋಸ್ಲಾವಾಕಿಯದ ರಾಜಕೀಯ ವಿಪ್ಲವಗಳ ಸಂದರ್ಭದಲ್ಲಿ ತಂದೆ ತಾಯಂದಿರನ್ನು ಕಳೆದುಕೊಂಡ ಪುಟ್ಟ ಹುಡುಗಿ ಬೆಳೆದು ದೊಡ್ಡವಳಾಗಿ ತನ್ನ ತಂದೆ ತಾಯಂದಿರನ್ನು ಹುಡುಕಿಕೊಳ್ಳಲು ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿ, ತನ್ನ ವಿಳಾಸಕ್ಕೆ ಕಳೆದುಹೋದ ತಂದೆ-ತಾಯಿಯರು, "ಮಗೂ! ನೀನು ನನ್ನ ಮಗಳು' ಎಂದು ಪತ್ರ ಬರೆಯುತ್ತಾರೆಂದು, ಅಂಥ ಪತ್ರಕ್ಕೆ ಆರ್ತಳಾಗಿ, ದಿನನಿತ್ಯವೂ ಅಂಚೆ ಕಚೇರಿಯಲ್ಲಿ ಕಾಯುತ್ತ ಕೂಡುವ ಹುಡುಗಿಯ ಚಿತ್ರವದು.

ಆ ಆರ್ತಚಿತ್ರ ಪಾಟೀಲರಲ್ಲಿ  ಮೂಡಿಸಿದ ತುಮುಲ ಅವರನ್ನು ಆ ಬಗ್ಗೆ ಬರೆದು ಹಗುರವಾಗಲು ಒತ್ತಾಯಿಸಿತಂತೆ.  ಸರಿ... ನಾನು ತನ್ಮಯನಾಗಿ ಪ್ರಾರ್ಥಿಸಿದೆ... ಓ ವಾಜ್ಮಯದ ಬೀಜವೇ! ಈ ವೈಲ್ಡ್‌ ಸೀಡ್‌ ಹೇಳುವಂತೆ ಗದ್ಯ-ಪದ್ಯ ಎಂತೆನ್ನುವ ವಿಂಗಡನೆಯ ಕಸವನ್ನು ಕಿತ್ತು ಹದಮಾಡಿ ಇಟ್ಟುಕೊಂಡಿದ್ದೇನೆ. ನನ್ನ ಪ್ರಜ್ಞೆಯನ್ನು ಬಾ ಬೀಜವೇ ಬಾ ಎಂದು ಕರೆದಾಗ ಬಂದು ಬಿದ್ದು ಮೊಳಕೆಯೊಡೆದದ್ದು ಗದ್ಯವೋ -ಪದ್ಯವೋ! ನಾನರಿಯೆ.ಎನ್ನುತ್ತಾರೆ ಪಾಟೀಲರು.

ಅದನ್ನೇ ರಾಘವೇಂದ್ರ ಪಾಟೀಲರು ತಮ್ಮ ಕವಿತೆಗಳ ಜೊತೆಗೆ ಎಚ್‌.ಎಸ್‌. ವಿ. ಅವರಿಗೆ ತೋರಿಸಿದರಂತೆ. ಕ್ಷಣಕಾಲ ಸ್ತಬ್ಧವಾಗಿ ಕುಳಿತ ವೆಂಕಟೇಶಮೂರ್ತಿಯವರು ಹೇಳಿದರಂತೆ - "ಪಾಟೀಲ್‌...! ನೀವು ಈಗ ಗದ್ಯವೆಂದು ಏನು ಬರೆದಿದ್ದೀರಲ್ಲ ಅದು ಕಾವ್ಯ! ನೀವು ಇಂಥ ಕಾವ್ಯವನ್ನೇ ಬರೆಯಿರಿಎಂದರು. ಅಂದಿನಿಂದ ಮೊದಲ್ಗೊಂಡಿತು ನನ್ನ ಬರಹದ ಬಂಡಿ ಎನ್ನುತ್ತಾರೆ ಪಾಟೀಲ್. ಜೊತೆಗೆ ಹೇಳುತ್ತಾರೆ ಇಂದಿಗೂ ನನಗೆ ತಿಳಿಯದು ನಾನು ಬರೆಯುತ್ತಿರುವುದು ಗದ್ಯವೋ ಪದ್ಯವೋಎಂದು.

ಶಿಕ್ಷಣ, ಸಾಹಿತ್ಯ ಮತ್ತು ಸಾಮಾಜಿಕ ನೆಲೆಗಳಲ್ಲಿ ಶ್ರಮಿಸುತ್ತಿರುವ ರಾಘವೇಂದ್ರ ಪಾಟೀಲರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.

ಆಧಾರ:  ರಾಘವೇಂದ್ರ ಪಾಟೀಲರ ಸ್ವಯಂ ಬರಹ, ವಿಕಿಪೀಡಿಯಾ ಮತ್ತು ಇನ್ನಿತರ ಅಂತರಜಾಲದ ಲೇಖನಗಳನ್ನು ಈ ಬರಹ ಆಧರಿಸಿದೆ.


Tag: Raghavendra Patil

ಕಾಮೆಂಟ್‌ಗಳಿಲ್ಲ: