ಶನಿವಾರ, ಆಗಸ್ಟ್ 31, 2013

ಅಬ್ರಹಾಂ ಲಿಂಕನ್ನರ ನೆನಪು

ಅಬ್ರಹಾಂ ಲಿಂಕನ್ನರ ನೆನಪು

ಆತ್ಮವಿಶ್ವಾಸದಿಂದ ಇರೋದು ಹೇಗೆ ಎಂಬುದಕ್ಕೆ ನಮ್ಮ ಗುರುಗಳು ಒಮ್ಮೆ ಹೇಳುತ್ತಿದ್ದರು:  ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ತಮ್ಮ ಬದುಕಿನಲ್ಲಿ ಎದುರಿಸಿದ ಸೋಲುಗಳು ಅಪಾರ!  ಇಪ್ಪತ್ತೇಳನೆಯ ವಯಸ್ಸಿನಲ್ಲಿ ಅವರ ದೇಹದ ನರಮಂಡಲವೇ ತೊಂದರೆಗೊಳಗಾಯಿತು.  ನಲವತ್ತಾರನೆಯ ವಯಸ್ಸಿನಲ್ಲಿ ಸೆನೆಟರ್ ಚುನಾವಣೆಯಲ್ಲಿ ಅವರು ಸೋಲುಂಡರು.  ನಲವತ್ತೇಳನೆಯ ವಯಸ್ಸಿನಲ್ಲಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅವರಿಗೆ ಸೋಲಾಯಿತು.  ಹೀಗೆಲ್ಲ ಸೋಲುಗಳು ದಿಕ್ಕೆಡಿಸಿದರೂ ಅವರ ಆತ್ಮವಿಶ್ವಾಸಕ್ಕೆ ಸ್ವಲ್ಪವೂ ದಕ್ಕೆ ಬರಲಿಲ್ಲ.  ಐವತ್ತೆರಡನೆಯ ವಯಸ್ಸಿನಲ್ಲಿ ಅವರು ಅಮೆರಿಕದ ಅಧ್ಯಕ್ಷರಾದರು.

ಫೆಬ್ರವರಿ 12,1809 ಅಬ್ರಹಾಂ ಲಿಂಕನ್ನರು ಹುಟ್ಟಿದ ದಿನ.  ಒಬ್ಬ ರಾಜಕಾರಣಿ, ಒಬ್ಬ ಆಡಳಿತಗಾರ ಹೇಗಿರಬೇಕು, ಹೇಗಿದ್ದರೆ ಚೆನ್ನ ಎಂಬುದಕ್ಕೆ ಅಬ್ರಹಾಂ ಲಿಂಕನ್ನರಿಗಿಂತ ಶ್ರೇಷ್ಠ ಉದಾಹರಣೆ ದೊರಕುವುದು ವಿರಳ.  ಈ ಕುರಿತು ಒಂದೆರಡು ನಿದರ್ಶನಗಳು ಇಲ್ಲಿವೆ.

ಲಿಂಕನ್, ರಾಷ್ಟ್ರಾಧ್ಯಕ್ಷರಾದ ಮೇಲೆ ಒಬ್ಬ ವ್ಯಕ್ತಿಯನ್ನು ರಕ್ಷಣಾ ಇಲಾಖೆಯ ಕಾರ್ಯದರ್ಶಿಯಾಗಿ ನಿಯಮಿಸಿದರು. ಅದೊಂದು ಭಾರೀ ಜವಾಬ್ದಾರಿಯ ಹುದ್ದೆ. ಆತ ರಾಷ್ಟ್ರಪತಿಯೊಂದಿಗೆ ಸದಾ ಸಂಪರ್ಕದಲ್ಲಿದ್ದು ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನು ಗುಪ್ತವಾಗಿ ಚರ್ಚಿಸಿ ನಿರ್ಧಾರಕ್ಕೆ ಬರಬೇಕಾಗುತ್ತದೆ. ಅದಕ್ಕೆ ಅವರಿಬ್ಬರ ನಡುವೆ ತುಂಬ ಹೊಂದಾಣಿಕೆ ಅವಶ್ಯಕ. ಆದರೆ ರಕ್ಷಣಾ ಇಲಾಖೆಯ ಕಾರ್ಯದರ್ಶಿಯಾದ ವ್ಯಕ್ತಿಗೆ ಲಿಂಕನ್‌ರನ್ನು ಕಂಡರೆ ಆಗುತ್ತಿರಲಿಲ್ಲ. ಈತ ಕಪ್ಪು ಮನುಷ್ಯನೆಂದು ಅವಕಾಶ ದೊರೆತಾಗಲೆಲ್ಲ ಟೀಕೆ ಮಾಡುತ್ತಿದ್ದ. ಅವನ ಪ್ರಕಾರ ಲಿಂಕನ್ ಬುದ್ಧಿವಂತರಲ್ಲ, ಆಕಸ್ಮಿಕವಾಗಿ ರಾಷ್ಟ್ರಪತಿಯಾದವರು.

ಲಿಂಕನ್ ಸ್ನೇಹಿತರಿಗೆ, ಅಭಿಮಾನಿಗಳಿಗೆ ಅವನ ನಡತೆ ಸರಿಕಾಣಲಿಲ್ಲ, ಆತ ಸಾರ್ವಜನಿಕವಾಗಿ ಮಾತನಾಡುವಾಗಲೂ ಸೂಚ್ಯವಾಗಿ ಅಧ್ಯಕ್ಷರನ್ನು ಲೇವಡಿ ಮಾಡುತ್ತಿದ್ದುದು ಅವರ ಕೋಪಕ್ಕೆ ಕಾರಣವಾಗಿತ್ತು.

ಅವರು ತಾಳಿಕೊಳ್ಳಲಾಗದೆ ಲಿಂಕನ್‌ರ ಬಳಿಗೆ ಬಂದು ಕಾರ್ಯದರ್ಶಿಯ ಬಗ್ಗೆ ತಕರಾರು ಮಾಡಿ ಅವನನ್ನು ಕೆಲಸದಿಂದ ತೆಗೆದುಬಿಡುವಂತೆ ಒತ್ತಾಯಿಸಿದರು.

ಅವನು ನಿಮ್ಮನ್ನು ಸಭೆಗಳಲ್ಲಿ ಗೋರಿಲ್ಲಾ ಎಂದು ಕರೆಯುತ್ತಾನೆ. ಅದು ನಿಮಗೆ ಗೊತ್ತೇ?”

ಗೊತ್ತುಎಂದರು ಲಿಂಕನ್.

ನಿಮಗೆ ವಿದೇಶಾಂಗ ವಿಷಯಗಳು ಅರ್ಥವೇ ಆಗುವುದಿಲ್ಲ, ನೀವೊಬ್ಬ ಘೇಂಡಾಮೃಗ ಇದ್ದ ಹಾಗೆ ಎಂದು ನಗೆಯಾಡುತ್ತಾನೆ. ಇದು ನಿಮಗೆ ಗೊತ್ತೇ?”

ಚೆನ್ನಾಗಿ ತಿಳಿದಿದೆ. ಘೇಂಡಾ ಮೃಗ ಅಷ್ಟೇ ಅಲ್ಲ, ಇನ್ನೂ ಯಾವುಯಾವುದೋ ಮೃಗಕ್ಕೆ ಹೋಲಿಸುತ್ತಾನೆ.

ಇಷ್ಟು ಗೊತ್ತಿದ್ದ ಮೇಲೆ ಅವನನ್ನು ಇನ್ನೂ ಏಕೆ ರಕ್ಷಣಾ ಕಾರ್ಯದರ್ಶಿಯಾಗಿ ಇಟ್ಟುಕೊಂಡಿದ್ದೀರಿ? ಅವನನ್ನು ನೇಮಕ ಮಾಡುವ ಮೊದಲೇ ಅವನ ಪೂರ್ವಾಪರಗಳನ್ನು ತಿಳಿದುಕೊಂಡು ನಿಮ್ಮ ಬಗ್ಗೆ ಆತನಿಗೆ ಗೌರವ, ಒಲವು ಇದೆಯೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಂಡಿದ್ದರೆ ಚೆನ್ನಾಗಿತ್ತು. ಈಗ ಅವನು ಮಾತನಾಡುವ ರೀತಿಯನ್ನು ನೋಡಿದರೆ ನಮಗೇ ಅಪಮಾನವಾದಂತಾಗುತ್ತದೆ ನೀವೇಕೆ ಅವನನ್ನು ತಾಳಿಕೊಂಡಿದ್ದೀರಿ?”

ಅಭಿಮಾನಿಗಳ ಈ ಪ್ರಶ್ನೆಗಳನ್ನು ಶಾಂತವಾಗಿ ಕೇಳಿ ಅಬ್ರಹಾಂ ಲಿಂಕನ್ ಹೇಳಿದರು,  “ಸ್ನೇಹಿತರೇ, ನನಗೆ ನಿಮ್ಮ ಅಭಿಮಾನ, ಪ್ರೀತಿ ಅರ್ಥವಾಗುತ್ತದೆ. ಆದರೆ ನಾನು ಅವನನ್ನು ನೇಮಕ ಮಾಡುವ ಮೊದಲು ಅವನ ವಿಷಯವಾಗಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ.  ಆತ ಬಹಳ ಸಮರ್ಥ, ಕರ್ತವ್ಯ ನಿಷ್ಠ. ಆತನಿಗೆ ರಕ್ಷಣಾ ವ್ಯವಸ್ಥೆಯ ಬಗ್ಗೆ ಆಳವಾದ ಜ್ಞಾನವಿದೆ, ಚತುರತೆ ಇದೆ.  ಇವನಿಗಿಂತ ಯೋಗ್ಯ ವ್ಯಕ್ತಿ ಯಾರೂ ಇಲ್ಲ.  ಆತ ಅಬ್ರಹಾಂ ಲಿಂಕನ್‌ನನ್ನು ಪ್ರೀತಿಸಲಿಕ್ಕಿಲ್ಲ, ಆದರೆ ಅಮೆರಿಕ ದೇಶವನ್ನು ಅತ್ಯಂತ ಆಳವಾಗಿ ಪ್ರೀತಿಸುತ್ತಾನೆ.  ಅದು ನನಗೆ ಮತ್ತು ದೇಶಕ್ಕೆ ಮುಖ್ಯ.  ಆತ ನನ್ನನ್ನು ವೈಯಕ್ತಿಕವಾಗಿ ಟೀಕೆ ಮಾಡುತ್ತಾನೆಂದು ಕೆಲಸದಿಂದ ತೆಗೆದು ಹಾಕಿ ರಾಷ್ಟ್ರ ಒಬ್ಬ ಶ್ರೇಷ್ಠ ಆಡಳಿತಗಾರರನ್ನು ಕಳೆದುಕೊಳ್ಳುವಂತೆ ಮಾಡಲಾರೆ.  ನೋಡುತ್ತಿರಿ, ಇನ್ನು ಕೆಲವೇ ದಿನಗಳಲ್ಲಿ ಅವನ ವೈಯಕ್ತಿಕ ಗೌರವವನ್ನು ಪಡೆಯುವುದಕ್ಕೆ ನಾನು ಸತತ ಪ್ರಯತ್ನ ಮಾಡುತ್ತೇನೆಎಂದು ಸಮಾಧಾನ ಮಾಡಿದರು. ಮುಂದೆ ಹಾಗೆಯೇ ಆಯಿತು. ಆ ಕಾರ್ಯದರ್ಶಿ ಲಿಂಕನ್‌ರ ಅತ್ಯಂತ ಅಭಿಮಾನಿಗಳಲ್ಲಿ ಒಬ್ಬನಾದ.

ಅಮೆರಿಕದ ಈಗಿನ ಅಧ್ಯಕ್ಷ ಬರಾಕ್ ಒಬಾಮರಿಗೆ ಒಂದು ಪ್ರಶ್ನೆ ಕೇಳಲಾಯಿತು.  ಯಾವ ಪುಸ್ತಕ ವೈಟ್ ಹೌಸಿನಲ್ಲಿ ಅತ್ಯಂತ ಅವಶ್ಯಕ ಎಂದು ಭಾವಿಸುತ್ತೀರಿ. ಅವರು ತಕ್ಷಣವೇ ಉತ್ತರವಿತ್ತರು. Team of Rivals’ಈ ಪುಸ್ತಕವು  ಅಬ್ರಹಾಂ ಲಿಂಕನ್ನರು ಯಾವ ರೀತಿಯಲ್ಲಿ ತಮ್ಮ ಕಡು ವಿರೋಧಿಗಳನ್ನು ವಿವಿಧ ಹುದ್ಧೆಗಳಲ್ಲಿ ಕುಳ್ಳಿರಿಸಿ ಅಮೆರಿಕ ದೇಶವನ್ನು ಪಾರು ಮಾಡಿದರೆಂಬುದರ ಅದ್ಭುತ ಚಿತ್ರಣವೇ ಆಗಿದೆ.  ಈ ಪುಸ್ತಕವು ವಿಶ್ವದ ಮಹಾನ್ ನಾಯಕರಲ್ಲಿ ಒಬ್ಬರಾದ ಅಬ್ರಹಾಂ ಲಿಂಕನ್ನರ ಬದುಕಿನ ರೋಚಕ ಕಥಾನಕವಾಗಿದೆ.

ಲಿಂಕನ್ ಅವರ ಅಧ್ಯಕ್ಷಗಿರಿಯ ಪ್ರಾರಂಭದಲ್ಲಿ   'ದಿ ನ್ಯೂಯಾರ್ಕ್ ಹೆರಾಲ್ಡ್' ಅಬ್ರಹಾಂ ಲಿಂಕನ್ನರನ್ನು  ಹೀಗೆ ಟೀಕಿಸಿತ್ತು: "ರಿಪಬ್ಲಿಕನ್ ಪಾರ್ಟಿಯು ನಾಮಪತ್ರ ಸಲ್ಲಿಕೆಯ ಮೊದಲೇ, ತನ್ನಲ್ಲಿ ಕಡಿಮೆಯಿದ್ದ ಬೌದ್ಧಿಕ ಹಂತದಿಂದ ಇನ್ನೂ ಕೆಳಗೆ ಜಾರಿದಂತಾಗಿದೆ.  ಮುತ್ಸದ್ಧಿಗಳು ಹಾಗೂ ಸಮರ್ಥ ವ್ಯಕ್ತಿಗಳಿಗೆ ಬದಲಾಗಿ ಅವರು ಶುದ್ಧ ವ್ಯಾಕರಣ ಸಹಾ ಗೊತ್ತಿಲ್ಲದ ನಾಲ್ಕನೇ ದರ್ಜೆಯ ಭಾಷಣ ಮಾಡುವವರನ್ನು ನೇಮಿಸಿಕೊಂಡಿದ್ದಾರೆ".

ನಂತರ ಈ ಅಭಿಪ್ರಾಯ ಹೇಗೆ ಬದಲಾಯಿತು ನೋಡಿ.  "ಲಿಂಕನ್ ಸೂರ್ಯನಂತೆ.  ಆತನೆದುರು ನೆಪೋಲಿಯನ್, ವಾಶಿಂಗ್ಟನ್ ಹಾಗೂ ಸೀಸರ್  ಶ್ರೇಷ್ಠತೆಯೆಲ್ಲಾ ಚಂದ್ರನ ಬೆಳಕಂತೆ.  ಆತನ ಉದಾಹರಣೆ ವಿಶ್ವಮಾನ್ಯ ಮತ್ತು ಸಾವಿರಾರು ವರ್ಷ ಉಳಿಯುವಂತದ್ದು.  ಆತ ಅವನ ದೇಶಕ್ಕಿಂತ ಹಾಗೂ ಎಲ್ಲ ಅಧ್ಯಕ್ಷರನ್ನೂ ಒಟ್ಟುಗೂಡಿಸಿ ಅಳೆದದಾಗಲೂ ದೊಡ್ಡವನಾಗುತ್ತಾನೆ.  ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ಜಗತ್ತಿರುವವರೆಗೂ ಆತ ಚಿರಸ್ಮರಣೀಯ" - ಲಿಯೋ ಟಾಲ್ ಸ್ಟಾಯ್, 'ದಿ ವರ್ಲ್ಡ್, ನ್ಯೂಯಾರ್ಕ್, 1909.

ಲಿಂಕನ್ ಅಧ್ಯಕ್ಷರಾಗಿದ್ದಾಗ ವೈಟ್ ಹೌಸ್ನಲ್ಲಿ ನಡೆಯಿತೆನ್ನಲಾದ ಘಟನೆಯೊಂದು ಹೀಗಿದೆ.  "ಲಿಂಕನ್ ಅವರ ಅಧ್ಯಕ್ಷೀಯ ನಿವಾಸದಲ್ಲಿ ಅತಿಥಿಗಳು ಬೀಡುಬಿಟ್ಟಿದ್ದರು.  ಅಧ್ಯಕ್ಷರು ಸ್ವತಃ ಶೂ ಪಾಲೀಶ್ ಮಾಡಿಕೊಳ್ಳುತ್ತಿದ್ದುದನ್ನು ನೋಡಿ ಅವರಿಗೆ ಅಚ್ಚರಿ.  ಆ ಗುಂಪಿನ ಮುಂಚೂಣಿಯಲ್ಲಿದ್ದವ ಪ್ರಶ್ನಿಸಿದ, "ಅಧ್ಯಕ್ಷರೇ, ನಿಮ್ಮ ಶೂ ನೀವೇ ಪಾಲಿಶ್ ಮಾಡಿಕೊಳ್ಳುತ್ತೀರಾ?".

ಅವನನ್ನೊಮ್ಮೆ ಅಪಾದಮಸ್ತಕ ದಿಟ್ಟಿಸಿ ಲಿಂಕನ್ ಕೇಳಿದರು, "ಹಾಗಾದರೆ ನೀನ್ಯಾರ ಶೂ ಪಾಲೀಶ್ ಮಾಡ್ತೀಯಾಪ್ಪ?"


ಶ್ರೇಷ್ಠ ನೇತಾರರು, ದೂರದರ್ಶಿತ್ವ ಉಳ್ಳವರು, ದಾರ್ಶನಿಕರು ನಡೆದುಕೊಂಡ ರೀತಿ ಇದು. ಪ್ರಪಂಚದ ಇತಿಹಾಸ ಎಂಬುದಕ್ಕೆ ಒಂದಿಷ್ಟು ಮೌಲ್ಯವೇನಾದರೂ ಇದ್ದರೆ, ಇಂತಹ ಶ್ರೇಷ್ಠ ಮಹಾನುಭಾವರು ಈ ಭುವಿಯಲ್ಲಿ ಹಾದುಹೋಗಿದ್ದಾರೆ ಎಂಬುದರಿಂದಲೇ.   ಅಬ್ರಹಾಂ ಲಿಂಕನ್ ಎಂಬ ಮಹಾನ್ ಚೇತನಕ್ಕೆ ಗೌರವ ಅರ್ಪಿಸೋಣ.

Tag: Abraham Lincoln

ಕಾಮೆಂಟ್‌ಗಳಿಲ್ಲ: