ಬುಧವಾರ, ಆಗಸ್ಟ್ 28, 2013

ಎಸ್. ಕೆ. ಕರೀಂಖಾನ್

ಎಸ್. ಕೆ. ಕರೀಂಖಾನ್

ಜನಪದ ಗೀತೆಗಳ ಸಂಗ್ರಹ ಹಾಗೂ ಗಾಯನದಿಂದ ಕನ್ನಡ ನಾಡಿನಲ್ಲಿ ಪ್ರಖ್ಯಾತರಾಗಿದ್ದ ಡಾ. ಎಸ್. ಕೆ. ಕರೀಂಖಾನ್ ಅವರದು ಬಹುಮುಖ ವ್ಯಕ್ತಿತ್ವ.  ಕನ್ನಡದ ಜಾನಪದ, ರಂಗಭೂಮಿ, ಚಿತ್ರರಂಗ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕಾಣಿಕೆ ನೀಡಿರುವ ಕರೀಂಖಾನರು ಅಪ್ರತಿಮ ದೇಶಾಭಿಮಾನಿಯಾಗಿ, ಸ್ವಾತಂತ್ರ ಹೋರಾಟಗಾರರಾಗಿ ಹಾಗೂ ಕರ್ಣಾಟಕ ಏಕೀಕರಣಕ್ಕೆ ಹೋರಾಡಿದವರಾಗಿ ಕನ್ನಡ ನಾಡಿನ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನಗಳಿಸಿದ್ದಾರೆ.  106ವರ್ಷ ಬಾಳಿದ ಎಸ್. ಕೆ. ಕರೀಂಖಾನರು 2006ರ ವರ್ಷದಲ್ಲಿ (ಜುಲೈ 29, 2006) ಈ ಲೋಕವನ್ನಗಲಿದರು.  

ಕರೀಂಖಾನರು 1900ರ ವರ್ಷದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಜನಿಸಿದರು.  ಅಫ್ಘಾನಿಸ್ಥಾನದಲ್ಲಿ ಯೋಧರಾಗಿದ್ದ ಅವರ ತಂದೆ ಅಬ್ರುರಹಮಾನ್ ಖಾನ್ ಅವರು ಮನೆಕಲಹದಿಂದ ದೇಶಬಿಟ್ಟು ಭಾರತಕ್ಕೆ ಬಂದವರು.  ಕರೀಂಖಾನರ ತಾಯೀ ಜೈನಬ್ಬಿ ಅರಬ್ ಮೂಲದವರು.  ಹಾಸನದಲ್ಲಿ 5ನೇ ಫಾರಂವರೆಗೆ ಕರೀಂಖಾನ್ ಅವರ ವಿದ್ಯಾಭ್ಯಾಸ ನಡೆಯಿತು.  ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಅವರು ಮುಂದೆ ಅಣ್ಣನ ಆಶ್ರಯದಲ್ಲಿ ಬೆಳೆದರು.  ಅವರ ಗುರು ಆಚಂಗಿ ನಾರಾಯಣಶಾಸ್ತ್ರಿಗಳು ಬೀರಿದ ಪ್ರಭಾವ ಅಪಾರ.  ನಾರಾಯಣಶಾಸ್ತ್ರಿಗಳು ಕೇವಲ ಶಿಕ್ಷಕರಾಗಿರಲಿಲ್ಲ.  ನೀವಾರಎಂಬ ಕಥಾಸಂಕಲನವನ್ನು ಆಚಂಗಿ ನಾರಾಯಣಶಾಸ್ತ್ರಿಯವರಿಗೆ ಅರ್ಪಿಸುತ್ತಾ ಕರೀಂಖಾನರು ಹೇಳಿರುವಂತೆ ಅವರು ವೇದವೇದಿಗಳೂ, ತತ್ವಶಾಸ್ತ್ರಕೋವಿದರೂ, ಕವಿಪುಂಗವರೂ, ಅದ್ಭುತ ವಿದ್ಯಾವಂತರೂ ಸಮತಾವಾದಿಗಳೂಆಗಿದ್ದರು.  ಶಾಸ್ತ್ರಿಗಳಿಗೆ ಸಂಗೀತ, ವೈದ್ಯ, ಜ್ಯೋತಿಷ್ಯ ಶಾಸ್ತ್ರಗಳಲ್ಲಿಯೂ ಸಾಕಷ್ಟು ಪಾಂಡಿತ್ಯವಿತ್ತು.  ಇಂಥ ಗುರುಗಳ ಮೆಚ್ಚಿನ ಶಿಷ್ಯನಾಗಿ ಬೆಳೆದ ಕರೀಂಖಾನರು ಕನ್ನಡ ಮತ್ತು ಸಂಸ್ಕೃತ ಭಾಷೆಗಳೆರಡರಲ್ಲೂ ಅಪೂರ್ವ ಪಾಂಡಿತ್ಯ ಗಳಿಸಿದರು.

ಹೈಸ್ಕೂಲ್ ತಲುಪುವ ವೇಳೆಗೆ ಕರೀಂಖಾನರು ಜನಪದ ಸಾಹಿತ್ಯದತ್ತ ಆಕರ್ಷಿತರಾದರು.  ಹಿತ್ತಾಳೆ, ತಾಮ್ರ ಪಾತ್ರೆಗಳ ತಯಾರಿಕೆಗೆ ಪ್ರಸಿದ್ಧವಾಗಿದ್ದ ಶ್ರವಣಬೆಳಗೊಳದಿಂದ ಪಾತ್ರೆಪರಡಿಗಳನ್ನು ಗಾಡಿಗಳಲ್ಲಿ ಹೇರಿಕೊಂಡು ಊರೂರು ತಿರುಗುತ್ತ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಸಕಲೇಶಪುರಕ್ಕೆ ಬಂದಾಗ, ಅವರ ಸರಕುಗಳನ್ನು ಇಳಿಸಿಕೊಳ್ಳುವುದಕ್ಕೆ ಕರೀಂಖಾನರ ಮನೆಯ ಮುಂದಿನ ಕೋಣೆಯನ್ನು ಬಿಟ್ಟುಕೊಡಲಾಗುತ್ತಿತ್ತು.  ಸುತ್ತಲಿನ ಹಳ್ಳಿಗಳನ್ನು ತಿರುಗಿ ಬಂದ ವ್ಯಾಪಾರಿಗಳು ರಾತ್ರಿಯ ಹೊತ್ತು ಮನೆಯ ಮುಂದೆ ಗಾಡಿಗಳನ್ನು ನಿಲ್ಲಿಸಿಕೊಂಡು ಬಯಲಿನಲ್ಲಿಯೇ ಅಡುಗೆ ಮಾಡಿ ಉಂಡ ನಂತರ ಜನಪದಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿಕೊಳ್ಳುತ್ತಿದ್ದರು.  ಹೀಗೆ ಜನಪದ ಗೀತೆಗಳನ್ನು ಹತ್ತಿರದಿಂದ ಕೇಳುವ ಅವಕಾಶ ಕರೀಂಖಾನರಿಗೆ ದೊರೆಯಿತು.  ಜನಪದ ಗೀತೆಗಳ ನಾದ ಸೌಂದರ್ಯಕ್ಕೆ, ಭಾವಸೌಂದರ್ಯಕ್ಕೆ ಅವರು ಮಾರು ಹೋದರು.  ಕರೀಂಖಾನರ ಅಭಿಪ್ರಾಯದಲ್ಲಿ ಶಾಸ್ತ್ರೀಯ ಸಂಗೀತದ ಬಹುತೇಕ ಕೃತಿಗಳೆಲ್ಲವೂ, ಭಗವಂತನ ಒಲುಮೆಯನ್ನು ಬೇಡುವಂಥವು.  ಅಲ್ಲಿನ ರಾಗಗಳಲ್ಲಿ ದೀನಭಾವವೇ ಪ್ರಧಾನ.  ಆದರೆ ಜನಪದ ಸಾಹಿತ್ಯದಲ್ಲಿ ಉತ್ಸಾಹ ಸ್ಫೂರ್ತಿ, ಲವಲವಿಕೆಗಳಿವೆ.  ಮುಂದೆ ಕರೀಂಖಾನರು ಊರೂರು ತಿರುಗುತ್ತಿದ್ದಾಗ ಜನಪದ ಗೀತೆಗಳ ಸಂಗ್ರಹ ಮತ್ತು ಹಾಡುಗಾರಿಕೆ ಅವರ ಹವ್ಯಾಸ ಹಾಗೂ ಜೀವನೋಪಾಯವೂ ಆಯಿತು.  ಕಾಂಗ್ರೆಸ್ ಚಳುವಳಿ, ಕರ್ಣಾಟಕ ಏಕೀಕರಣ ಮುಂತಾದ ಚಳುವಳಿಗೆ ಜನಪದವನ್ನು ಕರೀಂಖಾನರು ಪ್ರಚಾರದ ಮಾಧ್ಯಮವಾಗಿ ಉಪಯೋಗಿಸಿಕೊಂಡರು.  ಜನಪದಗೀತೆಗಳನ್ನು ಭಾವ ತುಂಬಿ ಹಾಡುವ ಕಲೆ ಕರೀಂಖಾನರಿಗೆ ಸಿದ್ಧಿಸಿತ್ತು.  ಹಳ್ಳಿಯ ಬಯಲಿನಲ್ಲಿ ಯಾವುದಾದರೂ ಒಂದು ಮರದ ಕೆಳಗೆ ನಿಂತು ಅವರು ಹಾಡಲು ಪ್ರಾರಂಭಿಸುತ್ತಿದ್ದರೆ ಜನ ಇವರ ಸುತ್ತ ಜಮಾಯಿಸುತ್ತಿದ್ದರು.  ಕರೀಂಖಾನರ ಹಾಡಿಗೆ ಆ ಕಾಲದ ಪಂಡಿತಪಾಮರರೆಲ್ಲಾ ಮಾರುಹೋಗಿದ್ದರು.  ಕನ್ನಡ ಸಾಹಿತ್ಯ ಪರಿಷತ್ತಿನ ವಸಂತಮಹೋತ್ಸವ ಸಂದರ್ಭದಲ್ಲಿ ಕರೀಂಖಾನರು ಜನಪದ ಗೀತೆಗಳನ್ನು ಹಾಡಿ ವೇದಿಕೆಯಿಂದ ಕೆಳಗಿಳಿದು ಬಂದ ನಂತರ ನೀವು ಇನ್ನೊಂದೆರಡು ನಿಮಿಷ ಹಾಡಿದ್ದರೆ ನಾನು ಅತ್ತೇಬಿಡುತ್ತಿದ್ದೆ ಎಂದು ಮಾಸ್ತಿಯವರು ಹೇಳಿದರಂತೆ.  ಕರೀಂಖಾನರು ಹೆಣ್ಣೊಪ್ಪಿಸುವ ಹಾಡುಗಳನ್ನು ಹೇಳುವಾಗ ಸಭೆಯಲ್ಲಿದ್ದ ಎಲ್ಲ ಹೆಣ್ಣುಮಕ್ಕಳೂ ಅತ್ತುಬಿಡುತ್ತಿದ್ದರಂತೆ.  ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ಸಿನ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದ ಸಂದರ್ಭದಲ್ಲಿ ಅಲ್ಲಿದ್ದ ಜೊತೆಯ ಚಳುವಳಿಗಾರರೆಲ್ಲ ಕರೀಂಖಾನ್ ಅವರಿಗೆ ಹಾಡಿಗೆ ಮುಗಿಬೀಳುತ್ತಿದ್ದರಂತೆ.  ಹೀಗೆ ಕರೀಂಖಾನರಿಂದ ಜನಪದ ಗೀತೆಗಳು ಹೆಚ್ಚು ಪ್ರಚಾರ ಪಡೆದವು.

ಗಾಂಧೀಜಿಯವರನ್ನು ಕಂಡ ಪ್ರಭಾವದಿಂದ ಸ್ವಾತಂತ್ರ ಚಳುವಳಿಯಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡ ಕರೀಂಖಾನರಿಗೆ ಜೀವನೋಪಾಯ ಕಠಿಣವಾಯಿತು.  ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದಕ್ಕೆ ಅಧಿಕಾರಿಗಳು ಮನೆಯವರಿಗೆಲ್ಲಾ ತೊಂದರೆ ಕೊಡುತ್ತಿದ್ದುದರಿಂದ ಮನೆಯಿಂದ ದೂರಸರಿದರು.  ಹೊಟ್ಟೆಪಾಡಿಗಾಗಿ ಜನಪದಗೀತೆಗಳ ಸಂಗ್ರಹಗಳನ್ನು ತಾವೇ ಪ್ರಕಟಿಸಿ ಮಾರಿದರು.  ಈ ಸಂದರ್ಭದಲ್ಲಿ ಅವರು ರಂಗಭೂಮಿಯತ್ತಲೂ ಆಕರ್ಷಿತರಾದರು.  ಧಾರವಾಡದ ಲೋಕಮಿತ್ರಎಂಬ ಪತ್ರಿಕೆಯ ಸಂಪಾದಕರಾಗಿಯೂ ಕೆಲಕಾಲ ಕೆಲಸ ಮಾಡಿದರು.  ರಾಯಲ್ ಇಂಡಿಯನ್ ನೇವಿ ಎಂಬ ಸಂಸ್ಥೆಯಲ್ಲಿ ಮಿಲಿಟರಿ ಬ್ಯಾಂಕ್ ಉದ್ಯೋಗಿಗಳಿಗೆ ವೈರ್ಲೆಸ್ ವರ್ತಮಾನ ಕಳುಹಿಸುವ ಕೆಲಸ ಸಿಕ್ಕಿ ಮುಂಬೈಗೆ ಹೋದರು.  ಹೆಚ್ಚುಕಾಲ ಇರುವ ಮನಸ್ಸಾಗದೆ ಪುನಃ ಕರ್ನಾಟಕಕ್ಕೆ ಬಂದರು.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕರೀಂಖಾನ್ ಪ್ರಮುಖ ಪಾತ್ರವಹಿಸಿದರು.  ಬದುಕಿನುದ್ದಕ್ಕೂ ಹೋರಾಡುತ್ತಲೇ ಬಂದ ಕರೀಂಖಾನ್ ಅವರಿಗೆ ಭದ್ರವಾಗಿ ನೆಲೆನಿಲ್ಲುವಂತಹ ಆರ್ಥಿಕ ನೆಲೆ ಇರಲಿಲ್ಲ.  ಹೀಗಾಗಿ ಅವರು ಸಂಸಾರಿಯಾಗಲೇ ಇಲ್ಲ.  ಉದರಂಭರಣಕ್ಕಾಗಿಯೇ ಅವರು ಸಿನಿಮಾರಂಗಕ್ಕೆ  ಹೋದರು.  ಭಕ್ತ ಕನಕದಾಸ ಚಿತ್ರದ ನಿರ್ಮಾಪಕರಾದ ಆರ್ ನಾಯ್ಡು ಅವರು ಕರೀಂಖಾನರನ್ನು ಮದ್ರಾಸಿಗೆ ಕರೆದುಕೊಂಡು ಹೋದರು.  ಅಲ್ಲಿದ್ದ 10 ವರ್ಷಗಳ ಅವಧಿಯಲ್ಲಿ ಅವರು ಅನೇಕ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದರು.

ಸ್ವರ್ಣಗೌರಿ ಚಿತ್ರಕ್ಕೆ ಅವರು ಬರೆದ ಹಾಡುಗಳು ಅತ್ಯಂತ ಜನಪ್ರಿಯವಾದವು.  ಈ ಚಿತ್ರದ ಹಾಡುಗಳಿಗಾಗಿಯೇ ಕರೀಂಖಾನ್ ಹೆಸರು ಬಹಳ ಪ್ರಸಿದ್ದಿ ಪಡೆಯಿತು.  ಪ್ರಶಸ್ತಿ ಗೌರವವೂ ಪ್ರಾಪ್ತವಾಯಿತು.  ಚಿತ್ರರಂಗದ ಆಗುಹೋಗುಗಳನ್ನು ಸಮೀಪದಿಂದ ನೋಡುತ್ತಿದ್ದ ಕರೀಂಖಾನ್ ಅಲ್ಲಿನ ಶೋಷಣೆ, ಅವ್ಯವಹಾರಗಳಿಂದ ಬಹಳ ನೊಂದರು.  ಚಿತ್ರ ಮಾಡುವವರ ಹಾಗೇ ಚಿತ್ರ ನೋಡುವವರೂ ಕೂಡಾ ವಿಲಾಸಿ ಜನ, ಭೋಗಿಜನ.  ನಾನು ಹಾಡು ಬರೆದದ್ದು ನಿಂತಾಗ ಯಾರೂ ಪ್ರಶ್ನಿಸಲಿಲ್ಲಎನ್ನುತ್ತಿದ್ದ ಕರೀಂಖಾನರ ಮಾತು ಚಿಂತನಾರ್ಹವಾಗಿದೆ.

ಕರೀಂಖಾನರು ಸೇವಾದಳದಲ್ಲಿ ಅಪೂರ್ವ ಸೇವೆ ಸಲ್ಲಿಸಿದ್ದರು.  ಸೇವಾದಳ ಒಂದು ಜಾತ್ಯಾತೀತ ಧರ್ಮಾತೀತ ಸಂಸ್ಥೆಯಾಗಿತ್ತು.  ಪುರಾಣ, ಇತಿಹಾಸ, ಸಾಹಿತ್ಯ ಕುರಿತಂತೆ ನಿತ್ಯವೂ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸುವುದು ಅಂದಿನ ದಿನದ ಸೇವಾದಳದ ಚಟುವಟಿಕೆಯ ಒಂದು ಅಂಗವಾಗಿತ್ತು.  ಇದು ಕರೀಂಖಾನರ ಬೆಳವಣಿಗೆಗಳಿಗೆ ಬಹಳ ಸಹಾಯಕವಾಗಿತ್ತು.  ಸೇವಾದಳದ ಬೆಳವಣಿಗೆಯ ಬಗ್ಗೆ ಕರೀಂಖಾನ್ ಅಪಾರವಾದ ಕಾಳಜಿ ವಹಿಸಿದ್ದರು.  ಸ್ವಾತಂತ್ರ್ಯಾನಂತರದಲ್ಲಿ ಕಾಂಗ್ರೆಸ್  ಹಿಡಿತಕ್ಕೆ ಬಂದ ಸೇವಾದಳವು ಸರಿಯಾದ ಪೋಷಣೆಯಿಲ್ಲದೆ ಸೊರಗಿ ಹೋಗಿತ್ತು.  ಕರೀಂಖಾನರ ಆಸ್ಥೆಯಿಂದ ಅದನ್ನು ಭಾರತೀಯ ಸೇವಾದಳ ಎಂದು ಬದಲಾಯಿಸಿ ಸೇವಾದಳದಲ್ಲಿ ತರಬೇತಿ ಪಡೆದವರನ್ನು ಶಾಲೆಗಳಿಗೆ ವ್ಯಾಯಾಮ ಶಿಕ್ಷಕರಿಗೆ ನೇಮಿಸಬೇಕೆಂಬ ವ್ಯವಸ್ಥೆ ಕೂಡ ಜಾರಿಯಾಗಿ ಹಲವರಿಗೆ ಉದ್ಯೋಗ ಕೂಡಾ ದೊರಕುವಂತಾಯಿತು.  ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸೇವಾದಳದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲು ಕರೀಂಖಾನರನ್ನು ಆರಿಸಲಾಯಿತು.  ಒಂದು ವರ್ಷ ಅತ್ಯಂತ ನಿಷ್ಟೆಯಿಂದ ಕೆಲಸ ಮಾಡಿದ ಕರೀಂಖಾನರಿಗೆ ಭತ್ಯವನ್ನು ಕೊಡದೆ ಕೇವಲ ಒಂದು ತಿಂಗಳಿಗೆ ಕೊಡಬೇಕಾದ ಮೊತ್ತವನ್ನು ಕೈಯಲ್ಲಿಟ್ಟು ಅದನ್ನೇ ಒಂದು ವರ್ಷಕ್ಕೆ ಎಂದು ನಿಗದಿಪಡಿಸಿದಾಗ ಇನ್ನೆಂದಿಗೂ ನಿಮ್ಮ ಕಛೇರಿಗೆ ಬರಲಾರೆ ಎಂದು ಶಪಥ ಮಾಡಿ ಹೊರಬಂದರು.

ಕರೀಂಖಾನ್ ಅವರು ದುಡಿದ ಎಲ್ಲ ಕ್ಷೇತ್ರಗಳಲ್ಲಿಯೂ ಅವರಿಗೆ ಸಿಕ್ಕ ಪ್ರತಿಫಲ ಈ ರೀತಿಯದೇ ಆಗಿತ್ತು.  ಎಲ್ಲರೂ ದುಡಿಸಿಕೊಂಡು ಅವರನ್ನು ದೂರವಿಟ್ಟರು.  ಕರೀಂಖಾನರು ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಅನೇಕಸಲ ಜೈಲಿಗೆ ಹೋಗಿ ಬಂದಿದ್ದರೂ ಸ್ವಾತಂತ್ರ್ಯ ಯೋಧರಿಗೆ ದೊರೆಯಬಹುದಾಗಿದ್ದ ಗೌರವಧನ ಸಹಾ ಅವರಿಗೆ ದಕ್ಕಲಿಲ್ಲ.

ಸರ್ಕಾರವು ಕರೀಂಖಾನ್ ಅವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ನೀಡಿದಾಗ ಎಲ್ಲರಿಗೂ ಕರೀಂಖಾನರ ನೆನಪು ಬಂತು.  ಅದಕ್ಕೂ ಟೀಕೆಗಳು ಬಂದಾಗ ಆ ಸ್ಥಾನವೇ ಬೇಡ ಎಂದರು.  ಅನಂತರ ಮುಖ್ಯಮಂತ್ರಿಗಳಾದಿಯಾಗಿ ಸರ್ಕಾರವೇ ಅವರ ಮನೆಬಾಗಿಲಿಗೆ ಬಂದು ಅವರ ಮನವೊಲಿಸಲಾಯಿತು.  ಈ ಗೌರವ ಹುದ್ದೆಯಲ್ಲಿ ಕರೀಂಖಾನರು ಎಂದಿನಂತೆ ನಿಸ್ಪೃಹ ಸೇವೆ ಸಲ್ಲಿಸಿದರು.  ಕರೀಂಖಾನರು ಪ್ರದರ್ಶಕ ಕಲೆಗಳ ವಿಷಯಕ್ಕೆ ಹೆಚ್ಚು ಗಮನ ಕೊಟ್ಟರು.  ಕಲೆಗಳ ಹಾಗೂ ಪ್ರದರ್ಶನಗಳ ವಿಡಿಯೋ ಚಿತ್ರೀಕರಣ ಮಾಡಲು ಯೋಜನೆ ರೂಪಿಸಿದರು.  ಕರೀಂಖಾನರ ಅವಧಿಯಲ್ಲಿ ನಡೆದ ಬಹುಮುಖ್ಯ ಕೆಲಸವೆಂದರೆ ಅದುವರೆಗೆ ಅಜ್ಞಾತವಾಗಿದ ಗಿರಿಜನರ ಸಂಸ್ಕೃತಿಯ ಅಧ್ಯಯನ ಹಾಗೂ ಅವರ ಕಲೆಗಳ ದಾಖಲಾತಿ.  ಗಿರಿಜನರನ್ನು ಅವರ ಪರಿಸರದಲ್ಲಿಯೇ ಸ್ವಾಭಾವಿಕ ರೀತಿಯಲ್ಲಿ ಚಿತ್ರೀಕರಿಸುವ ವಿಶೇಷ ಯೋಜನೆ ಯಶಸ್ವಿಯಾಯಿತು.  ಕರೀಂಖಾನರ ಕಾಲದಲ್ಲಿ ಆರಂಭವಾದ ಬುಡಕಟ್ಟು ಜನಾಂಗಗಳ ಅಧ್ಯಯನ ಇಂದು ಜಾನಪದ ಅಧ್ಯಯನದಲ್ಲಿ ಒಂದು ಪ್ರತ್ಯೇಕ ಶಾಖೆಯಾಗಿ ಬೆಳೆಯುವಷ್ಟರ ಮಟ್ಟಿಗೆ ವಿಸ್ತೃತಗೊಂಡಿದೆ. 

ಅನೇಕ ಪ್ರತಿಷ್ಠಿತ ಸನ್ಮಾನಗಳು ಕರೀಂಖಾನರಿಗೆ ದೊರೆತಿವೆ.  ಕರ್ನಾಟಕ ಸರ್ಕಾರದ ಜನಪದಶ್ರೀಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ, ಜಾನಪದ ಜಂಗಮ ಪ್ರಶಸ್ತಿ, ಜೀಶಂಪ ಜಾನಪದ ಪ್ರಶಸ್ತಿ, ಜಾನಪದ ಹರಿಕಾರ ಬಿರುದು, ನಾಡೋಜ ಪ್ರಶಸ್ತಿ ಇತ್ಯಾದಿ ಹಲವಾರು ಅವರಿಗೆ ಗೌರವಗಳು ಸಂದವು. 

ಕರೀಂಖಾನರ ಜಾನಪದ ಗೀತೆಗಳ  ಸಂಗ್ರಹಗಳಲ್ಲಿ ವಿವಿಧ ದೇವರಗಳ ಕುರಿತ ಸ್ತುತಿ ಸಂಗ್ರಹಗಳು, ತವರು, ಬಳೆಗಾರ, ಹರಕೆ, ಜೋಗುಳ, ಕಾವಲಿಯ ಹಾಡು, ಹೈಬಾಳು, ಹಗರಣ, ಕಹಿಬಾಳು (ಪಾಂಡವರ ಕಷ್ಟಗಳನ್ನು ಕುರಿತದ್ದು), ಬಾರುನಾ (ಪ್ರಿಯಕರನನ್ನು ಕರೆಯುವ ಗೀತೆ), ಗೋಳಿನ ಗಂಡ (ಹಾಸ್ಯ ಪ್ರಧಾನ) ಮೊದಲಾದ ವಿಪುಲ ಸಂಗ್ರಹಗಳಿವೆ. 

ನೀವಾರಅನುವಾದಿತ ಕತೆಗಳು, ‘ನೀಹಾರಎಂಬ ಚಾರಿತ್ರಿಕ ಕಥಾ ಸಂಕಲನ, ‘ಬಲಿದಾನಿ ಹುಸೇನ್ಚಾರಿತ್ರಿಕ ಕಾದಂಬರಿ, ‘ಮಾತೃ ಶಾಪಎಂಬ ಪೌರಾಣಿಕ ಕಾದಂಬರಿ; ನಿರ್ದೋಷಿ, ಹುಮಾಯೂನ್, ಮಾಲತಿ ಮಾಧವ ಎಂಬ ಭವಭೂತಿಯ ಸಂಸ್ಕೃತ ನಾಟಕದ ಕನ್ನಡ ಅನುವಾದ, ಲೈಲಾಮಜ್ನು ಕನ್ನಡ ಅನುವಾದ, ಮಹಾಪ್ರಭು ಮಾಗಡಿ ಕೆಂಪೇಗೌಡ, ಶ್ರೀಕೃಷ್ಣಲೀಲೆ ಅಂತಹ ಹಲವಾರು ನಾಟಕಗಳನ್ನೂ ಕರೀಂಖಾನರು ರಚಿಸಿದ್ದರು. 

ಕರೀಂಖಾನರು ವಿಫುಲವಾಗಿ ಬರೆದರು.  ಆದರೆ ಅವರು ಬರೆದದ್ದೆಲ್ಲ ಪ್ರಕಟವಾಗಲಿಲ್ಲ.  ಅವರ ಪ್ರಕಟಿಸಿದಿದ್ದ ಬಹಳಷ್ಟು ಅಮೂಲ್ಯ ಬರಹಗಳು ಇದ್ದವು ಎಂಬುದು ಕೂಡಾ ತಿಳಿದುಬರುತ್ತದೆ.

ಕರೀಂಖಾನರ ಚಿತ್ರಗೀತೆಗಳಾದ ನಟವರಗಂಗಾಧರ’, ‘ಜಯಗೌರಿ ಜಗದೀಶ್ವರಿಅಂತಹ ಭಕ್ತಿಗೀತೆಗಳು, ‘ಬಾರೇ ನೀ ಚೆಲುವೆಯಂತಹ ಮಧುರ ಗೀತೆಗಳು ಇಂದಿಗೂ ಕನ್ನಡ ಜನಮನದಲ್ಲಿ ಭದ್ರವಾಗಿ ನೆಲೆ ಊರಿವೆ.  ಕರೀಂಖಾನರು 300ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಬರೆದರು.  ಸ್ವರ್ಣಗೌರಿ, ಜೀವನತರಂಗ, ಬೇವುಬೆಲ್ಲ, ಚಂದ್ರಕುಮಾರ, ದೇವಮಾನವ, ದೊಂಬರಕೃಷ್ಣ, ರಾಜೇಶ್ವರಿ, ಪತಿತಪಾವನಿ, ಸೂಪರ್ ನೋವಾ 455 ಮೊದಲಾದ 15 ಚಿತ್ರಗಳಿಗೆ ಉತ್ತಮ ಸಾಹಿತ್ಯ  ಒದಗಿಸಿದರು.  ಕರ್ನಾಟಕದ ಹಲವಾರು ಪುಣ್ಯಕ್ಷೇತ್ರಗಳ ಕುರಿತಾಗಿ ಸಹಾ ಅವರು ಹಾಡುಗಳನ್ನು ಬರೆದಿದ್ದಾರೆ. 

ಶತಾಯುಷ್ಯವನ್ನು ಪೂರೈಸಿ ನೂರಾ ಆರು ವರ್ಷ ಬದುಕಿದ್ದ ಎಸ್ ಕೆ ಕರೀಂಖಾನರು 2006ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಅವರ ಬದುಕು, ಸಾಹಿತ್ಯ ಮತ್ತು ಪರಿಶ್ರಮಗಳಿಂದ ಅವರು ಈ ನೆಲವನ್ನು ಪುನೀತರಾಗಿಸಿದ ಬಗೆ ನಿತ್ಯಸ್ಮರಣೆಯೋಗ್ಯವಾಗಿದೆ.  


(ಆಧಾರ: ಡಾ. ಎಸ್. ಕೆ. ಕರೀಂಖಾನರ ಕುರಿತು ಸಾಲು ದೀಪಗಳು ಕೃತಿಯಲ್ಲಿ ಕೆ. ಆರ್. ಸಂಧ್ಯಾರೆಡ್ಡಿ ಅವರ ಲೇಖನ)

Tag: S. K. Karim Khan, S. K. Kareem Khan

ಕಾಮೆಂಟ್‌ಗಳಿಲ್ಲ: