ಶುಕ್ರವಾರ, ಆಗಸ್ಟ್ 30, 2013

ಶೇಕ್ಸ್‌ಪಿಯರ್‌ಗೆ ಶರಣು

ಶೇಕ್ಸ್‌ಪಿಯರ್‌ಗೆ ಶರಣು
-ಡಾ. ಸರಜೂ ಕಾಟ್ಕರ್

ಏಪ್ರಿಲ್ 23 ಜಗತ್ಪ್ರಸಿದ್ಧ ನಾಟಕಕಾರ ಶೇಕ್ಸ್‌ಪಿಯರ್ ಹುಟ್ಟಿದ ದಿನ. ಈ ಹಿನ್ನೆಲೆಯಲ್ಲಿ ಆತನ ಊರಿಗೊಂದು ಭೇಟಿ.

ಶೇಕ್ಸ್‌ಪಿಯರ್ ಹುಟ್ಟಿ ನಾಲ್ಕೂವರೆ ನೂರು ವರ್ಷಗಳಾಗಿದ್ದರೂ ಆತನನ್ನು ಮೀರಿಸುವ ಇನ್ನೊಬ್ಬ ನಾಟಕಕಾರ ಇನ್ನೂ ಹುಟ್ಟಿಲ್ಲವೆಂದರೆ ಆತನ ಮಹತ್ವ ಅರಿವಾದೀತು. ಶೇಕ್‌ಸ್ಪಿಯರ್‌ನ ಹುಟ್ಟೂರು ಸ್ಟ್ರಾಫರ್ಡ್- ಅಪಾನ್- ಏವನ್. ಇದು ಇಂಗ್ಲೆಂಡಿನ ನಟ್ಟ ನಡುವೆ ಇದೆ. ಲಂಡನ್ನಿನಿಂದ ಬಸ್‌ನಲ್ಲಿ ಪ್ರಯಾಣಿಸಿದರೆ 3 ಗಂಟೆಯ ಪ್ರವಾಸ. ಈ ಊರು ಜಗತ್ತಿನಾದ್ಯಂತ ರಂಗಕರ್ಮಿಗಳಿಗೆ, ರಂಗಪ್ರೇಮಿಗಳಿಗೆ ಕಾಶಿ, ಮಕ್ಕಾ, ವ್ಯಾಟಿಕನ್ ಇದ್ದಂತೆ. ಇಂಗ್ಲೆಂಡಿಗೆ ಬಂದವರು ಸ್ಟ್ರಾಫರ್ಡ್-ಅಪಾನ್-ಏವನ್‌ಗೆ ಭೇಟಿ ಕೊಡದಿದ್ದರೆ ಅವರ ಇಂಗ್ಲೆಂಡ್ ಪ್ರವಾಸ ಅಪೂರ್ಣವೆನ್ನಿಸುವಷ್ಟರ ಮಟ್ಟಿಗೆ ಊರು ಖ್ಯಾತವಾಗಿದೆ. ವಿಜಾಪುರಕ್ಕೆ ಹೋಗಿ ಗೋಲಗುಮ್ಮಟ ನೋಡದಿದ್ದರೆ ಅಥವಾ ಆಗ್ರಾಕ್ಕೆ ಹೋಗಿ ತಾಜಮಹಲ್ ಕಾಣದಿದ್ದರೆ ಹೇಗೋ ಹಾಗೆಯೇ ಇಂಗ್ಲೆಂಡಿಗೆ ಬಂದು ಶೇಕ್ಸ್‌ಪಿಯರ್ ಹುಟ್ಟಿದ ಊರು ನೋಡದಿದ್ದರೆ ಇಂಗ್ಲೆಂಡ್ ಪ್ರವಾಸವೇ ವ್ಯರ್ಥವೆನಿಸುವಷ್ಟರ ಮಟ್ಟಿಗೆ ಸ್ಟ್ರಾಫರ್ಡ್ ಪ್ರಸಿದ್ಧಿಯಾಗಿದೆ.

ಶೇಕ್ಸ್‌ಪಿಯರ್ ಜನಿಸಿದ್ದು 1564ರಲ್ಲಿ. ಸ್ಟ್ರಾಫರ್ಡ್-ಅಪಾನ್-ಏವನ್ ಅಂತಹ ದೊಡ್ಡ ಊರೇನಲ್ಲ. ನಮ್ಮ ಕಡೆಯ ಮಲೆನಾಡಿನ ಸರ್ವ ಸಾಧಾರಣ ಒಂದು ಹಳ್ಳಿಯಂತೆ ಕಾಣಿಸುತ್ತದೆ. ಆದರೆ ಶೇಕ್‌ಸ್ಪಿಯರ್‌ನಿಂದಾಗಿ ಈ ಊರು ಇಂದು ಜಾಗತಿಕ ನಕ್ಷೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಶೇಕ್ಸ್‌ಪಿಯರ್ ಹುಟ್ಟಿದ ದಿನಾಂಕವಾದ ಏಪ್ರಿಲ್ 23ರಂದು ಜಗತ್ತಿನಾದ್ಯಂತದಿಂದ ನಾಟಕ ಪ್ರೇಮಿಗಳು ಈ ಊರಲ್ಲಿ ಸೇರಿ ಅವನ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಅಂದು ಅವನ ಹುಟ್ಟಿದ ಮನೆಯಿಂದ ಮೆರವಣಿಗೆ ಹೊರಟು ಆತ ಕಲಿತ ಗ್ರಾಮರ್ ಸ್ಕೂಲ್‌ಗೆ ಪ್ರದಕ್ಷಿಣೆ ಹಾಕಿ, ಅವನ ಸಮಾಧಿಯಿರುವ ಟ್ರಿನಿಟಿ ಚರ್ಚ್‌ಗೆ ಬಂದು ತಮ್ಮ ಗೌರವ ಸಲ್ಲಿಸುತ್ತಾರೆ. ಈ ದಿನ ಈ ಊರಿಗೆ ಜಗತ್ತಿನಾದ್ಯಂತದಿಂದ ಆತನ ಅಭಿಮಾನಿಗಳು, ಅವನ ಕೃತಿಗಳನ್ನು ಕಾಲೇಜುಗಳಲ್ಲಿ ಕಲಿಸುವ ಪ್ರೊಫೆಸರ್‌ಗಳು, ವಿಮರ್ಶಕರು, ಅವನ ನಾಟಕಗಳಲ್ಲಿ ಅಭಿನಯಿಸಿದ ಮತ್ತು ಅಭಿನಯಿಸುತ್ತಿರುವ ನಟ-ನಟಿಯರು, ದಿಗ್ದರ್ಶಕರು, ಆತನನ್ನು ಬೇರೆ ಬೇರೆ ಭಾಷೆಗಳಲ್ಲಿ ಅನುವಾದಿಸಿರುವ ಭಾಷಾ ಪಂಡಿತರು ಹೀಗೆ ಅಂದು ಸ್ಟ್ರಾಫರ್ಡ್‌ನಲ್ಲಿ ಕಲಾರಸಿಕರ ಕುಂಭಮೇಳವೇ ನೆರೆದಿರುತ್ತದೆ. ಆತನ ಮನೆಯಿಂದ ಸ್ಮಾರಕ ರಂಗಮಂದಿರದವರೆಗೂ ಜಗತ್ತಿನ ವಿವಿಧ ದೇಶಗಳ ಧ್ವಜಗಳು ಹಾರಾಡುತ್ತಿರುತ್ತವೆ. ಇಡೀ ಜಗತ್ತು ಒಬ್ಬ ನಾಟಕಕಾರನಿಗೆ ನೀಡುವ ಗೌರವ ಇದು.

ಅಂದು ಶೇಕ್ಸ್‌ಪಿಯರ್ ನಾಟಕಗಳ ತುಣುಕು ದೃಶ್ಯಗಳನ್ನು ವಿವಿಧ ತಂಡಗಳು ಅಭಿನಯಿಸಿ ತೋರಿಸುತ್ತಾರೆ. ಹಾಡುವವರು ಹಾಡುತ್ತಿರುತ್ತಾರೆ.  ನಾಲ್ಕಾರು ಜನರನ್ನು ಎದುರಿಗೆ ಕೂಡ್ರಿಸಿಕೊಂಡು ಶೇಕ್ಸ್‌ಪಿಯರ್ ನಾಟಕಗಳಲ್ಲಿಯ ಇತ್ತೀಚಿನ ಸಂಶೋಧನೆಯನ್ನು ಕೊಚ್ಚಿಕೊಳ್ಳುವ ಜನರೂ ಇದ್ದಾರೆ. ಮತ್ತೆ ಕೆಲವರು ವೃತ್ತಾಕಾರದಲ್ಲಿ ಕುಳಿತು ನಾಟಕಗಳ ರೀಡಿಂಗ್ ಮಾಡುತ್ತಿರುತ್ತಾರೆ.

ಏವನ್ ದೊಡ್ಡ ನದಿಯೇನಲ್ಲ. ಈ ನದಿಯ ದಂಡೆಯ ಮೇಲೆಯೇ ಸ್ಟ್ರಾಫರ್ಡ್ ನೆಲೆಸಿದೆಯೆಂಬುದರ ದ್ಯೋತಕವಾಗಿ ಸ್ಟ್ರಾಫರ್ಡ್-ಅಪಾನ್-ಏವನ್ ಎಂಬ ಹೆಸರು ಊರಿಗೆ. ನಿಧಾನವಾಗಿ ಹರಿಯುವ ನದಿ. ಸದಾಕಾಲ ಬಿಳಿ ಬಣ್ಣದ, ಬೂದಿ ಬಣ್ಣದ ಹಂಸಗಳು ನೀರಿನಲ್ಲಿ ಚೆಲ್ಲಾಟವಾಡುತ್ತಿರುತ್ತವೆ. ನದಿಯ ಎರಡೂ ದಂಡೆಗಳಿಗೆ ಕಲ್ಲಿನ ಕಟ್ಟೆ ಕಟ್ಟಿದ್ದಾರೆ. ಪ್ರವಾಸಿಗಳಿಗಾಗಿ ದೋಣಿಗಳ ವ್ಯವಸ್ಥೆಯೂ ಇದೆ.

ಶೇಕ್ಸ್‌ಪಿಯರ್ ಹುಟ್ಟಿ ನಾಲ್ಕೂವರೆ ನೂರು ವರ್ಷಗಳಾಗಿದ್ದರೂ ಆತ ಹುಟ್ಟಿದ ಮನೆ, ಊರಿನ ಪರಿಸರ, ಆತ ಹುಟ್ಟಿದ ಗಲ್ಲಿ ಇವತ್ತಿಗೂ ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಆತ ಹುಟ್ಟಿದ್ದು ಹೆನ್ಲಿ ಸ್ಟ್ರೀಟ್‌ನಲ್ಲಿ. ಆ ಕಾಲದ ಎಲ್ಲ ಗಲ್ಲಿಗಳ ಹೆಸರುಗಳನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ. ಹೈ ಸ್ಟ್ರೀಟ್, ಚಾಪೆಲ್ ಸ್ಟ್ರೀಟ್, ಹೆನ್ಲಿ ಸ್ಟ್ರೀಟ್‌ಗಳು ಆ ಕಾಲದಲ್ಲಿದ್ದವು. ಈಗಲೂ ಈ ಊರಿನಲ್ಲಿ ಈ ಮೂರೇ ಗಲ್ಲಿಗಳಿವೆ. ಶೇಕ್ಸ್‌ಪಿಯರ್‌ನ ತಂದೆ ಉಣ್ಣೆಯ ವ್ಯಾಪಾರಿಯಾಗಿದ್ದ. ಈ ಮನೆಯ ರಚನೆಯನ್ನು ನೋಡಿದರೆ ಆತ ಸಿರಿವಂತನೂ ಆಗಿದ್ದನೆಂದು ಗೊತ್ತಾಗುತ್ತದೆ. ಟಿಂಬರ್ ಮತ್ತು ಓಕ್ ಮರದ ಕಟ್ಟಿಗೆ ಉಪಯೋಗಿಸಿ ಮನೆಯನ್ನು ಕಟ್ಟಲಾಗಿದೆ. ಮಹಡಿಯ ಮನೆಯ ನೆಲಕ್ಕೆ ನೀಲಿ ಮತ್ತು ಕಂದು ಬಣ್ಣದ ಹಾಸುಗೆಗಳನ್ನು ಬಳಸಲಾಗಿದೆ. ಗೋಡೆಗಳು ಟಿಂಬರ್ ಕಟ್ಟಿಗೆಗಳಿಂದ ಕಂಗೊಳಿಸುತ್ತವೆ. ಛಾವಣಿಗೆ ಕೆಂಪು ಹಂಚುಗಳನ್ನು ಹೊದಿಸಲಾಗಿದೆ. ದೊಡ್ಡ ದೊಡ್ಡ ಕೋಣೆಗಳಿರುವ ಈ ಮನೆಯಲ್ಲಿಯ ಬೆಡ್‌ರೂಂಗಳಲ್ಲಿ ಚಳಿಯಿಂದ ರಕ್ಷಣೆ ಪಡೆಯಲು ಬೆಂಕಿಗೂಡುಗಳನ್ನು ನಿರ್ಮಿಸಲಾಗಿದೆ. ಶೇಕ್‌ಸ್ಪಿಯರ್‌ನ ತಾಯಿ ಉಪಯೋಗಿಸುತ್ತಿದ್ದ ದೊಡ್ಡ ಗಾತ್ರದ ಅಡುಗೆಯ ಪಾತ್ರೆಗಳು, ಹಳೆ ಕಾಲದ ಖುರ್ಚಿ(ಶೇಕ್ಸ್‌ಪಿಯರ್ ಕುಳಿತ ಖುರ್ಚಿಯೆಂದು ಹೇಳುತ್ತಾರೆ),  ಟೇಬಲ್, ಮಂಚಗಳೂ ಇಲ್ಲಿವೆ. ಆತ ಜನಿಸಿದ ಕೋಣೆ ಮಹಡಿಯ ಮೇಲಿದೆ. ಅಲ್ಲೊಂದು ಕಿಡಕಿಯ ಮೇಲೆ ಸರ್ ವಾಲ್ಟರ್ ಸ್ಕಾಟ್, ಥಾಮಸ್ ಕಾರ್ಲೈಲ್, ಐಸಾಕ್ ವಾಟ್ಸ್ ಮೊದಲಾದ ಮಹನೀಯರು ಈ ಮನೆಯನ್ನು ನೋಡಲೆಂದು ಬಂದಿದ್ದರೆಂದು ಹೇಳುವ ಒಂದು ಬೋರ್ಡ್ ಹಚ್ಚಿದ್ದಾರೆ. ಅವರ ಸಹಿಗಳೂ ಇವೆ.

ಈ ಮನೆಗೆ ಹೊಂದಿಕೊಂಡಂತೆಯೇ ಇನ್ನೊಂದು ಮನೆಯಲ್ಲಿ ಶೇಕ್‌ಸ್ಪಿಯರ್‌ಗೆ ಸಂಬಂಧಿಸಿದ ವಿವಿಧ ವಿಷಯಗಳ ಒಂದು ಪ್ರದರ್ಶನಾಲಯವಿದೆ. ಇದರಲ್ಲಿ ಆತನ ಬದುಕಿನ ಹಲವು ವಿವರಣೆಗಳು ಸಿಗುತ್ತವೆ. ಆತನ ಕೌಟುಂಬಿಕ ಹಾಗೂ ಸಾಹಿತ್ಯಿಕ ಮಾಹಿತಿ, ಅವನ ನಾಟಕಗಳಲ್ಲಿ ಅಭಿನಯಿಸಿದ ಪ್ರಖ್ಯಾತ ನಟ-ನಟಿಯರ ವಿವರಗಳೂ ಇಲ್ಲಿವೆ. ಆತನ ನಾಟಕಗಳು ಜಗತ್ತಿನ ಎಲ್ಲ ಭಾಷೆಗಳಲ್ಲೂ ಅನುವಾದಿತವಾಗಿವೆ. ಆ ನಾಟಕಗಳ ಪ್ರತಿಗಳು ಈ ಪ್ರದರ್ಶನಾಲಯದಲ್ಲಿವೆಯೆಂದು ಹೇಳಲಾಗಿದೆ. ನಾನು ಈ ಊರಿಗೆ ಭೇಟಿ ಕೊಟ್ಟಾಗ ಅಲ್ಲಿ ಕನ್ನಡದ ಪ್ರತಿ ಸಿಗಬಹುದೇ ಎಂದು ಹುಡುಕಿದೆ.ಆದರೆ ಸಿಗಲಿಲ್ಲ. ಬಂಗಾಲಿಯ ಹ್ಯಾಮ್ಲೆಟ್ ಅನುವಾದದ ಪ್ರತಿ ಅಲ್ಲಿದೆ.

ಮನೆ ಪ್ರವೇಶಿಸುವ ಮುನ್ನ ಒಂದು ಚಿಕ್ಕ ಕೈತೋಟ. ಇದನ್ನೂ ನಾನೂರೈವತ್ತು ವರ್ಷಗಳಿಂದ ಹೇಗಿತ್ತೋ ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ. ಆ ಕಾಲದಲ್ಲಿ ಯಾವ ಗಿಡಗಳು ಇದ್ದವೋ ಅದೇ ಗಿಡಗಳನ್ನು ಇಲ್ಲಿ ಬೆಳೆಸಿದ್ದಾರೆ. ಆ ಕಾಲದ ಹೂವಿನ ಗಿಡಗಳ ಮುಂದಿನ ಕೊಂಡಿಗಳನ್ನು ಈ ಕೈತೋಟದಲ್ಲಿ ಕಾಣಬಹುದು. ಶೇಕ್ಸ್‌ಪಿಯರ್ 21 ವರ್ಷಗಳಾಗುವವರೆಗೆ ಈ ಮನೆಯಲ್ಲಿದ್ದ. 1585 ರಲ್ಲಿ ಆತ ಇಂಗ್ಲೆಂಡಿಗೆ ಹೋಗಿ ನಟನಾಗಿ ನಾಟಕಕಾರನಾಗಿ ಜಗತ್ಪ್ರಸಿದ್ಧಿ ಪಡೆದ. 1597ರಲ್ಲಿ ಮತ್ತೆ ತನ್ನೂರಿಗೆ ಬಂದ. ಆಗ ಆತ ಹಣವಂತನಾಗಿದ್ದ. ಈ ಹೆನ್ಲಿ ಸ್ಟ್ರೀಟ್‌ನ ಮನೆಗೆ ಬಾರದೆ ಇದೇ ಊರಿನ ಬೇರೊಂದು ಕಡೆ ಮನೆ ಕಟ್ಟಿಕೊಂಡ. ಆದರೆ ಆ ಮನೆ ಈಗ ಅಸ್ತಿತ್ವದಲ್ಲಿಲ್ಲ. 18ನೆಯ ಶತಮಾನದಲ್ಲಿ ಈ ಮನೆ ಬಿದ್ದು ಹೋಯಿತಂತೆ. ಆದರೂ ಇಂಗ್ಲಿಷರು ಈ ಜಾಗವನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ಈ ಜಾಗದ ಪಕ್ಕದಲ್ಲಿಯೇ ನಾಷ್‌ಹೌಸ್ ಎಂಬ ಮನೆಯಲ್ಲಿ ಆತ ಉಪಯೋಗಿಸಿದ ಪೀಠೋಪಕರಣಗಳನ್ನು ಸಂರಕ್ಷಿಸಿ ಇಡಲಾಗಿದೆ. ಈ ಪ್ರದೇಶಕ್ಕೆ ಈಗ ನ್ಯೂ ಪ್ಲೇಸ್ ಎಂದು ಕರೆಯಲಾಗುತ್ತದೆ.

ಕೆಲ ವರ್ಷ ಹಿಂದೆ ಶೇಕ್ಸ್‌ಪಿಯರ್ ಅಸ್ತಿತ್ವದ ಬಗ್ಗೆಯೇ ವಿವಾದ ಉಂಟಾಗಿತ್ತು. ಹಾಗೊಬ್ಬ ವ್ಯಕ್ತಿ ಇದ್ದನೇ, ಇದ್ದಿದ್ದರೆ ಆತನೇ ಈ ಎಲ್ಲ ನಾಟಕಗಳನ್ನು ಬರೆದನೆ ಎಂದು ಚರ್ಚೆಗಳು ನಡೆದಿದ್ದವು. ಆದರೆ ಸ್ಟ್ರಾಫರ್ಡ್‌ನಲ್ಲಿ ಆತ ಹುಟ್ಟಿದ್ದರ ಬಗ್ಗೆ, ಮದುವೆ ಮಾಡಿಕೊಂಡಿದ್ದರ ಬಗ್ಗೆ ದಾಖಲೆಗಳಿವೆ. ಆತ ಓದಿದ ಗ್ರಾಮರ್ ಸ್ಕೂಲಿನಲ್ಲೂ ದಾಖಲೆ ಕಾಯ್ದಿರಿಸಿದ್ದಾರೆ.

ಶೇಕ್ಸ್‌ಪಿಯರ್ ಹೆಂಡತಿ ಅನಿ ಹಾಥ್‌ವೇ. ಆಕೆಯ ಊರು ಶಾಟರಿ, ಶೇಕ್ಸ್‌ಪಿಯರ್‌ನ ಮನೆಯಿಂದ ಒಂದೂವರೆ ಮೈಲು ಅಂತರದಲ್ಲಿದೆ. ಈಗ ಶಾಟರಿಯೂ ಸ್ಟ್ರಾಫರ್ಡ್‌ನ ಭಾಗವೇ ಆಗಿಹೋಗಿದೆ. ಶೇಕ್ಸ್‌ಪಿಯರ್ ತನ್ನ 18ನೆಯ ವಯಸ್ಸಿನಲ್ಲಿ ತನಗಿಂತ 8 ವರ್ಷ ದೊಡ್ಡವಳಾದ ಹಾಥ್‌ವೇಳನ್ನು ಮದುವೆಯಾದ. ಮದುವೆಯ ಹೊತ್ತಿನಲ್ಲಿ ಆಕೆ ಮೂರು ತಿಂಗಳ ಗರ್ಭಿಣಿಯಂತೆ. ಆಕೆ ಜಮೀನ್ದಾರ ಕುಟುಂಬದಿಂದ ಬಂದವಳು. ಈಕೆ ಹುಟ್ಟಿದ ಮನೆ 12 ಕೋಣೆಗಳುಳ್ಳ ಮನೆ. ಮನೆಯ ಛಾವಣಿಯ ಮೇಲೆ ಹೊಗೆ ಚಿಮಣಿಗಳಿವೆ. ಮನೆಯ ಪಕ್ಕದಲ್ಲಿಯೇ ಕಾಲುವೆ ಇದೆ. ಕಾಲುವೆಯಲ್ಲಿ ಸ್ವಚ್ಛಂದವಾಗಿ ವಿಹರಿಸುವ ಹಂಸ ಪಕ್ಷಿಗಳು. ಪಕ್ಕದಲ್ಲಿಯೇ ತೋಟ. ಈ ತೋಟವೂ ನಾಲ್ಕೂವರೆ ನೂರು ವರ್ಷ ಹಳೆಯದು. ಆಕೆ ಬೆಳೆಸಿದ ಗಿಡ, ಮರಗಳು ಇಂದಿಗೂ ಹಾಗೆಯೇ ಇವೆಯೆಂದು ತೋಟದಲ್ಲಿ ಫಲಕ ಹಚ್ಚಿದ್ದಾರೆ. ಮನೆಯ ಕೆಳಭಾಗ ಶೇಕ್ಸ್‌ಪಿಯರ್ ಪುಸ್ತಕಗಳ ಮಾರಾಟಕ್ಕೆ ಮೀಸಲು. ಸ್ಟ್ರಾಫರ್ಡ್‌ಗೆ ಮೂರು ಮೈಲು ದೂರದಲ್ಲಿ ಆತನ ತಾಯಿಯ ಮನೆಯಿದೆ. ಇದನ್ನು ಮೇರಿ ಅರ್ಡೆನ್ ಹೌಸ್ ಎಂದು ಕರೆಯುತ್ತಾರೆ. ಈ ಮನೆಯಲ್ಲಿ ಆಕೆಯ ಸಂಬಂಧಿಕ ರು 1930ರ ವರೆಗೂ ವಾಸಿಸುತ್ತಿದ್ದರು. ಈಗ ಇದು ಶೇಕ್ಸ್‌ಪಿಯರ್ ಮ್ಯೂಸಿಯಂ ಆಗಿದೆ.

ಶೇಕ್ಸ್‌ಪಿಯರ್‌ನ ಮಗಳಾದ ಸುಸಾನಳನ್ನು ಡಾ. ಜಾನ್ ಹಾಲ್ ಎಂಬಾತ ಮದುವೆಯಾಗಿದ್ದ. ಆತನ ಮನೆ ಶೇಕ್ಸ್‌ಪಿಯರ್ ಮನೆಯ ಸಮೀಪವೇ ಇದೆ. ಇದೂ ಈಗ ಮ್ಯೂಸಿಯಂ. ಶೇಕ್ಸ್‌ಪಿಯರ್ ಸತ್ತಾಗ ತನ್ನ ಬಹುಪಾಲು ಆಸ್ತಿಯನ್ನು ಮಗಳಿಗೆ ಬಿಟ್ಟುಕೊಟ್ಟಿದ್ದನಂತೆ. ಉಳಿದ ಅಲ್ಪಸ್ವಲ್ಪ ಆಸ್ತಿಯನ್ನು ಉಳಿದ ಮೂರು ಮಕ್ಕಳಿಗೆ ಹಾಗೂ ಗೆಳೆಯರಿಗೆ ಕೊಟ್ಟನಂತೆ. ಹೆಂಡತಿಗೆ ಕೇವಲ ಒಂದು ಮಂಚವನ್ನು ಮಾತ್ರ ನೀಡಿದ್ದನಂತೆ!
ಶೇಕ್ಸ್‌ಪಿಯರ್ ತನ್ನ 52ನೆಯ ವಯಸ್ಸಿನಲ್ಲಿ- 1611ರಲ್ಲಿ- ತೀರಿಕೊಂಡ. ಅವನನ್ನು ಹೋಲಿ ಟ್ರಿನಿಟಿ ಚರ್ಚ್‌ನ ಒಳಭಾಗದಲ್ಲಿ ಸಮಾಧಿ ಮಾಡಲಾಗಿದೆ. ಹತ್ತಿರವೇ ಅನಿ ಹಾಥ್‌ವ್ ಹಾಗೂ ಮಗಳು ಸುಸಾನಳ ಸಮಾಧಿಗಳೂ ಇವೆ. ಶೇಕ್ಸ್‌ಪಿಯರ್ ಸಮಾಧಿಯ ಮೇಲಿನ ಗೋಡೆಯ ಮೇಲೆ ಆತನ ಒಂದು ಪ್ರತಿಮೆಯನ್ನು ಇಟ್ಟು ಕೆಳಗೆ ಅತನ ಬಗ್ಗೆ ಬರೆಯಲಾಗಿದೆ.

ಈ ಎಲ್ಲ ಸ್ಮಾರಕಗಳನ್ನು ನಿರಂತರವಾಗಿ ಕಾಪಾಡಲೆಂದು ಶೇಕ್ಸ್‌ಪಿಯರ್ ಜನ್ಮಭೂಮಿ ಟ್ರಸ್ಟ್ ಎಂಬ ಟ್ರಸ್ಟ್ 1847ರಲ್ಲಿಯೇ ಹುಟ್ಟಿಕೊಂಡಿದೆ. ಈ ಟ್ರಸ್ಟ್‌ಗೆ ಪಾರ್ಲಿಮೆಂಟಿನಿಂದ ಪರಮಾಧಿಕಾರ ನೀಡಲಾಗಿದೆ. ಟ್ರಸ್ಟ್‌ಗೆ  ಸರ್ಕಾರದಿಂದ ಒಂದು ಪೈಸೆ ಸಹಾಯಧನ ಇರದಿದ್ದರೂ ಅದು ತನ್ನ ಸಂಪನ್ಮೂಲಗಳನ್ನು ತಾನಾಗಿಯೇ ರೂಪಿಸಿಕೊಂಡಿದೆ. ಶೇಕ್ಸ್‌ಪಿಯರ್ ಕಾಲದ ವಾತಾವರಣವನ್ನು ಹೇಗಿತ್ತೋ ಹಾಗೆಯೇ ಉಳಿಸಿಕೊಂಡು ಬರುವಲ್ಲಿ ಈ ಟ್ರಸ್ಟ್ ಯಶಸ್ವಿಯಾಗಿದೆಯೆಂದೇ ಹೇಳಬೇಕು. ಈ ಊರು ನಮ್ಮನ್ನು 15ನೆಯ ಶತಮಾನಕ್ಕೆ ಕರೆದುಕೊಂಡು ಹೋಗುವಂತೆ ಮಾಡಿರುವ ಟ್ರಸ್ಟ್‌ನ ಕಾರ್ಯವೈಖರಿ ಅದ್ಭುತವಾದದ್ದು.

ಶೇಕ್ಸ್‌ಪಿಯರ್‌ನನ್ನು ಇಂಗ್ಲಿಷರು ದೇವರಂತೆ ಆರಾಧಿಸುತ್ತಾರೆ. ಈ ಊರಲ್ಲಂತೂ ಹೋಟೆಲ್, ಅಂಗಡಿ, ರಸ್ತೆಗಳು, ದೋಣಿಗಳು ಹೀಗೆ ಎಲ್ಲದ್ದಕ್ಕೂ ಆತನಿಗೆ ಸಂಬಂಧಿಸಿದ ಹೆಸರುಗಳನ್ನೇ ಕಾಣಬಹುದು. ಎಲ್ಲಿ ಬೇಕಲ್ಲಿ ಶೇಕ್ಸ್‌ಪಿಯರ್ ಗುರುತುಗಳನ್ನು ನೋಡಬಹುದು.

ನದಿಯ ದಂಡೆಗುಂಟ ರಾಯಲ್ ಶೇಕ್ಸ್‌ಪಿಯರ್ ಥಿಯೇಟರ್ ಇದೆ. ಇದು ಅಂತಾರಾಷ್ಟ್ರೀಯ ಖ್ಯಾತಿಯ ರಂಗಮಂದಿರ. ವರ್ಷದ ಎಲ್ಲ ದಿನಗಳಲ್ಲಿ ಪ್ರಸಿದ್ಧ ನಾಟಕಗಳು ಈ ರಂಗಮಂದಿರದಲ್ಲಿ ನಡೆಯುತ್ತಿರುತ್ತವೆ. 365 ದಿನಗಳಲ್ಲಿ 300 ದಿನಗಳಾದರೂ ಶೇಕ್ಸ್‌ಪಿಯರ್ ನಾಟಕಗಳನ್ನು ಇಲ್ಲಿ ಆಡುತ್ತಾರೆ. ಈ ರಂಗಮಂದಿರವನ್ನು 1879ರಲ್ಲಿ ಊರಿನ ಮದ್ಯ ತಯಾರಕ ಉದ್ಯಮಿ ಚಾರ್ಲ್ಸ್ ಎಡ್ವರ್ಡ್ ಫ್ಲಾವರ್ ಎಂಬಾತ ಕಟ್ಟಿಸಿದ. ಅಂದಿನಿಂದಲೇ ಶೇಕ್ಸ್‌ಪಿಯರ್ ನಾಟಕೋತ್ಸವ ಆರಂಭವಾಯಿತು. ಮುಂದೆ 50 ವರ್ಷ ಆತನ ನಾಟಕಗಳನ್ನು ಮಾತ್ರ ಪ್ರದರ್ಶಿಸಲಾಗುತ್ತಿತ್ತು. 1926 ರಲ್ಲಿ ಈ ರಂಗಮಂದಿರ ಬೆಂಕಿಗೆ ಆಹುತಿಯಾಯಿತು. ಜಗತ್ತಿನಾದ್ಯಂತವಿರುವ ಶೇಕ್ಸ್‌ಪಿಯರ್ ಅಭಿಮಾನಿಗಳು ಹಣ ಹಾಕಿ ಮತ್ತೆ ರಂಗಮಂದಿರವನ್ನು ಕಟ್ಟಿಸಿದರು. 1932ರಲ್ಲಿ ರಂಗಮಂದಿರ ಮತ್ತೆ ಆರಂಭವಾಯಿತು.

ಇಲ್ಲಿ ಅಭಿನಯಿಸಲ್ಪಡುವ ಶೇಕ್ಸ್‌ಪಿಯರ್ ನಾಟಕಗಳನ್ನು ನೋಡಲು ಪ್ರಪಂಚದ ಅನೇಕ ಕಡೆಗಳಿಂದ ರಂಗಾಸಕ್ತರು ಬರುತ್ತಾರೆ. ನಾನಲ್ಲಿ ಹೋದಾಗ ಹೆನ್ರಿ ದ ಸಿಕ್ಸ್ ್ತನಾಟಕ ನಡೆದಿತ್ತು. ಟಿಕೇಟುಗಳೆಲ್ಲ ಮುಂಗಡವಾಗಿಯೇ ಬುಕ್ ಆಗಿದ್ದರಿಂದ ನನಗೆ ನಾಟಕ ನೋಡಲಾಗಲಿಲ್ಲ. ಈ ರಂಗಮಂದಿರದಲ್ಲಿ ಒಂದು ಸಂಪ್ರದಾಯವಿದೆ. ನಿಂತು ನಾಟಕ ನೋಡಬೇಕೆನ್ನುವವರಿಗಾಗಿ 20 ಟಿಕೇಟು ರಿಸರ್ವ್ ಮಾಡಿರುತ್ತಾರೆ. ಈ ಟಿಕೇಟುಗಳು ಅಂದಿನ ಪ್ರದರ್ಶನದ ಮುಂಜಾನೆಯೇ ಮಾರಾಟ ಮಾಡಲಾಗುತ್ತದೆ. ಕ್ಯೂನಲ್ಲಿ ನಿಂತ ಮೊದಲ 20 ಜನರಿಗೆ ಟಿಕೇಟು ಸಿಗುತ್ತದೆ. ಅವರು ಕುಳಿತು ನೋಡುವ ಜನರ ಹಿಂದೆ ಒಂದು ಸಾಲಿನಲ್ಲಿ ನಿಂತು ನೋಡಬಹುದು. ಈ ಟಿಕೇಟುಗಳೂ ಲಭ್ಯವಾಗದಷ್ಟು ಶೇಕ್ಸ್‌ಪಿಯರ್ ನಾಟಕಗಳು ಜನಪ್ರಿಯವಾಗಿವೆ.

ಶೇಕ್ಸ್‌ಪಿಯರ್ ನಾಟಕಗಳಲ್ಲಿಯೇ ಕಾವ್ಯವಿದೆ- ಅದಕ್ಕೆಂದೇ ಆತ ಜಗದ್ವಂದ್ಯನಾಗಿದ್ದಾನೆ. ಅವನ ನಾಟಕದಲ್ಲಿ ಕಾವ್ಯ ತನ್ನಿಂದ ತಾನೇ ಹರಿಯುತ್ತದೆ. ಆತನ ನಾಟಕಗಳಲ್ಲಿನ ಪ್ರತಿಮಾ ಪ್ರಪಂಚ ತುಂಬಾ ದಟ್ಟವಾದದ್ದು. ರೂಪಕದಿಂದ ರೂಪಕಕ್ಕೆ ಜಿಗಿಯುತ್ತ ಹೋಗುವ ಅವನ ನಾಟಕಗಳು ಪ್ರೇಕ್ಷಕರನ್ನು ಮತ್ತು ನಟರನ್ನು ಸಮೀಪಕ್ಕೆ ತಂದು ಸಂವಾದಕ್ಕೆ ತೊಡಗಿಸುತ್ತವೆ. ಪ್ರೇಕ್ಷಕ ನಾಟಕದ ಒಂದು ಭಾಗವಾಗಿ ನಾಟಕ ಕ್ರಿಯೆಯಲ್ಲಿ ತಾನೂ ಭಾಗಿಯಾಗುತ್ತಾನೆ.

ಶೇಕ್ಸ್‌ಪಿಯರ್ ನಾಟಕಗಳು ಕನ್ನಡಕ್ಕೂ ಅನುವಾದವಾಗಿವೆ. 1880 ರಲ್ಲಿಯೇ ಆತ ಕನ್ನಡಕ್ಕೆ ಬಂದ. ಬಸವಪ್ಪ ಶಾಸ್ತ್ರಿಗಳು ಒಥೆಲೋ ನಾಟಕವನ್ನು ಶೂರಸೇನ ಚರಿತೆ ಎಂದು ರೂಪಾಂತರಿಸಿದರು. ದಿ ಮರ್ಚಂಟ್ ಆಫ್ ವೆನಿಸ್, ಪಾಂಚಾಲಿ ಪರಿಣಯವಾಯಿತು. ರೋಮಿಯೋ ಜೂಲಿಯೆಟ್,  ರಾಮವರ್ಮ- ಲೀಲಾವತಿಯಾಗಿ ಕನ್ನಡಕ್ಕೆ ಬಂದಿತು. ಪುತಿನ, ವಿ.ಕೆ. ಗೋಕಾಕ, ಆತನ ನಾಟಕ ಗೀತಗಳನ್ನು ಅನುವಾದಿಸಿದ್ದಾರೆ. ನಾಟಕಗಳ ಕಾವ್ಯ ಭಾಗಗಳನ್ನು ಬಿ.ಎಚ್. ಶ್ರೀಧರ, ತೀನಂಶ್ರೀ, ಬೇಂದ್ರೆ, ಬಿ.ಎ. ಸನದಿ, ಕ.ವೆಂ. ರಾಘವಾಚಾರ್, ಸುಮತೀಂದ್ರ ನಾಡಿಗ್, ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಕೆ.ಎಸ್. ನಿಸಾರ್ ಅಹ್ಮದ್, ರಾಮಚಂದ್ರದೇವ, ಎಚ್.ಎಸ್. ಶಿವಪ್ರಕಾಶ, ಕೆ.ಎಸ್. ಭಗವಾನ್ ಮುಂತಾದವರು ನಾನಾ ಬಗೆಯಲ್ಲಿ ಶೇಕ್ಸ್‌ಪಿಯರ್‌ನನ್ನು ಕನ್ನಡಕ್ಕೆ ತಂದಿದ್ದಾರೆ.

ಶೇಕ್ಸ್‌ಪಿಯರ್ ಒಟ್ಟು 36 ನಾಟಕ ಬರೆದಿದ್ದಾನೆ. ಅವುಗಳಲ್ಲಿ 22 ನಾಟಕಗಳು ಕನ್ನಡಕ್ಕೆ ಬಂದಿವೆ. ಜಗತ್ತಿನ ಎಲ್ಲ ಭಾಷೆಗಳಲ್ಲೂ ಅನುವಾದಿಸಲ್ಪಟ್ಟಿದ್ದಾನೆ. ಆತ ಕವಿ, ನಾಟಕಕಾರನಾಗಿದ್ದಂತೆ ನಟನೂ ಆಗಿದ್ದ. ಆತನ ಅನೇಕ ನಾಟಕಗಳು ಸ್ಟೇಜಿನ ಮೇಲೆಯೇ ರಚಿಸಲ್ಪಟ್ಟವು. ಕಿಂಗ್ಸ್ ಕಂಪನಿಯವರು ಕೇಳಿದಾಗಲೆಲ್ಲ ಆತ ನಾಟಕ ಬರೆದುಕೊಡುತ್ತಿದ್ದನಂತೆ. ಮುಂದೆ ಆತನ ನಾಟಕಗಳನ್ನು ಕಂಪನಿಯವರೇ ಪ್ರಕಟಿಸುತ್ತಿದ್ದರು. ರಂಗದ ಮೇಲೆಯೂ ನಾಟಕಗಳನ್ನು ತಿದ್ದಲಾಗುತ್ತಿತ್ತಂತೆ. ಯಾವುದಾದರೂ ಪಾತ್ರ ತನಗೆ ತೋಚಿದ್ದನ್ನು ಹೇಳಿದಾಗ ಅದು ಶೇಕ್ಸ್‌ಪಿಯರ್‌ಗೆ ಹಿಡಿಸಿದರೆ ಆ ಮಾತುಗಳು ನಾಟಕದಲ್ಲಿ ತೂರಿಕೊಂಡು ಬಿಡುತ್ತಿದ್ದವು. ನಾಟಕದ ಪ್ರಕಟಣೆಗಾಗಿ ಹಸ್ತಪ್ರತಿ ಮುದ್ರಣಾಲಯಕ್ಕೆ ಹೋದಾಗ ಅಲ್ಲಿ ಅಚ್ಚಿನ ಮೊಳೆ ಜೋಡಿಸುತ್ತಿದ್ದ ಕಂಪೋಸಿಟರ್ರು ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದನಂತೆ. ಶೇಕ್ಸ್‌ಪಿಯರ್ ಹಾಕಲಾರದ ಶಬ್ದಗಳನ್ನು, ಮಾತುಗಳನ್ನು ಈ ಕಂಪೋಸಿಟರ್‌ಗಳೇ ಸೇರಿಸಿ ಬಿಡುತ್ತಿದ್ದರಂತೆ. ಅವರಿಗೆ ಹಿಡಿಸದೇ ಇದ್ದರೆ ಕೆಲವು ಸಾಲುಗಳನ್ನೇ ಮೊಟಕು ಮಾಡುತ್ತಿದ್ದರಂತೆ. ಹೆನ್ರಿ ಫೋರ್ತ್ ನಾಟಕದ ಮುದ್ರಿತ ಪ್ರತಿಯಲ್ಲಿ ಒಂದು ದೃಶ್ಯವನ್ನೇ ಈ ಕಂಪೋಸಿಟರ್‌ಗಳು ನುಂಗಿ ಹಾಕಿದರಂತೆ.
ಇಂಗ್ಲೆಂಡಿನ ಮೊಟ್ಟ ಮೊದಲ ರಂಗಮಂದಿರ 1574ರಲ್ಲಿ ಕಟ್ಟಲ್ಪಟ್ಟಿತು. ಜೇಮ್ಸ್ ಬರ್ಬೇಜ್ ಎಂಬ ನಟ, ನಾಟಕಕಾರ ಸಿಟಿ ಆಫ್ ಲಂಡನ್‌ನಲ್ಲಿ ಕಟ್ಟಿಗೆಯ ಒಂದು ನಾಟ್ಯಗ್ರಹ ಕಟ್ಟಿದ. ಅದನ್ನು ಆತ ದಿ ಥಿಯೇಟರ್ ಎಂದು ಕರೆದ. ಮುಂದೆ ಈ ಪದವೇ ಜಗತ್ತಿನಾದ್ಯಂತ ಪ್ರಚುರಗೊಂಡಿತು. ಬರ್ಬೇಜ್ ಮತ್ತು ಶೇಕ್ಸ್‌ಪಿಯರ್ ಗೆಳೆಯರು. ಇಬ್ಬರ ಪ್ರಯತ್ನದಿಂದ ಇಂಗ್ಲಿಷ್ ನಾಟಕ ಕ್ಷೇತ್ರ ಬಂಗಾರದ ದಿನಗಳನ್ನು ಕಂಡಿತು.

ಆರಂಭದಲ್ಲಿ ಸಿರಿವಂತರಿಗೆ ಹಾಗೂ ಶ್ರೀಸಾಮಾನ್ಯರಿಗೆ ಪ್ರತ್ಯೇಕ ನಾಟ್ಯಗ್ರಹಗಳಿದ್ದವು. ಸಿರಿವಂತರು ನಾಟಕಕ್ಕೆ ಬಂದಾಗ ಅವರಿಗೆ ರಾಯಲ್ ಸ್ವಾಗತ ಸಿಗುತ್ತಿತ್ತು. ಕೆಲವು ಸಲ ನಿದ್ದೆ ಬಂದರೆ ಪ್ರೇಕ್ಷಕರು ನಾಟ್ಯಗೃಹಕ್ಕೆ ಅಂಟಿಕೊಂಡಂತಿದ್ದ ರೂಮಿಗೆ ಹೋಗಿ ಅಲ್ಲಿ ನಿದ್ದೆ ಮಾಡುತ್ತಿದ್ದರು. ಶ್ರೀಸಾಮಾನ್ಯರ ನಾಟಕಗಳು ಮಧ್ಯಾಹ್ನ ಆರಂಭವಾಗಿ ಸಾಯಂಕಾಲದೊಳಗೆ ಮುಗಿಯುತ್ತಿದ್ದವು. ಅದಕ್ಕೆ ಕಾರಣವೆಂದರೆ ರಾತ್ರಿ ದೀಪಕ್ಕಾಗಿ ಚಿಮಣಿ ಎಣ್ಣೆ ಖರ್ಚು ಮಾಡಲು ಥೇಟರ್ ಮಾಲಿಕ ಸಿದ್ಧನಿರುತ್ತಿರಲಿಲ್ಲ. ಆರಂಭದಲ್ಲಿ ಪ್ರೇಕ್ಷಕರು ಟಿಕೇಟು ತೆಗೆದು ನಾಟಕ ನೋಡಲು ಬರುತ್ತಿರಲಿಲ್ಲ. ಹಣ ಕೊಡದೆ ಹಾಗೇ ಬಂದು ಕೂಡ್ರುತ್ತಿದ್ದರು. ಮೊದಲನೆಯ ಸೀನ್ ಮುಗಿದು ಎರಡನೆಯ ಸೀನ್ ಆರಂಭವಾಗುವಾಗ ಕಟ್ಟಿಗೆಯ ಒಂದು ಪೆಟ್ಟಿಗೆಯ ಮೇಲೆ ಡೋರ್‌ಕೀಪರ್ ನಿಂತು ಪ್ರೇಕ್ಷಕರಿಂದ ಹಣ ವಸೂಲು ಮಾಡುತ್ತಿದ್ದ. ಕಟ್ಟಿಗೆ ಪೆಟ್ಟಿಗೆಗೆ ಬಾಕ್ಸ್ ಆಫೀಸ್ ಎನ್ನುತ್ತಿದ್ದರು. ಈಗ ಉಪಯೋಗಿಸುವ ಬಾಕ್ಸ್ ಆಫೀಸ್ ಎಂಬ ಶಬ್ದ ಆ ಮೂಲದಿಂದಲೇ ಬಂದಿದ್ದು. ಮೊದಲನೆಯ ಸೀನ್ ಸೇರದವರು ಹಣ ಕೊಡದೆ ಹೊರಗೆ ಹೋಗಬಹುದಾಗಿತ್ತು. ಅದಕ್ಕಾಗಿಯೇ ಜನರನ್ನು ಸೆಳೆಯಲು ಮತ್ತು ಅವರನ್ನು ಥೇಟರಿನಲ್ಲಿ ಕಟ್ಟಿ ಹಾಕಲು ಮೊದಲನೆಯ ಸೀನು ಪ್ರಭಾವಿಯಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಶ್ರೀಸಾಮಾನ್ಯರು ನಾಟಕ ನಡೆದಾಗಲೇ ಥೇಟರಿನಲ್ಲೇ ಇಸ್ಪೀಟು ಆಡುತ್ತಿದ್ದರು. ಶೆರೆ ಕುಡಿಯುತ್ತಿದ್ದರು. ನಾಟಕ ಸೇರದಿದ್ದರೆ ತತ್ತಿ, ಬಾಳೇಹಣ್ಣು ಒಗೆಯುತ್ತಿದ್ದರು. ಪ್ರೇಕ್ಷಕರು ಒಳ ಬರುವಾಗ ಅವರು ತತ್ತಿ ತೆಗೆದುಕೊಂಡು ಬಂದಿಲ್ಲವೆಂದು ಕಿಸೆ ತಪಾಸಿಸಲಾಗುತ್ತಿತ್ತು.

ಗ್ಲೋಬ್ ಥಿಯೇಟರ್ ಹೊರಗೆ ಪೃಥ್ವಿಯನ್ನು ಬೆನ್ನ ಮೇಲೆ ಹೊತ್ತ ಅಟ್ಲಾಸ್‌ನ ದೊಡ್ಡ ಚಿತ್ರವಿತ್ತು. ಅದರ ಕೆಳಗೆ ಶೇಕ್ಸ್‌ಪಿಯರ್ ಲ್ಯಾಟಿನ್‌ನಲ್ಲಿ ’ಟೋಟುಸ್ ಮುಂಡೇಸ್ ಆ್ಯಗಿಟ್ ಹಿಸ್ಟ್ರೊವೋನೇಮ್‌’ ಎಂಬ ಸುಭಾಷಿತವನ್ನು ಬರೆದು ಹಾಕಿದ. ಅದೇ ’ಜಗತ್ತು ಒಂದು ರಂಗಭೂಮಿ’ ಎಂದು ಪ್ರಸಿದ್ಧಿಯಾಯಿತು.

ಕೃಪೆ: ಕನ್ನಡ ಪ್ರಭ

Tag: Shakespear

ಕಾಮೆಂಟ್‌ಗಳಿಲ್ಲ: