ಶನಿವಾರ, ಆಗಸ್ಟ್ 31, 2013

ಪಂಡಿತ್‌ ಜಸರಾಜ್‌

ಪಂಡಿತ್‌ ಜಸರಾಜ್‌

ಜನವರಿ 28, 1930 ಭಾರತದ ಮಹಾನ್ ಸಂಗೀತಗಾರ ಪಂಡಿತ್ ಜಸರಾಜ್ ಅವರ ಜನ್ಮದಿನ.  ಈ ಸಂದರ್ಭದಲ್ಲಿ ಅವರ ಆತ್ಮಕಥನದ ನಿರೂಪಣೆ ನಮ್ಮ ಮುಂದಿದೆ.

ನಾನು ಸಣ್ಣವನಿದ್ದಾಗಲೇ ಅಪ್ಪ ಹಠಾತ್‌ ತೀರಿಕೊಂಡರು. ಹೊಟ್ಟೆಪಾಡಿಗೆ ನಾನು ಆಯ್ದು ಕೊಂಡಿದ್ದು ತಬಲಾ. ಅಣ್ಣ ಹಾಡುತ್ತಿದ್ದ, ನಾನು ತಬಲಾ ಸಾಥ್‌ ನೀಡುತ್ತಿದ್ದೆ. ಒಂದು ದಿನ ಹಿರಿಯ ಸಂಗೀತ ವಿದ್ವಾಂಸರೊಬ್ಬರು ನನಗೆ ಬೈದರು: "ಅದೇನು ಸತ್ತ ಪ್ರಾಣಿಯ ಚರ್ಮವನ್ನು ಹಾಗೆ ಬಡೀತಿಯಾ? ನಿನಗೆ ಸಂಗೀತದ ಸೂಕ್ಷ್ಮ ಸ್ವಲ್ಪವೂ ಗೊತ್ತಿಲ್ಲ.' ಆವತ್ತೇ ನಿರ್ಧರಿಸಿದೆ, ಇನ್ನು ಮುಂದೆ ತಬಲಾ ಮುಟ್ಟುವುದಿಲ್ಲ, ಬರೀ ಹಾಡುತ್ತೇನೆ’ ಎಂದು. ಸುಮಾರು 10 ವರ್ಷ ಹಾಡಿದೆವು. ಒಂದು ದಿನ ನನ್ನಣ್ಣ ಪಂಡಿತ್‌ ಮಣಿರಾಮ್‌ಜೀಯ ಧ್ವನಿ ನಿಂತುಹೋಯಿತು. ಅವನು ನನ್ನ ಗುರುವೂ ಹೌದು. ಕುಟುಂಬ ಉಪವಾಸ ಬಿತ್ತು. ಸಾನಂದ್‌ನ ಮಹಾರಾಜ ಜೈವಂತ್‌ ಸಿಂಗರು ನಮ್ಮ ಕುಟುಂಬದ ಪೋಷಣೆಯ ಜವಾಬ್ದಾರಿ ವಹಿಸಿಕೊಂಡರು. ಮಹಾರಾಜರು ಕಾಳಿ ಉಪಾಸಕರು. ಇನ್ನು ಮುಂದೆ ನನ್ನಣ್ಣ ಭಜನೆಯನ್ನು ಮಾತ್ರ ಹಾಡುವುದಾದರೆ ಕಾಳಿ ದೇವಸ್ಥಾನದಲ್ಲಿ ಧ್ವನಿ ಮರಳಿ ಸಿಗುತ್ತದೆ ಎಂದರು. ಅಣ್ಣ ಒಪ್ಪಿಕೊಂಡ. ಮೊದಲೇ ನಿಗದಿಪಡಿಸಿದ್ದ ಒಂದು ಮಧ್ಯರಾತ್ರಿ ನಾನು, ನನ್ನಣ್ಣ ಮತ್ತು ಮಹಾರಾಜರು ದೇವಸ್ಥಾನದಲ್ಲಿ ಸೇರಿದೆವು. ಆಮೇಲೆ ಅಣ್ಣ ನನಗೆ ಹೇಳಿದ ಪ್ರಕಾರ, ಗರ್ಭಗುಡಿಯಿಂದ ಒಂದು ಧ್ವನಿ ತನ್ನ ಜೊತೆ ದೇಶ್‌ ರಾಗವನ್ನು ಅವನಿಂದ ಹಾಡಿಸಿತಂತೆ. ಹಾಗೇ ಧ್ವನಿ ಮರಳಿತಂತೆ. ಅದಾದ ಮೇಲೆ ಬೆಳಗಿನ ಜಾವದವರೆಗೂ ಅಣ್ಣ ಹಾಡುತ್ತಿದ್ದ.

ಮಹಾರಾಜರು ನನಗೂ ಸಂಗೀತದ ಸೂಕ್ಷ್ಮಗಳನ್ನು ನಿಧಾನವಾಗಿ ಅರ್ಥ ಮಾಡಿಕೊಳ್ಳಲು ಪ್ರೋತ್ಸಾಹಿಸಿದರು. ಅವರ ಜೊತೆ ಕವಿತಾ ವಾಚನಕ್ಕೆ ಹೋಗುತ್ತಿದ್ದೆ. ಸಂಗೀತಗಾರರ ಸಭೆಯಿದ್ದಾಗ ನನ್ನನ್ನು ಅವರ ಪಕ್ಕದಲ್ಲೇ ಕೂರಿಸಿಕೊಳ್ಳುತ್ತಿದ್ದರು. ನಾನು ಶಾಲೆಗೆ ಹೋಗಿ ಓದಿದವನಲ್ಲ. ಸೋಮ್‌ ತಿವಾರಿ ಎಂಬ ಹೆಣ್ಣುಮಗಳು ನನಗೆ ಗುರುವೂ ಶಿಷ್ಯೆಯೂ ಆದಳು. ಆಕೆ ಎಂ.ಎ ಗೋಲ್ಡ್‌ ಮೆಡಲಿಸ್ಟ್‌. ಅವಳಿಗೆ ನಾನು ಹಾಡಲು ಕಲಿಸಿದೆ, ನನಗವಳು ಓದು ಬರಹ ಕಲಿಸಿದಳು. ಆಕೆ ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ  ವಹಿಸಿದ ಪಾತ್ರ ಮಹತ್ವದ್ದು. ಅಣ್ಣ ಅದೆಷ್ಟೇ ಸಿಡುಕಿದರೂ ಯಾವಾಗಲೂ ಅವನ ಜೊತೆಗಿರುವಂತೆ ಹೇಳುತ್ತಿದ್ದಳು. "ನೀನಿನ್ನೂ ಸಣ್ಣವನು. ನೋಡಲು ಚೆನ್ನಾಗಿದ್ದೀಯೆ. ಕೊಲ್ಕತಾ ಶಹರದಲ್ಲಿ ಹಾಳಾಗಲು ಬೇಕಾದಷ್ಟು ದಾರಿಗಳಿವೆ. ಅವುಗಳಿಗೆ ಸೋಲಬೇಡ. ಅಣ್ಣನ ಜೊತೆಗಿರು. ಪ್ರತಿದಿನ ತಪ್ಪದೆ ರಿಯಾಜ್‌ ಮಾಡು...'

ಒಂದು ದಿನ ನಾನು ಮನೆಗೆ ತಡವಾಗಿ ಬಂದೆ. ಸೋಮ್‌ಳ ಷರತ್ತಿನ ಪ್ರಕಾರ ರಾತ್ರಿ 10ರೊಳಗೆ ನಾನು ಮನೆಯಲ್ಲಿರಬೇಕಿತ್ತು. ಆವತ್ತು ಒಂದು ತಾಸು ತಡವಾಗಿತ್ತು. ನನ್ನ ತಪ್ಪಿಗೆ ಆವತ್ತೇ ಆಕೆ ಒಂದು ಆಣೆ ಮಾಡಿಸಿಕೊಂಡಳು - ನನಗೆ 30 ಆಗುವವರೆಗೆ ಟೀ ಕುಡಿಯುವಂತಿಲ್ಲ, 40 ಆಗುವವರೆಗೆ ಸಿಗರೇಟು ಸೇದುವಂತಿಲ್ಲ, 50 ತುಂಬುವವರೆಗೆ ಮದ್ಯಪಾನ ಮಾಡುವಂತಿಲ್ಲ... ಮತ್ತು ಒಂದು ದಿನವೂ ರಿಯಾಜ್‌ ತಪ್ಪಿಸುವಂತಿಲ್ಲ! ಅವಳು ನಾನು ದಾರಿ ತಪ್ಪುವುದನ್ನು ತಪ್ಪಿಸಿದಳು. ಅನೇಕ ಸಂದರ್ಭಗಳಲ್ಲಿ ನನ್ನನ್ನು ಕಾಪಾಡಿದಳು. ಇವತ್ತಿಗೂ ಆಕೆ ನನ್ನ ಪ್ರೀತಿಯ ‘ಅಮ್ಮ'ನಾಗಿ ನನ್ನ ಜೊತೆಗೇ ಇದ್ದಾಳೆ.

ರೇಡಿಯೋ ಕಲಾವಿದನಾಗಿದ್ದ ನಾನು 1954ರಲ್ಲಿ ಕೊಲ್ಕತಾದಲ್ಲಿ ಖ್ಯಾತ ಗಾಯಕಿ ಕೇಸರ ಬಾಯಿಯವರ ಸಂಗೀತ ಕಛೇರಿಗೆ ಹೋಗಿದ್ದೆ. ದುರದೃಷ್ಟವಶಾತ್‌ ಟಿಕೆಟ್‌ ಕಳೆದುಕೊಂಡುಬಿಟ್ಟೆ. ಜನಪ್ರಿಯ ರೇಡಿಯೋ ಗಾಯಕನಾಗಿದ್ದ ನನಗೇನೂ ಕಛೇರಿಗೆ ಪ್ರವೇಶ ಪಡೆಯುವುದು ಕಷ್ಟವಲ್ಲ ಎಂದುಕೊಂಡಿದ್ದೆ. ಆದರೆ, ಯಾರಿಗೂ ನನ್ನ ಗುರುತೇ ಸಿಗಲಿಲ್ಲ. ಅಷ್ಟೇ ಅಲ್ಲ, ನನಗೆ ಅವಮಾನ ಮಾಡಿ ವಾಪಸ್‌ ಕಳಿಸಿದರು. ಕೊನೆಗೆ ಸೋಮ್‌ ಮತ್ತು ಖ್ಯಾತ ಗಾಯಕ ಎ. ಕಣಾಜಿ ಅವರು ನನ್ನನ್ನು ಒಳಗೆ ಕರೆದುಕೊಂಡು ಹೋಗಿ ಸಮಾಧಾನ ಮಾಡಿದರು- "ಒಂದು ದಿನ ಬರುತ್ತದೆ, ಆವತ್ತು ಸ್ವತಃ ಕೇಸರಬಾಯಿ ನಿನ್ನ ಹಾಡು ಕೇಳುತ್ತಾರೆ' ಎಂದರು.

ಇದಾದ ಬಹಳ ವರ್ಷಗಳ ನಂತರ ವಿಧಿ ನನ್ನನ್ನೂ ಕೇಸರಬಾಯಿಯವರನ್ನೂ ವಿಚಿತ್ರ ಸನ್ನಿವೇಶದಲ್ಲಿ ಒಂದು ಕಡೆ ಸೇರಿಸಿತು. 1970ರಲ್ಲಿ ಒಂದು ಸಂಘದವರು ಕೇಸರಬಾಯಿ ಮತ್ತು ಮೋಘುಬಾಯಿ ಕುರ್ಡಿಕರ್‌ ಅವರಿಗೆ ಸನ್ಮಾನ ಮಾಡಲು ನನ್ನನ್ನು ಕರೆದಿದ್ದರು. ನನಗೆ ರೈಲು ತಪ್ಪಿ ಹೋಯಿತು. ಅಕ್ಷರಶಃ ಹಳಿ ಪಕ್ಕದಲ್ಲಿ ಓಡುತ್ತಲೇ ಗ್ರಾಂಟ್‌ ರೋಡ್‌ ನಿಲ್ದಾಣದಿಂದ ಗಿರ್ಗಾಮ್‌ನ ಸಾಹಿತ್ಯ ಸಂಘಕ್ಕೆ ಹೋದೆ. ಬಹಳ ತಡವಾಗಿತ್ತು. ಸಾವಿರಾರು ಜನ ಸೇರಿದ್ದರು. ಸಮಾರಂಭ ಇನ್ನೇನು ಮುಗಿಯುವುದರಲ್ಲಿತ್ತು. ವಾಚ್‌ಮನ್‌ ಗೌರವಪೂರ್ವಕವಾಗಿ ಒಳಗೆ ಕರೆದುಕೊಂಡು ಹೋದ. ನನ್ನ ಆಶ್ಚರ್ಯಕ್ಕೆ ಮೈಕ್‌ನಲ್ಲಿ ನಾನು ಬಂದಿರುವುದನ್ನು ಅನೌನ್ಸ್‌ ಮಾಡಿಬಿಟ್ಟರು. ಜನರು ಭರ್ಜರಿ ಚಪ್ಪಾಳೆ ಹೊಡೆದರು. ನಿಜ ಹೇಳುತ್ತೇನೆ, ಆವತ್ತು ನನಗೆ ಬಿದ್ದ ಚಪ್ಪಾಳೆ ಇವತ್ತಿನವರೆಗೂ ನನ್ನ ಒಂದೇ ಒಂದು ಸಂಗೀತ ಕಛೇರಿಗೆ ಸಿಕ್ಕಿಲ್ಲ. ಕೇಸರಬಾಯಿಯವರು ನನ್ನನ್ನು ಗುರುತಿಸಿದ್ದಷ್ಟೇ ಅಲ್ಲ, ನನಗೆ ಬೈಯುವುದನ್ನು ಬಿಟ್ಟು ಕೆನ್ನೆ ಹಿಡಿದು ಮುಖ ಎತ್ತಿ, ಜೀವಮಾನದಲ್ಲಿ ಮರೆಯದಂತಹ ಮೆಚ್ಚುಗೆ ವ್ಯಕ್ತಪಡಿಸಿದರು- "ಪಂಡಿತ್‌, ನಿನ್ನ ಧ್ವನಿ ಅದ್ಭುತವಾಗಿದೆ. ತುಂಬಾ ಚೆನ್ನಾಗಿ ಹಾಡ್ತೀಯಾ.” ಬಹುಶಃ ರೇಡಿಯೋದಲ್ಲಿ ಅವರು ನನ್ನ ಸಂಗೀತ ಕೇಳಿರಬೇಕು.

ಒಮ್ಮೆ ರಿಷಿ ವ್ಯಾಲಿಯಲ್ಲಿ ಹಾಡಲು ಮಹಾನ್‌ ತತ್ವಶಾಸ್ತ್ರಜ್ಞ ಜೆ.ಕೃಷ್ಣಮೂರ್ತಿ ನನ್ನನ್ನು ಕರೆಸಿದ್ದರು. ನೀವು ಹಾಡುವಾಗ ಅವರು ಮಧ್ಯದಲ್ಲೇ ಎದ್ದುಹೋದರೆ ಬೇಸರ ಮಾಡಿಕೊಳ್ಳಬಾರದೆಂದು ಮೊದಲೇ ನನಗೆ ಹೇಳಲಾಗಿತ್ತು. ಅದಕ್ಕೆ ಮಾನಸಿಕವಾಗಿ ಸಿದ್ಧನಾಗಿದ್ದೆ. ಸುಮಾರು ಒಂದೂವರೆ ತಾಸು ಹಾಡಿದರೂ ಅವರು ಕುಳಿತೇ ಇದ್ದರು. ನಂತರ ಎದ್ದುಹೋದರು. ಸ್ವಲ್ಪ ಸಮಯದ ನಂತರ ನನ್ನ ಪಕ್ಕದಲ್ಲಿದ್ದ ಹಾರ್ಮೋನಿಯಂ ವಾದಕ ಅಪ್ಪಾ ಜಲಗಾಂವಕರ್‌ ಕುಳಿತಲ್ಲೇ ಕೊಸರಾಡತೊಡಗಿದರು. ಅವರದು ದೊಡ್ಡ ದೇಹ. ಜಾಗ ಇಕ್ಕಟ್ಟಾಯಿತೇನೋ ಎಂದು ಪಕ್ಕಕ್ಕೆ ಸರಿದುಕೊಂಡೆ. ಆಮೇಲೆ ಅವರು ನನ್ನ ಗಮನ ಸೆಳೆಯಲು ಹಾಗೆ ಮಾಡುತ್ತಿದ್ದಾರೆಂದು ತಿಳಿಯಿತು. ಕಣ್‌ಸನ್ನೆಯಲ್ಲೇ ಕಂಬದ ಕಡೆ ತೋರಿಸಿದರು. ಅಲ್ಲಿ ಕೃಷ್ಣಮೂರ್ತಿಯವರು ಕಂಬಕ್ಕೆ ಒರಗಿ ನಿಂತು ಆಲಿಸುತ್ತಿದ್ದರು. ನಾನು ಹಾಡುತ್ತಲೇ ಹೋದೆ. ಅವರು ಮತ್ತೆ ಬಂದು ಕುಳಿತರು. ನಾನು ಕಛೇರಿ ಮುಗಿಸುವುದಕ್ಕಿಂತ ಮುಂಚೆ ಸಂಸ್ಕೃತದಲ್ಲಿ ಏನಾದರೂ ಹಾಡಲು ಹೇಳಿದರು. ಹಾಡಿದೆ. ಮುಗಿದ ಮೇಲೆ ಅವರ ಕಾಲಿಗೆರಗಲು ಹೋದೆ. ತಬ್ಬಿಕೊಂಡು, "ನಿಮ್ಮ ಜಾಗ ಇಲ್ಲಿದೆ' ಎಂದು ಎದೆ ಮುಟ್ಟಿಕೊಂಡರು.

ಒಂದು ದಿನ ಗಂಗಾನದಿಯ ದಡದಲ್ಲಿ ಕುಳಿತು ನೀರಿನ ನಿನಾದ ಆಲಿಸುತ್ತಿದ್ದೆ. ಆವತ್ತು ಕೇಳಿದ ಜುಳುಜುಳುವಿನಲ್ಲಿ ನನಗೊಂದು ನೈಸರ್ಗಿಕ ಗಮಕದ ಬೋಧೆಯಾಯಿತು. ಅಂದಿನಿಂದ ನನ್ನ ಗಾಯನದ ಶೈಲಿ ನದಿಯ ಹರಿಯುವಿಕೆಯಂತಾಯಿತು. ನನ್ನ ಪ್ರಕಾರ ಸಂಗೀತ ನಮ್ಮ ಸುಪ್ತ ಪ್ರಜ್ಞೆಯ ಆಳದಲ್ಲಿರುತ್ತದೆ. ಅದನ್ನು ಆಲಿಸಲು ಆಳ ಸಮುದ್ರದ ಸಂಪೂರ್ಣ ನಿಶ್ಶಬ್ದವನ್ನು ಅನುಭವಿಸಬೇಕು. ಅದರ ಬಗ್ಗೆ ಮಾತನಾಡಲಾಗದು. ಅನೇಕ ಸಲ ಕನಸಿನಲ್ಲಿ ನನಗೆ ಸಂಗೀತದ ಸಲಹೆಗಳು ಸಿಕ್ಕಿವೆ. ಆಗ ನಾನು ಉಚ್ಚರಿಸಿದ ಶಬ್ದಗಳನ್ನು ಬರೆದುಕೊಳ್ಳಲು ನನ್ನ ಹೆಂಡತಿ ಮಧುರಾ ಎದ್ದು ಕುಳಿತಿದ್ದಿದೆ. ಸಂಗೀತದ ವಿಷಯದಲ್ಲಿ ನನ್ನ ಜ್ಞಾಪಕ ಶಕ್ತಿ ಅದ್ಭುತವಾದುದು. ಈಗ ಬೇಕಾದರೂ ನನ್ನೆಲ್ಲಾ ಕನಸುಗಳನ್ನು ನೆನಪು ಮಾಡಿಕೊಳ್ಳಬಲ್ಲೆ.

ಸುತ್ತಲ ಪರಿಸರದಿಂದ ಮುಕ್ತಗೊಳಿಸಿಕೊಳ್ಳಲು ನಾನು ಯಾವಾಗಲೂ ಓಂಕಾರದಿಂದ ಹಾಡಲು ಶುರುಮಾಡುತ್ತೇನೆ. ಮೊದಲ ಕೆಲ ಕ್ಷಣಗಳು ಕಷ್ಟಕರ. ಪ್ರಾರ್ಥನೆಯ ನಂತರವಷ್ಟೇ ಸ್ವರದಲ್ಲಿ ಒಂದಾಗುತ್ತೇನೆ. ನನಗನ್ನಿಸುತ್ತದೆ, ನಮ್ಮ ಜೀವಿತಾವಧಿಯಲ್ಲಿ ಸಂಗೀತದಲ್ಲಿ ಪರಿಪೂರ್ಣತೆ ಸಾಧಿಸಲು ಸಾಧ್ಯವಿಲ್ಲ. ಪ್ರತಿ ಜನ್ಮದಲ್ಲೂ ನೀವು ಹಿಂದಿನ ಜನ್ಮದಲ್ಲಿ ಬಿಟ್ಟ ಹಂತದಿಂದ ಮುಂದುವರೆಯುತ್ತೀರಿ. ಒಮ್ಮೆ ಇದು ಅರ್ಥವಾದರೆ ಸಂಗೀತಕ್ಕೆ ವಯಸ್ಸಿನ ಭೇದವಿಲ್ಲ ಎಂಬುದು ತಿಳಿಯುತ್ತದೆ. ಸಂಗೀತಯಾತ್ರೆಗೆ ಸಾವು ಯಾವ ರೀತಿಯಲ್ಲೂ ಅಂತ್ಯವಲ್ಲ.
--
ಈ ಮೇಲ್ಕಂಡದ್ದು ಪಂಡಿತ್ ಜಸರಾಜ್ ಅವರ ಆತ್ಮಚರಿತ್ರೆಯ ಮಾತುಗಳು (ಉದಯವಾಣಿ ಪತ್ರಿಕೆಯಲ್ಲಿ ಓದಿದ್ದು).  ಅವರ ಸಂಗೀತವನ್ನು ಕೇಳುತ್ತಿದ್ದರೆ ಅದೆಂತದ್ದೋ ಅವಿಸ್ಮರಣೀಯ ಆನಂದ.  ಇತ್ತೀಚೆಗೆ ದಸರೆಯ ಸಂದರ್ಭದಲ್ಲಿ ಮೈಸೂರಿನ ಅರಮನೆ ಆವರಣದಲ್ಲಿ ಈ ಮಹನೀಯರ ಗಾಯನ ಸವಿಯನ್ನು ಸವಿಯುವ ಸೌಭಾಗ್ಯ ನಮಗೂ ಸಂದಿತ್ತು.

ಈ ಮಹನೀಯರ ನಾದಸುಧೆ ನಿತ್ಯ ವಿಶ್ವವನ್ನು ತಣಿಸುತ್ತಲೇ ಇರಲಿ ಎಂದು ಆಶಿಸುತ್ತಾ, ಈ ಹಿರಿಯರ ಹಿರಿತನದ ಬದುಕು ಸುಗಮವಾಗಿರಲಿ ಎಂದು ಹಾರೈಸುತ್ತಾ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ಸಲ್ಲಿಸೋಣ. 


Tag: Pandit Jasraj

ಕಾಮೆಂಟ್‌ಗಳಿಲ್ಲ: