ಶುಕ್ರವಾರ, ಆಗಸ್ಟ್ 30, 2013

ಬೆನಗಲ್ ರಾಮರಾವ್

ಬೆನಗಲ್  ರಾಮರಾವ್

ಬಹುಭಾಷಾ ಕೋವಿದರಾಗಿದ್ದ  ಬೆನಗಲ್ ರಾಮರಾಯರು ಏಪ್ರಿಲ್ 3, 1876ರಂದು ಮಂಗಳೂರಿನಲ್ಲಿ ಜನಿಸಿದರು. ತಂದೆ ವಕೀಲಿ ವೃತ್ತಿ ಮಾಡುತ್ತಿದ್ದ ಮಂಜುನಾಥಯ್ಯನವರು. ರಾಮರಾಯರ ಪ್ರಾಥಮಿಕ ಶಿಕ್ಷಣ ಮೂಲ್ಕಿ, ಮಂಗಳೂರು ಮತ್ತು ಪುತ್ತೂರಿನಲ್ಲಿ ನೆರವೇರಿತು. ಮಂಗಳೂರಿನ ಸರ್ಕಾರಿ ಕಾಲೇಜು ಮತ್ತು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ 1896ರಲ್ಲಿ ಬಿ.ಎ. ಪದವಿ ಗಳಿಸಿದರು. ಕನ್ನಡದ ಬಗ್ಗೆ ಅವರಿಗೆ ಅಪಾರ ಒಲವು. ಪದವಿ ಗಳಿಸಿದ ನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ 1897ರಿಂದ 1900ರವರೆಗೆ ಕಾರ್ಯನಿರ್ವಹಿಸಿದರು. ಮದರಾಸಿನಲ್ಲಿದ್ದಾಗಲೇ ತೆಲುಗು ಮತ್ತು ಕನ್ನಡವನ್ನು ಪ್ರಮುಖ ವಿಷಯವನ್ನಾಗಿ ಆರಿಸಿಕೊಂಡು ಮದರಾಸು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ನಂತರ ಮೈಸೂರಿನ ನಾರ್ಮಲ್ ಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ಎರಡು ವರ್ಷ ಕೆಲಸ ಮಾಡಿ 1902ರಿಂದ ಎಂಟು ವರ್ಷಕಾಲ ಮುಂಬಯಿ ಸರಕಾರದ ಭಾಷಾಂತರ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದರು.

ಬೆನಗಲ್ ರಾಮರಾಯರದು ಬಹುಮುಖ ಪ್ರತಿಭೆ. ಅವರಿಗೆ ಹಲವಾರು ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ತೆಲುಗು, ಸಂಸ್ಕೃತ, ಬಂಗಾಳಿ, ಮರಾಠಿ ಭಾಷೆಗಳಲ್ಲಿ ತಮಗಿದ್ದ ಪ್ರಾವೀಣ್ಯತೆಯಿಂ ಆ ಭಾಷೆಗಳಿಂದ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದರು. ತೆಲುಗಿನಿಂದ ಕಲಹ ಪ್ರಿಯಎಂಬ ನಾಟಕ, ಸತ್ಯರಾಜನ ‘ಪೂರ್ವದೇಶದ ಯಾತ್ರೆಗಳು’ ಎಂಬ ಕಾದಂಬರಿ, ಮರಾಠಿಯಿಂದ ರಮಾ ಮಾಧವಎಂಬ ಕಾದಂಬರಿ, ಸಂಸ್ಕೃತದಿಂದ ದೂತಾಂಗಎಂಬ ನಾಟಕ, ಬಂಗಾಳಿಯಿಂದ ಕೃಷ್ಣಕುಮಾರಿಎಂಬ ಕಾದಂಬರಿ ಮುಂತಾದುವುಗಳು ಅವರ ಭಾಷಾಂತರದ ಪ್ರಮುಖ ಕೃತಿಗಳು.

ರಾಮರಾಯರ ಸ್ವತಂತ್ರ ಕೃತಿಗಳಲ್ಲಿ ಇರಾವತಿ, ಚಿಕ್ಕ ಕಥೆಗಳು, ಮಹನೀಯರ ಚರಿತ್ರೆಮಾಲೆ ಮುಂತಾದವು ಪ್ರಮುಖವಾದವು. ಇತಿಹಾಸದ ಬಗ್ಗೆಯೂ ರಾಯರಿಗೆ  ಅಪಾರ ಒಲವು. ತಂಜಾವೂರು ಮನೆತನದ ಕೈಫಿಯತ್ತು, ಹಳೇಬೀಡು ಕೈಫಿಯತ್ತು, ಹೊಳೆ ಹೊನ್ನೂರು ಕೈಫಿಯತ್ತು ಮುಂತಾದ ಅನೇಕ ಕೈಫಿಯತ್ತುಗಳ ರಚನೆ ಅವರಿಂದ ಮೂಡಿಬಂತು. ಹೀಗಾಗಿ ಅವರು  ಕೈಫಿಯತ್ತುಗಳ ರಾಮರಾಯರೆಂದೇ ಪ್ರಸಿದ್ಧಿ ಪಡೆದವರು.

ರಾಮರಾಯರು ಇತರರೊಡನೆ ಸೇರಿ ಹಲವಾರು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಪಾನ್ಯಂ ಸುಂದರ ಶಾಸ್ತ್ರಿಯವರೊಡಗೂಡಿ ಸಿದ್ಧಪಡಿಸಿದ ಪುರಾಣನಾಮ ಚೂಡಾಮಣಿಒಂದು ಉತ್ಕೃಷ್ಟ ಆಕರ ಗ್ರಂಥ.

ರಾಮರಾಯರನ್ನು ಬೆಳಗಾವಿಯಲ್ಲಿ 1925ರಲ್ಲಿ ನಡೆದ ಹನ್ನೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ಜನತೆ ಗೌರವ ತೋರಿತು. ಈ ಮಹನೀಯರು ಮೇ 8, 1943ರಲ್ಲಿ ಈ ಲೋಕವನ್ನಗಲಿದರು.

ಮಾಹಿತಿ ಕೃಪೆ: ಕಣಜ.

Tag: Benegal Rama Rau

ಕಾಮೆಂಟ್‌ಗಳಿಲ್ಲ: