ಶನಿವಾರ, ಆಗಸ್ಟ್ 31, 2013

ಟಿ. ಜಿ. ಶ್ರೀನಿಧಿ


ಟಿ. ಜಿ. ಶ್ರೀನಿಧಿ

ಇಂದಿನ ಯುವ ವಿಜ್ಞಾನ ಮತ್ತು ತಂತ್ರಜ್ಞಾನ  ಬರಹಗಾರರಲ್ಲಿ  ‘ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ'ಯ ಶ್ರೇಷ್ಠ ಲೇಖಕ ಪುರಸ್ಕೃತ  ನಮ್ಮ  ಟಿ. ಜಿ. ಶ್ರೀನಿಧಿ ಪ್ರಮುಖ ಹೆಸರು.   ಶ್ರೀನಿಧಿ  ಹುಟ್ಟಿದ ದಿನ  ಫೆಬ್ರುವರಿ 24, 1983ರಂದು.  ಹುಟ್ಟಿದ್ದು ಅರಸೀಕೆರೆ ಬಳಿಯ ಬಾಣಾವರದಲ್ಲಿ.  ಓದಿದ್ದು ನಾಗರಹೊಳೆ ಅರಣ್ಯಪ್ರದೇಶಕ್ಕೆ ಸಮೀಪವಿರುವ ವಿರಾಜಪೇಟೆ ತಾಲ್ಲೂಕಿನ ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ.  ತಂದೆ ನಿವೃತ್ತ ಕನ್ನಡ ಪ್ರಾಧ್ಯಾಪಕರೂ ಪ್ರಸಿದ್ಧ ಬರಹಗಾರರೂ ಆದ   ಟಿ. ಎಸ್. ಗೋಪಾಲ್ ಮತ್ತು ತಾಯಿ ಗೀತ. 

ತಮ್ಮ ಕ್ರಿಯಾಶೀಲ ತಂದೆತಾಯಿಗಳ ನೆರಳಿನಲ್ಲಿ ಬೆಳೆದು ಬಂದ ಶ್ರೀನಿಧಿ ಶ್ರೀಮಂಗಳದಂತಹ ಪುಟ್ಟ ಗ್ರಾಮೀಣ  ಕನ್ನಡ ಮಾಧ್ಯಮದ ಶಾಲೆಯಲ್ಲಿ ಬೆಳದು ಬಂದರೂ ನಿರಂತರವಾಗಿ ಓದಿನಲ್ಲಿ ಔನ್ನತ್ಯವನ್ನು ಕಾಪಾಡಿಕೊಂಡು ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಸ್ನಾತಕೋತ್ತರ ಪದವಿಗಳನ್ನು ಪಡೆದರು.  ಹೀಗೆ ಹುಡುಗರು ಬುದ್ಧಿವಂತರಾಗುತ್ತಾರೆ ಎಂದರೆ ಈ ಕಾಲದಲ್ಲಿ ಯಾವಾಗಲೂ ಟ್ಯೂಶನ್, ಓದು ಹೀಗೆ ಮುಳುಗಿರುತ್ತಾರೆ, ಸಾಮಾನ್ಯವಾಗಿ ಕನ್ನಡವನ್ನು ಇಂಗ್ಲಿಷಿನಲ್ಲಿ ಸಂಭಾಷಿಸುತ್ತಾರೆ ಎಂದರ್ಥ.  ಆದರೆ ಶ್ರೀನಿಧಿಯ ವಿಚಾರದಲ್ಲಿ ಅದೆಲ್ಲ ಎಷ್ಟು ಬೇಕೋ ಅಷ್ಟು ಮಾತ್ರ.  ಪ್ರಕೃತಿ ಪ್ರೇಮ, ಕಲಾತ್ಮಕ – ವೈಜ್ಞಾನಿಕ – ಕೌತೂಹಲಿಕ ಆಸಕ್ತಿಗಳು ಶ್ರೀನಿಧಿಯಲ್ಲಿ ನಿರಂತರವಾಗಿದ್ದು ಓದಿನ ದಿನಗಳಿಂದಲೇ ಅವರು ತಮ್ಮ ಈ ಆಸಕ್ತಿಗಳನ್ನು ಸಮಾಜದಲ್ಲಿ ಅಭಿವ್ಯಕ್ತಿಸುತ್ತಾ ನಡೆದರು.  ಓದಿನ ದಿನಗಳಲ್ಲೇ ಕನ್ನಡದಲ್ಲಿ ನೂರಾರು ಲೇಖನಗಳನ್ನು ಬರೆದರು.  ಪ್ರಸಿದ್ಧ ಪತ್ರಿಕೆಗಳ ಅಂಕಣಕಾರರಾದರು.  ಪುಸ್ತಕಗಳನ್ನು ಪ್ರಕಟಿಸಿದರು.  ವಿವಿಧ ವೇದಿಕೆಗಳಲ್ಲಿ ವಿಚಾರ ವಿನಿಮಯಗಳಲ್ಲಿ ಆಹ್ವಾನಿತರಾದರು.  ಇವೆಲ್ಲವುಗಳ ನಡುವೆ ಸಜ್ಜನಿಕೆ, ಆತ್ಮೀಯ ನಡವಳಿಕೆ, ನಿರಂತರ ಜ್ಞಾನಾರ್ಜನೆ, ಕ್ರಿಯಾಶೀಲ ಅಭಿವ್ಯಕ್ತಿ, ಸೃಜನಶೀಲ ಸೃಷ್ಟಿ ಇವೆಲ್ಲವುಗಳನ್ನೂ ತಮ್ಮ ಸಹಜ ಗುಣಗಳನ್ನಾಗಿಸಿಕೊಂಡು ಮುನ್ನಡೆದಿದ್ದಾರೆ. 

ಟಿ ಜಿ. ಶ್ರೀನಿಧಿ ಅವರು ಇಂದಿನ ಯುವ ಪೀಳಿಗೆಯ ವಿಜ್ಞಾನ ಮತ್ತು ತಂತ್ರಜ್ಞಾನಗಳ ಕುರಿತಾದ ಕನ್ನಡ ಬರಹಗಾರರಲ್ಲಿ ಎದ್ದು ಕಾಣುವಂತಹವರಾಗಿದ್ದುಅವರ  ‘ಹಾರುವ ಕನಸನು ಕಂಡವರು’, ‘ಅಂತರಿಕ್ಷದ ಅಧ್ಬುತಗಳು’, ‘ವೆಬ್ ವಿಹಾರ’, ‘ಅವಕಾಶ ಅಪಾರ’, ಹಂಪಿ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರಕ್ಕಾಗಿನ ‘ಮಾಹಿತಿ ಮತ್ತ ಸಂವಹನ ತಂತ್ರಜ್ಞಾನ’, ‘ತಿನ್ನಲಾಗದ ಬಿಸ್ಕತ್ತು ನುಂಗಲಾರದ ಟ್ಯಾಬ್ಲೆಟ್ಟು’, ‘ಫ್ಲಾಪಿಯಿಂದ ಫೇಸ್ಬುಕ್’ವರೆಗೆ, ‘ಕಂಪ್ಯೂಟರ್ ಪ್ರಪಂಚ’, ‘ಡಿಜಿಟಲ್ ಕ್ಯಾಮರಾ ಮೋಡಿ – ಕ್ಲಿಕ್ ಮಾಡಿ ನೋಡಿ’, ‘ಕೆ. ಪಿ. ರಾವ್’,  ‘ಪ್ರಯೋಗಶೀಲ ಸಸ್ಯ ವಿಜ್ಞಾನಿ ಬಿ. ಜಿ. ಎಲ್. ಸ್ವಾಮಿ’,  ‘ಕಂಪ್ಯೂಟರ್’ಗೆ  ಪಾಠ ಹೇಳಿ’, ‘ಟೆಕ್ ಬುಕ್’, ‘ಕಂಪ್ಯೂಟರ್ ಪದ ವಿವರಣ ಕೋಶ’, ‘ನುಡಿಯ ನಾಳೆಗಳು’ ಮುಂತಾದ ಪುಸ್ತಕಗಳು ಓದುಗರಿಂದ, ವಿಮರ್ಶಕರಿಂದ ಮತ್ತು ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದು ಅನೇಕ ಮರುಮುದ್ರಣಗಳನ್ನು ಕಾಣುತ್ತಿವೆ.  ಅವರ ಬರಹಗಳು ಎಲ್ಲ ಜನಪ್ರಿಯ ಪತ್ರಿಕೆಗಳಲ್ಲೂ ನಿರಂತರವಾಗಿ ಪ್ರಕಟಗೊಳ್ಳುತ್ತಿವೆ.  ಹೀಗೆ ಪ್ರಕಟಗೊಂಡಿರುವ  ಲೇಖನಗಳ ಸಂಖ್ಯೆಯೇ  1500ಕ್ಕೂ  ಹೆಚ್ಚು.    ಇವೆಲ್ಲಕ್ಕೂ ಮಿಗಿಲಾಗಿ ಅಥವ ಪೂರಕವಾಗಿ ಅವರ ಇಜ್ಞಾನ.ಕಾಂ (www.ejnana.com) ಕನ್ನಡ ಭಾಷೆಯಿಂದ ವಿಜ್ಞಾನಕ್ಕೆ ಸಲ್ಲುತ್ತಿರುವ ಶ್ರೇಷ್ಠ ಗೌರವವೇ ಆಗಿದೆ.  ಇತ್ತೀಚೆಗೆ ಇದು ತನ್ನ ಸೃಜನಶೀಲತೆಗಾಗಿ ‘ಇಂಡಿಯಾ ಬ್ಲಾಗರ್ ಅವಾರ್ಡ್’  ಗೌರವಕ್ಕೆ ಪಾತ್ರವಾಗಿದೆ.   ಇದರಲ್ಲಿ ವಿಜ್ಞಾನ ಆಸಕ್ತರಿಗೆ, ಕನ್ನಡದಲ್ಲಿ ವಿಜ್ಞಾನ ಸಂವಹನ ಇಚ್ಛಿಸುವವರಿಗೆ, ವಿದ್ಯಾರ್ಥಿಗಳಿಗೆ ಮತ್ತು ಪುಟಾಣಿಗಳಿಗೆ ಕೂಡಾ ಮಹತ್ವದ ಜ್ಞಾನ ಭಂಡಾರವಿದೆ.   ಅವರ ‘ಶ್ರೀನಿಧಿಯ ಪ್ರಪಂಚ’ ಬ್ಲಾಗ್ ಮತ್ತೊಂದು ಕ್ರಿಯಾಶೀಲ ಕನ್ನಡ ತಾಣ.   ಇವರು ತಮ್ಮ ಪುಸ್ತಕಗಳಿಗೆ  ಮಾತ್ರವಲ್ಲದೆ  ಇತರ ಹಲವಾರು  ಬರಹಗಾರರ ಪುಸ್ತಕಗಳಿಗೆ  ವಿನ್ಯಾಸವನ್ನು ಕೂಡಾ ಮಾಡಿದ್ದಾರೆ. 

ಪ್ರತಿಷ್ಠಿತ ಸಾಫ್ಟ್ವೇರ್ ಉದ್ಯಮದಲ್ಲಿನ ಕಾರ್ಯನಿರ್ವಹಣೆವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ  ಆಸಕ್ತಿಗಳ ಜೊತೆಗೆ ಪ್ರಕೃತಿ, ಅರಣ್ಯ ಸಂಪತ್ತು, ಚಾರಿತ್ರಿಕ ತಿಳುವಳಿಕೆ, ಸಾಹಿತ್ಯಕ ಅಧ್ಯಯನ, ಛಾಯಾಗ್ರಹಣ, ಸಾಂಸ್ಕೃತಿಕ ಕ್ಷೇತ್ರಾಧ್ಯಯನ ಹೀಗೆ ವಿವಿಧ ಆಸಕ್ತಿಗಳಲ್ಲಿ ತಮ್ಮನ್ನು ವ್ಯಾಪಿಸಿಕೊಂಡಿರುವ ಶ್ರೀನಿಧಿಆಳ್ವಾಸ್ ನುಡಿಸಿರಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ಪ್ರಬಂಧ ಮಂಡನೆಯೂ ಒಳಗೊಂಡಂತೆ, ವಿವಿಧ ವಿಜ್ಞಾನ ಕಮ್ಮಟ ಮತ್ತು  ವಿಚಾರ ಗೋಷ್ಠಿಗಳಲ್ಲಿ ಪ್ರಾತಿನಿಧ್ಯ, ಹಂಪಿ ವಿಶ್ವವಿದ್ಯಾಲಯದಲ್ಲಿ ಆಹ್ವಾನಿತ ಉಪನ್ಯಾಸಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಕಣಜ’ಕ್ಕೆ ಸಲಹೆಗಾರ ಹೀಗೆ ವಿವಿಧ ರೀತಿಯಲ್ಲಿ ಜನಸಮುದಾಯದ ನಡುವೆ ವಿಶಿಷ್ಟರಾಗಿ ಕಂಡಿದ್ದಾರೆ.

ಯುವಕ ಶ್ರೀನಿಧಿ ಸಾಕಷ್ಟು ಸಾಧಿಸಿದ್ದಾರೆ.  ಈ ಕಿರು ವಯಸ್ಸಿನಲ್ಲೇ ತಮ್ಮ  ಪ್ರಸಿದ್ಧ  ಪುಸ್ತಕ ‘ತಿನ್ನಲಾಗದ ಬಿಸ್ಕತ್ತು ನುಂಗಲಾರದ ಟ್ಯಾಬ್ಲೆಟ್ಟು’ ಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿಯನ್ನು   ಸ್ವೀಕರಿಸಿದ್ದಾರೆ.  ಕನ್ನಡ ನಾಡಿನ ಗೌರವಾನ್ವಿತ ಹಿರಿಯರ ಮಾರ್ಗದರ್ಶನದಲ್ಲಿ ‘ಇಜ್ಞಾನ ಟ್ರಸ್ಟ್’ ಸ್ಥಾಪಿಸಿ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಿಗೆ ವಿಶಾಲ ವ್ಯಾಪ್ತಿ ನೀಡಿ ವಿಶೇಷವಾಗಿ ವಿದಾರ್ಥಿಗಳಲ್ಲಿ ಮತ್ತು ಯುವಜನರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಕನ್ನಡದಲ್ಲಿ ಮೂಡಿಸುವುದರ  ಬಗ್ಗೆ ವಿಶೇಷ ಯೋಜನೆಗಳನ್ನು ರೂಪಿಸುತ್ತಾ  ವಿಶಿಷ್ಟ ಹೆಜ್ಜೆಗಳನ್ನು  ಇಟ್ಟಿದ್ದಾರೆ.      ಇವರ ಬದುಕು ಸುಂದರವಾಗಿರಲಿ.  ಇವರ ಕೊಡುಗೆಗಳು ಕನ್ನಡದ ಶ್ರೇಷ್ಠತೆಯನ್ನು, ವೈಜ್ಞಾನಿಕ ಕೌತುಕಗಳನ್ನು ನಿರಂತರ  ಪ್ರಜ್ವಲಿಸುತ್ತಿರಲಿ ಎಂದು ಆಶಿಸುತ್ತಾ ಶ್ರೀನಿಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳೋಣ.

Tag: T. G. Srinidhi

ಕಾಮೆಂಟ್‌ಗಳಿಲ್ಲ: