ಶುಕ್ರವಾರ, ಆಗಸ್ಟ್ 30, 2013

ಕುಮಾರ ಗಂಧರ್ವ

ಕುಮಾರ ಗಂಧರ್ವ

1935ರ ವರ್ಷದಲ್ಲಿ  ಅಲಹಾಬಾದಿನಲ್ಲಿ  ಅಖಿಲ ಭಾರತ ಸಂಗೀತ ಸಮ್ಮೇಳನ. ಸಂಗೀತ ದಿಗ್ಗಜಗಳ ಸಂಗಮ. ಗುಂಡುಗಲ್ಲದ ಹನ್ನೊಂದು ವರ್ಷದ ಬಾಲಕ ವೇದಿಕೆಯೇರಿದ. ಮನೆಯಂಗಳದಲ್ಲಿ ಗೋಲಿಗುಂಡು ಆಡುವ ವಯಸ್ಸು. ಆದರೆ, ಸಂಗೀತವೆ ಮೈವೆತ್ತಿದಂಥ ಭಾವ. ಅವನು ಆಲಾಪ ಆರಂಭಿಸುತ್ತಿದ್ದಂತೆಯೇ ಶ್ರೋತೃಗಳ ಕಣ್ಣು ಮುಚ್ಚಿದವು, ತಲೆ ತೂಗಿದವು. ಬಾಲಕ ಕಾಫಿ ರಾಗವನ್ನು ಅರ್ಧ ಘಂಟೆ ಹಾಡಿದ. ಅದೆಂಥ ಆತ್ಮವಿಶ್ವಾಸ! ಅವನು ಹಾಡು ನಿಲ್ಲಿಸಿದಾಗ ಹದಿನೈದು ನಿಮಿಷ ಕಿವಿ ಗಡಚಿಕ್ಕುವ ಚಪ್ಪಾಳೆ. ಸಂಗೀತ ದಿಗಂತದಲ್ಲಿ ಒಂದು ಹೊಸ ತಾರೆ ಉದಯಿಸಿತ್ತು. ಸಂಗೀತ ಸಮ್ಮೇಳನಾಧ್ಯಕ್ಷರಾಗಿದ್ದ ಸರ್ ತೇಜ ಬಹಾದೂರ ಸಪುರ ಸುವರ್ಣ ಪದಕವಿತ್ತರು. ಸ್ವಯಂಸ್ಪೂರ್ತಿಯಿಂದ ಶ್ರೋತೃಗಳು ಕಾಣಿಕೆ ಸುರಿಮಳೆಗೈದರು. ಒಂದು ಘಂಟೆ ಕಳೆದರೂ ಕಾಣಿಕೆ ನೀಡುವುದು ಮುಗಿಯಲೊಲ್ಲದು. ಮಿಕ್ಕವರು ಬಾಲಕನ ವಸತಿಸ್ಥಳಕ್ಕೆ ಹೋಗಿ ಕಾಣಿಕೆ ಸಲ್ಲಿಸಬೇಕೆಂದು ಸಂಘಟಕರು ವಿನಂತಿಸಿಕೊಂಡರು. ಬಾಲಕ ತನ್ನೆರಡೂ ಕೈಗಳಿಂದ ಕಾಣಿಕೆಗಳನ್ನು ಬಾಚಿಕೊಂಡ. ಆ ಬಾಲಕನೆ ಮುಂದೆ ಕುಮಾರ ಗಂಧರ್ವ ಎಂದು ಪ್ರಸಿದ್ಧರಾದ ಗಾಯಕ.

ಜನ್ಮನಾಮ ಶಿವಪುತ್ರ ಕೊಂಕಾಳಿಮಠ. ಹುಟ್ಟಿದ್ದು ಎಪ್ರಿಲ್‌ 8, 1924. ಬೆಳಗಾವಿ ಜಿಲ್ಲೆಯ ಸೂಳಿಭಾವಿಯಲ್ಲಿ. ಅವನದು ಬಾಲಪ್ರತಿಭೆ. ಆದರೆ, ಇತರ ಬಾಲಪ್ರತಿಭೆಗಳಂತೆ ಬೆಳೆಯುತ್ತ ಹೋದಂತೆ ಕಳೆಗುಂದಲಿಲ್ಲ. ಇನ್ನೂ ದಟ್ಟಡಿ ಇಡುವಾಗ ಒಂದು ದಿನ ಮುಝೆ ಗಾನಾ ಆ ಗಯಾ ಹೈಎನ್ನಬೇಕೆ? ನಿಜಕ್ಕೂ ಅವನಿಗೆ ಗಾಯನ ಬಂದಿತ್ತು. ಐದು ವರ್ಷದವನಿದ್ದಾಗಲೆ ಸವಾಯಿ ಗಂಧರ್ವರ ಬಸಂತ ರಾಗವನ್ನು ಕೇಳಿ ಮನೆಗೆ ಬಂದು ಆಲಾಪ, ಚೀಜ್‌, ತಾನಗಳನ್ನು  ಹಾಡಿ ತೋರಿಸಿದ. ಅಷ್ಟೇ ಅಲ್ಲ. ಅಬ್ದುಲ್‌ ಕರೀಮಖಾನ ಮತ್ತು ಸವಾಯಿ ಗಂಧರ್ವರ ಗಾಯನದಲ್ಲಿಯ ಸೂಕ್ಷ್ಮ ವ್ಯತ್ಯಾಸಗಳನ್ನು ಹಾಡಿ ತೋರಿಸಿದ. ಐದು ವರ್ಷದವನಿದ್ದಾಗ ಅವನು ದಾವಣಗೆರೆಯಲ್ಲಿ ಪ್ರಥಮ ಕಚೇರಿ ನೀಡಿದ. ಅದೊಂದು ದಾಖಲೆ. ಆರು ವರ್ಷದವನಿದ್ದಾಗ ಅವನ ಗಾಯನ ಕೇಳಿ ಗುಲ್ಬರ್ಗಾ ಜಿಲ್ಲೆಯ ಗುರುಕಲ್ಮಠದ ಶಾಂತವೀರ ಸ್ವಾಮಿಗಳು ಓಹೋ! ಇವನು ಕುಮಾರ ಗಂಧರ್ವಎಂದು ಉದ್ಗರಿಸಿದರು. ಆ ಹೆಸರೇ ಸ್ಥಿರವಾಯಿತು. ಅದೇ ಅವರ ಕಾಯಂ ಹೆಸರಾಯಿತು.

ಶಿವಪುತ್ರನ ತಂದೆ ಸಿದ್ಧರಾಮಯ್ಯ ಸ್ವತಃ ಸಂಗೀತಗಾರರಾಗಿದ್ದರು. ಸೋದರಮಾವ ಕಲ್ಲಯ್ಯಸ್ವಾಮಿ ಸಂಬರಗಿಮಠ ಶಿರಹಟ್ಟಿ ವೆಂಕೋಬರಾಯರ ನಾಟಕ ಕಂಪನಿ, ವಾಮನರಾವ ಮಾಸ್ತರರ ನಾಟಕ ಕಂಪನಿ ಮತ್ತು ಸೀಮೀಕೇರಿ ನಾಟಕ ಕಂಪನಿಗಳಲ್ಲಿ ಗಾಯಕ ನಟರಾಗಿದ್ದರು. ಅವರು ಶಿವಪುತ್ರನಿಗೆ ನಾಲ್ಕು ವರ್ಷದವನಿದ್ದಾಗಲೆ ಸಂಗೀತದೀಕ್ಷೆ ನೀಡಿದರು. ಆ ಮೇಲೆ, ತಂದೆ ಜವಾಬ್ದಾರಿ ವಹಿಸಿಕೊಂಡರು. ತಂದೆ ಮತ್ತು ಮಗ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಮುಂತಾದೆಡೆ ಕಾರ್ಯಕ್ರಮ ನೀಡಿದರು. ಗದಗಿನಲ್ಲಿ ಕನ್ನಡ ರಂಗಭೂಮಿಯ ಅಧ್ವರ್ಯು ಗರೂಡ ಸದಾಶಿವರಾಯರ ನೇತೃತ್ವದಲ್ಲಿ ಕುಮಾರ ಗಂಧರ್ವನನ್ನು ಸತ್ಕರಿಸಲಾಯಿತು. ಕಲಕತ್ತೆಯ ಕಚೇರಿಯೊಂದರಲ್ಲಿ ವಿವೇಕಾನಂದರ ಶಿಷ್ಯ ಅಭೇದಾನಂದರು ಕುಮಾರ ಗಂಧರ್ವನಿಗೆ ಸುವರ್ಣಪದಕ ನೀಡಿ ಆಶೀರ್ವದಿಸಿದರು. ಕುಮಾರ ಗಂಧರ್ವನ ಸಂಗೀತಯಾತ್ರೆ ಕಲಕತ್ತಾ, ಆಗ್ರಾ, ಕರಾಚಿ, ನಾಗಪುರ ಮೂಲಕ ಮುಂಬಯಿಗೆ ಕೊಂಡೊಯ್ದಿತು.

ಮಗನ ಪ್ರತಿಭೆಗೆ ಸಂಸ್ಕಾರದ ಅಗತ್ಯವನ್ನು ಮನಗಂಡ ಸಿದ್ಧರಾಮಯ್ಯನವರು  ಕುಮಾರ ಗಂಧರ್ವನನ್ನು ಮುಂಬಯಿಯ ಪ್ರೊ. ಬಿ.ಆರ್. ದೇವಧರ ಅವರಲ್ಲಿ ಕರೆದೊಯ್ದರು. ದೇವಧರರು ಗ್ವಾಲಿಯರ ಘರಾಣೆಯ ವಿಷ್ಣು ದಿಗಂಬರ ಪಲುಸ್ಕರರ ಶಿಷ್ಯರು. ಸಂಪ್ರದಾಯಶರಣರಾಗಿರಲಿಲ್ಲ. ತೆರೆದ ಮನಸ್ಸಿನವರು. ಕುಮಾರಗಂಧರ್ವನಿಗೆ ತನ್ನದೇ ಪ್ರತಿಭೆಯನ್ನು ವಿಕಸಿಸಿಕೊಳ್ಳಲು ಪ್ರೋತ್ಸಾಹಿಸಿದರು. ದೇವಧರರ ಸ್ಕೂಲ್‌ ಆಫ್‌ ಇಂಡಿಯನ್‌ ಮ್ಯೂಸಿಕ್‌ ಒಂದು ರೀತಿಯಲ್ಲಿ ಹಿಂದುಸ್ತಾನಿ ಸಂಗೀತ ಪ್ರಪಂಚದ ಪ್ರದರ್ಶನ ಕೂಟವಾಗಿತ್ತು. ಅಲ್ಲಿಗೆ ಬಂದಾಗ ಕುಮಾರ ಗಂಧರ್ವನಿಗೆ ಇನ್ನೂ ಹದಿವಯಸ್ಸೂ ಆಗಿರಲಿಲ್ಲ. ಅಲ್ಲಿ ಬಹುತೇಕ ಎಲ್ಲ ಘರಾಣೆಗಳ ದಿಗ್ಗಜರ ಗಾಯನವನ್ನು ಆಲಿಸುವ ಅವಕಾಶ ಲಭಿಸಿತು. ಆ ಚಿಕ್ಕ ಸಭಾಮಂದರಿದಲ್ಲಿ ಒಂದು ದಿನ ಪಟಿಯಾಲಾ ಘರಾಣೆಯ ಬಡೆ ಗುಲಾಮ ಅಲಿಖಾನರ ಭೀಮಪಲಾಸಿ ರಾಗ ಕೇಳಲು ಲಭಿಸಿದರೆ ಇನ್ನೊಂದು ದಿನ ಕಿರಾಣಾ ಘರಾಣೆಯ ಅಬ್ದುಲ್‌ ಕರೀಮಖಾನರ ಜಿಂಜೋಟಿ ರಾಗ. ಮತ್ತೊಂದು ದಿನ ತರುಣಿ ರೋಶನಾರಾ ಬೇಗಂ ಅವರ ತಾರ ಷಡ್ಜ ಅಥವಾ ಹೀರಾಬಾಯಿ ಬಡೋದೆಕರರ ತೀವ್ರ ತಾನಗಳು. ಮಗದೊಮ್ಮೆ ಕೇಸರಬಾಯಿ ಕೇರಕರರ ದುರ್ಗಾ ರಾಗ. ಹೀಗೆಯೇ, ದೇವಧರರು ಶ್ರೇಷ್ಠ ಹಾಗೂ ಕಾಳಜಿಯ ಗುರುಗಳಾಗಿದ್ದರು. ಕುಮಾರ ಗಂಧರ್ವನಿಗೆ ರಾಗಗಳನ್ನು ಆಲಿಸಿ ಗೊತ್ತಿತ್ತು. ಕಲಿತು ಅಲ್ಲ, ದೇವಧರರು ಈ ಕೊರತೆಯನ್ನು ತುಂಬಿದರು.

ಕುಮಾರ ಗಂಧರ್ವರು ಆರೋಹ-ಅವರೋಹ, ವಾದಿ-ಸಂವಾದಿ, ತಾಳ-ಲಯ, ರಾಗಧಾಟುಗಳ ತಾಂತ್ರಿಕಾಂಶಗಳನ್ನು ಕರಗತ ಮಾಡಿಕೊಂಡರು. ಇತರರು ಇದನ್ನು ಸಾಧಿಸಲು ಹತ್ತಾರು ವರ್ಷ ತೆಗೆದುಕೊಂಡರೆ ಕುಮಾರ ಗಂಧರ್ವರು ಒಂದೆರಡು ವರ್ಷಗಳಲ್ಲೇ ಸಾಧಿಸಿದರು. ಕುಮಾರ ಗಂಧರ್ವ 1933 ರಿಂದ 1943ರ ವರೆಗೆ ದೇವಧರರಲ್ಲಿ ಅಭ್ಯಾಸ ಮಾಡಿದರು.

ದೇವಧರರು ಕುಮಾರ ಗಂಧರ್ವರನ್ನು ಅಂಜನಿಬಾಯಿ ಮಾಲ್ಪೆಕರ ಅವರ ಬಳಿ ಕರೆದೊಯ್ದಾಗ ಅಂಜನಿಬಾಯಿ ಅರವತ್ತು ದಾಟಿದ್ದರು. ಅಂಜನಿಬಾಯಿ ವೃತ್ತಿಪರ ಗಾಯಕಿಯಾಗಿರಲಿಲ್ಲ. ಅವರು ಸಾರ್ವಜನಿಕ ಕಚೇರಿ ನೀಡಿ ಎಷ್ಟು ವರ್ಷಗಳಾಗಿದ್ದವೊ!  ಅಂಜನಿಬಾಯಿ ಕುಮಾರ ಗಂಧರ್ವರಿಗೆ ಹಾಡಲು ಹೇಳಿದರು. ಶಂಕರಾ ರಾಗದ ನಂತರ ಭೈರವಿ ರಾಗದಲ್ಲಿ ಶ್ಯಾಮಸುಂದರ ಮದನ ಮೋಹನಚೀಜು ಹಾಡಿದರು. ಹಾಡಿಕೆಯಲ್ಲಿ ಹುಡುಕಾಟ, ತುಡುಕಾಟ ಇರುವುದನ್ನು ಅಂಜನಿಬಾಯಿ ಗುರುತಿಸಿದರು. ಇನ್ನೂ ಅನುಕರಣ ಅದೂ ಕಿರಾಣಾ ಘರಾಣೆಯ ಅಬ್ದುಲ್‌ ಕರೀಮಖಾನರ ಅನುಕರಣ, ಇರುವುದನ್ನು ಕಂಡರು. ಆದರೆ, ಅದುವರೆಗಿನ ಹಿಂದುಸ್ತಾನಿ ಗಾಯನಕ್ಕಿಂತ ತೀರ ಭಿನ್ನವೆಂಬುದನ್ನೂ ಗಮನಿಸಿದರು. ಅವರೊಬ್ಬ ಬಾಲಪ್ರತಿಭೆ ಎಂಬ ಖ್ಯಾತಿಯೂ ಅಂಜನಿಬಾಯಿ ಅವರ ಕಿವಿ ತಲುಪಿತ್ತು. ಅಂಜನಿಬಾಯಿ ತತ್‌ಕ್ಷಣ ಕುಮಾರ ಗಂಧರ್ವರನ್ನು ಶಿಷ್ಯನೆಂದು ಸ್ವೀಕರಿಸಿದರು. ಅದೊಂದು ಆಯೋಚಿತ ನಿರ್ಧಾರ. ಕುಮಾರ ಗಂಧರ್ವರ ವಿಧಿ ನಿರ್ಧಾರವಾಯಿತು ಕೂಡ. ಅಂಜನಿಬಾಯಿ ಒಪ್ಪಿದ್ದು ಸ್ವತಃ ದೇವಧರರಿಗೇ ಆಶ್ಚರ್ಯವಾಯಿತು. ಒಪ್ಪಲು ಕಾರಣವೆಂದರೆ ಕುಮಾರ ಗಂಧರ್ವ ಹತ್ತರ ಕೂಡ ಹನ್ನೊಂದು ಆಗಿರಲಿಲ್ಲ ಎಂಬುದು ಮತ್ತು ಅವರೊಬ್ಬ ಸಂಗೀತಭಾರ ಹೊತ್ತ ಹುಡುಗ ಹಾಗೂ ತನ್ನ ಸಂಗೀತಜೀವನ ಹೇಗೆ ರೂಪಿಸಿಕೊಳ್ಳಬೇಕೆಂದು ತಿಳಿಯದ ಮಾನಸಿಕ ಗೊಂದಲದಲ್ಲಿದ್ದ ಹುಡುಗ.

ಅಂಜನಿಬಾಯಿ ಭೈರವಿ ರಾಗದಲ್ಲಿ ಪ್ರಯೋಗಿಸುವ ಕೋಮಲ ರಿಷಭ ಸ್ವರವೊಂದನ್ನೇ ಒಂದು ವಾರ ಅಭ್ಯಾಸ ಮಾಡಿಸಿದರು. ಸ್ವರದ ಅಂತರ್ಯ ಮತ್ತು ರಾಗದಲ್ಲಿ ಅದರ ಸ್ಥಾನವನ್ನು ತೆರೆದು ತೋರಿದರು. ಹಾಗೆಂದು ಬಿಡಿಸಿ ಹೇಳದಿದ್ದರೂ ಅಂಜನಿಬಾಯಿ ಮಾಡಿದುದೇನೆಂದರೆ ಪ್ರತಿಯೊಂದು ಸ್ವರವೂ ತಾತ್ವಿಕವಾಗಿ ಷಡ್ಜವೇ ಎಂದು ಕುಮಾರ ಗಂಧರ್ವರಿಗೆ ಮನದಟ್ಟು ಮಾಡಿಕೊಟ್ಟರು. ಷಡ್ಜಎಂಬ ಶಬ್ದವೇ ಸೂಚಿಸುವಂತೆ ಅದರಲ್ಲಿ ಆರು ಸ್ಥಾನಗಳು ಅಂತರ್ಗತವಾಗಿವೆ. ಸ್ವರದ ಈ ತತ್ವವನ್ನು ಅರಿಯದ ಹೊರತು ರಾಗವನ್ನು ಅರಿಯಲಾಗದು. ಸಾವಿರ ರಾಗಗಳನ್ನು, ಬಂದಿಶ್‌ಗಳನ್ನು ತಿಳಿದುಕೊಂಡಿರಬಹುದು. ಆದರೆ, ಪ್ರತಿ ಸ್ವರವೂ ಷಡ್ಜವೆಂದು ಅರಿಯದ ವಿನಾ ಸಂಗೀತದ ಆತ್ಮದ ಅರಿವಾಗದು. ಅಂಜನಿಬಾಯಿ ಮಾಲ್ಪೆಕರ ತಮಗೆ ನಜರ” (ದೃಷ್ಟಿ,  ಸಂಗೀತ ದೃಷ್ಟಿ) ನೀಡಿದರೆಂದು ಕುಮಾರ ಗಂಧರ್ವರು ಸ್ಮರಿಸುತ್ತಿದ್ದರು. ಕುಮಾರ ಗಂಧರ್ವರ ಮೇಲೆ ಪ್ರೊ.ಬಿ.ಆರ್. ದೇವಧರ ಮತ್ತು ಅಂಜನಿಬಾಯಿ ಮಾಲ್ಪೆಕರರ ಪ್ರಭಾವ ಅಷ್ಟಿಷ್ಟಲ್ಲ. ಹಾಗಿದ್ದೂ ಕೂಡ ಅವರು ಸ್ವಯಂಬೋಧಿತ ಗಾಯಕರು. ತಮ್ಮೊಂದಿಗೆ ದೇವಧರರಲ್ಲಿ ಸಹಪಾಠಿಯಾಗಿದ್ದ ಮಂಗಳೂರಿನ ಭಾನುಮತಿ ಕಂಸರನ್ನು ಕುಮಾರ ಗಂಧರ್ವರು ಮದುವೆಯಾದರು. ಭಾನುಮತಿ ಕುಮಾರ ಗಂಧರ್ವರಲ್ಲಿ ತಮ್ಮ ಸಂಗೀತಾಭ್ಯಾಸ ಮುಂದುವರಿಸಿದರು.

ಒಮ್ಮೆ ಕೇಳಿದರೆ ಸಾಕು, ಯಾರ ಗಾಯನವನ್ನೂ ಕುಮಾರ ಗಂಧರ್ವರು ಅನುಕರಿಸಬಲ್ಲವರಾಗಿದ್ದರು. ರಾಮಕೃಷ್ಣಬುವಾ ವಝೆ, ಪಂಚಾಕ್ಷರಿ ಗವಾಯಿ, ನಾರಾಯಣರಾವ ವ್ಯಾಸ, ಇಂದಿರಾಬಾಯಿ ವಾಡಕರ, ಮೆಹಬೂಬಜಾನ, ಮಾಸ್ಟರ ಕೃಷ್ಣ, ಫೈಯಾಜಖಾನ, ಮಲ್ಲಿಕಾರ್ಜುನ ಮನಸೂರ, ಕೇಸರಬಾಯಿ ಕೇರಕರ ಮುಂತಾದವರ ಭಿನ್ನ ವಿಭಿನ್ನ ಗಾಯನಶೈಲಿಗಳನ್ನು ಥೇಟ ಅವರಂತೆಯೇ ಅನುಕರಿಸಬಲ್ಲವರಾಗಿದ್ದರು. ಅದೊಂದು ಅನನುಕರಣೀಯ ಅನುಕರಣ, ಕೇಸರಬಾಯಿ ಕೇರಕರ ಇದನ್ನು ನಂಬಿರಲಿಲ್ಲ. ಆದರೆ, ಸ್ವತಃ ಕೇಳಿದ ಮೇಲೆ ನಂಬದೆ ಗತ್ಯಂತರವಿರಲಿಲ್ಲ. ಒಮ್ಮೆ ಸಾವಂತವಡಿ ಮಾಹಾರಾಜ ಭೂಗಂಧರ್ವ ರೆಹಮತ್‌ಖಾನರ ಅಪರೂಪ ರಾಗದ ಧ್ವನಿಮುದ್ರಿಕೆ ಕೇಳಿಸಿ ಅದರಂತೆ ಹಾಡುವಂತೆ ಆಹ್ವಾನ ನೀಡಿದರು. ಅಗೋ! ಕುಮಾರ ಗಂಧರ್ವರು ಅದರಂತೆಯ ಹಾಡಿತೋರಿಸಿದರು.

ಭೋಪಾಲ ಸಂಗೀತ ಸಮ್ಮೇಳನದಲ್ಲೊಮ್ಮೆ ಗಂಗೂಬಾಯಿ ಹಾನಗಲ್ಲ, ಭೀಮಸೇನ ಜೋಶಿ, ಕುಮಾರ ಗಂಧರ್ವ ಮತ್ತು ಓಂಕಾರನಾಥ ಠಾಕೂರ ಒಂದೇ ಹೋಟೆಲಿನಲ್ಲಿ ತಂಗಿದ್ದರು. ಬರ್ರೀ, ಓಂಕಾರನಾಥರ ಗಾಯನ ಶುರುವಾಗಲಿದೆ, ಕೇಳಲು ಹೋಗೋಣಎಂದರು ಗಂಗೂಬಾಯಿ. ಸಭಾಭವನಕ್ಕೇಕೆ ಹೋಗುವಿರಿ? ನಾನು ಇಲ್ಲಿಯೆ ಓಂಕಾರನಾಥರ ಗಾಯನ ಕೇಳಿಸುವೆಎಂದವರೆ ಕುಮಾರ ಗಂಧರ್ವ ಹಾಡಲಾರಂಭಿಸಿದರು. ಸಭಾಭವನಕ್ಕೆ ಹೊರಟಿದ್ದ ಓಂಕಾರನಾಥ ಠಾಕೂರರಿಗೆ ಕುಮಾರ ಗಂಧರ್ವರ ಕೋಣೆಯಿಂದ ತಮ್ಮದೇ ಗಾಯನ ಕೇಳಿಬಂತು. ತಮ್ಮ ಗಾನಮುದ್ರಿಕೆ ಹಾಕಿರಬಹುದೆಂದು ಬಾಗಿಲು ತಳ್ಳಿ ನೋಡುತ್ತಾರೆ! ಕುಮಾರ ಗಂಧರ್ವ ಹಾಡುತ್ತಿದ್ದಾರೆ. ವಾಹ್‌, ಬೇಟಾ, ಜಿಯೊಎಂದು ಹರಸಿದರು. ಬರಿ ಅನುಕರಣೆಯಷ್ಟಕ್ಕೆ ನಿಂತಿದ್ದರೆ ಕುಮಾರ ಗಂಧರ್ವ ಇಷ್ಟು ದೊಡ್ಡವರಾಗುತ್ತಿರಲಿಲ್ಲ. ಆರಂಭಿಕ ವರ್ಷಗಳಲ್ಲಿ ಮನರಂಜನೆಗಾಗಿ ಅನುಕರಣೆ ಮಾಡುತ್ತಿದ್ದರು, ಅಷ್ಟೆ.

1947ರಲ್ಲಿ ದುರಂತ ಎರಗಿತು. ಕುಮಾರ ಗಂಧರ್ವರಿಗೆ ಗಂಭೀರ ಪುಪ್ಪುಸ ಕ್ಷಯರೋಗ ತಗಲಿತು. ಇಂದಿನಂತೆ ಅಂದು ಕ್ಷಯರೋಗಕ್ಕೆ ಸಮರ್ಥ ಔಷಧೋಪಚಾರ ಇರಲಿಲ್ಲ. ಕುಮಾರ ಗಂಧರ್ವರ ಒಂದು ಪಪ್ಪುಸವನ್ನೆ ತೆಗೆಯಬೇಕಾಯಿತು. ಹಾಡುವುದೊತ್ತಟ್ಟಿಗಿರಲಿ, ಡಾಕ್ಟರರು ಮಾತಾಡುವುದನ್ನೂ ನಿಷೇಧಿಸಿದರು. ಸಂಗೀತಪ್ರೇಮಿ ದಿ. ರಾಮಭಯ್ಯಾ ದಾತೆ ಕುಮಾರ ಗಂಧರ್ವರನ್ನು ಮಧ್ಯ ಪ್ರದೇಶದ ದೇವಾಸಕ್ಕೆ ಕರೆದೊಯ್ದರು. ದೇವಾಸದ ಮಹಾರಾಜನ ಉದಾರ ಸಹಾಯದೊಂದಿಗೆ ಔಷಧೋಪಚಾರ ವ್ಯವಸ್ಥೆ ಮಾಡಿದರು. ಕುಮಾರ ಗಂಧರ್ವ ದೇವಾಸದಲ್ಲಿಯೆ ನೆಲೆಸಿದರು. ಇಂದು ಈ ಚಿಕ್ಕ  ಊರಿಗೆ ಪ್ರಸಿದ್ಧಿ ಬಂದಿರುವುದು ಕುಮಾರ ಗಂಧರ್ವರಿಂದಲೆ. ಭಾನುಮತಿ ಹೈಸ್ಕೂಲ್‌ ಶಿಕ್ಷಕಿಯಾಗಿ ದುಡಿಯುತ್ತ ಕುಮಾರ ಗಂಧರ್ವರ ಆರೈಕೆ ಮಾಡಿದರು. ಒಂದು ದಿನ ಧೈರ್ಯ ಕಳೆದುಕೊಂಡು ಅತ್ತುಬಿಟ್ಟರು. ಎದೆಗುಂದದೆ ಕುಮಾರ ಗಂಧರ್ವ ಭರವಸೆ ನೀಡಿದರು: ಚಿಂತಿಸದಿರು. ನಾನು ಹಾಡದ ವಿನಾ ಸಾಯುವುದಿಲ್ಲ.

ಹಾಡಲು ನಿಷೇಧವಿತ್ತು. ಚಿಂತನಕ್ಕೆ ನಿಷೇಧವೆಲ್ಲಿ! ಕುಮಾರ ಗಂಧರ್ವರ ಮನಸ್ಸು ಯಾವಾಗಲೂ ಧ್ಯಾನಿಸುತ್ತಿತ್ತು. ಅವರು ಮಾಳವಾ ಪ್ರದೇಶದ ಜಾನಪದ ಸಂಗೀತವನ್ನು ಅರಗಿಸಿಕೊಳ್ಳತೊಡಗಿದರು. ಜಾನಪದ ಸಂಗೀತವೆ ಶಾಸ್ತ್ರೀಯ ಸಂಗೀತದ ಮೂಲ ಚಿಲುಮೆ ಎಂಬ ನಂಬಿಕೆ ಅವರಲ್ಲಿ ಮೂಡಿತು. ದೇವಾಸದ ಸುತ್ತಮುತ್ತ ಹೆಂಗಸರು ಹಾಡುತ್ತಿದ್ದ ನೂರಾರು ಹಾಡುಗಳನ್ನು ಧ್ವನಿ ಮುದ್ರಿಸಿಕೊಂಡರು. ಅದು ಸುಲಭ ಕಾರ್ಯವಾಗಿರಲಿಲ್ಲ. ಏಕೆಂದರೆ, ಹೆಂಗಸರು-ಹೊರಗಿನವರಂತೂ ದೂರ ಉಳಿಯಿತು-ಗಂಡಂದಿರ ಮುಂದೆ ಕೂಡ ಹಾಡುತ್ತಿರಲಿಲ್ಲ. ಅವುಗಳನ್ನು ಮರೆಯಲ್ಲಿದ್ದುಕೊಂಡು ಧ್ವನಿಮುದ್ರಿಸಿಕೊಳ್ಳುವಾಗ ಕುಮಾರ ಗಂಧರ್ವ ಸಿಕ್ಕಿಬಿದ್ದದ್ದೂ ಇದೆ. ಲೋಕಗೀತೆಗಳು ಐದು ಸ್ವರಗಳ ಸರಳ ಶ್ರೇಣಿಯನ್ನು ಬಳಸುತ್ತವೆ. ಶಾಸ್ತ್ರೀಯ ಸಂಗೀತದ ಏಳು ಸ್ವರಗಳ ಶ್ರೇಣಿ ಲೋಕಗೀತೆಗಳ ಸ್ವರಶ್ರೇಣಿಯ ವಿಸ್ತರಣೆಯೆ ಎಂದು ಕುಮಾರ ಗಂಧರ್ವ ಮನಗಂಡರು. ಲೋಕಗೀತೆಗಳು ಎಷ್ಟೊಂದು ಮಧುರ, ಸುವ್ಯಕ್ತ ಮತ್ತು ಭಾವನಾತ್ಮಕವೆಂಬುದನ್ನು ಕಂಡುಕೊಂಡರು. ಅವುಗಳಿಗೆ ಸ್ವರಪ್ರಸ್ತಾರ ಹಾಕಿದರು. ಲೋಕಗೀತೆಗೆ ರಾಗವಿಲ್ಲ. ಅದರಲ್ಲಿರುವುದು ಭಾವನೆಯ ಬೀಜಗಳು. ಈ ಬೀಜಗಳಿಂದಲೆ ರಾಗವನ್ನು ಕಟ್ಟಬಹುದು. ಆಗ ಲೋಕಗೀತೆ ಮರುಹುಟ್ಟೂ ಪಡೆಯುತ್ತದೆ. ಕುಮಾರ ಗಂಧರ್ವ ಇಂಥ ಬಹಳಷ್ಟು ಲೋಕಗೀತೆಗಳನ್ನು ಸಂಗ್ರಹಿಸಿದರು. ಅನೇಕ ಬೀಜಗಳು ಅಸ್ತಿತ್ವದಲ್ಲಿದ್ದ ರಾಗಗಳಿಗೆ ಸರಿಹೊಂದುತ್ತಿದ್ದವು. ಇನ್ನು ಕೆಲವಕ್ಕೆ ಹೊಸ ರಾಗರೂಪಗಳು ಬೇಕಿತ್ತು. ಲೋಕಸಂಗೀತ ಮತ್ತು ಶಾಸ್ತ್ರೀಯ ಸಂಗೀತಗಳ ಬೆಸುಗೆ ಕುಮಾರ ಗಂಧರ್ವರ ವಿಶಿಷ್ಟ ಕೊಡುಗೆ.

ಅನಾರೋಗ್ಯ ಒಂದು ರೀತಿಯಲ್ಲಿ ವರವೇ ಆಯಿತು. ಕುಮಾರ ಗಂಧರ್ವರಂಥ ದೃಢ ಮನೋಬಲವುಳ್ಳವರು ಮಾತ್ರ ದುರಂತವನ್ನು ವರವನ್ನಾಗಿ ಮಾರ್ಪಡಿಸಬಲ್ಲರು. ಅನಾರೋಗ್ಯಕ್ಕಿಂತ ಮೊದಲು ನಾನು ಸಂಗೀತವನ್ನು ಗಿಳಿಪಾಠದಂತೆ ಪುನರುಕ್ತಿಸುತ್ತಿದ್ದೆ. ಅನಾರೋಗ್ಯ ನನ್ನ ಆಂತರ್ಯದ ಬಾಗಿಲನ್ನು ತೆರೆಯಿತುಎಂದರು ಕುಮಾರ ಗಂಧರ್ವ. ಹಾಗಾಗಿಯೆ, ಅವರ ಸಂಗೀತಕ್ಕೆ ದಾರ್ಶನಿಕ ಮತ್ತು ಧ್ಯಾನಾತ್ಮಕ ಗಂಧವಿದೆ. ಇನ್ನೇನು ಕಚೇರಿಗಳನ್ನು ಪುನರಾರಂಭಿಸಬೇಕು ಎನ್ನುವಷ್ಟರಲ್ಲಿ ಕುಮಾರ ಗಂಧರ್ವರು ಮಡದಿ ಭಾನುಮತಿಯನ್ನು ಕಳೆದುಕೊಂಡರು. ಶಿಷ್ಯಳಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ವಸುಂಧರಾ ಶ್ರೀಖಂಡೆ ಕೈಹಿಡಿದರು.

ಜನವರಿ 12, 1954. ಅಲಹಾಬಾದಿನ ಪ್ಯಾಲೆಸ್‌ ಥಿಯೇಟರ್ ಸಜ್ಜಾಗಿ ನಿಂತಿತ್ತು. ಏಳು ವರ್ಷದ ಮೌನದ ನಂತರ ಕುಮಾರ ಗಂಧರ್ವರ ಪ್ರಥಮ ಕಚೇರಿ. ಅವರ ಸಂಗೀತಯಾತ್ರೆಯಲ್ಲಿ ಅಲಹಾಬಾದದ್ದೂ ಮಹತ್ವದ ಪಾತ್ರ. ಹನ್ನೊಂದು ವರ್ಷದವರಿದ್ದಾಗ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಹಾಡಿ ಹೆಸರು ಮಾಡಿದ್ದೂ ಈ ಅಲಹಾಬಾದಿನಲ್ಲೇ! ಈಗ ಮಧುರ ನಿರೀಕ್ಷೆಯ ವಾತಾವರಣ. ಕುಮಾರ ಗಂಧರ್ವರ ಧ್ವನಿ ಬದಲಾಗಿತ್ತು. ಅವರ ಶೈಲಿ ಮಂದ ಮಾರುತದಂತಿತ್ತು. ಅವರ ಭಿನ್ನ ಗಾಯನಶೈಲಿ ಸ್ವೀಕೃತವಾಯಿತು. ಅಭಿನಂದಿತವಾಯಿತು. ಕುಮಾರ ಗಂಧರ್ವ ಸಂಗೀತಾತ್ಮಕವಾಗಿ ಮರುಹುಟ್ಟು ಪಡೆದರು.

ಸಂಗೀತಗಾರರಲ್ಲಿ ಎರಡು ವಿಧ: ಪ್ರಸ್ತುತಿಕಾರರು ಮತ್ತು ನವನಿರ್ಮಿತಿಕಾರರು. ಅಬ್ದುಲ್‌ ಕರೀಮಖಾನ, ಅಲ್ಲಾದಿಯ ಖಾನ, ಕುಮಾರ ಗಂಧರ್ವರಂಥ ನವನಿರ್ಮಿತಿಕಾರರು ಹೊಸ ಹಾದಿ ತುಳಿಯುತ್ತಾರೆ. ಹಲವು ಘರಾಣೆಗಳ ಉತ್ತಮಾಂಶಗಳನ್ನು ಹೀರಿಕೊಂಡಿದ್ದರೂ ಕುಮಾರ ಗಂಧರ್ವರ ಸೃಜನಶೀಲ ಚೇತನ ಘರಾಣೆ ಗಡಿಗಳನ್ನು ಮೀರಿತ್ತು. ಪ್ರಚಲಿತ ರಾಗಗಳನ್ನು ಪ್ರಸ್ತುಪಡಿಸುವಲ್ಲಿಯೆ ತೃಪ್ತಿ ಕಾಣದ ಕುಮಾರ ಗಂಧರ್ವ ಲೋಕಸಂಗೀತದ ಆದಿಮಲೋಕಕ್ಕೆ ಹೊರಳಿದರು. ಅಲ್ಲಿಂದ ಪುಟಿದೆದ್ದವು ಕುಮಾರ ಗಂಧರ್ವರ ಧುನ್‌ ಉಗಮ ರಾಗಗಳು. ಅವರು 12 ರಾಗಗಳನ್ನು ಸೃಷ್ಟಿಸಿದ್ದಾರೆ: ಲಗನ ಗಾಂಧಾರ, ಮಾಲವತಿ, ಭಾವಮತ ಭೈರವ, ಸಾಂಜರಿ, ಮಘವಾ, ಸಹೇಲಿ ತೋಡಿ, ಮಧು ಸೂರಜ, ರಾಹಿ, ಅಹಿರಮೋಹಿನಿ, ಸೋಹನಿ ಭಟಿಯಾರ, ನಿಂದಿಯಾರಿ ಮತ್ತು ಗಾಂಧಿ ಮಲ್ಹಾರ. ಅನೇಕ ಸೃಷ್ಟಿಕರ್ತರು ತಾವು ಸೃಷ್ಟಿಸಿದ ರಾಗಗಳನ್ನು ಜನಪ್ರಿಯಗೊಳಿಸುವಲ್ಲಿ, ನೆಲೆಗೊಳಿಸುವಲ್ಲಿ ವಿಫಲರಾಗಿದ್ದಿದೆ. ಆದರೆ, ಕುಮಾರ ಗಂಧರ್ವ ತಮ್ಮ ಎಲ್ಲ ರಚನೆಗಳನ್ನು ಕಚೇರಿಗಳಲ್ಲಿ ಹಾಡಿ ಶ್ರೋತೃಗಳನ್ನು ತಲೆದೂಗಿಸುತ್ತಿದ್ದರು. ಅದೇ ಮಾತನ್ನು ಗಾಂಧಿ ಮಲ್ಹಾರ ರಾಗದ ಬಗೆಗೆ ಹೇಳುವಂತಿಲ್ಲ. ಕುಮಾರ ಗಂಧರ್ವರ ಜೋಡು ರಾಗಗಳು ವಿರಳ ನವಿರನ್ನು ಹೊಂದಿವೆ.

ಇದೂ ಅಲ್ಲದೆ, ಕುಮಾರ ಗಂಧರ್ವರು ಅಸ್ತಿತ್ವದಲ್ಲಿದ್ದ ರಾಗಗಳನ್ನು ಮತ್ತು ತಮ್ಮವೇ ರಾಗಗಳನ್ನು ಋತುಮಾನಕ್ಕನುಗುಣವಾಗಿ ವರ್ಗೀಕರಿಸಿ ಹಾಡುತ್ತಿದ್ದರು: ಗೀತ ವರ್ಷಾ (ಮಳೆಗಾಲ), ಗೀತ ಹೇಮಂತ (ಚಳಿಗಾಲ), ಗೀತ ವಸಂತ (ವಸಂತ ಕಾಲ), “ತ್ರಿವೇಣಿಯು ಸೂರದಾಸ, ಕಬೀರ ಮತ್ತು ಮೀರಾ ಭಜನಗಳ ಗುಚ್ಛ. ಈ ಸಂತಕವಿಗಳ ಕೃತಿಗಳು, ಅವರ ಕಾಲ ಮತ್ತು ಪರಿಸರ, ಘಟನೆಗಳ ಸ್ಥಳ ಮೊದಲಾದವುಗಳ ವ್ಯಾಪಕ ಅಧ್ಯಯನದ ಫಲ ಈ ಗುಚ್ಛ. ಆದುದರಿಂದ, ಕುಮಾರ ಗಂಧರ್ವ ಈ ಭಜನೆಗಳಿಗೆ ಅವುಗಳ ರಚನೆಕಾರರ ವ್ಯಕ್ತಿತ್ವಕ್ಕೆ ತಕ್ಕಂಥ ರಾಗಗಳನ್ನು ಆಯ್ಕೆ ಮಾಡಲು ಸಾಧ್ಯವಾಯಿತು. ಈ ಸಂತರ ಆತ್ಮವನ್ನೇ ಪ್ರವೇಶಿಸಿರುವರೊ ಎನ್ನವಂತೆ ಈ ಭಜನಗಳನ್ನು ಅಷ್ಟೊಂದು ಭಾವನಾತ್ಮಕವಾಗಿ ಹಾಡುತ್ತಿದ್ದರು. ಭಜನೆಗಳು ಶಾಸ್ತ್ರೀಯ ಸಂಗೀತ ಕಚೇರಿಯ ಒಪ್ಪಿತ ಅಂಗವಾಗಿರುವುದಕ್ಕೆ ಕುಮಾರ ಗಂಧರ್ವರೆ ಬಹುಮಟ್ಟಿನ ಕಾರಣ. ಭಾರಿ ಯಶಸ್ಸು ಪಡೆದ ಅವರ ಸುನತಾ ಹೈ ಗುರು ಗ್ಯಾನಿಭಜನ ಇದೆಲ್ಲದಕ್ಕೆ ನಾಂದಿ ಹಾಡಿತು.

ಕುಮಾರ ಗಂಧರ್ವರು 1965ರಲ್ಲಿ ಅನೂಪ ರಾಗ ವಿಲಾಸ ಎಂಬ ಪುಸ್ತಕ ಪ್ರಕಟಿಸಿದರು. ಅದು ಅವರ ಹತ್ತು ವರ್ಷಗಳ ಸಂಶೋಧನೆಯ ಫಲ. ಅದರಲ್ಲಿ, ಪರಂಪರಾಗತ ರಾಗಗಳಿಗೆ 107, ತಮ್ಮವೇ ರಾಗಗಳಿಗೆ 17 ಮತ್ತು ಮಿಶ್ರ ರಾಗಗಳಿಗೆ 12, ಹೀಗೆ ಒಟ್ಟು 136 ಚೀಜುಗಳಿವೆ. ತನ್ಮೂಲಕ ಕುಮಾರ ಗಂಧರ್ವರು 18ನೆಯ ಶತಮಾನದ ಸದಾರಂಗ, ಅದಾರಂಗ, ಮನರಂಗ, ಹರರಂಗ ಮತ್ತು 20ನೆಯ ಶತಮಾನದ ಅಲ್ಲಾದಿಯಾ ಖಾನ, ಫೈಯಾಜ ಖಾನ (ಪ್ರೇಮಪ್ರಿಯಾ), ವಿಲಾಯತ ಹುಸೇನ ಖಾನ್‌ ಅಗ್ರಾವಾಲೆ (ಪ್ರಾಣಪ್ರಿಯಾ), ಜಗನ್ನಾಥ ಬುವಾ ಪುರೋಹಿತ (ಗುಣಿದಾಸ), ಪಂಡಿತ ಎಸ್‌.ಎನ್‌. ರತನ್‌ಜನಕರ (ಸುಜನ), ಮಾಸ್ಟರ ಕೃಷ್ಣ ಮೊದಲಾದ ವಾಗ್ಗೇಯಕಾರರ ಮಾಲಿಕೆಗೆ ಸೇರಿದರು.


ಕುಮಾರ ಗಂಧರ್ವರಿಗೆ ರಾಗಗಳು ಸ್ವರಗಳ ಸಂಯೋಜನೆ ಮತ್ತು ಪರಿವರ್ತನೆ ಮಾತ್ರವಾಗಿರಲಿಲ್ಲ. ಸಜೀವವಾಗಿದ್ದವು. ಹಾಗಾಗಿ, ಅವರ ಗಾಯನವೆಂದರೆ ತೀವ್ರ ಧ್ಯಾನಾತ್ಮಕ ಅಭಿವ್ಯಕ್ತಿಯಾಗಿದ್ದವು. ಚಿರಪರಿಚಿತ ಪರಂಪರಾಗತ ರಾಗಗಳೂ ಅವರ ಹಾಡಿಕೆಯಲ್ಲಿ  ಹೊಸ ರೂಪ ತಳೆಯುತ್ತಿದ್ದವು. ಅನಿರೀಕ್ಷಿತ ಕೋನಗಳಿಂದ ತೋರ್ಪಡುತ್ತಿದ್ದವು. ಸೂಕ್ಷ್ಮದರ್ಶಕದಲ್ಲಿ ನೋಡುತ್ತಿರುವ ಅನುಭವವಾಗುತ್ತಿತ್ತು.

ಕುಮಾರ ಗಂಧರ್ವರಿಗೆ ಸಂದ ಕೆಲವು ಗೌರವಗಳು ಇಂತಿವೆ: ಉಜ್ಜನಿಯ ವಿಕ್ರಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌, 1973 ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, 1974 ಪದ್ಮವಿಭೂಷಣ, ಕಾಳಿದಾಸ ಸಮ್ಮಾನ 1984.

ಸಂಗೀತದ ಈ ಅದ್ಭುತ ತಾರೆ ಜನವರಿ 12, 1992ರಂದು ಕಣ್ಮರೆಯಾಯಿತು. ಕುಮಾರ ಗಂಧರ್ವರ ಶಿಷ್ಯರಲ್ಲಿ ಮಗ ಮುಕುಲ, ಮಡದಿ ವಸುಂಧರಾ, ಸತ್ಯಶೀಲ ದೇಶಪಾಂಡೆ, ಮೀರಾ ರಾವ ಮತ್ತು ಲೋಂಧೆ ಪ್ರಮುಖರು. ಈ ಮಹಾನ್ ಚೇತನಕ್ಕೆ ನಮ್ಮ ನಮ್ರ ನಮನ.

(ಆಧಾರ:  ಈ ಲೇಖನವು ಸದಾನಂದ ಕನವಳ್ಳಿ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಗ್ರಂಥ ಕಲಾಚೇತನದಲ್ಲಿ ಮೂಡಿಸಿರುವ ಲೆಖನದ ಸಂಕ್ಷಿಪ್ತರೂಪವಾಗಿದೆ).


Tag: Kumar Ghandharv, Kumar Ghandharva

ಕಾಮೆಂಟ್‌ಗಳಿಲ್ಲ: