ಗುರುವಾರ, ಆಗಸ್ಟ್ 29, 2013

ಮ.ನ. ಮೂರ್ತಿ

ಮ.ನ. ಮೂರ್ತಿ 

ಸಾಹಿತ್ಯ,  ಸಂಗೀತ ಪ್ರೇಮಿ, ಕಾದಂಬರಿಕಾರ, ಪತ್ರಿಕೋದ್ಯಮಿ ಮ. ನರಸಿಂಹಮೂರ್ತಿಯವರು  ಜೂನ್ 6, 1906ರಂದು  ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಮಂದಲಹಳ್ಳಿ ಎಂಬಲ್ಲಿ ಜನಿಸಿದರು.  ಸಾಹಿತ್ಯ ಲೋಕದಲ್ಲಿ ಅವರು ಮ.ನ. ಮೂರ್ತಿ ಎಂದೇ ಪ್ರಖ್ಯಾತರು. ತಂದೆ ಮಧ್ವರಾವ್  ಮತ್ತು  ತಾಯಿ ಭೀಮಕ್ಕನವರು.

ನರಸಿಂಹ ಮೂರ್ತಿಯವರು ಪ್ರೌಢಶಾಲೆಯವರೆಗಿನ ವಿದ್ಯಾಭ್ಯಾಸವನ್ನು ತುಮಕೂರಿನಲ್ಲಿ ನೆರವೇರಿಸಿದರು. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ್ದರಿಂದ ಅವರು ಮುಂದಿನ ಓದಿಗಾಗಿ ಬೆಂಗಳೂರಿಗೆ ಬಂದರು. ಅವರು ಐಚ್ಛಿಕ ವಿಷಯಗಳಾದ ವಿಜ್ಞಾನ ಹಾಗೂ ಗಣಿತದಲ್ಲಿ 90ಕ್ಕಿಂತ ಹೆಚ್ಚು ಅಂಕಗಳಿಸಿದ್ದರು. ಆಗೆಲ್ಲಾ ಅಂಕಗಳ ಆಧಾರದ ಮೇಲೆ ವಿಜ್ಞಾನ ಅಥವಾ ಕಲೆ ವಿಭಾಗಕ್ಕೆ ಸೇರಲು ಶಿಕ್ಷಣ ಇಲಾಖೆಯೇ ನಿರ್ಧರಿಸುತ್ತಿದ್ದುದರಿಂದ, ವಿಜ್ಞಾನದಲ್ಲಿ ಹೆಚ್ಚಿನ ಅಂಕಗಳಿಸಿದ್ದ ಇವರಿಗೆ ಬಿ.ಎಸ್‌ಸಿ.ಗೆ ಸೇರಲು ಸೆಂಟ್ರಲ್ ಕಾಲೇಜಿನಲ್ಲಿ ಪ್ರವೇಶ ದೊರೆಯಿತು.

ಬಿ.ಎಸ್‌ಸಿ. ಪದವಿಗೆ ಸೇರಿದ್ದರೂ ಕನ್ನಡವನ್ನು ಒಂದು ಕಡ್ಡಾಯ ವಿಷಯವಾಗಿ ಕಲಿಯ ಬೇಕಿತ್ತು.  ಅಂದಿನ ದಿನಗಳಲ್ಲಿ  ಕನ್ನಡವನ್ನು ಬೋಧಿಸುತ್ತಿದ್ದವರು ಎ.ಆರ್. ಕೃಷ್ಣಶಾಸ್ತ್ರಿಗಳು ಹಾಗೂ ಟಿ.ಎಸ್. ವೆಂಕಣ್ಣಯ್ಯನವರು. ಒಮ್ಮೆ ಎ.ಆರ್. ಕೃಷ್ಣಶಾಸ್ತ್ರಿಗಳವರು ತರಗತಿಯಲ್ಲಿ ಕಾಳಿದಾಸನ ಕಾವ್ಯದ ಬಗ್ಗೆ ಪ್ರಬಂಧ ಬರೆಯಲು ತಿಳಿಸಿದರು.  ಮಾರನೆದಿನ ಎ.ಆರ್.ಕೃಷ್ಣಶಾಸ್ತ್ರಿಗಳವರು ಪ್ರಬಂಧಗಳ ಪರಾಮರ್ಶೆಗೆ ತೊಡಗಿದರು. ಇತರ ಹುಡುಗರ ಪ್ರಬಂಧಗಳ ಬಗ್ಗೆ ಹೇಳತೊಡಗಿದಾಗ ಇವರಿಗೆ ಎದೆ ಢವಢವ. ಇವರ ಪ್ರಬಂಧದ ಬಗ್ಗೆ ಮಾತೇ ಇಲ್ಲ.  ಕಡೆಯಲ್ಲಿ, “ಈ ಪ್ರಬಂಧ ರಚನೆಯ ವಿದ್ಯಾರ್ಥಿಯನ್ನು ಮೊಟ್ಟ ಮೊದಲು ಅಭಿನಂದಿಸುತ್ತೇನೆ. ಆತನ ಶೈಲಿ, ನಿರೂಪಣೆ, ಅದ್ಭುತ ಪಾಂಡಿತ್ಯಕ್ಕೆ ಎಲ್ಲರೂ ತಲೆದೂಗಲೇಬೇಕು. ಇಂತಹ ಪ್ರತಿಭಾವಂತ ವಿದ್ಯಾರ್ಥಿ ವಿಜ್ಞಾನಕ್ಕೆ ದೊರೆತಿರುವುದು ಸಂತಸವಾದರೂ ಕನ್ನಡಕ್ಕೆ ದೊಡ್ಡ ನಷ್ಟ. ಈ ವಿದ್ಯಾರ್ಥಿಯು ವಿಜ್ಞಾನದಲ್ಲಿ ಮಿಂಚಿದರೂ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಕಡಿಮೆಯಾಗದಿರಲೆಂದು ಹಾರೈಸುತ್ತೇನೆ. ಈ ವಿದ್ಯಾರ್ಥಿಯ ಹೆಸರು ಎಂ. ನರಸಿಂಹಮೂರ್ತಿ” ಎಂದಾಗ ಕಿವಿಗಡಚಿಕ್ಕುವ ಕರತಾಡನ, ಸ್ನೇಹಿತರಿಂದ ಅಭಿನಂದನೆಗಳ  ಸುರಿಮಳೆಯಾಯಿತು.

ಎ.ಆರ್. ಕೃಷ್ಣಶಾಸ್ತ್ರಿಗಳ ಮಾತು ನರಸಿಂಹಮೂರ್ತಿಯವರ ಮೇಲೆ ಪರಿಣಾಮ ಬೀರಿತು. ಬಿ.ಎ. ಗೆ ಸೇರಲು ನಿರ್ಧರಿಸಿ ಪ್ರಿನ್ಸಿಪಾಲರ ಮುಂದೆ ತಮ್ಮ ಕೋರಿಕೆಯನ್ನು ಮುಂದಿಟ್ಟರೂ ಫಲಕಾರಿಯಾಗದಿದ್ದಾಗ ಎ.ಆರ್. ಕೃಷ್ಣಶಾಸ್ತ್ರಿಗಳು ಹಾಗೂ ಟಿ.ಎಸ್. ವೆಂಕಣ್ಣಯ್ಯನವರ ಪ್ರಭಾವದಿಂದ ಬಿ.ಎ. ಗೆ ಸೇರಲು ಅವಕಾಶ ಪಡೆದುಕೊಂಡರು. ಗುರುಗಳ ನಿರೀಕ್ಷೆಯನ್ನು ಹುಸಿಯಾಗಿಸದೆ ಮೊದಲ ದರ್ಜೆಯಲ್ಲಿಯೇ ಉತ್ತೀರ್ಣರಾದರು.

ಬಿ.ಎ. ಪದವಿಯ ನಂತರ ಮೂರ್ತಿಯವರು ಕನ್ನಡ ವಿಭಾಗದ ಭಾಷಾಂತರಕಾರರಾಗಿ ದಿವಾನರ ಕಚೇರಿಯಲ್ಲಿ ಉದ್ಯೋಗ ಗಳಿಸಿದರು. ಅವರಿಗೆ ದಿವಾನ್ ಮಿರ್ಜಾ ಇಸ್ಮಾಯಿಲ್, ಮಾಸ್ತಿ ಮುಂತಾದವರೊಡನೆ ವ್ಯವಹರಿಸುವ ಸುಯೋಗ ಒದಗಿದ್ದರೂ ಸ್ವತಂತ್ರವಾಗಿ ಜೀವಿಸಬೇಕೆಂಬ ಆಸೆಯಿಂದ ಸರಕಾರಿ ಹುದ್ದೆಯನ್ನು ತ್ಯಜಿಸಿಬಿಟ್ಟರು.   ಮೈಸೂರಿನಲ್ಲಿ ಚಲನಚಿತ್ರ ತಯಾರಿಕೆಯ ಕಡೆ ಮನಸ್ಸು ಹರಿದು ‘ಭಕ್ತ ಕನಕದಾಸ’ ಚಲನಚಿತ್ರದ ತಯಾರಿಕೆ ನಡೆಸಿದರು. ಪ್ರಮುಖ ಪಾತ್ರಧಾರಿ ‘ಉಮರ್ಜಿ’ ಎನ್ನುವವರ ಅಕಾಲ ಮರಣದಿಂದ ಚಿತ್ರನಿರ್ಮಾಣ ಸ್ಥಗಿತಗೊಂಡಿತು.

ಮುಂದೆ ಜೀವನ ನಿರ್ವಹಣೆಗೆ ದಾರಿಕಾಣದೆ ಸಾಹಿತ್ಯ ರಚನೆಯತ್ತ ಮನಸ್ಸು ಮಾಡಿ ಪುನ: ಮೈಸೂರಿನಿಂದ ಬೆಂಗಳೂರಿಗೆ ಪಯಣ ಬೆಳೆಸಿದರು. ಸೆಂಟ್ರಲ್ ಕಾಲೇಜಿನಲ್ಲಿದ್ದಾಗ ಕಥೆ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದ ಮೂರ್ತಿಯವರಿಗೆ ಅಂದಿನ ದಿನಗಳಲ್ಲಿ   ‘ಈ ಸಲದ ದೀಪಾವಳಿ’ ಎಂಬ  ಕಥೆಗೆ ಬೆಳ್ಳಿಯ ಪಾರಿತೋಷಕ ಸಂದಿತ್ತು.  ಅಂದಿನ ದಿನಗಳಲ್ಲಿ  ಇವರೊಡನೆ ಕಬ್ಬನ್ ಪಾರ್ಕ್‌ನಲ್ಲಿ ಕುಳಿತು ಕಥಾರಚನೆಗೆ ತೊಡಗುತ್ತಿದ್ದವರೆಂದರೆ ಅ.ನ.ಕೃ. ಮತ್ತು ಕೆ. ಗೋಪಾಲಕೃಷ್ಣರಾಯರು.

ಉದ್ಯೋಗ ಹಿಡಿಯಲು ವಯಸ್ಸು ದಾಟಿ ಹೋಗಿದ್ದರಿಂದ ಮೂರ್ತಿಯವರು ಜೀವನ ನಿರ್ವಹಣೆಗಾಗಿ  ಸಾಹಿತ್ಯ ಪ್ರಕಾರವನ್ನೇ ಆಶ್ರಯಿಸಿದರು.   ಅವರು ಬರೆದ ಮೊದಲ ಐತಿಹಾಸಿಕ ಕಾದಂಬರಿ ‘ಚಿಕ್ಕದೇವರಾಯ’.  ಅದಕ್ಕೆ ಪ್ರಕಾಶಕರಾರೂ ಮುಂದೆ ಬಾರದಾದಾಗ ಹಳ್ಳಿಯಲ್ಲಿ ತಾಯಿಯ ಹೆಸರಿನಲ್ಲಿದ್ದ ಜಮೀನು ಮಾರಿ ತಾವೇ ಪ್ರಕಟಿಸಿದರು. ಆದರೆ ಅದು ಅಂದಿನ ವರ್ಣರಂಜಿತ ರಕ್ಷಾಪುಟಗಳ ಕಾದಂಬರಿಗಳ ಜೊತೆ ಸ್ಪರ್ಧಿಸಲಾರದೆ ಅಟ್ಟದ ಮೇಲೆ ಗಟ್ಟಿ ಸಾಹಿತ್ಯವಾಗಿ ಉಳಿಯುವಂತಾಗಿಬಿಟ್ಟಿತು.   ಅಂದಿನ ದಿನಗಳಲ್ಲಿ ಅವರ ನೆರವಿಗೆ ಬಂದವರು ಡಿ.ಡಿ.ಪಿ.ಐ ಆಗಿದ್ದ ಎನ್.ಎಸ್. ಹಿರಣ್ಣಯ್ಯನವರು..  ಅವರು ಕಾದಂಬರಿಯ ಗುಣವನ್ನು ಮೆಚ್ಚಿ ಶಾಲಾ ವಾಚನಾಲಯಗಳಿಗೆ ಖರೀದಿಸುವಂತೆ ಆದೇಶ ಮಾಡಿದ್ದರಿಂದ ಪ್ರತಿಗಳಿಗೆ ಬೇಡಿಕೆ ಬಂತು. ಕೆಲವರ್ಷಗಳ ನಂತರ ಇದು  ಮೈಸೂರು ವಿಶ್ವವಿದ್ಯಾಲಯದಿಂದ ಪಿ,.ಯು ತರಗತಿಗಳಿಗೆ ಪಠ್ಯವಾಗಿಯೂ ಆಯ್ಕೆಯಾಯಿತು.

ಮೂರ್ತಿಯವರು ನಂತರ ಬರೆದ ಕಾದಂಬರಿ ‘ಟಿಪ್ಪೂ ಸುಲ್ತಾನ್’ (3 ಭಾಗಗಳಲ್ಲಿ) ಹಾಗೂ ಸಣ್ಣ ಕಥಾ ಸಂಕಲನ ‘ತಂಗಳೂಟ’. ಇದಾದನಂತರ ಬರೆದ ಕಾದಂಬರಿಗಳೆಂದರೆ ‘ಗಾನಯೋಗಿ ರಾಮಣ್ಣ’, ‘ಸ್ವಯಂವರ’, ‘ಸುವರ್ಣ ಮುಖಿ’ ಮುಂತಾದವುಗಳು. ಹೀಗೆ 1953ರಿಂದ 61ರವರೆಗೆ ಅವರು ಹಲವಾರು ಕಾದಂಬರಿಗಳನ್ನು ಬರೆದರು, ಈ ಮಧ್ಯೆ ಪುನ: ಚಲನಚಿತ್ರ ಆಕರ್ಷಣೆಗೊಳಗಾಗಿ ತಮ್ಮದೇ ಕಾದಂಬರಿ ‘ಸುವರ್ಣ ಮುಖಿ’ ಯನ್ನು ತೆರೆಗರ್ಪಿಸಲು ಸಿದ್ಧತೆ ನಡೆಸಿದರು. ಆದರೆ,  ಇಲ್ಲೂ ನಾಯಕ ನಟನ ಅನಿರೀಕ್ಷಿತ ಸಾವಿನಿಂದ ಪುನ:ಚಿತ್ರಜಗತ್ತಿನಿಂದ ಕಾದಂಬರಿ ಲೋಕಕ್ಕೆ ಹಿಂದಿರುಗುವಂತಾಯಿತು.

ಮ. ನ. ಮೂರ್ತಿಯವರು ಪ್ರಜಾಮತ ವಾರಪತ್ರಿಕೆಗಾಗಿ ‘ಶಾಂತಲಾ’ ಕಾದಂಬರಿಯನ್ನು ಬರೆಯತೊಡಗಿದಾಗ ಅನಿರೀಕ್ಷತವಾಗಿ ಪ್ರಜಾಮತ ವ್ಯವಸ್ಥಾಪಕ ಸಂಪಾದಕರ ಹುದ್ದೆಯೂ ದೊರೆತು ನಿವೃತ್ತಿಯಾಗುವವರೆಗೂ ಪ್ರಜಾಮತ ಪತ್ರಿಕೆಗಾಗಿ ದುಡಿದರು.   ಇವರ ಕಾದಂಬರಿಗಳಲ್ಲಿ ‘ದೇವರ ಮಕ್ಕಳು’ (1970),  ‘ಸ್ವಯಂವರ’ (1973), ಮತ್ತು ‘ಬಿಳಿಯ ಹೆಂಡತಿ’ (1975), ಚಲನಚಿತ್ರಗಳಾಗಿ ಜನಪ್ರಿಯಗೊಂಡವು.

ಮೇಲ್ಕಂಡ ಕಾದಂಬರಿಗಳಲ್ಲದೆ ಮ. ನ. ಮೂರ್ತಿಯವರು ‘ನವಾಬ ಹೈದರಾಲಿ’, ‘ಬೆಂಗಳೂರು ಕೆಂಪೇಗೌಡ’, ‘ಪುರುಷ ಕಸ್ತೂರಿ’, ‘ಜಯವಂತಿ’ ಮುಂತಾದ ಹತ್ತು  ಐತಿಹಾಸಿಕ ಕಾದಂಬರಿಗಳನ್ನು ರಚಿಸಿದರು.  ನಮ್ಮ ಪ್ರವಾಸ ಮತ್ತು ನಾವು ಕಂಡ ಬೆಂಗಳೂರು ಎಂಬ ಎರಡು ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದರು.  ಪ್ರೇಮ ಸುಧಾ, ಆರಾಧಿತೆ, ಸಹಧರ್ಮಿಣಿ, ಚಿತ್ರ ನಾಯಕಿ, ಮಾಂಗಲ್ಯ ಭಾಗ್ಯ, ದೇವರ ರಹಸ್ಯ, ವಸುಂಧರ, ಭಕ್ತ ಕನಕದಾಸ, ಅಲಕಾನಂದ, ಸಂಶಯದ ಸುಳಿಯಲ್ಲಿ, ಮುಂತಾಧ 4೦ ಕಾದಂಬರಿಗಳನ್ನು ಪ್ರಕಟಿಸಿದರು. ರತ್ನ ಸಿಂಹಾಸನ, ಬೆಂಗಳೂರು ಕೆಂಪೇಗೌಡ, ಸಂತಾನ ಲಕ್ಷ್ಮೀ (ಕೇಂದ್ರ ಪ್ರಶಸ್ತಿ ಪುರಸ್ಕೃತ ನಾಟಕ) ಮುಂತಾದ ನಾಟಕಗಳೂ ಸೇರಿ ಸುಮಾರು 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು.

ಮ. ನ. ಮೂರ್ತಿಯವರು ಕನ್ನಡ ಲಿಪಿ ಸುಧಾರಣೆಗೆ ಪ್ರಯತ್ನಿಸಿದ್ದಲ್ಲದೆ ಕನ್ನಡ ಟೈಪ್‌ರೈಟರ್ ತಯಾರಿಕೆಗೂ ಪ್ರಯತ್ನಿಸಿದರು. ಆದರೆ ಎರಡನೆಯ ಮಹಾಯುದ್ಧದ ದೆಸೆಯಿಂದ ಈ ಯೋಜನೆ ಕೈಗೂಡಲಿಲ್ಲ.

ಮ. ನ. ಮೂರ್ತಿಯವರ  ಮತ್ತೊಂದು ಮಹಾನ್ ಸಾಧನೆಯೆಂದರೆ ಹಲವಾರು ಲೇಖಕ – ಲೇಖಕಿಯರನ್ನು ಹಂಪೆಗೆ ಕರೆದೊಯ್ದಾಗ ಅಲ್ಲಿ ಪುರಂದರ ಮಂಟಪವು ಅಲಕ್ಷ್ಯಕ್ಕೆ ಒಳಗಾಗಿದ್ದುದನ್ನು ಕಂಡು ಮರುಗಿ ಪ್ರತಿವರ್ಷ ಪುರಂದರೋತ್ಸವವನ್ನು ನಡೆಸಲು ತೀರ್ಮಾೇನಿಸಿ ಸಮಿತಿ ರಚಿಸಿದರು.  ಆ ಸಂದರ್ಭದಲ್ಲಿ  ಜೊತೆಯಲ್ಲಿದ್ದ ಡಾ. ನಿರುಪಮಾರವರು ತಮ್ಮ ‘ಭುವನ ವಿಜಯ’ ಕಾದಂಬರಿಯಿಂದ ಬಂದ ಎರಡು ಸಾವಿರ ರೂಪಾಯಿಗಳನ್ನು ವಂತಿಗೆಯಾಗಿ ನೀಡಿದರು. ಹೀಗೆ ಪ್ರಾರಂಭವಾದ ಪುರಂದರೋತ್ಸವವನ್ನು  1984ರವರೆಗೂ ಹಂಪಿಯಲ್ಲಿ ಅವರ ಮಗ ರಾಜಾರಾಯರು ನಡೆಸುತ್ತಿದ್ದರು.  ಆದರೆ  ಸೌಲಭ್ಯಗಳ ಕೊರತೆ ಉಂಟಾಗುತ್ತಿದ್ದುದರಿಂದ  ಮುಳಬಾಗಿಲಿನ ವೀರಭದ್ರನಗರದಲ್ಲಿ ಪುರಂದರ ವಿಠ್ಠಲ ವಿಗ್ರಹ ಸ್ಥಾಪಿಸಿ, ಹರಿದಾಸ ಪೀಠದ ಮುಖಾಂತರ ಪ್ರತಿ ವರ್ಷವೂ ಮೂರು ದಿವಸಗಳ ಕಾಲ ಪುರಂದರೋತ್ಸವವನ್ನು ಆಚರಿಸುತ್ತಾ ಬಂದಿದ್ದು ನಾಡಿನ ಹೆಸರಾಂತ ಸಂಗೀತಗಾರರೆಲ್ಲರೂ ಆ ವೇದಿಕೆಯಲ್ಲಿ ಹಾಡಿ ಸಂತೋಷಿಸುತ್ತಿದ್ದಾರೆ. ನಾಡಿನ ಸಂಗೀತಗಾರರ ವಿವರಗಳು ಮಾಸಿ ಹೋಗುವ ಮುನ್ನ ದಾಖಲೆಯಾಗುಳಿಸಲು ‘ಕರ್ನಾಟಕ ಸಂಗೀತ ಕ್ಷೇತ್ರದ ನಾಡ ಕಣ್ಮಣಿಗಳು’ ಎಂಬ ಸುಂದರ ಪುಸ್ತಕವನ್ನೂ ಪ್ರಕಟಿಸಿದ್ದಾರೆ.

ಮ. ನ. ಮೂರ್ತಿಯವರು ರಾಜ್ಯಭಾಷೆ ಕನ್ನಡವಾಗಬೇಕೆಂದು ನಿರಂತರವಾಗಿ ಹೋರಾಟ ನಡೆಸಿದವರು.

ಹೀಗೆ ತಮ್ಮ ಬದುಕನ್ನು ನಿರಂತರವಾಗಿ ಕನ್ನಡ ಸೇವೆಗಾಗಿ ತೊಡಗಿಸಿದ್ದ ಮ. ನ. ಮೂರ್ತಿಯವರು ಏಪ್ರಿಲ್ 22, 1977ರ ವರ್ಷದಲ್ಲಿ ಈ ಲೋಕವನ್ನಗಲಿದರು.   ಈ ಮಹಾನ್ ಚೇತನಕ್ಕೆ ನಮ್ಮ ನಮನ.

(ಮಾಹಿತಿ ಕೃಪೆ; ಕಣಜ)

Tag: Ma. Na. Murthy

ಕಾಮೆಂಟ್‌ಗಳಿಲ್ಲ: