ಶನಿವಾರ, ಆಗಸ್ಟ್ 31, 2013

ಮುಳಿಯ ತಿಮ್ಮಪ್ಪಯ್ಯ

ಮುಳಿಯ ತಿಮ್ಮಪ್ಪಯ್ಯ

ಪಂಪನ ಭಕ್ತ, ಪಾರ್ತಿಸುಬ್ಬನ ಮಿತ್ರ, ಕವಿರಾಜಮಾರ್ಗದ ಪುರಸ್ಕರ್ತ, ಅಚ್ಚಕನ್ನಡದ ಹುಚ್ಚ, ಕ್ಷಮಿಸು ನಮೋ ನಮೋ, ಕನ್ನಡದ ತಿರುಳನ್ನು ಕಂಡು ಉಂಡು ಉಣಿಸಿದ ಪಂಡಿತರಲ್ಲಿ, ಕನ್ನಡ ಕಾವ್ಯಪಾಠಕರಲ್ಲಿ ಪರಮೋಚ್ಚ, ಸಿರಿವಂತರ ಕುಲದಲ್ಲಿ ಜನಿಸಿಯೂ ಕಡುಬಡವ, ಬದುಕನ್ನೆಲ್ಲಾ ಬಡತನದಲ್ಲಿಯೇ ಕಳೆದೂ ಮನಸ್ವಿ, ವರ್ಚಸ್ವಿ, ಯಶಸ್ವಿ, ಹಳಗನ್ನಡ ಹೊಸಗನ್ನಡ ಹಾರದ ಮಧ್ಯಮಣಿ, ನಮ್ಮ ಮುದ್ದಿನ ಮುದ್ದಣ ನವೋದಯದ ಮುಂಗೋಳಿ ಸ್ವರವೆತ್ತಿ ಕೂಗಿ ಕೆಲೆದು ನುಡಿಯಿಸಿದ ಕನ್ನಡವಿಕ್ಕಿ ನಮ್ಮ ಮುಳಿಯದ ಪಂಡಿತವಿಕ್ಕಿ” .   ಕವಿ ಸೇಡಿಯಾಪು ಕೃಷ್ಣಭಟ್ಟರು ಮುಳಿಯರನ್ನು ಕಂಡ ಬಗೆ ಹೀಗೆ.

ಕನ್ನಡ ಪಂಡಿತರಾಗಿ, ಪ್ರಕಾಂಡ ವೈಯಾಕರಣರಾಗಿ ಆದರ್ಶ ಅಧ್ಯಾಪಕರಾಗಿ, ಉತ್ತಮ ಪತ್ರಕರ್ತರಾಗಿ, ಅಗಾಧ ಸಂಪನ್ನ ಸಂಶೋಧಕ ವಿಮರ್ಶಕರಾಗಿ, ಸುಮಧುರ ಕಂಠದ ಗಮಕಿಗಳಾಗಿ, ಚಿತ್ತಾಕರ್ಷಕ ವ್ಯಾಖ್ಯಾನಕಾರರಾಗಿ, ತಿಮ್ಮಪ್ಪಯ್ಯನವರು ಪ್ರಸಿದ್ಧರಾಗಿದ್ದಾರೆ.  ಅವರು ಅನನ್ಯ ಪ್ರತಿಭಾ ಸಂಪನ್ನರು. 

ಸರ್ವಜಿತ್ ಸಂವತ್ಸರದ ಫಾಲ್ಗುಣ ಬಹುಳ ಆರರಂದು ತಾ. 3-3-1888ನೇ ದಿನ ಹಿಂದೆ ಪುತ್ತೂರು ತಾಲೂಕಿಗೆ ಸೇರಿದ್ದ, ಸದ್ಯ ಬಂಟ್ವಾಳ ತಾಲೂಕಿಗೆ ಒಳಪಟ್ಟಿರುವ ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಜನಿಸಿದ ತಿಮ್ಮಪ್ಪಯ್ಯನವರು ಕನ್ನಡ ಸಾಹಿತ್ಯೇತಿಹಾಸದಲ್ಲಿ ಅಳಿಯದ ಹೆಸರು.  ಸದಾಚಾರ ಸಂಪನ್ನರಾದ ಶಾಸ್ತ್ರವೇತ್ತ ಕೇಶವ ಭಟ್ಟ ಮತ್ತು  ಮೂಕಾಂಬಿಕ ಅಮ್ಮನವರ ಸುಪುತ್ರರಾಗಿ ತಿಮ್ಮಪ್ಪಯ್ಯನವರು ಜನ್ಮ ತಾಳಿದರು.  ವಿಟ್ಲ ಸೀಮೆಯಲ್ಲಿ ವಿಟ್ಲದರಸರಿಗೆ ಸರಿಸಾಟಿಯಾಗಿ ಮುಳಿಯದರಸುಗಳು ಎಂದೇ ಖ್ಯಾತವಾದ ಮುಳಿಯರ ಮನೆ ಕೆಚ್ಚಿನಿಂದ ಮೆರೆಯುತ್ತಿದ್ದ ದಿನಗಳನ್ನು ಊರ ಹಿರಿಯರು ಸ್ಮರಿಸುತ್ತಿದ್ದರು ಎಂಬುದನ್ನು ಬಲ್ಲವರಿದ್ದಾರೆ.  ಅದೇ ಕೆಚ್ಚು, ಮನೆತನದ ಔದಾರ್ಯ, ಸಜ್ಜನಿಕೆಗಳ ಫಲವಾಗಿ ಆಸ್ತಿಪಾಸ್ತಿಗಳೆಲ್ಲ ಕರಗಿಹೋದುದು ಒಂದು ಕರುಣ ಕಥೆ!  ಒಲೆಯಲ್ಲಿ ಅನ್ನದ ಪಾತ್ರೆಯಿಂದ ಅನ್ನವನ್ನು ಅಂಗಳಕ್ಕೊಗೆದು ಪಾತ್ರವನ್ನು ಜಫ್ತಿ ಮಾಡಿಕೊಂಡಂಥ ದಾರುಣ-ಅಮಾನವೀಯ ವರ್ತನೆ ಕ್ರೂರಿಗಳಾದ ಸಾಲದಾರರಿಂದ ನಡೆಯಿತು.  ತಂದೆ ಕೇಶವ ಭಟ್ಟರು ಅನಾರೋಗ್ಯದಿಂದ ನರಳುತ್ತಿದ್ದು ಮಲಗಿದ್ದ ಮಂಚವನ್ನು ಎತ್ತಿಕೊಂಡು ಹೋದ ದಯನೀಯ ಸ್ಥಿತಿಯನ್ನು ಎಳೆಯ ಮುಳಿಯರು ಕಣ್ಣಾರೆ ಕಂಡರು.  ಅಲ್ಲಿಂದ ಬಡತನದ ಸಂಕಷ್ಟಗಳ ಸರಮಾಲೆ ಸಾಲುಸಾಲಾಗಿ ಬಂತು. 

ಶ್ರೀಯುತರ ಪ್ರಾಥಮಿಕ ಶಿಕ್ಷಣ ಮನೆಯ ಬಳಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.  ವಾಮನ ಮಾಸ್ತರರು ಅವರಿಗೆ ಅಲ್ಲಿ ಗುರುಗಳಾಗಿದ್ದರು.  ನಾಲ್ಕನೇ ತರಗತಿ ಉತ್ತೀರ್ಣರಾಗುವಷ್ಟರಲ್ಲಿ ಮನೆಗೊದಗಿದ ದುರ್ದೆಶೆ ಅವರನ್ನು ಕಾಡಿತು.  ಶಾಲೆಯ ಓದು ಅಷ್ಟರಲ್ಲಿಯೇ ಕೊನೆಗೊಳ್ಳಬೇಕಾಯಿತು.  ಆದರೆ ಅವರ ಅಧ್ಯಯನದ ಆಸಕ್ತಿ ಅಲ್ಲಿಗೇ ಇಂಗಿಹೋಗಲಿಲ್ಲ.  ವಿಟ್ಲ ಸೀಮೆಯಲ್ಲಿ ಪ್ರಸಿದ್ಧ ವಿದ್ವಾಂಸರಾಗಿದ್ದ ಕಲ್ಲಜೆ ಕೃಷ್ಣಶಾಸ್ತ್ರಿಗಳಲ್ಲಿ ಅವರು ಸಂಸ್ಕೃತಾಧ್ಯಯನ ಮಾಡಿದರು.  ಕನ್ನಡವನ್ನು ಸ್ವತಂತ್ರವಾಗಿ ಓದಿ ಜೀರ್ಣಿಸಿಕೊಂಡರು.  ಜ್ಞಾನೋಪಾಸನೆಯಿಂದ ತೃಷಿತರಾದವರಿಗೆ ವಿದ್ಯೆಯ ಸೆಲೆ-ನೆಲೆಗಳು ಎಲ್ಲೆಲ್ಲೂ ಲಭ್ಯವಾಗುತ್ತವೆ.  ವಿಶಾಲ ವಿಶ್ವವೇ ಅವರ ವಿದ್ಯಾಮಂದಿರವಾಯಿತು.

ಅನಂತರ ಮುಳಿಯನ್ನು ತೊರೆದು ಪೆರುವಾಯಿ ಗ್ರಾಮದ ಗುಡ್ಡೆ ತೋಟ ಕುಂಬಳ ಕೋಡಿ ಎಂಬೆಡೆಗಳಲ್ಲಿ ಅವರು ವಾಸಿಸಬೇಕಾಯಿತು.  ಅಲ್ಲಿಯೂ ಅವರಿಗೆ ಮನಃಶಾಂತಿ ಸಿಗಲಿಲ್ಲ.  ಜ್ಞಾನದಾಹ ಹೆಚ್ಚುತ್ತಲೇ ಇತ್ತು.  1906ರ ಒಂದು ದಿನ ಮನೆಯನ್ನು ತೊರೆದು, ಕಾಲ್ನಡಿಗೆಯಿಂದಲೇ ಕೇರಳದ ತಿರುವನಂತಪುರಕ್ಕೆ ಕ್ರಮಿಸಿದರು.  ಪ್ರಸಿದ್ಧ ವಿದ್ಯಾಕೇಂದ್ರವಾದ ತಿರುವಾಂಕೂರು ಅವರನ್ನು ಆಕರ್ಷಿಸಿತ್ತು.  ಅಲ್ಲಿನ ಮಹಾರಾಜಾ ಕಾಲೇಜು ಸಂಸ್ಕೃತ ವಿದ್ಯಾದಾನದಲ್ಲಿ ಹೆಸರಾಗಿತ್ತು.  ಛತ್ರದಲ್ಲಿ ಉಂಡು ಜಗಲಿಗಳಲ್ಲಿ ಮಲಗಿ ಓದು ಮುಂದುವರೆಸಿದರು.  ಒಂದೇ ಪಂಚೆಯುಟ್ಟು ಸಂಕೋಚ ಪಡದೆ ವಿದ್ಯಾರ್ಜನೆಗಾಗಿ ಹೋರಾಡಿದರು.  ಹೀಗೆ ಕೆಲಕಾಲವನ್ನು ಅಲ್ಲಿ ಕಳೆದು ಇನ್ನಷ್ಟು ಜ್ಞಾನಾರ್ಜನೆಯ ಆಶೆಯಿಂದ ಮೈಸೂರಿನತ್ತ ನಡೆದರು. ಅಲ್ಲಿಯೂ ಅದೇ ಸ್ಥಿತಿ!  ವಾರಾನ್ನ ಮಾಡಿಕೊಂಡು ವಿದ್ಯಾದಾಹವನ್ನು ತಣಿಸಿಕೊಂಡರು. 

ಆ ಸಂದರ್ಭದಲ್ಲಿ ಸಂಗೀತಕಳಾನಿಧಿ ಮೈಸೂರು ಆರ್. ವಾಸುದೇವಾಚಾರ್ಯರಿಂದ ಸಂಗೀತ ಶಿಕ್ಷಣವನ್ನು ಪಡೆಯುವ ಅವಕಾಶ ದೈವದತ್ತವಾಗಿ ಒದಗಿಬಂತು.  ಮುಂದೆ ಅವರ ಸಮರಕಲೆಯ ವಿಕಸನಕ್ಕೆ ಇದು ಸಹಕಾರಿಯಾಯಿತು.  1910ರಲ್ಲಿ ಅಂದರೆ ಊರು ಬಿಟ್ಟು ಹೋದ ನಾಲ್ಕು ವರ್ಷಗಳಲ್ಲಿ ಮರಳಿ ಮನೆ ಸೇರಿದರು.

ಆಗ ಅವರು ಇಪ್ಪತ್ತೆರಡರ ತರುಣ!  ಸಂಗೀತ ಪರಿಜ್ಞಾನ ವಿದ್ವತ್ತೆಗಳನ್ನು ಮೈಗೂಡಿಸಿಕೊಂಡ ಅವರಿಗೆ ವಿಶೇಷ ಆತ್ಮವಿಶ್ವಾಸ ಧೈರ್ಯ ಮೂಡಿತ್ತು.  ವಾಚನ ಪ್ರವಚನ ಮಾಡುವ ಅವರ ಬಯಕೆ ಆಗ ಸಹಜ ಮೊಳಕೆಯೊಡೆಯಿತು.  ಅಂದಿನ ದಿನಗಳಲ್ಲಿ ಮನೆ-ಮನೆಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಪುರಾಣ ವಾಚನ-ಪ್ರವಚನಗಳು ದೈನಂದಿನ ಅನಿವಾರ್ಯ ಕ್ರಮಗಳೆಂಬಂತೆ ಜರಗುತ್ತಿದ್ದವು.  ರಮ್ಯವಾದ ಆಕರ್ಷಕ ಶಾರೀರ, ವಿದ್ವತ್ ಪೂರ್ಣ ಸರಳ ಸುಂದರ ಸರಸ ವ್ಯಾಖ್ಯಾನಗಳಿಂದ ತಿಮ್ಮಪ್ಪಯ್ಯನವರ ಹೆಸರು ಮನೆಮಾತಾಯಿತು.  ಜನಮನದ ಆಕರ್ಷಕ ಕೇಂದ್ರ ಬಿಂದುವಾಗಿ ಅವರು ಗುರುತಿಸಲ್ಪಟ್ಟರು.  ಜಿಲ್ಲೆಯ ಆದ್ಯಂತ ಅವರ ಕ್ಷೇತ್ರ ವಿಸ್ತರಿಸಿತು.

ಆ ಹೊತ್ತಿಗೆ ಜಿಲ್ಲೆಯ ಯಕ್ಷಗಾನ ಕಲೆಗಳಲ್ಲಿಯೂ ಅವರು ಭಾಗವಹಿಸಿದರು. ಕವಿ ಭೂಷಣ ಕೆ.ಪಿ. ವೆಂಕಪ್ಪಶೆಟ್ಟರು ಆಗ ಪ್ರಸಿದ್ಧ ಅರ್ಥದಾರಿಗಳಾಗಿದ್ದರು.  ತಿಮ್ಮಪ್ಪಯ್ಯನವರ ಪ್ರೌಢಿಮೆ, ವಾಚನ ಪ್ರವಚನ ಸಾಮರ್ಥ್ಯವನ್ನು ಮೆಚ್ಚಿದ ಅವರು ಮಂಗಳೂರಿನ ಅಮ್ಮಂಬಳ ಶ್ರೀನಿವಾಸ ಪೈಗಳಿಗೆ ತಿಮ್ಮಪ್ಪಯ್ಯನವರ ವಾಚನ ಕಲೆಯ ಪರಿಚಯ ಮಾಡಿಸಿಕೊಟ್ಟರು.  (ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದ ನಾರಾಯಣ ಪೈಗಳು ಶ್ರೀನಿವಾಸ ಪೈಗಳ ಮಗ).   ಶ್ರೀನಿವಾಸ ಪೈಗಳು ತಿಮ್ಮಪ್ಪಯ್ಯನವರ ಪಾಂಡಿತ್ಯ ಪ್ರವಚನ ಕಲೆಗಳನ್ನು ಮೆಚ್ಚಿ ಅವರನ್ನು ತಮ್ಮ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರನ್ನಾಗಿ ಕರೆಸಿಕೊಂಡರು.  ಇಲ್ಲಿ ತಿಮ್ಮಪ್ಪಯ್ಯನವರಿಗೆ ವಿಶಾಲವಾದ ಅವಕಾಶವೊದಗಿ ಬಂತು.  ಈ ಸಮಯದಲ್ಲಿ ಅವರು ಚಂದ್ರಾವಳಿ ವಿಲಾಸ, ಸೊಬಗಿನ ಬಳ್ಳಿ, ಹಗಲಿರುಳು, ಬಡ ಹುಡುಗಿ, ನಡತೆಯ ನಾಡು ಮೊದಲಾದ ಕೃತಿಗಳನ್ನು ಅವ್ಯಾಹತವಾಗಿ ರಚಿಸಿದರು.  ಕನ್ನಡ ಕೋಗಿಲೆಮಾಸ ಪತ್ರಿಕೆ ಕೂಡಾ ನಾಡಿನಾದ್ಯಂತ ತನ್ನ ಕೂಜಿತವನ್ನು ಮೊಳಗಿಸಿತು.  ಇದು ಮುಳಿಯ ತಿಮ್ಮಪ್ಪಯ್ಯನವರ  ಸಾಹಿತ್ಯಜೀವನದ ಒಂದು ಘಟ್ಟವೆಂದು ವಿದ್ವಾಂಸರು ಪರಿಗಣಿಸಿದ್ದಾರೆ. 

1918ರಲ್ಲಿ ಸೈಂಟ್ ಎಲೋಸಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರ ಹುದ್ದೆ ತೆರವಾದಾಗ, ಅದನ್ನು ತುಂಬಲು ತಿಮ್ಮಪ್ಪಯ್ಯನವರು ಆಮಂತ್ರಿತರಾದರು.  ಮೂವತ್ತು ವರ್ಷಗಳ ಕಾಲ ಅಧ್ಯಾಪನ ಪ್ರವಚನ ನಡೆಸಿ ಅಸಂಖ್ಯ ಶಿಷ್ಯರಾಶಿಯನ್ನು ಗಳಿಸಿದರು.  ಕನ್ನಡದ ಸವಿಯನ್ನು ತನ್ನ ವಿದಾರ್ಥಿಗಳಿಗೆ ಮಾತ್ರವಲ್ಲದೆ ನಾಡಿನಾದ್ಯಂತ ಎಲ್ಲರಿಗೂ ಉಣಿಸಿದರು.  ಈ ಅವಧಿಯಲ್ಲಿ ಅವರ ಪ್ರಬುದ್ಧ ಕೃತಿಗಳು ಬೆಳಕಿಗೆ ಬಂದವು.  ನಾಡೋಜ ಪಂಪಅವರನ್ನು ಎತ್ತರಕ್ಕೇರಿಸಿದ ಮೇರು ಕೃತಿ.  ಕನ್ನಡದ ಓಜರೆಂದು ಖ್ಯಾತಿ ತಂದುಕೊಟ್ಟ ಮಹಾಕೃತಿ.  ಸಮಸ್ತ ಭಾರತ ಸಾರ, ಪಾರ್ತಿಸುಬ್ಬ, ಕವಿರಾಜ ಮಾರ್ಗ ವಿವೇಕ, ಆದಿಪುರಾಣ ಸಂಗ್ರಹದಂತಹ ಮೇರುಕೃತಿಗಳ ರಚನೆ ಈ ಕಾಲ ಘಟ್ಟದಲ್ಲಿ ನಡೆದಿದೆ.

ತಿಮ್ಮಪ್ಪಯ್ಯನವರಿಗೆ 5 ಜನ ಮಕ್ಕಳು.  1944ರಲ್ಲಿ ಅವರ ಪತ್ನಿ ದೇವಕಿ ಅಮ್ಮ ನಿಧನರಾದರು.  1948ರಲ್ಲಿ ಮುಳಿಯ ತಿಮ್ಮಪ್ಪಯ್ಯನವರು ನಿವೃತ್ತರಾಗಿ ಮಂಗಳೂರನ್ನು ತ್ಯಜಿಸಿದರು.  ಮಗ ಮಹಾಬಲಭಟ್ಟರೊಡನೆ ಕೆಲ ಕಾಲ ಪೆರ್ಲದಲ್ಲಿದ್ದು ನಂತರ ಹಿರಿಯ ಮಗ ಕೇಶವ ಭಟ್ಟರೊಂದಿಗೆ ಮದ್ರಾಸಿನಲ್ಲಿದ್ದು ಹೃದಯಬೇನೆಗೆ ಚಿಕಿತ್ಸೆ ಪಡೆದರು.  1950ರ ಜನವರಿ 16ನೇ ದಿನ ಇದ್ದಕ್ಕಿದ್ದಂತೆ, ಮಗನ ತೊಡೆಯಲ್ಲಿ ತಲೆಯಿರಿಸಿ, ಸ್ನೇಹಿತರನ್ನೆಲ್ಲಾ ವಿಚಾರಿಸಿಕೊಂಡು ಕೊನೆಯುಸಿರೆಳೆದರು.  ಜ್ಞಾನಜ್ಯೋತಿಯೊಂದು ಮರೆಯಾಯಿತು. 

ಮುಳಿಯ ತಿಮ್ಮಪ್ಪಯ್ಯನವರ ಕಾವ್ಯ ಪ್ರಕಾರದಲ್ಲಿ ಬಡಹುಡುಗಿ, ಪ್ರೇಮಪಾಶ ಎಂಬ ಕಥನಗಳು ಮೂಡಿಬಂದಿವೆ.  ಬಡತನದಲ್ಲಿ ನವೆಯುತ್ತಿದ್ದ ತಂದೆ, ತನ್ನ ಮಗಳನ್ನು ದೂರದೂರಿಗೆ ಮಾರಿ, ಗಂಡುಮಕ್ಕಳು ತೀರಿಕೊಂಡು ಬೀದಿ ಪಾಲಾದುದು, ಮಗಳು ಗಂಡನನ್ನು ಕಳೆದುಕೊಂಡು ಇತರ ಧರ್ಮೀಯನೊಡನೆ ಬಾಳುವೆ ನಡೆಸಿ ತಂದೆಯನ್ನು ಆದರಿಸುದುದು, ಮುದುಕನ ಹೆಣ್ಣಿನ ಬಾಳಿನ ಕಥೆ ಆಗಿನ ದಿನಗಳ ವ್ಯಥೆಯನ್ನು ಚಿತ್ರಿಸಿದೆ. 

ಜಾತಿ ಜಾತಿಯೆನ್ನುತ್ತ ಸಾವರಲ್ಲದೆ,
ಅದರ ನೀತಿ ನೀರಾಗಿ ಕೆಳಹರಿಯಂದಂತೆ ಓತು,
ಸರಿಯಾದ ಬಾಂಧವ್ಯದಿಂದ ಕಟ್ಟದಿರಲಾ
ತಂದೆತಾಯಿಗಳ ತಪ್ಪಲ್ಲವೇ?

ಎಂಬ ಸಾಮಾಜಿಕ ಒಳಸುಳಿಯನ್ನು ಕವಿ ಇಲ್ಲಿ ಬಿಚ್ಚಿಟ್ಟಿದ್ದಾರೆ.  ಪ್ರೇಮ ಪಾಶದಲ್ಲಿ ಹಳ್ಳಿ-ಪಟ್ಟಣಗಳ ಬದುಕಿನ ಅಂತರ-ಪ್ರೇಮದ ಅರ್ಥ-ಬದುಕಿನ ಬವಣೆಯೊಂದಿಗೆ ಚಿತ್ರಿತವಾಗಿದೆ.  ಚಂದ್ರಾವಳೀ ವಿಲಾಸವು ತಿಮ್ಮಪ್ಪಯ್ಯನವರ ರಸಿಕತೆಯ ದ್ಯೋತಕವಾಗಿದೆ.  ಹಗಲಿರುಳು, ಸೊಬಗಿನ ಬಳ್ಳಿ ಅವರ ವಿಶಿಷ್ಟ ಕಾವ್ಯ ಸಂಕಲನಗಳು.  ನವನೀತ ರಾಮಾಯಣದಲ್ಲಿ ಒಂದು ವಿಶಿಷ್ಟ ಸೊಬಗಿದೆ. 

ಮುಳಿಯ ತಿಮ್ಮಪ್ಪಯ್ಯನವರು ಮಹಾಕವಿ ಪಂಪನ ಆದಿಪುರಾಣವನ್ನು ಆದಿಪುರಾಣ ಸಂಗ್ರಹ ಎಂಬ ಹೆಸರಿನಿಂದಲೂ, ವಿಕ್ರಮಾರ್ಜುನ ವಿಜಯವನ್ನು ಸಮಸ್ತಭಾರತ ಸಾರ ಎಂಬ ಹೆಸರಿನಿಂದಲೂ ಗದ್ಯರೂಪದಲ್ಲಿ ನೀಡಿದ್ದಾರೆ.  ಸಂಸ್ಕೃತಿ ಉತ್ತಮ ಚಿಂತನ ಪ್ರಧಾನ ಕೃತಿ.  ವೀರಬಂಕೆಯ ಕಾದಂಬರಿ ರಚನೆಗೆ ಪಂಪನ ಪ್ರೇರಣೆಯೇ ಕಾರಣವಾಯಿತಂತೆ.  ಪಶ್ಚಾತ್ತಾಪ ಕಾದಂಬರಿಯು ತಮ್ಮೂರಿನ ಹಾಗೂ ಕುಟುಂಬದ ಸುತ್ತಮುತ್ತಲಿನ ಚಿತ್ರವಾಗಿದೆ.  ಪಶ್ಚಾತ್ತಾಪ ಕಾದಂಬರಿಯಲ್ಲಿ ಬರುವ ಪ್ರದೇಶ ಪರಿಸರಗಳ ಚಿತ್ರಣ ಈ ತನಕ ಯಾವುದೇ ಕತೆ ಕಾದಂಬರಿಗಳಲ್ಲಿ ಬಂದಿಲ್ಲ ಎಂಬುದು ಇಲ್ಲಿ ಗಮನಾರ್ಹವಾಗುತ್ತದೆ. 

ಪಂಪನ ಕುರಿತಾದ ಅವರ ಅಧ್ಯಯನ ಅಗಾಧ, ಅನಂತ, ಅಪಾರ.  ಪಂಪನನ್ನು  ಕನ್ನಡದ ನಾಡೋಜನೆಂದು  ಕೊಂಡಾಡಿದ ಮುಳಿಯವರೇ ಕನ್ನಡದ ಓಜರಾಗಿ ಗುರುತಿಸಲ್ಪಟ್ಟಿದ್ದಾರೆ.  ಸಂಸ್ಕೃತಕ್ಕೆ ವಾಲ್ಮೀಕಿಯಂತೆ ಕನ್ನಡಕ್ಕೆ ಆದಿಕವಿ ಪಂಪನೆಂದು ಸಾರಿದ ತಿಮ್ಮಪ್ಪಯ್ಯನವರು ಚಾಳುಕ್ಯ ವಂಶದ ಅರಿಕೇಸರಿಯೊಡನೆ ಅರ್ಜುನನನ್ನು ಸಮೀಕರಿಸಿದ ಪಂಪನ ಪೆಂಪನ್ನು ತೋರಿಸಿದ್ದಾರೆ.  ವೆಂಗಿಮಂದಳದ ಸೀಮಾವಿಮರ್ಶೆ, ವೆಂಗಿಪೊಳು ಕರ್ನಾಟಕ ಧಾತ್ರೀ ತಿಲಕವೇ ಆಗಿದ್ದುದು, ಪಂಪನು ಹೇಳುವ ವೆಂಗೀಶನ ನಾಡು ಕರ್ನಾಟಕವೇ ಸರಿ ಎಂಬ ಸಿದ್ಧಾಂತ, ಬೆಳ್ ಪದ ಸಿದ್ಧಾಂತ ಇತ್ಯಾದಿ ಗಹನ ವಿಚಾರಗಳನ್ನು ಎತ್ತಿಕೊಂಡು ಆಳವಾದ ಚರ್ಚೆ ನಡೆಸಿ ದೇಶ-ಕಾಲ-ಕವಿ-ಕಾವ್ಯವಿಚಾರಗಳ ಸಿದ್ಧಾಂತಕ್ಕೆ ಅವರು ಬಂದಿದ್ದಾರೆ.

ಅಮೋಘ ವರ್ಷ ನೃಪತುಂಗನ ಬಗ್ಗೆ ತಿಮ್ಮಪ್ಪಯ್ಯನವರ ಸಂಶೋಧನೆ ಹರಸಾಹಸವಾಗಿದೆ.  ಕವಿರಾಜಮಾರ್ಗಕಾರನಾರುನೃಪತುಂಗನೆ? ವಿಜಯನೆ ಎಂಬುದನ್ನು ವಿಸ್ತಾರವಾಗಿ ವಿವೇಚಿಸಿ ವಿಜಯನೆಂಬ ಸಿದ್ಧಾಂತಕ್ಕೆ ಬರುತ್ತಾರೆ.  ಆದರೆ ನೃಪತುಂಗನ ಬಗ್ಗೆ ಅವರ ಧೋರಣೆ ಪ್ರತೀಕೂಲ ಸ್ಥಿತಿಗೆ ಕಾರಣವಾಗುವುದಿಲ್ಲ.  ದಂತಿವರ್ಮನಿಂದ ನೃಪತುಂಗನವರೆಗಿನ ವಂಶವಿಚಾರದೊಡನೆ, ರಾಜಧಾನಿ ಮಾನ್ಯಖೇಟವನ್ನು ಕಂಡು ಹಿಡಿದುದು, ತಿರುಳ್ಗನ್ನಡದ ಸಂಸ್ಕೃತಿ, ನಾಡಿನ ಬಾಹ್ಯಾಂತರಂಗ ಸ್ವರೂಪಗಳ ದರ್ಶನವನ್ನು ಮಾಡಿಸಿದ್ದಾರೆ.  ಯಕ್ಷಗಾನ ಕವಿ ಪಾರ್ತಿಸುಬ್ಬನ ಬಗ್ಗೆ ಇವರ ಸಂಶೋಧನೆ ಪ್ರಾಮಾಣಿಕವಾಗಿ ಆ ಕಾಲದ ಸ್ಥಿತಿಯಿಂದ ವ್ಯಕ್ತವಾಗಿದೆ.  ಯಕ್ಷಗಾನದತ್ತ ಪಂಡಿತರ ಗಮನ ಹರಿಯದ ದಿನಗಳಲ್ಲಿ ಯಕ್ಷಗಾನದ ಬಗ್ಗೆ ತಿಮ್ಮಪ್ಪಯ್ಯನವರ ಆಸ್ಥೆ ಮೆಚ್ಚುವಂತದ್ದು. 

ತಿಮ್ಮಪ್ಪಯ್ಯನವರ ಸಾಧನೆಗಳಲ್ಲಿ ಕನ್ನಡ ಕೋಗಿಲೆಪತ್ರಿಕೆ ಅವರ ಕೀರ್ತಿಕಿರೀಟಕ್ಕೆ ತುರಾಯಿಯಂತಿದೆ.  ಕೇವಲ ನಾಲ್ಕೇ ವರ್ಷ ನಡೆದರೂ ಅದರ ಕೀರ್ತಿ ಪಂಚಮದ ಇಂಚರ ನಾಡನ್ನು ಮೈಮರೆಯಿಸಿತ್ತು.  ಅದು ನಾಡಿನ ಅನೇಕಾನೇಕ ವಿದ್ವಾಂಸರ ಲೇಖನಗಳಿಂದ ಸಂಮೃದ್ಧವಾಗಿದೆ.  ತಿಮ್ಮಪ್ಪಯ್ಯನವರು ಸ್ವತಃ ತಮ್ಮ ರಾಷ್ಟ್ರಪ್ರೇಮ, ಸಾಹಿತ್ಯ ವಿಚಾರದ ಲೇಖನ ಕಾವ್ಯಗಳನ್ನು ಪತ್ರಿಕೆಯ ಮುಖೇನ ಪ್ರಕಟಿಸಿದ್ದಲ್ಲದೆ, ಇತರರಿಗೂ ಅವಕಾಶ ನೀಡಿ ಪ್ರೋತ್ಸಾಹಿಸಿದ್ದಾರೆ.  ನಾಡಿನ ಆದ್ಯಂತ ಪತ್ರಿಕೆಗೆ ಓಡಾಡಿ, ಉತ್ತಮೋತ್ತಮ ಲೇಖನಗಳನ್ನು ಬರೆಸಿ ಪ್ರಕಟಿಸಿದರು.  ಕನ್ನಡ ಪತ್ರಿಕೋದ್ಯಮದಲ್ಲಿ ಸಾಹಿತ್ಯ ಪ್ರಕಾರಕ್ಕೆ ಮಹತ್ವ ನೀಡಿದ ಆದ್ಯಪತ್ರಿಕೆಯಾಗಿ ಅದು ವಿರಾಜಮಾನವಾಯಿತು.

1927ರಲ್ಲಿ ಮಂಗಳೂರಿನಲ್ಲಿ ಆರ್. ತಾತಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಂಡಿಸಿದ ಆಂಡಯ್ಯನೂ ಕನ್ನಡಮೇನಿಪ್ಪಾ ನಾಡುಎಂಬ ಪ್ರಬುದ್ಧವಾದ ಪ್ರಬಂಧ ಅವರನ್ನು ದಿಗಂತದೆತ್ತರ ಏರಿಸಿತು.  ವಿದ್ವದ್ಗೊಷ್ಟಿ ತಲೆದೂಗಿ ಅವರನ್ನು ಅಭಿನಂದಿಸಿತು.  ಕನ್ನಡ ಸಾರಸ್ವತಲೋಕದ ಮೇರುಪುರುಷರೆಂಬ ಗೌರವವನ್ನು ಗಳಿಸಲು ಇದು ಮೊದಲ ಹೆಜ್ಜೆಯಾಯಿತು.

1931ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಕಾರವಾರದಲ್ಲಿ ನೆರವೇರಿದಾಗ ತಿಮ್ಮಪ್ಪಯ್ಯನವರು ಅಧ್ಯಕ್ಷಪೀಠವನ್ನು ಅಲಂಕರಿಸಲು ಆಹ್ವಾನಿತರಾದರು.  ದಕ್ಷಿಣಕನ್ನಡದಲ್ಲಿ ಈ ಪೀಠವನ್ನು ಅಲಂಕರಿಸಿದ ಮೊದಲ ಸಾಹಿತಿ ಎಂಬ ಗೌರವ ಅವರಿಗೆ ಪ್ರಾಪ್ತವಾಯಿತು. 

ಲಕ್ಷ್ಮೇಶ್ವರದಲ್ಲಿ ಜರುಗಿದ ಪಂಪನ ಸಹಸ್ರ ಸಾಂವತ್ಸರಿಕೋತ್ಸವದ ಅಧ್ಯಕ್ಷಸ್ಥಾನದ ಗೌರವ ಅವರ ಜೀವನದ ಇನ್ನೊಂದು ಮಹತ್ವದ ಮಜಲಾಗಿ ದಾಖಲಾಗತಕ್ಕ ಸ್ವರ್ಣಾವಕಾಶವನ್ನು ಕಲ್ಪಿಸಿತು.  ಒಂದು ನೂರು ಎತ್ತುಗಳ ಗಾಡಿಯಲ್ಲಿ ಅಧ್ಯಕ್ಷರ ಮೆರವಣಿಗೆ ಸಾಗುತ್ತಿದ್ದಂತೆ, ನಾಡೋಜ ಪಂಪ ಮಹಾಗ್ರಂಥದ 600 ಪುಟಗಳಿಗೆ ಸಮನಾಗುವ ಸಂಖ್ಯೆಯಲ್ಲಿ ಪುಷ್ಪಹಾರಗಳು ಅವರ ಕೊರಳನ್ನು ಅಲಂಕರಿಸಿದುದು ಕನ್ನಡ ಸರಸ್ವತಿಯ ಊಳಿಗದಾಳ್ ಎಂದು ಕರೆಸಿಕೊಂಡ ಈ ಕವಿ ಸಂಶೋಧಕನಿಗೆ ಸಂದ ಅರ್ಹ ಗೌರವವಾಗಿದೆ. 

ಬೆರಳಂ ಸಿಡಿಯಲಿ ಪೊಗಳಲಿ
ಧರೆಯೊಳ್ ತಂತಮ್ಮ ಪುಟ್ಟು ಗುಣದಂದದೊಳಾ-
ನೆರಡರೊಳುಂ ಮುದಮಾಂಪೆಂ
ಇರುಳುಂ ಪಗಲುಂ ನರಂಗೆ ಸುಖಕರಮಲ್ತೇ?

ಬದುಕಿನಲ್ಲಿ ಸುಖ ದುಃಖಗಳ ಮಧ್ಯೆ ದುಃಖದಲ್ಲಿ ಕೊರಗದೆ, ಸುಖವನ್ನು ಪಡೆದೇ ಇಲ್ಲವೆಂಬಂತೆ, ರಾಗ ಭಯ ಕ್ರೋಧಗಳಿಲ್ಲದೆ ಬದುಕುಳಿದ ಅವರು ಸ್ತಿಥಪ್ರಜ್ಞ  - ಮುನಿಸದೃಶ ವ್ಯಕ್ತಿಯಾಗಿದ್ದುದನ್ನು ಮೇಲಿನ ಸಾಲುಗಳು ಸಹಾ ಪತಿನಿಧಿಸುತ್ತವೆ. 

ತಿಮ್ಮಪ್ಪಯ್ಯನ ಪೆಸರಿಂ
ದೆಮ್ಮ ನೆಲಂ ಪಳ್ಳಿ-ಸೀಮೆ, ಹೋಬಳಿಯೂರುಂ
ಘಮ್ಮನೆ ನಾಡಿಗೆ ನಾಡೇ
ಕಮ್ಮೈಸಿದುದುದಲ್ತೆ, ಕನ್ನಡಂ ಕತ್ತುರಿಯುಂ

ಕವಿ ಕಡವ ಶರ್ಮರು ತಿಮ್ಮಪ್ಪಯ್ಯನವರ ಕನ್ನಡ ಕತ್ತುರಿಯ ಪರಿಮಳವನ್ನು ಹೀಗೆ ಹಾಡಿಹೊಗಳಿದ್ದಾರೆ.  ಕಸ್ತೂರಿಯ ಪರಿಮಳ-ಕವಿಯ ಯಶೋವಿಲಸಿತದೊಂದಿಗೆ ಕನ್ನಡಸೀಮೆಯ ಸೀಮೋಲ್ಲಂಘನ ನಡೆಸಿದೆ.


(ಆಧಾರ:  ನೀರ್ಪಾಜೆ ಭೀಮಭಟ್ಟರ ಬರಹವನ್ನು ಈ ಲೇಖನ ಆಧರಿಸಿದೆ)

Tag: Muliya Thimmappaiah

ಕಾಮೆಂಟ್‌ಗಳಿಲ್ಲ: