ಸೋಮವಾರ, ಆಗಸ್ಟ್ 26, 2013

ಡುಂಡಿರಾಜ್

ಡುಂಡಿರಾಜ್

ತಾವು ಹೇಳುವುದನ್ನೆಲ್ಲಾ ಯಾವುದೇ ಆರ್ಭಟ, ಸೋಗು ಇಲ್ಲದೆಒಂದಷ್ಟು ಹಾಸ್ಯ, ಒಂದಷ್ಟು ಸಂಗೀತದ ಇಂಪು, ಒಂದಷ್ಟು ನವಿರಾದ ಕಾವ್ಯಭಾವಗಳಲ್ಲಿ ಎಂಥವನಿಗೂ ಸುಲಭವಾಗಿ ದಕ್ಕುವ ಹಾಗೆ ದಕ್ಕಿಸಿ ನಮ್ಮ ಕನ್ನಡದ ಮನೆ ಮನಗಳಲ್ಲಿ ತುಂಬಿಕೊಂಡಿರುವವರು ಡುಂಡಿರಾಜ್.  ನಮ್ಮ ಡುಂಡಿರಾಜ್ ಅವರ ಹುಟ್ಟು ಹಬ್ಬ ಆಗಸ್ಟ್ 18ರಂದು.    ಹುಟ್ಟಿದ್ದು 1956ರ ವರ್ಷದಲ್ಲಿ.  ಅವರಿಗೆ ಈಗ ವಯಸ್ಸು ಅರವತ್ತು  ತುಂಬಿತಾದರೂ ಅವರ ಕವನದ ಲವಲವಿಕೆ ಮಾತ್ರ ಎಂದೂ ತುಂಬಿ ತುಳುಕುವ ಇಪ್ಪತ್ತಾರರ ಯೌವನದ ಉತ್ಸಾಹ ಚೈತನ್ಯದ್ದು.

ಬರೆಯುತ್ತೇನೆ
ಬರೆಯಲೇಬೇಕು ಅನ್ನಿಸಿದ್ದಕ್ಕೆ
ಮತ್ತು ಬರೆದದ್ದನ್ನು
ಕವಿತೆ ಎಂದು ನೀವು
ಮನ್ನಿಸಿದ್ದಕ್ಕೆ !

ಇದು ಡುಂಡಿರಾಜ್ ಅವರಲ್ಲಿ ಬರಹಗಾರನಾಗಿ ತುಂಬಿ ತುಳುಕುತ್ತಿರುವ ಸೌಜನ್ಯ.

ತಮ್ಮ ಟೇಬಲ್ಲಿನ ಡ್ರಾಯರ್ ತೆಗೆದ ಅವರಿಗೆ ಜಿರಳೆ ಕಂಡರೆ ಅಲ್ಲೊಂದು ಹನಿಮುತ್ತು ಉದುರುತ್ತದೆ ಎಲ್ಲೋ ನನ್ನ ಕವನ ಓದಿರಬೇಕುಎಂದು.  ಅವರು ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕಿನ ಉದ್ಯೋಗದಿಂದ ವಿರಾಮ ಮಾಡಿಕೊಂಡು ಎಲ್ಲಾ ಮರೆತು ಪ್ರವಾಸ ಹೋಗೋಣ ಅಂದು ರೈಲು ಹತ್ತಿದರೆ ಅವರ ಹನಿಗವನ ಅಲ್ಲೂ ಕೇಳಬೇಕೆ ಬ್ಯಾಂಕಿನಲ್ಲಿ  ಸದ್ದಾಗುವ ಚೆಕ್ಕು ಬುಕ್ಕುಎಂದು.  ಏನೋ ಸಭ್ಯರಾಗಿ ಕಾಣುತ್ತಾರೆ ಹುಡುಗಿ ನೋಡುವುದಿಲ್ಲ ಎಂದು ಭಾವಿಸಬೇಡಿ.  ಬೇಕಿದ್ದರೆ ನೀವೇ ನೋಡಿ ಅವರ ಕವನ

ಕ್ಯಾಶ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದರೂ ಸಿಗದು
ಅದಕ್ಕೇ ಇರಬೇಕು
ಹಾಕಿದ್ದಾರೆ ಬೋರ್ಡು
ನಗದು”!!!

ಲೋಕದ ಬಗೆಗಿನ  ಡುಂಡಿರಾಜರ ವಿಡಂಭನೆಯಲ್ಲಿ ಕಿಂಚಿತ್ತೂ ಢಾಣಾ ಡಂಗುರವಿಲ್ಲ.  ತಿಳಿಹಾಸ್ಯದಲ್ಲೇ ಏನು ಹೇಳಬೇಕೋ ಅದು ಮುಟ್ಟುತ್ತದೆ.

ನಡೆಯಲಿಲ್ಲ
ಓಡಲಿಲ್ಲ
ಕಾರಲ್ಲಿ ಬಂದರೂ
ಇಷ್ಟೊಂದು ಸುಸ್ತೆ?
ಹೌದು ಮಾರಾಯ್ರೇ
ಹಾಗಿದೆ ನಮ್ಮ ರಸ್ತೆ.

ಹೇಗಿದೆ ನೋಡಿ
ಭಾರತೀಯರ ಸತ್ಯಪ್ರಿಯತೆ
ಕಳ್ಳ ನೊಟಿನಲ್ಲೂ
ಅಚ್ಚಾಗಿರತ್ತೆ
ಸತ್ಯಮೇವ ಜಯತೆ !!!

ಪಾಪ ಹೆಂಗಸರ ಕಷ್ಟದ ಬಗ್ಗೆ ಅವರಿಗೆ ಎಷ್ಟು ಮರುಕ ಅಂತೀರಿ.  ನೀವೇ ನೋಡಿ

ಪಾಂಚಾಲಿಯ ಕಷ್ಟ
ಹೇಳತೀರದು
ಎಲ್ಲರ ಹಾಗೆ ಗಂಡ
ಒಂದಲ್ಲ ಐದು.
ಸ್ವರ ಬಿದ್ದು ಹೋಗಿ
ನೋಯುತ್ತಿದೆ ಗಂಟಲು
ಗಂಡಂದಿರನ್ನು
ಬೈದು ಬೈದು

ಅವರು ಬರೆಯುವುದು ಬರೀ ಹನಿಗವನಗಳಲ್ಲ ಅವರ ಕವನಗಳು ಹಲವಾರು ಮುತ್ತಿನ ಮಾಲೆಗಳೇ ಆಗಿವೆ.  ಅವುಗಳಲ್ಲಿ ತುಂಬಿರುವ ಸೌಂಧರ್ಯ, ಆಶಯ, ಪ್ರಕೃತಿ, ಪರಿಸರ ಪ್ರೇಮ ಇವೆಲ್ಲವನ್ನೂ ಒಂದಾಗಿಸುವಂತಿದೆ ಅವರ ಈ ನೆಲ-ಜಲಎಂಬ ಈ  ಕವನ

ಈ ನೆಲ - ಈ ಜಲ ಈ ಕಾಡು
ಗೀಜಗ ಕಟ್ಟಿದ ಈ ಗೂಡೂ
ಇರಲಿ ಇರಲಿ ಹೀಗೆ ಪ್ರಕೃತಿ ಕೊಟ್ಟ ಕೊಡುಗೆ

ಜುಳು ಜುಳು ಹರಿವಾ ಹೊಳೆಗೇ
ಕೊಳೆಯಾ ಬೆರೆಸೋ ಖಳರೇ
ಬಗೆಬಗೆ ಹೊಗೆಯನು ಉಗುಳಿ
ಮಲಿನಗೊಳಿಸದಿರಿ ಗಾಳಿ
ಸಾಕು ಇನ್ನು ಸಾಕು ಈ ತಪ್ಪ ತಿದ್ದಬೇಕು

ಮರಗಳ ಕಡಿದು ಕಡಿದು
ಎಲ್ಲೆಡೆ ಭಣ ಭಣ ಬಿಸಿಲು
ಚಿಲಿಪಿಲಿ ಉಲಿವ ಹಕ್ಕಿ
ಅಳುತಿದೆ ಬಿಕ್ಕಿ ಬಿಕ್ಕಿ
ಸಾಕು ಇನ್ನು ಸಾಕು ಹಸಿರಾಗಬೇಕು ಬದುಕು

ರಕ್ಷಿಸಬೇಕು ಬಿಡದೇ
ನಮ್ಮ ನೆಲ ಜಲಗಳ ನಾವು
ನಾಳಿನ ಪೀಳಿಗೆಗಾಗಿ
ಉಳಿಸಿರಿ ನಾಡಿನ ಚೆಲುವು
ಸಿರಿನಾಡ ಚೆಲುವು ಈ ಕರುನಾಡ ಚೆಲುವು

ಮತ್ತೊಂದು ವಿಶೇಷವೆಂದರೆ  ಇತ್ತೀಚೆಗೆ  ಶಾಲೆಗೆ  ಆಗಮಿಸಿದ  ಚಿರತೆಯವರೆಗೆ  ಅವರ  ಹನಿಗವನ ಯಾವಾಗಲೂ  ಅಪ್ ಟು ಡೇಟ್:

ಕಷ್ಟಪಟ್ಟು ಹಿಡಿದರಂತೆ ಬೆಂಗಳೂರಲ್ಲಿ

ಶಾಲೆಗೆ ಬಂದ ಚಿರತೆಯನ್ನು
ತಾನಾಗಿಯೇ ಓಡಿ ಹೋಗುತ್ತಿತ್ತು
ಯಾರಾದರೂ ತಿಳಿಸಿದ್ದರೆ
ಆ ಶಾಲೆಯ ಫೀಸು, ಡೊನೇಷನ್ನು!


ಈ ಕೆಳಗಿನ ಹನಿಗವನಗಳು ನಮ್ಮ  ಬದುಕು  ಸಾಗುತ್ತಿರುವ ಪರಿಯ ವಿಡಂಭನೆಯೇ  ಆಗಿದೆ

ಕಾಪಾಡಿ ಕಾಪಾಡಿ
ಮರಗಳನ್ನು ಕೊಡಲಿ ಏಟಿನಿಂದ
ಮಕ್ಕಳನ್ನು ಮಹಿಳೆಯರನ್ನು
ಕಾಮುಕರ ಕಾಟದಿಂದ
ಧರ್ಮವನ್ನು ಸ್ವಾಮಿಗಳ ಪೀಠದಿಂದ
ರಾಜಕಾರಣಿಗಳನ್ನು ದುಡ್ಡಿನ
ಅಧಿಕಾರದ  ದಾಹದಿಂದ
ಕವಿಗಳನ್ನು ಪ್ರಾಸದ ಮೋಹದಿಂದ.


ಕೆಲವರಿಗೆ ಏನಾದರೂ  ಸಾಧಿಸಿ
ಖ್ಯಾತರಾಗುವ ಛಲ
ಇನ್ನು ಕೆಲವರಿಗೆ ಸರ್ಕಾರದಿಂದ
ವಿಶೇಷ ಸವಲತ್ತು ಪಡೆಯಲು
ಅಲ್ಪ ಸಂ-
ಖ್ಯಾತರಾಗುವ  ಹಂಬಲ

ಹೀಗೆ ತಮ್ಮ ಅಸಂಖ್ಯಾತ ಬರಹಗಳಿಂದ, ಕಾವ್ಯ ಸಾಹಿತ್ಯಗಳು ಕಬ್ಬಿಣದ ಕಡಲೆ, ಅದೊಂದು ವೈರಾಗ್ಯ ಪುರಾಣ, ದುಃಖ, ಪ್ರೇಮ, ಸೋಲು, ನಿರಾಶೆಗಳ ಸರಮಾಲೆ ಎಂದು ಅದರಿಂದ ದೂರವಿರುವವರಿಗೆ ನಕ್ಕು ನಲಿಯುತ್ತಲೇ ಚಿಂತನೆ, ಪ್ರೇಮ, ಆತ್ಮೀಯತೆ, ಪರಿಸರ ಪ್ರೇಮ, ವಿಡಂಭನೆ, ಟೀಕೆ, ಸ್ವ-ಅವಲೋಕನಗಳನ್ನು ತಲುಪಿಸುತ್ತಾ ಡುಂಡಿರಾಜ್ ಅವರು ಕನ್ನಡ ಸಾಹಿತ್ಯಕ್ಕೆ ಕಳೆದ ಮೂರೂವರೆ  ದಶಕಗಳಿಗೂ ಮೀರಿ ನೀಡಿರುವ ಸೇವೆ ಮುದಗೊಳಿಸುವಂತದ್ದು.

ಡುಂಡಿರಾಜ್ ಅವರ ಕವನ, ಹನಿಗವನಿಗಳಿಗಷ್ಟೇ ಅಲ್ಲದೆ ಅವರ ಅಂಕಣಗಳಿಗೂ ಜನ ಪತ್ರಿಕೆ ಬರುವುದನ್ನೇ  ಕಾದುಕುಳಿತಿರುತ್ತಾರೆ. 

ಡುಂಡಿರಾಜ್ ಅವರ ಕೆಲವೊಂದು ಕೃತಿಗಳನ್ನು ಹೆಸರಿಸುವುದಾದರೆ ನಮ್ಮ ಗೋಡೆಯ ಹಾಡು’, ‘ನೀನಿಲ್ಲದೆ’, ‘ನನ್ನ ಕವಿತೆ ನನ್ನ ಹಾಗೆ’,  ‘ಏನಾಯಿತುಮುಂತಾದವು ಅವರ ಕವನ ಸಂಕಲನಗಳು.  ಪಾಡ್ಯ ಬಿದಿಗೆತದಿಗೆ’,  ‘ನೂರು ಹನಿಗವನಗಳು’, ‘ಇನ್ನೂರು ಇನಿಗವನಗಳು’, ‘ಪಂಚ್-ಕ-ಜಾಯ್’, ‘ಹನಿಕೇತನ, ‘ಹನಿರಂಜನಿ’
 ಮುಂತಾದವು ಡುಂಡಿರಾಜರ ಹನಿಗವನಗಳ ಖಜಾನೆಗಳು. ಓಡುವವರು’, ‘ಅಧ್ವಾನಪುರ’, ‘ಅಜ್ಜಿಕಥೆ’,  ‘ಸಿನಿಮಹಾತ್ಮೆ’, ‘ಹುಡುಕಾಟ’, ‘ಕೊರಿಯಪ್ಪನ ಕೊರಿಯೋಗ್ರಫಿಮುಂತಾದವು ನಾಟಕಗಳು.  ಇವಲ್ಲದೆ ಯಾರಿಗೂ ಹೇಳ್ಬೇಡಿತರಹದ ನಗೆ ಲೇಖನಗಳ ಸಂಗ್ರಹ,  ‘ನವನೀತಎಂಬ ನವಸಾಕ್ಷರರಿಗಾಗಿನ ಕೃತಿ,  ‘ಸೂಜಿಮಲ್ಲಿಗೆಎಂಬ ಕಿರುಗವನ ಸಂಪಾದನೆಯ ಅಂಥಾಲಜಿ ಇವೆಲ್ಲಾ ಡುಂಡಿರಾಜರ ವೈವಿಧ್ಯಮಯ ಬರಹಗಳಾಗಿವೆ.   ಸಲ್ಲಾಪಎಂಬ  ಪ್ರೇಮ ಗೀತೆಗಳು, ‘ಉ-pun-ಕಾಯ್ಇವೇ ಮುಂತಾದ ಹಲವಾರು ಹನಿಗವನಗಳ ಧ್ವನಿಮುದ್ರಿಕೆಗಳು ಕೂಡಾ ಅಪಾರ ಜನಪ್ರಿಯತೆ ಗಳಿಸಿವೆ.

ಡುಂಡಿರಾಜ್ ಅವರಿಗೆ ಹಲವಾರು ಗೌರವಗಳು ಸಂದಿವೆ.  ಅವುಗಳಲ್ಲಿ ಪ್ರಮುಖವಾದವುಗಳೆಂದರೆ  ನಮ್ಮ ಗೋಡೆಯ ಹಾಡುಕೃತಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’,  ‘ನೀನಿಲ್ಲದೆಕೃತಿಗೆ  ಮುದ್ದಣ ಕಾವ್ಯರಾಜ್ಯ ಪ್ರಶಸ್ತಿ,  ‘ನಾಳೆ ಬನ್ನಿನಾಟಕಕ್ಕೆ - ಅಖಿಲ ಭಾರತ ಬಾನುಲಿ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ಹಾಸ್ಯ ನಾಟಕ ಪ್ರಶಸ್ತಿ, ‘ನವನೀತಕ್ಕೆ ಕರ್ನಾಟಕ ಸರಕಾರದ ಬಹುಮಾನ,  ‘ಅಜ್ಜಿಕಥೆಗೆ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನಚುಟುಕುರತ್ನ ಪ್ರಶಸ್ತಿಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹನಿಗವನಗೋಷ್ಠಿ ಅಧ್ಯಕ್ಷತೆರೇಡಿಯೋ ರಂಗ ನಾಟಕಕ್ಕೆ ಸಲ್ಲಿಸಿರುವ ಸೇವೆಗಾಗಿನ ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪುರಸ್ಕಾರ ಮುಂತಾದವುಗಳು ಸೇರಿವೆ.


ಡುಂಡಿರಾಜ್ ಅವರಂಥಹ ಮುದಗೊಳಿಸುವ ಬರಹಗಾರರು ಬರೆಯುತ್ತಲೇ ಇರಬೇಕು.  ಅವರ ಸುಂದರ ಹನಿಗವನಗಳ ಮಳೆ ಇಂದಿನ ಯಾಂತ್ರಿಕ ಯುಗದಲ್ಲಿ ಬಸವಳಿದು ಬದುಕುತ್ತಿರುವ ಚಾತಕ ಜೀವಿಗಳಿಗೆ ಆಗಾಗ ಅಮೃತ ಸಿಂಚನದಂತಹ  ಶಕ್ತಿ ಒದಗಿಸುವಷ್ಟು ಪೌಷ್ಟಿಕವಾದಂತಹವು.  ಡುಂಡಿರಾಜ್ ಅವರು ನಮಗೆ ಉಣಿಸುತ್ತಿರುವ ಬರಹಗಳ ಸವಿ ಅನಂತಕಾಲದವರೆಗೆ ಕನ್ನಡಿಗರ ಈ ಲೋಕವನ್ನು ಬೆಳಗುತ್ತಿರಲಿ.  ನಮ್ಮೆಲ್ಲರ ಪ್ರೀತಿಯ ಬರಹಗಾರ ಡುಂಡಿರಾಜ್ ಅವರಿಗೆ ಹುಟ್ಟು ಹಬ್ಬದ ಆತ್ಮೀಯ ಶುಭ ಹಾರೈಕೆಗಳು.  ಅವರ ಬದುಕು ನಿತ್ಯ ಸುಂದರವಾಗಿರಲಿ.  ಅವರ ಹನಿಗವನಗಳ ಸಿಂಚನ ನಮ್ಮ ಮನಸ್ಸುಗಳನ್ನು ನಿರಂತರ ಸುಂದರಗೊಳಿಸುತ್ತಲಿರಲಿ.

Tag: Dundiraj

ಕಾಮೆಂಟ್‌ಗಳಿಲ್ಲ: