ಬುಧವಾರ, ಆಗಸ್ಟ್ 28, 2013

ನಸೀರುದ್ದೀನ್ ಷಾ

ನಸೀರುದ್ದೀನ್ ಷಾ

ನಸೀರುದ್ದೀನ್ ಷಾ
ನಸೀರುದ್ದೀನ್ ಷಾ ಅವರು ಹುಟ್ಟಿದ್ದು ಜುಲೈ 20, 1950ರಲ್ಲಿ.  ನಮಗೆ ಅದೆಷ್ಟೋ ಕಲಾವಿದರು ವಿವಿಧ ಕಾರಣಗಳಿಗೆ ಇಷ್ಟವಾಗುತ್ತಾರೆ.  ಆದರೆ ನಸೀರುದ್ದೀನ್ ಷಾ ಅಂದರೆ ಅದು ಅಭಿನಯ ಎಂಬ ಕಲೆಗೆ ಒಂದು ಹೊಸ ವಾಖ್ಯೆಯ ಹಾಗೆನಿಸಿ ಅಲ್ಲೊಂದು ಅವ್ಯಕ್ತ ಹೃದ್ಭಾವದ ಉದಯವಾದಂತೆನಿಸುತ್ತದೆ.  ಕಲಾರಂಗದಿಂದ ಪ್ರಸಿದ್ಧರಾಗಿರುವ ಸಾಕಷ್ಟು ಪ್ರತಿಭಾವಂತರು ಸಿಗುತ್ತಾರೆ.  ಆದರೆ ನಸೀರುದ್ದೀನ್ ಷಾ ಕಲೆಗೇ ಒಂದು ಮೆರುಗು ತಂದವರು.  ಕಲೆ ಮತ್ತು ನಸೀರುದ್ದೀನ್ ಷಾ ಇವೆರಡೂ ಒಂದಕ್ಕೊಂದು ಅವಿನವ ಭಾವವೆನಿಸುವಂತಹವು.  

1971ರಲ್ಲಿ ಕಲಾಪದವಿಯನ್ನು ಗಳಿಸಿದ ನಸೀರುದ್ದೀನ್ ಷಾ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಿ ಪಡೆದರು.  ಭಾರತೀಯ ಚಿತ್ರರಂಗದ ಕಲಾನಿರ್ದೇಶಕರಿಗೆಲ್ಲ ಅವರೆಂದರೆ ಅಚ್ಚುಮೆಚ್ಚಿರಬೇಕು. ನಸೀರುದ್ದೀನ್ ಷಾ ಅವರು ಅಭಿನಯಿಸಿದ ಪಾತ್ರಗಳು ಒಂದಕ್ಕಿಂತ ಒಂದು ಅಮೋಘವಾದದ್ದು.  ಅವರು ತಾವು  ನಟಿಸಿದ ನಿಶಾಂತ್’’,  ‘ಆಕ್ರೋಶ್’, ‘ಸ್ಪರ್ಶ್’, ‘ಮಿರ್ಚ್ ಮಸಾಲ’, ‘ಚಕ್ರ’, ‘ಮಾಸೂಮ್’’,’ಉಮ್ರಾವ್ ಜಾನ್’’, ‘ಬಜಾರ್’, ‘ಕಥಾ’,  ‘ಜುನೂನ್’, ‘ಮಂಡಿ’ , ‘ಜಾನೆ ಬಿ ದೊ ಯಾರೊ’, ‘ಸ್ಪರ್ಶ್’’, ‘ಇಕ್ಬಾಲ್’, ‘ಸರ್ಫರೋಷ್’, ಕನ್ನಡದ ಚಿತ್ರಗಳಾದ  ತಬ್ಬಲಿಯು ನೀನಾದೆ ಮಗನೆ’, 'ಮನೆ' ಮುಂತಾದ ಚಿತ್ರಗಳಲ್ಲಿ ತಮಗೆ ತಾವೇ ಪೈಪೋಟಿ ಎಂಬಂತೆ ಒಂದಕ್ಕಿಂತ ಒಂದು ಅದ್ಭುತ ಕೆಲಸ ಮಾಡಿದವರು.  

ನಾಟಕ ನಿರ್ಮಾಣ, ನಾಟಕಗಳಲ್ಲಿ ಅಭಿನಯ,  ದೂರದರ್ಶನದಲ್ಲಿ ಭಾರತ್ ಏಕ್ ಖೋಜ್’,  ‘ಹೇ ರಾಮ್ಚಿತ್ರದಲ್ಲಿ ಗಾಂಧೀ ಪಾತ್ರ, ‘ಮಿರ್ಜಾ ಗಾಲಿಬ್ಕುರಿತಾದ ಎಪೋನಿಮ್ಸ್’, ‘ದಿ ಲೀಗ್ ಆಫ್ ಎಕ್ಟ್ರಾಆರ್ಡಿನಿರಿ ಜೆಂಟಲ್‌ಮನ್ಹಾಲಿವುಡ್ ಚಿತ್ರ, ‘ಎ ವೆಡ್ನೆಸ್ಡೇಎಂಬ ಭಾರತೀಯ ಇಂಗ್ಲಿಷ್ ಚಿತ್ರ, ಹಲವಾರು ಕಮರ್ಷಿಯಲ್ ಚಿತ್ರಗಳಲ್ಲಿ ಅಭಿನಯ, ನಿರ್ದೇಶನ ಇವೆಲ್ಲಾ ನಸೀರುದ್ದೀನ್ ಷಾ ಅವರ ವಿಸ್ತೃತ ಅಧ್ಯಾಯಗಳು.

ನಸೀರುದ್ದೀನ್ ಷಾ ತಾವು ಮಾಡಿದ ಕೆಲಸದಲ್ಲೆಲ್ಲಾ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.  ಅದು ಕಲಾತ್ಮಕ ಚಿತ್ರವೇ ಇರಬಹುದು ಇಲ್ಲ ಕರ್ಮ’, ‘ಕ್ರಿಷ್ಅಂತಹ ಪೂರ್ಣ ವ್ಯಾಪಾರೀ ಚಿತ್ರವೇ ಇರಬಹುದು. ಕಲಾತ್ಮಕ ಚಿತ್ರಗಳು ಚಿತ್ರಮಂದಿರಗಳಲ್ಲಿ ಕಾಣುತ್ತಿದ್ದ ಅಂದಿನ ಕಾಲದಲ್ಲಿ ಆ ಚಿತ್ರಗಳ ಸೂಪರ್ ಹೀರೋ ಖಂಡಿತ ಅವರೇ.   ನಸೀರುದ್ದೀನ್ ಷಾ, ಶಬನಾ ಅಜ್ಮಿ, ಸ್ಮಿತಾ ಪಾಟೀಲ್, ಓಂ ಪುರಿ, ಅನಂತ ನಾಗ್, ಶಂಕರ ನಾಗ್, ಅಮೋಲ್ ಪಾಲೇಕರ್  ಇಂತಹ ಅಮೋಘ ನಟ ನಟಿಯರು; ಶ್ಯಾಮ್ ಬೆನಗಲ್, ಗೋವಿಂದ ನಿಹಲಾನಿ, ಎಂ. ಎಸ್. ಸತ್ಯು, ಬಿ.ವಿ. ಕಾರಂತ, ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ, ರಾಮು ಕಾರಿಯತ್  ಮುಂತಾದ ನವ್ಯ ಕಲೆಯ ನಿರ್ದೇಶಕರು ಇವರುಗಳನ್ನೆಲ್ಲಾ ನೆನೆಯುವುದೇ ಒಂದು ಸುಖಾನುಭವ ಎನ್ನುವಂತದ್ದು.  

ಹಿಂದೀ ಚಿತ್ರಗಳಲ್ಲದೆ ಕನ್ನಡದ ತಬ್ಬಲಿಯು ನೀನಾದೆ ಮಗನೆ’, 'ಮನೆ' ಮುಂತಾದ  ಚಿತ್ರಗಳಲ್ಲಿ ಕೂಡಾ ಅದ್ಭುತವಾಗಿ ಅಭಿನಯಿಸಿ ಕನ್ನಡಿಗರ ಮನಸ್ಸಿನಲ್ಲೂ ಚಿರವಾಗಿರುವ ನಸೀರುದ್ದೀನ್ ಷಾ ಅವರ ಪ್ರತಿಭೆಗೆ ಯಾವುದೇ ಗೌರವಗಳೂ ಕಡಿಮೆಯೇ.  ಈ ಮಹತ್ವದ ಕಲಾವಿದರಿಗೆ ಪದ್ಮಶ್ರೀ, ಪದ್ಮಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಗೌರವ, ರಾಷ್ಟ್ರೀಯ ಮತ್ತು  ಮಾಧ್ಯಮಗಳ ಮಟ್ಟದ ಹಲವಾರು ಶ್ರೇಷ್ಠ ನಟ ಪ್ರಶಸ್ತಿ ಗೌರವಗಳು ಅರಸಿ ಬಂದಿವೆ.   ಇನ್ನೂ ಹೆಚ್ಚಿನದೂ ಖಂಡಿತ ಬರುತ್ತದೆ.  


ಅವರ ಅಭಿನಯವನ್ನು ಅನುಭಾವಿಸುವಂತಹ ಮಹೋನ್ನತ  ಚಿತ್ರಗಳು ಮುಂದೂ ಬರುವಂತಾಗಲಿ.  ಇವರ ಅಪಾರ ಪ್ರತಿಭೆ, ಮಾರ್ಗದರ್ಶನ, ಕ್ರಿಯಾಶೀಲತೆ ಮತ್ತು ತನ್ಮಯತೆಯ ಪ್ರೇರಕ ಗುಣಗಳು   ಮುಂದಿನ ತಲೆಮಾರಿಗೂ ಸಿಗುವಂತಾಗಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸೋಣ.

Tag: Nasiruddin Shah

ಕಾಮೆಂಟ್‌ಗಳಿಲ್ಲ: