ಗುರುವಾರ, ಆಗಸ್ಟ್ 29, 2013

ಆರ್. ಕೆ. ಸೂರ್ಯನಾರಾಯಣ

ಆರ್. ಕೆ. ಸೂರ್ಯನಾರಾಯಣ

ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ವೈಣಿಕ ವಿದ್ವಾನ್  ಅರ್ ಕೆ ಸೂರ್ಯನಾರಾಯಣ ಅವರ ಹೆಸರು ಪ್ರಸಿದ್ಧವಾದದ್ದು.  ಸಂಗೀತಕ್ಕೆ ಹೆಸರು ವಾಸಿಯಾದ ರುದ್ರಪಟ್ನಂ ಮನೆತನದಲ್ಲಿ ಸುಪ್ರಸಿದ್ಧ ವೈಣಿಕ ಆಸ್ಥಾನ ವಿದ್ವಾನ್‌ ಆರ್.ಎಸ್‌. ಕೇಶವವಮೂರ್ತಿಯವರ ಸುಪುತ್ರರಾಗಿ ಜೂನ್ 14, 1937ರಲ್ಲಿ ಜನಿಸಿದ ಸೂರ್ಯನಾರಾಯಣರವರು, ತಂದೆಯವರ ಶಿಕ್ಷಣದಲ್ಲಿ ಉತ್ತಮ ವೈಣಿಕರಾಗಿ 1944ರಲ್ಲಿ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಸನ್ನಿಧಾನದಲ್ಲಿ ಮೊಟ್ಟಮೊದಲ ಕಛೇರಿ ನಡೆಸಿದರು. ಏಳು ವರ್ಷ ವಯಸ್ಸಿನಲ್ಲಿಯೇ ಮೂಡಿದ ಈ ಬಾಲಕನ ಅಸಾಧಾರಣ ಪ್ರತಿಭೆ ಮುಂದೆ ಕಾಲ ಸರಿದಂತೆ ಅರಳುತ್ತ ವೃದ್ಧಿಯಾಗುತ್ತ ನಡೆಯಿತು.

ನೂತನ ಪ್ರಯೋಗಾತ್ಮಕ ದೃಷ್ಟಿ ಹೊಂದಿದ್ದ ಸೂರ್ಯನಾರಾಯಣರವರು 24 ತಂತಿಗಳುಳ್ಳ ವೀಣೆಯನ್ನು ಆವಿಷ್ಕರಿಸಿ, ದೇಶ-ವಿದೇಶಗಳಲ್ಲಿ ಅದರ ನಾದದ ತುಂಬು ತನವನ್ನು ಪ್ರಸರಿಸಿದ್ದರು. ರಾಷ್ಟ್ರೀಯ ಸಂಗೀತ ಸಮ್ಮೇಳನಗಳಲ್ಲಿ. ಆಕಾಶವಾಣಿ-ದೂರದರ್ಶನ ಕಾರ್ಯಕ್ರಮಗಳಲ್ಲಿ, ದೇಶದ ಎಲ್ಲಾ ಪ್ರತಿಷ್ಠಿತ ಸಂಘ-ಸಭೆ-ಸಂಸ್ಥೆಗಳಲ್ಲಿ ಇವರ ವೀಣಾವಾದನ ಝೇಂಕರಿಸಿದೆ. ವಿದೇಶಗಳಿಗೆ ಹಲವಾರು ಬಾರಿ ಪ್ರವಾಸ ಮಾಡಿದ್ದ ಶ್ರೀಯುತರು ರಾಜ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಕಿರಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷವೂ ರಾಜ್ಯ ಸಂಗೀತ-ನೃತ್ಯ-ತಾಳವಾದ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ  ವಿಜೇತರಿಗೆ ಪ್ರಶಸ್ತಿ ಪತ್ರವಿತ್ತು ಸನ್ಮಾನಿಸುತ್ತಿದ್ದರು.

1988-89ನೇ ಸಾಲಿನ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿಗೂ’, ‘ರಾಜ್ಯೋತ್ಸವ ಪ್ರಶಸ್ತಿಗೂ’ ಭಾಜನರಾದ ಶ್ರೀಯುತರು ಅಪಾರ ಶಿಷ್ಯ ವೃಂದವನ್ನು ಕ್ಷೇತ್ರಕ್ಕಿತ್ತು 2003ರ ಡಿಸೆಂಬರ್ ನಲ್ಲಿ ನಾದದೇವಿಯ ದೇಗುಲದ ದೀಪವಾಗಲು ತೆರಳಿದರು.  ಮೇಳ ರಾಗಮಾಲಿಕೆಯೂ ಸೇರಿದಂತೆ ಹಲವಾರು ಕೃತಿ ವರ್ಣ ಮುಂತಾದ ರಚನೆಗಳನ್ನು ಸೂರ್ಯನಾರಾಯಣರವರು ಕ್ಷೇತ್ರಕ್ಕೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು.  ಪ್ರಸಿದ್ಧ ಚಲನಚಿತ್ರಗಳಾದ ‘ಮಲಯಮಾರುತ’, ‘ರಾಮಾನುಜಾಚಾರ್ಯ’ ಮುಂತಾದ ಹಲವಾರು ಚಿತ್ರಗಳಲ್ಲಿ ಆರ್ ಕೆ ಸೂರ್ಯನಾರಾಯಣ ಅವರು ಸಂಗೀತಗಾರರ ಪಾತ್ರ ನಿರ್ವಹಿಸಿದ್ದರು.

ನಾದಜ್ಯೋತಿ, ಕಲಾಪೂರ್ಣ, ವೀಣಾವಾದನ ಗಂಧರ್ವ, ವೀಣಾ ಚಕ್ರವರ್ತಿ ಮುಂತಾದ ಹಲವಾರು ಬಿರುದುಗಳು ಆರ್ ಕೆ ಸೂರ್ಯನಾರಾಯಣ ಅವರನ್ನು ಅಲಂಕರಿಸಿದ್ದವು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

ಮಾಹಿತಿ ಕೃಪೆ:  ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

Tag: R. K. Suryanarayana

ಕಾಮೆಂಟ್‌ಗಳಿಲ್ಲ: