ಶನಿವಾರ, ಆಗಸ್ಟ್ 31, 2013

ತಿಪ್ಪೇರುದ್ರಸ್ವಾಮಿ

ಡಾ. ತಿಪ್ಪೇರುದ್ರಸ್ವಾಮಿ

ಡಾ. ತಿಪ್ಪೇರುದ್ರಸ್ವಾಮಿಯವರು ಫೆಬ್ರವರಿ 3, 1928ರಲ್ಲಿ ಜನಿಸಿದರು.  ಕನ್ನಡ ಸಾಹಿತ್ಯ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರಲ್ಲಿ, ಹೊನ್ನಾಳಿ ತಿಪ್ಪೇರುದ್ರಸ್ವಾಮಿಯವರು ಪ್ರಮುಖರಾಗಿ ಕಂಗೊಳಿಸುತ್ತಾರೆ.  ಕರ್ನಾಟಕದ ಸಮಗ್ರ ಸಂಸ್ಕೃತಿಯ ಚಿಂತನೆಯಲ್ಲಿ ರಾಜಕೀಯ, ಇತಿಹಾಸ, ಧರ್ಮ, ಮತ್ತು ಸಾಂಸ್ಕೃತಿಕ ತಳಹದಿಗಳನ್ನು ಸುದೀರ್ಘ ವ್ಯಾಖ್ಯಾನಗಳ ಮೂಲಕ ಓದುಗರ ಮುಂದೆ ತೆರೆದಿಟ್ಟ ಮಹನೀಯ ಕಾರ್ಯವನ್ನು ತಿಪ್ಪೇರುದ್ರಸ್ವಾಮಿ ಅವರು ನೆರವೇರಿಸಿದ್ದಾರೆ.  

ದಾವಣಗೆರೆ ಜಿಲ್ಲೆಯ ಹೊನ್ನಾಳಿಗೆ ಸೇರಿದ ತಿಪ್ಪೇರುದ್ರಸ್ವಾಮಿ ಅವರು ಬಿ.ಎ (ಆನರ್ಸ್) ಮತ್ತು ಕನ್ನಡ ಎಂ.ಎ ಪದವಿಗಳನ್ನು ಗಳಿಸಿದರು.  ಅಂದಿನ ದಿನದಲ್ಲಿ ಹಳ್ಳಿಯಿಂದ ಬಂದ ತಮಗೆ ವ್ಯವಸ್ಥಾತ್ಮಕವಾಗಿ ಮತ್ತು ಸಾಂಪರ್ಕಿಕವಾಗಿ ಓದಲು ಉಂಟಾದ ತೊಂದರೆಗಳನ್ನು, ಅಂದು ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದ ಕುವೆಂಪು ಅವರನ್ನು ನೇರವಾಗಿ ಭೇಟಿಮಾಡಿ ಸ್ವಯಂ ಬಗೆಹರಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಉನ್ನತಿ ಸಾಧಿಸಿದರು. 

ಅವರ ಶರಣರ ಅನುಭಾವ ಸಾಹಿತ್ಯ' ಎಂಬ ಸಂಶೋಧನಾ ಕೃತಿ ಅವರಿಗೆ ಕರ್ಣಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವವನ್ನು ತಂದಿತು.  ಹಲವಾರು ವರ್ಷಗಳ ಕಾಲ ಅಧ್ಯಾಪನ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ತಿಪ್ಪೇರುದ್ರಸ್ವಾಮಿಯವರು ಹಲವು ಕಾಲ ಮೈಸೂರು ವಿಶ್ವವಿದ್ಯಾಲಯದ ಅಂಚೆ ತೆರಪಿನ ಶಿಕ್ಷಣ ಕೇಂದ್ರದ ನಿರ್ದೇಶಕರಾಗಿ ಮಹತ್ವದ ಸೇವೆ ಸಲ್ಲಿಸಿದರು.    ಸುಮಾರು ಒಂದು ದಶಕದ ಕಾಲ ಭದ್ರಾ ಯೋಜನೆಯ ವಿಶ್ವವಿದ್ಯಾಲಯ ಕೇಂದ್ರದಲ್ಲಿ ನಿರ್ದೇಶಕರಾಗಿ ವ್ಯಾಪಕ ಸೇವೆ ಸಲ್ಲಿಸಿದರು.  1987ರಲ್ಲಿ ಸ್ವಯಂ ನಿವೃತ್ತಿ ಪಡೆದ ಅವರುತಮ್ಮ ನಿವೃತ್ತಿಯ ಮುಂಚಿನ ಮೂರು ವರ್ಷಗಳಲ್ಲಿ ಮೈಸೂರಿನ ಶ್ರೀ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಪ್ರಧಾನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.

ಸೃಜನಶೀಲ ಬರಹಗಾರರಾದ ಡಾ. ತಿಪ್ಪೇರುದ್ರಸ್ವಾಮಿಯವರು ಕಾವ್ಯ, ನಾಟಕ, ಕಥೆ, ಕಾದಂಬರಿ ಹೀಗೆ ಎಲ್ಲ ಬಗೆಗಳ ಸಾಹಿತ್ಯದಲ್ಲೂ ಸಾಧನೆ ಮಾಡಿದ್ದಾರೆ.  ಅವರ ಕಾದಂಬರಿಗಳಾದ ಪರಿಪೂರ್ಣದೆಡೆಗೆ’, ‘ಕದಳೀ ಕರ್ಪೂರ’, ‘ಕರ್ತಾರನ ಕಮ್ಮಟ’, ‘ಜ್ಯೋತಿ ಬೆಳಗುತಿದೆಮತ್ತು ವಚನ ವಿರೂಪಾಕ್ಷಕೃತಿಗಳು ಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣ, ನಿಜಗುಣ ಶಿವಯೋಗಿ ಮತ್ತು ರಾಘವಾಂಕರನ್ನು ಕುರಿತದ್ದಾಗಿವೆ.  ನೆರಳಾಚೆಯ ಬದುಕುಸಿದ್ಧರಾಮನ ಚರಿತ್ರೆಯಾಗಿದ್ದು, ‘ಜಡದಲ್ಲಿ ಜಂಗಮಷಣ್ಮುಖ ಶಿವಯೋಗಿಗಳ ಚರಿತ್ರೆಯಾಗಿದೆ.  ಈ ಕೃತಿಗಳಲ್ಲಿ ಐತಿಹಾಸಿಕ ಪ್ರಜ್ಞೆ ಹಾಗೂ ಕಥಾನಕ ಗುಣಗಳೆರಡೂ ಒಂದಾಗಿ ಮೇಳೈಸಿ, ವಾಸ್ತವತೆ ಮತ್ತು ಓದುಗನಲ್ಲಿನ ಆಪ್ತತೆ ಇವೆರಡನ್ನೂ ಆತ್ಮೀಯವಾಗಿ ಬೆಸೆದಿದೆ. ಅವರ  ತಪೋರಂಗಕವನ ಸಂಕಲನವಾಗಿದ್ದು, ‘ಸಾಹಿತ್ಯ ಚಿತ್ರಗಳುಕಥಾ ಸಂಕಲನವಾಗಿದೆ. ವಿಧಿಪಂಜರಅವರ ಪ್ರಮುಖ ನಾಟಕ ಕೃತಿ.

ಇವೆಲ್ಲದರ ಪರಿಧಿಯಾಚೆಗೆ ಡಾ. ತಿಪ್ಪೇರುದ್ರಸ್ವಾಮಿ ಅವರ ಶ್ರೇಷ್ಠತೆ ಕಂಡುಬರುವುದು ಅವರ ವಿದ್ವತ್ಪೂರ್ಣ ಆಲೋಚನೆಗಳ ಕೇಂದ್ರವಾದ ಸಾಂಸ್ಕೃತಿಕ ಪರಂಪರೆ, ಪರಂಪರಾನುಗತ ಕಾವ್ಯ ಪ್ರವಹಿಕೆಯ  ಗುರುತಿಸುವಿಕೆಸಾಹಿತ್ಯ ವಿಮರ್ಶೆ ಮತ್ತು ವೀರಶೈವ ಧರ್ಮಗಳ ಅಧ್ಯಯನ ಇವುಗಳ ಅಭಿವ್ಯಕ್ತತೆಯಲ್ಲಿದೆ

ತಿಪ್ಪೇರುದ್ರಸ್ವಾಮಿಗಳ ಡಾಕ್ಟರೇಟ್ ಪ್ರಬಂಧವಾದ  ಶರಣರ ಅನುಭಾವ ಸಾಹಿತ್ಯಕೃತಿ ಶಿವಶಿರಣರ ಧಾರ್ಮಿಕ ಚಿಂತನೆಗಳ ಜೊತೆಗೆ ಸಾಹಿತ್ಯಕ ಮೌಲ್ಯಗಳಿಗೆ ಕೂಡಾ ದೃಷ್ಟಿಹಾಯಿಸಿದೆ.  ಅವರ ಮತ್ತೊಂದು ಕೃತಿ ವಚನದಲ್ಲಿ ವೀರಶೈವ ಧರ್ಮಧಾರ್ಮಿಕ ಮತ್ತು ಅಧ್ಯಾತ್ಮಿಕ ಚಿಂತನೆಗಳ ವ್ಯಾಖ್ಯಾನಗಳನ್ನೊಳಗೊಂಡಿದೆ. 

ತಿಪ್ಪೇರುದ್ರಸ್ವಾಮಿಗಳ ಮಹತ್ವದ ಕೃತಿಯಾದ ಕರ್ಣಾಟಕ ಸಂಸ್ಕೃತಿ ಸಮೀಕ್ಷೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವಕ್ಕೆ ಪಾತ್ರವಾಯಿತು.  ಕರ್ನಾಟಕದ ಸಮಗ್ರ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ನಿರೂಪಿಸಿರುವ ಈ ಕೃತಿ ಕನ್ನಡ ಸಾಹಿತ್ಯ ಕ್ಷೇತ್ರದ ಮಹತ್ವಪೂರ್ಣ ಕೃತಿಯೆನಿಸಿದೆ. 

ಶೂನ್ಯತತ್ವ ವಿಕಾಸ ಮತ್ತು ಶೂನ್ಯ ಸಂಪಾದನೆ’, ‘ಶರಣ ಅನುಭವ ಸಾಹಿತ್ಯ’, ‘ವಚನಗಳಲ್ಲಿ ವೀರಶೈವ ಧರ್ಮ’, ‘ಕರ್ನಾಟಕ ಸಂಸ್ಕೃತಿ ಸಮೀಕ್ಷೆ’, ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’, ‘ಚಾಮರಸ’, ಭೀಮಕವಿ’, ‘ಶ್ರೀ ಶರಣ ಚರಿತ ಮಾನಸ’, ‘ಅಮುಗಿ ದೇವಯ್ಯಗಳ ಸಾಂಗತ್ಯ’,  ‘ಸಿದ್ಧರಾಮ ಚರಿತೆ’, ‘ಬಸವೇಶ್ವರ ವಚನದೀಪಿಕೆಮುಂತಾದವು ಅವರ ಇನ್ನಿತರ ಮಹತ್ವದ ಕೃತಿಗಳಾಗಿವೆ.

ಇವಲ್ಲದೆ ತಿಪ್ಪೇರುದ್ರಸ್ವಾಮಿಯವರು ಮಕ್ಕಳಿಗಾಗಿ ಕನ್ನಡದ ಪ್ರಮುಖ ಕವಿಗಳ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಕೇಂದ್ರಸಾಹಿತ್ಯ ಅಕಾಡೆಮಿಯ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳಲ್ಲದೆ, ಕರ್ಣಾಟಕ ಸಾಹಿತ್ಯ ಅಕಾಡೆಮಿಯು ಅವರ ಜೀವಮಾನ ಸಾಧನೆಗಾಗಿ ಕೂಡ ಗೌರವ ಅರ್ಪಿಸಿದೆ.  ಡಾ. ತಿಪ್ಪೇರುದ್ರಸ್ವಾಮಿಯವರು 1994ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

ಆಧಾರ: ಸಾಲುದೀಪಗಳು ಮತ್ತು ವೆಬ್ ಅಂತರ್ಜಾಲದಲ್ಲಿರುವ ವಿವಿಧ ತಾಣಗಳು

ಚಿತ್ರಕೃಪೆ: ಮೋಹನ್ ವರ್ಣೇಕರ್Tag: Thipperudra Swamy

ಕಾಮೆಂಟ್‌ಗಳಿಲ್ಲ: