ಶನಿವಾರ, ಆಗಸ್ಟ್ 31, 2013

ರಾಘವೇಂದ್ರ ಖಾಸನೀಸ


ರಾಘವೇಂದ್ರ ಖಾಸನೀಸ

ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ರಾಘವೇಂದ್ರ ಖಾಸನೀಸರು  ವಿಜಾಪುರ ಜಿಲ್ಲೆಯ ಇಂಡಿ ಎಂಬಲ್ಲಿ  1933ರ ಮಾರ್ಚ್ 2ರಂದು, ನಾರಾಯಣ ಖಾಸನೀಸ ಕಮಲಾಬಾಯಿ ದಂಪತಿಗಳ ಮಗನಾಗಿ ಜನಿಸಿದರು. ತಮ್ಮ  ತಂದೆಯವರಿಂದ  ಆರ್ಥರ್ ಕಾನನ್‌ಡೈಲ್, ಶರ್ಲಾಕ್‌ ಹೋಮ್ಸ್ ಕಥೆಗಳನ್ನು ಚಿಕ್ಕವಯಸ್ಸಿನಿಂದಲೇ ಕೇಳುತ್ತಿದ್ದ ಇವರಲ್ಲಿ ಬಾಲ್ಯದಿಂದಲೇ   ಕಥೆಗಾರನೊಬ್ಬ ರೂಪಗೊಳ್ಳತೊಡಗಿದ್ದ.

ರಾಘವೇಂದ್ರ ಖಾಸನೀಸರು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೆ ಓದಿದ್ದು ವಿಜಾಪುರದಲ್ಲಿ.  ಅವರು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ತಿ.ತಾ.ಶರ್ಮರ ವಿಶ್ವಕರ್ನಾಟಕ ಪತ್ರಿಕೆಗೆ ಕಥೆ ಬರೆದು ಕಳುಹಿಸಿದಾಗ, ಅದು ಮಕ್ಕಳ ಕಥಾ ವಿಭಾಗದಲ್ಲಿ ಪ್ರಕಟಗೊಂಡಿತ್ತು.  ಕಥೆಯನ್ನು ಓದಿದ ಶಾಲೆಯ ಉಪಾಧ್ಯಾಯರುಗಳೂ ಬೆನ್ನು ತಟ್ಟಿದರು.  ಮುಂದೆ ಅವರು ಕಾಲೇಜಿಗೆ ಸೇರಿದ್ದು ಧಾರವಾಡದಲ್ಲಿ.  ಕಾಲೇಜಿನಲ್ಲಿ ಅವರಿಗೆ  ಪ್ರೊ. ವಿ.ಎಂ. ಇನಾಂದಾರ್‌, ಎಸ್.ಆರ್‌. ಮಳಗಿ, ಸ.ಸ. ಮಾಳವಾಡ ಮುಂತಾದ ಶ್ರೇಷ್ಠ ಗುರುವರ್ಯರ ಶಿಷ್ಯತ್ವ ಲಭಿಸಿತು. ಅಂದಿನ ದಿನಗಳಲ್ಲಿ ಅವರು ಇನಾಂದಾರರ ಸ್ವರ್ಗದಬಾಗಿಲು’, ಗೋಕಾಕರ ಸಮರಸವೇ ಜೀವನಕಾದಂಬರಿಗಳಿಗೆ  ವಿಮರ್ಶೆ ಬರೆದಿದ್ದರು. ಜೊತೆಗೆ ಅವರ ಹಲವಾರು ಕಥೆಗಳು ಓಲೇಟಿ ವಿ. ಗುಪ್ತ ಮತ್ತು ಡಿ.ಎಸ್. ರಾಮರಾವ್‌ರವರ ಕಥಾವಳಿ ಪತ್ರಿಕೆ ಮತ್ತು ಬೆಟಗೇರಿ ಕೃಷ್ಣಶರ್ಮರ ಜಯಂತಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು.

ರಾಘವೇಂದ್ರ ಖಾಸನೀಸರು ಬಿ.ಎ. ಪದವಿಯ ನಂತರದಲ್ಲಿಮುಂಬೈನಲ್ಲಿ ಇಂಗ್ಲಿಷ್ ಸ್ನಾತಕೋತ್ತರ  ಪದವಿ ಮತ್ತು ಗ್ರಂಥಾಲಯ ವಿಜ್ಞಾನದ ಡಿಪ್ಲೊಮಾ ಪದವಿಗಳನ್ನು ಗಳಿಸಿದರು.  ಅವರು ಮೊದಲು ಉದ್ಯೋಗ ಪ್ರಾರಂಭಿಸಿದ್ದು ಪುಣೆಯ ಎಸ್.ಪಿ. ಕಾಲೇಜಿನ ಗ್ರಂಥಾಲಯದಲ್ಲಿ. ಮುಂದೆ ವಲ್ಲಭ ವಿದ್ಯಾನಗರದ ಬಿರ್ಲಾ ಎಂಜನಿಯರಿಂಗ್ ಕಾಲೇಜಿನ ಗ್ರಂಥಾಲಯದಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ ನೇಮಕಗೊಂಡು 1991ರಲ್ಲಿ ನಿವೃತ್ತರಾದರು.

ಪುಣೆಯ ಎಸ್.ಪಿ.ಕಾಲೇಜಿನ ಗ್ರಂಥಾಲಯದಲ್ಲಿದ್ದ ದಿನಗಳಲ್ಲಿ ಮರಾಠಿ ಭಾಷೆ ಹಾಗೂ ಅಲ್ಲಿನ ಸಾಹಿತ್ಯವನ್ನು ಓದಿದರು. ಅನೇಕ ಬಂಗಾಳಿ ಕಥೆಗಳನ್ನೂ ಕನ್ನಡಕ್ಕೆ ತಂದರು.

ಖಾಸನೀಸರ ಮೊದಲ ಕಥಾಸಂಕಲನ ಖಾಸನೀಸರ ಕಥೆಗಳು’ 1984ರಲ್ಲಿ ಪ್ರಕಟಗೊಂಡಿತು. ಈ ಸಂಕಲನ ಕಥಾಸಕ್ತರ ಗಮನ ಸೆಳೆಯಿತು. ಅದೇ ವರ್ಷವೇ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಖಾಸನೀಸರ ಕಥೆಗಳುಕೃತಿಗೆ ಅತ್ಯುತ್ತಮ ಸೃಜನ ಶೀಲ ಕೃತಿ ಎಂದು ಪ್ರಶಸ್ತಿ ನೀಡಿ ಪುರಸ್ಕರಿಸಿತು. ಅವರ ಎರಡನೆಯ ಕಥಾ ಸಂಕಲನ ಬೇಡಿಕೊಂಡವರು’ 1989ರಲ್ಲಿ  ಪ್ರಕಟಗೊಂಡಿತು. 1995ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯು ಅವರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿತು. ಪ್ರಿಸಮ್‌ಬುಕ್ಸ್ ಪ್ರೈ.ಲಿ. ಬೆಂಗಳೂರು ಇವರು 2006ರಲ್ಲಿ ಖಾಸನೀಸರ ಸಮಗ್ರಕಥೆಗಳುಎಂದು ಪ್ರಕಟವಾಗಿರುವುದರಲ್ಲಿ ಕೇವಲ ಒಂಬತ್ತೇ ಕಥೆಗಳಿವೆ. 2011ರಲ್ಲಿ ಧಾರವಾಡದ ಮನೋಹರ ಗ್ರಂಥಮಾಲೆಯು ಖಾಸನೀಸರ ಎಲ್ಲ ಕಥೆಗಳನ್ನು ಸೇರಿಸಿ ಸಮಗ್ರ ಕಥೆಗಳನ್ನುಪ್ರಕಟಿಸಿದೆ.

ಖಾಸನೀಸರ ಅನೇಕ ಕಥೆಗಳು ಇತರ ಭಾಷೆಗಳಿಗೂ ಅನುವಾದಗೊಂಡಿದೆ. ಅವುಗಳಲ್ಲಿ ತಬ್ಬಲಿಗಳುಎಂಬ ಪ್ರಸಿದ್ಧ ಕಥೆಯು ORPHANS ಎಂಬ ಹೆಸರಿನಿಂದ ಡಾ. ವಿಕ್ರಮರಾಜ ಅರಸ್ ರವರು ಸಂಪಾದಿಸಿರುವ AN ANTHOLOGY OF KANNADA SHORT STORIES’  ಸಂಕಲನದಲ್ಲಿ ಸೇರಿದೆ. ಈ ಕಥೆಯು ಎಸ್.ದಿವಾಕರ್‌ ರವರು ಸಂಪಾದಿಸಿರುವ ಶತಮಾನದ ಸಣ್ಣಕಥೆಗಳು ಸಂಗ್ರಹದಲ್ಲಿಯೂ ಸೇರಿದೆ. ಹೀಗೂ ಇರಬಹುದು!ಎಂಬ ಕಥೆಯು ದೂರದರ್ಶನದ ಕಥೆಗಾರ ಮಾಲಿಕೆಯಲ್ಲಿ ಪ್ರಸಾರಗೊಂಡಿದೆ. ಇದಲ್ಲದೆ ಗ್ರಂಥಾಲಯಕ್ಕೆ ಸಂಬಂಧಿಸಿದ ಅನೇಕ ಬಿಡಿ ಬರಹಗಳೂ ಪ್ರಕಟವಾಗಿವೆ.

ಈ ಪ್ರಪಂಚದಲ್ಲಿ ನಡೆಯುವ ಘಟನಾವಳಿಗಳೆಲ್ಲವೂ ಪೂರ್ವ ನಿಯೋಜಿತವಾದದ್ದು, ಮನುಷ್ಯನ ಇಷ್ಟಾನಿಷ್ಟಗಳಿಗೆ ಇಲ್ಲಿ ಬೆಲೆಯೂ ಇಲ್ಲ. ನಡೆಯುವ ಘಟನೆಗಳಿಗೆ ಮೂಕ ಪ್ರೇಕ್ಷಕನಾಗಿ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೇ ವಿನಃ ಅನ್ಯಮಾರ್ಗವಿಲ್ಲಎಂಬುದು ಖಾಸನೀಸರ ಹಲವಾರು ಕಥೆಗಳಲ್ಲಿ ಕಾಣಬರುವ ಅಂಶ.

ಅತ್ಯಂತ ಯಶಸ್ವಿ ಕಥೆಗಳನ್ನು ಕನ್ನಡದ ಕಥಾಲೋಕಕ್ಕೆ ನೀಡಿದ ರಾಘವೇಂದ್ರ ಖಾಸನೀಸರು 2007ರ ಮಾರ್ಚ್ 19ರಂದು ಈ ಲೋಕವನ್ನಗಲಿದರು.  ತಮ್ಮ ಕಥೆಗಳ ಮೂಲಕ ಅವರು ಕನ್ನಡಿಗರ ಹೃದಯದಲ್ಲಿ ಚಿರವಿರಾಜಮಾನರಾಗಿದ್ದಾರೆ.

ಮಾಹಿತಿ ಆಧಾರ: ಕಣಜ


Tag: Raghavendr Khasanisa, Raghavendr Kasanisa

ಕಾಮೆಂಟ್‌ಗಳಿಲ್ಲ: