ಶುಕ್ರವಾರ, ಆಗಸ್ಟ್ 30, 2013

ಯುಗಾದಿ ನೆನಪುಗಳು


ಯುಗಾದಿ ನೆನಪುಗಳು


ನಾವು 'ನೆನಪು' ಎಂದಾಗಲೆಲ್ಲಾ  ಹೇಳುವುದೆಲ್ಲಾ ಹಳತನ್ನು ಕುರಿತೇ!  ಯುಗಾದಿ ಎಂದು ಹೊಸತನ ಹೇಳಬೇಕಾದರೆ ಕೂಡಾ ಹಳತೆಒಂದು ರೀತಿಯಲ್ಲಿ ನಮ್ಮ ಬದುಕೆಂಬುದು ಗೋಪಾಲ ಕೃಷ್ಣ ಅಡಿಗರು ಗುರುತಿಸುವಂತೆ   ವರ್ತಮಾನ ಪತ್ರಿಕೆಯ ತುಂಬಾ ಭೂತದ ಸುದ್ಧಿ" ಎಂಬ ತೆರನಾದ ಹಳೆಯದನ್ನು ಹೊಸ ಹೊಸತೋ ಎಂಬಂತೆ ಗುರುತಿಸಿಕೊಳ್ಳುವ ಜೀವನ. ಇದನ್ನು ಬೇಂದ್ರೆಯವರು ಸಹಾ ತಮ್ಮ ಯುಗಾದಿ ಕವನದಲ್ಲಿ ವ್ಯಕ್ತಪಡಿಸುತ್ತಾರೆ -  ಈ ಯುಗಾದಿ ಪ್ರತಿವರ್ಷವೂ ಬಂದು ಈ ಸಸ್ಯಪ್ರಪಂಚವನ್ನು ತನ್ನ ಮಾಂತ್ರಿಕ ಸ್ಪರ್ಶದಿಂದ ಹೊಸ ಹೊಸತನ್ನಾಗಿ ಮಾಡುತ್ತಿದೆಯಲ್ಲ, ಅದು  ತನ್ನ ಸ್ಪರ್ಶದಿಂದ ನಮ್ಮನ್ನೂ ಯಾಕೆ ಹೊಸ ಹೊಸತನ್ನಾಗಿ ಮಾಡಬಾರದು - ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ, ನಮಗೆ ಏಕೆ ಬಾರದೋ ಒಂದೆ ಒಂದು ಜನ್ಮದಲ್ಲಿ, ಒಂದೆ ಬಾಲ್ಯ ಒಂದೆ ಹರೆಯ ನಮಗದಷ್ಟೆ ಏತಕೆ?’ ನಿಸರ್ಗದ ಹಾಗೆ ಪ್ರತಿ ಯುಗಾದಿಯಲ್ಲೂ ಈ ಮನುಷ್ಯಜೀವಿತವೂ ನಿರಂತರ ಪರಿವರ್ತನೆಯಿಂದ ಹೊಸತಾಗಬಾರದು ಏಕೆಯುಗಾದಿಯೇನೋ  ಪ್ರತಿವರ್ಷವೂ ಬರುತ್ತದೆ. ಹೊಸ ವರುಷಕೆ ಹೊಸ ಹರುಷವನ್ನು ತರುತಿದೆ. ಆದರೆ ಈ ಯುಗಾದಿ ನಮ್ಮನಷ್ಟೆ ಮರೆತಿದೆ
ಈ ಎಳೆಯನ್ನು ಮತ್ತೊಂದು ರೀತಿಯಲ್ಲಿ ಗುರುತಿಸುವುದಾದರೆ  ನಮ್ಮ ಸ್ಮೃತಿಯಲ್ಲಿ  ಅಂತರ್ಗತವಾಗಿರುವ  ಎಳೆಗಳಿಗೆ ಸಂವೇದನೆ ಹುಡುಕುವುದಕ್ಕೆ ತಾನೇ, ನಾವು ಕೂಡಾ ಹೊಸತು ಎನ್ನುವುದು.  ಬದುಕೆಂಬ ನದಿ ಪ್ರವಾಹದಲ್ಲಿ ಯಾವುದು ಹೊಸತು, ಯಾವುದು ತಾನೇ  ಹಳತು.  ಅಂತೆಯೇ ನಾವು ಭ್ರಮಿಸುವ ಹೊಸತು ಎಂಬ ಹೊಸತನವೂ ಅಷ್ಟೆ.”  ಅಂತೆಯೇ ಕವಿ ಹೇಳುತ್ತಾರೆ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ”.  ನಮ್ಮ ಗುರುಗಳು ಮಾರ್ಮಿಕವಾಗಿ ಹೇಳುತ್ತಿದ್ದರು,  “ಜಪಾನಿಯರು ಏನೆನ್ನುತ್ತಾರೆ ಗೊತ್ತೆಬದುಕೆಂಬ ನದಿಗೆ ಜಯವಾಗಲಿ ಎನ್ನುತ್ತಾರೆ.  ಅದೇ ಅವರ ನಿತ್ಯ ಪ್ರಾರ್ಥನೆ”.  ನಮ್ಮ ಬದುಕೆಂಬ ಪ್ರವಾಹವನ್ನು ಆಗ್ಗಿಂದಾಗ್ಗೆ ಮುದವಾಗಿ ದೃಷ್ಟಿಸಿಕೊಳ್ಳುವುದೇ ಆದಿಯಿಂದ ಬಂದ ಯುಗ ಯುಗಗಳು ಕಳೆದರೂ ಮರೆಯಾಗದ ಯುಗಾದಿ ಹಬ್ಬ.    ಈ ಹಬ್ಬಗಳ ಸಂವೇದನೆ ಎಂಬುದೊಂದು ಇಲ್ಲದಿದ್ದರೆ ನಾವು ಎಲ್ಲೋ ಜರಡು ಜೀವಿಗಳಾಗಿಬಿಡುತ್ತಿದ್ದೆವೇನೋ ಅನಿಸುತ್ತದೆ.  ನಮಗೆ ಇಷ್ಟೊಂದು ಹಬ್ಬಗಳನ್ನು ಕರುಣಿಸಿ ನಮ್ಮ ಬಾಳನ್ನು ಹಸನು ಮಾಡಲು ಪ್ರಯತ್ನಿಸಿದ ನಮ್ಮ ಹಿರಿಯರಿಗೆ ನಾನು ಸಾಷ್ಟಾಂಗವೆರಗುತ್ತೇನೆ. 

ಯುಗಾದಿ ಅಂದರೆ ಅನೇಕ ನೆನಪುಗಳು ಮೂಡುತ್ತವೆ.  ತಮಿಳು ಸಂಪ್ರದಾಯದ ಅಯ್ಯಂಗಾರ್ ಆದರೂ ಕನ್ನಡ ನೆಲದಲ್ಲಿ ಬದುಕು ಸವೆಸಿದ ಕನ್ನಡ ಪಂಡಿತರಾದ ಅಪ್ಪ; ಮನೆಯ ತಮಿಳಲ್ಲಿ ಹುಟ್ಟಿ ಆಂಧ್ರದ ಊರಿನ ತೆಲುಗಿನಲ್ಲಿ ಮಿಂದರೂ ಕನ್ನಡದ ನೆಲದಲ್ಲಿ ಬೆವರು ಹರಿಸಿ ನೆರೆಹೊರೆಯಲ್ಲಿ ಪ್ರವಚನಗಾರ್ತಿ ಎನಿಸುವಷ್ಟು ಕನ್ನಡತಿಯಾಗಿ ಬೆಳೆದು, ಮಕ್ಕಳಿಗೆ ಕನ್ನಡ ಕಲಿಸಿದ ಅಮ್ಮ, ಮತ್ತು ಅಕ್ಕಪಕ್ಕದ ಆತ್ಮೀಯ ಕನ್ನಡಿಗ ಬಂಧುಗಳು ನಮಗೆ ಚಾಂದ್ರಮಾನ ಯುಗಾದಿಯನ್ನೇ ಹೆಚ್ಚು ಪ್ರಿಯವಾಗಿಸಿದ್ದರು. ಅಪ್ಪ ಶ್ರೀವೈಷ್ಣವ ಪದ್ಧತಿಯಲ್ಲಿ ಆರಾಧನೆ ಮಾಡಿ ಒಂಟಿಕೊಪ್ಪಲ್ ಪಂಚಾಗಕ್ಕೆ ಅರಿಷಿಣ ಹಚ್ಚಿ ತೀರ್ಥ ಕೊಟ್ಟು ಬೇವು ಬೆಲ್ಲ ಕೈಯಲ್ಲಿಟ್ಟು

ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ।
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ।।

ಹೇಳಿಸಿ, ಹಾ ಸ್ವಲ್ಪ ಬೇವು ಜಾಸ್ತಿ ಇರೋ ತರಹ ನುಂಗಿ ಅನ್ನುತ್ತಿದ್ದರು.  ಬದುಕಿನಲ್ಲಿ ಹೆಚ್ಚು ಕಷ್ಟಪಟ್ಟು ಬೇವನ್ನು ಸವಿದ ಅವರು ಮಕ್ಕಳಿಗೆ ಮತ್ತು ಸುತ್ತಲಿನ ಪರಿಸರಕ್ಕೆ ಹಂಚುತ್ತಿದ್ದ ಬೆಲ್ಲವನ್ನು ನೆನೆದು ಹೃದಯ ತುಂಬಿ ಬರುತ್ತದೆ.  ಅಮ್ಮ ಅಷ್ಟೊಂದು ಮಕ್ಕಳನ್ನು ಇಟ್ಟುಕೊಂಡು ಅಪ್ಪನ ಬಡ ಮೇಷ್ಟ್ರು ವೃತ್ತಿಯ ಸಂಭಳವನ್ನು ಬದುಕಿಗೆ ಸರಿದೂಗಿಸಲು ಎಷ್ಟು ಕಷ್ಟಪಡುತ್ತಿದ್ದಳೋ.  ಆದರೆ, ತಾನು ಹೊಸ ಸೀರೆ ತೆಗೆದುಕೊಳ್ಳಬೇಕು ಎಂದು ಎಂದೂ ಆಶಿಸದೆ, ಅದು ಹೇಗೋ ನಮ್ಮ ಬಟ್ಟೆ ಹೊಲೆಯುವ ಟೈಲರ್ ಬಳಿ ಕರೆದುಕೊಂಡು ಹೋಗಿ ನಮಗೆ ಬಟ್ಟೆ ಕೊಡಿಸುತ್ತಿದ್ದಳು.  ಅಂದಿನ ದಿನಗಳಲ್ಲಿ  ಸೀಮಿತ ಅವಧಿಯಲ್ಲಿ ಬರುತ್ತಿದ್ದ ನಲ್ಲಿ ನೀರಿಗೆ ವಠಾರದ  ಜನರ ಜೊತೆ ನಡೆಸಬೇಕಿದ್ದ ಪೈಪೋಟಿಯ ಹಿನ್ನೆಲೆಯಲ್ಲಿ  ಮಕ್ಕಳಿಗೆ ಎಣ್ಣೆ ನೀರು ತಪ್ಪದಿರಲು ತಾನು ರಾತ್ರಿ ಎಲ್ಲಾ ಸರಿಯಾಗಿ ನಿದ್ದೆ ಮಾಡದೆ ನೀರು ಹೊತ್ತು ತಂದು, ಹಂಡೆಯಲ್ಲಿ ನೀರು ಕಾಯಿಸಿ ಮೂರು ಗಂಟೆಯಿಂದ ಒಬ್ಬೊಬ್ಬರಿಗೇ ನೀರು ಹಾಕುತ್ತಿದ್ದಳು.  ನಂತರ ಬೆಳಿಗ್ಗೆ ಹತ್ತು ಗಂಟೆಗೆಲ್ಲಾ ಒಬ್ಬಟ್ಟಿನ ಊಟ.  ಪರೀಕ್ಷೆ ಮುಗಿದ ಸಂತಸ ಒಂದು ಕಡೆ, ಹೊಸ ಬಟ್ಟೆ ಹೊಸ ಉತ್ಸಾಹದ ವಾತಾವರಣ ಹೀಗೆ ಯುಗಾದಿ ಹಬ್ಬ ನಮಗೆ ಎಂದೆಂದೂ ಪ್ರಿಯವಾಗಿತ್ತು.  ಇಂದು ಯಾವಾಗಬೇಕಾದರೂ ಸಿಹಿ ಅಂಗಡಿಯಲ್ಲಿ ಹೋಟೆಲಿನಲ್ಲಿ  ಸಿಹಿ ಕೊಂಡು ತಿಂದು, ಬೇಕಾದಾಗ ಬಟ್ಟೆ ಬರೆ ಸಿಗುವವರಿಗೆ ಹಬ್ಬ ವಿಶೇಷ ಎನಿಸೀತೆ ಎಂದು ಸಂದೇಹವಿದೆ!  ಎಲ್ಲ ನಂಬಿಕೆ ಸಂದೇಹಗಳೆಲ್ಲಾ ನಮ್ಮ ಅನುಭವ ತಾನೇ. ಅಂದಿನ ವಿಶೇಷಗಳೆಲ್ಲಾ ಇಂದಿನ ಬದುಕಿನ ಅವಶೇಷಗಳಾಗಿ ನಡೆಯತೊಡಗಿವೆ.

ಅಂದಿನ ದಿನದಲ್ಲಿ ನಮ್ಮ ವಠಾರದಲ್ಲಿ ಕಾಯಿ ಹೋಳಿಗೆ ಮಾಡುತ್ತಿದ್ದ ಸುಬ್ಬಮ್ಮ ಎಂಬುವರು ನನ್ನ ಮನಸ್ಸಿನಲ್ಲಿ ಇಂದೂ ಅಗಾಧವಾಗಿ ನಿಂತಿದ್ದಾರೆ.  ಮೊದಲನೆ ಕಾರಣ ನಮ್ಮ ಅಯ್ಯಂಗಾರ್ ಮನೆಗಳಲ್ಲಿ ಮಾಡುತ್ತಿದ್ದದ್ದು ಹೂರಣದ ಒಬ್ಬಟ್ಟು.  ಯಾವಾಗಲೂ ನಮ್ಮಲ್ಲಿ ಯಾವುದು ಇರುವುದಿಲ್ಲವೋ ಅದರಲ್ಲೇ ತಾನೇ ನಮಗೆ ಆಸಕ್ತಿ.  ಹೀಗಾಗಿ ನಮಗೆ ಅಕ್ಕಪಕ್ಕದ ಮನೆಯ ಕಾಯಿ ಹೋಳಿಗೆ ಬಗ್ಗೆ ನಮಗೆ ಇನ್ನಿಲ್ಲದ ಪ್ರೀತಿ.  ನಾನು ನೆನೆಯುತ್ತಿರುವ ಈ ಸುಬ್ಬಮ್ಮ ಅವರಿಗೆ ಸಾಕಷ್ಟು ಪುತ್ರರು. ಈ ಸುಪುತ್ರರಿಗೆಲ್ಲಾ  ಅವರದ್ದೇ ಸಂಸಾರ ಇತ್ತು.   ಆ ಮಹಾತಾಯಿ ತನ್ನ ಮಕ್ಕಳನ್ನು ತನ್ನ ಅಡುಗೆ ಕೆಲಸದ ಸಾಮಾರ್ಥ್ಯದಿಂದಲೇ ಬೆಳೆಸಿದ್ದರು.  ಮುಂದೆ ಮಕ್ಕಳು ದೊಡ್ಡವರಾದ ಮೇಲೂ ಈ ಹಿರಿಯ ಜೀವ ಈ ರೀತಿ ಕಷ್ಟ ಪಡುವುದು ಬೇಡ ಎಂದು ಹೇಳುವಷ್ಟು ಆ ಮಕ್ಕಳು ಮತ್ತು ಆ ಮಕ್ಕಳ ಸಂಸಾರದವರು ಎಂದೂ ದೊಡ್ಡವರಾಗಲಿಲ್ಲವೇನೋ! 

ಈ ಮಹಾತಾಯಿ ಸುಬ್ಬಮ್ಮನವರು ಅದೆಷ್ಟೆಷ್ಟೋ ಒಬ್ಬಟ್ಟುಗಳನ್ನು ಮಾಡಿ ಗೊತ್ತಿರುವ ಹಲವಾರು ಮನೆಗಳಿಗೆ ತಮಗೆ ಬರಲಿರುವ ಚಿಕ್ಕ ಹಣಕ್ಕಾಗಿ ಕೊಡುತ್ತಿದ್ದರು.  ಆದರೆ ಆ ಪುಣ್ಯ ಜೀವಿ ತಾನು ಹಣ ಮಾಡಲು ಮಾತ್ರ ಆ ಒಬ್ಬಟ್ಟುಗಳನ್ನು ಮಾಡದೆ, ಸುತ್ತ ಮುತ್ತಲಿನ ಮಂದಿಗೆಲ್ಲಾ ಹಂಚುತ್ತಿದ್ದರು.  ನಾನು ಅವರಿಗೆ ಆಗಾಗ ಸಣ್ಣ ಪುಟ್ಟ ಸಾಮಾನು ಅಂಗಡಿಯಿಂದ ತಂದುಕೊಡುತ್ತಿದ್ದೆನಾದ್ದರಿಂದ ನನ್ನ ಬಗ್ಗೆ ವಿಶೇಷ ಪ್ರೀತಿ.  ಶ್ರೀಧರಾ ಬಾ ಇಲ್ಲಿ ಎಂದು ಅಕ್ಕರೆಯಿಂದ ಕರೆದುತನ್ನ ಸೊಸೆಗೆ ಸಾತು, ನಮ್ಮ ಶ್ರೀಧರನಿಗೆ ಎರಡು ಒಬ್ಬಟ್ಟು ಕೊಡುಎನ್ನುತ್ತಿದ್ದ ಆ ಮಹಾತಾಯಿ ಸುಬ್ಬಮ್ಮನ ಔದಾರ್ಯ ನೆನೆದು ಹೃದಯತುಂಬಿ ಬರುತ್ತದೆ.   ಅವರು ಬೇರೆಯವರಿಗೆ ಮಾರಲು ಮಾಡುತ್ತಿದ್ದ ಒಬ್ಬಟ್ಟು ಎಷ್ಟು, ಸುತ್ತಲಿನ ಮನೆಗಳಿಗೆ ಮತ್ತು ಹಲವು ದಂಡಪಿಂಡಗಳಿಗೆ ಹಂಚುತ್ತಿದ್ದ ಒಬ್ಬಟ್ಟು ಎಷ್ಟು ಮತ್ತು ನನ್ನಂತಹವನಿಗೆ ಪ್ರೀತಿ ಹಂಚಲು ಮಾಡುತ್ತಿದ್ದ ಒಬ್ಬಟ್ಟು ಎಷ್ಟು, ಆ ಹಿರಿಯ ಜೀವ ಮಾಡುತ್ತಿದ್ದ ಒಟ್ಟು ಒಬ್ಬಟ್ಟುಗಳ  ಸಂಖ್ಯೆ ಎಷ್ಟಿರಬಹುದು ಎಂದು ನೆನೆದರೆ ಇಂದೂ ಅಚ್ಚರಿಯಾಗುತ್ತದೆ.  ಅಂದಿನ ದಿನದಲ್ಲಿ ಇಂದಿನ ತರಹ ವಿಶೇಷ ಅಡುಗೆ ವ್ಯವಸ್ಥೆಗಳಿರಲಿಲ್ಲ, ಗ್ಯಾಸ್ ಇರಲಿಲ್ಲ.  ಸೌದೆ ಒಲೆಯಲ್ಲಿ ಇದನ್ನು ಮಾಡುತ್ತಿದ್ದರು ಎಂಬುದು ಅವರು ಎಷ್ಟು ದಿನ, ಎಷ್ಟು ಕಷ್ಟ ಪಡುತ್ತಿದ್ದಿರಬಹುದು ಎಂದು ನೆನೆದು ಅಚ್ಚರಿಯಾಗುತ್ತದೆ.  ಅಂದು ಆ ಮಹಾತಾಯಂದಿರು ಎಷ್ಟೆಷ್ಟು ಜನವಿದ್ದರೋ, ಈಗಲೂ ನಮ್ಮ ಬದುಕಿನಲ್ಲಿ ನಾವು ಕಂಡೂ ಕಾಣದಂತೆ ಹೀಗಿರುವವರು ನಿಷ್ಠೆಯಿಂದ ಕಷ್ಟಪಡುತ್ತಿರುವವರು ಎಷ್ಟೋ ಎಂದೆನಿಸುತ್ತದೆ.  ಆ ಸುಬ್ಬಮ್ಮನವರ ಹೋಳಿಗೆಯ ಅಮೃತದ ರುಚಿ ನಾನು ತಿಂದಿರುವ ಕಾಯಿ ಒಬ್ಬಟ್ಟುಗಳಲ್ಲೆಲ್ಲಾ ಹುಡುಕಿ ಪ್ರಯತ್ನಿಸಿದ್ದೇನೆ.  ಎಷ್ಟೇ ಸುವ್ಯವಸ್ಥಿತ ಪಾಕದಲ್ಲಿ ಮಿಂದರೂ ಆ ಸುಬ್ಬಮ್ಮನ ಹೃದಯ ವಾತ್ಸಲ್ಯದ ಸವಿ ಇನ್ನೆಲ್ಲಾದರೂ ಸಿಗುವುದುಂಟೆ!

ಇನ್ನು ಯುಗಾದಿಯೆಂದರೆ ನನಗೆ ಬುದ್ಧಿ ತಿಳಿದಾಗಿನಿಂದ ಕೇಳಿದ ಮೇಲೆ ಒಂದೆರಡು ಬಾರಿ ಒಕ್ಕಣಿಸಿದ  ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹಾಡು’.  ಕವಿ ಬೇಂದ್ರೆಯವರಂತೂ ಬದುಕಲ್ಲಿ ಕಷ್ಟದ ಬೆವುಂಡು ಎನ್ನಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆಎಂಬ ವಿಶಾಲ ಹೃದಯಿ.  ಅಂತಹ ದಿವ್ಯಹೃದಯಿ  ಅಲ್ಲದೆ ಬೇರೆ ಯಾರು ತಾನೇ ಇಂತಹ ಸೊಗಸಾದ ಯುಗ ಯುಗಾದಿಯ ಆಂತರ್ಯವನ್ನು ಕಟ್ಟಿ ಕೊಡಲು ಸಾಧ್ಯ. 

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ನಮ್ಮನಷ್ಟೆ ಮರೆತಿದೆ!

ಈ ಕವನದ ಸಿನಿಮಾ ಅಳವಡಿಕೆಯ ಹಾಡಿನ ಹಿನ್ನೆಲೆಯಲ್ಲಿ ಬರುವ ಟುಣ್, ಟುಣ್, ಟುಣುಣು, ಟುಮ್  ಎಂಬ ವಾದ್ಯ ಸಂಗೀತ ಕೂಡಾ ನಮ್ಮ ಹೃದಯಾಂತರಾಳವನ್ನು ಸೇರಿ ಹೋಗಿದೆ.  ಇನ್ನು ಆ ಸುಶ್ರಾವ್ಯ ಧ್ವನಿ ಎಸ್. ಜಾನಕಿಯಮ್ಮನವರ ಧ್ವನಿಯ ಬಗ್ಗೆ ಹೇಳಬೇಕೆಅದನ್ನು ಹಾಡಿ  ಕುಣಿದ ಲೀಲಾವತಿಯವರ ಬಗ್ಗೆ ನೆನೆಯದಿರಲು ಸಾಧ್ಯವೇ.

ನಮ್ಮ ಬದುಕಿನಲ್ಲಿ ಎಂದೆಂದೂ ಅಳಿಯದ ಆಂತರ್ಯ ಚೇತನದ ಆಳವನ್ನು ತಲುಪಿ, ಆ ಅಮೃತ ಗಂಗೆಯಲ್ಲಿ ತಳಿರಿನ ಬೇವನ್ನು ಪ್ರೋಕ್ಷಿಸಿ, ಅದಕ್ಕೆ ನಲ್ಮೆ ಎಂಬ ಬದುಕಿನ ಪಾಕವನ್ನು ಬೆರೆಸಿ, ಈ ವಿಶ್ವವೆಂಬ ಸುಂದರ ನಗರಿಯನ್ನು ನಿರಂತರ ಅರ್ಥೈಸಿ ಸೇವಿಸಲು ಪ್ರಯತ್ನಿಸೋಣ ಎಂಬ ಆಶಯದಲ್ಲಿ ಎಲ್ಲರಿಗೂ ಯುಗಾದಿಯ ಶುಭ ಕೋರುತ್ತೇನೆ.”  ನಮ್ಮೆಲ್ಲರ ಈ ಬಾಂಧವ್ಯ ನಿರಂತರ ನಲ್ಮೆಯಿಂದ ಕಂಗೊಳಿಸುತ್ತಿರಲಿ.


Tag: Ugadi

ಕಾಮೆಂಟ್‌ಗಳಿಲ್ಲ: