ಸೋಮವಾರ, ಆಗಸ್ಟ್ 26, 2013

ರತ್ನಮಾಲಾ ಪ್ರಕಾಶ್

ರತ್ನಮಾಲಾ ಪ್ರಕಾಶ್

ಕನ್ನಡ ಸುಗಮಸಂಗೀತ ಪ್ರಪಂಚದ ಒಂದು ಅನರ್ಘ್ಯ ರತ್ನವೆನಿಸಿರುವ ಮಹಾನ್ ಕಲಾವಿದೆ ಶ್ರೀಮತಿ ರತ್ನಮಾಲಾ ಪ್ರಕಾಶ್.   ಅವರ ಯಾವುದೇ ಗೀತಗಾಯನದಲ್ಲೂ ಕೇಳಿ ಬರುವ ಗೀತ ಸಾಹಿತ್ಯದ ಉಚ್ಚಾರ, ಭಾವ ಸ್ಪಷ್ಟತೆ, ನಾದ ಮಾಧುರ್ಯ, ಆಲಿಸುವ ಹೃದಯಕ್ಕೆ ತಲುಪುವ ಸ್ಪಂದನೆ  ಅಸಾಧಾರಣವಾದದ್ದು.  ಹೀಗಾಗಿ ರತ್ನಮಾಲಾ ಅವರ ಸಂಗೀತಗಳ ಒಂದು ಪ್ರಸಿದ್ಧ ಗುಚ್ಚಕ್ಕೆ ಇರುವ ಹೆಸರಾದ  ಭಾವ ರತ್ನಕ್ಕೆ ಅವರು ಅನ್ವರ್ಥವೆನಿಸುತ್ತಾರೆ.   ಇವೆಲ್ಲಕ್ಕೂ ಸುಂದರ ವಿನ್ಯಾಸದಂತಿರುವುದು  ಅವರ ಕಾಂತಿಯುಕ್ತ ಹಸನ್ಮುಖ.  ಒಂದು ರೀತಿಯಲ್ಲಿ ಇವೆಲ್ಲ ರತ್ನಮಾಲಾ ಅವರು ಮೂಡಿಬಂದಿರುವ ಪರಂಪರೆಯಲ್ಲಿಯೇ  ಹರಿದುಬಂದದ್ದು.

ರತ್ನಮಾಲಾ ಪ್ರಕಾಶ್ ಅವರು ಆಗಸ್ಟ್ 19, 1955ರಂದು ಪ್ರಸಿದ್ಧ ರುದ್ರಪಟ್ನಂ ಮನೆತನದಲ್ಲಿ  ಜನಿಸಿದರು.  ಅವರ ತಾತ ಕೃಷ್ಣಶಾಸ್ತ್ರಿಗಳು ಸಂಗೀತ, ಹರಿಕಥಾ ವಿದ್ವಾಂಸರು. ತಂದೆ ಸಂಗೀತ ಕಲಾನಿಧಿ ಪದ್ಮಭೂಷಣ ಆರ್.ಕೆ. ಶ್ರೀಕಂಠನ್, ದೊಡ್ಡಪ್ಪಂದಿರುಗಳಾದ ಆರ್.ಕೆ. ವೆಂಕಟರಾಮಾಶಾಸ್ತ್ರಿ, ಆರ್.ಕೆ. ರಾಮನಾಥನ್, ಆರ್.ಕೆ. ನಾರಾಯಣಸ್ವಾಮಿ, ಅಣ್ಣ ಆರ್. ಎಸ್. ರಮಾಕಾಂತ ಹೀಗೆ ಸಂಗೀತಜ್ಞರ ಪರಂಪರೆಯೇ ಅವರ ಮನೆತನದಲ್ಲಿದೆ.  ಅವರ ಪತಿ ಎಂ.ಎಸ್. ಪ್ರಕಾಶ್ ಗಮಕಿ. ದಾಸ ಪ್ರತಿಷ್ಠಾನದಲ್ಲಿ ಅಪರಿಮಿತ ಸೇವೆ ಸಲ್ಲಿಸಿದವರು.  ತಾಯಿ ಮೈತ್ರೇಯಿ ಸಂಗೀತಾಸಕ್ತರು.

ಚಿಕ್ಕಂದಿನಿಂದಲೇ  ತಂದೆ ಡಾ.  ಆರ್. ಕೆ. ಶ್ರೀಕಂಠನ್ ಅವರಿಂದಲೇ ಸಂಗೀತ ಪಾಠ ಪಡೆದ ರತ್ನಮಾಲಾ ಪ್ರಕಾಶರು ಮುಂದೆ  ಸ್ವಯಂ ಪ್ರತಿಭೆಯಿಂದ ಸುಗಮ ಸಂಗೀತದ ಮಹಾನ್ ತಾರೆಯಾದರು.   ಸೂಕ್ತ ಕಾಲದಲ್ಲಿ  ಅವರಿಗೆ ಮೈಸೂರು ಅನಂತಸ್ವಾಮಿಯವರ ಮಾರ್ಗದರ್ಶನ ದೊರೆಯಿತು.  ಆಕಾಶವಾಣಿ ಸ್ಪರ್ಧೆಗಳಲ್ಲಿ ಭಾವಗೀತೆ, ಭಕ್ತಿಗೀತೆ ವಿಭಾಗಳೆರಡರಲ್ಲೂ ಉನ್ನತ ಪ್ರಶಸ್ತಿ ಗಳಿಸಿ, ಮುಂದೆ ಆಕಾಶವಾಣಿ ದೂರದರ್ಶನಗಳ  ಉನ್ನತ ದರ್ಜೆಯ ಕಲಾವಿದರೆಂದು ಪರಿಗಣಿತರಾದರು.  ಮೈಸೂರು ಅನಂತಸ್ವಾಮಿ ಅವರ ಮೂಲಕ ಎಂ.ಎಸ್.ಐ.ಎಲ್ ಧ್ವನಿಸುರುಳಿಗಳ  ಹಾಡುಗಾರ್ತಿಯಾಗಿ ಪ್ರಸಿದ್ಧಿ ಪಡೆದರು.

ಸುಗಮ ಸಂಗೀತದ ದಿಗ್ಗಜರುಗಳಾದ ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ್, ಪದ್ಮಚರಣ್, ಎಚ್‌.ಕೆ. ನಾರಾಯಣ, ಎಚ್. ಆರ್. ಲೀಲಾವತಿ  ಮುಂತಾದವರ ನಿರ್ದೇಶನದಲ್ಲಿ ರತ್ನಮಾಲಾ ಅವರು ಅಸಂಖ್ಯಾತ ಹಾಡುಗಳನ್ನು ಹಾಡಿದ್ದಾರೆ.  ಕೆಂಗುಲಾಬಿ, ಮೈಸೂರು ಮಲ್ಲಿಗೆ, ಭಾವಸಂಗಮ, ನಿತ್ಯೋತ್ಸವ, ಅಂತಃಪುರಗೀತೆಗಳು, ಡಾ. ರಾಜ್‌ರೊಡನೆ ಹಾಡಿರುವ ಅನುರಾಗ, ಮಂಕುತಿಮ್ಮನ ಕಗ್ಗ; ಚೈತ್ರ, ರೂಪಸಿ, ಭಾವೋತ್ಸವ, ಕವಿತಾ, ಸ್ಪಂದನ, ನೆನಪಿನಾಳದಲ್ಲಿ, ನೀಲಾಂಬರಿ, ಅಣಿಮುತ್ತುಗಳು ಮುಂತಾದ ಐನೂರಕ್ಕೂ ಹೆಚ್ಚು ಕ್ಯಾಸೆಟ್‌ ಮತ್ತು ಸಿ.ಡಿ.ಗಳಲ್ಲಿ ಹಾಡಿ ಕನ್ನಡಿಗರ ಮನಗೆದ್ದ ಸಾಧನೆ ಅವರದು.  ಅವರ ಭಾವ ರತ್ನಸಂಗೀತ ಗುಚ್ಛದ ಸಿ.ಡಿ ಗಳಲ್ಲೇ 108 ಸುಂದರ ಗೀತೆಗಳಿವೆ.  ಚಲನಚಿತ್ರ ನಿರ್ದೇಶಕರಾದ ಟಿ.ಜಿ. ಲಿಂಗಪ್ಪ, ಹಂಸಲೇಖ, ರಾಜನ್‌ ನಾಗೇಂದ್ರ, ವಿಜಯ ಭಾಸ್ಕರ್, ಅಶ್ವತ್ಥ್-ವೈದಿ ಮುಂತಾದವರ ನಿರ್ದೇಶನದಲ್ಲಿ ಅವರು ಹಲವಾರು  ಗೀತೆಗಳನ್ನು ಹಾಡಿದ್ದಾರೆ.  ರಾಜ್ ಕುಮಾರ್, ಏಸುದಾಸ್, ಎಸ್ ಪಿ ಬಾಲಸುಬ್ರಮಣ್ಯಮ್ ಅವರುಗಳ ಜೊತೆಯಲ್ಲಿ  ಗುರಿ, ಒಂದು ಮುತ್ತಿನ ಕಥೆ, ಏಳು ಸುತ್ತಿನ ಕೋಟೆ, ಮೈಸೂರು ಮಲ್ಲಿಗೆ, ಕರಿಮಾಯಿ, ಕೆಂಡದ ಮಳೆ  ಮುಂತಾದ ಅನೇಕ  ಚಿತ್ರಗಳಿಗೆ ಹಾಡಿದ್ದಾರೆ.  ಪ್ರಭಾತ್ ಕಲಾವಿದರು ಸಂಸ್ಥೆಯ ಹಲವಾರು ರೂಪಕಗಳಿಗೆ ಸಹಾ ಹಾಡಿದ್ದಾರೆ. 

ರತ್ನ ಮಾಲಾ ಪ್ರಕಾಶ್ ಅವರು ಹಾಡಿರುವ ಗೀತೆಗಳನ್ನು ನೆನೆಯುವುದೂ ಸಹಾ ಭಾವಲೋಕದಲ್ಲಿನ ದಿವ್ಯಸಂಚಾರದ ಅನುಭಾವವನ್ನು ಮೂಡಿಸುವಂತದ್ದಾಗಿದೆ.  ಕರುಣಾಳು ಬಾ ಬೆಳಕೆ, ಬೃಂದಾವನಕೆ ಹಾಲನು ಮಾರಲು, ಯಾರವರು ಯಾರವರು, ಎದೆಯು ಮರಳಿ ತೊಳಲುತಿದೆ, ಯಾವ ಮೋಹನ ಮುರಳಿ ಕರೆಯಿತು, ಎದೆ ತುಂಬಿ ಹಾಡಿದೆನು ಅಂದು ನಾನು, ಏನೀ ಮಹಾನಂದವೇ, ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ, ನನ್ನ ಇನಿಯನ ನೆಲೆಯ ಬಲ್ಲೆಯೇನೆ, ಯಾವ ರಾಗಕೋ ಏಕೋ ನನ್ನೆದೆ ವೀಣೆ ಮಿಡಿಯುತ ನರಳಿದೆ, ರಾಯರು ಬಂದರು ಮಾವನ ಮನೆಗೆ, ಒಂದಿರುಳು ಕನಸಿನಲಿ, ಮೊದಲ ದಿನ ಮೌನ, ನೀನು ಮುಗಿಲು ನಾನು ನೆಲ, ಎಳೆ ಬೆಳದಿಂಗಳು ಮರದಡಿ ಬರೆದಿದೆ ನೆಳಲಿನ ಚಿತ್ತಾರ, ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ, ಬೆಣ್ಣೆ ಕದ್ದ ನಮ್ಮ ಕೃಷ್ಣ, ಜೋಗದ ಸಿರಿ ಬೆಳಕಿನಲ್ಲಿಈ ಹೃದಯವ ನಿನಗೆ ನೀಡಿದೆ ಒಲವೊಂದೆ ನಿನ್ನಿಂದ ಬಯಸಿದೆ, ನೋಡಿದ ಅವನು ಹೇಗೆ ನೋಡಿದ.....ಹೀಗೆ ಕನ್ನಡದ ಮಹಾನ್ ಕವಿಗಳ ಅಸಂಖ್ಯಾತ ಗೀತೆಗಳು ರತ್ನಮಾಲ ಅವರ ಧ್ವನಿಯಲ್ಲಿ ಮೋಹಕ ರತ್ನಗಳಾಗಿ ಕನ್ನಡ ಸಾಹಿತ್ಯ ಸಂಗೀತ ಪ್ರೇಮಿಗಳ ಹೃದಯಗಳಲ್ಲಿ ಆಪ್ತವಾದ ಹೊಂಗಿರಣ  ಚೆಲ್ಲಿವೆ.

ರತ್ನಮಾಲಾ ಅವರು ಸೋವಿಯತ್‌ ರಷ್ಯಾದಲ್ಲಿ ಭಾರತ ಉತ್ಸವದಲ್ಲಿ ಪಂ. ರವಿಶಂಕರ್ ತಂಡದಲ್ಲಿ ಹಾಡಿದ ಹೆಗ್ಗಳಿಕೆ ಗಳಿಸಿದ್ದಾರೆ.  ಸಿ ಅಶ್ವಥ್ ರತ್ನಮಾಲಾ ಮಾಲತಿ ಶರ್ಮ ಅವರು ಬಹುಕಾಲ ಕರ್ನಾಟಕದಾದ್ಯಂತ ಸಂಗೀತ ನೀಡಿದ್ದಾರೆ.  ತಮ್ಮ ನಾದಿನಿ ಮಾಲತಿ ಶರ್ಮ ಅವರ ಜೊತೆಗೂಡಿ ರಾಜ್ಯ, ದೇಶದ ವಿವಿದೆಡೆಯಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.

ರತ್ನಮಾಲಾ ಪ್ರಕಾಶ್ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗಂಗೂ ಬಾಯಿ ಹಾನಗಲ್ ಸ್ಮಾರಕ ಪ್ರಶಸ್ತಿ, ದೇಶ ವಿದೇಶಗಳಲ್ಲಿನ ವಿವಿಧ ಸಂಘ ಸಂಸ್ಥೆಗಳ ಪ್ರಶಸ್ತಿ  ಮುಂತಾದ ಹಲವಾರು  ಗೌರವಗಳು ಸಂದಿವೆ.  ಸದ್ಯದಲ್ಲೇ  ಅವರಿಗೆ  ಸುಗಮ  ಸಂಗೀತ  ಕ್ಷೇತ್ರದ  ಉನ್ನತ  ಪ್ರಶಸ್ತಿಯಾದ ಸಂತ  ಶಿಶುನಾಳ ಷರೀಫ ಪ್ರಶಸ್ತಿ  ಸಲ್ಲುತ್ತಿದೆ ಎಂಬ ಸುದ್ಧಿ  ಕನ್ನಡ ಸುಗಮ ಸಂಗೀತ  ಪ್ರೇಮಿಗಳಿಗೆ  ಅಪಾರ  ಸಂತಸ  ತಂದಿದೆ.


ಕನ್ನಡ ಸಾಂಸ್ಕೃತಿಕ ಲೋಕದ ಮಹಾನ್ ಗಾಯಕಿ ರತ್ನಮಾಲಾ ಅವರ ಸಾಧನೆಗಳು ನಿತ್ಯ ಉತ್ತುಂಗಕ್ಕೇರುತ್ತಿರಲಿ.  ಅವರ ಬದುಕು ಹಸನಾಗಿರಲಿ.  ಅವರಿಗೆ ಎಲ್ಲ ಗೌರವಗಳೂ ಸಿಗಲಿ ಎಂದು ಹಾರೈಸುತ್ತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಸಲ್ಲಿಸೋಣ.

Tag: Ratnamala Prakash

ಕಾಮೆಂಟ್‌ಗಳಿಲ್ಲ: