ಶುಕ್ರವಾರ, ಆಗಸ್ಟ್ 30, 2013

ಅಮರತ್ವ, ಅಗೋಚರ ಶಕ್ತಿ ಪಡೆದ ಸಿದ್ಧಯೋಗಿಗಳು

ಅಮರತ್ವ, ಅಗೋಚರ ಶಕ್ತಿ ಪಡೆದ ಸಿದ್ಧಯೋಗಿಗಳು
-ಸಿ. ಆರ್. ಸಿಂಹ

ಈ ಜಗತ್ತಿನಲ್ಲಿ ಎಂಥೆಂಥ ಅದ್ಭುತ ವಿಸ್ಮಯಗಳು ಒಂದಕ್ಕಿಂತ ಒಂದು ಕೌತುಕಮಯವಾದ್ದು.  ಮನುಷ್ಯ ಮಾತ್ರರ ಅಳವಿಗೆ ಮೀರಿದ್ದು.  ನಾವು ಯಾವುದನ್ನು ನಿಜ, ವಾಸ್ತವ ಅಂತ ಅಂದು ಕೊಂಡಿದ್ದೀವೋ ಅದನ್ನು ತಲೆಕೆಳಗು ಮಾಡಿ, ಬೆರಗು ಹುಟ್ಟಿಸುವಂಥ ಸಂಗತಿಗಳು ಎದುರಾಗುತ್ತವೆ.  ಆಗ ನಮ್ಮ ಪ್ರತಿಕ್ರಿಯೆ ಏನು?  ಒಪ್ಪುವುದೇ; ಇಲ್ಲ, ಬಿಡುವುದೇ ತಿಳಿಯೋದಿಲ್ಲ.  ನಂಬಲಿ ಬಿಡಲಿ, ಸಂಗತಿ ಭಾರಿ ರೋಚಕವಾಗಿ, Thrilling ಆಗಿಯಂತೂ ಇರುತ್ತದೆ.  ಈ ವಾರ ನಿಮಗೆಲ್ಲ ಒಂದಷ್ಟು Thrill ರೋಮಾಂಚನ!  ತಾವು ರೆಡೀನಾ?

ಕಳೆದ ವಾರ ನನ್ನ ಹೆಂಡತಿ ಯಥಾಪ್ರಕಾರ ಟಿ ವಿ ರಿಮೋಟ್ ಹಿಡಿದು ಚಾನೆಲ್ ಬದಲಿಸುತ್ತಾ ಇದ್ದಳು.  ಚಿತ್ರನಟ ರಜನೀಕಾಂತ್ ಕಂಡಕೂಡಲೆ ನಾನು, ಸ್ವಲ್ಪ ತಡೆಯಮ್ಮಾ ನೋಡೋಣ ಎಂದೆ.  ಅದೊಂದು ಚಲನಚಿತ್ರ ಸಮಾರಂಭ.  ರಜನೀಕಾಂತ್ ತೆಲುಗಿನಲ್ಲಿ ಮಾತಾಡುತ್ತಿದ್ದರು.  ಚಿರಂಜೀವಿ ಮುಂತಾದ ನಟರು, ನಿರ್ದೇಶಕರು ಇತ್ಯಾದಿ ಇತ್ಯಾದಿ ಸಭೆಯಲ್ಲಿ ರಜನೀಕಾಂತ್ ನಿರೂಪಿಸಿದ ಒಂದು ಸಂಗತಿ ಭಾರಿ ವಿಸ್ಮಯದ್ದು.

ಮೂರು ವರ್ಷ ‘ಇನ್ನು ಸಿನಿಮಾ ಸಾಕು’ ಅಂತ ಅಂದುಕೊಂಡು ಬಂದ ಚಿತ್ರವನ್ನೆಲ್ಲ ನಿರಾಕರಿಸಿದ್ದರಂತೆ.  ಅಮೆರಿಕದಲ್ಲಿ ಯಾರೋ ಸ್ವಾಮೀಜಿ ಬಳಿಯಲ್ಲಿ ನೂರು ದಿನ ಇದ್ದರು.  ಸ್ವಾಮೀಜಿ ರಜನೀಕಾಂತರಿಗೆ ಹೇಳಿದರು:  ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಧ್ಯೇಯ, Mission ಅಂತ ಇರುತ್ತೆ.  ನೀನು ನಟ, ಚಿತ್ರ ಮಾಡಬೇಕು.  ನನ್ನ ಆಧ್ಯಾತ್ಮ ಪ್ರವಚನ – ಎಂದರೆ ನೂರಿನ್ನೂರು ಜನ ಆಸಕ್ತರಿಗೆ ಅಷ್ಟೆ.  ನಿನ್ನ ಚಿತ್ರ ಅಂದರೆ ಕೋಟಿ ಜನಕ್ಕೆ ಮುಟ್ಟುತ್ತೆ.  ಒಂದು ಚಿತ್ರ ಮಾಡು.  ಅದರಲ್ಲಿ ನಮ್ಮ ಭಾರತದ ಆಧ್ಯಾತ್ಮ ವಿಚಾರಗಳನ್ನು, Spiritualismನೂ ಒಂದಷ್ಟು ಸೇರಿಸು.  ಜನಕ್ಕೆ ತಲುಪಲಿ.  ಸ್ವಾಮೀಜಿಯ ಮಾತು ರಜನೀಕಾಂತ್ ಮನಸ್ಸಿಗೆ ನಾಟಿತು.  ಅವರ ಸಲಹೆ ಮೇರೆಗೆ ಭಾರತಕ್ಕೆ ಮರಳಿ,  ಹಿಮಾಲಯದ ಒಬ್ಬ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.  ಈಗ ಬರುತ್ತದೆ ನೋಡಿ ವಿಸ್ಮಯದ ವಿಚಾರ.

ಹಿಮಾಲಯದ ಈ ಸ್ವಾಮೀಜಿ ಅವರ ವಯಸ್ಸು, ಸ್ವಲ್ಪ ಉಸಿರು ಬಿಗಿಹಿಡಿಯಿರಿ, ಎರಡು ಸಾವಿರ ವರ್ಷಕ್ಕೂ ಮಿಗಿಲು!  ಸ್ವಾಮೀಜಿ ಹೇಳಿದರಂತೆ – ಎರಡು ಸಾವಿರ ವರ್ಷ ಹಿಂದೆ ಜೀಸಸ್, ಅಂದರೆ, ಯೇಸುಕ್ರಿಸ್ತ ಸ್ವಲ್ಪ ಕಾಲ ಅವರ ಜೊತೆ ಕಳೆದಿದ್ದ – ಅಂತ.  ಸಾವಿರ ವರ್ಷಕ್ಕೂ ಮುಂದೆ ಆದಿ ಶಂಕರಾಚಾರ್ಯರಿಗೆ ಕ್ರಿಯಾ ಕುಂಡಲಿನೀ ಯೋಗವನ್ನು ಕಲಿಸಿದೆ.  ಕೆಲವು ಶತಮಾನಗಳ ಹಿಂದೆ ಸಂತ ಕಬೀರ್ ದಾಸ್ ಬಂದು ತಮ್ಮ ಜತೆಯಲ್ಲಿ ಹಲವು ತಿಂಗಳು ಇದ್ದ – ಎಂದರಂತೆ ಸ್ವಾಮೀಜಿ.  ರಜನೀಕಾಂತ್ ಸಭೆಯಲ್ಲಿ ಹೇಳಿದರು – ಎರಡು ಸಾವಿರಕ್ಕೂ ಮಿಗಿಲಾದ ಆಯುಷಿ ಸ್ವಾಮೀಜಿ ಇವತ್ತಿಗೂ ನೋಡಲು ಇಪ್ಪತ್ತೆರಡು ವರ್ಷದ ಯುವಕರಂತೆ ಇದ್ದಾರೆ.  ನಂತರ, ಸ್ವಲ್ಪ  ತಾಳಿ ಅಂತಂದು, ನಟ ಚಿರಂಜೀವಿ ಅವರ ಮುಂದೆ ಇಟ್ಟಿದ್ದ ಒಂದು ಫೋಟೋ ಎತ್ತಿ ಹಿಡಿದರು.  ಕ್ಯಾಮೆರಾ ಭಾವಚಿತ್ರವನ್ನು ಸೆರೆಹಿಡಿಯಿತು.  ನೀಳವಾದ ಮುಖದ ಸ್ವಾಮೀಜಿ, ಉದ್ದಕೇಶದ, ಸ್ನಿಗ್ಧ ಸೌಂದರ್ಯದ, ಯುವಕರೇ. ಕೊಂಚ ಹೆಣ್ಣಿನಂತೆ ಕೋಮಲ ಮುಖಭಾವ.  ತೇಜಸ್ವಿಯಾದ,  ಆದರೆ ಅಪೂರ್ವ ಶಾಂತಿ ಸೂಸುವ ಕಣ್ಣುಗಳು.  ನಟ ಚಿರಂಜೀವಿ ಕೂಡಾ ಅವರನ್ನು ಕಂಡಿದ್ದಾರಂತೆ.  ಚಿರಂಜೀವಿ ಎಂಬ ಹೆಸರು ಆ ಸ್ವಾಮೀಜಿಗೇ ಸರಿಯಾಗಿದೆ.  ಈಗ ನಮ್ಮ ನಂಬಿಕೆಗೇ ಸವಾಲು.  ಸ್ವಾಮೀಜಿ ಚಿರಂಜೀವಿಯೇ?  ಸಂಗತಿ ಎಂಥ ವಿಸ್ಮಯ, ನಂಬಿದರೇ ನಂಬಿ ಬಿಟ್ಟರೆ ಬಿಡಿ – ಅನ್ನುವಂಥ ಪ್ರಸಂಗ.  ಏನಂತೀರಿ?  ನಂತರ ನಾನು ಈ ಸಂಗತಿ ಕುರಿತು ಮನೋಜ ಎಂಬ ಯುವಕನೊಂದಿಗೆ ಮಾತಾಡಿದೆ.  ಅವನು ಹೇಳಿದ್ದು ಇದು:

ಯೋಗಶಾಸ್ತ್ರದಲ್ಲಿ ಕುಂಡಲಿನೀ ಸಿದ್ಧಿ ಎಂಬುದು ಮಹತ್ವದ್ದು.  ಅದಕ್ಕೆ ಮುಂದಿನದು ಮತ್ತಷ್ಟು ದಿವ್ಯವಾದ್ದು.  ಶಿರೋಭಾಗದಲ್ಲಿ, ಬ್ರಹ್ಮರಂಧ್ರದ ಅಡಿಯಲ್ಲಿ ಒಂದು ಅತಿಸೂಕ್ಷ್ಮ ಗ್ರಂಥಿ ಇದೆ.  ಆಕಾರದಲ್ಲಿ ಮಾವಿನಕಾಯಿಯಂತೆ.  ಅದಕ್ಕೆಂದೇ ಹೆಸರು ಆಮ್ರನಾಡಿ.  ಯೋಗ ಸಾಧಕ ಕುಂಡಲಿನೀ ಶಕ್ತಿಯನ್ನು ಉದ್ದೀಪಿಸಿ, ಅದರ ಒತ್ತಡವನ್ನು ಆಮ್ರನಾಡಿಯ ಮೇಲೆ ಕೆಂದ್ರೀಕರಿಸಬೇಕು.  ಆಗ ಅದು ಒತ್ತಲ್ಪಟ್ಟ್ಟು ಹಿಂಡಿದಂತಾಗಿ, ಒಂದು ಬಗೆಯ ಸ್ರಾವ, ಎರಡೂ ಹುಬ್ಬಿನ ಮಧ್ಯದಲ್ಲಿ ಆಚೆ ಜಿನುಗುತ್ತದೆ.  ಅದು ಅಮೃತಕ್ಕೆ ಸಮಾನ.  ಕೈಯಲ್ಲಿ ಮುಟ್ಟುವಂತಿಲ್ಲ.  ಯೋಗಿಯು ತನ್ನ ನಾಲಗೆಯನ್ನು ನಿಡಿದಾಗಿ ಚಾಚಿ , ಭ್ರೂಮಧ್ಯದಿಂದ ಅಮೃತವನ್ನು ಸವರಿ ಹೀರಿಕೊಳ್ಳಬೇಕು.  ಪೂರ್ಣ ಸಾಧನೆಗೆ ಈ ಕ್ರಮದ ಅನೇಕ ಮಂಡಲಗಳು, ಸಿದ್ಧಿ ಆಗಿಬಿಟ್ಟರೆ ಅಮೃತತ್ವ.  ಅಲ್ಲಿಂದಾಚೆಗೇ ಹಸಿವಿಲ್ಲ ನೀರಡಿಕೆಯಿಲ್ಲ.  ದೈಹಿಕ ಕ್ರಿಯೆಗಳೂ ಬೇಕಿಲ್ಲ.  ಮುಪ್ಪೂ ಇಲ್ಲ.  ಚಿರಂಜೀವಿತ್ವ, ಜೀವನ್ಮುಕ್ತ ಸ್ಥಿತಿ.  ಶತಮಾನಗಳಾಗಲಿ, ಯೋಗಿಯ ಆತ್ಮ ತನಗೆ ಬೇಕೆನಿಸಿದಾಗ ಈ ದೇಹವನ್ನು ತ್ಯಜಿಸಬಲ್ಲದು.  ಈ ಸಿದ್ಧಿಯ ಸಾಧಕರು ಕೋಟಿಗೊಬ್ಬರು ಅಷ್ಟೆ.

ಇದೆಂಥ ಅದ್ಬುತ ಸಿದ್ಧಿ.  ರಜನೀಕಾಂತರಿಗೆ ದೊರಕಿದ ಆ ಹಿಮಾಲಯದ ಸ್ವಾಮೀಜಿ ಇಂಥ ಒಬ್ಬ ಸಿದ್ಧಪುರುಷ ಇರಬಹುದೇ?  ಹೇಗೆ ಹೇಳುವುದು?  ನಮ್ಮಂಥ ಸಾಮಾನ್ಯರ ಪ್ರಜ್ಞಾಪರಿಧಿಯ ಆಚೆಗಿನ ಸಮಾಚಾರ ಇದು.

ನನ್ನ ತಾತ ಒಂದು ಅದ್ಭುತ ಸಂಗತಿ ಹೇಳಿದ್ದರು:  ಅವರು ಲಾಯರ್.  ಅಲಹಾಬಾದಿನಲ್ಲಿ ಮೋತಿಲಾಲ್ ನೆಹರೂ ಬಳಿ ಜೂನಿಯರ್.  ಹೇಮಂತ ಋತು.  ಕೊರೆಯುವ ಚಳಿ.  ಆದರೂ ತಾತ ಬ್ರಾಹ್ಮೀ ಮುಹೂರ್ತದಲ್ಲಿ ಪ್ರಯಾಗದಲ್ಲಿ ಸ್ನಾನಕ್ಕೆ ಹೋದರು.  ದಡದಲ್ಲಿ ಒಬ್ಬ ಸ್ವಾಮೀಜಿ ಯೋಗಮುದ್ರೆಯಲ್ಲಿ.  ತಾತ ಸ್ನಾನ ಮುಗಿಸಿ ಆತನ ಬಳಿಯಲ್ಲೇ ಸುಮ್ಮನೆ ನಿಂತರು.  ಯೋಗಿ ಕಣ್ತೆರೆದ.  ತಾತ ಆತನೊಂದಿಗೆ ಹಿಂದಿಯಲ್ಲಿ ಮಾತುಕತೆಗೆ ಇಳಿದರು.  ಆತನ ಸಿದ್ಧಿಗಳನ್ನು ಅರಿಯುವ ತವಕ ಇವರಿಗೆ.  ಪರೀಕ್ಷೆ ಮಾಡು ಅಂದ ಯೋಗಿ.  ಇವರು ತನಗೆ ಒಂದು ಬೊಗಸೆ ಮಲ್ಲಿಗೆ ಹೂವು ಕೊಡು ಅಂದರು.  ಯೋಗಿ ದುರುಗುಟ್ಟಿ ನೋಡಿದ.  ಮಲ್ಲಿಗೆ ಬಿಡುವ ಕಾಲವಲ್ಲ ಅದು.  ಸಮಾಧಿಸ್ಥಿತಿಗೆ ಹೋದ.  ನಿಮಿಷಗಳು ಯುಗದಂತೆ ಕಳೆದವು.  ಗಂಗಾತಟಾಕದಲ್ಲಿ ಮಂಜು ಕವಿದ ಮುಂಜಾನೆಯಲ್ಲಿ ತಾತ ಗಡಗಡ ನಡುಗುತ್ತ ನಿಂತೇ ಇದ್ದರು.  ಯೋಗಿ ಕಣ್ತೆರೆದು ಕೈ ಅರಳಿಸಿದ.  ಆಗತಾನೆ ಅರಳಿದ ಮಲ್ಲಿಗೆ ಹೂವುಗಳು ಅವನ ಬೊಗಸೆಯ ತುಂಬ.  ಹೇಳಿದ, ಮಲ್ಲಿಗೆ ಇಡೀ ಭಾರತದಲ್ಲೆಲ್ಲೂ ಇರಲಿಲ್ಲ.  ನಾಕು ಸಾವಿರ ಮೈಲಿ ಆಚೆಯ ದ್ವೀಪವೊಂದರಲ್ಲಿ ಕಂಡೆ,  ಆ ಕಾಲದಲ್ಲೂ ಅರಳಿದ್ದ ಮಲ್ಲಿಗೆ, ಬಿಡಿಸಿ ತಂದೆ.  ತಗೋ ಎಂದ.  ಮಲ್ಲಿಗೆಯ ಕಂಪು ಗಂಗೆಯ ದಂಡೆಯಲ್ಲಿ.  ಯೋಗಿ ಕೊಂಚ ಸಿಟ್ಟಿನಿಂದಲೇ ಹೇಳಿದ – ಇಂತ ಪರೀಕ್ಷೇನಾ ನೀ ಮಾಡೋದು?  ತಾತ ಅವನಿಗೆ ಅಡ್ಡಬಿದ್ದು ಅರಳಿದ ಮಲ್ಲಿಗೆಯನ್ನು ಮನೆಗೆ ಕೊಂಡೊಯ್ದರು.  ಯೋಗಸಿದ್ಧನ ಕೈಗುಣವೋ ಏನೋ ಎರಡು ತಿಂಗಳಾದರೂ ಮಲ್ಲಿಗೆ ಬಾಡಲಿಲ್ಲ.

ಇದೂ ಅಷ್ಟೆ.  ನಂಬಿದರೆ ನಂಬಿ ಬಿಟ್ಟರೆ ಬಿಡಿ ಅನ್ನುವಂಥ ಅದ್ಭುತ ಸಂಗತಿ.  ಯೋಗಿಯ ಅಂಥ ಪಯಣಕ್ಕೆ Astral Travel (ವ್ಯೋಮ ಪಯಣ), ಆತ್ಮ ಸಂಚಾರ ಅನ್ನುತ್ತಾರೆ.  ಸಾಧ್ಯವೇ?  ನಮ್ಮ ಅಳವಿಗೆ ನಿಲುಕಿದ್ದು ಮಾತ್ರ ಸತ್ಯ ಎಂಬ ಹಟವೂ ಸಹ ನಮ್ಮ ಮೂಢನಂಬಿಕೆ ಇರಬಹುದೆ?  ಇಂಥ ಪ್ರಶ್ನೆಗಳಿಗೇ ಸವಾಲು ಈ ವಿಸ್ಮಯ ಸಂಗತಿಗಳು.

ನನಗೆ ಆಪ್ತರೂ, ಹಿರಿಯ ಮಿತ್ರರೂ ಆಗಿದ್ದ ವೈಯೆನ್ಕೆ ಅವರಿಗೆ ಅಂಬರೀಷ ವರ್ಮ ಎಂಬ ಸಿದ್ಧಪುರುಷರ ಸಂಪರ್ಕ ಇತ್ತು.  ಬೆಂಗಳೂರಿನಲ್ಲಿ ಈಗಿನ ಸರ್ ಸಿ ವಿ ರಾಮನಗರದಲ್ಲಿ ವರ್ಮ ಅವರ ಮನೆ ಇತ್ತು.  ಅವರೂ ಆಗಾಗ್ಗೆ Astral Travel ಕೈಗೊಳ್ಳುತ್ತಿದ್ದರಂತೆ.  ಒಮ್ಮೆ ವರ್ಮ ಮನೆಯವರಿಗೆ ಹೇಳದರು:  ನಾನು ಕೋಣೆ ಒಳಗೆ ಹೋಗ್ತೇನೆ.  ಹೊರಗೂ ಬೀಗ ಹಾಕಿಬಿಡಿ.  45ದಿನ ಬಿಟ್ಟು ಬಾಗಿಲು ತೆಗೆಯಿರಿ.  ವರ್ಮ ಒಳಗೆ ಯೋಗ ಸಮಾಧಿಗೆ ಸಂದರು.  ನಲವತ್ತೈದು ದಿನದ ನಂತರ ಬೀಗ ತೆಗೆದರೆ, ಕೋಣೆಯ ತುಂಬೆಲ್ಲ ಅಲೌಕಿಕ ಸುಗಂಧ.  ಅಪೂರ್ವ ಕಳೆಯ, ನಸುನಗೆಯ ವರ್ಮ.  ಅವರು ಮನೆಯವರಿಗೆ ಹೇಳಿದರು;  ಸಪ್ತಋಷಿ ಮಂಡಲಕ್ಕೆ ಹೋಗಿ ಬಂದೆ.  ಋಷಿಗಳು ಸಭೆಗೆ ಕರೆದಿದ್ದರು.  ಒಂದು ಕೆಲಸ ವಹಿಸಿದ್ದಾರೆ.  ಮುಂದಿನ ಸೂರ್ಯಗ್ರಹಣದ ಸಂದರ್ಭದಲ್ಲಿ ಕರ್ನಾಟಕದ ಪಶ್ಚಿಮ ತೀರದ ಒಂದು ಪುಣ್ಯಕ್ಷೇತ್ರದ ಆತ್ಮಶಕ್ತಿಯನ್ನು ಕೊಂಡೊಯ್ದು ಭಾರತದ ಪೂರ್ವ ತೀರದ ಪುರಿ ಜಗನ್ನಾಥ ಕ್ಷೇತ್ರದಲ್ಲಿ ಸ್ಥಾಪಿಸಬೇಕಾಗಿದೆ.

ಪ್ರಿಯ ಓದುಗರೆ,

ವೈಯೆನ್ಕೆ ಮತ್ತು ನಾನೂ ಸಹ ನಂತರದ ಸೂರ್ಯಗ್ರಹಣದ ಪಥವನ್ನು ಗಮನಿಸಿದೆವು.  ಅದು ಅರಬ್ಬಿ ಸಮುದ್ರ ತೀರದ ಕ್ಷೇತ್ರದಿಂದ ಹಾಯ್ದು ವಕ್ರಾಕಾರವಾಗಿ, ಪುರಿ ಕ್ಷೇತ್ರ ತಟ್ಟಿ, ನಂತರ ಬಂಗಾಳ, ಮುಂದೆ ಚೀನಾದ ಮಾರ್ಗ!  ಒಂದಂತೂ ನಿಜ.  ಆ ನಂತರ ನಮ್ಮ ಕ್ಷೇತ್ರದ ಮಹಿಮೆಯಂತೂ ಈಗಿನ ವರ್ಷಗಳಲ್ಲಿ ಮಂಕಾಗಿದೆ.

ಈ ಜಗತ್ತಿನಲ್ಲಿ ವಿಸ್ಮಯಗಳಿಗೆ ಕೊರತೆ ಇಲ್ಲ.  ನಂಬೋದು ಬಿಡೋದು ನಮ್ಮ ಪಾಡು, ಏನಂತೀರಿ?

(ಕೃಪೆ:  ಇದು ಸಿ. ಆರ್ ಸಿಂಹರ ಅಂಕಣಗಳ ಸಂಗ್ರಹ ‘ನಿಮ್ಮ ಸಿಮ್ಮ’ ಪುಸ್ತಕದಲ್ಲಿ ದಿನಾಂಕ ೧೬ ಆಗಸ್ಟ್ ೨೦೦೨ರ ದಿನಾಂಕದಡಿಯಲ್ಲಿ ಬಿಂಬಿತವಾದ ಲೇಖನ)

ವಿಷಯ ಸೂಚನೆ:  ಇಂತಹ ಸಂಗತಿಗಳು  ಪರಮಹಂಸ ಯೋಗಾನಂದರ ಪ್ರಸಿದ್ಧ ಪುಸ್ತಕ 'ಯೋಗಿಯೋಬ್ಬರ ಆತ್ಮಕಥೆ (Autobiography Yogi)' ಉಲ್ಲೇಖಗೊಂಡಿವೆ.

Tag: Agochara Shakti, Yogis

ಕಾಮೆಂಟ್‌ಗಳಿಲ್ಲ: