ಶನಿವಾರ, ಆಗಸ್ಟ್ 31, 2013

ಮೊರಾರ್ಜಿ ದೇಸಾಯಿ

ಮೊರಾರ್ಜಿ ದೇಸಾಯಿ

ನಾಲ್ಕು ವರ್ಷಕ್ಕೊಮ್ಮೆ ಹುಟ್ಟಿದ ಹಬ್ಬ ಆಚರಿಸುವವರು ವಿರಳ.  ಫೆಬ್ರುವರಿ 29ರಂದು ಜನಿಸಿದವರು ನಾಲ್ಕು ವರ್ಷಕ್ಕೊಮ್ಮೆ ತಾನೇ ಹುಟ್ಟು ಹಬ್ಬ ಆಚರಿಸಬೇಕು.  ಇಂತಹ ವಿರಳರಲ್ಲಿ ಪ್ರಖ್ಯಾತರಾದವರು ಇಂದಿನ ರಾಜಕಾರಣದಲ್ಲಿ  ಊಹಿಸಲಸಾಧ್ಯವಾದ ನೈತಿಕ ವ್ಯಕ್ತಿತ್ವ, ಶಿಸ್ತು, ಸಂಯಮ, ವಿದ್ವತ್ತು, ನಿಷ್ಠುರವಾದಿತ್ವ, ನೂರರ ವಯಸ್ಸಿನಲ್ಲೂ ಚಟುವಟಿಕೆಯಿಂದಿದ್ದ ಆರೋಗ್ಯವಂತ, ಆಡಳಿತದಲ್ಲಿ ಚುರುಕು ಮೂಡಿಸಿದಾತ, ದೇಶಸೇವೆಗಾಗಿ ಲಾಭದಾಯಕ ಹುದ್ದೆ ತೊರೆದು ಹಲವಾರು ಬಾರಿ ಸೆರೆವಾಸ ಅನುಭವಿಸಿದ ರಾಷ್ಟ್ರಭಕ್ತ, ಅಪ್ರತಿಮ ಗಾಂಧೀವಾದಿ, ಸಮಾಜ ಸೇವಕ, ಸುಧಾರಕಕಾಂಗ್ರೆಸ್ಸೇತರ ಪ್ರಥಮ ಪ್ರಧಾನಿ ಹೀಗೆ ಹಲವಾರು ವಿಶಿಷ್ಟತೆಗಳ ಮೇರುಶಿಖರದಂತಿದ್ದ ವ್ಯಕ್ತಿ ಮೊರಾರ್ಜಿ ದೇಸಾಯಿ ಅವರು.

ಫೆಬ್ರುವರಿ 29, 1896ರ ವರ್ಷದಲ್ಲಿ ಗುಜರಾತಿನ ಭಡೇಲಿ ಎಂಬಲ್ಲಿ ಜನಿಸಿದ ಮೊರಾರ್ಜಿ ದೇಸಾಯಿ ಗುಜರಾತಿನ ವಿವಿಧ ಊರುಗಳಲ್ಲಿ ಶಿಕ್ಷಣ ನಡೆಸಿ ಮುಂಬೈನಲ್ಲಿ ಪದವಿಪಡೆದು 1924ರ ವರ್ಷದಲ್ಲಿ ಇಂಡಿಯನ್ ಸಿವಿಲ್ ಸರ್ವೀಸಸ್ ಸೇರಿದರು. ಬ್ರಿಟಿಷರ ವಿರುದ್ಧದ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲೋಸುಗವಾಗಿ ಈ ಲಾಭದಾಯಕ ಹುದ್ದೆಯನ್ನು ತ್ಯಜಿಸಿದ ಮೊರಾರ್ಜಿ ದೇಸಾಯಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ರೀತಿಯ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಆ ಕಾಲದ ಉತ್ತಮ ಸಂಘಟನಕಾರ, ನೇತಾರ, ಶಿಸ್ತಿನ ಆಡಳಿತಗಾರರೆಂದು ಪ್ರಸಿದ್ಧಿ ಪಡೆದರು.  ಹಲವಾರು ಬಾರಿ ಸೆರೆವಾಸ ಅನುಭವಿಸಿದರು.  1934 ಮತ್ತು 1937ರ ಬಾಂಬೆ ಪ್ರೆಸಿಡೆನ್ಸಿ ಚುನಾವಣೆಗಳಲ್ಲಿ ಜಯಗಳಿಸಿದ ಮೊರಾರ್ಜಿಯವರು ಆ ಸರ್ಕಾರದ ರೆವಿನ್ಯೂ ಸಚಿವರಾಗಿಯೂ, ಗೃಹಖಾತೆಯ ಸಚಿವರಾಗಿಯೂ ಸೇವೆ ಸಲ್ಲಿಸಿದರು.  ಸರ್ಧಾರ್ ಪಟೇಲರು ಮೊರಾರ್ಜಿಯವರನ್ನು ಕೈರಾದಲ್ಲಿನ ರೈತಸಮುದಾಯದೊಡನೆ ಮಾತುಕತೆಗಳಿಗೆ ನಿಯೋಜಿಸಿದ್ದು ಆ ಫಲಪ್ರದ ಮಾತುಕತೆಗಳ ದೆಸೆಯಿಂದಾಗಿ  ವಿಶ್ವಪ್ರಸಿದ್ಧವಾದ ಅಮುಲ್ಸಹಕಾರ ಸಂಘಟನೆ ಉದಯವಾಯಿತು. 

ಸ್ವಾತಂತ್ರ್ಯಾನಂತರದಲ್ಲಿ 1952ರ ವರ್ಷದಲ್ಲಿ ಮೊರಾರ್ಜಿಯವರು ಮುಂಬೈ ರಾಜ್ಯದ ಮುಖ್ಯಮಂತ್ರಿಯಾದರು.  ಮಹಾರಾಷ್ಟ್ರವು ಪ್ರತ್ಯೇಕ ರಾಜ್ಯವಾಗಬೇಕೆಂದು ಸಂಯುಕ್ತ ಮಹಾರಾಷ್ಟ್ರ ಸಮಿತಿಯು ಹೋರಾಟ ನಡೆಸುತ್ತಿದ್ದ ದಿನಗಳಲ್ಲಿ ಆಡಳಿತದಲ್ಲಿ ಅತ್ಯಂತ ಕಟ್ಟುನಿಟ್ಟಿನ ವ್ಯಕ್ತಿಯಾಗಿದ್ದ ಮೊರಾರ್ಜಿಯವರು ಚಳುವಳಿಯನ್ನು ಹತ್ತಿಕ್ಕಲು ನೀಡಿದ ಸುಗ್ರೀವಾಜ್ಞೆಯ ದೆಸೆಯಿಂದಾಗಿ ಪೋಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಜನರು ಜೀವಕಳೆದುಕೊಂಡದ್ದು ಮಹಾರಾಷ್ಟ್ರ ರಾಜ್ಯದ  ಉದಯಕ್ಕೆ ನಾಂದಿಹಾಡಿತು.      

ಕೇಂದ್ರ ಸಂಪುಟದಲ್ಲಿ ಗೃಹ ಮಂತ್ರಿಗಳಾದ ಮೊರಾರ್ಜಿಯವರಿಗೆ ಗೃಹಖಾತೆ ಎಂಬುದು ಕೇವಲ ಬಾಹ್ಯಾಚರಣೆಯ ರಕ್ಷಣಾ  ವ್ಯವಸ್ಥೆ ಮಾತ್ರವಾಗಿರಲಿಲ್ಲ.  ಅವರಿಗೆ ದೇಶದ ನೈತಿಕ ಹಿತರಕ್ಷಣೆಯ ನಿಲುವು ಕೂಡಾ ಪ್ರಮುಖವಾಗಿತ್ತು.   ಚಲನಚಿತ್ರ ಮತ್ತು ಪ್ರಚಾರ ಮಾಧ್ಯಮಗಳಲ್ಲಿ ಎಲ್ಲ ತರಹದ ಅಶ್ಲೀಲತೆಗಳನ್ನೂ ಅವರು ನಿರ್ಬಂಧಿಸಿದ್ದರು.  ಮೊರಾರ್ಜಿಯವರು ಗಾಂಧೀವಾದಿಯಾಗಿ, ಸಾಮಾಜಿಕ ಹಿತಚಿಂತನೆಗಳಿಗೆ ಬದ್ಧರಾಗಿದ್ದರಾದರೂ ವ್ಯಾಪಾರಾಭಿವೃದ್ಧಿ ಮತ್ತು ಮಾರುಕಟ್ಟೆಯ ಸುಧಾರಣೆಗಳ ಕಡೆಗೆ ಕೂಡಾ ಒಲವುಳ್ಳವರಾಗಿದ್ದು ನೆಹರೂ ಅವರ ಕೆಂದ್ರೀಕೃತ ವಹಿವಾಟು ನಿರ್ಬಂಧಗಳ ನೀತಿಗೆ ಅವರು ವಿಮುಖರಾಗಿದ್ದರು.    

ಕಾಂಗ್ರೆಸ್ ವಲಯದಲ್ಲಿ ನಿರಂತರವಾಗಿ ನಾಯಕತ್ವದಲ್ಲಿ ಮೇಲೇರುತ್ತಿದ್ದು ನೆಹರೂ ಮತ್ತವರ ಸಂಗಾತಿಗಳಿಗೆ ಬಿಸಿ ತುಪ್ಪವಾಗಿದ್ದವರು ಮೊರಾರ್ಜಿ ದೇಸಾಯಿ.  ನೆಹರೂ ಅವರ ಆರೋಗ್ಯ ಕ್ಷೀಣಿಸುತ್ತಿದ್ದ ದಿನಗಳಲ್ಲಿ ನೆಹರೂ ಅವರ ನಂತರದಲ್ಲಿ ಮೊರಾರ್ಜಿಯವರೇ ಪ್ರಧಾನಿ ಎಂಬ ನಂಬಿಕೆ ಅಂದಿನ ದಿನಗಳಲ್ಲಿ ಪ್ರಬಲವಾಗಿತ್ತು.  ಹೀಗಿದ್ದೂ ನೆಹರೂ ಅವರ ನಿಧನದ ಸಮಯದಲ್ಲಿ ನೆಹರೂವಾದೀಯರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾದರು.  ಹೀಗಿದ್ದೂ ಯಾವುದೇ ಭಿನ್ನಮತ ತೋರದ ಮೊರಾರ್ಜಿಯವರು ಲಾಲ್ ಬಹದ್ದೂರ್ ಶಾಸ್ತ್ರಿಯವರೊಂದಿಗೆ ಸಹಮತದಲ್ಲೇ ಕಾರ್ಯನಿರ್ವಹಿಸಿದರು.  ಶಾಸ್ತ್ರಿಗಳು ನಿಧನರಾದಾಗ ನೆಹರೂ ವಂಶಪಾರಂಪರ್ಯಕ್ಕೆ ತಲೆಬಾಗಿದ ಕಾಂಗ್ರೆಸ್ಸಿಗರು ದೇಸಾಯಿಯವರನ್ನು ಸೋಲಿಸಿ ಇಂದಿರಾಗಾಂಧಿ ಅವರಿಗೆ ಪಟ್ಟ ನೀಡಿದರು.  ಇಂದಿರಾ ಗಾಂಧಿಯವರ ಸಂಪುಟದಲ್ಲಿ ಮೊರಾರ್ಜಿಯವರು ಉಪಪ್ರಧಾನಿಯಾಗಿಹಣಕಾಸು ಮಂತ್ರಿಗಳಾಗಿ 1967ರಿಂದ 1969ರವರೆಗೆ ಕಾರ್ಯ ನಿರ್ವಹಿಸಿದರು. 

ಮುಂದೆ ಇಂದಿರಾಗಾಂಧಿ ಅವರು ಆಡಳಿತ ನಿರ್ವಹಿಸಿದ ರೀತಿಯನ್ನು ಅಧ್ಯಯಿಸ ಬಲ್ಲವರಿಗೆ ಇದು ಚೆನ್ನಾಗಿ ಅರಿವಾದೀತು.  ಪ್ರಾರಂಭದಿಂದಲೇ ಸರ್ವಾಧಿಕಾರಿಯ ಸಕಲಗುಣಗಳನ್ನೂ ಬಹಿರಂಗವಾಗಿ ಮೂಡಿಸಿಕೊಂಡ ಇಂದಿರಾಗಾಂಧಿಯವರಿಗೆ ಮೊರಾರ್ಜಿ ಅಂತಹ ನಿಷ್ಠುರವಾದಿ, ಶ್ರದ್ಧಾವಂತ, ತನ್ನ ಆತ್ಮಸಾಕ್ಷಿಗೆ ಒಗ್ಗುವಂತೆ ಕೆಲಸಮಾಡುವವ  ಮತ್ತು ಅವೆಲ್ಲಕ್ಕೂ ಮಿಗಿಲಾಗಿ ತನ್ನ ಸ್ಥಾನದ ಬಗ್ಗೆ ಆಸಕ್ತಿ ತೋರಿಸಿದ್ದ ಒಬ್ಬ ವ್ಯಕ್ತಿಯನ್ನು ಜೊತೆಗಿರಿಸಿಕೊಳ್ಳುವುದು ಸಾಧ್ಯವಿರಲಿಲ್ಲ.  ರಾಷ್ಟ್ರಪತಿ ಆಯ್ಕೆಯಲ್ಲಿ ನಡೆದ ಆಟ, ಬ್ಯಾಂಕುಗಳ ರಾಷ್ಟ್ರೀಕರಣದಂತಹ ಸೈದ್ಧಾಂತಿಕ ಭೇದ ನಿರ್ಮಾಣದ ಸನ್ನಿವೇಶಗಳನ್ನು ಸೃಷ್ಟಿಸಿದ ಇಂದಿರಾಗಾಂಧಿಕಾಂಗ್ರೆಸ್ ಅನ್ನು ಇಬ್ಬಾಗಿಸಿ  ತಮ್ಮ ಮಾತಿಗೆ ಸಹಮತ ಇಲ್ಲದವರನ್ನು ಕೈತೊಳೆದುಕೊಂಡರು.

ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಿಸಿ ಪ್ರಜಾಪ್ರಭುತ್ವಕ್ಕೆ ಕಳಂಕ ತರುವಲ್ಲಿ ಮಾಡಿದ ಪ್ರಪ್ರಥಮ ಕೆಲಸವೆಂದರೆ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ ಅಂತಹ ನಾಯಕರನ್ನು ಸೆರೆಗೆ ಹಾಕಿದ್ದು.  ಜಯಪ್ರಕಾಶ್ ನಾರಾಯಣರ ಶ್ರಮದ ಪರಿಣಾಮವಾಗಿ ಜನತಾ ಪಕ್ಷ ಉದಯಗೊಂಡು ಇಂದಿರಾಗಾಂಧಿಯವರ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋಲುಂಡಾಗ ಮೊರಾರ್ಜಿ ದೇಸಾಯಿ ಕಡೆಗೂ ಭಾರತದ ಪ್ರಧಾನಿಯಾದರು. 

ಅಂತರರಾಷ್ಟ್ರೀಯಮಟ್ಟದಲ್ಲಿ ಪಾಕಿಸ್ಥಾನವನ್ನು ಪ್ರಥಮವಾಗಿ ಸ್ನೇಹದೆಡೆಗೆ ಮನಸ್ಸು ಮಾಡುವಂತಹ ಪ್ರೇರೇಪಣೆ ತಂದದ್ದು, ಚೀನಾದೊಂದಿಗೆ ಬಾಂಧವ್ಯ ಸುಧಾರಣೆ, ಅಮೆರಿಕ ದೇಶದೊಂದಿಗೆ ಗಾಯಗೊಂಡಿದ್ದ ಸ್ನೇಹಕ್ಕೆ ಪುನಃಚೇತನ; ಮತ್ತೆಂದೂ ಭಾರತದಲ್ಲಿ ತುರ್ತುಪರಿಸ್ಥಿತಿ ಬಾರದೆ ಇರುವಂತಹ ಕಾನೂನುಗಳ ಸೃಷ್ಟಿ; ರೇಶನ್ ಎಂಬ ಪಡಿತರ ವ್ಯವಸ್ಥೆಯಡಿಯಲ್ಲಿ ಕೃತಕ ಅಭಾವ ಸೃಷ್ಟಿ ಮಾಡಿ ಭ್ರಷ್ಟಾಚಾರದ ಪರಮಾವಧಿಯನ್ನು ಸೃಷ್ಟಿಸಿದ್ದ ಕಾಂಗ್ರೆಸ್ಸಿನ ವ್ಯವಸ್ಥೆಯನ್ನು ಕಿತ್ತುಹಾಕಿ ಮುಕ್ತ ಮಾರುಕಟ್ಟೆಯಲ್ಲಿ ಹಿಂದೆಂದೂ ಕಾಣದಂತೆ ಸಕ್ಕರೆ ಮತ್ತಿತರ ಆಹಾರ ಪದಾರ್ಥಗಳು, ಇಂಧನಗಳು ಕಡಿಮೆ ಬೆಲೆಗೆ ಸಿಗುವಂತೆ ಮಾಡಿದ ನಿರ್ಧಾರ; ಐನೂರು ಮತ್ತು ಸಾವಿರ ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದು ಕಪ್ಪುಹಣ ಸಂಗ್ರಹಣೆಯನ್ನು ಬಹಳಷ್ಟು ಮಟ್ಟಿಗೆ ನಿವಾರಿಸಿದ್ದು; ರೈಲ್ವೇ ಕ್ಷೇತ್ರದಲ್ಲಿನ ಸೇವೆಯಲ್ಲಿ ದಕ್ಷತೆ ಮತ್ತು ಸೇವಾಗುಣಗಳನ್ನು ಅಭಿವೃದ್ಧಿಪಡಿಸಿ ಹೊಸ ವ್ಯವಸ್ಥೆ ಮತ್ತು ಚಿಂತನೆಗಳನ್ನು ಸೃಷ್ಟಿಸಿದ್ದು; ಗುಡಿಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳು ದೊಡ್ಡ ಉದ್ಯಮಗಳಿಗೆ ಪೂರಕವಾಗಿ ಸೇವೆ ಸಲ್ಲಿಸುವಂತಹ ವ್ಯವಸ್ಥೆ ನಿರ್ಮಿಸಿದ್ದು ಮುಂತಾದ ಮಹತ್ವದ ಕಾರ್ಯಗಳು ಮೊರಾರ್ಜಿಯವರ ಆಡಳಿತದಲ್ಲಿ ನಡೆದವು.  ಎಲ್ಲ ತರಹದ ಆಷಾಡಭೂತಿಗಳನ್ನೂ ದೂರವಿರಿಸಿದ್ದ ಮೊರಾರ್ಜಿ ದೇಸಾಯಿ ಅವರು ಧಾರ್ಮಿಕ ಹೆಸರಿನಲ್ಲಿ ಟ್ರಸ್ಟುಗಳನ್ನು ನಡೆಸಿ ಹಣದೋಚುತ್ತಿದ್ದವರ ಮೇಲೂ ತೆರಿಗೆ ವಿಧಿಸಲು ಹಿಂದೆ ನೋಡಲಿಲ್ಲ. 

ಅಮೆರಿಕದ ಜಿಮ್ಮಿ ಕಾರ್ಟರ್ ಅವರೊಂದಿಗೆ ಸ್ನೇಹ ಹೊಂದಿದ್ದಾಗ್ಯೂ  ಯುರೇನಿಯಂ ಮತ್ತು ಇತರ ಅವಶ್ಯಕತೆಗಳನ್ನು ಪೂರೈಸಲು ಬಂದ ಅಮೆರಿಕ ನಾವು ನಿಮ್ಮ ವ್ಯವಸ್ಥೆಗಳನ್ನು ಕಾಣಬಯಸುತ್ತೇವೆ ಎಂದು ಹಿಂಬಾಗಿಲಲ್ಲಿ ನಿಯಂತ್ರಣ ಹೇರಬಂದಾಗ ಮುಲಾಜಿಲ್ಲದೆ ನಿನ್ನ ಪಾಡಿಗೆ ನೀನಿರು, ನಿನ್ನ ಸಹಾಯ ನನಗೆ ಬೇಕಿಲ್ಲ ಎಂದದ್ದು; ನಾನು ಯಾರಿಗಾದರೂ ಸತ್ಯನಿಷ್ಠವಾಗಿ ಹೇಳುತ್ತೇನೆ ನಾವು ಪರಮಾಣು ಅಸ್ತ್ರ ನಿರ್ಮಿಸುವುದಿಲ್ಲ ಎಂದದ್ದು ಇವೆಲ್ಲ ಮುರಾರ್ಜಿಯವರ ನೇರತನಕ್ಕೆ ಪೂರಕವಂತಿದ್ದವು.  ಇಂದಿರಾಗಾಂಧಿ ಸೃಷ್ಟಿಸಿದ್ಧ Research and Analysis Wing (R&AW) ಬೇಹುಗಾರಿಕಾ ವ್ಯವಸ್ಥೆಯನ್ನು ಮುಚ್ಚಿಸಿ ಭಾರತೀಯ ಕುತಂತ್ರ ರೀತಿನೀತಿಗಳಿಗೆ ಬಾಗಿಲು ಹಾಕಿ ಅಪಾರವಾದ ಹಣ ಉಳಿತಾಯ ಮಾಡಿದರು.   ದುರದೃಷ್ಟವಶಾತ್  ಜನತಾಪಕ್ಷದಲ್ಲಿದ್ದ ವಿವಿಧ ವೈರುಧ್ಯಗಳ ವ್ಯಕ್ತಿಗಳಿಗೆ ಮೊರಾರ್ಜಿಯಂತಹ ನಿಷ್ಠುರವಾದಿಯನ್ನು ತಡೆದುಕೊಳ್ಳಲು ಶಕ್ಯವಿರಲಿಲ್ಲ.  ತಾವು ಪ್ರಧಾನಿ ಆಗಬೇಕೆಂದು ಬಯಸಿದ್ದ ಚರಣ್ ಸಿಂಗ್, ರಾಜ್ ನಾರಾಯಣ್, ಜಗಜೀವನ ರಾಮ್ ಹಾಗೂ ಇನ್ನಿತರ ಬಣಗಳು ದಿನಂಪ್ರತಿ ಬೀದಿಯಲ್ಲಿ ಕಚ್ಚಾಡತೊಡಗಿದ್ದವು.  ಬಹುಗುಣ ಅವರು ಮೊರಾರ್ಜಿಯವರನ್ನು ಬಹಿರಂಗವಾಗಿ  ನಮ್ಮ ಪ್ರಧಾನಿ ಪ್ರತೀಬಾರಿ ಬಾಯಿಬಿಟ್ಟಾಗಲೂ ನಾವು ಮಿಲಿಯಗಟ್ಟಲೆ ಮತ ಕಳೆದುಕೊಳ್ಳುತ್ತಿದ್ದೇವೆಎಂದು ಟೀಕಿಸಿದ್ದರು.  ಮೊರಾರ್ಜಿ ಅವರ ನೇತೃತ್ವದಲ್ಲಿ ಸ್ವಾರ್ಥ ಚಿಂತಿತ ರಾಜಕಾರಣಿಗಳಿಗೆ ಸ್ವಹಿತ ಸಾಧಿಸುವುದು ಸಾಧ್ಯವೇ ಇರಲಿಲ್ಲ.     ಹೀಗಾಗಿ 1979ರ ವರ್ಷದಲ್ಲಿ ಅವರ  ಸರ್ಕಾರ ಪತನಗೊಂಡು ದೇಶ ಮತ್ತೊಮ್ಮೆ ಕಾಂಗ್ರೆಸ್ ತನಕ್ಕೆ ಮರಳಿತು.   


ಮುಂದೆ 1980ರ ಚುನಾವಣೆಯಲ್ಲಿ  ಮೊರಾರ್ಜಿಯವರು ಜನತಾಪಕ್ಷದ ಪರ ಚುನಾವಣಾ ಪ್ರಚಾರ ನಡೆಸಿದರೂ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.  ಮಹಾತ್ಮಗಾಂಧಿಯವರು ಸ್ಥಾಪಿಸಿದ್ದ ಗುಜರಾತ್ ವಿದ್ಯಾಪೀಠದ ಉಪಕುಲಪತಿಗಳಾಗಿದ್ದ ಮೊರಾರ್ಜಿಯವರು ಪ್ರಧಾನಿಯಾಗಿದ್ದ ದಿನಗಳಲ್ಲೂ ಅಲ್ಲಿನ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.  ಸ್ವಮೂತ್ರಪಾನದಿಂದಾಗಿ ತಮ್ಮ ಆರೋಗ್ಯ ಸುಧಾರಣೆ ಆದ  ವಿಷಯದಲ್ಲಿ ಅವರು ಖುಷ್ವಂತ್ ಸಿಂಗ್ ಅವರೊಡನೆ ಹೇಳಿದ್ದರೆಂಬ ಮಾತು ಹಲವು ಕೋಲಾಹಲ ಚಿಂತನೆಗಳನ್ನು ಪ್ರವರ್ತಿಸಿತ್ತು.  ಆದರೆ ಅವರು ಶತಾಯುಷಿಗಳಾಗಿ ಸುದೀರ್ಘಕಾಲ ಉತ್ತಮ ಆರೋಗ್ಯದಿಂದ ಶುಚಿಯಾದ ಜೀವನ ನಡೆಸಿದರು ಎಂಬ ಬಗ್ಗೆ ಎರಡು ಮಾತಿಲ್ಲ.   ಅವರು ಪ್ರಧಾನಿಯಾಗಿದ್ದಾಗ ಅವರಿಗೆ ಸುಮಾರು ಎಂಭತ್ತೊಂದು  ವರ್ಷ.   ಆ ಸಂದರ್ಭ ಒಮ್ಮೆ ಅವರು ಚಲಿಸುತ್ತಿದ್ದ ಪುಟ್ಟ ವಿಮಾನ ಅಪಘಾತಕ್ಕೊಳಗಾದ ಸಂದರ್ಭದಲ್ಲಿ  ಸುಮಾರು ಎತ್ತರದಿಂದ ಕೆಳಕ್ಕೆ ಧುಮುಕಿ ಹಲವು ಕಿಲೋಮೀಟರುಗಳ ದೂರ ನಡೆದು ಒಂದು ಹಳ್ಳಿಯನ್ನು ಸೇರಿ ನಾನು ಮೊರಾರ್ಜಿ ಎಂದು ಹಳ್ಳಿಗರಿಗೆ ಪರಿಚಯಿಸಿಕೊಂಡಿದ್ದು ಅಂದಿನ ದಿನಗಳಲ್ಲಿ ಬಹುದೊಡ್ಡ ಸುದ್ಧಿ ಎನಿಸಿತ್ತು.   ಸಮಾಜಸೇವೆ, ಸಮಾಜ ಸುಧಾರಣೆ, ಸರಳ ಜೀವನ, ಶುಚಿಯಾದ ಬದುಕು, ಶ್ರೇಷ್ಠ ಚಿಂತನೆಗಳು ಅವರ ಬದುಕಿನ ಒಡನಾಡಿಯಾಗಿದ್ದವು.  ಮೊರಾರ್ಜಿ ದೇಸಾಯಿ ಸರ್ಕಾರ ಹೆಚ್ಚು ಬಾಳಲಿಲ್ಲ ಎಂಬುವವರಿದ್ದಾರೆ.  ಆದರೆ, ರಾಜಕೀಯ, ಅಧಿಕಾರಗಳಲ್ಲಿದ್ದರೂ ಮೊರಾರ್ಜಿ ದೇಸಾಯಿ ಅವರಂತೆ ಶುಭ್ರರಾಗಿ ಬಾಳಿದವರು ಚರಿತ್ರೆಯಲ್ಲಿ ತುಂಬಾ ಕಡಿಮೆ ಎಂಬುದನ್ನು ಯಾರೂ ಅಲ್ಲಗೆಳೆಯಲಾರರು.

Tag: Morarji Desai

ಕಾಮೆಂಟ್‌ಗಳಿಲ್ಲ: