ಶುಕ್ರವಾರ, ಆಗಸ್ಟ್ 30, 2013

ಪಿ.ಬಿ.ಶ್ರೀನಿವಾಸ್

ಪಿ.ಬಿ.ಶ್ರೀನಿವಾಸ್ 

ನಮ್ಮ ಪ್ರಿಯ ಗಾಯಕ ಪಿ.ಬಿ. ಶ್ರೀನಿವಾಸ್ ಅವರು ಇಂದು ನಿಧನರಾಗಿದ್ದಾರೆ ಎಂದು ಕೇಳಿ ತುಂಬಾ ದುಃಖವಾಯಿತು.  

1930ರಲ್ಲಿ ಜನಿಸಿ ವೃದ್ಧರಾಗಿದ್ದರೂ ಅವರ ಧ್ವನಿಯಲ್ಲಿ ಇತ್ತೀಚಿನವರೆವಿಗೂ ಸೊಗಸಿನ ಸೊಗಡು, ಮೊನಚು, ತಿರುವುಗಳು ಸ್ಪಷ್ಟವಾಗಿ ಮಧುರವಾಗಿದ್ದವು.  ಎರಡು  ವರ್ಷದ ಹಿಂದೆ  ಗಾಯಕ ಮನು ಅವರು ನಡೆಸಿಕೊಡುವ ತಮಿಳು ಚಾನೆಲ್ಲಿನ ಸಂದರ್ಶನದಲ್ಲಿ ಅವರ ಬದುಕಿನ ಬಗ್ಗೆ ತಿಳಿಯುವ, ಅವರು ಹಾಡಿರುವ ಚಿತ್ರ ಗೀತೆಗಳನ್ನು ನೋಡುವ ಮತ್ತು ಸ್ವತಃ ಪಿ.ಬಿ. ಅವರ ಧ್ವನಿಯನ್ನು ನೇರವಾಗಿ ಕೇಳುವ ಸೌಭಾಗ್ಯ ಒದಗಿತ್ತು.  ಮನು ಅವರು ಹೇಳುತ್ತಿದ್ದರು, “ಅಣ್ಣಾ, ನನಗೆ ನಂಬಲಾಗುತ್ತಿಲ್ಲ, ನಿಮ್ಮ ಧ್ವನಿಯ ಇಂಪು, ಆಳ  ಇಂದೂ ಅಷ್ಟೇ ಸೊಗಸಾಗಿದೆ”.  ಕನ್ನಡದ ಹಿರಿಯ ನಟ ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ಸ್ವಯಂ ರಾಜ್ ಅವರೇ ಹಾಡುತ್ತಿದ್ದರೇನೋ ಎಂಬ ಭಾವ ಹುಟ್ಟಿಸುತ್ತಿದ್ದ ಪಿ. ಬಿ. ಎಸ್ ಅವರ ಬಗ್ಗೆ ತಾವೇ ಸ್ವಯಂ ಗಾಯಕರಾಗಿದ್ದರೂ ರಾಜ್ ಹೇಳುತ್ತಿದ್ದರು “ಪಿ. ಬಿ. ಶ್ರೀನಿವಾಸ್ ನನ್ನ ಶಾರೀರವಿದ್ದಂತೆ” ಎಂದು.

ಪ್ರತಿವಾದಿ ಭಯಂಕರ ಶ್ರೀನಿವಾಸ್, ಪ್ರತಿವಾದಿ ಭಯಂಕರ ಎನ್ನುವುದು ಇವರ ಮನೆತನಕ್ಕೆ ಇದ್ದ ಹೆಸರು. ಇವರ ವಂಶಸ್ತರು ವಾದ ಮಾಡುವುದರಲ್ಲಿ ತುಂಬಾ ಪ್ರಸಿದ್ದವಾಗಿದ್ದರಂತೆ. ಪಿ.ಬಿ.ಎಸ್ ಮಾತ್ರ ವಾದ ವಿವಾದಗಳಿಗೆ ಸಿಲುಕಿದ್ದನ್ನು ನಾವು ಎಂದೂ ಓದಿದ್ದೇ ಇಲ್ಲ.  ಅಂತಹ ಸಜ್ಜನ.  ಅವರ ಸರಳ ಸವಿ ದನಿಯ ಸೊಗಡಿನಲ್ಲಿ ಎಲ್ಲ ವಾದಗಳೂ, ಭಯಗಳು ನೆಲೆಯಿಲ್ಲದೆ ಕಳಚಿ ಹೋಗುತ್ತಿದ್ದವೇನೋ!  ಅವರು 1930ರ ಸೆಪ್ಟೆಂಬರ್ 22ರಂದು ಆಂಧ್ರಪ್ರದೇಶದ ಕಾಕಿನಾಡದಲ್ಲಿ ಜನಿಸಿದರು.  ಶಾಲಾ ದಿನಗಳಲ್ಲೇ ಸಂಗೀತದಲ್ಲಿ ಅಪಾರ ಆಸಕ್ತಿ. ಬಿಕಾಂ ಪದವಿ ಪಡೆದು, ಕಾನೂನು ವ್ಯಾಸಂಗ ಮಾಡುತ್ತಿರುವಾಗ, ಪರಿಚಯವಾದ ಗೋವರ್ಧನ್ ಅವರ ಸಲಹೆಯಂತೆ ಜೆಮಿನಿ ಸ್ಟುಡಿಯೊದಲ್ಲಿ ವಾದ್ಯವೃಂದ ನೋಡಿಕೊಳ್ಳುತ್ತಾ ಸಂಗೀತ ಕಲಿಯತೊಡಗಿದರು.

ಪಿ.ಬಿ.ಶ್ರೀನಿವಾಸ್‌ರವರನ್ನು ಕನ್ನಡಕ್ಕೆ ಪರಿಚಯಿಸಿದವರು ಹೆಸರಾಂತ ನಿರ್ಮಾಪಕರೂ, ನಿರ್ದೇಶಕರೂ, ಕಲಾವಿದರೂ ಆಗಿದ್ದ ನಾಗೇಂದ್ರರಾಯರು. ಅವರು ಹಾಡಿದ ಮೊದಲ ಕನ್ನಡ ಹಾಡು ಜಾತಕಫಲ(1953) ಚಿತ್ರಕ್ಕೆ. ನಂತರ ಓಹಿಲೇಶ್ವರ, ಭಕ್ತ ಕನಕದಾಸ  ಹೀಗೆ ಮುಂದುವರೆಯುತ್ತಾ ಹೋಯಿತು. ಡಾ.ರಾಜ್ ಕುಮಾರ್ ಅವರಿಗೆ ಪಿ.ಬಿ. ಶ್ರೀನಿವಾಸ್ ಅವರ ಕಂಠ ಬಹಳ ಸೂಕ್ತವಾಗಿ ಹೊಂದುತ್ತಿತ್ತು. ಒಮ್ಮೆ ರಾಜ್ ಹೇಳಿದ್ದರು: “ಪಿ.ಬಿ. ಶ್ರೀನಿವಾಸ್ ಧ್ವನಿ ನನಗೆ ಆತ್ಮವಿದ್ದಂತೆ”.  ವಿಷ್ಣುವರ್ಧನ್ ಅವರ ನಾಗರಹಾವು, ಭೂತಯ್ಯನ ಮಗ ಅಯ್ಯು, ಭಾಗ್ಯ ಜ್ಯೋತಿ, ಕಳ್ಳ ಕುಳ್ಳ ಮುಂತಾದ ಅನೇಕ ಚಿತ್ರಗಳಲ್ಲೂ ಪಿ.ಬಿ.ಎಸ್  ಹಾಡುಗಳು  ಅಷ್ಟೇ ಸೊಗಸಾಗಿತ್ತು.

ಭಕ್ತ ಕನಕದಾಸ ಚಿತ್ರದ "ಬದುಕಿದೆನು ಬದುಕಿದೆನು ಭವ ಎನಗೆ" ಹಾಡು ಪಿ.ಬಿ.ಎಸ್ ಅವರಿಗೆ ಬಹಳ ಮೆಚ್ಚುಗೆಯಾದ ಗೀತೆಯಂತೆ. ನನಗೆ ಅವರು ಅದೇ ಚಿತ್ರದಲ್ಲಿ ಹಾಡಿದ ಕುಲ, ಕುಲ ಕುಲವೆಂದು ಹೊಡೆದಾಡದಿರಿ, ಶೃಂಗಾರ ಶೀಲ ತುಂಬಾ ತುಂಬಾ ಇಷ್ಟ.   ನಗು ನಗುತಾ ನಲಿ, ಬಾರೆ ಬಾರೆ, ಜನುಮ ಜನುಮದ ಅನುಬಂಧ, ನಾವಾಡುವ ನುಡಿಯೇ, ಕಣ್ಣಂಚಿನ ಈ ಮಾತಲಿ, ಇಳಿದು ಬಾ ತಾಯಿ, ಹಾಡೊಂದ ಹಾಡುವೆ, ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ, ಆಕಾಶವೆ ಬೀಳಲಿ ಮೇಲೆ, ನಿಲ್ಲು ನೀ ನಿಲ್ಲು ನೀ ನೀಲವೇಣಿ, ಆಹಾ ಮೈಸೂರು ಮಲ್ಲಿಗೆ, ವೇದಾಂತಿ ಹೇಳಿದನು, ದೀನ ನಾ ಬಂದಿರುವೆ, ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು, ಒಲುಮೆಯ ಹೊವೇ ನೀ ಹೋದೆ ಎಲ್ಲಿಗೆ, ಎಲ್ಲಿ ಮರೆಯಾದೆ ವಿಠ್ಠಲ, ಕಂಡೆ ಹರಿಯ ಕಂಡೆ, ನಾನು ನೀನು ನೆಂಟರಯ್ಯ, ಹರಿನಾಮವೇ ಚೆಂದ, ಬೆಳದಿಂಗಳಿನ ನೊರೆ ಹಾಲು ಕೊಡದಲಿ ತುಂಬಿ ತಂದವಳೆ, ಒಲವೆ ಜೀವನ ಸಾಕ್ಷಾತ್ಕಾರ, ಜಗದೀಶನಾಡುವ ಜಗವೇ ನಾಟಕ ರಂಗ, ಮನವೇ ಮಂದಿರ, ನನ್ನವಳು ನನ್ನೆದೆಯ ಹೊನ್ನಾಡನಾಳುವಳು, ರವಿವರ್ಮನ ಕುಂಚದ ಕಲೆ ಬಲೆ, ದಿವ್ಯ ಗಗನ ವನವಾಸಿನಿ ಹೀಗೆ ಅವರ ಹಾಡುಗಳ ನನ್ನ ಪ್ರೀತಿಯ ಪಟ್ಟಿಗೆ ಕೊನೆಯೇ ಇಲ್ಲ.  ತಮಿಳಿನ ಜೆಮಿನಿ ಗಣೇಶನ್ ಅವರಿಗೂ ಪಿ.ಎ.ಎಸ್ ಅವರೇ ಬೇಕಿತ್ತು. ತಮಿಳಿನಲ್ಲೂ ಅವರ ಪ್ರತಿ ಹಾಡುಗಳು ಅಷ್ಟೇ ರೋಮಾಂಚನದ ಅನುಭವ ನೀಡುತ್ತವೆ.  ಸ್ವತ ಪಿ.ಬಿ.ಎಸ್ ತೆಲುಗಿನವರಾದರೂ, ತೆಲುಗಿನಲ್ಲಿ ಘಂಟಸಾಲ ಮತ್ತು ಎಸ್.ಪಿ.ಬಿ ಅವರ ಹಾಡುಗಳೇ  ಕಿವಿಗೆ ಬಿದ್ದದ್ದು ಹೆಚ್ಚು.  ಅವರ ಮುಕುಂದ ಮಾಲ, ಶಾರದಾ ಸ್ತೋತ್ರ ಮುಂತಾದ ಸಂಸ್ಕೃತ ಶ್ಲೋಕಗಳನ್ನು  ಕೇಳುವಾಗ ಉಂಟಾಗುವ ಆನಂದ ಅವರ್ಣನೀಯ.  ಭಕ್ತಿ ಗೀತೆಗಳಲ್ಲಿ ಎದ್ದೇಳು ಮಂಜುನಾಥ ಹಾಡು, ಪ್ರಕೃತಿಯನ್ನೂ, ಭಕ್ತರನ್ನೂ, ದೇವರನ್ನೂ ಒಮ್ಮೆಲೆ ಮುದದಿಂದ ಸುಪ್ರಭಾತಿಸುತ್ತದೆ. ಅವರ ಭಾದ್ರಪದ ಶುಕ್ಲದ ಚೌತಿಯಂದು,  ಶರಣು ಶರಣಯ್ಯ ಶರಣು ಬೆನಕ ಮುಂತಾದ ಗೀತೆಗಳಿಲ್ಲದೆ ಗಣಪತಿ ಹಬ್ಬ ಆಗುವುದಾದರೂ ಎಂತು.

ಪಿ ಬಿ ಶ್ರೀನಿವಾಸರು  ಹಿನ್ನೆಲೆ ಗಾಯಕರಲ್ಲದೆ ಸಹಸ್ರಾರು  ಹಾಡುಗಳನ್ನು ಸುಮಾರು ಎಂಟು ಭಾಷೆಗಳಲ್ಲಿ ಬರೆದಿದ್ದಾರಂತೆ. ನೀಲ್ ಆರ್ಮ್ ಸ್ಟ್ರಾಂಗ್ ಅವರು ಪ್ರಥಮ ಬಾರಿಗೆ ಚಂದ್ರಯಾನ ಮಾಡಿ ಸಾಧಿಸಿದ  ಯಶಸ್ಸನ್ನು ಕುರಿತು, ಪಿ. ಬಿ. ಎಸ್  ಬರೆದಿರುವ ಇಂಗ್ಲಿಷ್ ಗೀತೆಯನ್ನು ಅಂದಿನ  ಅಮೆರಿಕದ ಅಧ್ಯಕ್ಷರೇ ಪ್ರಶಂಸಿಸಿದ್ದಾರಂತೆ.  ಅವರು ಅಮೆರಿಕದಲ್ಲಿದ್ದ ಸಂದರ್ಭದಲ್ಲಿದ್ದಾಗ ಒಂದು ಸಮಾರಂಭದಲ್ಲಿ ಈ ಹಾಡನ್ನು ಕೇಳಿದ ಪ್ರಸಿದ್ಧ ವಿಶ್ವವಿದ್ಯಾಲಯದ ಮುಖ್ಯಸ್ಥರು ಅವರನ್ನು ಡಾಕ್ಟರೇಟ್ ಪದವಿಗೆ ಶಿಫಾರಸ್ಸು ಮಾಡಿದರು.  ಹೀಗಾಗಿ ಪಿ ಬಿ ಎಸ್ ಅವರಿಗೆ ದೊರೆತ ಮೊದಲ ಡಾಕ್ಟರೇಟ್ ಗೌರವ ಅಮೆರಿಕದ ವಿಶ್ವವಿದ್ಯಾಲಯದ್ದು.   ಅವರು  ಹಲವಾರು ಗಝಲ್‌ಗಳನ್ನು ಕನ್ನಡದಲ್ಲಿ ಬರೆದಿದ್ದಾರಂತೆ.  ಭಾಗ್ಯಜ್ಯೋತಿ ಚಿತ್ರಕ್ಕೆ ಪಿ. ಬಿ. ಶ್ರೀನಿವಾಸ್ ಅವರು   ವಾಣಿ ಜಯರಾಂ ಅವರೊಂದಿಗೆ ಹಾಡಿರುವ  "ದಿವ್ಯಗಗನ ವನವಾಸಿನಿ" ಎಂಬ  ಸಂಸ್ಕೃತ ಗೀತೆ ಪಿ. ಬಿ. ಎಸ್ ಅವರ ಸ್ವಂತ ರಚನೆ. "ನವನೀತ ಸುಮಸುಧಾ" ಎಂಬ ರಾಗ ಅವರ ಸ್ವಯಂ ಸೃಷ್ಟಿ. 'ಶ್ರೀನಿವಾಸ ಗಾಯತ್ರಿ ವ್ರತ', 'ಗಾಯಕುಡಿ ಗೇಯಲು', ‘ಪ್ರಣವಂ’ ಎನ್ನುವ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ.

ನನಗಂತೂ ಪಿ. ಬಿ. ಶ್ರೀನಿವಾಸ್ ಅವರ ಧ್ವನಿಯಲ್ಲಿನ ಪದ ವಾಕ್ಯಗಳು ಪ್ರತಿ ಬಾರಿ ಕೇಳುವಾಗಲೂ ಹೊಸ ಹೊಸ ಭಾವಗಳನ್ನು ಸೃಷ್ಟಿಸುವ ಅನುಭವಾಗುತ್ತದೆ.

ಇಂದು ಪಿ. ಬಿ. ಶ್ರೀನಿವಾಸರು ಇಲ್ಲ ಎಂಬುದು ನಮ್ಮ ಜೀವನದಲ್ಲಿ ಎಂತದ್ದೋ ಸವಿ ಕಳೆದು ಹೋದ ಭಾವ ನೀಡುತ್ತಿದೆ.  ಕೆಲವು ದಿನಗಳಿಂದ ಅನಾರೋಗ್ಯದಲ್ಲಿದ್ದ ಪಿ. ಬಿ. ಎಸ್ ಇಂದು ತಮ್ಮ 83ನೆಯ ಹಿರಿಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ನಮ್ಮ ಹೃದಯದಲ್ಲಂತೂ ಅವರು ಪಿ. ಬಿ. ಶ್ರೀನಿವಾಸರ ಇನಿಧ್ವನಿಯ ಝೇಂಕಾರ ಚಿರಶಾಶ್ವತ.  ಈ ಮಹಾನ್ ಇನಿಧ್ವನಿಯ ಪಿ. ಬಿ. ಎಸ್, ದೇವಲೋಕದಲ್ಲಿ ತಮ್ಮ ಗಾಯನದ ಇಂಪನ್ನು ಬೆರೆಸುತ್ತಾ ಚಿರಶಾಂತಿಯಲ್ಲಿರಲಿ ಎಂದು ದೇವರನ್ನು ಪ್ರಾರ್ಥಿಸೋಣ.

Tag: P. B. Srinivas

ಕಾಮೆಂಟ್‌ಗಳಿಲ್ಲ: