ಶನಿವಾರ, ಆಗಸ್ಟ್ 31, 2013

ಪದ್ಮಾ ಸುಬ್ರಹ್ಮಣ್ಯಂ

ಪದ್ಮಾ ಸುಬ್ರಹ್ಮಣ್ಯಂ

ತಮ್ಮ ಜೀವಿತಾವಧಿಯಲ್ಲಿಯೇ ದಂತಕಥೆಯಾಗಿರುವ ಡಾ. ಪದ್ಮಾ ಸುಬ್ರಹ್ಮಣ್ಯಂ ಈ ಶತಮಾನದ ಅತ್ಯಂತ ಸೃಜನಾತ್ಮಕ ನರ್ತನ ಕಲಾವಿದೆ, ಸಂಶೋಧಕಿ, ನೃತ್ಯ ಸಂಯೋಜಕಿ, ಸಂಗೀತಜ್ಞೆ, ಉತ್ತಮ ಗುರು ಹಾಗೂ ಭಾರತೀಯ ಸಂಸ್ಕೃತಿಯ ರಾಯಭಾರಿ.

ಪದ್ಮಾ ಸುಬ್ರಹ್ಮಣ್ಯಂ ಅವರು ಫೆಬ್ರುವರಿ 4, 1943ರಂದು ಜನಿಸಿದರು.  ಅವರ ತಂದೆ ಸುಬ್ರಹ್ಮಣ್ಯಂ ಪ್ರಸಿದ್ಧ ಚಿತ್ರ ನಿರ್ಮಾಪಕರು ಮತ್ತು ಮಹಾನ್ ಕಲಾ ಪೋಷಕರು.  ತಾಯಿ ಮೀನಾಕ್ಷಿಯವರು ಸಂಗೀತ ಸಂಯೋಜಕಿ ಮತ್ತು ತಮಿಳು, ಸಂಸ್ಕೃತಗಳಲ್ಲಿ ಬರಹಗಾರ್ತಿ.

ಪದ್ಮಾ ಅವರು ತಮ್ಮ ತಂದೆಯವರು ಸ್ಥಾಪಿಸಿದ ನೃತ್ಯೋದಯ ಶಾಲೆಯಲ್ಲಿ ಕೌಸಲ್ಯ ಎಂಬ ಗುರುವಿನ ಬಳಿಯಲ್ಲಿ ಸಣ್ಣ ವಯಸ್ಸಿನಲ್ಲೇ ನೃತ್ಯ ಕಲಿಕೆ ಆರಂಭಿಸಿದರು.  ಮುಂದೆ ವಯುವೂರು ಬಿ ರಾಮಯ್ಯ ಪಿಳ್ಳೈ ಅವರ ಶಿಷ್ಯೆಯಾದ ಪದ್ಮಾ ಸುಬ್ರಹ್ಮಣ್ಯಂ ಅವರು 1956ರ ವರ್ಷದಲ್ಲಿ ತಮ್ಮ ಮೊದಲ ನೃತ್ಯ ಪ್ರದರ್ಶನ ನೀಡಿದರು.     ಸಂಗೀತದಲ್ಲಿ ಪದವಿ, ಎತ್ಹ್ನೋ ಮ್ಯೂಸಿಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ನೃತ್ಯದಲ್ಲಿ ಡಾಕ್ಟರೇಟ್ ಇವು ಪದ್ಮಾ ಅವರ ಶೈಕ್ಷಣಿಕ ಸಾಧನೆಗಳು.  ಸಂಸ್ಕೃತಿ ಮತ್ತು ಕಲೆಗಳ ಕುರಿತಾದಂತೆ ಅವರು ಹಲವಾರು ಮಹತ್ವಪೂರ್ಣ ಬರಹ, ಸಂಶೋಧನೆಗಳನ್ನು ಮೂಡಿಸಿದ್ದು,  ಹಲವಾರು ಗ್ರಂಥಗಳನ್ನೂ ಪ್ರಕಟಪಡಿಸಿದ್ದಾರೆ.   ಭಾರತೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಯೋಗದಲ್ಲಿ ಆಹ್ವಾನಿತ ಸದಸ್ಯರಾಗಿ ಸಹಾ ಅವರು ನೀಡಿರುವ ಕೊಡುಗೆ  ಮಹತ್ವಪೂರ್ಣವಾದದ್ದಾಗಿದೆ.

ನೃತ್ಯದ ಜೊತೆ ಜೊತೆಗೆ ಸಂಗೀತದಲ್ಲಿ ಸಹಾ ಅಪಾರ ಪ್ರೀತಿ ಮತ್ತು ಪರಿಶ್ರಮವಿರುವ ಪದ್ಮಾ ಸುಬ್ರಹ್ಮಣ್ಯಂ ಅನೇಕ ಸಂಗೀತ ಸಂಯೋಜನೆಗಳನ್ನೂ ಮಾಡಿದ್ದಾರೆ.  ತಮ್ಮ ಗೆಳತಿ ಮತ್ತು ಸೋದರನ ಪತ್ನಿ ಶ್ಯಾಮಲಾ ಬಾಲಕೃಷ್ಣನ್ ಅವರೊಡಗೂಡಿ  ಅನೇಕ ಶಾಸ್ತ್ರೀಯ ಮತ್ತು ಜಾನಪದ ಸಂಗೀತ ಸಂಯೋಜನೆಗಳನ್ನು ಪ್ರಸ್ತುತಪಡಿಸಿದ್ದಾರೆ.   ಪುಷ್ಪಾಂಜಲಿ ನೃತ್ಯ,  ಮೀರಾ ಭಜನೆಗೆ ನೃತ್ಯರೂಪಕ ಪದವರ್ಣ ಸಂಯೋಜನೆ, ಸಲೀಲ್ ಚೌಧುರಿ ಅವರ ಬಂಗಾಳಿ ಸಂಗೀತ ರೂಪಕಕ್ಕೆ ನೃತ್ಯ ಸಂಯೋಜನೆ ಮುಂತಾದ ಪ್ರಥಮಗಳು  ಸಹಾ   ಪದ್ಮಾ ಸುಬ್ರಹ್ಮಣ್ಯಂ ಅವರ ವೈವಿಧ್ಯಪೂರ್ಣ ಕಲಾಜೀವನದಲ್ಲಿ ಕಂಗೊಳಿಸಿವೆ.

ಶ್ರೇಷ್ಠ ಭಾವಾಭಿನಯ, ನಾವಿನ್ಯ ಸೃಜನಶೀಲತೆಗಳಿಗೆ ಹೆಸರಾದ ಪದ್ಮಾ ಸುಬ್ರಹ್ಮಣ್ಯಂ ಅವರ ನೃತ್ಯ ಸಂಯೋಜನೆಗಳಲ್ಲಿ ಕೃಷ್ಣಾಯ ತುಭ್ಯಂ ನಮಃ, ರಾಮಾಯ ತುಭ್ಯಂ ನಮಃ, ಜಯ ಜಯ ಶಂಕರ,   ಮೀನಾಕ್ಷಿ ಕಲ್ಯಾಣಂ, ವಿರಲಿಮಲೈ ಕುರುವಂಜಿ, ವಳ್ಳಿ ಕಲ್ಯಾಣಂ, ಸಿಳಪ್ಪಡಿಕರಂ, ಕೃಷ್ಣ ತುಲಾಭಾರಂ, ಪಾರಿಜಾತ ಆಭರಣಂ, ಗೀತಾಂಜಲಿ, ಶ್ಯಾಮ, ಶ್ರೀ ಗುರವೇ ನಮಃ, ವಂದೇ ಮಾತರಂ, ಜಯತು ಮೋಕ್ಷಂ, ಗಜೇಂದ್ರ ಮೋಕ್ಷಂ ಮುಂತಾದ ಅಸಂಖ್ಯಾತ ಪ್ರಖ್ಯಾತ ನೃತ್ಯರೂಪಕಗಳು ಸೇರಿವೆ.  ತಮಿಳು ಜಾನಪದದಲ್ಲಿ ವರ್ಣಂ ಮತ್ತು ಕುರುವಂಜಿಗಳ ಸಂಗ್ರಹಣೆಯಲ್ಲಿ ಅಪಾರ ಸಾಧನೆ ಮಾಡಿರುವ ಪದ್ಮಾ ಅವರ ಸಹೋದರ ಬಾಲಕೃಷ್ಣ ಅವರ ಪತ್ನಿ ಶ್ಯಾಮಲಾ ಬಾಲಕೃಷ್ಣನ್ ಅವರ ಸುಶ್ರಾವ್ಯ  ಗಾಯನ ಮತ್ತು  ಜಾನಪದ ಆಸಕ್ತಿಗಳು ಸಹಾ ಪದ್ಮಾ ಸುಬ್ರಹ್ಮಣ್ಯಂ ಅವರ ನೃತ್ಯ  ಸಂಯೋಜನೆಗಳಲ್ಲಿ ಮಹತ್ವಪೂರ್ಣವಾಗಿ ಬೆಸೆದುಕೊಂಡಿವೆ. 1963ರಷ್ಟು ಹಿಂದೆಯೇ ಅವರು ಶ್ಯಾಮಲಾ ಅವರ ಸಂಶೋಧನೆಯಾದ ನಗರಕ್ಕು ಅಪ್ಪಾಲ್ಎಂಬ ಜಾನಪದ ನೃತ್ಯರೂಪಕವನ್ನು ಪ್ರದರ್ಶಿಸಿದ್ದರು.  ಭಗವದ್ಗೀತೆಯ 700 ಶ್ಲೋಕಗಳಲ್ಲಿ 78 ಸುಂದರ ಶ್ಲೋಕಗಳನ್ನು ಅಳವಡಿಸಿಕೊಂಡು ಮಹತ್ವಪೂರ್ಣ ಸಂಯೋಜನೆಯನ್ನು ಸಹಾ ಪದ್ಮಾ ಸುಬ್ರಹ್ಮಣ್ಯಂ ನೃತ್ಯರಂಗಕ್ಕೆ ತಂದಿದ್ದಾರೆ.

ದೇವಾಲಯಗಳ ಕುರಿತಾಗಿ ತಮ್ಮ ಸಹೋದರ ಬಾಲಕೃಷ್ಣನ್ ಅವರು ತಯಾರಿಸುತ್ತಿದ್ದ ಡಾಕ್ಯುಮೆಂಟರಿ ಚಿತ್ರಗಳಿಗೆ ಜೊತೆಗೂಡಿ ಕೆಲಸ ಮಾಡುತ್ತಿದ್ದ ಪದ್ಮಾ ಸುಬ್ರಹ್ಮಣ್ಯಂ ಅವರಿಗೆ, ಭಾರತೀಯ  ದೇವಾಲಯಗಳಲ್ಲಿರುವ ಶಿಲ್ಪಗಳ ಕರಣಗಳ ಕುರಿತಾಗಿ ಅಪಾರ ಆಸಕ್ತಿ ಹುಟ್ಟಿಕೊಂಡಿತು.  ಈ ಆಸಕ್ತಿ ಬೃಹದಾಕಾರವಾಗಿ ಮೊಳೆತು ನಾಟ್ಯಶಾಸ್ತ್ರದ ಜೊತೆಗೆ ಆನಂದ ಕೂಮಾರಸ್ವಾಮಿ, ಟಿ ಎನ್ ರಾಮಚಂದ್ರನ್, ಸಿ ಶಿವಮೂರ್ತಿ ಮುಂತಾದವರ ಮಹತ್ವಪೂರ್ಣ ಗ್ರಂಥಗಳನ್ನು ಓದಲು ಅವರನ್ನು  ಪ್ರೇರೇಪಿಸಿತು.  ಈ ಅಧ್ಯಯನವು ಸಂಶೋಧನಾ ರೂಪವಾಗಿ ಹೊರಹೊಮ್ಮಿ  ಭಾರತೀಯ ನೃತ್ಯ ಮತ್ತು ಸಂಸ್ಕೃತಿಯಲ್ಲಿ ಕರಣಗಳುಎಂಬ ಮಹತ್ವದ ಸಂಶೋಧನಾ ಕೃತಿಯಾಗಿ  ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವಕ್ಕೆ ಅಂಗೀಕೃತಗೊಂಡಿತು.  ಪದ್ಮಾ ಸುಬ್ರಹ್ಮಣ್ಯಂ ಅವರು ತಮ್ಮ ಈ ಎಲ್ಲ ಸಂಶೋಧನೆಗಳ ಮೂಲಕ ಶಿಲಾ ವಿಗ್ರಹಗಳು ಮತ್ತು ಚಿತ್ರಗಳಲ್ಲಿ ಕಂಡು ಬರುವ ನೂರಾ ಎಂಟು ಕರಣಗಳು, ಸ್ಥಬ್ದವಾಗಿ ನೀಡಿದ ಫೋಸುಗಳಲ್ಲ,  ಅವು ನರ್ತಕ ನರ್ತಕಿಯರ ನೃತ್ಯ ಚಲನೆಗಳು ಎಂಬುದನ್ನು ಮನದಟ್ಟು ಮಾಡಿಕೊಟ್ಟರು.  ಪದ್ಮಾ ಸುಬ್ರಹ್ಮಣ್ಯಂ ಅವರ ಈ ಕುರಿತ ಸಂಶೋಧನೆಗಳು ಟಿ. ಎನ್. ರಾಮಚಂದ್ರನ್ ಅಂತಹ ಘನ  ವಿದ್ವಾಂಸರಿಂದ ಸಹಾ ಮೆಚ್ಚುಗೆ ಪಡೆಯಿತು.  ಪದ್ಮಾ ಸುಬ್ರಹ್ಮಣ್ಯಂ ಅವರು ನೃತ್ಯ ಶಾಸ್ತ್ರದ ಕುರಿತಾಗಿ ವಿವಿಧೆಡೆಗಳಲ್ಲಿ ಅನೇಕ ಕಾರ್ಯಾಗಾರಗಳನ್ನು ಸಹಾ ನಡೆಸಿದ್ದಾರೆ. ಭರತಮುನಿಯ ನಾಟ್ಯಶಾಸ್ತ್ರದಲ್ಲಿ ನಮೂದಿತಗೊಂಡು ಬಳಕೆಯಲ್ಲಿರದಿದ್ದ ಮಾರ್ಗಅಭಿವ್ಯಕ್ತಿಗೆ ಪದ್ಮಾ ಸುಬ್ರಹ್ಮಣ್ಯಂ ಪುನಶ್ಚೇತನ ನೀಡಿದರು.  ತಮ್ಮ ಈ ಸಂಶೋಧನೆಯ ಆಧಾರದ ಮೇಲೆ ಅವರು ತಮ್ಮ ಕಾರ್ಯಕ್ರಮಗಳನ್ನು ಭರತ ನೃತ್ಯಂಎಂದು ಸಂಬೋಧಿಸುತ್ತಾರೆ.  ತಮ್ಮ ಭರತ ನೃತ್ಯಂ ಕಾರ್ಯಕ್ರಮಗಳನ್ನು ಅವರು ಸಂಸ್ಕೃತ, ತಮಿಳು, ಕಾಶ್ಮೀರಿ, ಬೆಂಗಾಳಿ, ಒರಿಯಾ, ಮರಾಠಿ, ಕನ್ನಡ, ತೆಲುಗು, ಮಲಯಾಳಂ, ರಷ್ಯನ್, ಜಪಾನ್   ಹೀಗೆ ಬಹಳಷ್ಟು ಭಾಷೆಗಳಲ್ಲಿ ನಡೆಸಿದ್ದಾರೆ

ಮೊದಲಿನಿಂದಲೂ ತಮ್ಮ ನೃತ್ಯೋದಯದಸಂಸ್ಥೆಯಲ್ಲಿ ಬೋಧನೆಯನ್ನೂ  ನಡೆಸುತ್ತ ಬಂದಿರುವ ಪದ್ಮಾಸುಬ್ರಹ್ಮಣ್ಯಂ,  ಆ ಸಂಸ್ಥೆಯ ನಿರ್ದೇಶಕಿಯಾಗಿ ಮಹತ್ವದ ನೃತ್ಯ ಪ್ರತಿಭೆಗಳು ಹೊರಹೊಮ್ಮಲು ಕಾರಣರಾಗಿದ್ದಾರೆ.

ಹೀಗೆ ಸಂಗೀತವನ್ನೇ ತಮ್ಮ ಬದುಕಾಗಿಸಿಕೊಂಡಿರುವ ಪದ್ಮಾ ಸುಬ್ರಹ್ಮಣ್ಯಂ ಅವರಿಗೆ ಸಂಗೀತ ನಾಟಕ ಅಕಾಡೆಮಿ ಗೌರವ, ಪದ್ಮಶ್ರೀ, ಪದ್ಮಭೂಷಣ, ಕಲೈಮಾಮಣಿ, ಕಾಳಿದಾಸ್ ಸಮ್ಮಾನ್, ನಾದ ಬ್ರಹ್ಮಂ. ಫುಕೋಕ ಏಷ್ಯಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಗೌರವ ಹೀಗೆ ಹಲವಾರು ಮಹತ್ವಪೂರ್ಣ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು   ನಿರಂತರವಾಗಿ ಸಲ್ಲುತ್ತಿವೆ.

ಈ ಮಹಾನ್ ಕಲಾವಿದರಿಗೆ ಜನ್ಮದಿನದ ಹಾರ್ದಿಕ ಗೌರವಗಳು ಮತ್ತು ಶುಭ ಹಾರೈಕೆಗಳು.

Tag: Padma Subrahmanyam


ಕಾಮೆಂಟ್‌ಗಳಿಲ್ಲ: