ಶನಿವಾರ, ಆಗಸ್ಟ್ 31, 2013

ತಬಲ ಮಾಂತ್ರಿಕ ಜಾಕಿರ್ ಹುಸೇನ್

ತಬಲ ಮಾಂತ್ರಿಕ ಜಾಕಿರ್ ಹುಸೇನ್

ಪ್ರಖ್ಯಾತ ತಬಲಾ ವಾದಕರಾದ  ಜಾಕಿರ್ ಹುಸೇನ್ ಅವರು ತಮ್ಮ ತಬಲಾ ಕೈಚಳಕದಲ್ಲಿ ಹೊಮ್ಮಿಸುವ ನಾದಮಾಧುರ್ಯಕ್ಕೆ ವಾಹ್ ಎನ್ನದಿರುವವರೇ ಇಲ್ಲ.  ಹಾಗಾಗಿ ಅವರು ವಾಹ್ ತಾಜ್ ಬೋಲಿಯೇಎಂದು ಜಾಹೀರಾತಿನಲ್ಲಿ ಹೇಳುತ್ತಾ ಸಾಮಾನ್ಯ ದೂರದರ್ಶನದ ಪ್ರೇಕ್ಷಕನಿಗೆ ಹೇಗೆ ಪರಿಚಿತರೋ ಅಂತೆಯೇ ವಿಶ್ವ ಸಂಗೀತ ಮಹಾನ್ ಸಂಗೀತ ಪ್ರಿಯರಿಗೂ  ಅಷ್ಟೇ ಪರಿಚಿತರು.  ಈ ಮಹಾನ್ ಪ್ರತಿಭೆ ಜನಿಸಿದ್ದು ಮಾರ್ಚ್ 9, 1951ರಂದು.  ತಂದೆ ಸಂಗೀತ ಕ್ಷೇತ್ರದ ಮಹಾನ್ ತಬಲಾ ಸಾಮ್ರಾಟರೆನಿಸಿದ ಅಲ್ಲಾ ರಖಾ.  ತಮ್ಮ ತಂದೆಯ ಮಹಾನ್ ಪ್ರತಿಭೆಗೆ ತಮ್ಮ ಸಂಗೀತ ನಾದದಿಂದ ವಿಸ್ತೃತ ವ್ಯಾಪ್ತಿ, ವಿಶ್ವಜನಪ್ರಿಯತೆ ತಂದುಕೊಟ್ಟ ಕೀರ್ತಿ ಜಾಕಿರ್ ಹುಸೇನ್ ಅವರದು.  ತಬಲಾ  ವಾದನವನ್ನು ಸಂಗೀತ ಕಚೇರಿಗಳಲ್ಲಿನ ಪಕ್ಕವಾದ್ಯವಾಗಷ್ಟೇ ಅಲ್ಲದೆ ಪ್ರಧಾನ ತಾಳ ಕಚೇರಿಯಾಗಿಯೂ ಅತ್ಯಂತ ಜನಪ್ರಿಯ ಮಾಡಿದ ಕೀರ್ತಿ ಜಾಕಿರ್ ಹುಸೇನರದ್ದು.  

ಮುಂಬೈನ ಸೇಂಟ್ ಗ್ಸೇವಿಯರ್ಸ್ನಲ್ಲಿ ಪದವಿ ಪಡೆದ ಜಾಕಿರ್ ಹುಸೇನ್ ತಬಲಾದಲ್ಲಿ ಬಾಲಪ್ರತಿಭೆ ಎನಿಸಿದವರು.  ತಮ್ಮ ಹನ್ನೆರಡನೆಯ ವಯಸ್ಸಿನಿಂದಲೇ  ಸಂಗೀತ ಕಚೇರಿಗಳಲ್ಲಿ ಮೋಡಿ ಹಾಕಿದ್ದ ಇವರು, 1970ರ ವರ್ಷವೊಂದರಲ್ಲೇ ಅಮೆರಿಕದಲ್ಲಿ 150 ದಿನಗಳ ಸಂಗೀತ ಕಚೇರಿಗಳಲ್ಲಿ ಪಾಲ್ಗೊಂಡಿದ್ದರು ಎಂದರೆ ಅಂದಿನ ದಿನದಲ್ಲೇ ಅವರೆಷ್ಟು ಪ್ರಸಿದ್ಧರು ಎಂದು ಊಹಿಸಬಹುದು.  1973ರಲ್ಲಿ ಅವರು ಮಹಾನ್ ಸಂಗೀತಗಾರರಾದ ಜಾರ್ಜ್ ಹ್ಯಾರಿಸನ್ ಅವರ ಲಿವಿಂಗ್ ಇನ್ ದಿ ಮೆಟೀರಿಯಲ್ ವರ್ಲ್ಡ್ಆಲ್ಬಂನಲ್ಲಿ ಮೂಡಿಬಂದಾಗ ಅತ್ಯಂತ  ಜನಪ್ರಿಯತೆ ಗಳಿಸಿದರು.  ಅವರು ಬಿಲ್ ಲಾಸ್ವೆಲ್ ಅವರ ಪ್ರಸಿದ್ಧ ತಂಡವಾದ ತಬಲಾ ಬೀಟ್ ಸೈನ್ಸ್ತಂಡದ ಪ್ರಾರಂಭಿಕ ಸದಸ್ಯರೂ ಹೌದು.   ಸಿಲ್ಕ್ ರೋಡ್ ಸಂಯುಕ್ತ ಸಂಗೀತ ಸಂಯೋಜನಾ ಯೋಜನೆಮತ್ತು ಅಂತರರಾಷ್ಟ್ರೀಯ ತಾಳ ವಾದ್ಯ ಶ್ರೇಷ್ಠರನ್ನೊಳಗೊಂಡ ಗ್ಲೋಬಲ್ ಡ್ರಂ ಯೋಜನೆಗಳ ಪಾತ್ರಧಾರಿಯೂ ಆಗಿದ್ದಾರೆ. 

ಜಾಕಿರ್ ಹುಸೇನರು ಸೇಂಟ್ ಫ್ರಾನ್ಸಿಸ್ಕೋ ಮತ್ತು ಮುಂಬೈಗಳಲ್ಲಿ ಉನ್ನತ ಮಟ್ಟದ ತಬಲಾ ಅಧ್ಯಯನಾಸಕ್ತರಿಗೆ ತರಬೇತಿ ಕೊಡುತ್ತಾರೆ.   ಅನೇಕ ವಿಶ್ವವಿದ್ಯಾಲಯಗಳಲ್ಲಿ ಆಹ್ವಾನಿತ ಉಪನ್ಯಾಸಕರಾಗಿದ್ದಾರೆ. 

1992ರ ವರ್ಷದಲ್ಲಿ ಜಾಕಿರ್ ಹುಸೇನರು ಮೊಮೆಂಟ್ ರೆಕಾರ್ಡ್ಸ್ಸಂಘಟನೆಯನ್ನು ಹುಟ್ಟು ಹಾಕಿದರು.  ಈ ಸಂಘಟನೆಯು ಶ್ರೇಷ್ಠ ಸೃಜನಶೀಲ ಸಂಗೀತ ಸಂಯೋಜನೆಗಳನ್ನೂ, ವಿಶ್ವದ ಶ್ರೇಷ್ಠ ಸಂಗೀತಕಾರರ ಕಾರ್ಯಕ್ರಮಗಳನ್ನೂ ಭಾರತದಲ್ಲಿ ನಿರ್ವಹಿಸುತ್ತಿದೆ.  ಈ ಸಂಘಟನೆಯ ಮೂಲಕ ಜಕಿರ್  ಹುಸೇನ್ ಅವರು ಆಶಿಶ್ ಖಾನ್ ಅವರ ಜೊತೆಗೂಡಿ ಹೊರತಂದ ಗೋಲ್ಡನ್ ಸ್ಟ್ರಿಂಗ್ಸ್ ಆಫ್ ಸರೋದ್ಸಂಗೀತ ಸಂಯೋಜನೆಯು 2006ರ ವರ್ಷದ  ಗ್ರಾಮಿ ಅವಾರ್ಡ್ ಫಾರ್ ಬೆಸ್ಟ್ ಟ್ರೆಡಿಶನಲ್ ವರ್ಲ್ಡ್ ಮ್ಯೂಸಿಕ್ ಆಲ್ಬಂಹೆಗ್ಗಳಿಕೆಗೆ ಪಾತ್ರವಾಯಿತು.    ಇದಲ್ಲದೆ ಜಾಕಿರ್ ಹುಸೇನ್ ಅವರು ವಿಶ್ವ ಪ್ರಸಿದ್ಧ ಸಂಗೀತಗಾರರಾದ ಜಾನ್ ಮೆಕ್ಲಾಗ್ಲಿನ್, ಮಿಕಿ ಹಾರ್ಟ್, ಬೇಲಾ ಫ್ಲೆಕ್, ಎಡ್ಗರ್ ಮೇಯರ್ ಅಂತಹ ಪ್ರಸಿದ್ಧರ ಜೊತೆ ಕೂಡಾ ಹಲವಾರು ಆಲ್ಬಂಗಳಲ್ಲಿ ಕೈಜೋಡಿಸಿದ್ದು ಆ ಸಂಗೀತಗಳು ಕೂಡಾ ಹಲವಾರು ಗ್ರಾಮಿ ಗೌರವಗಳನ್ನು ಪಡೆದಿವೆ. 

ವಿಶ್ವ ಸಿನಿಮಾರಂಗದಲ್ಲಿ ಸಂಗೀತ ಸಂಯೋಜಕರಾಗಿ, ತಬಲಾ ವಾದಕರಾಗಿ, ಗಾಯಕರಾಗಿ ಹಾಗೂ ನಟರಾಗಿ  ಜಾಕಿರ್ ಹುಸೇನರು ವಿಭಿನ್ನ ನೆಲೆಗಳಲ್ಲಿ ಕಾಣಬರುತ್ತಾರೆ.  ಮರ್ಚೆಂಟ್ ಐವರಿ ಚಿತ್ರವಾದ ಹೀಟ್ ಅಂಡ್ ಡಸ್ಟ್ನಲ್ಲಿ ಅವರು ಪಾತ್ರ ನಿರ್ವಹಿಸಿದ್ದರು.  ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗಳಿಸಿದ ಮಲಯಾಳಂ ಭಾಷೆಯ  ವಾನಪ್ರಸ್ಥಂಚಿತ್ರದ ಸಂಗೀತ ಸಂಯೋಜನೆಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದರು.  ಜಾಕಿರ್ ಹುಸೇನರು ಹಿನ್ನಲೆ ಸಂಗೀತ ಒದಗಿಸಿದ ಪ್ರಸಿದ್ಧ ಚಿತ್ರಗಳಲ್ಲಿ ಇನ್ ಕಸ್ಟೊಡಿ’, ‘ದಿ ಮಿಸ್ಟಿಕ್ ಮಸ್ಸೆಯರ್’, ‘ಮಿಸ್ಟರ್ ಅಂಡ್ ಮಿಸಸ್ ಅಯ್ಯರ್ಮುಂತಾದವು  ಸೇರಿವೆ.   ಅಪೊಕಲಿಪ್ಸಿ ನೌ’, ‘ಲಿಟ್ಟಲ್ ಬುದ್ಧಮುಂತಾದ ಹಲವಾರು ಚಿತ್ರಗಳಲ್ಲಿ ಅವರ ತಬಲಾ ನಾದ ಹರಿದಿದೆ.    ಕೆಲವೊಂದು ಚಿತ್ರಗಳಲ್ಲಿ ಅವರು ಗಾಯನವನ್ನೂ ನೀಡಿದ್ದಾರೆ. 

ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳೂ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು ಜಾಕಿರ್ ಹುಸೇನರನ್ನು ಅರಸಿ ಬಂದಿವೆ.


ಈ ಮಹಾನ್ ಭಾರತೀಯ ಅಂತರರಾಷ್ಟ್ರೀಯ ಪ್ರತಿಭೆಗೆ ಜನ್ಮದಿಂದ ಗೌರವ ಪೂರ್ವಕ ಹಾರ್ದಿಕ ಶುಭಹಾರೈಕೆಗಳು.

Tag: Zakir Hussain

ಕಾಮೆಂಟ್‌ಗಳಿಲ್ಲ: