ಶನಿವಾರ, ಆಗಸ್ಟ್ 31, 2013

ಪಂಡರೀಬಾಯಿ

ಪಂಡರೀಬಾಯಿ

ಮಹಾನ್ ಕಲಾವಿದೆ ಪಂಡರೀಬಾಯಿ  ಅವರು ಈ ಲೋಕದಿಂದ ವಿರಮಿಸಿದ ದಿನ ಜನವರಿ 29, 2003.    1930ರ ವರ್ಷದಲ್ಲಿ ಜನಿಸಿದ ಪಂಡರೀಬಾಯಿಯವರು ಕನ್ನಡ, ತಮಿಳು, ತೆಲುಗು ಭಾಷೆಗಳ ಚಲನಚಿತ್ರ ಅಭಿಮಾನಿಗಳ ಹೃದಯದಲ್ಲಿ ತುಂಬಾ ತುಂಬಾ ಹತ್ತಿರವಾಗಿ ನಿಲ್ಲುವವರು.  ತಾಯಿಗಿಂತ ಹೃದಯಕ್ಕೆ ಹತ್ತಿರರಾದವರು ಯಾರಿರಲು ಸಾಧ್ಯ!  ನಾವು ಸಿನಿಮಾರಂಗದಲ್ಲಿ ಎಷ್ಟೆಷ್ಟೋ ತಾರೆಯರನ್ನು ನೋಡಿರುತ್ತೇವೆ.  ಆದರೆ ಸಿನಿಮಾ ರಂಗದಲ್ಲಿನ ಶ್ರೇಷ್ಠ ತಾಯಿ ಮಾತ್ರ ಪಂಡರೀಬಾಯಿ.  ವಿವೇಕಾನಂದರ ಒಂದು ಮಾತು ಆಗಾಗ ನೆನಪಾಗುತ್ತದೆ.  ವಿದೇಶಿ ಸಂಸ್ಕೃತಿಗೂ ಭಾರತೀಯ ಸಂಸ್ಕೃತಿಗೂ ಇರುವ ಪ್ರಮುಖ ವೆತ್ಯಾಸವೆಂದರೆ ಹೆಣ್ಣನ್ನು ನೋಡುವ ದೃಷ್ಟಿ.  ನಮ್ಮ ಭಾರತೀಯ ಹೃದಯಕ್ಕೆ ಹೆಣ್ಣಿನ ಬಗ್ಗೆ ಮೂಡುವ ಆದ್ಯ  ಪರಿಕಲ್ಪನೆ ಎಂದರೆ ತಾಯಿ.  ಪಂಡರೀಬಾಯಿಯವರು ಅಭಿನಯಿಸಿರುವ  ನಾಯಕಿ ಪಾತ್ರಗಳನ್ನು ಸಹಾ ನಾವು ಸಾಕಷ್ಟು ನೋಡಿದ್ದೇವೆ.  ಆ ಪಾತ್ರಗಳಲ್ಲೂ ನಮಗೆ ಪಂಡರೀಬಾಯಿಯವರು ಮೂಡಿಸುವ ಭಾವನೆ ಎಂದರೆ ಅವರೊಬ್ಬ ಮಮತಾಮಯಿ ತಾಯಿ.  ಹೀಗಾಗಿ ಜನ ಅವರನ್ನು ಪಂಡರೀಬಾಯಿ ಎಂದು ಮಾತ್ರವಲ್ಲ ಪಂಡರೀತಾಯಿ ಎಂದೂ ಗುರುತಿಸುವುದುಂಟು.

ಪಂಡರೀಬಾಯಿ ಅವರು ನಿರ್ವಹಿಸಿದ ಅನೇಕ ಪಾತ್ರಗಳು  ನೆನಪಾಗುತ್ತವೆ.  ಲೀಲಾಮಯ ಹೇ ದೇವ ನೀ ತೋರು ದಯಾ ಭಾವ ಗುರಿ ಕಾಣದಿದೆ ಜೀವ ನೆರವಾಗೆಲೊ ದೇವಎಂದು ಹಾಡುವ ಪಾತ್ರದಲ್ಲಿ ಅವರು ಬೇಡುವಾಗ ಆ ಕರೆಯಲ್ಲಿನ ಅವರ ಆರ್ತತೆ  ನಮ್ಮೊಳಗೆ ಅಡಗಿರುವ ಆಧ್ಯಾತ್ಮ ಭಾವಕ್ಕೆ ಶಾಂತಸ್ವರೂಪದ ಹಿತ ನೀಡುತ್ತದೆ. ಈ ಗೀತೆಯಿರುವ   ನವಜೀವನಚಿತ್ರದಲ್ಲಿ ವೈದ್ಯರಾಗಿ ಜನಸೇವೆಯ ಕುರಿತು ಚಿಂತಿಸುವ ಅವರ ಪಾತ್ರ ಕರುಣೆಯೇ ಮೂರ್ತಿವೆತ್ತಂತ ಅನುಭವ ಕೊಡುತ್ತದೆ.  ಸಂಧ್ಯಾರಾಗಚಿತ್ರದಲ್ಲಿ ಮಲತಾಯಿಯಾದರೂ ಲಕ್ಷಣ ಪಾತ್ರಧಾರಿಯಾದ ರಾಜ್ ಕುಮಾರ್ ಅವರಿಗೆ ತಮ್ಮ ಹೃದಯವನ್ನೇ ಮುಡಿಪಾಗಿಟ್ಟ ತಾಯಿಯಂತೆ ಅವರು ಕಾಣುವ ರೀತಿ ಹೇಗೆ ತಾನೇ ಮರೆಯಲು ಸಾಧ್ಯ.  'ನಮ್ಮ ಮಕ್ಕಳು' ಚಿತ್ರ.  ಓಹ್.  ಆ ಪುಟ್ಟ ಮಕ್ಕಳ ತಾಯಿಯಾಗಿ ನಿನ್ನೋಲುಮೆ ನಮಗಿರಲಿ ತಂದೆಎಂದು ತನ್ನ ಕುಟುಂಬ, ಮಕ್ಕಳು, ದೇವರಿಗಾಗಿನ ಒಲುಮೆ ಇವೆಲ್ಲವನ್ನೂ ತಮ್ಮ ಅಭಿವ್ಯಕ್ತಿಯಲ್ಲಿ ಮೂಡಿಸುವ ಅವರ ತನ್ಮಯತೆ  ಹೃದಯಕ್ಕೆ ತುಂಬಾ ಹತ್ತಿರವಾಗುತ್ತದೆ.  ಅವರ ಮತ್ತೊಂದು ಅಂತದೇ ಪಾತ್ರ  ಅನುರಾಧಾ ಚಿತ್ರದ್ದು.  ಸತ್ಯಹರಿಶ್ಚಂದ್ರಚಿತ್ರದಲ್ಲಿ ಅವರ ಪಾತ್ರ ನಿರ್ವಹಣೆ ರಾಜ್ ಕುಮಾರ್, ಉದಯ ಕುಮಾರ್, ಎಂ. ಪಿ. ಶಂಕರ, ನರಸಿಂಹರಾಜು ಇವರುಗಳ ಮೇರು ಮಟ್ಟದ ಅಭಿನಯಕ್ಕೆ ಸರಿ ಸಮಾನವಾಗಿ ನಿಲ್ಲುತ್ತದೆ.   ಹೀಗೆ ಪಂಡರೀತಾಯಿ ಅವರ ಅಭಿನಯವನ್ನು ಒಂದಾದ ಮೇಲೊಂದರಂತೆ ಹೆಸರಿಸುತ್ತಾ ಹೋಗಬಹುದು. 

ಪಂಡರೀಬಾಯಿ ಚಿಕ್ಕ ವಯಸ್ಸಿನಲ್ಲೇ ಸೊಗಸಾಗಿ ಹರಿಕಥೆ ಮಾಡುತ್ತಿದ್ದರು.  ಅದು ಅವರ ತವರು ಮನೆಗೆ ಬಂದ ಬಳುವಳಿ.  ಅವರ ತಂದೆ ಹರಿಕಥಾ ವಿದ್ವಾಂಸರಾಗಿದ್ದರು.  ನಾನು ಪುಟ್ಟವನಿದ್ದಾಗ ಪ್ರಖ್ಯಾತ ಹರಿಕಥಾ ವಿದ್ವಾಂಸರಾಗಿದ್ದ ಅವರ ಸಹೋದರ ವಿಮಲಾನಂದ ದಾಸರು ಹಾಸನದಲ್ಲಿ ನಮ್ಮ ಮನೆಯಲ್ಲಿ ಹಲವು ದಿನ ಇದ್ದು ನಮ್ಮ ಮನೆ ಬಳಿ ಇದ್ದ ರಾಮ ಮಂದಿರದಲ್ಲಿ ಹರಿಕಥಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದುದು ಚೆನ್ನಾಗಿ ನೆನಪಿದೆ.  ಒಮ್ಮೆ ಪುಟ್ಟ ಹುಡುಗಿ ಪಂಡರೀಬಾಯಿ ಹರಿಕಥಾ ಕಾರ್ಯಕ್ರಮ ನೀಡಿದಾಗ ಆ ಕಾರ್ಯಕ್ರಮದಲ್ಲಿ ಅಜ್ಞಾತವಾಗಿ ಪ್ರೇಕ್ಷಕ ವರ್ಗದಲ್ಲಿ ಸೇರಿಕೊಂಡಿದ್ದವರು ಸಂಗೀತ ಕಲಾನಿಧಿ ಪಿಟೀಲು ಚೌಡಯ್ಯನವರು.  ಈ ಹುಡುಗಿಯ ಸಾಮರ್ಥ್ಯವನ್ನು ಕಂಡು ತಾವು ನಿರ್ಮಿಸಿದ  ವಾಣಿಚಿತ್ರದಲ್ಲಿ ಅವರಿಗೆ ಅಭಿನಯಿಸಲು ಆಹ್ವಾನ ನೀಡಿದರು.  ಹೀಗೆ ಅನಿರೀಕ್ಷಿತವಾಗಿ ಪಂಡರೀಬಾಯಿ ಚಲನಚಿತ್ರರಂಗವನ್ನು ಪ್ರವೇಶಿಸಿದರು.  ಮುಂದೆ ಹೊನ್ನಪ್ಪ ಭಾಗವತರ್ ಅವರ ಗುಣ ಸಾಗರಿಪಂಡರೀಬಾಯಿ ಅವರು  ಮೊದಲು ನಾಯಕಿಯಾಗಿ ನಟಿಸಿದ ಚಿತ್ರ.  ರಾಜ್ ಕುಮಾರ್ ಅವರ ಮೊದಲ ಚಿತ್ರ ಎಚ್. ಎಲ್. ಎನ್ ಸಿಂಹ ಅವರ ಬೇಡರ ಕಣ್ಣಪ್ಪಚಿತ್ರದಲ್ಲಿ ಪಂಡರೀಬಾಯಿ ಅವರೇ ನಾಯಕಿ.  ತಮಿಳಿನ ಮೇರುನಟ ಶಿವಾಜಿ ಗಣೇಶನ್ ಅವರ ಮೊದಲ ಚಿತ್ರದಲ್ಲಿ ಕೂಡಾ ಪಂಡರೀಬಾಯಿ ಅವರೇ ನಾಯಕಿಯಾಗಿದ್ದರು.  ಸೋದರಿ, ಹರಿಭಕ್ತ, ರಾಯರ ಸೊಸೆ, ಬಂಗಾರದ ಹೂವು, ಜೇನುಗೂಡು ಪಂಡರೀಬಾಯಿ ಅವರು ಅಂದಿನ ದಿನಗಳಲ್ಲಿ ನಟಿಸಿದ ಇನ್ನಿತರ ಕೆಲವು ಪ್ರಮುಖ ಚಿತ್ರಗಳು.   ರಾಯರ ಸೊಸೆ, ಅನುರಾಧ ಅವರೇ ನಿರ್ಮಿಸಿದ ಚಿತ್ರಗಳು.  ಶ್ರೀಕೃಷ್ಣಚೈತನ್ಯ ಸಭಾ ಎಂಬ ನಾಟಕ ಮಂಡಳಿಯನ್ನು ಕಟ್ಟಿ ಊರೂರುಗಳಲ್ಲಿ ನಾಟಕಗಳನ್ನು ಸಹಾ ಆಡಿದ್ದರು.   ಅವರು ಕನ್ನಡ, ತಮಿಳು, ಹಿಂದಿ ಬಾಷೆಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ ಚಿತ್ರಗಳು ಐನೂರಕ್ಕೂ ಹೆಚ್ಚು.  ರಾಜ್ ಕುಮಾರ್, ಎಂ ಜಿ ರಾಮಚಂದ್ರನ್, ಶಿವಾಜಿ ಗಣೇಶನ್,  ಎನ್. ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರರಾವ್, ರಾಜೇಶ್ ಖನ್ನ ಹೀಗೆ ಅವರ ಕಾಲದ ನಾಯಕನಟರಿಗೆ ಮತ್ತು ಮುಂದಿನ ತಲೆಮಾರಿನ ನಟರಿಗೆ ಕೂಡಾ ಅವರು ತಾಯಿಯ ಪಾತ್ರಗಳಲ್ಲಿ ಅಭಿನಯಿಸಿದ್ದರು.   ಪಾಂಡುರಂಗನ ಭಕ್ತರಾದ ಅವರು ಚನ್ನೈನ ಕೋಡಂಬಾಕ್ಕಂನಲ್ಲಿ  ತಮ್ಮ ಇಷ್ಟ ದೇವರಾದ ಪಾಂಡುರಂಗನಿಗಾಗಿ ಗುಡಿಯನ್ನು ನಿರ್ಮಿಸಿದ್ದರು. ಅವರ ತಂಗಿ ಮೈನಾವತಿ ಅವರು ನಿರ್ಮಿಸಿದ್ದ ಅಮ್ಮ, ಮನೆತನ ಎಂಬ ದೂರದರ್ಶನದ ಧಾರವಾಹಿಗಳಲ್ಲಿ ಕೂಡಾ ಪಂಡರೀಬಾಯಿ ಕಾಣಿಸಿಕೊಂಡಿದ್ದರು.

ಪಂಡರೀಬಾಯಿಯವರಿಗೆ ಇಳಿವಯಸ್ಸಿನಲ್ಲಿ  ಅಪಘಾತವಾಗಿ ಅವರ  ಒಂದು ಕೈ ಶಕ್ತಿ ಕಳೆದುಕೊಳ್ಳುವ ಸ್ಥಿತಿ ಏರ್ಪಟ್ಟಿತು.  ಎಂತಹವರಿಗೂ ಗೌರವ ತರುವ ಅವರ ಗುಣ ಚಿತ್ರರಂಗದ ಹಲವರಿಗೆ ಕೂಡ ಅವರಿಗೆ ಸಹಾಯ ಮಾಡಬೇಕೆಂಬ ಮನಸ್ಸು ನೀಡಿತು ಎಂದು ನನಗನ್ನಿಸಿದೆ.  ಅವರು ತಮ್ಮ ಕೈ ಸಾಮರ್ಥ್ಯ ಕಳೆದುಕೊಂಡಿದ್ದ ದಿನದಲ್ಲಿ ಕೂಡಾ ಅವರಿಗೆ ಕೆಲವು ಪಾತ್ರಗಳನ್ನು ಕನ್ನಡ ಚಿತ್ರರಂಗ ಕೊಟ್ಟು ಅವರಿಗೆ ಸಹಾನುಭೂತಿ ಮತ್ತು ಗೌರವಗಳನ್ನು ಅರ್ಪಿಸಿತು.  ರಾಜ್ ಕುಮಾರ್ ಅವರು ಕಾಶಿ ವಿಶ್ವನಾಥನ ಕುರಿತು ಮೂಡುವ ಒಂದು ಗೀತೆಯಲ್ಲಿ ಒಂದೆಡೆ ತಾಯಿಯಾಗಿ ಕುಳಿತಿರುವ ಹಾಡಿನ ಚಿತ್ರಣ ಈಗಲೂ ಕಣ್ಣಲ್ಲಿ ನೆಲೆ ನಿಂತ ಹಾಗಿದೆ. 


ಡಾ. ರಾಜ್ ಕುಮಾರ್ ಅವರು ಚಿತ್ರರಂಗದಲ್ಲಿ ಪಂಡರೀಬಾಯಿ ಅಂತಹವರು ಸಿಗುವುದು ಸಾಧ್ಯವೇ ಇಲ್ಲಎಂದು ಹೇಳಿದ್ದರು. ರಾಜ್ ಅವರ ಹೇಳಿರುವ ಮಾತಾದರೋ ಇಡೀ ಜನಸ್ತೋಮದ ಹೃದಯದ ಮಾತು ಕೂಡಾ ಆಗಿದೆ.  ಕೆಲವರನ್ನು ಒಳ್ಳೆಯವರೆನ್ನಲು ಪುರಾವೆಗಳೇ ಬೇಕಾಗುವುದಿಲ್ಲ.  ಅದು ಅವರ ವ್ಯಕ್ತಿತ್ವವೇ ಅಥವಾ  ಅವರಿರುವ ರೀತಿಯೇ ಹಾಗೆ ಹೇಳಿಬಿಡುತ್ತದೆ.  ಅದಕ್ಕೆ ಮಾತುಗಳು ಕೂಡಾ ಬೇಕಿರುವುದಿಲ್ಲ.  ಖಂಡಿತ ಪಂಡರೀಬಾಯಿಯವರು ಆ ಉತ್ತಮತೆಗೆ ಸೇರಿದವರು.  ಬಣ್ಣದ ಲೋಕದಲ್ಲಿದ್ದರೂ ಸಂತ ಹೃದಯಿ, ಮಾತೃಶಿರೋಮಣಿ ಆಕೆ.    ಈ ತಾಯಿಯ ಆತ್ಮೀಯ ಭಾವಕ್ಕೆ  ನಮ್ಮ ನಲ್ಮೆಯ ನಮನಗಳು.

Tag: Pandari Bai

ಕಾಮೆಂಟ್‌ಗಳಿಲ್ಲ: