ಸೋಮವಾರ, ಆಗಸ್ಟ್ 26, 2013

ಸಾಯಿಸುತೆ

ಸಾಯಿಸುತೆ

ಪ್ರಸಿದ್ಧ ಕಾದಂಬರಿಕಾರ್ತಿ ‘ಸಾಯಿಸುತೆ’ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು.   ತಂದೆ ವೆಂಕಟಪ್ಪನವರು ಮತ್ತು   ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆ ಬಂತು.   ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು.  ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ  ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ  ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು.  ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು ಮುಂತಾದವರ  ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು.  ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು.  ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಪ್ರಾರಂಭದಲ್ಲಿ ಸಾಯಿಸುತೆ ಅವರೂ ಬಹುತೇಕ ಬರಹಗಾರರಂತೆ  ಪದ್ಯಗಳನ್ನು ಬರೆದರು. ಮುಂದೆ ಅವರಲ್ಲಿ  ಕಾದಂಬರಿ ಲೋಕದ ಕಡೆ ಒಲವು ಹರಿಯಿತು.  ಸಾಯಿಸುತೆ ಅವರು ಮೊದಲು ಕಾದಂಬರಿ ಬರೆದದ್ದು 1970ರ ವರ್ಷದಲ್ಲಿ.  ಮಿಂಚುಎಂಬ ಕಾದಂಬರಿಯನ್ನು ಬರೆದು ಕೆಲವು ವರ್ಷಗಳ ಕಾಲ ಹಾಗೇ ಇಟ್ಟುಕೊಂಡಿದ್ದರು.  ಪ್ರಜಾಮತದಲ್ಲಿ ಇವರ ವಿವಾಹ ಬಂಧನಧಾರವಾಹಿಯಾಗಿ ಪ್ರಕಟವಾಯಿತು.  ರತ್ನ ಆಗಿದ್ದವರು ಸಾಯಿಬಾಬಾ ಅವರ ಮೇಲಿನ ಭಕ್ತಿಯಿಂದ ತಮ್ಮನ್ನು ಸಾಯಿಸುತೆಯಾಗಿಸಿಕೊಂಡ ಸಾಯಿಸುತೆ ಅವರಿಗೆ ಬರವಣಿಗೆ ಎಂಬುದು ಸಹಜ ಅಭಿವ್ಯಕ್ತಿಯ ಮಾಧ್ಯಮ.  ನಾನು ಮಾತನಾಡುವುದು ಕಡಿಮೆ.  ಸುತ್ತಲಿನ ಪರಿಸರವನ್ನು ನೋಡುತ್ತಾ ಏನೋ ಹೇಳಬೇಕು ಅನ್ನಿಸಿದಾಗ ಕಾದಂಬರಿಗಳನ್ನು ಬರೆದೆ. ಸುತ್ತಲಿನ ಸಮಾಜವೇ ನನಗೆ ಸ್ಫೂರ್ತಿ- ಇದು ಸಾಯಿಸುತೆ ಅವರು ತೆರೆದಿಡುವ ಅನುಭಾವ. ಈ ಸ್ಫೂರ್ತಿ ನಿಂತ ನೀರಾಗದೆ ನಾಲ್ಕು ದಶಕಗಳನ್ನೂ ಮೀರಿ  ನಿರಂತರವಾಗಿ ಪ್ರವಹಿಸುತ್ತಲೇ ಇದೆ.  ಅವರು ಇದುವರೆಗೆ ಬರೆದಿರುವ ಕಾದಂಬರಿಗಳ ಸಂಖ್ಯೆ ಸುಮಾರು 150ರ ಸಮೀಪದ್ದು. ಇಷ್ಟೊಂದು ಸುದೀರ್ಘ ಕಾಲದ ಜನಪ್ರಿಯ ಬರವಣಿಗೆ ಬರಿದೇ ಹೊತ್ತುಹೋಗಲು ಮಾತನಾಡುವ ಪ್ರವೃತ್ತಿಯಿಂದ ಸಾಧ್ಯವಿಲ್ಲ ಎಂಬುದು ಜನಮನ ಬಲ್ಲದು.  ಹಾಗಾಗಿಯೇ ಇಂದೂ ಅವರ ಬರಹಗಳು ಎಲ್ಲ ರೀತಿಯ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ನಿರಂತರವಾಗಿ ತನ್ನ ಜನಪ್ರಿಯತೆಯನ್ನು ಕಾದುಕೊಂಡು ಬಂದಿದೆ.

ಇಷ್ಟೊಂದು ಕಾದಂಬರಿಗಳನ್ನು ಬರೆದಿದ್ದೀರಲ್ಲಾ, ಕಥಾವಸ್ತುಗಳು ಹೇಗೆ ಹೊಳೆಯುತ್ತವೆ? ಎಂದರೆ ಅನೇಕ ಕಾದಂಬರಿಗಳಿಗೆ ವಸ್ತುಗಳನ್ನು ಸುತ್ತಲಿನ ಸಮಾಜದಿಂದ ತೆಗೆದುಕೊಂಡಿದ್ದೇನೆ. ಅನೇಕ ಓದುಗರು ಕರೆ ಮಾಡಿ, ಪುಟಗಟ್ಟಲೆ ಪತ್ರ ಬರೆದು ವಸ್ತು ಕೊಟ್ಟು ಬರೆಯಿರಿ ಎಂದದ್ದೂ ಎಷ್ಟೋ ಇದೆ.   ನಾನು ಪ್ರತಿಯೊಂದು ಕಾದಂಬರಿಯನ್ನೂ ಭಿನ್ನವಸ್ತುವನ್ನಾಯ್ದುಕೊಂಡೇ ಬರೆದಿದ್ದೇನೆ.”   ಎಂದು ಸಾಯಿಸುತೆ ತಮ್ಮ ಬರಹದ ಕುರಿತಾಗಿ ಆತ್ಮೀಯವಾಗಿ ಪ್ರತಿಕ್ರಯಿಸುತ್ತಾರೆ.

ಸಾಯಿಸುತೆ ಅವರ ಕಥೆಗಳನ್ನಾಧರಿಸಿದ ಸಪ್ತಪದಿ, ಬಾಡದ ಹೂವು, ಕಲ್ಯಾಣ ರೇಖೆ, ಇಬ್ಬನಿ ಕರಗಿತು, ಗಂಧರ್ವ ಗಿರಿ, ಶ್ವೇತ ಗುಲಾಬಿ, ಮಿಡಿದ ಶೃತಿ  ಮುಂತಾದ ಹತ್ತಾರು ಸಿನಿಮಾಗಳು ಮೂಡಿಬಂದಿವೆ. 'ಬಾಡದ ಹೂವು', 'ಮಿಡಿದ ಶೃತಿ'  ಚಿತ್ರಗಳು ಉತ್ತಮ ಚಿತ್ರಕ್ಕಾಗಿನ ಪ್ರಶಸ್ತಿ ಗಳಿಸಿವೆ.  'ಶ್ವೇತ ಗುಲಾಬಿ' ಇತರ ಭಾಷೆಗಳಲ್ಲೂ ಚಲನಚಿತ್ರವಾಗಿ ಯಶಸ್ಸು ಸಾಧಿಸಿದೆ.

ಸಾಯಿಸುತೆ ಅವರು ಗಳಿಸಿರುವ ಅಭಿಮಾನಿ ಬಳಗ ತುಂಬಾ ದೊಡ್ಡದು.  ಗಾನಗಂಗೆ ಗಂಗೂಬಾಯಿ ಹಾನಗಲ್ಲರು ಸಾಯಿಸುತೆ ಅವರ ಬಳಿ ನನಗೆ ಬಿಡುವು ದೊರೆತಾಗಲೆಲ್ಲಾ ನಿಮ್ಮ ಕಾದಂಬರಿ ಓದುತ್ತೇನೆಎಂದಿದ್ದರು.  ತೊಂಬತ್ತೈದು ವರ್ಷ ಹಿರಿಯ ವಯಸ್ಸಿನ ಒಬ್ಬ ಪಂಡಿತರು ಸಾಯಿಸುತೆ ಅವರ ಬಳಿ ಬಂದು ನಿಮ್ಮ ಕಾದಂಬರಿಗಳನ್ನು ಎಳೆಯರಿಂದ ವೃದ್ಧರವರೆಗೆ ಓದಬಹುದುಎಂದು ಮೆಚ್ಚಿ ಆಶೀರ್ವದಿಸಿದ್ದರು.    ಹೆಣ್ಣು ಗಂಡು ಮಕ್ಕಳೆಂಬ ಭೇಧವಿಲ್ಲದೆ ಅಂದಿನ ದಿನಗಳಲ್ಲಿ ಅವರ ಧಾರವಾಹಿಗಳಿಗಾಗಿ ವಾರಪತ್ರಿಕೆಗಳಿಗೆ ಮುಗಿಬೀಳುತ್ತಿದ್ದ ಅನುಭವಗಳು ಇಂದೂ ನಮಗೆ ಅಪ್ಯಾಯಮಾನವಾಗಿಯೇ ಇವೆ.

ಸಾಯಿಸುತೆ ಅವರ ಕಾದಂಬರಿಗಳ ಶೀರ್ಷಿಕೆಗಳಲ್ಲೇ ಒಂದು ರೀತಿಯ ಅಪ್ಯಾಯಮಾನತೆ ಇದೆ. ಹೊಂಬೆಳಕು, ವಿವಾಹ ಬಂಧನ, ವಿವಂಚಿತೆ, ವಸುಂಧರ, ಕರಗಿದ ಕಾರ್ಮೋಡ, ಬಾಡದ ಹೂ, ಶುಭಮಿಲನ, ಗಿರಿಧರ, ಮಧುರಗಾನ, ಗಂಧರ್ವಗಿರಿ, ಇಬ್ಬನಿ ಕರಗಿತು, ಶ್ವೇತ ಗುಲಾಬಿ, ಅನುಬಂಧದ ಕಾರಂಜಿ, ಅಭಿಲಾಷ, ಅಮೃತ ಸಿಂಧು, ಅರುಣ ಕಿರಣ, ಆಡಿಸಿದಳು ಜಗದೋದ್ಧಾರನಾ, ಆರಾಧಿತೆ, ಇಂದ್ರ ಧನುಸ್ಸು, ಕಲ್ಯಾಣ ರೇಖೆ, ಕಾರ್ತೀಕದ ಸಂಜೆ, ಕೋಗಿಲೆ ಹಾಡಿತು, ಚಿರ ಬಾಂಧವ್ಯ, ಚೈತ್ರದ ಕೋಗಿಲೆ, ಜನನೀ ಜನ್ಮಭೂಮಿ, ಜೀವನ ಸಂಧ್ಯ, ಡಾ| ವಸುಧಾ, ದಂತದ ಗೊಂಬೆ, ದೀಪಾಂಕುರ, ಧವಳ ನಕ್ಷತ್ರ, ನನ್ನ ಭಾವ ನಿನ್ನ ರಾಗ, ನನ್ನೆದೆಯ ಹಾಡು, ನಮ್ರತಾ, ನಲಿದ ಸಿಂಧೂರ, ನವಚೈತ್ರ, ನಾಟ್ಯ ಸುಧಾ, ನಿಶಾಂತ್, ನಿಶೆಯಿಂದ ಉಷೆಗೆ, ನೂರು ನೆನಪು, ಪಂಚವಟಿ, ಪಸರಿಸಿದ ಶ್ರೀಗಂಧ, ಪಾಂಚಜನ್ಯ, ಪುಷ್ಕರಿಣಿ, ಪೂರ್ಣೋದಯ, ಪ್ರಿಯಸಖೀ, ಪ್ರೀತಿಯ ಹೂಬನ, ಪ್ರೇಮ ಸಾಫಲ್ಯ, ಬಣ್ಣದ ಚುಂಬಕ, ಬಾಂದಳದ ನಕ್ಷತ್ರ,  ಬಾನು ಮಿನುಗಿತು, ಬಿರಿದ ನೈದಿಲೆ, ಬಿಳಿ ಮೋಡಗಳು, ಬೆಳದಿಂಗಳ ಚೆಲುವೆ, ಬೆಳ್ಳಿ ದೊಣಿ, ಭಾವ ಸರೋವರ, ಮಂಗಳ ದೀಪ. ಮಂಜಿನಲ್ಲಿ ಮಿಂದ ಪುಷ್ಪ, ಮಂದಾರ ಕುಸುಮ, ಮತ್ತೊಂದು ಬಾಡದ ಹೂ, ಮಧುರ ಆರಾಧನ,  ಮಮತೆಯ ಸಂಕೋಲೆ. ಮಾಗಿಯ ಮಂಜು. ಮಾನಸ ವೀಣಾ, ಮಿಂಚು, ಮಿಡಿದ ಶೃತಿ, ಮುಂಜಾನೆಯ ಮುಂಬೆಳಕು, ಮುಗಿಲ ತಾರೆ, ಮೂಡಿ ಬಂದ ಶಶಿ, ಮೇಘವರ್ಷಿಣಿ, ಮೌನ ಆಲಾಪನ, ರಜತಾದ್ರಿಯ ಕನಸು, ರಾಗ ಬೃಂದಾವನ, ರಾಧ ಮೋಹನಾ, ವರ್ಷ ಬಿಂದು, ವಸಂತದ ಚಿಗುರು, ವಿಧಿವಂಚಿತೆ, ಶರದೃತುವಿನ ಚಂದ್ರ, ಶುಭಮಿಲನ, ಶ್ಯಾನುಭೋಗರ ಮಗಳು, ಶ್ರಾವಣ ಪೂರ್ಣಿಮ, ಶ್ರೀರಸ್ತು ಶುಭಮಸ್ತು, ಸಂಧ್ಯಾ ಗಗನ, ಸಪ್ತಪದಿ, ಸಪ್ತರಂಜನಿ, ಸಮ್ಮಿಲನ, ಸುಪ್ರಭಾತದ ಹೊಂಗನಸು, ಸುಭಾಷಿಣಿ, ಸುಮಧುರ ಭಾರತಿ, ಸುಮಧುರ ಸಂಗಮ, ಸೊಬಗಿನ ಪ್ರಿಯದರ್ಶಿನಿ, ಸ್ನೇಹ ಮಾಧುರಿ, ಸ್ವಪ್ನ ಸಂಭ್ರಮ, ಸ್ವರ್ಗದ ಹೂ, ಸ್ವರ್ಣ ಮಂದಿರ, ಹಂಸ ಪಲ್ಲಕಿ, ಹಿಮಗಿರಿ ನವಿಲು, ಹೃದಯ ರಾಗ, ಹೇಮ ವಿಹಾರಿ, ಹೇಮಂತದ ಸೊಗಸು ಇವೆಲ್ಲಾ ಸಾಯಿಸುತೆಯವರ ಕಾದಂಬರಿಯ ಸುಂದರ ಶೀರ್ಷಿಕೆಗಳು.

ಸಾಯಿಸುತೆಯವರ ಸಣ್ಣಕಥೆಗಳೂ ಕೊಡಾ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ಅವರ ಶಿಶುಸಾಹಿತ್ಯ ಕೂಡಾ ಪಾಪಚ್ಚಿಮುಂತಾದ ಶಿಶುಸಾಹಿತ್ಯ ಪತ್ರಿಕೆಗಳನ್ನು ಅಲಂಕರಿಸಿವೆ. ಸಾಕ್ಷರತಾ ಆಂದೋಲನದ ಕಾರ್ಯಕ್ರಮದಡಿ ವಯಸ್ಕರ ಶಿಕ್ಷಣಕ್ಕಾಗಿ ಹಲವಾರು ಪಠ್ಯ ಪುಸ್ತಕಗಳನ್ನು ಅವರು ರೂಪಿಸಿದ್ದಾರೆ.   ಬಾನುಲಿಗಾಗಿ ಹಲವು ನಾಟಕಗಳನ್ನು ಬರೆದಿದ್ದಾರೆ. ಧಾರವಾಡ ಪಟ್ಟಣದಲ್ಲಿ ಸರ್ಕಲ್‌ನಲ್ಲಿ ನಿಂತು ಕಲ್ಲೊಗೆದರೆ ಒಬ್ಬ ಕವಿಗೆ ತಗಲುವಂತೆ ಯಾವುದೇ ಗ್ರಂಥಾಲಯಕ್ಕೆ ಹೋಗಿ ಕೈ ಇಟ್ಟರೆ ಸಿಗುವುದೇ ಸಾಯಿಸುತೆ ಅವರ  ಕಾದಂಬರಿಎಂಬುದು ಕನ್ನಡ ನಾಡಿನಲ್ಲಿ ಜನಜನಿತವಾದ ಮಾತು.  ಹಾಗಾಗಿ ಅವರು 'ಲೈಬ್ರರಿ ಸಾಮ್ರಾಜ್ಞಿ' ಎಂದೂ ಪ್ರಸಿದ್ಧರು.

ಸಾಯಿಸುತೆ ಅವರಿಗೆ ಸಾಹಿತ್ಯಕ ಮತ್ತು ಚಲನಚಿತ್ರ ಮಾಧ್ಯಮದ ಹಲವಾರು ಪ್ರಶಸ್ತಿ ಗೌರವಗಳು ಅರಸಿ ಬಂದಿವೆ.  ಅವರು ಹಲವಾರು ಮಹಿಳಾ ಸಮ್ಮೇಳನಗಳ ಅಧ್ಯಕ್ಷತೆ ನಿರ್ವಹಿಸಿದ್ದಾರೆ. ರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನ,  ದಾನಚಿಂತಾಮಣಿ ಅತ್ತಿಮಬ್ಬೆ ಸ್ಮಾರಕ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿಯ WHO IS WHOನಲ್ಲಿ ಸೇರ್ಪಸಡೆ. ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಶ್ರೀ ಪ್ರಶಸ್ತಿ, ತುಮಕೂರು ಜಿಲ್ಲಾ ಲೇಖಕಿಯರ ಸಂಘದಿಂದ ಸಾಹಿತ್ಯ ಸಂಪನ್ನೆ ಪ್ರಶಸ್ತಿ ಮುಂತಾದವು ಅವರಿಗೆ ಸಂದ ಕೆಲವೊಂದು ಪ್ರಮುಖ ಗೌರವಗಳು.

ಈ ಹಿರಿಯ ಸಾಧಕಿ ಸಾಯಿಸುತೆ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ಸಲ್ಲಿಸೋಣ. ಅವರ ಬದುಕು ಸುಂದರವಾಗಿರಲಿ.  ಅವರಿಂದ ಸುಂದರ ಕಥಾನಕಗಳು ಹೊರಹೊಮ್ಮುತ್ತಿರಲಿ.


Tag: Sayisute

3 ಕಾಮೆಂಟ್‌ಗಳು:

Unknown ಹೇಳಿದರು...

ಸಾಯಿಸುತೆ ಅವರ ಬಗ್ಗೆ ಕೇಳಿ ನನಗೆ ತುಂಬಾ ಖುಷಿಯಾಯಿತು. ನನ್ನ ಗೆಳತಿಗೆ ಸಾಯಿಸುತೆಯವರು ಬರೆದ ಕಾದಂಬರಿಗಳನ್ನು ಓದುವುದೆಂದರೆ ತುಂಬಾ ಇಷ್ಟ! ನಿಮ್ಮಿಂದ ನನಗೆ ಒಂದು ಸಹಾಯವಾಗಬೇಕಿತ್ತು. ಅದೇನೆಂದರೆ, ನಾನು ನನ್ನ ಗೆಳತಿಗೆ ಸಾಯಿಸುತೆಯವರು ಬರೆದ 'ಸಪ್ತರಂಜನಿ' ಕಾದಂಬರಿಯನ್ನು ನೆನಪಿನ ಕಾಣಿಕೆಯನ್ನಾಗಿ ಕೊಡಲು ಇಷ್ಟಪಟ್ಟಿರುತ್ತೇನೆ. ಅದರಿಂದ ತಾವು ದಯವಿಟ್ಟು 'ಸಪ್ತರಂಜನಿ' ಕಾದಂಬರಿ ಎಲ್ಲಿ ಸಿಗುತ್ತದೆ ಎಂದು ಮಾಹಿತಿಯನ್ನು ನೀಡಬೇಕಾಗಿ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.

ತಿರು ಶ್ರೀಧರ ಹೇಳಿದರು...

ನಮಸ್ಕಾರ ವಿನೂತನ್ ಕುಮಾರ್ ಅವರಿಗೆ. ತಾವು ಸಪ್ನಾ ಬುಕ್ ಹೌಸಿನಲ್ಲಿ ಪ್ರಯತ್ನಿಸಿ

Unknown ಹೇಳಿದರು...

ಧನ್ಯನಾದಗಳು ಶ್ರೀಧರ್ ಅವರಿಗೆ...