ಗುರುವಾರ, ಆಗಸ್ಟ್ 29, 2013

ಆರ್. ಡಿ. ಬರ್ಮನ್

ನಾದ ಬರ್ಮನ್
-ಹಂಸಲೇಖ

(ಭಾರತದ ಮಹಾನ್ ಸಿನೆಮಾ ಸಂಗೀತ ನಿರ್ದೇಶಕರಲ್ಲೊಬ್ಬರು ಆರ್. ಡಿ. ಬರ್ಮನ್. ಅವರ 75ನೇ ಜನ್ಮದಿನ ಜೂನ್ 27ರಂದು . ಕನ್ನಡದ ಹಿರಿಯ ಚಿತ್ರಸಂಗೀತ ನಿರ್ದೇಶಕ ಹಂಸಲೇಖ, ಬರ್ಮನ್‌ರನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.)

ಭಾರತದ ಮಹಾನ್ ಸಿನೆಮಾ ಸಂಗೀತದ ನಿರ್ದೇಶಕರಲ್ಲೊಬ್ಬರಾದ ಆರ್.ಡಿ.ಬರ್ಮನ್ ಅವರನ್ನು ಹೊಸ ಪೀಳಿಗೆಯ ಶ್ರೋತೃಗಳು ಮರೆತಿರಬಹುದು. ಈ ರಿದಂ ಕಿಂಗ್, ಎಂಪರರ್ ಆಫ್ ಎಕ್ಸ್‌ಪರಿಮೆಂಟ್ಸ್ ಇತ್ಯಾದಿ ಬಿರುದುಬಾವಲಿಗಳಿದ್ದ ಆರ್.ಡಿ.ಬರ್ಮನ್ ಅವರನ್ನು ಯಾವತ್ತೂ ಯಾರೂ ಮರೆಯಲು ಸಾಧ್ಯವೇ ಇಲ್ಲ. ಈತ ದಿ ಗ್ರೇಟ್ ಮ್ಯೂಸಿಕ್ ಡೈರೆಕ್ಟರ್ ಎಸ್.ಡಿ.ಬರ್ಮನ್ ಅವರ ಪುತ್ರ.

ಚಲನಚಿತ್ರ ಸಂಗೀತಕ್ಕೆ ಹಲವಾರು 'ಆದಿ'ಗಳು ಇದ್ದಾರೆ. ಅವರಲ್ಲಿ ಸಿ. ರಾಮಚಂದ್ರ, ಎಸ್.ಡಿ. ಬರ್ಮನ್, ನೌಷದ್, ಗುಲಾಂ ಆಲಿ ಪ್ರಮುಖರು. ಎಸ್.ಡಿ.ಬರ್ಮನ್ ಅವರ ಅಸ್ತಿತ್ವವೇ ಒಂದು ಪ್ರಯೋಗ. ಗೈಡ್, ತೇರೆ ಮೇರೆ ಸಪ್ನೆ, ಜ್ಯೂಯೆಲ್ ಥೀಫ್, ಅಭಿಮಾನ್, ಅರಾಧನ ಮುಂತಾದ ಚಿತ್ರಗಳು ಹಿಂದಿ ಚಿತ್ರರಂಗಿಗರ ಕೋಡುಗಳು. ಎಸ್.ಡಿ.ಬರ್ಮನ್‌ರ ಒಂದೊಂದು ಹಾಡೂ ಭಾರತದ ಎಲ್ಲಾ ಪ್ರಾದೇಶಿಕ ಸಂಗೀತ ನಿರ್ದೇಶಕರ ತಲೆಪಾಡು ಮತ್ತು ಹೊಟ್ಟೆಪಾಡಾಗಿತ್ತು.

ಎಸ್.ಡಿ.ಬರ್ಮನ್‌ರ ಹಾಡುಗಳ ಹುಚ್ಚು ಪ್ರೇಮಿಯೊಬ್ಬ ಅವರನ್ನು ಭೇಟಿಯಾಗಿ, ನನಗೊಬ್ಬ ಮಗ ಹುಟ್ಟಿದರೆ, ನಿಮ್ಮ ಹೆಸರನ್ನೇ ಇಡುತ್ತೇನೆ ಅಂದ. ಅಚ್ಛಾ ಎಂದು ಹುಬ್ಬೇರಿಸಿ ಓಕೆ ಎಂದರು ಬರ್ಮನ್. ಮುಂದೆ ಆತನಿಗೆ ಒಂದು ಗಂಡು ಮಗುವಾಯ್ತು. ಅದಕ್ಕಾತ, ಸಚಿನ್ ತೆಂಡೂಲ್ಕರ್ ಅಂತ ನಾಮಕರಣ ಮಾಡಿದ. ಇಂದು ಕಣ್ಣೆದುರೇ ಇರುವ ನಮ್ಮ ಕ್ರಿಕೆಟ್ ದೇವರ ಸಾಧನೆಯ ಒಳಗಿರುವ ಲಯ, ನಾದ ಎಲ್ಲಿಂದ ಹರಿದು ಬಂದಿದೆ ಕಂಡಿರಾ?

ರಾಹುಲ್ ದೇವ್ ಬರ್ಮನ್ ಎಂಬುದು 'ಇಕ್‌'ನೇಮ್, ಆರ್.ಡಿ.ಬರ್ಮನ್ ಎಂಬುದು ನಿಕ್‌ನೇಮ್. ಈತ ಶೂನ್ಯವೆ ಸಂಪಾದಿಸಿಕೊಂಡ ಅನಿವಾರ್ಯ ಪ್ರತಿಭೆ. ಕೆಲವು ರಂಗಗಳು ತಮ್ಮಲ್ಲಿ ಉಂಟಾದ ಕಂದಕವನ್ನು ತುಂಬಿಕೊಂಡು ಮಗ್ಗುಲು ಬದಲಿಸಲು ಇಂತಹ ದೈತ್ಯ ಪ್ರತಿಭೆಗಳನ್ನು ಆರಿಸಿಕೊಳ್ಳುತ್ತವೆ. ಚಲನಚಿತ್ರ  ಸಂಗೀತ ಹಂತ ಹಂತವಾಗಿ ಮೇಲೇರಿದ್ದು ಅದರ ಶ್ರುತಿಗಳ ಮೂಲಕ. ಮೊದಲು ಸಿನಿಮಾಕ್ಕೆ ಪ್ರವೇಶ ಪಡೆದುಕೊಂಡದ್ದು ಭಾರತದ ಅಂದಿನ ರಂಗಗೀತೆಗಳು. ಗಾಯಕ ನಟ ಸೈಗಾಲ್ ಅವರದು ಇಛಿ ಶ್ರುತಿಯ ಕಾಲ. ಆಗ ಮಂದ್ರಸ್ಥಾಯಿಯಲ್ಲಿ ಹಾಡುಗಳು ಹುಟ್ಟಿಬರುತ್ತಿದ್ದವು. ಎಸ್.ಡಿ.ಬರ್ಮನ್ ಕಾಲಕ್ಕೆ ಹಾಡುಗಳು c  ಮತ್ತು c#  ಶ್ರುತಿಗಳಿಗೇರಿದವು. ಅಂದರೆ ಬಿಳಿ ಒಂದು, ಕರಿ ಒಂದು ಶ್ರುತಿಗಳು ಜನಪ್ರಿಯವಾದವು. ನಂತರ ದಾಳಿಯಿಟ್ಟ ಶಂಕರ್ ಜೈಕಿಷನ್ ಜೋಡಿ ಮತ್ತು ಅವರ ಷಾಗಿರ್‌್ ಗಳಾಗಿದ್ದ ಲಕ್ಷ್ಮಿಕಾಂತ್ ಪ್ಯಾರೇಲಾಲ್ ಜೋಡಿ ಸುಮಾರು ನಾಲ್ಕು ದಶಕ ಹಿಂದಿ ಹಾಡುಗಳನ್ನು ಎಲ್ಲಾ ಶ್ರುತಿಗಳಲ್ಲೂ ಅಡ್ಡಾಡಿಸಿಬಿಟ್ಟರು. ಆ ಕಾಲದಲ್ಲೆ ಅಮರ ಗಾಯಕ ಮಹಮದ್ ರಫಿ ಅವತರಿಸಿದ್ದೂ ಹಾಡಿದ್ದೂ. ಸಾತ್ ಸ್ವರೋಂಕಾ ಮಹಾರಾಜ್ ಎಂದು ಕರೆಸಿಕೊಂಡ ರಫಿ ಸಾಧನೆಯ ಔನ್ನತ್ಯವೇ ಹಿಂದೀ ಚಿತ್ರರಂಗದ ಒಂದು ಪರಮ ಘಟ್ಟ. ಆ ಘಟ್ಟದ ತುದಿಯಲ್ಲಿ ಹುಟ್ಟಿದ ಪ್ರಯೋಗ ಸೂರ್ಯನೇ ಈ ‘D’Minor ಶ್ರುತಿಯ ಆರ್.ಡಿ.ಬರ್ಮನ್.

ಆರ್.ಡಿ ಅಂದರೆ ಮ್ಯೂಸಿಷಿಯನ್ನರ ಡಾರ್ಲಿಂಗ್. ವಾದ್ಯಗಾರರ ಜೊತೆ ಅವರು ಬಾಲ್ಯ ಸ್ನೇಹಿತನಂತೆ ಸದಾ ನಗುತ್ತಾ, ನಗಿಸುತ್ತಾ ಬದುಕಿದವರು. ಕೋಲ್ಕತ್ತದ ಒಂದು ಸ್ಟುಡಿಯೋದಲ್ಲಿ ಒಬ್ಬ ಗಿಟಾರ್ ವಾದಕನಿಗೆ ಆರ್.ಡಿ.ಬರ್ಮನ್ ಹೀಗೆ ಕಿವಿಮಾತು ಹೇಳಿದ್ದನ್ನು ಮತ್ತೊಬ್ಬ ಖ್ಯಾತ ಗಾಯಕಿ ಉಷಾ ಉತ್ತಪ್ ನನಗೆ ಹೇಳಿದರು: 'ನೋಡು ಗೆಳೆಯಾ ನಿನ್ನ ವಾದ್ಯವನ್ನು ನೀನು ಚೆನ್ನಾಗಿ ಪಳಗಿಸಿಕೊಂಡಿದ್ದೀಯ. ನೀನು ನೂರು ಹಾಡುಗಳನ್ನು ನುಡಿಸಬಲ್ಲೆ ಅನ್ನೋದು ಜಂಭ ಅನ್ನಿಸ್ಕೊಳುತ್ತೆ. ಒಂದು ಹಾಡನ್ನು ಮಾತ್ರ ಚೆನ್ನಾಗಿ, ತುಂಬಾ ತುಂಬಾ ಚೆನ್ನಾಗಿ ನುಡಿಸಬಲ್ಲೆ ಅನ್ನೋದು ನಿನ್ನ ಪರ್‌ಫೆಕ್ಷನ್ ತೋರಿಸುತ್ತೆ. ಸಿನೆಮಾ ಹಾಡುಗಳು ಚಿಕ್ಕವಾಗಿದ್ರು ಅವು ಪರ್‌ಫೆಕ್ಟ್ ಆಗಿರಬೇಕು. ಅದೇ ಸಿನೆಮಾ ಸಂಗಿತದ ಮುಖ್ಯ ನಿಯಮ'

ಬರ್ಮನ್ ಬಾಲಪ್ರತಿಭೆ. ಒಂಬತ್ತನೆ ವಯಸ್ಸಿನಲ್ಲಿಯೆ ಹಾಡುಗಳನ್ನು ಕಂಪೋಸ್ ಮಾಡಿದ್ದ. ಹಾಡುಗಳ ಮಟ್ಟುಗಳನ್ನು ಹುಟ್ಟು ಹಾಕುವುದರಲ್ಲಿ ನಿಸ್ಸೀಮನಾಗಿದ್ದ. ಒಮ್ಮೆ ತಾನು ಸಂಯೋಜಿಸಿದ್ದ ಗೀತೆಯನ್ನು ತಂದೆಗೆ ಕೇಳಿಸಿದ. ತಂದೆ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಕೊಡದೆ ಮೂಗು ಮುರಿದರು. ಅದಾದ ಕೆಲವು ತಿಂಗಳ ನಂತರ ರಫಿ ಅಮೃತ ಕಂಠದ ಪ್ರೇಮಗೀತೆಯೊಂದು ಸೂಪರ್ ಡೂಪರ್ ಹಿಟ್ಟಾಗಿ ವಿಜೃಂಭಿಸತೊಡಗಿತು. ನಮ್ಮ ಈ ಬಾಲಪ್ರತಿಭೆ ಬೆಚ್ಚಿ ಬೆಪ್ಪಾಗಿ ಅಪ್ಪನ ಬಳಿ ಬಂದು 'ಅಪ್ಪಾ ಈ ಟ್ಯೂನ್ ನಂದಲ್ವಾ? ನೀವೇ ನಿಮ್ಮ ಮಗನ ಟ್ಯೂನನ್ನ ಕದ್ದಿದೀರಲ್ಲ ಇದು ಸರೀನಾ?' ಎಂದಾಗ ತಂದೆ ಮಗನ ಭವಿಷ್ಯವನ್ನೆ ನುಡಿದಿದ್ದರು: 'ಮುಂದೆ ನಿನ್ನ ಟ್ಯೂನ್‌ಗಳನ್ನ ಈ ದೇಶಾನೇ ಕದಿಯುತ್ತೆ ಮಗೂ. ಅದಕ್ಕೆ ನಾನು ನಾಂದಿ ಹಾಕಿದ್ದೀನಿ ಅಷ್ಟೆ'

ದಿ ಲವ್ಲಿ ಸ್ಯಾಕ್ಸೊಪೋನ್ ಪ್ಲೇಯರ್ ಆಫ್ ಇಂಡಿಯನ್ ಫಿಲಂ ಮ್ಯೂಸಿಕ್ ಬಾಸು ಮನೋಹರಿ ಅವರು ಆರ್‌ಡಿಬಿ ಬಲಗೈಯಾಗಿದ್ದರು. ಭೂಪೇಂದರ್ ಎಂಬ ಗಂಧರ್ವ ಕಂಠದ ಗಾಯಕ, ಗಿಟಾರ್ ವಾದಕ ಎಡಗೈಯತಿದ್ದರು. ಒಂದು ದಿನ ಈ ಗೆಳೆಯರ ಬೈಠಕ್ ನಡೆದಿತ್ತು. ಹೊಸ ಹಾಡುಗಳಿಗೆ ಎಲ್ಲರೂ ತಲೆ ಕೆಡಿಸಿಕೊಳ್ಳುತ್ತಿದ್ದರು. ಆರ್‌ಡಿಬಿಗಿದ್ದ ಚಿಂತೆಯೆಲ್ಲಾ ಒಂದೆ. ತನ್ನ ಪಲ್ಲವಿ ಯಾವ ಹೊಸ ವಾದ್ಯದಲ್ಲಿ ಬೆಳಗುತ್ತದೆ? ತಂತ್ರ ಯಾವುದು? ಅದರಲ್ಲಿ ಹೊಸತೇನು?

ಇದೇ ಧ್ಯಾನದಲ್ಲಿ ಕುಳಿತಿದ್ದ ಆರ್‌ಡಿಬಿ ಕಿವಿಗೆ ದನಿಯೊಂದು ಅಪ್ಪಳಿಸಿತು. ಕಣ್ತೆರೆದು ನೋಡಿದ. ಎಲೆಕ್ಟ್ರಿಕ್ ಗಿಟಾರ್ ಒಂದು ಕೆಳಕ್ಕೆ ಬಿದ್ದು ದನಿ ತರಂಗಗಳನ್ನೆಬ್ಬಿಸಿತ್ತು. ಆ ದನಿಗಳು ಹಿಮಾಲಯದ ಗಿರಿಕಂದರಗಳಲ್ಲಿ ಉಂಟಾಗುವ ದನಿ- ಪ್ರತಿಧ್ವನಿಗಳಂತೆ ಅನುಕಂಪಿಸುತ್ತಿದ್ದವು. ಆರ್‌ಡಿಬಿಗೆ ನಿಸರ್ಗವೇ ಕಿವಿ ಬಳಿ ನಿಂತು ಹೊಸತಂತ್ರ ಹೇಳಿಕೊಟ್ಟ ಹಾಗೆ ಆಯಿತು. ರಸಭಂಗಕ್ಕೆ ಗಿಟಾರ್ ವಾದಕ ಪೆಚ್ಚಾಗಿ ನಿಂತಿರುವಾಗ ಆರ್‌ಡಿಬಿ ಆತನಿಗೆ ಗಿಟಾರನ್ನು ಮತ್ತೆ ಎತ್ತಿ ಕೆಳಕ್ಕೆ ಹಾಕು ಎಂದಾಗ ಭಯಗೊಂಡ, ಆದರೆ ಹೇಳಿದಂತೆ ಮಾಡಿದ. ನಂತರ ಅದೇ ಪರಿಣಾಮವನ್ನು ವಾದ್ಯದಲ್ಲಿ ನುಡಿಸಿ ತೋರು ಎಂದು ಹುರಿದುಂಬಿಸಿದರು. ಅಲ್ಲಿಂದ ಶುರುವಾಯ್ತು ಆರ್.ಡಿ.ಬರ್ಮನ್ ಟ್ರೆಂಡ್. ಆ ಟ್ರೆಂಡ್ ಇಡೀ ದೇಶದಲ್ಲೇ ಪ್ರತಿದ್ವನಿಸಿತು.

'ತೀಸ್ರೀ ಮಂಜಿಲ್‌' ಎಂಬ ಮೆಗಾ ಮ್ಯೂಸಿಕ್ ಹಿಟ್ ಕೊಡುವವರೆಗೂ ಬರ್ಮನರ ಪ್ರಯೋಗಗಳ ಪಾಡು ಹೇಳತೀರದು. ಅವು ಗೆಲ್ಲಲು ಕಾಲ ಪಕ್ವವಾಗಿರಲಿಲ್ಲ. ತಾನು ಗೆಲ್ಲುವವರೆಗೂ ಆತ ತಂದೆಯ ಅದ್ಭುತ ಸಂಯೋಜನೆಗಳಿಗೆ ಅತ್ಯದ್ಭುತ ವಾದ್ಯವೃಂದದ ಕೌಶಲ್ಯ ಅಳವಡಿಸುತಿದ್ದ. ಅಲ್ಲಿ ಪಡೆದುಕೊಂಡ ಅನುಭವ ಮುಂದೆ ಮೂರು ದಶಕ ಚಲನಚಿತ್ರ ಸಂಗೀತಲೋಕವನ್ನೇ ಆಳುವ ಶಕ್ತಿಯನ್ನು ಆತನಿಗೆ ತಂದುಕೊಟ್ಟಿತು.

'ರೆಹನಾ ಬೀತ್ ಜಾಯೆ... ಶ್ಯಾಂನ ಆಯೆ' ಎನುವ ಹೃದಯ ಹರಿಯುವ ಸಂಯೋಜನೆ ಭಾರತದ ಯಾವ ಸಂಗೀತ ನಿರ್ದೇಶಕನೂ ಕಲ್ಪಿಸಿಕೊಳ್ಳಲಾಗದಷ್ಟು ಸಾಧ್ಯತೆಗಳನ್ನು ಸೃಷ್ಟಿಸಿತು. ಅದ್ಯಾವ ಅಮೃತ ಘಳಿಗೆಯಲ್ಲಿ ಅವರು ಈ ರಾಗವನ್ನು ಕೈಗೆತ್ತಿಕೊಂಡರೋ ಕಾಣೆ, ಹಿಂದೂಸ್ಥಾನಿ ಹಾಗೂ ಶಾಸ್ತ್ರೀಯ ಸಂಗೀತ ದಿಗ್ಗಜರೆಲ್ಲಾ ಆರ್‌ಡಿಬಿ ಕಡೆ ಬೆರಗಿನಿಂದ ನೋಡುವಂತಾಯ್ತು. ಲತಾ ಮಂಗೇಷ್ಕರ್ ಅವರ ಕಂಠಕ್ಕೆ ಕಾಂತಿ ಒದಗಿ ಬಂದಿದ್ದು ಈ ಹಾಡಿನಿಂದ ಎಂದು ಹೇಳಿದರೆ ಮಾತ್ರ ಆರ್‌ಡಿಬಿ ಸಂಯೋಜನೆಯ ಸೌಂದರ್ಯ ಮೀಮಾಂಸೆ ಅರ್ಥ ಕಾಣುವುದು. ಅಮರ್‌ಪ್ರೇಮ್ ಚಿತ್ರದ ಆ ಹಾಡು ಹಿಟ್ ಆಯಿತು.

ಇಳಯರಾಜಾ ಅವರು ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ವೇಳೆ ಬಲಭಾಗದಲ್ಲಿ ಧ್ಯಾನಾಸಕ್ತ ಎಸ್.ಡಿ.ಬರ್ಮನ್ನರ ಭಾವಚಿತ್ರವೊಂದನ್ನು ಇರಿಸಿಕೊಂಡಿದ್ದರು. ಆರ್‌ಡಿಬಿ ತಂದ ಇಂಡಿಯನ್ ಟ್ರೆಂಡ್ ಅನ್ನು ಮುರಿದವರೇ ಇಳೆಯರಾಜಾ. ಆರ್‌ಡಿಬಿ D’Minor«ÚÆÇ ಪ್ರಖ್ಯಾತರಾದರೆ ಇಳೆಯರಾಜಾ ಎರಡು ಸೆಮಿಟೋನ್ ಹೆಚ್ಚು ಮಾಡಿ ‘E’ ಂ್ಝಟ್ಟ್ಠಿನಲ್ಲಿ ಹೊಸಾ ಟ್ರೆಂಡ್ ತಂದರು. ಎಸ್‌ಡಿಬಿಯನ್ನು ದಿನವೂ ಮನದಲ್ಲಿ ಸ್ಮರಿಸಿ ಕೆಲಸ ಮಾಡುತ್ತಿದ್ದರು. ಅದರೆ ಎಲ್ಲೂ ಆರ್‌ಡಿಬಿ ಛಾಯೆ ಬರದಂತೆ ಹಠ ಹಿಡಿದಿದ್ದರು. ನಾನೂ ಸಹ ಆರ್‌ಡಿಬಿ ಮತ್ತು ಇಳೆಯರಾಜ ಅವರ ಛಾಯೆಯನ್ನು ನನ್ನ ಹಾಡುಗಳಿಂದ ದೂರ ಇರಿಸಿಕೊಂಡಿದ್ದೆ.

'ಪಂಚಮ್‌' ಎಂದು ತಮ್ಮ ವೃತ್ತಿನಾಮ ಇಟ್ಟುಕೊಳ್ಳಲು ಯೋಚಿಸಿದ್ದರು. ಆದರೆ ಅದು ಯಾಕೋ ಫಲ ನೀಡಲೇ ಇಲ್ಲ. ಅಂತೆಯೇ ಆರ್‌ಡಿಬಿ ಬದುಕಿನಲ್ಲಿ ಪ್ರೀತಿಯೂ ಲತೆಯಾಗಿ ಹಬ್ಬಲಿಲ್ಲ, ಕತೆಯಾಗಿ ದಾಖಲಾಯಿತು.
'ತೇರೆ ಬಿನಾ ಜಿಂದಗಿಸೆ ಕೋಯಿ.. ಷಿಕ್‌ವಾ.. ತೋ ನಹೀ' ಎನ್ನುವ 'ಆಂಧಿ' ಚಿತ್ರದ ಹಾಡನ್ನು ಇಡೀ ದೇಶ ಅನುಕರಿಸಿತು. ನಾನು ಅನುಕರಿಸಲಿಲ್ಲ. ಕಾರಣ ಅದು ನನಗೆ ಅಮೃತ. ಕನ್ನಡದ 'ಕನಸಲೂ ನೀನೆ- ಮನಸಲೂ ನೀನೆ' ಎನ್ನುವ ಹಾಡು ಆಂಧಿ ಚಿತ್ರಗೀತೆಯ ನಾಜೂಕು ನಕಲು. ಕನ್ನಡದ ಇದೇ ಹಾಡನ್ನ ಹಿಂದಿಯ ಹೊಸ ಪೀಳಿಗೆ ಮ್ಯೂಸಿಕ್ ಡೈರೆಕ್ಟರ್ ಮತ್ತೆ 'ಐಸೆ ದೀವಾನಗೀ' ಎಂದು 'ದೀವಾನಾ' ಹಿಂದಿ ಚಿತ್ರಕ್ಕೆ ಅಳವಡಿಸಿ ಹಿಟ್ ಮಾಡಿದ.

ಹೀಗೆ ಒಳ್ಳೆಯ ಹಾಡುಗಳು ಎಂದೆಂದಿಗೂ ಭಾಷೆಯಿಂದ ಭಾಷೆಗೆ, ಕಾಲದಿಂದ ಕಾಲಕ್ಕೆ ಪಯಣಿಸುತ್ತಲೇ ಇರುತ್ತವೆ. ನಮ್ಮ ದೇಶದಲ್ಲಿ ಆರ್‌ಡಿಬಿ ಹಾಡುಗಳ ಹುಚ್ಚರು ಕೋಟಿ ಸಂಖ್ಯೆಯಲ್ಲಿದ್ದಾರೆ. ಅವರನ್ನು ತಿಳಿಯದ ನೂರಾರು ಕೋಟಿ ಶ್ರೋತೃಗಳು ಅವರ ಇಂಪಿನ ಹಾಡುಗಳಿಗೆ ದಾಸರಾಗಿದ್ದಾರೆ.

ಕೃಪೆ: ಕನ್ನಡ ಪ್ರಭ

Tag: R. D. Burman

ಕಾಮೆಂಟ್‌ಗಳಿಲ್ಲ: