ಶುಕ್ರವಾರ, ಆಗಸ್ಟ್ 30, 2013

ಕಸ್ತೂರಬಾ ಗಾಂಧಿ

ಕಸ್ತೂರಬಾ ಗಾಂಧಿ

ಅವರೆಲ್ಲರ ಹೆಂಡತಿಯರ ಹೆಸರೂ ನಮಗೆ ಗೊತ್ತಿಲ್ಲ, ಇನ್ನು ಅವರ ಬಗ್ಗೆ ತಿಳಿದಿರುವುದು ದೂರವೇ ಉಳಿಯಿತು. ನಮಗೆಲ್ಲ ರವೀಂದ್ರನಾಥ ಟಾಗೋರ್‌, ಸರದಾರ್‌ ವಲ್ಲಭ ಭಾಯ್‌ ಪಟೇಲ್‌, ಬಿ.ಆರ್‌..'. ಅಂಬೇಡ್ಕರ್‌, ಸಿ.ರಾಜಗೋಪಾಲಾಚಾರಿ, ಬಂಕಿಮಚಂದ್ರ, ಜವಾಹರಲಾಲ್‌ ನೆಹರು ಗೊತ್ತು. ಆದರೆ ಅವರ ಪತ್ನಿಯರ ಬಗ್ಗೆ ಏನೇನೂ ಗೊತ್ತಿಲ್ಲ. ಅದ್ಸರಿ, ಇದೇಕೆ? ರಾಷ್ಟ್ರ ರಾಜಕಾರಣದಲ್ಲಿ ಉತ್ತುಂಗದಲ್ಲಿದ್ದ ಈ ನಾಯಕರೆಲ್ಲ ಉದ್ದೇಶ ಪೂರ್ವಕವಾಗಿ ತಮ್ಮ ಪತ್ನಿಯರನ್ನು ಹೊರಗೆ ಬರಗೊಡಲಿಲ್ಲವಾ? ಗಂಡನ ಜನಪ್ರಿಯತೆಯ ಹೊಳಪಿನಲ್ಲಿ ಪತ್ನಿಯರು ಮಂಕಾದರಾ? ಉತ್ತರಗಳು ಸಿಗುವುದಿಲ್ಲ.

ಹೀಗೆ ಯೋಚಿಸುತ್ತಿದ್ದಾಗಲೇ ಆಕೆ ನೆನಪಾಗುತ್ತಾರೆ. ಆಕೆ ಹಾಗಲ್ಲ. ಎಲ್ಲರಿಗೂ ಪರಿಚಿತ. ಅವಳ ಪತಿ ಮಾನೆಮಾತು. ಈಕೆಯ ಪರಿಚಯವಿಲ್ಲದವರೂ ಇಲ್ಲ.

ಅವರೇ, ಕಸ್ತೂರಬಾ ಗಾಂಧಿ!

ಗಾಂಧಿ ಹಾಗೂ ಕಸ್ತೂರಬಾ  ಗುಜರಾತಿನ ಪೋರಬಂದರ್‌ದಲ್ಲಿ ಹುಟ್ಟಿದರು. ಕಸ್ತೂರಬಾ ಅವರು ಜನಿಸಿದ್ದು ಏಪ್ರಿಲ್ 11 1869ರಲ್ಲಿ.  ಗಾಂಧಿಯವರು ಜನಿಸಿದ್ದು ಅಕ್ಟೋಬರ್ 2, 1869ರಲ್ಲಿ.  ಇಬ್ಬರೂ ಒಂದೇ ವರ್ಷದಲ್ಲಿ ಜನಿಸಿದವರು.  ಕಸ್ತೂರಬಾ ತಮ್ಮ ಪತಿಗಿಂತ ಕೆಲವು ತಿಂಗಳುಗಳ ಕಾಲ ಹಿರಿಯರು.  ಹದಿಮೂರನೆ ವಯಸ್ಸಿನಲ್ಲಿ ಮದುವೆಯಾಯಿತು. ಕಸ್ತೂರಬಾ ತಂದೆ ಗೋಪಾಲ ದಾಸ ಮುಖರ್ಜಿ ಶ್ರೀಮಂತ ವ್ಯಾಪಾರಿ. ಕಸ್ತೂರಬಾ ಎಂದೂ ಶಾಲೆಗೆ ಹೋದವಳಲ್ಲ. ನೋಡಲು ಸುಂದರಿಯಲ್ಲದಿದ್ದರೂ ಲಕ್ಷಣವಂತೆ. ಮದುವೆಯಾದಾಗ ಆಕೆಗೆ ಓದಲು ಬರೆಯಲು ಬರುತ್ತಿರಲಿಲ್ಲ. ಗಾಂಧಿಯೇ ಆಕೆಗೆ ಅಕ್ಷರ ಅಭ್ಯಾಸ ಮಾಡಿಸಿದರು. ಈ ದೃಷ್ಟಿಯಲ್ಲಿ ಅವರೇ ಗುರು.

ಉಳಿದವರಂತೆ ಮಹಾತ್ಮಾಗಾಂಧಿ ತಮ್ಮ ಪತ್ನಿ ವಿಷಯದಲ್ಲಿ ನಡೆದುಕೊಳ್ಳಲಿಲ್ಲ. ಕಸ್ತೂರಬಾ ಅನಕ್ಷರಸ್ಥೆಯೆಂಬುದು ಗೊತ್ತಿದ್ದೂ ಆಕೆಯನ್ನು ಒಳಮನೆಯಲ್ಲಿ ಕೂಡಿ ಹಾಕಲಿಲ್ಲ. ಗಾಂಧಿ ಗೊತ್ತಿದ್ದವರಿಗೆಲ್ಲ ಕಸ್ತೂರಬಾ ಗೊತ್ತಿದ್ದರು.

ಗಾಂಧಿಯಂತೆ ಆಕೆ ಸಹ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು. ಹಲವಾರು ಸತ್ಯಾಗ್ರಹ, ಹೋರಾಟಗಳಲ್ಲಿ ಭಾಗವಹಿಸಿದ್ದರು. ಜೈಲುವಾಸ ಅನುಭವಿಸಿದ್ದರು. ಗಾಂಧಿ ಎಲ್ಲಿ ಹೋದರೂ ಅವರೂ ಜತೆಗಿರುತ್ತಿದ್ದರು. ಅವರ ಬಗ್ಗೆ ನಮಗೆ ಗೊತ್ತಿರದಿರುವುದು ಏನೂ ಇಲ್ಲ. ಕಸ್ತೂರಬಾ ಜೀವನ ಅಷ್ಟೊಂದು ಸಾರ್ವಜನಿಕ, ಮುಕ್ತ. ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಗಾಂಧಿ ಮೌಲ್ಯಗಳೇನಾದರೂ ಜೀವಂತವಾಗಿದ್ದರೆ, ಇಂದಿಗೂ ಅವರ ಆದರ್ಶ, ಸಿದ್ಧಾಂತ, ವಿಚಾರಗಳ ಪ್ರಚಾರ ಕಾರ್ಯ ನಡೆಯುತ್ತಿದ್ದರೆ ಅವು ಗಾಂಧಿ ಹೆಸರಿನಲ್ಲಿರುವ ಸಂಘಟನೆಗಳಿಂದ ಅಲ್ಲ, ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್‌ ಮೂಲಕ.

ಸುಮಾರು 22 ರಾಜ್ಯದಲ್ಲಿ ಸಕ್ರಿಯವಾಗಿರುವ ಈ ಟ್ರಸ್ಟ್‌ ಕಸ್ತೂರಬಾ ನಿಧನದ ಬಳಿಕ ಸ್ಥಾಪನೆಗೊಂಡಿತು. ಕಸ್ತೂರಬಾ ಹೆಸರಿನಲ್ಲಿ ರಸ್ತೆಗಳಿರದ ಊರುಗಳು ಇರಲಿಕ್ಕಿಲ್ಲ. ಅವೆಷ್ಟೋ ಶಾಲೆ, ಕಾಲೇಜು, ಸಂಸ್ಥೆಗಳೂ ಅವರ ಹೆಸರಿನಲ್ಲಿವೆ.

ಗಾಂಧಿಯನ್ನು ಮದುವೆಯಾದಾಗ ಕಸ್ತೂರಬಾಗೆ  ತನ್ನ ಕೈಹಿಡಿದ ಗಂಡ ಮುಂದೊಂದು ದಿನ ಜಗತ್ತಿನ ಮಹಾನ್‌ ನಾಯಕರಲ್ಲಿ ಒಬ್ಬನಾಗುತ್ತಾನೆಂಬ ಸುಳಿವಾಗಲಿ, ಅರಿವಾಗಲಿ ಇರಲಿಲ್ಲ. ಆತ ಮಹಾತ್ಮನಾಗುತ್ತಾನೆಂದು ಊಹಿಸಿರಲಿಲ್ಲ. ಆದರೆ ಮದುವೆಯಾದ ಕೆಲ ವರ್ಷಗಳಲ್ಲಿ ಆಕೆಗೆ ಒಂದು ಸಂಗತಿ ಸ್ಪಷ್ಟವಾಗಿತ್ತು. ತನ್ನ ಗಂಡ ಕೇವಲ ತನ್ನನ್ನು ಮದುವೆಯಾಗಿಲ್ಲ, ತನ್ನ ಜತೆಗೆ ಅನೇಕ ಉದ್ದೇಶ, ಆಶಯ, ಧ್ಯೇಯ, ಸಂಕಲ್ಪಗಳನ್ನೂ ಮದುವೆಯಾಗಿದ್ದಾನೆಂದು. ಕಸ್ತೂರಬಾ ಅನಕ್ಷರಸ್ಥೆಯಾಗಿದ್ದರೂ ವ್ಯವಹಾರ ಬಲ್ಲವಳು, ಲೋಕಜ್ಞಾನವುಳ್ಳವಳು. ಧಾರ್ಮಿಕ ಆಚರಣೆ, ದೇವರಲ್ಲಿ ಅಪಾರ ನಂಬಿಕೆಯುಳ್ಳ ಆಕೆಗೆ ಆರಂಭದಲ್ಲಿ ಗಾಂಧಿಯ ಆಚಾರ, ವಿಚಾರಗಳು ಅರ್ಥವಾಗುತ್ತಿರಲಿಲ್ಲ. ತಮ್ಮೆಲ್ಲ ವಿಚಾರವನ್ನು ಪತ್ನಿಯ ಮೇಲೆ ಪ್ರಯೋಗಿಸುವಾಗ ಗಂಡ-ಹೆಂಡತಿ ಮಧ್ಯೆ ಮಾತಿನ ಚಕಮಕಿಯಾಗುತ್ತಿತ್ತು. ಆಕೆಗೆ ಸಂಪೂರ್ಣ ಮನವರಿಕೆ ಮಾಡಿಕೊಡುವ ತನಕ ಕಸ್ತೂರಬಾ ಗಂಡನನ್ನು ಬಿಡುತ್ತಿರಲಿಲ್ಲ. ಅವರು ಹೇಳಿದ್ದನ್ನು ಕುರುಡಾಗಿ ನಂಬುತ್ತಿರಲಿಲ್ಲ. ಮದುವೆ ಸಂದರ್ಭದಲ್ಲಿ ತವರಿನಲ್ಲಿ ಕೊಟ್ಟ ಒಡವೆಗಳನ್ನು ವಾಪಸು ಕಳಿಸುವಂತೆ ಗಾಂಧಿ ಹೇಳಿದಾಗ ಕಸ್ತೂರಬಾ ಜಗಳಕ್ಕೆ ನಿಂತಿದ್ದಳು.

ಗಾಂಧಿಯ ಸರಳ ಜೀವನದ ಸಿದ್ಧಾಂತ ಆಕೆಗೆ ಅರ್ಥವಾಗುತ್ತಿರಲಿಲ್ಲ. ಶ್ರೀಮಂತ ಉದ್ಧಿಮೆದಾರರೊಬ್ಬರು ಕಸ್ತೂರಬಾಗೆ ನೆಕ್ಲೇಸ್‌ ಉಡುಗೊರೆಯಾಗಿ ನೀಡಿದಾಗ ಪತಿ-ಪತ್ನಿಯರಲ್ಲಿ ಕಿತ್ತಾಟವಾಗಿತ್ತು. ನಾವು ಮಾತನಾಡುವುದರಲ್ಲಿ ಕೆಲವೊಮ್ಮೆ ಮೇರೆ ತಪ್ಪಿರುತ್ತೇವೆ.  ಬಹುಷಃ ಗಾಂಧೀ ಕೂಡಾ ಆ ಕ್ಷಣದಲ್ಲಿ ಹಾಗೆಯೇ ಮಾಡಿದರು.  ಈ ನೆಕ್ಲೇಸನ್ನು ನಿನ್ನ ಸೇವೆ ಕಂಡು ಕೊಟ್ಟಿದ್ದಲ್ಲ ತಿಳೀತಾ. ನನ್ನ ಸೇವೆ ಕಂಡು, ನನ್ನ ಹೆಂಡತಿಯೆಂಬ ಕಾರಣಕ್ಕೆ ಕೊಟ್ಟಿದ್ದಾರೆ ಗೊತ್ತಿರಲಿ’” ಎಂದು ಗಾಂಧಿ ಹೇಳಿದ್ದಕ್ಕೆ ಕಸ್ತೂರಬಾ ಖಾರವಾಗಿ ತಿರುಗೇಟು ನೀಡಿದ್ದರು;  ‘ನೀವು ಹೇಳಿದ್ದನ್ನು ಒಪ್ಪುತ್ತೇನೆ. ಆದರೆ ನಿಮ್ಮ ಸೇವೆಗೆ ಯಾವುದೇ ದೃಷ್ಟಿಯಲ್ಲಿ ನನ್ನ ಸೇವೆ ಕಡಿಮೆಯಾಗಿಲ್ಲ. ನಾನು ನಿಮಗಾಗಿ ಹಗಲು-ರಾತ್ರಿಯೆನ್ನದೇ ದುಡಿಯುತ್ತಿದ್ದೇನೆ. ನಿಮ್ಮ ಮಕ್ಕಳನ್ನು ಹೊತ್ತು, ಹೆತ್ತು, ಸಾಕಿ ಸಲಹಿದ್ದು ನೀವಾ? ನಾನಾ? ಮನೆಯಲ್ಲಿ ಏನಿದೆ ಏನಿಲ್ಲವೆಂಬುದನ್ನು ಒಂದು ದಿನವಾದರೂ ವಿಚಾರಿಸಿದ್ದೀರಾ? ಎಲ್ಲ ಕೆಲಸ ನನಗೆ ಒಪ್ಪಿಸಿ ನೀವು ಊರಿಂದೂರಿಗೆ ಹೊರಟುಬಿಡುತ್ತೀರಿ. ನನಗೆಷ್ಟು ಸಲ ನೀವು ಕಣ್ಣೀರು ಹಾಕಿಸಿಲ್ಲ. ನಾನು ನಿಮ್ಮ ಮನೆಯಲ್ಲಿ ಜೀತಕ್ಕೆ ಇದ್ದವಳಂತೆ ದುಡಿದೆ. ಇದೂ ಸಹ ಸೇವೆಯಲ್ಲವೇ?’

ಆದರೆ ಈ ಯಾವ ಮಾತುಗಳೂ ಗಾಂಧಿ ಮೇಲೆ ಪರಿಣಾಮ ಬೀರುತ್ತಿರಲಿಲ್ಲ. ಉಡುಗೊರೆಯಾಗಿ ಪಡೆದ ಬಂಗಾರದ ಹಾರ ವಾಪಸ್‌ ಮಾಡುವ ತನಕ ಅವರು ಸುಮ್ಮನಾಗಲಿಲ್ಲ. ಈ ಎಲ್ಲ ಸಂಗತಿಗಳನ್ನು ಗಾಂಧಿ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ನಾನೊಬ್ಬ ಕ್ರೂರ ಆದರೆ ದಯಾವಂತ ಪತಿಎಂದು ಹೇಳಿಕೊಂಡಿದ್ದಾರೆ. ಹೆಂಡತಿ ಮೇಲಿನ ಅತಿಯಾದ ಕುರುಡು ಪ್ರೀತಿಯಿಂದ ಆಕೆಗೆ  ಕಿರುಕುಳ ಕೊಟ್ಟೆ ಎಂದೂ ಬರೆದುಕೊಂಡಿದ್ದಾರೆ. ಅದೇನೇ ಇರಲಿ, ಕಸ್ತೂರಬಾ ಗಂಡನಿಗಾಗಿ ತಮ್ಮ ಎಲ್ಲ ಆಸೆಗಳನ್ನೂ ತ್ಯಾಗ ಮಾಡಿದರು. ತಮ್ಮೆಲ್ಲ ಒಡವೆಗಳನ್ನು ದಾನ ಮಾಡಿದರು. ಮಕ್ಕಳ ಮದುವೆಗೆ, ಸೊಸೆಯಂದಿರಿಗೆ ಎಂದು ಜೋಪಾನವಾಗಿ ಎತ್ತಿಟ್ಟುಕೊಂಡ ಬಂಗಾರವನ್ನೂ ಕೊಟ್ಟರು.

ಗಾಂಧಿಯ ಉಪವಾಸ, ಜೈಲುವಾಸ ಆಕೆಯಲ್ಲಿ ಅಭದ್ರತೆ ಮೂಡಿಸುತ್ತಿತ್ತು. 1896ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಹೊರಟಾಗ ಸಾಕ್ಸ್‌,  ಬೂಟುಗಳನ್ನು ಧರಿಸುವಂತೆ ಹೇಳಿದ ಗಾಂಧಿ, ಭಾರತಕ್ಕೆ ಬರುವ ಮೊದಲು ಅವೆಲ್ಲವನ್ನೂ ಧರಿಸಕೂಡದೆಂದರು. ಅನಂತರ ಖಾದಿ ಹೊರತಾಗಿ ಮತ್ತೇನನ್ನೂ ತೊಡಬಾರದೆಂದು ತಾಕೀತು ಮಾಡಿದರು.

ಅವರಿಗೆ ಅಸಹನೀಯವೆಂದು ತೋರಿದ್ದು, ಕೂಡಿದ ಮಲವನ್ನು ಎತ್ತಿ ಹೊರಗೆಸೆಯಬೇಕಾದ ಕೆಲಸ. ಅದಕ್ಕಾಗಿ ಒಮ್ಮೆ ಗೊಣಗಿದ್ದಕ್ಕಾಗಿ, ಗಾಂಧಿ ಅವರನ್ನು ಮನೆಯಿಂದ ಹೊರಗೆ ದಬ್ಬಿದ್ದರು. ವಿದೇಶದಲ್ಲಿ ತಾನೆಲ್ಲಿಗೆ ಹೋಗಲಿ ಎಂದು ರೋಧಿಸುವ ಕಸ್ತೂರಬಾ ಚಿತ್ರಣ ಮನಕರಗಿಸುವಂತಿದೆ. ಕಸ್ತೂರಬಾ ಬದುಕಿನಲ್ಲಿ ಸುಖವೇ ಇಲ್ಲಎಂದು ಕಟಕಿಯಾಡುವವರಿಗೆ ಕಸ್ತೂರಬಾ ಬಹಿರಂಗ ಪತ್ರ ಬರೆಯಿಸಿ, ತಮ್ಮ ಜೀವನದ ಮಹತ್ವವನ್ನು ತಿಳಿಸಿಕೊಡುತ್ತಾರೆ.  ಆಫ್ರಿಕೆಯ ಬಿಳಿ ಸರಕಾರ ಸಂಪ್ರದಾಯದ ಮದುವೆಗಳನ್ನು ಅಸಿಂಧು ಎಂದು ಘೋಷಿಸಿದಾಗ, ಅದರ ವಿರುದ್ಧ ಹೋರಾಡಿದ ಕಸ್ತೂರಬಾ ಜೈಲುವಾಸವನ್ನೂ ಅನುಭವಿಸುತ್ತಾರೆ.

ಗಾಂಧಿ ಆಶ್ರಯಕ್ಕೆ ಪ್ರತಿ ದಿನ ಎಲ್ಲೆಲ್ಲಿಂದಲೋ ಜನ ಬರುತ್ತಿದ್ದರು. ಅವರಲ್ಲಿ ಹೆಂಗಸರೂ ಇರುತ್ತಿದ್ದರು. ಗಾಂಧಿ ಸಾಮೀಪ್ಯ ಬಯಸಿ ಬರುವವರಿಗೇನೂ ಕೊರತೆಯಿರಲಿಲ್ಲ. ರವೀಂದ್ರನಾಥ ಟಾಗೋರರ ಸಂಬಂಧಿ ಸರಳಾದೇವಿ ಆಶ್ರಯದಲ್ಲಿ ಉಳಿದುಕೊಂಡಾಗ ಅನೇಕ ಗುಸುಗುಸುಗೆ ಕಾರಣವಾಗಿತ್ತು. ಕಸ್ತೂರಬಾ ಇವೆಲ್ಲವನ್ನೂ ಸಹಿಸಿಕೊಂಡರು. ಈ ವಿಷಯದಲ್ಲಿ ಎಂದೂ ಗಂಡನ ನಿಷ್ಠೆಯನ್ನು ಪ್ರಶ್ನಿಸಲಿಲ್ಲ. ಸಾರ್ವಜನಿಕ ಜೀವನದಲ್ಲಿ ಎಂದೂ ಗಂಡನ ನಿಷ್ಠೆಯನ್ನು ಪ್ರಶ್ನಿಸಲಿಲ್ಲ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಹೀಗೆ ವಿವಾದಕ್ಕೀಡಾಗುವುದು ಸಹಜವೆಂಬುದು ಅವರ ನಿಲುವಾಗಿತ್ತು.

ಮಕ್ಕಳ ವಿಷಯದಲ್ಲಿ ಗಾಂಧಿ-ಕಸ್ತೂರಬಾ ಮಧ್ಯೆ ಆಗಾಗ ಜಟಾಪಟಿಯಾಗುತ್ತಿತ್ತು. ನಾಲ್ವರು ಗಂಡುಮಕ್ಕಳಾದ ಹರಿಲಾಲ್‌, ಮಣಿಲಾಲ್‌, ರಾಮದಾಸ ಮತ್ತು ದೇವದಾಸ ಇವರಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸಬೇಕೆಂದು ಕಸ್ತೂರಬಾ ಬಯಸಿದ್ದರು. ಗಂಡನ ಮುಂದೆ ಬಯಕೆ ತೋಡಿಕೊಂಡಾಗ, ಆರ್ಥಿಕ ಕಾರಣದಿಂದ ಅಸಾಧ್ಯವೆಂದರು, ಒಂದಿಬ್ಬರು ಉದ್ಯಮಪತಿಗಳು ಹಣ ನೀಡಲು ಮುಂದೆ ಬಂದಾಗ, ಅವರ ಸಿದ್ಧಾಂತ ಅಡ್ಡ ಬಂತು. ಪಾಶ್ಚಿಮಾತ್ಯ ಶಿಕ್ಷಣ ಒಳ್ಳೆಯದಲ್ಲ ಎಂದು ಪತ್ನಿ ಮುಂದೆ ವಾದಿಸಿದರು. ಲಂಡನ್‌ನಲ್ಲಿ ವಿದ್ಯಾಭ್ಯಾಸ ಮುಗಿಸದ ಗಾಂಧಿ ಜತೆ ವಾದ ಮಾಡಿ ತನ್ನ ಮಕ್ಕಳನ್ನು ಕೊನೆಗೂ ವಿದೇಶಕ್ಕೆ ಕಳಿಸಲು ಆಗಲಿಲ್ಲ. ಗಾಂಧಿ ಕೊನೆಗೂ ಒಪ್ಪಲಿಲ್ಲ.

ಮೊದಲ ಮಗ ಹರಿಲಾಲನಿಗೆ ತಂದೆಯನ್ನು ಕಂಡರೆ ಆಗುತ್ತಿರಲಿಲ್ಲ. ತನ್ನ ತಂದೆ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆಂದು ಎಲ್ಲರೆದುರಿಗೇ ಹೇಳುತ್ತಿದ್ದ. ನಾಲ್ಕು ಮಂದಿ ಮುಂದೆ ಟೀಕಿಸುತ್ತಿದ್ದ. ಮಗನ ಮಾತನ್ನು ಕೇಳಿಯೂ ಕೇಳದಂತೆ ಗಾಂಧಿ ಸುಮ್ಮನೆ ಹೋಗಿಬಿಡುತ್ತಿದ್ದರು. ಕಟ್ಟಿಕೊಂಡ ಹೆಂಡತಿ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದವ ದೇಶೋದ್ಧಾರ ಮಾಡ್ತಾನಂತೆಎಂದು ಗಾಂಧಿಯನ್ನು ಮೂದಲಿಸುತ್ತಿದ್ದ.

ಒಮ್ಮೆ ರೈಲಿನಲ್ಲಿ ಗಾಂಧಿ ತಮ್ಮ ಪತ್ನಿ ಜತೆಗೆ ಹೋಗುತ್ತಿದ್ದಾಗ ರೈಲು ಕತ್ನಿ ನಿಲ್ದಾಣದಲ್ಲಿ ನಿಂತಿತು. ಮಾತಾ ಕಸ್ತೂರಬಾ ಕಿ ಜೈಎಂದು ಕೂಗು ಮುಗಿಲು ಮುಟ್ಟಿತ್ತು. ಕಸ್ತೂರ ಬಾ, ಗಾಂಧಿ ರೈಲಿನಿಂದ ಹೊರಬಂದು ನೋಡಿದರೆ ಹತ್ತಾರು ಸ್ನೇಹಿತರ ಜತೆ ಹರಿಲಾಲ್‌ ಘೋಷಣೆ ಗರಿ ಕೆದರಿತ್ತು. ಮುಂದಿನ ಹಲ್ಲುಗಳೆಲ್ಲ ಬಿದ್ದು ಹೋಗಿದ್ದವು. ತಾಯಿಯನ್ನು ನೋಡುತ್ತಿದ್ದಂತೆ ಹರಿಲಾಲನ ಕಣ್ಣುಗಳು ತೇವಗೊಂಡವು. ಒಂದು ಕ್ಷಣ ಆತನಿಂದ ಮಾತೇ ಹೊರಡಲಿಲ್ಲ. ತಾಯಿಯ ಬಳಿ ಹೋಗಿ ಕಾಲಿಗೆ ನಮಸ್ಕರಿಸಿ ಹರಿದ ಅಂಗಿಯಲ್ಲಿರಿಸಿಕೊಂಡ ಕಿತ್ತಳೆ ಹಣ್ಣನ್ನು ಕೊಟ್ಟ. ಬಾ (ಅಮ್ಮಾ), ನಿನಗಾಗಿ ತಂದಿದ್ದೇನೆ, ದಯವಿಟ್ಟು ತಿನ್ನುಎಂದ. ಕಸ್ತೂರಬಾ ಹಿಂಬದಿಯಲ್ಲಿ ನಿಂತಿದ್ದ ಗಾಂಧಿ, ‘ಹರಿಲಾಲ್‌ ನನಗೇನೂ ತಂದಿಲ್ಲವೇನು? ನಂಗೇನು ಕೊಡ್ತೀಯಾ?’ ಎಂದು ಕೇಳಿದರು. ಗಾಂಧಿಯೆಡೆಗೆ ಸಿಟ್ಟಿನಿಂದ ನೋಡಿದ ಹರಿಲಾಲ್‌,’ ಇಲ್ಲ, ನಿನಗೇನನ್ನೂ ತಂದಿಲ್ಲ. ನಿನಗೊಂದು ಮಾತನ್ನು ಹೇಳುತ್ತೇನೆ ಕೇಳು. ನೀನು ಗಳಿಸಿರುವ ನಿನ್ನ ದೊಡ್ಡ ಗುಣಗಳೆಲ್ಲ ನನ್ನ ತಾಯಿಯಿಂದ ಬಂದಿರುವಂಥದ್ದೇ ಹೊರತು, ಅವೆಲ್ಲ ನಿನ್ನ ಸಾಧನೆಯಲ್ಲ. ದಯವಿಟ್ಟು ಈ ಸಂಗತಿ ಮರೆಯಬೇಡಎಂದು ಜಬರದಸ್ತಿನಿಂದ ಹೇಳಿದ.

ನೀನು ಕೊಟ್ಟ ಹಣ್ಣನ್ನು ತಿನ್ನುತ್ತೇನೆ. ಆದರೆ ನೀನು ಈಗ ನಮ್ಮ ಜತೆ ಬಂದು ಬಿಡು. ಇಲ್ಲೇನು ನಿನಗೆ ಕೆಲಸ? ನಿನ್ನ ಬಿಟ್ಟು ಹೋಗಲು ಸಂಕಟವಾಗುತ್ತಿದೆ. ಬಂದು ಬಿಡು' ಎಂದು ಕಸ್ತೂರಬಾ ಮಗನ ಕೈ ಹಿಡಿದು ಎಳೆಯುತ್ತಿದ್ದರು.  ಬಾ(ಅಮ್ಮ), ನನ್ನನ್ನು ಬಿಡು. ನಿನ್ನೊಂದಿಗೆ ನಾನು ಬರಲಾರೆ. ಅಂಥ ಮಾತುಗಳಿಂದ ಪ್ರಯೋಜನವಾಗುವುದಿಲ್ಲಎಂದು ಹರಿಲಾಲ್‌ ಹೇಳಿದಾಗ ಅಳುವ ಸರದಿ ತಾಯಿಯದಾಗಿತ್ತು. ಅಷ್ಟೊತ್ತಿಗೆ ಗಂಟೆಯಾಯಿತು. ರೈಲು ಹೊರಡುವ ಸೂಚನೆ ಬಂತು. ಕಸ್ತೂರ ಬಾ ಜೋರಾಗಿ ಹರಿಲಾಲ್‌ ನಿನ್ನನ್ನು ನೋಡಿದರೆ ಊಟ, ತಿಂಡಿಯಿಲ್ಲದೇ ಉಪವಾಸ ಬಿದ್ದವನಂತೆ ಕಾಣುತ್ತೀಯಾ?’ ಎಂದಳು. ನೋಡಿ ನನ್ನ ಮಗ ಹಸಿವಿನಿಂದ ಸತ್ತುಹೋಗಬಹುದೆಂದು ಗಂಡನೆಡೆಗೆ ನೋಡುತ್ತಾ ಗೋಳಿಟ್ಟುಕೊಂಡಳು. ಗಾಂಧಿ ಏನೂ ಮಾತಾಡಲಿಲ್ಲ.

ಎಲ್ಲರೂ ರೈಲನ್ನೇರಿದರು. ಅಲ್ಲಿ ಗಾಂಧೀಜಿ ಕಿ ಜೈಎಂದು ಎಲ್ಲರೂ ಕೂಗುತ್ತಿದ್ದರೆ, ಹರಿಲಾಲ್‌ ಮಾತ್ರಮಾತಾ ಕಸ್ತೂರಬಾ ಕಿ ಜೈಎಂದು ಕೂಗುತ್ತಿದ್ದ. ಜನಜಂಗುಳಿಯ ಮಧ್ಯೆ ಮಗನಿಗಾಗಿ ಹೆತ್ತ ಕರುಳು ಕಿಟಕಿಯಲ್ಲಿ ತಲೆಯಿಟ್ಟುಕೊಂಡು ಹುಡುಕುತ್ತಿದ್ದರೆ ರೈಲು ತಿರುವಿನಲ್ಲಿ ಕಣ್ಮರೆಯಾಯಿತು. ಕಸ್ತೂರಬಾ ನಿಧನರಾದ ಮೂರು ವರ್ಷಗಳ ನಂತರ ಗಾಂಧಿ ಹೇಳಿದ್ದರು : ಇಂದು ನಾನು ಹೀಗಿದ್ದರೆ ಅದಕ್ಕೆ ಕಸ್ತೂರಬಾ ಕಾರಣ. ಅದೇ ಅನಕ್ಷರಸ್ಥ ಮಹಿಳೆಯೇ ನನಗೆ ಎಲ್ಲವನ್ನೂ ಕಲಿಸಿದ್ದು. ಏಳೇಳು ಜನ್ಮಕ್ಕೂ ಆಕೆಯೇ ನನ್ನ ಪತ್ನಿಯಾಗಲಿ’.

ಎಲ್ಲರಿಗೂ ಬಾ(ತಾಯಿ)ಆಗಿದ್ದ ಕಸ್ತೂರ್‌, ಆದರ್ಶ ಗೃಹಿಣಿಯ ಪ್ರತೀಕದಂತಿದ್ದರು. ಯಾಕೋ ಗಾಂಧಿಯನ್ನು ನೆನೆಯುವಾಗಲೇ ಆಕೆಯೂ ಇಣುಕಿದಂತಾಗುತ್ತದೆ.

ಕೃಪೆ:  ವಿಶ್ವೇಶ್ವರ ಭಟ್ ಅವರು  ವಿಜಯಕರ್ನಾಟಕದ ಸ್ನೇಹ ಸೇತುಅಂಕಣದಲ್ಲಿ ಒಮ್ಮೆ ಗಾಂಧೀ ಸ್ಮರಣೆ ಸಂದರ್ಭದಲ್ಲಿ ಬರೆದ ಲೇಖನವನ್ನು ಕಸ್ತೂರಬಾ ಅವರ ಹುಟ್ಟಿದ ಹಬ್ಬಕ್ಕೆ ಹೊಂದುವಂತೆ  ಒಂದೆರಡು ಪುಟ್ಟ ಬದಲಾವಣೆಗಳೊಂದಿಗೆ ಇಲ್ಲಿ ತಮ್ಮೊಂದಿಗಿರಿಸಿದ್ದೇನೆ.


Tag: Kasturba Gandhi

ಕಾಮೆಂಟ್‌ಗಳಿಲ್ಲ: