ಶನಿವಾರ, ಆಗಸ್ಟ್ 31, 2013

ರಾಜ್ಯವರ್ಧನ ಸಿಂಗ್ ರಾಥೋರ್

ರಾಜ್ಯವರ್ಧನ ಸಿಂಗ್ ರಾಥೋರ್

ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತೀಯರೊಬ್ಬರು ಪ್ರಥಮ ಬಾರಿಗೆ ವೈಯಕ್ತಿಕವಾದ ರಜತ ಪದಕ ಗೆಲ್ಲುವ ಮೂಲಕ ಹೊಸ ಚರಿತ್ರೆಯನ್ನು ಬರೆದವರು ರಾಜ್ಯವರ್ಧನ ಸಿಂಗ್ ರಾಥೋರ್.   ಅವರು ರಾಜಾಸ್ಥಾನದ ಜೈಸಲ್ಮೇರ್ ಪಟ್ಟಣದಲ್ಲಿ ಜನವರಿ 29, 1970ರಂದು  ಜನಿಸಿದರು.

ಭಾರತವು ಹಿಂದಿನ ದಿನಗಳಲ್ಲಿ ಹಾಕಿ ಸ್ಪರ್ಧೆಯ ಹೊರತಾಗಿ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಪದಕ ಗೆದ್ದದ್ದೇ ಅಪರೂಪ.  1952ರ ಹೆಲ್ಸಿಂಕಿ ಒಲಿಂಪಿಕ್ಸ್ ಕ್ರೀಡೆಯಲ್ಲಿ  ಭಾರತಕ್ಕೆ ಮೊತ್ತ ಮೊದಲ ಹಾಕಿಯೇತರ ಪದಕ ದೊರಕಿಸಿಕೊಟ್ಟವರು ಫ್ರೀಸ್ಟೈಲ್ ಕುಸ್ತಿಪಟು ಕಶಬಾ ದಾದಾಸಾಹೇಬ್ ಜಾಧವ್.  60 ಕೆ.ಜಿ. ವಿಭಾಗದಲ್ಲಿ ಅವರು ಕಂಚಿನ ಪದಕ ಗೆದ್ದುಕೊಟ್ಟಿದ್ದರು. ಅದಾಗಿ ಮತ್ತೊಂದು ಪದಕ ದೊರೆಯಲು 44 ವರ್ಷ ಕಾಯಬೇಕಾಯಿತು.  1996ರಲ್ಲಿ ಅಟ್ಲಾಂಟಾ ಒಲಿಂಪಿಕ್ಸ್ ಕೂಟದಲ್ಲಿ ಭಾರತದ ಲಿಯಾಂಡರ್ ಪೇಸ್ ಪುರುಷರ ಸಿಂಗಲ್ಸ್ ಟೆನಿಸ್ ವಿಭಾಗದಲ್ಲಿ ಭಾರತಕ್ಸೆ ಕಂಚು ತಂದಿತ್ತರು.  2000ದಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್ ಕೂಟದಲ್ಲಿ ಕರ್ಣಂ ಮಲ್ಲೇಶ್ವರಿ ಅವರು  69 ಕೆ.ಜಿ. ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ  ಕಂಚು ಗೆದ್ದಿದ್ದರು.

ಇಂತಹ ವಿರಳ ಸಾಧನೆಯ ಇತಿಹಾಸವುಳ್ಳ ಭಾರತೀಯ ಒಲಿಂಪಿಕ್ಸ್ ಕ್ರೀಡೆಯಲ್ಲಿ  2004ರ ವರ್ಷದಲ್ಲಿ ಹೊಸ ಭಾಷ್ಯ ಬರೆದವರು  ಭಾರತದ ಶೂಟರ್ ರಾಜ್ಯವರ್ಧನ ಸಿಂಗ್ ರಾಥೋರ್.  ಇವರು ಅಥೆನ್ಸ್  ಕ್ರೀಡೆಗಳಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಗರಿಮೆ ಹೆಚ್ಚಿಸಿದ್ದದ್ದು ಮಾತ್ರವಲ್ಲದೆ ಭಾರತದ ಯುವ ಪ್ರತಿಭೆಗಳಿಗೆ ತಾವೂ ಪದಕ ಗೆಲ್ಲಲು ಸಾಧ್ಯ ಎಂಬ ಭರವಸೆ ಮೂಡಿಸಿದರು.  ಇದು ಮುಂದಿನ ಎರಡು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಅದರಲ್ಲೂ ಶೂಟಿಂಗ್ ಸ್ಪರ್ಧೆಗಳಲ್ಲಿ  ಭಾರತದ ಕ್ರೀಡಾ ಪಟುಗಳು ಪದಕ ಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. 

ಕಾಮನ್ ವೆಲ್ತ್, ಏಷ್ಯನ್ ಕ್ರೀಡಾಕೂಟ ಮತ್ತು  ವಿಶ್ವಕಪ್ ಪಂದ್ಯಗಳಲ್ಲಿ ಸ್ವರ್ಣ ಪದಕಗಳವರೆಗಿನ ವಿವಿಧ  ಸಾಧನೆಗಳನ್ನು  ಮಾಡಿರುವ ರಾಜ್ಯವರ್ಧನ ಸಿಂಗ್ ರಾಥೋರ್ ಅಂತರರಾಷ್ಟ್ರೀಯ ಮಟ್ಟದಲ್ಲಿ  ಒಟ್ಟು 25 ಪದ್ಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.  ರಾಜ್ಯವರ್ಧನ ಸಿಂಗ್ ರಾಥೋರ್ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯವರೆಗೆ 2013ರ ವರ್ಷದವರೆಗೆ ಸೇವೆಸಲ್ಲಿಸಿ ನಿವೃತ್ತಿಪಡೆದರು.  ಕಳೆದ ಲೋಕಸಭಾ  ಚುನಾವಣೆಗಳಲ್ಲಿ ಪ್ರಥಮಬಾರಿಗೆ ಸ್ಪರ್ಧಿಸಿ ಅಲ್ಲೂ ಜಯಭೇರಿ ಬಾರಿಸಿದ ರಾಥೋರ್ ಪ್ರಸಕ್ತದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಾಯಕ ಮಂತ್ರಿಗಳಾಗಿ ಸಹಾ ಸೇವೆಸಲ್ಲಿಸುತ್ತಿದ್ದಾರೆ.  

ದೇಶ ಸೇವೆಯ ಜೊತೆಗೆ ದೇಶದ ಕ್ರೀಡಾ ಪ್ರತಿಷ್ಠೆಯನ್ನೂ ಬೆಳಗಿದ ರಾಜ್ಯವರ್ಧನ ಸಿಂಗ್ ರಾಥೋರ್ ಅವರಿಗೆ ಶ್ರೇಷ್ಠ ಕ್ರೀಡಾ ಪಟುವಿಗೆ ನೀಡಲಾಗುವ ಖೇಲ್ ರತ್ನ, ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳಲ್ಲದೆ, ಸೇನೆಯಲ್ಲಿನ ಸೇವೆಗಾಗಿ ವಿಶಿಷ್ಟ ಸೇವಾ ಪದಕ, ಸಿಖ್ ರೆಜಿಮೆಂಟ್ ಸ್ವರ್ಣ ಪಾರಿತೋಷಕ, ಸ್ವೋರ್ಡ್ ಆಫ್ ಆನರ್ ಮುಂತಾದ ಗೌರವಗಳು ಸಂದಿವೆ.

ಈ ಮಹಾನ್ ಯೋಧ,  ಕ್ರೀಡಾ ಸಾಧಕ ಮತ್ತು ಯುವರಾಜಕಾರಣಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

Tag: Rajyavardhan Singh Rathore

ಕಾಮೆಂಟ್‌ಗಳಿಲ್ಲ: