ಗುರುವಾರ, ಆಗಸ್ಟ್ 29, 2013

ಮೂಗೂರು ಜೇಜಮ್ಮ

ಮೂಗೂರು ಜೇಜಮ್ಮ

ಭರತನಾಟ್ಯದಲ್ಲಿ ಮೂಗೂರು ಶೈಲಿ ಎಂಬುದು ಪ್ರಖ್ಯಾತವಾದದ್ದು. ಇದಕ್ಕೊಂದು  ಕಟ್ಟುನಿಟ್ಟಾದ  ವ್ಯವಸ್ಥೆ ತಂದುಕೊಟ್ಟವರು ಮೂಗೂರು  ಅಮೃತಪ್ಪ ಎಂಬ  ಮಹನೀಯರು.  ಇದನ್ನು  ಒಂದು  ಭವ್ಯ ಪರಂಪರೆಯಾಗಿ ಮುಂದುವರೆಸಿ ಪ್ರಸಿದ್ಧಿಪಡಿಸಿದವರು  ಅದೇ  ಮೂಗೂರು  ವಂಶದ  ಕುಡಿಯಾದ  ಮೂಗೂರು ಜೇಜಮ್ಮನವರು.  ಜೇಜಮ್ಮನವರು ಮೈಸೂರು ಜಿಲ್ಲೆಯ ಮೂಗೂರು ಎಂಬಲ್ಲಿ ಮೇ 12, 1899ರ ವರ್ಷದಲ್ಲಿ  ಜನಿಸಿದರು.

ತಾತ ಅಮೃತಪ್ಪನವರಿಂದಲೇ ಪ್ರಾರಂಭಿಕ ನೃತ್ಯ ಶಿಕ್ಷಣ ಪಡೆದ ಜೇಜಮ್ಮನವರು, ನಂತರ ತಾಯಿ ಗೌರಮ್ಮನವರಿಂದ ಕಲಿಕೆಯನ್ನು ಮುಂದುವರಿಸಿದರು. ಸಂಗೀತ ವಿದ್ವಾನ್ ಮಳವಳ್ಳಿ ಸುಬ್ಬಣ್ಣನವರಿಂದ ಸಂಗೀತ ಹಾಗೂ ಮರಿಯಾಲ ಮಠದ ಮಹಾಂತ ಸ್ವಾಮಿಗಳಲ್ಲಿ ಸಂಸ್ಕೃತಾಭ್ಯಾಸ ಮಾಡಿದರು.

ಜೇಜಮ್ಮನವರು 1930ರಲ್ಲಿ ಸ್ತ್ರೀನಾಟಕ ಮಂಡಲಿಯ ಸ್ಥಾಪನೆ ಮಾಡಿದರು. ಇದು  ಮಹಿಳೆಯೊಬ್ಬರಿಂದ ಸ್ಥಾಪಿತವಾದ ವೃತ್ತಿ ನಾಟಕ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿತು. ನಾಟಕ ಮಂಡಲಿಯಲ್ಲಿ ಆಡಳಿತದಾರರಾಗಿ, ಪಾತ್ರಧಾರಿಯಾಗಿ  ಜೇಜಮ್ಮನವರು ಹಲವಾರು  ಜವಾಬ್ಧಾರಿಗಳನ್ನು  ಸಮರ್ಥವಾಗಿ ನಿರ್ವಹಿಸಿದರು. ಮಂಡಲಿಗಳಲ್ಲಿ ಅಭಿನಯಿಸುತ್ತಿದ್ದ ಅವರು ಪ್ರಹ್ಲಾದ ಚರಿತ್ರೆಯಲ್ಲಿ ಹಿರಣ್ಯಕಶಿಪುವಾಗಿ, ಗುಲೇಬ ಕಾವಲಿಯಲ್ಲಿ ಮಂದಾರವಲ್ಲಿಯಾಗಿ ತೋರಿದ ನಟನಾ ಸಾಮರ್ಥ್ಯ ಅತ್ಯಂತ ಜನಪ್ರಿಯವಾಗಿತ್ತು.

ಜೇಜಮ್ಮನವರು ಹಲವಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡಿದರು. ಅರಮನೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಗಣ್ಯರ ಮನೆಯ ಶುಭ ಸಮಾರಂಭಗಳಲ್ಲಿ, ಸಾಂಸ್ಕೃತಿಕ ಉತ್ಸವದ ಸಂದರ್ಭಗಳಲ್ಲಿ  ಕಾರ್ಯಕ್ರಗಳನ್ನು ನೀಡುತ್ತಿದ್ದರು. 1956ರಿಂದ ಹತ್ತು ವರ್ಷ ಕಾಲ ಕೊಡಗು ಸಂಗೀತ ನಾಟಕ ಅಕಾಡೆಮಿಯಲ್ಲಿ ಭರತ ನಾಟ್ಯ ಶಿಕ್ಷಕಿಯಾಗಿ ಹಲವಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡಿದರು. ಆರ್ಥಿಕ ದೃಷ್ಟಿಯಿಂದ ಅಶಕ್ತರಾಗಿದ್ದು, ನೃತ್ಯ ಕಲಿಯುವ ಆಸೆಯಿಂದ ಬಂದವರಿಗೆ  ಊಟ, ವಸತಿ ಸೌಕರ್ಯವನ್ನೂ  ಕಲ್ಪಿಸಿಕೊಡುತ್ತಿದ್ದರು.

ತಮ್ಮ ತಾತನವರು ಕಲಿಸಿದ ನೃತ್ಯ ಪದ್ಧತಿಯಲ್ಲಿ, ಪ್ರಾರಂಭದಲ್ಲಿ ಆರಭಿಯಲ್ಲಿ ಚೂರ್ಣಿಕ, ಮೇಳ ಪ್ರಾಪ್ತಿ, ಜಪಿತ, ನಂತರ ನಾಟ ರಾಗದಲ್ಲಿ ಮಂಗಳ ಆಮೇಲೆ ಕಲಾವಿದೆಯ ಪ್ರವೇಶ, ಪುಷ್ಪಾಂಜಲಿ, ಗೀತೆ, ಅಲರಿಪುಯಿಂದ ಹಿಡಿದು ತಿಲ್ಲಾನದವರೆಗೆ ನೃತ್ಯ ಬಂಧಗಳು -  ಇವು ಜೇಜಮ್ಮನವರು ಕಲಿಸುತ್ತಿದ್ದ ವಿಶಿಷ್ಟ ರೀತಿ.

1963ರ ವರ್ಷದಲ್ಲಿ ಮೈಸೂರು ಸಂಗೀತ ನಾಟಕ ಅಕಾಡೆಮಿಯು ಈ ಮಹಾನ್ ಕಲಾವಿದೆ ಜೇಜಮ್ಮನವರನ್ನು ಪ್ರಶಸ್ತಿ ಗೌರವಗಳನ್ನು ನೀಡಿ ಸನ್ಮಾನಿಸಿತು. 1970ರಲ್ಲಿ ನಾಡಿನ ಹಿರಿಯ ಸಂಗೀತ ಕಲಾವಿದರಾಗಿದ್ದ ಆಸ್ಥಾನ ವಿದ್ವಾನ್ ಬಿ. ದೇವೇಂದ್ರಪ್ಪನವರು ತಮ್ಮ ಮಾರುತಿ ಮಂದಿರದಲ್ಲಿನ  ವಿದ್ವತ್ ಸಭೆಯಲ್ಲಿ ಜೇಜಮ್ಮನವರಿಗೆ  ಭರತ ನಾಟ್ಯ ಪ್ರವೀಣೆಬಿರುದು ನೀಡಿ  ಸನ್ಮಾನಿಸಿದರು.

ಈ ಮಹಾನ್ ಕಲಾವಿದೆ ಜೇಜಮ್ಮನವರು ಆಗಸ್ಟ್ 15, 1983ರಂದು ಈ ಲೋಕವನ್ನಗಲಿದರು.  ಈ ಮಹಾನ್ ಕಲಾಚೇತನಕ್ಕೆ ನಮ್ಮ ಗೌರವಪೂರ್ವಕ ನಮನಗಳು.


Tag: Mugur Jejamma

ಕಾಮೆಂಟ್‌ಗಳಿಲ್ಲ: