ಗುರುವಾರ, ಆಗಸ್ಟ್ 29, 2013

ಎಚ್ ಎಸ್ ವೆಂಕಟೇಶಮೂರ್ತಿ

ಎಚ್ ಎಸ್ ವೆಂಕಟೇಶಮೂರ್ತಿ

ಎಚ್ ಎಸ್ ವೆಂಕಟೇಶಮೂರ್ತಿ ಅವರನ್ನು ಯುವ ಕವಿಗಳು ಎನ್ನುತ್ತಿದ್ದ ನಮ್ಮ ಪೀಳಿಗೆಯವರಿಗೆ ಅವರನ್ನು ನೆನೆದಾಗ ನಾವೂ ಕೂಡಾ ಪುಟ್ಟವರು ಎಂಬ ಮುದದ ಭಾವ ಆವರಿಸಿಕೊಳ್ಳುತ್ತೆ.  ನಾವು ಕನ್ನಡ ಸಂಪದದವರು ಏನಾದರೂ ಆಗಾಗ ಕನ್ನಡದಲ್ಲಿ ಕಾರ್ಯಕ್ರಮ ಮಾಡುವ ಬರದಲ್ಲಿ ಹಲವು ಬರಹಗಾರರು ಕಲಾವಿದರ ಬಳಿ ಹೋದಾಗೆಲ್ಲಾ ಒಂದು ರೀತಿಯ ಕಾಠಿಣ್ಯ ಎದುರಿಸುವ ಪರಸ್ಥಿತಿ ಸಾಮಾನ್ಯವಾಗಿರುತ್ತಿತ್ತು.  ಒಮ್ಮೆ ನನ್ನ ಗೆಳೆಯರೊಡನೆ ಇಂತಹ ಪ್ರಯತ್ನದಲ್ಲಿ ಬ್ರಿಗೇಡ್ ರಸ್ತೆಯಲ್ಲಿರುವ ಸೈಂಟ್ ಜೋಸೆಫ್ ಕಾಲೇಜಿಗೆ ಹೋಗಿ ಡಾ. ಎಚ್ ಎಸ್ ವಿ ಅವರನ್ನು ಒಂದು ರೀತಿಯ ಅನಿಶ್ಚಿಕತೆ, ದಿಗಿಲಿನಿಂದ ಕಾಣಲು  ಹೋದಾಗ ಅವರು ತೋರಿದ ಪ್ರೀತಿ, ಔದಾರ್ಯ, ಸ್ನೇಹ ಗುಣ ಇವೆಲ್ಲಾ ಆತ್ಮೀಯವಾಗಿ ಒಡಲಿನಲ್ಲಿ ಕುಳಿತಿರುವ ಅನುಭಾವ ಮೀಟುತ್ತಿದೆ.  ಎಚ್ ಎಸ್ ವಿ ಅವರನ್ನು ನೆನೆದಾಗ ಮಾಸ್ತಿ, ಪುತಿನ ಅಂಥಹ ಹಿರಿಯರಲ್ಲಿ ಕಾಣಬರುತ್ತಿದ್ದ ಗುಣವಿಶೇಷಣಗಳು ಅವರಲ್ಲಿ ನಲಿಯುತ್ತಿದ್ದ ನೆನಪಾಗುತ್ತದೆ.  ನಮ್ಮ ಈ ಆತ್ಮೀಯ ಭಾವವೆಂಬ ಎಚ್ ಎಸ್ ವಿ ಅವರ ಹುಟ್ಟು ಹಬ್ಬ.  

ಡಾ|| ಎಚ್.ಎಸ್. ವೆಂಕಟೇಶಮೂರ್ತಿಯವರು ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರು. ಅವರು ದಾವಣಗೆರೆ ಜಿಲ್ಲೆ, ಚೆನ್ನಗಿರಿ ತಾಲ್ಲೂಕಿನಲ್ಲಿರುವ ಹೋದಿಗ್ಗೆರೆ ಗ್ರಾಮದಲ್ಲಿ 1944ರ ಜೂನ್ ತಿಂಗಳು 23ರಂದು ಜನ್ಮತಾಳಿದರು. ತಂದೆ ನಾರಾಯಣಭಟ್ಟ ಮತ್ತು ತಾಯಿ ನಾಗರತ್ನಮ್ಮನವರು. ಪ್ರಾಥಮಿಕ ವಿದ್ಯಾಭ್ಯಾಸ ಹೋದಿಗ್ಗೆರೆಯಲ್ಲೂ, ಹೈಸ್ಕೂಲು ವಿದ್ಯಾಭ್ಯಾಸ ಹೊಳಲ್ಕೆರೆಯಲ್ಲೂ ನಡೆದವು. ಭದ್ರಾವತಿಯ ಪಾಲಿಟೆಕ್ನಿಕ್ಕಿನಲ್ಲಿ ಮೆಕ್ಯಾನಿಕಲ್ ಇಂಜಿನಿರಿಂಗ್ ಡಿಪ್ಲೊಮಾ ಪಡೆದು, ಭದ್ರಾವತಿಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

ಆದರೆ, ಅವರ ಹೃದಯದಲ್ಲಿದ್ದ ಕನ್ನಡ ಭಾಷೆಯನ್ನು ಅಧ್ಯಯನ ಮಾಡುವ ಮತ್ತು ಬರಹಗಾರನಾಗುವ ಉತ್ಕಟಾಕಾಂಕ್ಷೆ ಅವರನ್ನು ಸುಮ್ಮನಿರಗೊಡಲಿಲ್ಲ. ಧಾರವಾಡ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಬಿ.ಎ. ಪದವಿ ಪಡೆದು, ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿ ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ. ಪದವಿಯನ್ನು ಪಡೆದರು. 1973ರಲ್ಲಿ ಪ್ರೊ|| ಜಿ.ಎಸ್.ಶಿವರುದ್ರಪ್ಪನವರ ನೇತೃತ್ವದಲ್ಲಿ ಕಥನ ಕವನಗಳು ಎಂಬ ವಿಷಯ ಕುರಿತು ಥೀಸಿಸ್ ಬರೆದು ಬೆಂಗಳೂರು ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪದವಿಯನ್ನೂ ಗಳಿಸಿದರು.

'ಪರಿವೃತ್ತ', 'ಬಾಗಿಲು ಬಡಿವ ಜನಗಳು', 'ಮೊಖ್ತಾ', 'ಸಿಂದಬಾದನ ಆತ್ಮಕಥೆ', 'ಒಣ ಮರದ ಗಿಳಿಗಳು', 'ಮರೆತ ಸಾಲುಗಳು', 'ಸೌಗಂಧಿಕ', 'ಇಂದುಮುಖಿ', 'ಹರಿಗೋಲು', 'ವಿಸರ್ಗ', 'ಎಲೆಗಳು ನೂರಾರು', 'ಅಗ್ನಿಸ್ತಂಭ', 'ಎಷ್ಟೊಂದು ಮುಖ', 'ಅಮೆರಿಕದಲ್ಲಿ ಬಿಲ್ಲುಹಬ್ಬ', 'ವಿಮುಕ್ತಿ',  'ಭೂಮಿಯೂ ಒಂದು ಆಕಾಶ', 'ಮೂವತ್ತು ಮಳೆಗಾಲ' ಮುಂತಾದವು ಎಚ್ ಎಸ್ ವಿ ಅವರ ಕವನ ಸಂಕಲನಗಳು.  ತಾಪಿ’, 'ಅಮಾನುಷರು', 'ಕದಿರನ ಕೋಟೆ', 'ಅಗ್ನಿಮುಖಿ' ಕಾದಂಬರಿಗಳು.  'ಬಾನಸವಾಡಿಯ ಬೆಂಕಿ", ‘ಪುಟ್ಟಾರಿಯ ಮತಾಂತರಕಥಾ ಸಂಕಲನಗಳು.

ಎಚ್ ಎಸ್ ವಿ ಅವರ ನಾಟಕಗಳೆಂದರೆ 'ಹೆಜ್ಜೆಗಳು', 'ಒಂದು ಸೈನಿಕ ವೃತ್ತಾಂತ', 'ಕತ್ತಲೆಗೆ ಎಷ್ಟು ಮುಖ', 'ಚಿತ್ರಪಟ', 'ಉರಿಯ ಉಯ್ಯಾಲೆ', 'ಅಗ್ನಿವರ್ಣ', 'ಸ್ವಯಂವರ' ಮುಂತಾದವು. ಸಾಹಿತ್ಯ ಚರಿತ್ರೆಯಲ್ಲಿ ಎಚ್ ಎಸ್ ವಿ ಅವರ ಕೀರ್ತನಕಾರರುಕನ್ನಡ ಸಾಹಿತ್ಯದ ಮಹತ್ವದ ಕೃತಿ.  ಎಚ್ ಎಸ್ ವಿ ಅವರ ವಿಮರ್ಶಾ ಕೃತಿಗಳಲ್ಲಿ 'ನೂರು ಮರ, ನೂರು ಸ್ವರ', 'ಮೇಘದೂತ', 'ಕಥನ ಕವನ', 'ಆಕಾಶದ ಹಕ್ಕು'  ಪ್ರಧಾನವಾಗಿವೆ.  'ಕ್ರಿಸ್ಮಸ್ ಮರ'  ಅನುಭವ ಕಥನ.  'ಶತಮಾನದ ಕಾವ್ಯ' ಅವರ ಸಂಪಾದನೆ.  ಕಾಳಿದಾಸನ ಋತುಸಂಹಾರದ ಅನುವಾದ ಋತುವಿಲಾಸ’.  'ಸಿ.ವಿ.ರಾಮನ್', 'ಹೋಮಿ ಜಹಾಂಗೀರ ಭಾಭಾ', 'ಸೋದರಿ ನಿವೇದಿತಾ', 'ಬಾಹುಬಲಿ' ಮುಂತಾದವು ವ್ಯಕ್ತಿಚಿತ್ರಗಳ ಬರವಣಿಗೆಗಳಾಗಿವೆ.  'ಚಿನ್ನಾರಿ ಮುತ್ತ", 'ಕ್ರೌರ್ಯ', 'ಮತದಾನ', ಮತ್ತು ಇದೀಗ ಒಂದೂರಲ್ಲಿಚಿತ್ರಗಳಿಗೆ ಸಾಹಿತ್ಯ ಒದಗಿಸಿರುವುದಲ್ಲದೆ ಕಿರುತೆರೆ ಧಾರಾವಾಹಿಗಳಿಗೂ ಗೀತೆಗಳನ್ನು ರಚಿಸಿದ್ದಾರೆ. ಇವರ ಹಲವಾರು ಭಾವಗೀತೆಗಳು ಧ್ವನಿಸುರುಳಿಗಳಾಗಿ ಕನ್ನಡಿಗರ ಮನ ಸೂರೆಗೊಂಡಿವೆ.

ಎಚ್ ಎಸ್ ವಿ ಅವರು ವಿವಿಧ ಪ್ರಾಕಾರಗಳಲ್ಲಿ ಸಮರ್ಥವಾದ ಸಾಹಿತ್ಯ ಸಾಧನೆಗಳ ಪ್ರತೀಕವಾಗಿದ್ದಾರೆ.  ನಮ್ಮ ನಾಡಿನಲ್ಲಿ ಇಂದು ವಿರಳವಾಗುತ್ತಿರುವ ಕನ್ನಡದ ಮೂಲ ಸಾಂಸ್ಕ್ರತಿಕ ಪರಂಪರೆಗಳ ಮೇರು ಪ್ರತಿನಿಧಿಯಾಗಿದ್ದಾರೆ.  ಅವರಿಗೆ ಬರವಣಿಗೆ ಎಂಬುದೊಂದು ಪ್ರೀತಿ.  ಅಲ್ಲಿ ನಾನುಎಂಬ ಅವರು ಕಳೆದುಹೋಗಿರುತ್ತಾರೆ ಅಥವಾ ಅವರು ಅವರ ಬರವಣಿಗೆಯಲ್ಲಿ ಕಾಣುವ ಹನಿ ಹನಿಯಲ್ಲೂ ತಮ್ಮನ್ನು ಪ್ರೀತಿಯಿಂದ ಆಧ್ಯಾತ್ಮವಾಗಿರಿಸಿಕೊಂಡಿರುತ್ತಾರೆ.  ಅವರ ಅವಧಿಯಲ್ಲಿನ ಅನಾತ್ಮ ಕಥನಓದುತ್ತಿದ್ದಂತೆ ಅವರಲ್ಲಿ ತಾವು ಕಂಡಿದ್ದರಲ್ಲೆಲ್ಲಾ ಪ್ರೀತಿಯೇ ಆಗಿಬಿಡುವ ಮನೋಜ್ಞ ಸರಳತೆ  ಆತ್ಮೀಯವಾಗಿ ಹಿಡಿದಿಟ್ಟುಕೊಳ್ಳುತ್ತದೆ.  ಅವರನ್ನು ವಂಚಿಸಿದವರ ಕಥೆ ಹೇಳುವಾಗ ಕೂಡಾ ಅವರ ಬಗ್ಗೆ ಅವರಲ್ಲಿರುವುದು ಕೂಡಾ ಒಂದು ರೀತಿಯ 'ಪ್ರೀತಿಯೇ ಏನೋ' ಎಂಬ ಭಾವ ಹುಟ್ಟಿಸುತ್ತಾರೆ.

ಸೌಗಂಧಿಕಾದಲ್ಲಿ ದ್ರೌಪದಿಯ ಬಗೆಗಿನ   ಪಕ್ಕ ನೋಡಿದರಲ್ಲಿ ಏನಿದೆ ಮಣ್ಣು, ಸಣ್ಣಗೆ ಕಣ್ಣು ಕೊಂಕಿಸಿ, ತೆರೆದ ಕಿಟಕಿಯ ಹೊರಗೆ ಆಚೆ ನೋಟ ಚಾಚಿದಳುಎಂಬ ಮಾತಿರಲಿ, ‘ಸೋನಿ ಅಂದರೆ ಸೋನಿ, ಬೆಳದಿಂಗಳ ಬಟ್ಟಲುಎಂಬ ಪುಟ್ಟ ಮಕ್ಕಳ ಸೋನಿ ಪದ್ಯವೇ ಇರಲಿ ಎಚ್ ಎಸ್ ವಿ ಅವರ ಕವಿತ್ವ ತನ್ನ ಚಿರಯೌವನವನ್ನು ಉಳಿಸಿಕೊಂಡು ಸಾಗಿದೆ.   ಎಚ್ ಎಸ್ ವಿ ಬರವಣಿಗೆಗಳಲ್ಲಿ ಪಂಪ, ರನ್ನ, ಕುಮಾರವ್ಯಾಸರ ಹೆಜ್ಜೆಗುರುತುಗಳು ಪಡಿಮೂಡುವುದರ ಜೊತೆ ಜೊತೆಗೆ  ಮಾಸ್ತಿ, ಬೇಂದ್ರೆಯವರ ಒಳದನಿ, ಅಡಿಗ, ಅನಂತಮೂರ್ತಿ, ಲಂಕೇಶರ ನವಪ್ರಜ್ಞೆಗಳ ಹೊಳಹುಗಳು ಕೂಡಾ ಮಿಂಚುತ್ತವೆ.

ಎಚ್ ಎಸ್ ವಿ ಅವರ ಶಿಶಿರದ ಪಾಡುವಿನ ರಾಮನಿರುವತನಕ ರಾಮಾಯಣವು ಮುಗಿಯುವುದೆ?  ಅಂತೆಯೇ  ಸೀತೆಯ ಚಿಂತೆ ಸಾಯುವನಕಎಂಬ ಮಾತಿನಲ್ಲಿ  ಸೀತೆಯು ಪಟ್ಟ ಪಾಡಿನ ದಟ್ಟವರ್ಣನೆಯಿದೆ.  ಬಹುಷಃ ಚಿತ್ರಪಟ ರಾಮಾಯಣದಲ್ಲಿನ ಕ್ರಾಂತಿಕಾರಕ ಚಿಂತನೆಗಳ ಮೊಳಕೆಯ ಬೀಜ ಈ ಮಾತುಗಲ್ಲಿವೆ ಎನಿಸುತ್ತದೆ. ಎಚ್ ಎಸ್ ವಿ ಅವರು ಹುಟ್ಟುವ ಮುಂಚೆಯೇ ತಂದೆಯನ್ನು ಕಳೆದುಕೊಂಡು ಅಮ್ಮ ಮತ್ತು ಅಜ್ಜಿಯರ ಪ್ರೀತಿಯಲ್ಲಿ ಬೆಳವಣಿಗೆ ಕಂಡವರು.  ಬಂದ ಬಾಗಿಲು ಮಣ್ಣು, ಬಿಡುವ ಬಾಗಿಲು ಮಣ್ಣು, ನಡುವೆ ಕಾಪಾಡುವುದು ತಾಯಿಯ ಕಣ್ಣುಎಂಬ ಕೆ ಎಸ್ ನರಸಿಂಹಸ್ವಾಮಿಗಳ ಆತ್ಮೀಯ ಧ್ವನಿ ಎಚ್ ಎಸ್ ವಿ ಅವರ ಮಾತೃ ಮಮತೆಗಳಲ್ಲಿ ಕಾಣಸಿಗುತ್ತದೆ.   ರಾಗ ವಿ-ರಾಗದಲ್ಲಿ ಅವರು ಮೂಡಿಸುವ  ಅಕ್ಕಮಹಾದೇವಿ ಅರಸುವ ಅಧ್ಯಾತ್ಮವೆಂಬ ವಿರಾಗಕ್ಕೂ, ಚನ್ನಮಲ್ಲಿಕಾರ್ಜುನನು ರಾಣಿ ಅಮೃತಮತಿಯಲ್ಲಿ ಮುಖಾಮುಖಿಯಾಗುವ ರಾಗಕ್ಕೂ ತರುವ ತಾದ್ಯಾತ್ಮ ವಿಶಿಷ್ಟವೆನಿಸುತ್ತದೆ.

ತಮ್ಮ ಬರವಣಿಗೆಗಳೆಲ್ಲದರಲ್ಲಿ ಕನ್ನಡದ ಮೂಲತನವನ್ನು ಕಾಣಿಸಿಕೊಡುವ ಎಚ್ ಎಸ್ ವಿ ಅವರಿಗೆ ಇಂದಿನ ಕನ್ನಡ ಶಾಲೆಗಳ ಪರಿಸ್ಥಿತಿಯ ಬಗ್ಗೆ, ಮುಂದಿನ ಪೀಳಿಗೆಗಳು ತಮ್ಮ ಇತಿಹಾಸದಿಂದ ವಂಚಿತವಾಗುವ ಪರಿಸ್ಥಿತಿ ಏರ್ಪಾಡುತ್ತಿರುವ ಬಗೆಗೆ ಅತೀವ ಖೇದವಿದೆ.

ಎಚ್ ಎಸ್ ವಿ ಅವರು ತಮ್ಮ  ಪಾಂಡಿತ್ಯಪೂರ್ಣ ಬರವಣಿಗೆಗಳ ಪರಿದಿಯಾಚೆಗೆ, ಸಾಮಾನ್ಯನಿಗೆ ಹತ್ತಿರವಾಗುವಂತೆ ಚಿನ್ನಾರಿ ಮುತ್ತದಂತಹ ಸೊಗಸಾದ ಹಾಡುಗಳನ್ನು ಬರೆದಿದ್ದಾರೆ.  ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತೆವು’, ‘ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೇ ಒಂದು ಹೆಣ್ಣುಎಂಬಂತಹ ಭಾವಗೀತೆಗಳಲ್ಲಿ ಅತ್ಯಂತ ಆತ್ಮೀಯ ಭಾಷೆಯಲ್ಲಿ ಮಹತ್ತನ್ನು ಹೇಳುವ ಸೌಂದರ್ಯ ಕೂಡಾ ಮೇಳವಿಸಿದೆ.

ತೀವ್ರವಾದ ಪಾರಂಪರಿಕತೆಯ ಆಳದ ಕಾವ್ಯವನ್ನು ಅವರು ಹೇಗೆ ಹೊಕ್ಕಬಲ್ಲರೋ ಅಂತೆಯೇ ಆಧುನಿಕ ಚಿತ್ರಣಗಳು ಕೂಡಾ ಅವರ ಕಾವ್ಯದಲ್ಲಿ ಪುಟಿ ಪುಟಿದು ಬರಬಲ್ಲವು.  ಹಕ್ಕಿ ಪಕ್ಕಿ ಜೊತೆಗೆ ವೃತ್ತ ಪತ್ರಿಕೆ... ಗುಡಿ ಗೋಪುರ ಕಾರ್ಖಾನೆಯ ಮುಡಿಗೆಎಂಬಂತಹ ನಿರೂಪಣೆಗಳಲ್ಲಿ ಹಾಡುವ ಹಕ್ಕಿಯ ಜೊತೆಗೆ, ದಿನಪತ್ರಿಕೆ, ದೇಗುಲ, ಗೋಪುರ, ಕಾರ್ಖಾನೆಗಳೆಲ್ಲವೂ ತಮ್ಮ ಪ್ರಾತಿನಿಧ್ಯವನ್ನು ಸಮರ್ಥವಾಗಿ ಚೆಲ್ಲಬಲ್ಲವು.

ಋತುವಿಲಾಸಕೃತಿಗೆ ಸಂದ  ಕೇಂದ್ರ ಸಾಹಿತ್ಯ ಆಕಾಡೆಮಿ ಪುರಸ್ಕಾರವನ್ನು ಒಳಗೊಂಡಂತೆ ಎಚ್ ಎಸ್ ವಿ ಅವರಿಗೆ ಸಂದ ಪ್ರಶಸ್ತಿಗಳು ಅನೇಕ.  ಮಕ್ಕಳ ಸಾಹಿತ್ಯದಲ್ಲಿನ ಕೊಡುಗೆಗೂ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ ಎಂಬುದು ಗಮನಾರ್ಹ.    ಇನ್ನೂ ಮಹತ್ವದ ಪ್ರಶಸ್ತಿಗಳು ಸಲ್ಲಲ್ಲು ಕೊಡಾ ಅವರು ಅರ್ಹರು ಎಂದು ಕನ್ನಡ ನಾಡು ಬಲ್ಲದು.  ಇವೆಲ್ಲಕ್ಕೂ ಮಿಗಿಲಾದದ್ದು ಅವರಲ್ಲಿ ಹುದುಗಿರುವ ಅವರ ಸಮುದಾಯದ ಬಗೆಗಿನ ಆತ್ಮೀಯ ದೃಷ್ಟಿಕೋನ.  ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಪ್ರೀತಿ ಕನ್ನಡಿಗರಿಗೆ ನಿರಂತರ ದೊರಕುತ್ತಿರಲಿ ಅವರ ಬದುಕು ಸಂತಸ, ಸುಖ, ಸೌದರ್ಯಗಳಿಂದ  ನಿರಂತರ ಕಂಗೊಳಿಸುತ್ತಿರಲಿ ಎಂಬುದು ನಮ್ಮೆಲ್ಲರ ಪ್ರೀತಿಯ ಹಾರೈಕೆ.


Tag: H. S. Venkatesh Murthy

ಕಾಮೆಂಟ್‌ಗಳಿಲ್ಲ: