ಶುಕ್ರವಾರ, ಆಗಸ್ಟ್ 30, 2013

ಮಾನ್ವಿ ನರಸಿಂಗರಾಯರು

ಮಾನ್ವಿ ನರಸಿಂಗರಾಯರು

ಹೈದರಾಬಾದ್ ಕರ್ನಾಟಕ ವಿಭಾಗದ ಕನ್ನಡ ಸಾಹಿತ್ಯ ನವ ನಿರ್ಮಾಣದಲ್ಲಿ ಪ್ರಮುಖರಾದ ಮಾನ್ವಿ ನರಸಿಂಗರಾಯರು ಏಪ್ರಿಲ್ 2, 1911ರಂದು ರಾಯಚೂರಿನಲ್ಲಿ ಜನಿಸಿದರು. ತಂದೆ ರಾಘವೇಂದ್ರರಾವ್ ಅವರು ಮತ್ತು ತಾಯಿ ಚಂದ್ರಮ್ಮನವರು. ತಂದೆ ರಾಘವೇಂದ್ರ ರಾವ್ ಅವರು ರಾಯಚೂರಿನ ತಹಸೀಲ್‌ದಾರರ ಕಚೇರಿಯಲ್ಲಿ ಗಿರ್ದಾವರ್ ಆಗಿದ್ದರು. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ರಾಯಚೂರಿನ ಹಮ್‌ದರ್ದ್ ಹೈಸ್ಕೂಲಿನಲ್ಲಿ ಓದಿದ ನರಸಿಂಗರಾಯರು ಪ್ರತಿಭಾವಂತ ವಿದ್ಯಾರ್ಥಿ ಎಂಬ ಖ್ಯಾತಿ ಪಡೆದಿದ್ದರು. ಮೆಟ್ರಿಕ್ ನಂತರದಲ್ಲಿ  ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದು, 1936ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು  ಉನ್ನತ ಶ್ರೇಣಿಯಲ್ಲಿ ಸ್ವರ್ಣಪದಕದೊಂದಿಗೆ ಪಡೆದರು.  ಅವರು ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠರಾದ ಬಿ.ಎಂ.ಶ್ರೀ. ಟಿ.ಎಸ್. ವೆಂಕಣ್ಣಯ್ಯ, ತೀನಂಶ್ರೀ ಮೊದಲಾದವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು.

ನರಸಿಂಗರಾಯರು  ಬರೆದ ಹಲವಾರು ಕವನಗಳು ಹೈದರಾಬಾದಿನ ಸಾಹಿತ್ಯ ಮಂದಿರದಿಂದ ಪ್ರಕಟಿಸಿದ ಶ್ರೀಕಾರಎಂಬ ಗ್ರಂಥದಲ್ಲಿ ಮಾನ್ವಿಎಂಬ ಹೆಸರಿನಿಂದ ಪ್ರಕಟಗೊಂಡಿವೆ. ಇವರು ಪ್ರಕಟಿಸಿದ ಪ್ರಮುಖ ಕೃತಿಗಳೆಂದರೆ ವಿ.ಸೀ.ಯವರ ಪಂಪಯಾತ್ರೆಯಂತೆಯೇ ಕನ್ನಡಯಾತ್ರೆ’. ‘ಕನ್ನಡದ ಪರಿಚಯಎಂಬ ಹಿಂದಿ ಭಾಷೆಯಲ್ಲಿ ಬರೆದ ಕೃತಿ. ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ಕೃತಿ ನಡುಗನ್ನಡ.ಈ ನಡುಗನ್ನಡ ಚರಿತ್ರೆಯನ್ನು ಭಾಷಾಶಾಸ್ತ್ರದ ಬೆಳಕಿನಲ್ಲಿ ವಿವರವಾಗಿ ಬರೆದು ಕನ್ನಡ ಸಾಹಿತ್ಯಕ್ಕಾಗಿ ಪರಿಪುಷ್ಟವಾಗಿಯೂ, ಶ್ಲಾಘನೀಯವಾಗಿಯೂ ಮಾನ್ವಿಯವರು ಮಾಡಿರುವರುಎಂದು  ಎ.ಆರ್.ಕೃಷ್ಣಶಾಸ್ತ್ರಿಗಳಿಂದ  ಹೊಗಳಿಸಿಕೊಂಡ ಗ್ರಂಥವಿದು. ಸರಸ್ವತಿ ತತ್ತ್ವಎಂಬದು 9 ಲೇಖನಗಳ ಸಂಗ್ರಹ. ಸಾಹಿತ್ಯದ ಉಗಮ, ರಸಸಿದ್ಧಾಂತ, ಕಲೆ ಮತ್ತು ನೀತಿ, ಕನ್ನಡ ಸಾಹಿತ್ಯ ಸಂಶೋಧನೆ, ಹೊಸಗನ್ನಡ ವಿಮರ್ಶೆ, ನಾಟಕ ಮೊದಲಾದುವುಗಳನ್ನೊಳಗೊಂಡಿದೆ. ಅವರು ಗುರುರಾಜ ಎಂಬ ಅಂಕಿತದಿಂದ ಹಲವಾರು ವಚನಗಳನ್ನೂ ರಚಿಸಿದ್ದರು.

ಮಾನ್ವಿ ನರಸಿಂಗರಾಯರಿಗೆ ಸಂದ ಗೌರವಗಳೆಂದರೆ-ಹೈದರಾಬಾದು ಕರ್ನಾಟಕ ವಿಭಾಗ ತನ್ನದೇ ಆದ ಸಾಹಿತ್ಯ ಪರಿಷತ್ತನ್ನು ಹೊಂದಿದ್ದು 1956ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. 1959ರಲ್ಲಿ ಬಿದರೆಯಲ್ಲಿ ನಡೆದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದ ಸಂಶೋಧನೆ ಮತ್ತು ವಿಮರ್ಶಾಗೋಷ್ಠಿ ಅಧ್ಯಕ್ಷತೆ. ಆಂಧ್ರ ಪ್ರದೇಶದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಂಚಾಲಕರಾಗಿ, ಭಾರತ ಸರ್ಕಾರದ ಸಾಹಿತ್ಯ ಅಕಾಡಮಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸಂದ ಗೌರವ.

ಈ ಎಲ್ಲ ಗೌರವಗಳಿಗೂ ಭಾಜನರಾದ ಮಾನ್ವಿ ನರಸಿಂಗರಾಯಾರು  ಕನ್ನಡ ಕೈಂಕರ್ಯದಲ್ಲಿ ತೊಡಗಿದ್ದು ಪ್ರಾಧ್ಯಾಪಕರಾಗಿ ದುಡಿಯುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಸೆಪ್ಟೆಂಬರ್ 9, 1969ರಲ್ಲಿ ಈ ಲೋಕವನ್ನಗಲಿದರು.


ಮಾಹಿತಿ ಕೃಪೆ: ಕಣಜ

Tag: Manvi Narasinga Rao

ಕಾಮೆಂಟ್‌ಗಳಿಲ್ಲ: