ಶನಿವಾರ, ಆಗಸ್ಟ್ 31, 2013

ಪುನೀತ್ ರಾಜ್ ಕುಮಾರ್

ಪುನೀತ್ ರಾಜ್ ಕುಮಾರ್

ರಾಜ್ ಕುಮಾರ್ ಅಂದರೆ ಕನ್ನಡದಲ್ಲಿ ಒಂದು ಅಗಾಧ ಶಕ್ತಿ. ಆ ರಾಜ್ ಕುಮಾರ್ ಅವರ ಮಗನಾಗಿ ಬಂದು ಇಂದು ಕನ್ನಡ ಚಿತ್ರರಂಗದಲ್ಲಿ ಅಪಾರ ಯಶಸ್ಸಿನಿಂದ ಮಿನುಗುತ್ತಿರುವ ಹುಡುಗ ಪುನೀತ್. ಇಂದು ಪುನೀತ್ ಹುಟ್ಟು ಹಬ್ಬ. ಇವರ  ಹುಟ್ಟಿದ ದಿನ ದಿನಾಂಕ ಮಾರ್ಚ್ 17, 1975. ಪುನೀತ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ.

ಪುನೀತ್ ಬಾಲ್ಯದಲ್ಲೇ ರಾಜ್ ಅವರೊಂದಿಗೆ ಬಾಲನಟನಾಗಿ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡು ಚಿತ್ರರಂಗದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟ ಹುಡುಗ. ರಾಜ್ ಕುಟುಂಬದ ನಿರ್ಮಾಣವಾದ ಎನ್ ಲಕ್ಷ್ಮೀನಾರಾಯಣರ ನಿರ್ದೇಶನದ 'ಬೆಟ್ಟದ ಹೂವು' ಚಿತ್ರದಲ್ಲಿ ಪುನೀತ್ ಬಾಲನಟನಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ. ಈ ಹುಡುಗನ ಚಲಿಸುವ ಮೋಡಗಳುಚಿತ್ರದ ಕಾಣದಂತೆ ಮಾಯವಾದನೋ ಗೀತೆ ಜನರನ್ನು ಅಪಾರವಾಗಿ ಮೋಡಿ ಮಾಡಿತ್ತು.

ನಾಯಕನಾಗಿ ಬಂದ ಮೇಲಂತೂ ಒಂದಕ್ಕಿಂದ ಒಂದು ಎಂಬಂತೆ ಪುನೀತರ ಅಪ್ಪು, ಆಕಾಶ್, ಮಿಲನ, ವಂಶಿ, ರಾಮ್, ಜಾಕಿ, ಹುಡುಗರು, ಪರಮಾತ್ಮ, ಅಣ್ಣಾ ಬಾಂಡ್, ಯಾರೇ ಕೂಗಾಡಲಿ, ಮೈತ್ರಿ ಹೀಗೆ ಅವರ ಬಹಳಷ್ಟು ಚಿತ್ರಗಳು ಜಯಭೇರಿ ಬಾರಿಸಿವೆ. ಜೊತೆಗೆ ಕನ್ನಡಿಗರಿಗೂ ಕೋಟ್ಯಾಧಿಪತಿಗಳಾಗಬೇಕೆಂಬ ಕನಸಿನ ಕಿಡಿ ಹಚ್ಚಿಸುತ್ತಾ ಕೋಟ್ಯಾಧಿಪತಿಎಂಬ ಕೌನ್ ಬನೇಗಾ ಕ್ರೋರ್ ಪತಿ ಮಾದರಿಯ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ಮೂಡಿಸಿದ್ದಾರೆ. ನಂದಿನಿ ಹಾಲಿನ ಜಾಹೀರಾತಿನಲ್ಲೂ ತಮ್ಮ ಸಾಹಸದ ನಟನೆ ಬಿಂಬಿಸಿದ್ದಾರೆ.  ನಿರ್ಮಾಪಕರಾಗಿಗಾಯಕರಾಗಿ  ಸಹಾ ಅವರು ಸಾಕಷ್ಟು  ಯಶಸ್ಸು  ಸಾಧಿಸಿದ್ದಾರೆ.

ಪುನೀತ್ ನಟಿಸಿದ ಚಿತ್ರಗಳು ಕಡಿಮೆಯಾಗಿದ್ದವು, ಕೆಲವೊಂದು ಚಿತ್ರ ಯಶಸ್ಸು ಕಾಣಲಿಲ್ಲ ಎಂಬುದು ನಿಜವಾದರೂ, ರಾಜ್ ಅವರ ಕುಟುಂಬ ಪುನೀತರನ್ನು ಅತ್ಯಂತ ವ್ಯವಸ್ಥಿತವಾಗಿ ಚಿತ್ರರಂಗದಲ್ಲಿ ಬೆಳೆಸುತ್ತಿರುವುದನ್ನು ಅವರ ಚಿತ್ರಜೀವನದ ಬಹಳಷ್ಟು  ಯಶಸ್ಸುಗಳು ಸೂಚಿಸುವಂತದ್ದಾಗಿವೆ. ಈ ಗೆಲುವುಗಳು ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಭರವಸೆಯ ಶಕ್ತಿಯನ್ನು ನೀಡಿದಂತಹವು.  ವ್ಯವಹಾರದ ಯಶಸ್ಸಿನ ಜೊತೆಗೆ ಪುನೀತರಿಗೆ ಅರಸು, ಹುಡುಗರು ಚಿತ್ರಗಳಿಗೆ ದೊರೆತ ಫಿಲಂ ಫೇರ್ ಪ್ರಶಸ್ತಿ ಮತ್ತು ಮಿಲನ, ಪೃಥ್ವಿ , ಜಾಕಿ ಚಿತ್ರಗಳಿಗೆ ದೊರೆತ ರಾಜ್ಯಪ್ರಶಸ್ತಿ ಮುಂತಾದವು ಅವರು ಅಭಿನಯ ಕಲೆಯಲ್ಲಿ ಕಲಿಯುವುದಕ್ಕೆ ತೋರಿರುವ  ಚುರುಕುತನಕ್ಕೆ ಸಂದ ಪುರಸ್ಕಾರಗಳಾಗಿವೆ.

ಇಷ್ಟೆಲ್ಲಾ ಯಶಸ್ಸುಗಳು ಜೊತೆಗಿದ್ದರೂ ರಾಜ್ ಕುಮಾರ್ ಅವರ ಹೆಸರಿಗೆ ತಕ್ಕಂತೆ ಗೌರವಯುತವಾಗಿ ನಡೆದುಕೊಳ್ಳುತ್ತಾ ಹಂತಹಂತವಾಗಿ ಅಭಿನಯ ಕಲೆಗಳನ್ನು ರೂಢಿಸಿಕೊಳ್ಳುತ್ತಾ ಸಾಗಿದ್ದಾರೆ ಪುನೀತ್. ಇನ್ನೂ ಯುವ ವಯಸ್ಸಿನಲ್ಲೇ ಸಾಕಷ್ಟು ಸಾಧಿಸಿರುವ ಪುನೀತರ  ಮುಂದೆ ಕಾಲ ತನ್ನ ವಿಶಾಲವಾದ ನೆಲೆಯನ್ನು ಹರಡಿಕೊಂಡಿದ್ದು, ಇವರ ಮುಂದಿನ ಸಾಧನೆಗಳಿಗಾಗಿ ಸಾಕಷ್ಟು ನಿರೀಕ್ಷೆಗಳನ್ನು ಸೂಚಿಸುತ್ತಿದೆ.

ಯಶಸ್ಸನ್ನು ಅತೀವವಾಗಿ ಹಚ್ಚಿಕೊಂಡಿಲ್ಲದೆ ಕಾಯಕದಲ್ಲಿ ಸಂತಸವನ್ನು ಅನುಭವಿಸುತ್ತಾ ಮುಂದುವರೆದಿರುವ ಪುನೀತರಿಗೆ, "ನಿಮ್ಮಿಂದ ಕಲೆ ಇನ್ನೂ ಉತ್ತಮವಾಗಿ ಬೆಳಗಲಿ, ನಿಮ್ಮಲ್ಲಿರುವ ಹಲವು ಮಿತಿಗಳು ಮುಂಬರುವ ದಿನಗಳಲ್ಲಿ ಕರಗಿ, ನಿಮ್ಮಿಂದ ಉತ್ಕೃಷ್ಟ ಸಾಧನೆಯಾಗಲಿ, ಯಶಸ್ಸು ನಿಮ್ಮೊಂದಿಗೆ ಎಂದೆಂದೂ ಇರಲಿ" ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಶುಭ ಹಾರೈಸೋಣ.

Tag: Punith Rajkumar

ಕಾಮೆಂಟ್‌ಗಳಿಲ್ಲ: