ಶುಕ್ರವಾರ, ಆಗಸ್ಟ್ 30, 2013

ಆರ್. ನರಸಿಂಹಾಚಾರ್

ಆರ್. ನರಸಿಂಹಾಚಾರ್

ಕನ್ನಡ ಸಾರಸ್ವತ ಪ್ರಪಂಚದಲ್ಲಿ ಅತ್ಯಂತ ಅವಿಸ್ಮರಣೀಯರಾದವರು ರಾವ್ ಬಹದ್ದೂರ್ ಆರ್. ನರಸಿಂಹಾಚಾರ್.  ಅವರು ಖ್ಯಾತ ಸಂಶೋಧಕರಾಗಿ, ಭಾಷಾವಿಜ್ಞಾನಿಯಾಗಿ, ಶಾಸನ ತಜ್ಞರಾಗಿ, ಗ್ರಂಥ ಸಂಪಾದಕರಾಗಿ ಅನುವಾದಕರಾಗಿ, ಸೃಜನಶೀಲ ಬರಹಗಾರರಾಗಿ ವಿಮರ್ಶಕರಾಗಿ ಒಳ್ಳೆಯ ಹೆಸರು ಮಾಡಿದವರು.  ತಮಿಳು ಮಾತೃಭಾಷೆಯಾಗಿದ್ದರೂ ಇಂಗ್ಲಿಷ್, ಸಂಸ್ಕೃತ, ತೆಲುಗು ಭಾಷೆಗಳಲ್ಲಿ ಪಾಂಡಿತ್ಯ ಪಡೆದು ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಅಪೂರ್ವವಾದುದು.

ಆಚಾರ್ಯರು ಮಂಡ್ಯದ ಕೊಪ್ಪಲುವಿನಲ್ಲಿ 1861, ಏಪ್ರಿಲ್ 9ರಂದು ಜನಿಸಿದರು.  ತಂದೆ ತಿರುನಾರಾಯಣ ಪೆರುಮಾಳ್ ಅವರು. ತಾಯಿ ಶಿಂಗಮ್ಮಾಳು ಅವರು.  ರಾಮಾನುಜಪುರದಲ್ಲಿ ಆಚಾರ್ಯರ ಹಿರಿಯರು ವಾಸ ಮಾಡುತ್ತಿದ್ದರಾದರೂ ಅವರ ತಾತಂದಿರ ಕಾಲದಿಂದ ಆ ಮನೆತನವು ಶ್ರೀರಂಗಪಟ್ಟಣದ ಸಮೀಪದಲ್ಲಿರುವ ಮಂಡ್ಯ ಕೊಪ್ಪಲುವಿನಲ್ಲಿ ನೆಲೆಸಿದ್ದಿತು.  ಅವರ ವಂಶ ತಿರುಪತಿ ಬೆಟ್ಟದ ಕೆರೆ ಕಟ್ಟಿದ ಶ್ರೀ ಆನಂದಾಳ್ವಾರರದು.

ನರಸಿಂಹಾಚಾರ್ ಅವರು ಬಾಲ್ಯದಲ್ಲಿಯೇ ತಂದೆಯಿಂದ ಸಂಸ್ಕೃತ ಅಭ್ಯಾಸ, ಅನಂತರ ಐದು ವರ್ಷ ತಮಿಳು ಅಭ್ಯಾಸ ಮಾಡಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ 1878ರಲ್ಲಿ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಪಾಸಾದರು.  ಬೆಂಗಳೂರಿಗೆ ಬಂದು ತಮಿಳು ಮತ್ತು ಸಂಸ್ಕೃತಗಳನ್ನು ತೆಗೆದುಕೊಂಡು ಸೆಂಟ್ರಲ್ ಕಾಲೇಜಿನಿಂದ 1882ರಲ್ಲಿ ಬಿ.ಎ ಪರೀಕ್ಷೆಯಲ್ಲಿ ಅನೇಕ ಪಾರಿತೋಷಕಗಳೊಡನೆ ಉಚ್ಚ ಶ್ರೇಣಿಯಲ್ಲಿ ಉತ್ತೀರ್ಣರಾದರು.    

ನರಸಿಂಹಾಚಾರ್ ಅವರು ದಿವಾನ್ ರಂಗಾಚಾರ್ಯರಲ್ಲಿ ಉದ್ಯೋಗಕ್ಕಾಗಿ ಹೋದರು.  ಒಡನೆಯೇ ಅವರಿಗೆ 5 ರೂಪಾಯಿ ಸಂಬಳದ ಮೇಲೆ ಚಿಕ್ಕಮಗಳೂರು ಹೈಸ್ಕೂಲಿನಲ್ಲಿ ಸಹೋಪಾಧ್ಯಾಯ ಹುದ್ದೆ ದೊರೆಯಿತು.  ‘ಊರು ದೂರ’ ಎಂದು ಹೋಗಲು ಹಿಂಜರಿದಾಗ ದಿವಾನರೆ ತಿಳಿಹೇಳಿ ಕಳುಹಿಸಿಕೊಟ್ಟರು.  ಆಮೇಲೆ ಶಿವಮೊಗ್ಗ, ಹಾಸನಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು.  ಅನಂತರ ಮೈಸೂರಿನ ಮಹಾರಾಜ ಮತ್ತು ಮಹಾರಾಣಿ ಕಾಲೇಜುಗಳಲ್ಲಿಯೂ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.  1893ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ ಪದವಿ ಗಳಿಸಿಕೊಂಡು,  ಕನ್ನಡದಲ್ಲಿ ಎಂ. ಎ ಪದವಿ ಪಡೆದ ಮೊದಲಿಗರೆನಿಸಿದರು.  ಮುಂದೆ  1894ರಲ್ಲಿ ಅವರು ವಿದ್ಯಾ ಇಲಾಖೆಯಲ್ಲಿ ಭಾಷಾಂತರಕಾರರೆಂದು ನೇಮಕಗೊಂಡರು.  1899ರಲ್ಲಿ ಮೈಸೂರಿನ ಪ್ರಾಚ್ಯ ವಸ್ತು ಸಂಶೋಧನ ಇಲಾಖೆ ಸೇರಿ ಬಿ.ಎಲ್ ರೈಸ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿ, ರೈಸ್ ಅವರಿಗೆ ತುಂಬಾ ಆತ್ಮೀಯರಾದರು.  ಹೀಗಾಗಿ ರೈಸ್ ಅವರ ನಂತರ 1906ರಲ್ಲಿ ಇಲಾಖೆಯ ನಿರ್ದೇಶಕರಾಗಿ ನೇಮಕಗೊಂಡರು.  1922ರ ವರೆಗೆ ಅದರ ನಿರ್ದೇಶಕರಾಗಿದ್ದಾಗ ಅನೇಕ ಮಹತ್ವದ ಕೃತಿಗಳನ್ನು ಹೊರತಂದರು.  16ವರ್ಷಗಳ ಕಾಲ ಈಗಿನ ಮೈಸೂರು ಸಂಸ್ಥಾನದ ನಾನಾ ಭಾಗಗಳನ್ನು ಸಂಚರಿಸಿ ಸುಮಾರು 5000 ಶಾಸನಗಳನ್ನು ಸಂಗ್ರಹಿಸಿದರು.  ಮುಖ್ಯವಾದವುಗಳನ್ನು ಅಲ್ಲಲ್ಲಿ ತಮ್ಮ ವರದಿಗಳಲ್ಲಿ ಚರ್ಚಿಸಿದರು.  ಇವು ಅನಂತರ ಬೇರೆ ಬೇರೆ ವಿದ್ವಾಂಸರಿಂದ ಪರಿಷ್ಕಾರಗೊಂಡು ಉಪಸಂಪುಟಗಳಲ್ಲಿ ಪ್ರಕಟಗೊಂಡವು.

ಆಚಾರ್ಯರು ಮೈಸೂರು ಪುರಾತತ್ವ ಇಲಾಖೆಯ ವರದಿಗಳಲ್ಲಿ ಹಿಂದೂ, ಜೈನ ಮತ್ತು ಮಹಮದೀಯರಿಗೆ ಸಂಬಂಧಿಸಿದ ಸುಮಾರು 1000 ಕಟ್ಟಡಗಳನ್ನು ಪರಿಶೀಲಿಸಿ ಅವುಗಳ ವಾಸ್ತು ವಿಷಯದ ಕುರಿತು ಟಿಪ್ಪಣಿಗಳನ್ನು ಬರೆದಿರುವರು.

ಶ್ರವಣಬೆಳಗೊಳದ ಶಾಸನಗಳನ್ನು ಈ ಹಿಂದೆ ಬಿ.ಎಲ್. ರೈಸ್ ಅವರು ಪ್ರಕಟಿಸಿದ್ದರು (1889).    ಅಲ್ಲಿ ಕೇವಲ 144 ಶಾಸನಗಳಿದ್ದವು.  ಆರ್.  ನರಸಿಂಹಾಚಾರ್ ಅವರು ಅದನ್ನು ಪರಿಷ್ಕರಿಸಲು ತೊಡಗಿ, ಹೊಸದಾಗಿ 356 ಶಾಸನಗಳನ್ನು ಸೇರಿಸಿ, ಒಟ್ಟು 500 ಶಾಸನಗಳುಳ್ಳ ಸಂಪುಟವನ್ನು ಹೊರತಂದರು.  ಅದರ ಪ್ರಾರಂಭದ 90 ಪುಟದ ಪ್ರಸ್ತಾವನೆ ಆಚಾರ್ಯರ ವಿದ್ವತ್ತಿಗೆ ಹಿಡಿದ ಕನ್ನಡಿಯಾಗಿದೆ.  ಶ್ರವಣಬೆಳಗೊಳದ ವಾಸ್ತುಶಿಲ್ಪವನ್ನು ಕುರಿತು ಮೊದಲಬಾರಿಗೆ ಇಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ.

1923ರಲ್ಲಿ ಪ್ರಕಟವಾದ ‘ಶಾಸನ ಪದ್ಯ ಮಂಜರಿ’ಯಲ್ಲಿ ಸಾಹಿತ್ಯಾಂಶಗಳನ್ನೊಳಗೊಂಡ ಶಾಸನಗಳಿಂದಾಯ್ದ 1446 ಪದ್ಯಗಳಿವೆ.  ಕವಿತೆಯ ಶೈಲಿ ಮತ್ತು ಸೊಬಗಿನ ರಸವನ್ನು ಸ್ವಲ್ಪ ಮಟ್ಟಿಗಾದರೂ ಆಸ್ವಾದನ ಮಾಡಲು ಅವಕಾಶವುಂಟು ಮಾಡಬೇಕೆಂಬ ಉದ್ದೇಶದಿಂದ ಈ ಶಾಸನ ಭಾಗಗಳನ್ನುಸಂಗ್ರಹಿಸಿಕೊಟ್ಟಿದೆ.  ಈ ಪುಸ್ತಕ್ಕಾಗಿ ಆರಿಸಿದ ಶಾಸನಗಳ ಸಂಖ್ಯೆ 283.  ಇವುಗಳಲ್ಲಿ ಬಾಂಬೆ ಪ್ರಾಂತ್ಯದಲ್ಲಿರುವ 24 ಶಾಸನ ಬಿಟ್ಟರೆ ಉಳಿದವೆಲ್ಲ ಮೈಸೂರು ಸಂಸ್ಥಾನದವು.  ಅವು ಸುಮಾರು ಕ್ರಿ.ಶ. 700ರಿಂದ ಕ್ರಿ.ಶ. 1465ರ ವರೆಗಿನ ಕಾಲಾವಧಿಯವು.  ಅವನ್ನು ಆ ಅನುಪೂರ್ವಿಯಲ್ಲಿಯೇ ಕೊಟ್ಟಿರುವುದರಿಂದ ಕನ್ನಡ ಭಾಷೆಯು ಬೆಳೆದುಬಂದ ರೀತಿ ಗೊತ್ತಾಗುವುದು.  ಈ ಶಾಸನಗಳು ಗಂಗ, ನೊಳಂಬ, ಚಾಲುಕ್ಯ, ರಾಷ್ಟ್ರಕೂಟ, ಚೋಳ, ಕಲಚೂರ್ಯ, ಸೇವುಣ, ಕೊಂಗಾಳ್ವ, ಹೊಯ್ಸಳ, ಸಾಂತರ, ಪಾಂಡ್ಯ, ಸಿಂಧ, ಕದಂಬ, ನಿಡುಗಲ್ಲು, ವಿಜಯನಗರ ಹೀಗೆ 15 ರಾಜವಂಶಗಳಿಗೆ ಸಂಬಂಧಿಸಿವೆ.  ಇವು ಅಂದಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳ ಮೇಲೂ ಬೆಳಕು ಚೆಲ್ಲುತ್ತವೆ.

ಆಚಾರ್ಯರು ಇತರ ಹಲವಾರು ಸಂಶೋಧನೆಗಳನ್ನು ಸಹಾ ನಡೆಸಿದ್ದು ಅವುಗಳಲ್ಲಿ ಪ್ರಮುಖವಾದದ್ದನ್ನು ಮಾತ್ರ ಇಲ್ಲಿ ಸ್ಮರಿಸೋಣ.   2ನೆಯ  ಹರಿಹರನ 1286ರ ತಾಮ್ರಪತ್ರ ಶಾಸನ, ಚಂದ್ರವಳ್ಳಿಯ ಉತ್ಖನನದಲ್ಲಿ ಪ್ರಾಚೀನ ಕಾಲದ ಮಣ್ಣಿನ ಪಾತ್ರೆ, ನಾಣ್ಯಗಳ ಶೋಧನೆ, ಅರಿಷ್ಟನೇಮಿಯ ಸಮಾಧಿ, ಸಿಂಹಸೂರಿ ರಚಿಸಿದ ‘ಲೋಕವಿಭಾಗ’ ಗ್ರಂಥದ ಮೂಲಕ ನರಸಿಂಹವರ್ಮನ ಮತ್ತು ಪಲ್ಲವರ ಕಾಲ ನಿರ್ಣಯ,  ತಾಳಗುಂದದ ಪುರಾತನ ಶಾಸನದ ಮೂಲಕ ಕದಂಬರ ಕಾಲ ನಿರ್ಣಯ, ಬೆಂಗಳೂರು ಎಂಬ ಊರು ಹತ್ತನೆಯ ಶತಮಾನದಲ್ಲೇ ಇತ್ತು ಎಂಬ ನಿರ್ಣಯ, ಬುಕ್ಕನ ಮರಣದ ಕಾಲ, ವಿಜಯನಗರದ ಆಡಳಿತದ ಕಾಲ, ಟಿಪ್ಪು ಶೃಂಗೇರಿ ಗುರುಗಳಿಗೆ ದತ್ತಿ ಕೊಟ್ಟದ್ದು,  ಮುಳುಬಾಗಿಲು ಮಠದ ತಾಮ್ರಶಾಸನವು ಭಾಗವತ ಸಂಪ್ರದಾಯದ ವಿಷಯ ಹೇಳುತ್ತದೆಂಬ ನಿರ್ಣಯ ಮುಂತಾದವು ಪ್ರಮುಖವಾಗಿವೆ.  ನರಸಿಂಹಾಚಾರ್ಯರು 1920ರಲ್ಲಿ ಕಾರ್ಲಾ, ಕನ್ಹೇರಿ, ಬಾದಾಮಿ, ಎಲ್ಲೋರ ಮತ್ತು ಅಜಂತಾಗಳಿಗೆ ಭೇಟಿಕೊಟ್ಟು ಆ ಸ್ಥಳಗಳಲ್ಲಿಯ ಗುಹೆಗಳ ವಿಷಯವಾಗಿ ಮಹತ್ವದ ಸಂಗತಿಗಳನ್ನು ಬರೆದಿದ್ದಾರೆ.  ಅವರು 1909ರಲ್ಲಿ ಭಾಸಕವಿಯ ಸ್ವಪ್ನವಾಸವದತ್ತ ಎಂಬ ನಾಟಕವನ್ನು ಶೋಧಿಸಿದರು.

ಇವಲ್ಲದೆ ಗಂಗರ ಚರಿತ್ರೆ, ಸಾಯಣ-ಮಾಧವ, ಬೇಲೂರು, ಸೋಮನಾಥಪುರ ಮತ್ತು ದೊಡ್ಡಗದ್ದನ ಹಳ್ಳಿಯ ಹೊಯ್ಸಳ ದೇವಸ್ಥಾನಗಳು ಇವನ್ನು ಕುರಿತೂ ಇವರು ಕೃತಿ ರಚಿಸಿದ್ದಾರೆ.  

ಆರ್ ನರಸಿಂಹಾಚಾರ್ ಅವರಿಗೆ ವಿಶೇಷ ಕೀರ್ತಿಯನ್ನು ತಂದುಕೊಟ್ಟ ಕೃತಿ “ಕರ್ಣಾಟಕ ಕವಿಚರಿತೆ”.  ಮೂರು ಸಂಪುಟಗಳಲ್ಲಿರುವ ಈ ಕೃತಿ ಕನ್ನಡದ ಒಟ್ಟು 1148 ಜನ  ಕವಿಗಳ ಚರಿತ್ರೆಯನ್ನೊಳಗೊಂಡಿದೆ.  ಇವುಗಳನ್ನು ಕವಿಚರಿತ್ರಕರು ಬರೆಯತೊಡಗಿದಾಗ ಕನ್ನಡ ಸಾಹಿತ್ಯದಲ್ಲಿ ಇನ್ನೂ ಅರುಣೋದಯದ ಕಾಲ, ಬಹಳಷ್ಟು ಕೃತಿಗಳು ಅಪ್ರಕಟಿತವಾಗಿರುವ ಸನ್ನಿವೇಶ.  ಇಂಥ ಸಂದರ್ಭದಲ್ಲೂ ಸುಮಾರು 2000 ಓಲೆಯ ಪ್ರತಿಗಳನ್ನು ಕಣ್ಣಾರೆ ನೋಡಿ ಅವುಗಳ ಅಮೂಲಾಗ್ರ ಪರಿಚಯವನ್ನೂ ಕವಿ, ಕಾಲ, ದೇಶ, ಕೃತಿಗಳನ್ನು ಕುರಿತು ನಿಖರವಾದ ಅಭಿಪ್ರಾಯಗಳನ್ನು ವ್ಯಕ್ತಗೊಳಿಸಿರುವುದು ಇಲ್ಲಿಯ ವಿಶೇಷ.   ಹತ್ತಾರು ಜನ ಸೇರಿ ಹತ್ತಾರು ವರ್ಷಗಳ ಸತತ ಪರಿಶ್ರಮದಿಂದ ಮಾಡಬೇಕಾದ ಕಾರ್ಯವನ್ನು ಒಬ್ಬರೇ ವ್ಯಕ್ತಿ ಮಾಡಿದ್ದು ಅಪೂರ್ವವೆನಿಸಿದೆ.  ಅಪ್ರತಿಮ  ದೈತ್ಯ ಶಕ್ತಿಯ ವ್ಯಕ್ತಿಗಳಿಂದ ಮಾತ್ರ ಸಾಧ್ಯ.  ಸಂಪುಟಗಳನ್ನು ಸಿದ್ಧಪಡಿಸುವಲ್ಲಿ ಅವರು ತೋರಿದ ಶ್ರಮ-ಶ್ರದ್ಧೆ-ಸಂಯಮಗಳು ಅನುಕರಣೀಯವೆನಿಸಿವೆ.  ಕನ್ನಡದ ಯಾವುದೇ ಕವಿಯ ವಿಷಯವನ್ನು ತಿಳಿದುಕೊಳ್ಳಲು ಬಯಸುವವರಿಗೆ ಪ್ರಥಮ ಆಕರಗಳಾಗಿ ನಿಂತಿರುವ ಕವಿಚರಿತೆಯ ಸಂಪುಟಗಳಿಗೆ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಒಂದು ಚಾರಿತ್ರಿಕ ಮಹತ್ವವುಂಟು.  

ಆರ್ ನರಸಿಂಹಾಚಾರ್ ಅವರು ಒಳ್ಳೆಯ ಗ್ರಂಥಸಂಪಾದಕರೂ ಹೌದು.  ಅವರು 1903ರಲ್ಲಿ ಹೊಸ ಹಸ್ತಪ್ರತಿಗಳ ನೆರವಿನಿಂದ ‘ಕರ್ಣಾಟಕ ಭಾಷಾ ಭೂಷಣ’ದ ಎರಡನೆಯ ಮುದ್ರಣವನ್ನು ಮೊದಲಬಾರಿಗೆ ‘ಕಾವ್ಯಾವಲೋಕನ’ವನ್ನೂ ಒಂದೇ ಸಂಪುಟದಲ್ಲಿ ಪ್ರಕಟಿಸಿದರು.  ಈ ಗ್ರಂಥಕ್ಕೆ ವಿದ್ವತ್ಪೂರ್ಣವಾದ ಇಂಗ್ಲಿಷ್ ಪೀಠಿಕೆ ಇದೆ.  ಕಾವ್ಯಾವಲೋಕನವು ಮೈಸೂರು ವಿಶ್ವವಿದ್ಯಾಲಯದಿಂದ ಹಲವಾರು ಬಾರಿ ಪುನರ್ಮುದ್ರಣವಾಗಿದೆ.

ಆರ್. ನರಸಿಂಹಾಚಾರ್ ಅವರು ‘ನೀತಿಮಂಜರಿ’ ‘ನೀತಿ-ವಾಕ್ಯಮಂಜರಿ’ ಕೃತಿಗಳಿಂದ ಒಳ್ಳೆಯ ಅನುವಾದಕರು ಎಂಬ ಹೆಸರನ್ನು ಪಡೆದಿದ್ದಾರೆ.  ನೀತಿಮಂಜರಿಯಲ್ಲಿ ತಮಿಳಿನ ಅಪ್ಪೈಯಾರ್, ತಿರುವಳ್ಳುವರ್, ಸಂಸ್ಕೃತದ ಕ್ಷೇಮೆಂದ್ರ, ಭರ್ತೃಹರಿ ಮೊದಲಾದವರ ಕೃತಿ ಭಾಗಗಳನ್ನಾಯ್ದು ಅನುವಾದಿಸಲಾಗಿದೆ.  ಇಜಿಇ ಬೆಶ್ಚಿ ಕೃತಿಯ ಭಾಷಾಂತರವಾದ ‘ನಗೆಗಡಲು’ ಆಚಾರ್ಯರ ಹಾಸ್ಯಪ್ರಜ್ಞೆಗೆ ಒಳ್ಳೆಯ ಉದಾಹರಣೆಯಾಗಿದೆ.  ಗಾಂಪರೊಡೆಯರು ಮತ್ತು ಅವರ ಶಿಷ್ಯರ ಪ್ರತಾಪಗಳಿಗೆ ಸಂಬಂಧಿಸಿದ ಇಲ್ಲಿನ ಘಟನೆಗಳು ಕಥಾರೂಪದಲ್ಲಿವೆ.  

ಆರ್. ನರಸಿಂಹಾಚಾರ್ ಅವರು ಮೈಸೂರು ವಿಶ್ವವಿದ್ಯಾಲಯದ ಕೋರಿಕೆಯ ಮೇರೆಗೆ ಕನ್ನಡ ಭಾಷೆಯ ಇತಿಹಾಸವನ್ನು ಕುರಿತು ಮೈಸೂರಿನಲ್ಲಿ ಇತ್ತ ಐದು ರೀಡರ್ ಶಿಪ್ ಲೆಕ್ಚರ್ ಗಳ ಪುಸ್ತಕರೂಪವೇ ‘History of Kannada Language (1934)’ ಕೃತಿ.  ಇದೇ ಮಾಲಿಕೆಯಲ್ಲಿ ಬೆಂಗಳೂರಿನಲ್ಲಿತ್ತ ಐದು ರೀಡರ್ ಶಿಪ್ ಲೆಕ್ಚರ್ ಗಳು ‘History of Kannada Literature’  ಎಂಬ ಪುಸ್ತಕರೂಪದಲ್ಲಿ ಪ್ರಕಟವಾಗಿದೆ.  

ಇವಲ್ಲದೆ ಆರ್. ನರಸಿಂಹಾಚಾರ್ 250 ಪುಸ್ತಕಗಳ ಹಸ್ತಪ್ರತಿಗಳನ್ನು ವಿಮರ್ಶಿಸಿದ್ದಾರೆ.  ಬೆಂಗಳೂರಿನ ಮಿಥಿಕ್ ಸೊಸೈಟಿಯ ಬೆಳ್ಳಿಹಬ್ಬದ ಸಮಯದಲ್ಲಿ ‘ಬೃಹದ್ಭಾರತ’ ಪರಿಚಯವನ್ನು ಸ್ವಾರಸ್ಯಕರವಾಗಿ ಮಾಡಿಕೊಟ್ಟಿದ್ದಾರೆ.  

ಆರ್ ನರಸಿಂಹಾಚಾರ್ ಅವರ ವಿದ್ವತ್ ಮತ್ತು ಅವರು ಮಾಡಿದ ಘನ ಸಾಧನೆಯನ್ನು ನೋಡಿ ಆಗಿನ ಸರ್ಕಾರ ಮತ್ತು ಪ್ರಜಾಕೋಟಿ ಪ್ರಾಕ್ತನ ವಿಮರ್ಶನ ವಿಚಕ್ಷಣ, ಕರ್ಣಾಟಕ ಪ್ರಾಚ್ಯ ವಿದ್ಯಾವೈಭವ, ಮಹಾಮಹೋಪಾಧ್ಯಾಯ, ಅಭಿನವ ಕನ್ನಡ ಸೀಮಾ ಪುರುಷ, ರಾವ್ ಬಹದ್ದೂರ್ ಮುಂತಾದ ಬಿರುದುಗಳನ್ನಿತ್ತು ಗೌರವಿಸಿದವು.  ಇವರು 1918ರಲ್ಲಿ ಜರುಗಿದ 4ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.  1907ರಲ್ಲಿ ಧಾರವಾಡದಲ್ಲಿ ನಡೆದ ಗ್ರಂಥಕರ್ತರ ಸಮ್ಮೇಳನದ ಅಧ್ಯಕ್ಷರೂ ಇವರಾಗಿದ್ದರು.  

ಇಷ್ಟೆಲ್ಲಾ ವಿದ್ವಾಂಸರಾಗಿದ್ದರೂ ಅವರಲ್ಲಿ ವೈದಿಕ ಶ್ರದ್ಧೆ ಮತ್ತು ದೈವಭಕ್ತಿ ಅಪರವಾಗಿದ್ದಿತು.  “ಅವರು ನಲ್ಲಿ ನೀರು ಎಂದೂ ಕುಡಿದವರಲ್ಲ.  ಅವರೊಮ್ಮೆ ಕಲ್ಕತ್ತೆಯಲ್ಲಿದ್ದಾಗ ಮನೆಯ ಹತ್ತಿರ ಬಾವಿ ಇರಲಿಲ್ಲ.  ಮನೆಯಾಳಿಗೆ ಆರೋಗ್ಯ ಕಡಿಮೆಯಾಗಿತ್ತು.  ಆದ್ದರಿಂದ ದೂರದಲ್ಲಿದ್ದ ಬಾವಿಯಿಂದ ತಾವೇ ನೀರು ಹೊತ್ತು ತರುತ್ತಿದ್ದರಂತೆ. ಇಷ್ಟು ನಿಷ್ಠಾವಂತ ಸಂಪ್ರದಾಯಶೀಲರಾದರೂ ಪರಮತ ಪರಧರ್ಮಗಳ ವಿಷಯದಲ್ಲಿ ತಪ್ಪಿಯೂ ದ್ವೇಷಕ್ಕೆಡೆಕೊಟ್ಟವರಲ್ಲ.

ದಿನಾಂಕ 6 ಡಿಸೆಂಬರ್ 1936ರಂದು ಈ ದಿವ್ಯಚೆತನದ ಆತ್ಮಜ್ಯೋತಿ ಆರಿಹೋಯಿತು. ಈ ಮಹಾನ್ ಚೇತನಕ್ಕೆ  ಸಾಷ್ಟಾಂಗ ನಮಿಸೋಣ.

(ಆಧಾರ:  ಬಿ.ವಿ. ಶಿರೂರರು ಬರೆದಿರುವ ಆರ್. ನರಸಿಂಹಾಚಾರ್ ಅವರ ಕುರಿತ ಲೇಖನ)
ಚುಕ್ಕಿಚಿತ್ರ ಕೃಪೆ: ಆತ್ಮೀಯ ಹಿರಿಯರಾದ ಮೋಹನ್ ವೆರ್ಣೇಕರ್


Tag: R. Narasimhachar

ಕಾಮೆಂಟ್‌ಗಳಿಲ್ಲ: