ಗುರುವಾರ, ಆಗಸ್ಟ್ 29, 2013

ಯಶವಂತ ಹಳಿಬಂಡಿ

ಯಶವಂತ ಹಳಿಬಂಡಿ

ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಪ್ರಮುಖರ ಸಾಲಿನಲ್ಲಿ ನಿಲ್ಲುವವರು ಶ್ರೀಯುತ ಯಶವಂತ ಹಳಿಬಂಡಿಯವರು.  ವರಕವಿ ಬೇಂದ್ರೆಯವರ ಧಾರವಾಡ ಶೈಲಿಯ ನುಡಿಗಳಿಂಪನ್ನು ಯಶವಂತ ಹಳಿಬಂಡಿ ಅವರ ಧ್ವನಿಯಲ್ಲಿ ಸವಿಯಬಹುದಾದ ಸುಖ ಮನೋಜ್ಞವಾದದ್ದು.  ಸ್ವತಃ ಬೇಂದ್ರೆಯವರ ಎದುರೇ ಅವರ ಗೀತೆಯನ್ನು ಹಾಡಿ ಅವರ ಮನಮೆಚ್ಚಿಸಿ ಆಶೀರ್ವಾದ ಪಡೆದವರು ಯಶವಂತ ಹಳಿಬಂಡಿ.

ಯಶವಂತ ಹಳಿಬಂಡಿ ಅವರು ಹಾಡಿರುವ ಬೇಂದ್ರೆಯವರ  ಪಾತರಗಿತ್ತಿಪಕ್ಕ ನೋಡಿದ್ದೇನ ಅಕ್ಕಅಂತೂ ಜನಮನದಲ್ಲೆಲ್ಲಾ ಸಂತಸ ಉಕ್ಕಿಹರಿಸುವಂತದ್ದು.   ಅವರ ಮಧುರ ಕಂಠದಿಂದ ಹೊರಹೊಮ್ಮುವ  ಹೋಗು ಮನಸೆ ಹೋಗು ನಲ್ಲೆ ಇರುವಲ್ಲಿ ಹೋಗು..., ಕುಣಿಯೋಣು ಬಾರಾ ಕುಣಿಯೋಣು ಬಾ..., ನಾ ಸಂತಿಗಿ ಹೋಗಿನ್ನಿ ಆಕೆ ತಂದಿದ್ದಳೂ ಬೆಣ್ಣಿ..., ಎಲ್ಲೋ ಜೋಗಪ್ಪ ನಿನ್ನ ಅರಮಾನೆ...  ಕುಂಬಾರಕ್ಕಿ ಈಕಿ ಕುಂಬಾರಕ್ಕಿ, ಬಾರೊ ಸಾಧನ ಕೇರಿಗೆ ಗೀತೆಗಳಂತೂ ಶ್ರೋತೃಗಳನ್ನು ಆನಂದದ ಸಾಗರದಲ್ಲಿ ತೇಲಿಸುತ್ತಾ ಮುದನೀಡುವಂತದ್ದು.

ಯಶವಂತ ಹಳಿಬಂಡಿ ಅವರು 1950ರ ಮೇ 25ರಂದು  ಧಾರವಾಡದಲ್ಲಿ ಜನಿಸಿದರು.  ತಂದೆ  ಹನುಮಂತ ಹಳಿಬಂಡಿ ಹಾಗೂ ತಾಯಿ ಬಸವೇಶ್ವರಿ.  ಚಿಕ್ಕಂದಿನಲ್ಲೇ ಧಾರವಾಡದ ಪರಿಸರದಲ್ಲಿ ಹಾಸುಹೊಕ್ಕಾಗಿದ್ದ ಹಿಂದೂಸ್ಥಾನೀ  ಸಂಗೀತಕ್ಕೆ ಮಾರುಹೋದ ಯಶವಂತರು ಶ್ರೀ ಲಕ್ಷ್ಮಣರಾವ್ ದೇವಾಂಗರಲ್ಲಿ ಮೊದಲಿಗೆ ಶಿಷ್ಯವೃತ್ತಿಯನ್ನು ಆರಂಭಿಸಿದರು. ಕೆಲವು ವರ್ಷಗಳ ನಂತರ ಹೆಚ್ಚಿನ ಪರಿಣಿತಿಗಾಗಿ ಶ್ರೀ ನಾರಾಯಣ ರಾವ್ ಮಜುಂದಾರ್ ಅವರಲ್ಲಿ ಶಿಕ್ಷಣ ಮುಂದುವರಿಸಿದರು. ಹೀಗೆ ಬಹಳಷ್ಟು ವರ್ಷ ಹಿಂದೂಸ್ತಾನಿ ಗಾಯನದ ತಾಲೀಮು ನಡೆಸಿದರು.

ಬಾಳಪ್ಪ ಹುಕ್ಕೇರಿ, ಅನುರಾಧ ಧಾರೇಶ್ವರ್ ಮುಂತಾದವರ ಗಾಯನವನ್ನು ಆಗಾಗ ಕೇಳುತ್ತಿದ್ದ ಯಶವಂತರು ಸುಗಮ ಸಂಗೀತದ ಕಡೆ ಆಕರ್ಷಿತರಾದರು. ಕನ್ನಡ ಗೀತೆಗಳನ್ನು ಹಾಡಲು ಮುಂದಾದರು. ಅಷ್ಟರಲ್ಲಿಯೇ ಪದವಿಪೂರ್ವ ಶಿಕ್ಷಣ ಹಾಗೂ ಚಿತ್ರಕಲೆಯಲ್ಲಿ  ತರಬೇತಿ ಹೊಂದಿದ್ದರು.

ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕೆಲಸಕ್ಕೆ ಸೇರಿ ಬೆಂಗಳೂರಿಗೆ ಬಂದ ಮೇಲೆ ಹಳಿಬಂಡಿ, ಕೆಲಸದ ಜೊತೆಜೊತೆಗೆ ಹಾಡಿನ ಕಾಯಕವನ್ನು ಮುಂದುವರಿಸಿದರು. ಆಕಾಶವಾಣಿಯ ಸುಗಮ ಸಂಗೀತ ವಿಭಾಗದಲ್ಲಿ ಗಾಯಕರಾಗಿ ಅಯ್ಕೆಯಾದ ಹಳಿಬಂಡಿ ದೂರದರ್ಶನದಲ್ಲಿ  ಕೂಡ ಜನಪ್ರಿಯ ಗಾಯಕರೆನಿಸಿದರು.

ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ  ಸುಗಮ ಸಂಗಿತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಹಸ್ರಾರು  ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನೀಡಿದ ಹಳಿಬಂಡಿ ತಮ್ಮದೇ ಆದ ತಂಡ ಕಟ್ಟಿ, ನಾಡಿನಉದ್ದಗಲಗಳಲ್ಲಿ ಸಂಚರಿಸಿ ಸುಪ್ರಸಿದ್ಧ ಕವಿಗಳ ಕವಿತಾಮೃತವನ್ನು  ಸಂಗೀತಪ್ರಿಯರಿಗೆ ಉಣಬಡಿಸಿದವರು.

ಹಳಿಬಂಡಿಯವರ ನೂರಾರು ಧ್ವನಿ ಸುರುಳಿಗಳು ಜನಪ್ರಿಯಗೊಂಡಿವೆ.    ನೂರಾರು ಸುಗಮ ಸಂಗೀತ ಕಮ್ಮಟಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಗೀತೆಗಳನ್ನು ಕಲಿಸಿ ಅವರಿಂದಲೇ ಹಾಡಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.   ಮೈಸೂರು ಸೀಮೆಯಲ್ಲಿ  ಸುಗಮ ಸಂಗೀತವನ್ನು ಧಾರವಾಡದ ಶೈಲಿಯಲ್ಲಿ ಹಾಡುವ ಅಪರೂಪದ   ಗಾಯಕರೆಂದು  ಹಳಿಬಂಡಿ ಹೆಸರಾಗಿದ್ದರು. ಮಕ್ಕಳು ಹಿರಿಯರು ಎಂದು ಭೇದವಿಲ್ಲದೇ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದ  ಹಳಿಬಂಡಿ ಸರಳ ವ್ಯಕ್ತಿತ್ವದ ಸಜ್ಜನರೆನಿಸಿದ್ದವರು.

ಭಾವಗೀತೆಗಳ ಜೊತೆ ಜೊತೆಗೆ ಭಕ್ತಿಗೀತೆ, ಜಾನಪದಗೀತೆ, ಶರಣರ ಪದ, ವಚನ, ತತ್ವಪದ ಹೀಗೆ ಹಲವು ಪ್ರಕಾರದಲ್ಲಿ  ಹಳಿಬಂಡಿ ತಮ್ಮ   ದನಿಯಿಂದ ಪ್ರಸಿದ್ಧರಾಗಿದ್ದಾರೆ. ಕರ್ನಾಟಕ ಸರ್ಕಾರ ಆಯೋಜಿಸುವ ಹಂಪಿ ಉತ್ಸವ, ಕದಂಬೊತ್ಸವ, ಚಾಲುಕ್ಯ ಉತ್ಸವ, ಹೊಯ್ಸಳ ಉತ್ಸವ, ಕರಾವಳಿ ಉತ್ಸವದಂತಹ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಸಂಗೀತ ನಿರ್ದೇಶಕರಾಗಿ ಹಾಗೂ ಗಾಯಕರಾಗಿ  ಮನಗೆದ್ದಿದ್ದಾರೆ.

ಅನೇಕ ಸಂಘ ಸಂಸ್ಥೆಗಳು ಹಳಿಬಂಡಿ ಅವರ ಗಾಯನ ಪ್ರತಿಭೆ ಗುರುತಿಸಿ ಪುರಸ್ಕರಿಸಿವೆ. ರಾಜ್ಯ ಸರ್ಕಾರ ಕರ್ನಾಟಕ ಕಲಾಶ್ರೀಪ್ರಶಸ್ತಿ ನೀಡಿ ಗೌರವಿಸಿದೆ.   ಯಶವಂತ ಹಳಿಬಂಡಿ ಕೇವಲ  ಗಾಯಕರಷ್ಟೇ ಅಲ್ಲ, ಉತ್ತಮ ಸಂಗೀತ ಸಂಯೋಜಕರು, ಸಂಗೀತ ನಿರ್ದೇಶಕರು ಕೂಡ. ಜೊತೆಗೆ ಇವರು ವಾಸ್ತುಶಿಲ್ಪಿ ಕೂಡಾ.  ಮರದ ಹಲಗೆಗಳಲ್ಲಿ ಹಾಗೂ ದಪ್ಪ ಕಾಗದದಲ್ಲಿ  ಮನೆ, ಮಹಲುಗಳ ವಿನ್ಯಾಸ ಮಾಡುವುದರಲ್ಲಿ  ಹಳಿಬಂಡಿ ಸಿದ್ಧ ಹಸ್ತರು.

ಹೀಗೆ ಪ್ರತಿಭೆ ಚತುರತೆ ಸಜ್ಜನತೆಗಳ ಸಂಗಮರಾಗಿದ್ದ ಯಶವಂತ ಹಳಿಬಂಡಿ ಅವರು ಜನವರಿ 22, 2014ರಂದು ಈ ಲೋಕವನ್ನಗಲಿದರು. ಈ ಪ್ರತಿಭಾವಂತ ಕಲಾಚೇತನಕ್ಕೆ ನಮ್ಮ ನಮನ.


(ಮಾಹಿತಿ ಆಧಾರ:  ಉಪಾಸನಾ ಮೋಹನ್ ಅವರ ಲೇಖನ ಸುಗಮಸಂಗೀತಾ.ಕಾಂ)

Tag: Yashwanth Halibandi

ಕಾಮೆಂಟ್‌ಗಳಿಲ್ಲ: